ಇಪ್ಪತ್ತು ವರ್ಷಗಳ ಹಿಂದೆ ಮಹಾಮಾರಿ ಎಂದು ಗುರುತಿಸಲ್ಪಟ್ಟ ಏಡ್ಸ್ (Acquired Immune Deficiency Syndrome or Acquired Immunodeficiency Syndrome AIDS) ಒಂದು ರೋಗವಾಗಿ ಅಷ್ಟೇ ಮಾರಕವಾಗಿ ಉಳಿದಿದ್ದರೂ ಸಮಾಜ ಆ ರೋಗವನ್ನು, ರೋಗದ ಮೂಲವನ್ನು, ರೋಗಕ್ಕೆ ಕಾರಣವನ್ನು ಅರ್ಥೈಸಿಕೊಳ್ಳುವ ರೀತಿಯಲ್ಲಿ ಒಂದು ಬಗೆಯ ಎವಲ್ಯೂಷನ್ ಕಂಡು ಬಂದಿದೆ.
ಮೊದಲು ಎಚ್ ಐ ವಿ (Human Immunodeficiency Virus HIV) ಸೋಂಕು ಕಾಂಡೋಮ್ ನ ರಕ್ಷಣೆ ಇಲ್ಲದೆಯೇ ಹಲವಾರು ಜನರೊಂದಿಗೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳುವವರಿಗೆ ಮಾತ್ರ ಬರುವಂಥದ್ದು ಎಂದಷ್ಟೇ ಪ್ರಚಲಿತವಿತ್ತು. ಆಗ ಏಡ್ಸ್ ಇದೆ ಎಂದು ಗುರುತಿಸಲಾಗುತ್ತಿದ್ದ ಜನರನ್ನು ಅನೈತಿಕ ಜನ, ನೀತಿಗೆಟ್ಟವರು ಎಂದೆಲ್ಲಾ ದೂಷಿಸಲಾಗುತ್ತಿತ್ತು. ಜನರಿಗೆ ಏಡ್ಸ್ ರೋಗಿಗಳ ಬಗ್ಗೆ ಗೌರವವಿರಲಿ...ಮರುಕ, ಅನುಕಂಪವೂ ದೊರಕುತ್ತಿರಲಿಲ್ಲ. ಎಷ್ಟೋ ಜನ ಸಮಾಜದ ನಿಂದನೆಗೆ ಹೆದರಿ ತಮಗೆ ಏಡ್ಸ್ ಬಂದಿದೆ ಎಂದು ಯಾರಿಗೂ ಹೇಳಿಕೊಳ್ಳದೆಯೇ ನರಳಿ ಸಾಯುತ್ತಿದ್ದರು. ಮನುಷ್ಯರ ಅನೈತಿಕ ನಡವಳಿಕೆಗೆ ಏಡ್ಸ್ ಪ್ರಕೃತಿ ಕೊಟ್ಟ ಶಾಪವೆಂದೇ ಪರಿಗಣಿಸಲಾಗಿತ್ತು. ಆದರೆ ಹಲವಾರು ಮಂದಿಯ ಶಾರೀರಿಕ ಸಂಬಂಧ ಮಾಡುವವರಿಗೆ ಮಾತ್ರ ಸೀಮಿತವಾಗದೇ ಏಡ್ಸ್ ತನ್ನ ಸಾವಿನ ಬಲೆಗೆ ಪುಟ್ಟ ಮಕ್ಕಳು, ಗರ್ಭಸ್ತ ಶಿಶುಗಳು, ಮುಗ್ಧ ಹೆಣ್ಣುಮಕ್ಕಳು, ಮುನ್ನೆಚ್ಚರಿಕೆಯಿಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂಜೆಕ್ಷನ್ ಚುಚ್ಚಿಸಿಕೊಂಡಿದ್ದ-ರಕ್ತ ಪಡೆದಿದ್ದ ಎಷ್ಟೋ ಜನರನ್ನು ಸೆಳೆಯತೊಡಗಿದಾಗ ಆ ರೋಗವನ್ನು ಜನ ನೋಡುವ ರೀತಿ, ಅರ್ಥ ಮಾಡಿಕೊಳ್ಳುವ ರೀತಿ ಕೊಂಚ ಬದಲಾಯಿತು. ಏಡ್ಸ್ ಎಂದಾಕ್ಷಣ ಅದಕ್ಕೊಂದು ಲೈಂಗಿಕ ಅನಾಚಾರದ ಛಾಯೆ ಮೂಡುವುದು ಮೊದಲಾದರೂ ಸೋಂಕು ಪೀಡಿತರೆಲ್ಲರೂ ಅನಾಚಾರಿಗಳಲ್ಲ; ಅವರಲ್ಲಿ ಶೇಕಡ ೭೫ ರಷ್ಟು ಮಂದಿ ಮುಗ್ಧರು. ಅವರಿಗೆ ಸೋಂಕು ಹತ್ತುವ ಪರಿ ನಿಜಕ್ಕೂ ಕ್ರೂರ ಎಂಬ ಸತ್ಯದ ಅರಿವಾಯಿತು.
ಏಡ್ಸ್ ಬಗ್ಗೆ ಮಾತನಾಡುವಾಗ ಜವಾಬ್ದಾರಿಯಿಂದ ಇರಬೇಕು. ಏಕೆಂದರೆ ಏಡ್ಸ್ ರೋಗ ಹುಟ್ಟಿದ್ದು, ಅದು ಮನುಷ್ಯರಿಗೆ ಮೊದಲು ಸೋಕಿದ್ದು, ನಂತರ ಜನ ಸಮೂಹಕ್ಕೆ ದೇಶ, ಖಂಡಗಳ ಗಡಿ ದಾಟುತ್ತಾ ಮಾರಕವಾಗಿ ಹರಡಿದ್ದು ಇವೆಲ್ಲದರ ಕಥೆ ಬಹಳ ಆಸಕ್ತಿಕರ ಮತ್ತು ಸಂದೇಹಾಸ್ಪದವಾಗಿದೆ. ಮನುಷ್ಯನ ರೋಗನಿರೋಧಕ ಶಕ್ತಿಯ ಮೇಲೆ ಸುಸಜ್ಜಿತವಾಗಿ, ಕ್ರಮೇಣವಾಗಿ, ಸಾವಕಾಶವಾಗಿ ಧಾಳಿ ಮಾಡುವ ಏಡ್ಸ್ ರೋಗವನ್ನು ಕೊಂಡೊಯ್ಯುವ ಎಚ್ಐವಿ ವೈರಸ್ ಮೊದಲು ಎಲ್ಲಿಂದ ಬಂತು? ಯಾರಿಗೆ ಬಂತು? ಹೇಗೆ ಗೊತ್ತಾಯಿತು? ಎಂಬ ಕುತೂಹಲಕ್ಕೆ ಈಗಲೂ ಸಮರ್ಪಕ ಉತ್ತರವಿಲ್ಲ. ಇವತ್ತಿಗೂ ಈ ರೋಗದ ಮೂಲವನ್ನು ಕಂಡು ಹಿಡಿಯಲು ನಡೆಯುತ್ತಿರುವ ವಿವಿಧ ಅಧ್ಯಯನಗಳು ಆಶ್ಚರ್ಯ-ಗಾಬರಿ ಹುಟ್ಟಿಸುವ ಅಂಶಗಳನ್ನೆ ಬಹಿರಂಗ ಪಡಿಸುತ್ತಿವೆ.
ಆಫ್ರಿಕಾದ ಕಾಡು ಮಂಗಗಳಲ್ಲಿ, ಚಿಂಪಾಜಿಗಳಲ್ಲಿ ಕಾಣುವ ಎಸ್ ಐ ವಿ (Simian Immunodeficiency Virus) ಆಕಸ್ಮಿಕವಾಗಿ ಮನುಷ್ಯರ ದೇಹ ಸೋಕಿ ಎಚ್ ಐ ವಿ ವೈರಸ್ ಆಗಿ ರೂಪಾಂತರ ಹೊಂದಿ ಮತ್ತಷ್ಟು ಬಲಿಷ್ಟವಾಗಿ ಮನುಷ್ಯರನ್ನು ಬಲಿತೆಗೆದುಕೊಳ್ಳುತ್ತಿದೆ ಎಂಬುದು ಏಡ್ಸ್ ರೋಗದ ಮೂಲದ ಮೊದಲ ವಾದವಾಗಿತ್ತು. ಈ ಎಸ್ ಐ ವಿ ವೈರಸ್ ಆಫ್ರಿಕಾದಲ್ಲಿ ಚಿಂಪಾಜ಼ಿಗಳನ್ನು ಬೇಟೆ ಮಾಡಿ ಅವನ್ನು ತಿನ್ನುವ ಬೇಟೆಗಾರಿಗೆ ಮೊದಲು ಬಂತು ಎಂದೂ ಅಭಿಪ್ರಾಯ ಪಡಲಾಯಿತು. ವೈರಸ್ ಗಳು ತಾವು ವಾಸಿಸುವ ಪರಿಸರದಲ್ಲಿ ಪ್ರತಿಕ್ಷಣವೂ ಚಟುವಟಿಕೆಯಿಂದಿದ್ದು ಹಲವಾರು ಬಗೆಯಲ್ಲಿ ಸತತ ರೂಪಾಂತರ ಹೊಂದುವುದರಿಂದ ಅವು ಮನುಷ್ಯನ ದೇಹ ಸೇರಿ ಅಲ್ಲಿನ ಪರಿಸರದಲ್ಲಿ ಚನ್ನಾಗಿ ಉಳಿಯಲು-ಬೆಳೆಯಲು ಎಚ್ ಐ ವಿ ಯಂತಹ ಬಲಯುತ ರೂಪ ಪಡೆದಿವೆ ಎನ್ನಲಾಯಿತು. ನಂತರ ನಡೆದ ಕೆಲವು ಅಧ್ಯಯನಗಳು ಎಚ್ ಐ ವಿ ಹೇಗೆ ಮಾರಕವಾಗಿ ಎಲ್ಲೆಡೆ ಪಸರಿಸಿತು ಎಂಬುದನ್ನು ಸಾಬೀತು ಪಡಿಸಲು ಪ್ರಯತ್ನಿಸಿದವು. ಆಫ್ರಿಕಾದ ಕಾಂಗೋ ದೇಶದಲ್ಲಿ ಸಾಮೂಹಿಕ ಪೋಲಿಯೋ ವ್ಯಾಕ್ಸಿನೇಷನ್ ಮಾಡಲಾದಾಗ, ಒಂದೇ ಸೂಜಿಯಿಂದ ನೂರಾರು ಮಂದಿಗೆ ಇಂಜೆಕ್ಷನ್ ಕೊಡಲಾದಾಗ ಎಚ್ ಐ ವಿ ಮತ್ತಷ್ಟು ಹರಡಿತು ಎಂದು ಹೇಳಲಾಯಿತು.
ಹಾಗೆಯೇ, ೨೦ನೇ ಶತಮಾನದ ಶುರುವಿನಲ್ಲಿ ಆಫ್ರಿಕಾ ಬಿಳಿ ಯುರೋಪಿಯನ್ನರ ವಸಾಹತುವಾಗಿದ್ದಾಗ ಅಲ್ಲಿನ ಕಪ್ಪು ಬಡಜನರನ್ನು ದಾರುಣವಾಗಿ ನಡೆಸಿಕೊಳ್ಳುತ್ತಾ ಅವರನ್ನು ಅತೀವ ಕೊಳಕು ಕ್ಯಾಂಪ್ ಗಳಲ್ಲಿ ಕೂಡಿಟ್ಟು, ಅವರ ಆಹಾರ-ವೈದ್ಯಕೀಯ ಅಗತ್ಯಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ಅವರಿಗೆ ರೋಗಗ್ರಸ್ತ ಮಂಗಗಳನ್ನೋ-ಚಿಂಪಾಜ಼ಿಗಳನ್ನೋ ಆಹಾರವಾಗಿ ಕೊಟ್ಟಾಗ ಎಚ್ ಐ ವಿ ಯ ಮೊದಲ ಸೋಂಕು ಹರಡಿತು ಎನ್ನಲಾಗಿದೆ. ಈ ರೀತಿಯ ಕ್ರೂರ ಕ್ಯಾಂಪ್ ಗಳಲ್ಲಿ ಮೃಗಗಳಂತೆ ಕೂಡಿಡಲಾಗುತ್ತಿದ್ದ ಕಪ್ಪು ಜನರಿಗೆ ಆಗಾಗ ಸ್ಥಳೀಯ ವೇಶ್ಯೆಯರನ್ನು ಒದಗಿಸಿಕೊಡುತ್ತಿದ್ದುದರಿಂದ ಸೋಂಕು ಉಗ್ರವಾಗಿ ಕ್ಯಾಂಪಿನಿಂದ ಹೊರಗಡೆಯೂ ಹರಡಲು ಕಾರಣವಾಯಿತು ಎಂದು ಹೇಳಲಾಯಿತು.
ಇದರಂತೆಯೇ ಇತ್ತೀಚೆಗೆ ಚರ್ಚೆಯಲ್ಲಿರುವ ಮತ್ತೊಂದು ವಾದ ಎಚ್ ಐ ವಿ ಸೋಂಕಿನ ಮಾರಕ ಗುಣಕ್ಕಿಂತಲೂ ಹೆಚ್ಚು ನೋವು-ಖೇದವನ್ನುಂಟು ಮಾಡುವಂಥದ್ದು. ಎಚ್ ಎಐ ವಿ ಸೋಂಕನ್ನು ಅದರ ಭಯಂಕರ ಮಾರಕ ಸಾಮರ್ಥ್ಯದ ಅರಿವಿದ್ದವರೇ ಹುಟ್ಟು ಹಾಕಿ ಕಪ್ಪು ಜನಾಂಗವನ್ನು ಸಾರ ಸಗಟಾಗಿ ಅಳಿಸಿಹಾಕಲು ಮತ್ತು ಸಲಿಂಗ ಕಾಮಿಗಳನ್ನು ಹತ್ತಿಕ್ಕಲು ಬಳಸಲಾಗಿರುವ ಜೈವಿಕ ಅಸ್ತ್ರ ಎನ್ನುವ ಈ ವಾದಕ್ಕೆ ಅದರದ್ದೇ ಪುರಾವೆಗಳಿವೆ. ಮೊಟ್ಟ ಮೊದಲ ಮಾನವ ಏಡ್ಸ್ ನ ಸೂಚನೆ ವಿಶ್ವದ ಜನರ ಅರಿವಿಗೆ ಬಂದಿದ್ದು ಅಮೆರಿಕಾದ ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾದ ಸಲಿಂಗ ಕಾಮಿಗಳ ಮೂಲಕ. ಸಲಿಂಗಿಗಳಿಗೆ ಹೆಪಟೈಟಿಸ್ ಚುಚ್ಚುಮದ್ದನ್ನು ಕೊಡುವ ಕಾರ್ಯಕ್ರಮದಡಿಯಲ್ಲಿ ಮತ್ತು ವಿಶ್ವದ ಜನರಿಗೆ ದಡಾರ ಇನ್ನಿತರ ಸಾಂಕ್ರಾಮಿಕ ರೋಗಗಳಿಗೆ ಲಸಿಕೆ ನೀಡುವ ಸಂದರ್ಭದಲ್ಲಿಯೇ ಅಮೆರಿಕಾ ಈ ರೋಗದ ವೈರಸ್ ಅನ್ನು ಹರಡಲು ಬಿಟ್ಟಿತು ಎನ್ನಲಾಗುತ್ತಿದೆ. ಅಮೆರಿಕಾದ ಫ಼ೆಡೆರಲ್ ’ಸ್ಪೆಷಲ್ ಕ್ಯಾನ್ಸರ್ ವೈರಸ್ ಪ್ರೋಗ್ರಮ್’ ಸಿ ಐ ಎ ನ ಸಹಾಯ ಪಡೆದು ಈ ವೈರಸ್ ಅನ್ನು ಜೆನೆಟಿಕಲಿ ಮಾಡಿಫೈಡ್ ಮಾಡಿದೆ ಎಂದು ಅಭಿಪ್ರಾಯ ಪಡಲಾಗುತ್ತಿದೆ! ಈ ಥರದ ಕ್ರೂರ ಐಡಿಯಾಗಳು ನಾಗರೀಕ ಮನುಷ್ಯರಿಗೆ ಮಾತ್ರ ಬರಲು ಸಾಧ್ಯವಲ್ಲವೇ?!
ಏಡ್ಸ್ ಅನ್ನು ಯಾರು ಹರಡಿದರು? ಹೇಗೆ ಹರಡಿತು? ಎಂದು ತಿಳಿಯುವುದು ನಮ್ಮ ಅರಿವನ್ನು ಹರಿತ ಮಾಡಿಕೊಳ್ಳಲು, ಮಂಪರು ಹರಿಸಿಕೊಳ್ಳಲು. ಅದು ಈಗ ನೆನ್ನೆಯ ಸುದ್ದಿ. ಆದರೆ ಇವತ್ತಿಗೂ ಆಫ್ರಿಕಾದ ಬಡ ದೇಶಗಳಲ್ಲಿ, ಭಾರತ-ಥಾಯಿಲ್ಯಾಂಡ್ ಇತ್ಯಾದಿ ಹಲವಾರು ದೇಶಗಳ ಬಡಜನರಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಲೇ ಇರುವ ಏಡ್ಸ್ ಅನ್ನು ತಡೆಗಟ್ಟುವುದು ಹೇಗೆ? ತಡೆಗಟ್ಟುವಿಕೆಗೆ ನಾವು-ಜನಸಾಮಾನ್ಯರು ಯಾವ ರೀತಿಯಲ್ಲಿ ಕಾರಣರಾಗಬಹುದು? ಇದು ನಮ್ಮೆಲ್ಲರ ಮುಂದಿರುವ ಪ್ರಶ್ನೆ. ಪ್ರತಿ ವರ್ಷವೂ ಡಿ ಸೆಂಬರ್ ೧-ವಿಶ್ವ ಏಡ್ಸ್ ದಿನ ಬಂದು ಹೋಗುತ್ತಿದೆ. ಹೋದ ವರ್ಷದ ಏಡ್ಸ್ ದಿನವನ್ನು ಕಂಡಿದ್ದ ಹಲವಾರು ಸೋಂಕು ತಗುಲಿರುವ ಮಂದಿ ಈ ವರ್ಷದ ಡಿಸೆಂಬರ್ ನ ಮುಖವನ್ನೂ ಕಾಣುವುದಿಲ್ಲ. ಆಫ್ರಿಕಾ-ಇಂಡಿಯಾದ ಪುಟ್ಟ ಮಕ್ಕಳಲ್ಲಿ, ಕಾರ್ಮಿಕ ಹೆಂಗಸರಲ್ಲಿ, ಗರ್ಭಸ್ತ ಶಿಶುಗಳಲ್ಲಿ ಆಗಲೇ ತನ್ನ ಬೀಜ ಹಾಕಿ ಅವರನ್ನು ಕಣ ಕಣವಾಗಿ ಕಬಳಿಸಲು ತಯಾರಿರುವ ಏಡ್ಸ್ ಗೆ ಕಡಿವಾಣ ಹಾಕಲು ಅರಿವಿನಿಂದ ಮಾತ್ರ ಸಾಧ್ಯ. ಅವರಿಗೆ ಬಂದಿದೆ...ನಮಗಲ್ಲವಲ್ಲಾ...ಅಂತ ಮುಸುಕು ಹೊದ್ದು ಕೂತ ಅರಿವುಗೇಡಿಗಳನ್ನು ಗೋಳಾಡಿಸಲು ಇಂತಹ ಸೋಂಕುಗಳಿಗೆ ಹೆಚ್ಚು ಸಮಯ ಬೇಕಾಗುವುದಿಲ್ಲ...
ಏಡ್ಸ್ ಗೆ ಸಂಪೂರ್ಣ ಗುಣ ಇನ್ನೂ ಸಾಧ್ಯವಿಲ್ಲ. ಆದರೆ ಮುಗ್ಧ ರೋಗಿಯೊಬ್ಬಳು ರೋಗದ ಸೋಂಕಿನ ನರಳಿಸುವಿಕೆಯ ಜೊತೆ ತನ್ನ ಸುತ್ತಮುತ್ತಲ ಜನರಿಂದ ಸಮಾಜದಿಂದ ಹೆಚ್ಚು ನೋವಿಗೊಳಗಾವುದು ಖಂಡಿತಾ ಸಲ್ಲ. ನಮ್ಮ ಹಳ್ಳಿಗಳಲ್ಲಿ ಇನ್ನೂ ಏಡ್ಸ್ ರೋಗವಿರುವವರಿಗೆ ಸಾಮಾಜಿಕ ಬಹಿಷ್ಕಾರ ಹಾಕುವುದು ಜಾರಿಯಲ್ಲಿದೆ. ಬಹಿಷ್ಕಾರ ಏಡ್ಸ್ ಅನ್ನು ತಡೆಗಟ್ಟುವುದಿಲ್ಲ. ಸ್ವಲ್ಪ ಅಕ್ಕರೆ, ಪ್ರೀತಿ, ಕರುಣೆಯ ಕಾವು ಏಡ್ಸ್ ಪೀಡಿತರಿಗೆ ರೋಗವನ್ನು ಸಹಿಸಿ ಸಾಧ್ಯವಾದಷ್ಟು ಹೋರಾಡುವ ಶಕ್ತಿ ಕೊಡಬಲ್ಲದು. |
|