’ಸಹನಾ’
ಕರ್ನಾಟಕದ ರಾಜಕಾರಣ ದೇಶದ ಉದ್ದಗಲಕ್ಕೂ ಒಂದು ರೀತಿ entertaining ಆಗಿದೆ. ಯಾವುದೇ ಒಂದು ರಾಜ್ಯ ತನ್ನ ಅಭಿವೃದ್ದಿ ಮೂಲಕ ಗಮನಸೆಳೆಯುವುದು, ಮತ್ತೊಂದು ರಾಜ್ಯಕ್ಕೆ ಮಾದರಿ ಎನಿಸುವುದು, ಆಯಾ ರಾಜ್ಯಕ್ಕೆ ಘನತೆ ,ಗೌರವ ಹೆಚ್ಚಿಸುತ್ತೆ. ಅಭಿವೃದ್ಧಿ, ವಿದ್ಯೆ, ಸಾಮರ್ಥ್ಯದಿಂದ ಕರ್ನಾಟಕ ಎಂದರೆ ಒಂದು ಮಾದರಿ ಎನಿಸಿಕೊಂಡಿದ್ದ ರಾಜ್ಯ ಇದು. ಆದರೀಗ ಭ್ರಷ್ಟಾಚಾರದ ಭೂತಕ್ಕೆ ಬೆಪ್ಪುಬಡಿದು ಕೂತಿದೆ. ಎಲ್ಲಾ ಪಕ್ಷದ ರಾಜಕಾರಣಿಗಳು ಬೆತ್ತಲಾಗುತ್ತಿದ್ದಾರೆ. ಸೇಡಿನ ರಾಜಕಾರಣ ಬುಸುಗುಡುತ್ತಿದೆ! ಸದ್ಯದ ರಾಜಕಾರಣ ನೋಡಿದ್ರೆ ಇದು ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತೆ ಅನ್ನೋದನ್ನ ಈಗಲೇ ಹೇಳೋದು ಕಷ್ಟ. ಕಳೆದ ಮೂರ್ನಾಕು ತಿಂಗಳಿಂದ ಕಾಂಗ್ರೆಸ್, ಜೆಡಿಎಸ್ ಹಾಗು ಅಧಿಕಾರಸ್ಥ ಬಿಜೆಪಿ ನಡುವಿನ ರಾಮಾಯಣವನ್ನ ರಾಜ್ಯದ ಜನತೆ ದಿನ ಬೆಳಗ್ಗೆ ನೋಡುತ್ತಾ, ಆಗುತ್ತಿರುವ ಕ್ಷಣ ಕ್ಷಣದ ರಾಜಕೀಯ ದೊಂಬರಾಟಕ್ಕೆ ಒಂದು ರೀತಿ ಅಡಿಕ್ಟ್ ಆಗಿ ಹೋಗಿದ್ದಾರೆ. ಅವರಿಗೆ ರೀತಿ ಪುಕ್ಸಟ್ಟೆ ಮನರಂಜನೆ ಸಿಕ್ತಿದೆ ಅಂತಾನೆ ಹೇಳ್ಬೇಕು. ರಾಜಕಾರಣದ ಈ ಸರ್ಕಸ್ ಟಿವಿ ಸಿರಿಯಲ್ ಗಳ ಟಿ ಆರ್ ಪಿ ರೇಟಿಂಗ್ ಕುಸಿದು ಬಿಳೋಹಾಗೆ ಮಾಡಿದೆ!!
ಮುಖ್ಯಮಂತ್ರಿ ಯಡಿಯೂರಪ್ಪ ಅತ್ತು ಕರೆದು, ಹೆದರಿಸಿ, ದುಡ್ಡು ಸುರಿಸಿ, ಪಕ್ಷದ ಹೈ ಕಮಾಂಡ್ ಗೆ ಸೆಡ್ಡು ಹೊಡೆದು ತಮ್ಮ ಕುರ್ಚಿ ಉಳಿಸುಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ. ತಾವು ನಡೆಸಿರುವ ಭ್ರಷ್ಟಾಚಾರಕ್ಕೆ ಬಿಜೆಪಿ ಹೈ ಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಪಡೆದು ಮುಖ್ಯಮಂತ್ರಿ ಸ್ಥಾನವನ್ನು ಸಧ್ಯಕ್ಕೆ ಗಟ್ಟಿ ಮಾಡಿಕೊಂಡರೂ ನೆಮ್ಮದಿಯಿಂದಂತೂ ಇಲ್ಲ. ಅವರ ಅಲ್ಪ ಮತದ ಸರ್ಕಾರ ಯಾವಾಗ ಬೇಕಾದ್ರೂ ಮುರಕೊಂಡು ಬಿದ್ರೆ ಅಚ್ಚರಿ ಪಡಬೇಕಿಲ್ಲ. ಆ ಭಯ ಪ್ರತಿನಿತ್ಯ ಯಡಿಯೂರಪ್ಪ ಅವರ ಚಿತ್ತ ಕೆಡಿಸುತ್ತಿರುವುದರಿಂದಲೇ ಯಡಿಯೂರಪ್ಪ ಚಿತ್ತಭ್ರಮಣೆಯಿಂದ ಬೇಕಾಬಿಟ್ಟಿ ಮಾತಾಡುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕತ್ವದಲ್ಲಿ ಎಲ್ಲಾ ಸರಿ ಇಲ್ಲ ಎನ್ನುವ ಸತ್ಯ ಬೀದಿಗೆ ಬಿದ್ದಿದೆ. ಹಿರಿಯ ನಾಯಕ ಅದ್ವಾನಿ ಮಾತಿಗೂ ಮೂರುಕಾಸಿನ ಬೆಲೆ ಇಲ್ಲದಂತ ಸ್ಥಿತಿ ಬಿಜೆಪಿಯಲ್ಲಿದೆ ಎಂಬುದು ಈಗ ಜಗಜ್ಜಾಹಿರ. ಅದ್ವಾನಿ ಮೊನ್ನೆ ದೆಹಲಿಯಲ್ಲಿ ಯಡಿಯೂರಪ್ಪನವರ ಮುಖ ಕೂಡ ನೋಡದೆ ತಿರಸ್ಕರಿಸಿದರು, ಯಡಿಯೂರಪ್ಪನವರ ನಾಯಕತ್ವದ ಬಗ್ಗೆ ತಮಗಿರುವ ಅಸಹನೆ ವ್ಯಕ್ತ ಮಾಡಿದರು. ಆದರೆ ಬಿಜೆಪಿ ರಾಷ್ಟ್ರೀಯ ನಾಯಕರ ಗುಂಪುಗಾರಿಕೆಯಲ್ಲಿ ಕೊನೆಗೂ ಗೆದದ್ದು ಯಡಿಯೂರಪ್ಪ ಅವರ ಸ್ವಜನ ಪಕ್ಷಪಾತ, ಭ್ರಷ್ಟಾಚಾರ. ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರಿಗೆ ನಿವೇಶನಗಳು, ಜಮೀನು ಹಾಗು ಕೋಟ್ಯಾಂತರ ಕೋಟಿ ಬೆಲೆಯ ಭೂಮಿಯನ್ನು ’...ಡಿನೋಟಿಫೈಯಾಯ ನಮಹಾ..ಸ್ವಾಹಾ ಸ್ವಾಹಾ...ಮಾಡುತ್ತಿರುವ ಯಡಿಯೂರಪ್ಪ ’ಅವರು ಮಾಡಿದ್ರು..ನಾನೂ ಮಾಡುತ್ತಿದ್ದೇನೆ...’ ಅಂತೆಲ್ಲಾ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಾ ಒಂದು ರಾಜ್ಯದ ಮುಖ್ಯಮಂತ್ರಿಗಿರಬೇಕಾಗ ಘನತೆ, ಗೌರವ ಹಾಗು ಜವಾಬ್ದಾರಿಯ ಮಾತು-ನಡವಳಿಕೆಗಳನ್ನು ಕಸಕ್ಕೆ ಬಿಸಾಕಿ ಕೂತಿದ್ದಾರೆ. ತಪ್ಪು ಯಾರೇ ಮಾಡಿದ್ರು ತಪ್ಪೇ, ಆದ್ರೆ ಯಡಿಯೂರಪ್ಪ ಮತ್ತೊಬ್ಬರ ತಪ್ಪನ್ನೆ ತಮ್ಮ ಗುರಾಣಿಯಾಗಿ ಬಳಸುತ್ತಿರುವ ರೀತಿ ನಿಜಕ್ಕೂ ಅಸಹ್ಯ. ಹಾಸ್ಯಾಸ್ಪದ.
ಯಡಿಯೂರಪ್ಪ V/S ಕುಮಾರಸ್ವಾಮಿ
ರಾಜ್ಯದ ಪ್ರಸ್ತುತ ರಾಜಕಾರಣ ಮೇಲ್ನೋಟಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗು ಕುಮಾರಸ್ವಾಮಿ ನಡುವಿನ ಜಂಗಿ ಕುಸ್ತಿಯಂತೆ ಕಾಣುತ್ತೆ .ಇಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ ಗಿಂತಲೂ ಈಗ ವಿಧಾನಸಭೆಯಲ್ಲಿ ೨೭ ಸದಸ್ಯರನ್ನು ಹೊಂದಿರುವ ಜೆಡಿಎಸ್ ಹೆಚ್ಚು ಶಕ್ತಿಶಾಲಿಯಾಗಿ ಕಾಣ್ತಿದೆ. ಕುಮಾರಸ್ವಾಮಿ ಅವರ ಕಾರ್ಯ ವೈಖರಿಯೋ ಅಥವಾ ಅವರಿಗೆ ಸಿಗ್ತಿರುವ ಪ್ರಚಾರವೋ...ಸಧ್ಯದಲ್ಲಿ ಅವರು ಪ್ರಭಾವಿ ರಾಜಕಾರಣಿಯಾಗಿ ಗಟ್ಟಿ ಆಗುತ್ತಿರುವುದಂತು ಸ್ಪಷ್ಟವಾಗ್ತಿದೆ. ಬಂಡೆದ್ದ ಬಿಜೆಪಿ ಹಾಗು ಪಕ್ಷೇತರ ಶಾಸಕರಿಗೆ ಬೆಂಬಲ ನೀಡಿದ ಆರೋಪಕ್ಕೆ ಗುರಿಯಾಗಿದ್ದ ಕುಮಾರಸ್ವಾಮಿ, ಈಗ ಮುಖ್ಯಮಂತ್ರಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಇಳಿದಿದ್ದಾರೆ. ಅದು ಅವರನ್ನು ರಾಜಕೀಯ ಪಕ್ವತೆಯೆಡೆಗೆ ತರುತ್ತಿದೆ ಅಂತ ಹೇಳಬಹುದು. ಯಾಕೆಂದರೆ ಈವರೆಗೂ ಅವರು ಮುಖ್ಯಮಂತ್ರಿ ವಿರುದ್ದ ಬಿಡುಗಡೆ ಮಾಡಿರುವ ದಾಖಲೆಗಳೆಲ್ಲ ಸರ್ಕಾರವನ್ನು ಕಟ್ಟಿ ಹಾಕಿವೆ. ಅವುಗಳಿಗೆ ಉತ್ತರಿಸಲು ಅಸಮರ್ಥರಾಗಿರುವ ಮುಖ್ಯಮಂತ್ರಿಗಳು ಈಗ ಸೇಡಿನ ರಾಜಕಾರಣಕ್ಕೆ ಕೈ ಹಾಕಿರುವುದು ಈ ಕಾರಣಕ್ಕೇ.
ಯಡಿಯೂರಪ್ಪನವರು ಕುಮಾರಸ್ವಾಮಿ ಹಾಗು ಅವರ ಕುಟುಂಬ ಮಾಡಿರುವ ಆಸ್ತಿ ವಿವರವನ್ನ ಬಹಿರಂಗ ಮಾಡಲು ಹೊರಟಿರುವುದನ್ನ ಪ್ರಜ್ಞಾವಂತರು ಖಂಡಿತ ವಿರೋದಿಸಲು ಸಾದ್ಯವಿಲ್ಲ. ಆದರೆ ತಮ್ಮ ಮೇಲೆ ಆರೋಪ ಬಂದಾಗ ಈ ಕೆಲಸಕ್ಕೆ ಕೈ ಹಾಕಿರುವ ಯಡಿಯೂರಪ್ಪನವರ ಕ್ರಮ ಅವರೂ ತಪ್ಪಿತಸ್ತರು ಎಂದು ಸಾರುತ್ತಿದೆ. ಕುಮಾರಸ್ವಾಮಿಯವರ ಈ ಅವ್ಯವಹಾರವನ್ನ ಯಡಿಯೂರಪ್ಪ ಅವರು ಮೊದಲೇ ಯಾಕೆ ರಾಜ್ಯದ ಜನತೆ ಮುಂದೆ ತರಲಿಲ್ಲ? ಇಷ್ಟು ದಿನ ಅವರೂ ಪಾರ್ಟ್ನರ್ ಇನ್ ಕ್ರೈಮ್ ಆಗಿದ್ದಕ್ಕಾ? ಅನ್ನೋ ಪ್ರಶ್ನೆ ಈಗ ಕೇಳಿ ಬರುತ್ತಿದೆ. ಅದಲ್ಲದೆ, ಅಧಿಕಾರದಲ್ಲಿರುವ ಯಾರೇ ಆದ್ರೂ ಮತ್ತೊಬ್ಬ ರಾಜಕಾರಣಿಯ ಅವ್ಯವಹಾರವನ್ನು ಬಹಿರಂಗ ಪಡಿಸಬಾರದು ಅನ್ನುವ ಅನೈತಿಕ ಒಪ್ಪಂದ ರಾಜಕಾರಣಿಗಳ ಮಧ್ಯೆ ಇರಬಹುದಾ? ಅಂತ ಅನುಮಾನ ಏಳುತ್ತೆ! ಅಧಿಕಾರ ಗದ್ದುಗೆ ಹಿಡಿದಾಗಲೇ ಯಡಿಯೂರಪ್ಪ ಹಿಂದಿನ ಸರ್ಕಾರಗಳ ಅವ್ಯವಹಾರಗಳನ್ನ ಬಹಿರಂಗ ಪಡಿಸಿದ್ರೆ ಅವರನ್ನು ಅಧಿಕಾರಕ್ಕೆ ತಂದ ನಾಡಿನ ಜನ ಶಹಬ್ಬಾಸ್ ಹೇಳ್ತಿದ್ರು.
ಯಡಿಯೂರಪ್ಪ ಈಗಾಗಲೇ ತಮ್ಮ ಒಂದು ತಪ್ಪನ್ನು ಒಪ್ಪಿಕೊಂಡು, ತಮ್ಮ ಕುಟುಂಬದ ಸದಸ್ಯರು ಮಾಡಿದ್ದ ಆಸ್ತಿಯನ್ನು ವಾಪಸ್ ನಿಡುವ ಮೂಲಕ ತಪ್ಪಿತಸ್ತನ ಸ್ಥಾನದಿಂದ ಪಾರಾಗಲು ಮಾಡಿರುವ ಪ್ರಯತ್ನ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬಿಜಿಪಿ ರಾಷ್ಟ್ರೀಯ ನಾಯಕರು ಯಡಿಯೂರಪ್ಪ ಅವರನ್ನು ಎದುರಿಸಲಾಗದೆ ಮೌನವಾಗಿರಬಹುದು ಆದರೆ ನಾಡಿನ ಜನತೆ ಸುಮ್ಮನಿರಲು ಸಾದ್ಯೇ? ಕೇವಲ ಆರೋಪ ಬಂದಾಗಲೇ ಅಥವಾ ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ, ಅಧಿಕಾರಕ್ಕೆ ರಾಜಿನಾಮೆ ನೀಡಿದ ಸಾಕಷ್ಟು ಮುತ್ಸದ್ದಿಗಳನ್ನು ನಮ್ಮ ನಾಡು ಕಂಡಿದೆ. ಆದರೆ ಯಡಿಯೂರಪ್ಪ ಅವುಗಳಿಗೆಲ್ಲ ತಿಲಾಂಜಲಿ ನೀಡಿ ಖುರ್ಚಿಗೆ ಗೋಂದುಹಾಕಿ ತಮ್ಮನ್ನು ಅದಕ್ಕೆ ಅಂಟಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಇಡೀ ಲಿಂಗಾಯತ ಜಾತಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು, ಬಾಯಿಗೆ ಬೇಗ ಹಾಕಿಕೊಂಡು ಈಗ ಯಡಿಯೂರಪ್ಪನವರ ಬೆಂಬಲಕ್ಕೆ ನಿಂತಿದೆ. ಮಠ ಮಾನ್ಯರೂ ಯಡಿಯೂರಪ್ಪನವರ ಕಿವಿ ಹಿಂಡಿ ಅವರನ್ನು ತಿದ್ದಿ ದಾರಿಗೆ ತರುವ ಬದಲು ’ನೀನಾಡಿದ್ದೆ ಆಟ ತಮ್ಮಾ...’ ಅಂತ ತಮ್ಮ ಶಿಫಾರಸನ್ನು ಯಡಿಯೂರಪ್ಪನವರಿಗೇ ಕೊಟ್ಟುಬಿಟ್ಟಿದ್ದಾರೆ. ಇದು ಕರ್ನಾಟಕದ ಪಾಲಿಗೆ ಮತ್ತೊಂದು ದುರಂತ. ಈ ಜಾತಿ-ಮಠಗಳ ಬೆಂಬಲದಿಂದಲೇ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ನ ಬಾಯಿ ಮುಚ್ಚಿಸಿದ್ದಾರೆ. ಯಡಿಯೂರಪ್ಪ ಈಗ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಬಿಜೆಪಿಗೆ ಭವಿಷ್ಯ ಇಲ್ಲ ಎಂಬ ಅನುಮಾನ ಹುಟ್ಟುತ್ತಿದೆ.
ಯಡಿಯೂರಪ್ಪ ಹಾಗು ಕುಮಾರಸ್ವಾಮಿ ನಡುವೆ ಈಗ ಕುಟುಂಬ ರಾಜಕಾರಣದ ಸಮರ ನಡೆಯುತ್ತಿದೆ. ಯಾರು ಕರ್ನಾಟಕವನ್ನು ಎಷ್ಟು ಲೂಟಿ ಮಾಡಿದ್ದಾರೆ ಎನ್ನುವುದು ಮುಂದಿನ ದಿನಗಳಲ್ಲಿ ಬಹಿರಂಗ ಆಗುವುದು ನಿಜ. ಆರೂವರೆ ಕೋಟಿ ಕರ್ನಾಟಕದ ಜನ ಈಗ ಇವರಿಬ್ಬರ ಜುಗಲ್ ಜಗ್ಗಾಟಕ್ಕೆ ಸಾಕ್ಷಿಯಾಗಲಿದ್ದಾರೆ. ಸರ್ಕಾರವನ್ನ ತಮ್ಮ ವೈಯಕ್ತಿಕ ಸೇಡಿನ ರಾಜಕಾರಣಕ್ಕೆ ಬಳಸಿಕೊಳ್ಳುವ ಮಾರ್ಗ ಹಿಡಿದಿರುವ ಯಡಿಯೂರಪ್ಪನವರ ಈ ಗೇಮ್ ಮುಂದೊಂದು ದಿನ ಅವರ ಕೈಗಳನ್ನೇ ಕಟ್ಟಿ ಹಾಕಿದರೂ ಅಚ್ಚರಿ ಪಡಬೇಕಿಲ್ಲ. ಈಗ ತಮ್ಮ ಜಾತಿಯ ರಕ್ಷಣೆಯಲ್ಲಿ ಮಿಂದು ಮುಳುಗಿರುವ ಯಡಿಯೂರಪ್ಪ ಅವರನ್ನ ಜಾತಿ ಮುಂದಿನ ದಿನಗಳಲ್ಲೂ ರಕ್ಷಿಸುತ್ತದೆ ಅನ್ನೋ ನಂಬಿಕೆ ಇದ್ದರೆ ಅದು ಅವರ ಭ್ರಮೆ! ಭಾರತದ ರಾಜಕೀಯ ಇತಿಹಾಸದಲ್ಲಿ ಜಾತಿ ರಾಜಕಾರಣವನ್ನ ಕಡೆಗಣಿಸಲು ಸಾದ್ಯವಿಲ್ಲ ಅನ್ನೋದು ನಿಜವೇ ಆದರೂ ಅದೇ ಸಂಪೂರ್ಣ ಮಾನದಂಡವಲ್ಲ. ಜಾತಿಯ ಸಂಕೋಲೆಯಿಂದ ಹೊರಬಂದು ನವ ರಾಜಕಾರಣವನ್ನು ಸೃಷ್ಟಿಸಬೇಕಾಗಿರುವ ಸಮಯದಲ್ಲಿ ಮತ್ತೆ ಜಾತಿಯ ಕೋಟೆ ಕಟ್ಟಿಕೊಂಡು ಅದರಲ್ಲಿ ಅಡಗಿಕೊಳ್ಳಲು ಸನ್ನದ್ದಾಗಿರುವ ಯಡಿಯೂರಪ್ಪ ಅವರ ಮನಸ್ಥಿತಿ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿಯಾದದ್ದು. ಬಿಹಾರದಲ್ಲಿ ರಾಜಕೀಯ ಸ್ಥಿರತೆ ಹಾಗು ಅಭಿವೃದ್ದಿಯ ಹರಿಕಾರನಾಗಿ ಎರಡನೇ ಬಾರಿಗೆ ಮುಖ್ಯಮಂತ್ರಿ ಗಾದಿ ಹಿಡಿದಿರುವ ನಿತೀಶ್ ಕುಮಾರ್ ಅವರ ಆಡಳಿತದ ಶೈಲಿ ಯಡಿಯೂರಪ್ಪ ಅವರ ಗಮನಕ್ಕೆ ಬಂದಿದ್ದರೆ ಕರ್ನಾಟಕಕ್ಕೆ ಈ ಪಾಟಿ ರಂಪ ನೋಡುವ ಅಗತ್ಯ ಬರುತ್ತಿರಲಿಲ್ಲ.
ಮಾಧ್ಯಮಗಳಿಗೆ ಈಗ ಸುದ್ದಿಯ ಸುಗ್ಗಿ. ಕ್ರೈಮ್ ರಿಪೋರ್ಟ್ ಬೇಡ. ಚಲನ ಚಿತ್ರ ಬೇಡ, ಸಾವು-ನೋವಿನ ಸುದ್ದಿ ಬೇಡ. ಹೀಗೆ ರಾಜಕೀಯ ಘಟಗಳು ಒಬ್ಬರ ಚಡ್ಡಿಯ ದಾರವನ್ನು ಇನ್ನೊಬ್ಬರು ಹಿಡಿದು ಜಗ್ಗಾಡುತ್ತಿರುವುದು ಅವರಿಗೆ ಲಾಟರಿ ಟಿಕೆಟ್ ಹೊಡೆದಂತೆ ಆಗಿದೆ.
ಮರಳಿ ಇನಿತೆನೆಗೆ
|