ಅಂಗಳ      ಪಂಚವಟಿ
Print this pageAdd to Favorite
 
 
 
 
 

 (ಪುಟ ೧೨) ಹೂವ ಪಕಳೆಗಳು ಅಷ್ಟಷ್ಟೇ ಅರಳಿದಾಗ

ಬೇಲಾ ಮರವ೦ತೆ

ನಾನು ಗೆಳತಿಯರ ಬಂಧುಗಳ ಜೊತೆಯಲ್ಲಿ ಎಷ್ಟೇ ಸಂತೋಷ ಪ್ರೀತಿಯಿಂದ ವ್ಯವಹರಿಸಿದರೂ, ಸುತ್ತಾಡಿ ಮಜ ಮಾಡಿದರೂ ಆಗಾಗ ಒಂಟಿತನವನ್ನು ಬಯಸಿಕೊಂಡು, ಅದನ್ನು ತುಂಬ ಆಸ್ವಾದಿಸುವ ವ್ಯಕ್ತಿ. ಪ್ರಶಾಂತನೂ ಮನೆಯಲ್ಲಿಲ್ಲದೆ, ಜನರಿಲ್ಲದೆ, ಗೊತ್ತು ಗುರಿಯಿಲ್ಲದೆ ದೂರದೇಶವೊಂದರಲ್ಲಿ, ನಾಲ್ಕು ಗೋಡೆಗಳ ಮಧ್ಯ ಕುಳಿತು ಕಾಲವನ್ನು ’ಕಿಲ್’ ಮಾಡುವುದು ಅತ್ಯಂತ ಬೇಜಾರು, ದುಃಖ, ನೋವು ಕೊಡುತ್ತಿದ್ದುದು ನಿಜವಾದರೂ ಆಗಾಗ ನನ್ನ ದಿನಗಳಿಂದ ನಾನೇ ಕದಿಯುತ್ತಿದ್ದ ಕೆಲವು ಒಂಟಿತನದ ತುಣುಕುಗಳು ತುಂಬಾ ಆಪ್ತವೆನಿಸುತ್ತಿದ್ದವು. ಮನಸ್ಸಿನ ಹುಚ್ಚಿಗೆ ಹೆಂಡ ಕುಡಿಸಿ ಬೇಕಾದಂತೆ ಆಡಿಕೋ ಎಂದುಬಿಟ್ಟಂತೆ ಜಾಲಿಯಾಗಿರುತ್ತಿದ್ದ ಕೆಲವು ಗಂಟೆಗಳು ಕೇವಲ ನನ್ನವಾಗಿರುತ್ತಿದ್ದವು. ಆಗ ನನ್ನ ಪ್ರಪಂಚದಲ್ಲಿ ಅಪ್ಪ-ಅಮ್ಮ-ಅಕ್ಕ-ತಮ್ಮ-ಅತ್ತೆ-ಮಾವ-ಮಿತ್ರರು-ಬೇಲಾ ಯಾರೂ ಇರುತ್ತಿರಲಿಲ್ಲ. ನನಗೆ ಅವರ್ಯಾರು ಎಂದೂ ಗೊತ್ತಿರುತ್ತಿರಲಿಲ್ಲ. ನಾನು ಹೂವು, ಹಣ್ಣು, ಕಣ, ಮಣ್ಣು, ಕಸ, ಗಾಳಿ, ಗುಡಿ, ಗುಂಡಿ ಎಲ್ಲೆಂದರಲ್ಲಿರುತ್ತಿದೆ...ಅದೇ ಆಗಿ ಎನ್ನಿಸುತ್ತಿರುತ್ತಿತ್ತು. ಈ ಅನುಭವ ನನಗೆ ಆಗಿದ್ದು ಅಮೆರಿಕಾಗೆ ಬಂದ ಮೇಲೆಯೇ.
 
ಒಂಥರದಲ್ಲಿ ಒಂಟಿತನವನ್ನು ಬಲವಂತವಾಗಿ ಹೇರಲಾದಾಗ ಕಸಿವಿಸಿಗೊಳ್ಳುವ ಮನಸ್ಸು, ಒಂಟಿತನವನ್ನೂ ಚೀಟ್ ಮಾಡಿ ’ನೀನು ನನ್ನನ್ನು ಬಗ್ಗಿಸಲಾರೆ’ ಎಂದು ಅದರಲ್ಲಿಯೂ ಏನೂ ಒಂದು ಮಜ ಹುಡುಕಿಕೊಳ್ಳುತ್ತದೆ. ಇದು ಒಂಟಿತನವನ್ನು ಚೀಟ್ ಮಾಡುವ ಮನಸ್ಸಿನ ಜಾಣತನವೋ ಅಥವಾ ಅದಕ್ಕೆ ಸಂತೋಷದಿಂದ ಶರಣಾಗುವ ಪರಿಯೋ ನನಗೆ ಗೊತ್ತಿಲ್ಲ. ಆದರೆ ಮೌನದಲ್ಲಿ ಮನದೊಳಗೆ ಮಾತು ಹುಡುಕಿಕೊಂಡಿದ್ದು ನಾನು ಇಲ್ಲಿಗೆ ಬಂದ ಮೇಲೇ.

ಒಂದು ದಿನ ಸಂಜೆ ಐದು ಗಂಟೆ ಸುಮಾರಿಗೆ ನಮ್ಮ ಮನೆಯ ಬಾಲ್ಕನಿಗೆ ಬಂದು ನಿಂತಿದ್ದೆ. ನಮ್ಮ ಬಾಲ್ಕನಿಯ ಅರ್ಧ ಭಾಗಕ್ಕೆ ಮೇಲಿನಿಂದ ನೀರು ಬರದಂತೆ ಚಾವಣಿ ಇತ್ತು. ಉಳಿದರ್ಧ ಭಾಗ ಮಳೆ-ಬಿಸಿಲಿಗೆ ಪೂರ್ಣ ತೆರೆದಿತ್ತು. ಅದು ನಮ್ಮ ಪುಟಾಣಿ ಟೆರೆಸ್ ಗಾರ್ಡನ್ ಅಂತಿಟ್ಟುಕೊಳ್ಳಿ. ಸಧ್ಯದಲ್ಲೇ ಮಳೆಯಾಗುವ ಸೂಚನೆ ಇತ್ತು. ಹಾಗೇ ಮದಮತ್ತಗೊಳಿಸುವ ಭಾರವಾದ ಗಾಳಿ. ಸ್ವಲ್ಪ ಸ್ವಲ್ಪವೇ ತೂಗಾಡುತ್ತಿದ್ದ ಅಪಾರ್ಟ್ಮೆಂಟ್ ಕಾಂಪ್ಲೆಕ್ಸಿನ ಗಿಡ ಮರಗಳು. ಮೋಡದ ಮುಸುಗು ಹೊದ್ದ ಸೂರ್ಯ. ಇಲ್ಲಿಗೆ ಬಂದಾಗಿನಿಂದ ಒಮ್ಮೆಯೂ ಮಳೆ ನೋಡಿರಲಿಲ್ಲ. ಈ ಮಣ್ಣಿನ ವಾಸನೆ ಸವಿದಿರಲಿಲ್ಲ. ನಾನು ಬಾಲ್ಕನಿಯಲ್ಲೇ ಕುಳಿತು ಕಾಯುತ್ತಿದ್ದೆ; ಮೊದಲ ಹನಿಗಳಿಗಾಗಿ. ಐದಾರು ನಿಮಿಷಗಳಲ್ಲಿ ಪಟ ಪಟ ಹನಿಗಳು ಉದುರತೊಡಗಿದವು. ನಾನು ಮೂಗಿನ ಹೊಳ್ಳೆಗಳನ್ನು ತಯಾರಾಗಿಟ್ಟುಕೊಂಡು ನಿಂತೆ. ಹನಿಗಳು ಹತ್ತಾಗಿ, ನೂರಾಗಿ, ಧಾರಾಕಾರವಾಗತೊಡಗಿದವು. ನಾನು ನೆನೆದು ತೋಯುತ್ತಿದ್ದೆ. ನನ್ನಿಂದ ನಾನೇ ಕದ್ದಿದ್ದ ಒಂಟಿ ನಿಮಿಷಗಳಲ್ಲಿ ಕಲೆತು ಹೋಗಿದ್ದೆ. ಮಳೆನೀರು ತಲೆಯಿಂದ ಕಿವಿಯೊಳಗೆ, ಮೂಗು ಕತ್ತಿನ ಮೇಲೆ ಎಲ್ಲೆಲ್ಲಾ ಜಾರಿ ಆಡುತ್ತಾ ಹರಿಯುತ್ತಿತ್ತು. ನಾನೇ ಹನಿಯಾಗಿ, ನೀರಾಗಿ, ಮಳೆಯಾಗಿ ಗುನುಗುನಿಸುತ್ತಾ ಕರಗುತ್ತಿದ್ದೆ. ಆದರೆ ಮೂಗಿಗೆ ನಮ್ಮೂರಿನಲ್ಲಿ ಮಳೆ ತರುತಿದ್ದ ಆ ಸುವಾಸನೆ ಬರಲೇ ಇಲ್ಲ! ಮೊದಲ ಮಳೆಹನಿಗಳು ಮಣ್ಣ ಮದುವೆಯಾಗಿ ಹುಟ್ಟಿಸುತ್ತಿದ್ದ ಹೆಸರು ಕೊಡಲಾಗದ ’ಆ’ ವಾಸನೆ ನಿಜಕ್ಕೂ ಇಲ್ಲಿ ಬರುತ್ತಿರಲಿಲ್ಲ! ನನಗೆ ಪರಿಚಯವಿಲ್ಲದ, ಅಷ್ಟೇನು ಚಂದ ಎನಿಸದ ಬೇರೇನೋ ಒಂದು ವಾಸನೆ. ಆದರೆ ಆ ವಾಸನೆಯಲ್ಲಿ ನಮ್ಮೂರ ಮಳೆ ವಾಸನೆಯ ಸ್ಟ್ರಾಂಗ್ ಫ಼್ಲೇವರ್ ಇರಲಿಲ್ಲ. ಬಹುಷಃ ನೀರ ಹನಿಗಳು ಧೂಳು ಮಣ್ಣ ಮೇಲೆ ಬೀಳದೇ ಸಿಮೆಂಟಾವೃತ ನೆಲದ ಮೇಲೆ ಬೀಳುತ್ತಿದ್ದುದರಿಂದಲೇನೂ ಎಂದುಕೊಂಡು ಸುಮ್ಮನಾದೆ. ಸುಮಾರು ಅರ್ಧ ಮುಕ್ಕಾಲು ಗಂಟೆ ಸುರಿದ ಮಳೆ ಒಮ್ಮೆಗೇ ಸುಮ್ಮನಾಯಿತು. ನಾನು ಬಾಲ್ಕನಿಯಲ್ಲಿಟ್ಟಿದ್ದ ಒಂದು ಕ್ಯಾಂಪಿಂಗ್ ಚೇರ್ ನ ಮೇಲೆ ಕುಳಿತುಕೊಂಡೆ.
 
ನಮ್ಮೂರಲ್ಲಿ ಇಷ್ಟೋಂದು ಬಟಾ ಬಯಲಾಗಿ ಮಳೆಯಲ್ಲಿ ನೆನೆಯಲು ಸಾಧ್ಯವಾಗುತ್ತಿರಲಿಲ್ಲ. ಅಕ್ಕ ಪಕ್ಕದ ಮನೆಯವರು ನೋಡಿ ಏನಿದು ಈ ಹುಡುಗಿಗೆ ಹುಚ್ಚು ಎನ್ನುತ್ತಾರೆಂಬ ಭಯ. ನೆಗಡಿ ಜ್ವರ ಬರುತ್ತೆ...ವಯಸ್ಸಿಗೆ ಬಂದ ಹುಡುಗೀರು...ಇದೇನು ಹುಡುಗಾಟ...ಅಮ್ಮ ಶುರು ಮಾಡಿಕೊಳ್ಳುತ್ತಾರೆ ಎನ್ನುವ ಹಿಂಜರಿಕೆಯಿಂದ ನಾನು ಒಗೆದು ಒಣಗಿಸಿದ ಬಟ್ಟೆ ಎತ್ತಿಕೊಳ್ಳುವ ನೆಪದಲ್ಲಿ ಮಳೆ ಶುರುವಾದ ಮೇಲೆ ಹೊರಗೆ ಬಂದು ಒಂದೋ ಅರ್ಧವೋ ನಿಮಿಷ ನೆನೆದು ಮನೆಯೊಳಗೆ ಓಡಿಬಿಡುತ್ತಿದ್ದೆ. ಈಗ ಹೇಳುವವರಿಲ್ಲ. ಕೇಳುವವರಿಲ್ಲ. ನನ್ನ ಆಸೆಗಳನ್ನೆಲ್ಲಾ ಈಡೇರಿಸಿಕೊಳ್ಳುತ್ತಿದ್ದೆ!

ಒದ್ದೆ ಬಟ್ಟೆಯಿಂದ ಚಳಿಯಾಗಲು ಶುರುವಾಯಿತು. ಒಳಗೆ ಹೊರಟೆ. ಬಾಗಿಲು ಹಾಕಿಕೊಳ್ಳುವ ಮುನ್ನ ಕಾಣಿಸಿತು. ಆ ಬಿಳೀ ಹುಡುಗಿ ನನ್ನನೇ ದಿಟ್ಟಿಸಿ ನೋಡುತ್ತಿದ್ದಳು. ನಮ್ಮ ಬಾಲ್ಕನಿಗೆ ಎದುರಾಗಿದ್ದ ಬಿಲ್ಡಿಂಗ್ ನ ಮೂಲೆಮನೆಯಾಕೆ. ಆಗಾಗ ನಾನು ಹೊರ ಬಂದಾಗ ಕಾಣಿಸುತ್ತಿದ್ದಳು. ಪುಸ್ತಕ ಹಿಡಿದುಕೊಂಡೋ, ಸೆಲ್ ಫೋನಲ್ಲಿ ಮಾತನಾಡುತ್ತಲೋ ಮಗ್ನಳಾಗಿರುತ್ತಿದ್ದ ಅವಳು ಆ ದಿನ ತನ್ನ ಬಾಲ್ಕನಿಯ ಕವರ್ಡ್ ಜಾಗದಲ್ಲಿ ಟೀನೋ ಕಾಫಿಯನ್ನೋ ಕುಡಿಯುತ್ತಾ ನನ್ನತ್ತಲೇ ದಿಟ್ಟಿಸುತ್ತಿದ್ದಳು. ನನಗೆ ಒಂದು ನಿಮಿಷ ಭಯಂಕರ ಮುಜುಗರವಾಯಿತು. ಏನೋ ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡಂತೆ. ಅರೆ! ನಾನು ಯಾರಿಗೆ ಯಾಕೆ ಕೇರ್ ಮಾಡಬೇಕು ಅಂತ ತಕ್ಷಣ ಸಮಾಧಾನ ಮಾಡಿಕೊಂಡು ಅವಳು ನೋಡುತ್ತಿರುವುದು ಖರೆಯಾ ಅಂತ ತಲೆ ಹೊರಹಾಕಿ ನೋಡಿದೆ. ಅವಳು ಹಾಯ್ ಹೇಳುವಂತೆ ಕಯ್ಯನ್ನು ವೇವ್ ಮಾಡಿದಳು. ನನ್ನನ್ನು ಬಿಟ್ಟು ನಮ್ಮ ಬಿಲ್ಡಿಂಗ್ ನ ಬಾಲ್ಕನಿಗಳಲ್ಲಿ ಯಾರೂ ಹೊರಗೆ ಇರಲಿಲ್ಲವಾದ್ದರಿಂದ ಮೆಲ್ಲಗೆ ಕೈ ಆಡಿಸಿ ಮನೆಯೊಳಗೆ ಬಂದೆ. ಪ್ರಶಾಂತ ಬರುವುದರೊಳಗೆ ನಾರ್ಮಲ್ ಹೆಂಡತಿಯಾಗಬೇಕು ಅಂತ ಬಿಸಿ ನೀರ ಸ್ನಾನ ಮಾಡಿ ಅಡುಗೆಗೆ ತಯಾರಾದೆ.
 
ಮರುದಿನ ಸಂಜೆ ನಮ್ಮ ಅಪಾರ್ಟ್ಮೆಂಟ್ ಕಾಂಪ್ಲೆಕ್ಸಿನ ಪತ್ರಗಳು ಹಾಕುವ ಜಾಗಕ್ಕೆ ಬಂದು ನಮ್ಮ ಮನೆಯ ಬಾಕ್ಸಿಗೆ ಬಂದಿದ್ದ ಪತ್ರಗಳನ್ನು ತೆಗೆದುಕೊಳ್ಳುತ್ತಿದ್ದೆ. ಊರಿಂದ ಯಾರಾದರೂ ಪತ್ರ ಬರೆದು ಸರ್ಪ್ರೈಸ್ ಮಾಡುತ್ತಾರಾ ಎನ್ನುವ ಆಸೆಯಿಂದ. ನಾನು ನಮ್ಮ ಮೇಳ್ ಬಾಕ್ಸಿಗೆ ಬೀಗ ಹಾಕುತ್ತಿದ್ದಂತೇ ’ಹಾಯ್! ಹೌ ಆರ್ ಯೂ’ ಅಂತ ಯಾರೋ ಹಿಂದಿನಿಂದ ವಿಶ್ ಮಾಡಿದ್ದು ಕೇಳಿಸಿತು. ಆ ದನಿಯಲ್ಲಿ ಪರಿಚಿತರೆಂಬ ಸಲುಗೆಯಿತ್ತು. ಯಾರಿರಬಹುದಪ್ಪಾ ಅಂತ ತಿರುಗಿ ನೋಡಿದೆ. ಸುಮಾರು ೩೦-೩೫ ವಯಸ್ಸಿನ ಅಮೆರಿಕನ್ ಹುಡುಗಿ ತನ್ನ ಕಾರ್ ಪಾರ್ಕ್ ಮಾಡಿ ತನ್ನ ಮೇಲ್ ಬಾಕ್ಸ್ ಚೆಕ್ ಮಾಡಲು ಬಂದಿದ್ದಳು. ಅಪಾರ್ಟ್ಮೆಂಟ್ ಕಾಂಪ್ಲೆಕ್ಸಿನಲ್ಲಿ ಎದುರಿಗೆ ಕಂಡವರೆಲ್ಲರೂ ಒಮ್ಮೆ ಹಾಯ್ ಎಂದು ಸುಮ್ಮನಾಗುವುದರಿಂದ. ನಾನೂ ಹಾಯ್...ನಾನು ಫೈನ್, ನೀನು ಹೇಗಿದ್ದಿಯ?’ ಅಂತ ಕೇಳಿ ಸುಮ್ಮನಾದೆ. ಹಾಗೆ ಕ್ಯಾಶುಅಲ್ ಆಗಿ ಬರುವ ಹಾಯ್ ಹಲೋಗಳಿಗೆ ಉತ್ತರ ನಿರೀಕ್ಷಿಸುವಂತಿಲ್ಲ ಎಂದು ಪ್ರಶಾಂತ ವಿವರಿಸಿದ್ದರಿಂದ ನಾನು ಪತ್ರಗಳನ್ನಿಟ್ಟುಕೊಂಡು ಹೊರಟೆ. ’ಐ ಸಾ. ಯು ಲವ್ ರೇನ್!’ ಆಕೆ ಕೇಳಿದಳು. ನಾನು ತಕ್ಷಣ ಹಿಂದೆ ತಿರುಗಿದೆ. ನೆನ್ನೆ ನಾನು ನನ್ನ ಲೋಕದಲ್ಲಿದ್ದಾಗ ನನ್ನನ್ನು ನೋಡಿರುವ ಪಾರ್ಟಿ ಇವಳೇ ಎಂದುಕೊಂಡು...’ಯಾ...’ ಅಂತ ತಡವರಿಸುತ್ತಾ ಅನ್ನುವಾಗ ಸಂಕೋಚವಾಗಿತ್ತು. ’ನಾನೂ ನಮ್ಮ ಊರಿನಲ್ಲಿರುವಾಗ ತುಂಬಾ ಮಳೆಯಲ್ಲಿ ಆಟವಾಡುತ್ತಿದ್ದೆ...ಆದ್ರೆ ಈಗ ಐ ಹ್ಯಾವ್ ಓವರ್ ಗ್ರೋನ್ ದಟ್..’ ಆಕೆ ಆರಾಮಕ್ಕೆ ಮಾತು ಮುಂದುವರಿಸಿದಳು. ’ಓ ನಿನ್ನದೂ ಬೇರೆ ಊರಾ?’ ಕೇಳಿದೆ. ’ನಾನು ಫ್ಲೋರಿಡಾ ರಾಜ್ಯದಲ್ಲಿ ಹುಟ್ಟಿ ಬೆಳೆದವಳು. ಅಲ್ಲಿ ಮಳೆಯಲ್ಲಿ ಆಟ ಆಡುವುದಕ್ಕೆ ಅಭ್ಯಾಸ ಮಾಡಿಕೊಳ್ಳಲಿಲ್ಲ ಅಂದ್ರೆ ಅರ್ಧ ವರ್ಷ ಮನೆಯಿಂದ ಹೊರಗೇ ಬರಲಾಗುವುದಿಲ್ಲ....ಆದ್ರೆ ನನಗೆ ಮಳೆ ಅಂದ್ರೆ ತುಂಬಾ ಇಷ್ಟ... ನೀನು ಇಂಡಿಯನ್ ಅಲ್ವಾ?...ಯಾವ ಪಾರ್ಟ್ ಆಫ್ ಇಂಡಿಯಾ?’ ಕೇಳಿದಳು. "ನಾನು ದಕ್ಷಿಣದವಳು...ಕರ್ನಾಟಕದವಳು...ಈ ಊರಿನವಳು’ ಎಲ್ಲಾ ಹೇಳಿ ’ನಿನ್ನ ಹೆಸರೇನು’ ಕೇಳಿದೆ. ’ಓಹ್ ನಾನು ಮಿಶೆಲ್...ನೀನು? ಎಂದಳು. ’ಹಾಯ್ ಮಿಶೆಲ್. ನಾನು ಬೇಲಾ’ ಎಂದೆ. ’ನಾನು ಎರಡು ಸರಿ ಇಂಡಿಯಾಗೆ ಹೋಗಿದ್ದೀನಿ. ತಂಜಾವೂರ್ ಗೂ ಹೋಗಿದ್ದೀನಿ...ನನಗೆ ಇಂಡಿಯಾ ಅಂದ್ರೆ ತುಂಬಾ ಇಷ್ಟ...ಸೋ ಬೇಲಾ ವಾಟ್ ಡು ಯು ಡೂ?’ ಮಿಶೆಲ್ ಉತ್ಸಾಹದಿಂದ ಮಾತನಾಡುತ್ತಿದ್ದಳು. ’ಈಗ ಏನೂ ಮಾಡುತ್ತಿಲ್ಲ. ಈಗಷ್ಟೇ ಮದುವೆಯಾಗಿ ಇಲ್ಲಿಗೆ ಬಂದಿದ್ದೇನೆ...’ ಹೇಳಿದೆ. ಮದುವೆಯಾಗಿ ಅಮೆರಿಕಾಗೆ ಬಂದಿರುವುದೇ ನನ್ನ ಘನ ಕಾರ್ಯ ಅಂತ ಹೇಳುವಾಗ ಮನಸ್ಸಿಗೆ ಬಹಳ ಕಷ್ಟ ಆಗುತ್ತಿತ್ತು. ಇಲ್ಲಿಗೆ ಬರುವ ಮುಂಚೆ ಹೆಚ್ ೪ ವಿಸಾ ಅಥವಾ ಡಿಪೆಂಡೆಂಟ್ ವಿಸಾಗೆ ಇರುವ ನಿರ್ಬಂಧಗಳ ಬಗ್ಗೆ ಸ್ವಲ್ಪ ಗೊತ್ತಿತ್ತು. ಆದರೆ ಹೆಚ್ ೪ ನಲ್ಲಿ ಕೆಲಸ ಮಾಡಲಾಗದ, ಸುಲಭವಾಗಿ ಡ್ರೈವಿಂಗ್ ಲೈಸನ್ಸ್ ಪಡೆಯಲಾಗದ ಕಜೆ ನಿರ್ಬಂಧಗಳನ್ನು ಅರ್ಥ ಮಾಡಿಕೊಳ್ಳತೊಡಗಿದಾಗ ಇದೊಂದು ಕಬ್ಬಿಣದ ಸರಪಳಿ ಎನ್ನಿಸತೊಡಗಿತ್ತು.

ಮಿಶೆಲ್ ತಾನು ಡಾಕ್ಯುಮೆಂಟರಿ ಮಾಡುವ ಟೀಮ್ ಒಂದನ್ನು ಲೀಡ್ ಮಾಡುತ್ತಿದ್ದೇನೆ...ಮೀಡಿಯಾ, ಪ್ರೊಡಕ್ಷನ್ ನನ್ನ ಪ್ಯಾಶನ್ ಎಂದು ತನ್ನ ಕೆಲಸದ ಪರಿಚಯ ಮಾಡಿಕೊಂಡಳು. ’ಬೇಲಾ...ನೀನು ಫ್ರೀ ಇರ್ತಿಯಾ ಅಂದ್ರೆ ಮೇ ಬಿ ವಿ ಶುಡ್ ಮೀಟ್ ಸಮ್ ಟೈಮ್...ಇದು ನನ್ನ ಮನೆಯ ನಂಬರ್’ ಎಂದಳು. ’ಆಯ್ತು. ನನ್ನ ಮನೆ ಅದು...ನೈಸ್ ಮೀಟಿಂಗ್ ಯೂ...’ ಎಂದು ಇಬ್ಬರೂ ಹೊರಟೆವು. ಮೊದಲ ಬಾರಿಗೆ ವಿದೇಶೀಯಳೊಬ್ಬಳೊಟ್ಟಿಗೆ ಪುಟ್ಟ ಹರಟೆ ಹೊಡೆದಿದ್ದೆ. ಅವಳು ಅತ್ಯಂತ ಸ್ನೇಹದಿಂದ ಮಾತಾಡಿದ್ದಳು. ನಾವು ಮಾತನಾಡುವಾಗ ಇಬ್ಬರು ಹುಡುಗಿಯರು ಅಲ್ಲಿದ್ದರೇ ಹೊರತು ಆ ನಿಮಿಷಗಳಲ್ಲಿ ದೇಶ, ಭಾಷೆ, ಬಣ್ಣ ಯಾವುದೂ ದೊಡ್ಡದಾಗಿ ಅರಿವಿನಲ್ಲಿರಲಿಲ್ಲ. ನನಗೆ ಆಕೆ ಇಷ್ಟ ಆಗಿದ್ದಳು. ಅವಳು ಅತ್ತ ಹೋದ ಮೇಲೆ ಇವತ್ಯಾಕೆ ಈಕೆಯ ಜೊತೆ ಈ ಮಾತುಗಳಾದವು ಎಂದೆಲ್ಲಾ ಯೋಚಿಸಿಕೊಂಡು ಮನೆಗೆ ಬಂದೆ.

ಹಾಗಾಗಿ ವಾರಗಳೇ ಕಳೆದಿರಬೇಕು..ಒಂದು ಸಂಜೆ ನಮ್ಮ ಬಾಲ್ಕನಿಯಲ್ಲಿ ನಾವು ಸಾಕುತ್ತಿದ್ದ ನಾಲ್ಕೈದು ಗಿಡಗಳಿಗೆ ನೀರು ಹಾಕುತ್ತಿದ್ದೆ. ’ಬೇಲಾ.." ಯಾರೋ ಜೋರಾಗಿ ಕರೆದರು. ತಿರುಗಿ ನೋಡಿದೆ. ಮಿಶೆಲ್ ತನ್ನ ಬಾಲ್ಕನಿಯಲ್ಲಿ ಕೂತಿದ್ದಳು, ಅವಳ ಪಕ್ಕ ಇನ್ನೊಬ್ಬಳು ಹುಡುಗಿ. ಅವಳಿಗೆ ಕೈ ಬೀಸಿದೆ. ’ಬೀಯಿಂಗ್ ಬಿಸಿ?’ ಕೇಳಿದಳು. ನಕ್ಕೆ. ’ಜೋಯಿನ್ ಅಸ್..ವಿ ಆರ್ ಹ್ಯಾವಿಂಗ್ ಹಾಟ್ ಚಾಕೋಲೇಟ್’ ಎಂದಳು. ಅಡಿಗೆ ಮಾಡಬೇಕು ಇವತ್ತು ಆಗಲ್ಲ. ಥ್ಯಾಂಕ್ ಯೂ. ಮತ್ತೊಮ್ಮೆ ಬರ್ತೀನಿ’ ಎಂದು ಸುಮ್ಮನಾದೆ. ನನಗೆ ಮನೆಯಲ್ಲಿ ಮಾಡಲು ಯಾವ ಗ್ರೇಟ್ ಕೆಲಸವೂ ಇರಲಿಲ್ಲ. ಆದರೆ ಅವರು ಇನ್ನೂ ಹೊಸಬರಾದ್ದರಿಂದ ಕರೆದ ತಕ್ಷಣ ಹೋಗಿ ಬಿಡುವುದಕ್ಕೆ ಏನೋ ಹಿಂಜರಿಕೆ. ಮುಂದಿನ ಎರಡು ವಾರಗಳಲ್ಲಿ ಮತ್ತೆ ಮಿಶೆಲ್ ಸಿಕ್ಕಳು. "ನೀನು ತುಂಬಾ ಶೈ ಅನ್ನಿಸುತ್ತೆ...ಶುಕ್ರವಾರ ಸಂಜೆ ಬಾ..ನನ್ನ ಪಾರ್ಟ್ನರ್ ಅನ್ನೂ ಪರಿಚಯ ಮಾಡ್ತಿನಿ...ವಿ ವಿಲ್ ಹ್ಯಾವ್ ಕಾಫಿ..." ಎಂದಳು. ಅವಳ ಆಹ್ವಾನವನ್ನು ಒಪ್ಪಿಕೊಳ್ಳದೆ ಬರಲಾಗಲಿಲ್ಲ. ಅದನ್ನು ಪ್ರಶಾಂತನಿಗೆ ತಿಳಿಸಿದೆ. ಅವನು ’ಹೋಗಿ ಬಾ. ಒಳ್ಳೆ ಫ್ರೆಂಡ್ಸ್ ಆದ್ರೂ ಆಗಬಹುದು. ಅವತ್ತು ನಾನು ಮಧ್ಯಾನ್ಹನೇ ಮನೆಗೆ ಬಂದು ಮನೆಯಿಂದಲೇ ಕೆಲ್ಸ ಮಾಡ್ತಿನಿ. ಆದ್ರೆ ಅವರ ಮನೇಲಿ ಹುಷಾರಾಗಿರು. ಓಪನ್ ಮಾಡಿಕೊಟ್ಟ ಪಾನೀಯಗಳನ್ನು ಕುಡಿಯಬೇಡ. ಕೋಕ್ ಕ್ಯಾನ್ ಕೊಡು ಅಂತ ಕೇಳಿ ತೆಗೆದುಕೋ...ನಾನು ಅರ್ಧ ಗಂಟೆಗೂ ನಿನಗೆ ಫೋನ್ ಮಾಡ್ತಾ ಇರ್ತಿನಿ...’ ಅಂತ ಪ್ಲಾನ್ ಮಾಡಿಕೊಟ್ಟ. ಶುಕ್ರವಾರ ’ನೋಡಪ್ಪಾ ಇದೇ ಮನೆಗೆ ಹೋಗಿರ್ತೀನಿ...ವಾಪಸ್ ಬರಲಿಲ್ಲ ಅಂದ್ರೆ ಪ್ಲೀಸ್ ಪೋಲೀಸರಿಗೆ ಫೋನ್ ಮಾಡಿಬಿಡು..." ಅಂತ ನಗಾಡಿಕೊಂಡು ಒಂದು ಸೀಸ್ ಕ್ಯಾಂಡಿಯ ಡಬ್ಬ ಹಿಡಿದು ಹೊರಟೆ.
 
ಬಾಗಿಲು ತಟ್ಟಿದಾಗ ಮಿಶೆಲ್ ಬಾಗಿಲಿಗೆ ಬಂದಳು. ’ಹಾಯ್ ಬೇಲಾ...ಕಮ್ ಆನ್ ಇನ್...’ ಅಂತ ಕರೆದೊಯ್ದಳು. ಅವರ ಮನೆ ನಮ್ಮ ಮನೆಗಿಂತ ಸ್ವಲ್ಪ ಭಿನ್ನವಾಗಿತ್ತು. ಮನೆಯನ್ನು ಬಹಳ ಸುಂದರವಾಗಿ ಅಲಂಕರಿಸಿದ್ದಳು. ಮಿಶೆಲ್ ನಾನು ಒಳಗೆ ಹೋದಂತೇ ಅಲ್ಲಿದ್ದ ಇನ್ನೊಬ್ಬ ಹುಡುಗಿಯನ್ನು ’ಇವಳು ಜೋಸೆಫೀನ್, ನನ್ನ ಪಾಟ್ನರ್’ ಎಂದು ಪರಿಚಯಿಸಿದಳು. ಆ ಜೊಸೆಫೀನ್ ಸಿಕ್ಕಾಪಟೆ ಚೆಲುವೆ ಹುಡುಗಿ. ಮಿಶೆಲ್ ನಂತೆ ಬಡ ಬಡ ಮಾತಿನವಳಲ್ಲ. ಮುಗುಳ್ನಕ್ಕು ಬಾ ಅಂತ ಚೇರು ತೋರಿಸಿದಳು. ಅವಳು ತನ್ನ ಮುಂದೆ ಒಂದು ಕಾರ್ಡ್ ಬೋರ್ಡ್ ಇಟ್ಟುಕೊಂಡು ಏನೋ ಸ್ಕೆಚ್ ಮಾಡುತ್ತಿದ್ದಳು. ನಾನು ಅವಳು ತೋರಿಸಿದ ಚೇರಿನಲ್ಲಿ ಸಂಕೋಚದಿಂದಲೇ ಹೋಗಿ ಕುಳಿತೆ. ಮಿಶೆಲ್ ’ನೀನು ಕಾಫಿ ಕುಡಿತೀಯಾ ತಾನೇ?’ ಎಂದಳು. ’ಇಲ್ಲ ಬೇಡ...ಕೋಕ್ ಇದ್ದರೆ ಕೊಡು’ ಎಂದೆ. ’ಓಹ್ ನೀನು ಕಾಫಿ ಕುಡಿಯೋದಿಲ್ವಾ...ನೀನು ಸೌತ್ ಇಂಡಿಯನ್ ಆದ್ದರಿಂದ ಕಾಫಿ ಕುಡಿದೇ ಕುಡಿತೀಯ ಎಂದುಕೊಂಡಿದ್ದೆ...ಐ ಲೈಕ್ ಸೌತ್ ಇಂಡಿಯನ್ ಕಾಫಿ...’ ಮಿಶೆಲ್ ಮಾತಿನಮಲ್ಲಿ ಅಂತ ಖಾತ್ರಿಯಾಗುತ್ತಿತ್ತು. ’ನೀನು ಕಾಫಿ ಕುಡಿದಿದ್ದರೆ ನಿನ್ನ ಕೈಲೇ ಮಾಡಿಸಬಹುದಿತ್ತು ನೋಡು..’ ಮಿಶೆಲ್ ಹೇಳಿದಾಗ ನನಗೆ ತಡೆಯಲಾಗಲಿಲ್ಲ. ನಾನೇ ಮಾಡಿದ ಪೇಯವನ್ನು ನಾನೇ ಕುಡಿದರೆ ಸೇಫ್ ತಾನೇ ಎಂದುಕೊಂಡು ’ಶ್ಯೂರ್..ಲೆಟ್ ಮಿ ಮೇಕ್ ಕಾಫಿ...’ ಅಂತ ಎದ್ದೆ.
 
ಅಲ್ಲಿದ್ದ ಇನ್ಫ಼ಾರ್ಮಲ್ ವಾತಾವರಣ ನನಗೂ ಮೈ ಚಳಿ ಬಿಡಿಸಿತ್ತು. ನಾನು ಅವಳ ಸುಸಜ್ಜಿತ ಅಡಿಗೆ ಮನೆಯಲ್ಲಿ ನಮ್ಮೂರ ಕಾಫಿ ಮಾಡುವ ಪ್ರಯತ್ನ ಮಾಡಿದೆ. ಮಿಶೆಲ್ ನನ್ನೆದುರಿಗೇ ಒಂದು ಕ್ರ್ಯಾಕರ್ ಪ್ಯಾಕ್ ಅನ್ನು ಓಪನ್ ಮಾಡಿಟ್ಟಳು. ಜೋಸೆಫೀನ್ ತನ್ನ ಸ್ಕೆಚ್ ಸುತ್ತಿಟ್ಟು ನಾನು ಕಾಫಿ ಮಾಡುವುದನ್ನು ನೋಡಲು ಬಂದಳು. ಕಾಫಿ ಮಗ್ ಗಳಿಗೆ ಸುರಿದುಕೊಂಡು ಕುರುಕುತ್ತಾ ಅವಳ ಲಿವಿಂಗ್ ರೂಮ ನಲ್ಲಿ ಕೂತೆವು. ಕೇರಳದಲ್ಲಿ ಅವಳು ನೋಡಿದ್ದ ಅಲಂಕೃತ ಆನೆಗಳು, ದೇವಸ್ಥಾನಗಳು, ಸ್ಪೈಸಿ ಫ಼ಿಶ್ ಕರ್ರಿ ಎಲ್ಲವನ್ನೂ ಖುಷಿಯಿಂದ ನೆನಪಿಸಿಕೊಂಡಳು ಮಿಶೆಲ್. ಇಬ್ಬರೂ ಆರಾಮ್ ಹುಡುಗಿಯರು. ಇಂಡಿಯಾ ಬಗ್ಗೆ ತನಗೆ ಗೊತ್ತಿದ್ದಿದ್ದನ್ನು ಮಿಶೆಲ್ ಮಾತಾಡಿದರೆ ತನಗೂ ಒಮ್ಮೆ ಇಂಡಿಯಾಗೆ ಹೋಗಬೇಕೆಂದು ಆಸೆ ಅಂತ ಜೋಸೆಫೀನ್ ತೋಡಿಕೊಂಡಳು. ’ನನ್ನನ್ನು ಎಲ್ಲರೂ ಜೋ ಅಂತ ಕರಿತಾರೆ..ನೀನೂ ಹಾಗೇ ಕರೆಯಬಹುದು’ ಎಂದು ಜೋಸೆಫೀನ್ ಅಂದಳು.
 
ಪ್ರಶಾಂತ್ ಫೋನ್ ಮಾಡಿದ. ’ಹೂಂ, ಉಹೂಂ’ ನಲ್ಲೇ ನನ್ನ ಕ್ಷೇಮ ತಿಳಿಸಿದೆ. ಮಿಶೆಲ್ ಮತ್ತು ಜೋ ಇಬ್ಬರು ನೋಡುವುದಕ್ಕೆ ತದ್ವಿರುದ್ಧವಾಗಿದ್ದರು. ಮಿಶೆಲ್ ಅಥ್ಲೆಟಿಕ್ ಲುಕ್ ನ ಹುಡುಗಿ. ಅವಳ ವೇಷಭೂಷಗಳೂ, ನಡೆಯುತ್ತಿದ್ದ ರೀತಿ ಎಲ್ಲವೂ ಸ್ವಲ್ಪ ಅಥ್ಲೆಟಿಕ್ ಆಗಿತ್ತು, ಹುಡುಗರಂತೆ. ಜೋ ಲತಾ ಸುಂದರಿ. ಬಿಂಕ, ನಾಜೂಕು ಜಾಸ್ತಿ. ಅವಳು ಸ್ಪಾನಿಶ್ ಮೂಲದವಳಂತೆ. ಮಾತಿನಲ್ಲೂ ರಾಗ. ಜೋ ’ನನಗೆ ಇಂಡಿಯನ್ ಇಯರ್ ರಿಂಗ್ಸ್ ಗಳ ಸ್ಕೆಚ್ ಬೇಕು. ನಿನ್ನ ಹತ್ರ ಯಾವುದಾದ್ರೂ ಇದ್ರೆ ತೋರಿಸು. ನಾನು ಪಿಕ್ಚರ್ಸ್ ತೆಗೆದುಕೊಳ್ಳುತ್ತೇನೆ’ ಎಂದು ಕೇಳಿದಳು. ನೀವಿಬ್ಬರೂ ನಮ್ಮ ಮನೆಗೆ ಬನ್ನಿ. ಅಲ್ಲಿ ತೋರಿಸುತ್ತೇನೆ ಎಂದು ಮನೆಗೆ ಆಹ್ವಾನಿಸಿದೆ. ನಮ್ಮ ಕಾಫಿ ಭೇಟಿ-ಮಾತುಕತೆ ಮುಕ್ಕಾಲು ಗಂಟೆಯಲ್ಲಿ ಮುಗಿದಿತ್ತು. ಎಲ್ಲರೂ ಸುಮ್ಮನೆ ನಮಗಿಷ್ಟ ಬಂದದ್ದನ್ನು ಮಾತಾಡಿಕೊಂಡಿದ್ದೆವು. ನನ್ನ ಪಿಯುಸಿ ಅಥವಾ ಡಿಗ್ರಿಯ ನಾಲ್ಕು ಗೆಳತಿಯರು ಒಟ್ಟಿಗೆ ಸಿಕ್ಕಾಗ ಯಾವ ಸಲಿಗೆಯಿಂದ ಹರಟುತ್ತಿದ್ದೆವೋ ಅಷ್ಟೇ ಲೀಲಾಜಾಲವಾಗಿ, ಖುಷಿಯಾಗಿ ಹರಟಿದ್ದೆವು. ನಾನು ಅವರಿಗೆ ವಂದಿಸಿ ಹೊರಟೆ. ಸಧ್ಯದಲ್ಲೇ ಬರುತ್ತೇವೆ ಎಂದರು ಹುಡುಗಿಯರು.
 
ಮನೆಯಲ್ಲಿ ಪ್ರಶಾಂತ ಕುತೂಹಲದಿಂದ ಕಾಯುತ್ತಿದ್ದ. ಅವನಿಗೆ ನಮ್ಮ ಮಾತುಕತೆ ಬಗ್ಗೆ ಹೇಳಿದೆ. ಅವನು ಎಲ್ಲವನ್ನೂ ಕೇಳಿಸಿಕೊಂಡು ’ಜೋ ಅನ್ನುವವರನ್ನು ತನ್ನ ಪಾರ್ಟ್ನರ್ ಅಂತ ಯಾಕೆ ಪರಿಚಯ ಮಾಡಿಕೊಟ್ರು?’ ಎಂದು ಎರಡು ಮೂರು ಬಾರಿ ಕೇಳಿದ. ’ಹೌದು ಮಾರಾಯ ಅದರಲ್ಲೇನು ವಿಶೇಷ? ಅಪಾರ್ಟ್ಮೆಂಟ್ನಲ್ಲಿ ರೂಮ್ ಮೇಟ್ಸ್ ಆಗಿರಬಹುದು, ಸ್ನೇಹಿತೆಯರಿರಬಹುದು...’ ಅಂತ ಅವನ ಕುತೂಹಲಕ್ಕೆ ರೇಗಿ ಸುಮ್ಮನಾಗಿದ್ದೆ. ಇಬ್ಬರು ಹೊಸ ಅಮೆರಿಕನ್ ಗೆಳತಿಯರು ಸಿಕ್ಕಿದ್ದು ನನಗೆ ತುಂಬಾ ಖುಷಿ ಆಗಿತ್ತು. ಅವರಿಂದ ಅವರ ಬದುಕು, ಸಂಸ್ಕೃತಿ ಬಗ್ಗೆ ಏನೆಲ್ಲಾ ತಿಳಿಯಬಹುದು. ಅವರನ್ನು ಯಾವತ್ತು ಮನೆಗೆ ಕರೆಯುವುದು? ಏನು ತಿಂಡಿ ಮಾಡುವುದು ಎಲ್ಲಾ ಆಗಲೇ ಪ್ಲಾನ್ ಮಾಡುತ್ತಾ ಖುಷಿಯಾಗಿದ್ದೆ.

ಮರುದಿನ ಅಪ್ಪ-ಅಮ್ಮನಿಗೆ ಫೋನ್ ಮಾಡಿದಾಗ ಅವರಿಗೂ ನನ್ನ ಹೊಸ ಗೆಳತಿಯರ ಬಗ್ಗೆ ಹೇಳಿಕೊಂಡೆ. ಸ್ಮಿತಾಗೆ ಫೋನ್ ಮಾಡಿ, ಅವರಿಗೂ ತಿಳಿಸಿದೆ. ಹೌದಾ! ಆಶ್ಚರ್ಯ ವ್ಯಕ್ತಪಡಿಸಿದ ಸ್ಮಿತಾ..’ಮಧ್ಯಾನ್ಹ ಊಟ ನಿಮ್ಮನೇಲೇ ಪಾಟ್ ಲಕ್ ಮಾಡಣ...ಆಗ ಮಾತಾಡೋಣ’ ಅಂತ ಅವರೇ ಪ್ಲಾನ್ ಮಾಡಿ ಮಧ್ಯಾನ್ಹಕ್ಕೆ ಮುಂಚೆಯೇ ಮನೆಗೆ ಬಂದರು. ’ಹೌದಾ ಬಿಲ್ಲೀ...ಹೌ ವಾಸ್ ಇಟ್? ಚನ್ನಾಗಿ ಮಾತಾಡಿದ್ರಾ?...’ ಅಂತ ಪ್ರಶ್ನೆಗಳ ಬಾಣಬಿಟ್ಟರು. ನಾನು ನನ್ನ ಮಳೆ ಎಪಿಸೋಡಿನಿಂದ ನೆನ್ನೆ ಭೇಟಿ ಮುಗಿದ ನಿಮಿಷದವರೆಗೂ ಎಲ್ಲವನ್ನೂ ಅವರಿಗೆ ಕಥೆ ಹೇಳಿದೆ. ಎಲ್ಲವನ್ನೂ ಅತ್ಯಂತ ಕುತೂಹಲದಿಂದ ಕೇಳಿದ ಸ್ಮಿತಾ...’ಅವರಿಬ್ರೂ ಒಬ್ಬರ ಜೊತೆ ಒಬ್ಬರು ಹೇಗಿದ್ರು? ಕೈಗೆ ವೆಡ್ಡಿಂಗ್ ಬ್ಯಾಂಡ್ ಹಾಕಿದ್ರಾ? ನಿನ್ನನ್ನೇನಾದ್ರೂ ಮುಟ್ಟಿದ್ರಾ?’ ಸ್ಮಿತಾ ಕೇಳಿದ ಪ್ರಶ್ನೆ ನನಗೆ ಅಸಂಬದ್ಧ ಎನಿಸಿತು. ಆದರೂ ತೋರಗೊಡದೆ ’ಇಬ್ಬರೂ ಮಾಮೂಲಿ ಫ್ರೆಂಡ್ಸ್ ಥರ ಇದ್ದರು. ನಾನೂ ತುಂಬಾ ಕಂಫರ್ಟಬಲ್ ಆಗಿದ್ದೆ..ಯಾಕೆ ಹಾಗೆ ಕೇಳಿದ್ರಿ?’ ಎಂದೆ. ’ಓಹ್ ನಿನಗೆ ಅವರ ಬಗ್ಗೆ ಗೊತ್ತಿಲ್ವಾ...?!’ ಸ್ಮಿತಾ ಏನೋ ದೊಡ್ಡ ಸೀಕ್ರೆಟ್ ಇದೆಯೆಂಬಂತೆ ದನಿ ಮಾಡಿದರು. ಮಿಶೆಲ್ ತಾನು ಡಾಕ್ಯುಮೆಂಟರಿ ಮಾಡುತ್ತಿದ್ದೇನೆ ಎಂದೆಲ್ಲಾ ಹೇಳಿದ್ದು ನೆನಪಾಗಿ ಆಕೆಯೇನೋ ದೊಡ್ಡ ಸಾಧನೆ ಮಾಡಿರಬಹುದೆಂದುಕೊಂಡೆ.
 
 
’ಏನು ವಿಶೇಷ ಸ್ಮಿತಾ?’ ಎಂದೆ. ’ಅವರು..."ಅವರು"...ಗೊತ್ತಾ? ಸ್ಮಿತಾ ತಲೆಯನ್ನು ಸೊಟ್ಟ ವಾಲಿಸಿ ಒಂಥರಾ ಸನ್ನೆ ಮಾಡಿದರು. ಅವರೇನಾದರೂ ಗೂಢಚಾರಿಣಿಯರಿರಬಹುದಾ...ಹುಚ್ಚರಿರಬಹುದಾ...? ಹತ್ತು ಸೆಕೆಂಡ್ ತಲೆ ಏನೇನೋ ಯೋಚಿಸಿತು. ಅರ್ಥವಾಗಲಿಲ್ಲ. ’ಏನು ಅಂತ ಸರಿಯಾಗಿ ಹೇಳ್ರಪ್ಪಾ..’ ನನ್ನ ಕೋರಿಕೆಯನ್ನು ಮನ್ನಿಸುವಂತೆ ಸ್ಮಿತಾ ’ಬಿಲ್ಲೀ...ಅವರು ಲೆಸ್ಬಿಯನ್ ಗಳು...ಹೋಮೋಸೆಕ್ಷುಅಲ್ ಗಳು...’ ಅಂತ ರಹಸ್ಯ ಹೇಳುವ ದನಿಯಲ್ಲಿ ರಾಗವಾಗಿ ಹೇಳಿದರು. "ಓ ಹೌದಾ!" ನನಗೆ ಎರಡು ನಿಮಿಷ ಹೇಗೆ ರಿಯಾಕ್ಟ್ ಮಾಡಬೇಕೆಂದು ಗೊತ್ತಾಗಲಿಲ್ಲ.
 
ಅವರಿಬ್ಬರೂ ನಮ್ಮಂತೆಯೇ, ಎಲ್ಲ ಹುಡುಗಿಯರಂತೆಯೇ ಇದ್ದಾರೆ. ಅದೇ ಮಾತು ಅದೇ ಮೌನ, ಅದೇ ಖುಷಿ ಅದೇ ದುಃಖ. ಅದೇ ದೇಹ...ಎನೋ ಸ್ವಲ್ಪ ಬದಲು ಅಷ್ಟೇ...
 
ನಮ್ಮೂರಿನಲ್ಲಿದ್ದಾಗ ಗೇ ಗಳ ಬಗ್ಗೆ ಲೆಸ್ಬಿಯನ್ ಗಳ ಬಗ್ಗೆ ಕೇಳಿದ್ದೆ. ಚಿತ್ರರಂಗದ ಕೆಲವು ನಟರು ಇತರರು ಸಲಿಂಗಿಗಳಾಗಿರುವ ಪುಕಾರಿನ ಬಗ್ಗೆ ಸ್ನೇಹಿತರು ಆಗಾಗ ಮಾತಾಡುತ್ತಿದ್ದರು. ಹೌದಾ ಎಂದು ಅಚ್ಚರಿಯಾಗುತ್ತಿದ್ದರೂ ಅದು ದೂರದಲ್ಲೆಲ್ಲೋ ಯಾರಿಗೋ ಆಗುವ ಏನೋ ಒಂದು ಸಮಸ್ಯೆ/ಖಾಯಿಲೆ/ಹುಚ್ಚು ಎಂಬಷ್ಟಕ್ಕೆ ನಿಂತು ಬಿಡುತ್ತಿತ್ತು. ಆದರೆ ಆ ಬಗ್ಗೆ ಮಾತಾಡುವುದೂ ನಿಷಿದ್ಧವೆಂಬಂತೆ ಅಲ್ಲಿ ಇಲ್ಲಿ ತುಣುಕುಗಳಲ್ಲಿ ಮಾತ್ರ ಕೇಳಿದ್ದೆ. ಸಲಿಂಗ ಪ್ರೇಮ-ಕಾಮ ನಿಜವಾ? ಹಾಗೆ ಪ್ರಕೃತಿ ನಿಜಕ್ಕೂ ಮಾಡಿದೆಯಾ? ಅದರ ಬಗ್ಗೆ ಕುತೂಹಲವಿತ್ತು. ಯಾರಲ್ಲಿ ಕೇಳುವುದು? ನಮಗಿದ್ದ ಜ್ನಾನದ ರಿಸೋರ್ಸ್ ಗಳು ಎಂದರೆ ನಮ್ಮ ಅಪ್ಪ-ಅಮ್ಮ-ನೆಂಟರು-ಪರಿಚಿತರು. ಅವರ ಬಳಿ ಏನೆಂದು ಕೇಳುವುದು? ಅದೂ ಸಲಿಂಗಿಗಳ ಬಗ್ಗೆ?! ನಮ್ಮಮ್ಮನಿಗೇನಾದ್ರೂ ನನಗೆ ಒಂದು ಕ್ಷಣಕ್ಕಾದರೂ ಆ ಕುತೂಹಲ ಮೂಡಿದೆ ಎಂದು ಗೊತ್ತಾಗಿದ್ರೆ ನನ್ನ ಜನ್ಮ ಜಾಲಾಡಿ ಬಿಡುತ್ತಿದ್ದರು. ಗಂಡು ಹೆಣ್ಣಿನ ಸಂಬಂಧ, ಅದರ ಔಚಿತ್ಯ ಇದರ ಕುರಿತೆಲ್ಲಾ ಯೋಚಿಸಲು ನಮಗೆ ಟೈಮ್ ಆದರೂ ಎಲ್ಲಿರುತ್ತಿತ್ತು? ನಾನು ಈ ಬಗ್ಗೆ ಸಾಕಷ್ಟು ಇಗ್ನೊರೆಂಟ್ ಆಗೇ ಉಳಿದಿದ್ದೆ. ಅಮೆರಿಕಾಗೆ ಬಂದ ಹೊಸತರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ನೋಡಲು ಹೋದಾಗ ನಾನು ಸ್ಮಿತಾ ಕೈ ಹಿಡಿದು ರಸ್ತೆ ದಾಟುತ್ತಿದ್ದುದನ್ನು ಕಂಡು ಪ್ರಶಾಂತ್-ಚಿನ್ಮಯ್ ’ಎಲ್ಲರೂ ನಿಮ್ಮನ್ನು ಅವರು ಎಂದುಕೊಂಡು ಬಿಡ್ತಾರೆ’ ಎಂದು ರೇಗಿಸಿದ್ದರು. ಆಗ ಅವರ ರೇಗಿಸುವಿಕೆ ಅರ್ಥ ಆಗಿರಲಿಲ್ಲದಿದ್ದರೂ ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಕಾನೂನು, ಅಲ್ಲಿ ಸಲಿಂಗಪ್ರೇಮಿಗಳಿಗೆ ಮದುವೆಯಾಗಲಿರುವ ಅವಕಾಶ ಎಲ್ಲವನ್ನೂ ನ್ಯೂಸ್ ನಲ್ಲಿ ಕೇಳುತ್ತಿದ್ದೆ. ಹೋಮೋಸೆಕ್ಶುಆಲಿಟಿಯ ವೈಜ್ನಾನಿಕ ವಿವರಣೆ ಕೇಳಿದ್ದೆ. ಪ್ರಕೃತಿ ನಿಜಕ್ಕೂ ಅವರಿಗೆ ಆ ಬಗೆಯ ದೇಹ ಕೊಟ್ಟಿದೆ ಎಂದರೆ ಅವರಷ್ಟಕ್ಕೆ ಅವರು ಎಲ್ಲರಂತೆ ಸಮಾಧಾನವಾಗಿ ಯಾಕಿರಬಾರದು ಎನಿಸಿ ಸುಮ್ಮನಾಗಿದ್ದೆ. ನನ್ನ ಸುತ್ತಲ ಪುಟ್ಟ ಬದುಕಿನಲ್ಲಿ ಯಾವತ್ತೂ ಆ ಬಗ್ಗೆ ನನಗೆ ದೀರ್ಘವಾಗಿ ಯೋಚನೆ ಮಾಡುವ, ಇಷ್ಟ-ಅನಿಷ್ಟ, ಪರ-ವಿರೋಧಗಳ ತೀರ್ಮಾನ ತೆಗೆದುಕೊಳ್ಳುವ ಅಗತ್ಯವೂ ಬಂದಿರಲಿಲ್ಲ.
 
’ನಿಮಗೆ ಹೇಗೆ ಗೊತ್ತಾಯಿತು ಸ್ಮಿತಾ?’ ಕೇಳಿದೆ. ’ಅವರ ಮನೆ ಮೇಲೆ ರುಚಿ ಶಾ ಇದ್ದಾಳಲ್ಲಾ ಅವಳು ಹೇಳಿದ್ದು...’ಅವರು ಪರ್ಮನೆಂಟ್ ಆಗಿ ಕೆನಡಾಗೆ ಮೂವ್ ಆಗುವ ಪ್ಲಾನ್ ಮಾಡುತ್ತಿದ್ದಾರಂತೆ...ಅಮೆರಿಕನ್ ಲಾ ಇನ್ನೂ ಪೂರ್ತಿ ಅವರನ್ನು ಸಪೋರ್ಟ್ ಮಾಡ್ತಾ ಇಲ್ಲಾ ಅಲ್ವಾ..’ ಸ್ಮಿತಾ ತಿಳಿಸಿದರು. ಅವರ ದೈಹಿಕ ಪ್ರೆಫೆರೆನ್ಸ್ ಗಳ ಕಾರಣಕ್ಕೆ ಮಾತ್ರವೇ ಅವರು ಏನೋ ವಿಚಿತ್ರ ಅಥವಾ ವಿಶೇಷ ಎಂದು ಅವರನ್ನು ದೂರ ಮಾಡುವುದೋ, ಅವರ ಸ್ನೇಹ ಕಡಿದುಕೊಳ್ಳುವುದು ನನಗಿಷ್ಟವಾಗಲಿಲ್ಲ. ಮಿಶೆಲ್ ಮತ್ತು ಜೋ ಗಂಡ ಹೆಂಡಿಯರೇ ಇರಬಹುದು. ಇದ್ದರೇನೀಗ? ಅವರು ಕೊಲೆಗುಡುಕರಲ್ಲ, ಕಂಡ ಕಂಡವರನ್ನು ಬಲಾತ್ಕಾರ ಮಾಡುವವರಲ್ಲ, ಪುಟ್ಟ ಕಂದಮ್ಮಗಳ ಮೇಲೆ ಲೈಂಗಿಕ ದಾಹ ತೀರಿಸಿಕೊಳ್ಳುವ ಕೊಳೆತ ಕ್ರಿಮಿಗಳಲ್ಲ...ಅವರ ಬದುಕನ್ನು ಅವರ ಮನೆಯೊಳಗೆ, ಅವರ ಸ್ಪೇಸ್ ಒಳಗೆ ಬೇರೆಯವರಿಗೆ ತೊಂದರೆಯಾಗದ ರೀತಿಯಲ್ಲಿ ಚೊಕ್ಕವಾಗಿ ಬದುಕಿಕೊಂಡರೆ ನನಗೇನಾಗಬೇಕು? ನನಗಿರಲಿ. ಯಾರಿಗೇನಾಗಬೇಕು? ಮನಸ್ಸು ನನ್ನ ಕಡೆಗಿತ್ತು.
 
’ನಾನು ಅವರನ್ನು ಮನೆಗೆ ಕರೆದಿದ್ದೀನಿ ಸ್ಮಿತಾ...’ ಎಂದೆ. ’ಓ..." ಸ್ಮಿತಾ ಈಗೇನು ಮಾಡ್ತೀಯಾ ಎಂಬಂತೆ ಅಚ್ಚರಿಯಿಂದ ನೋಡಿದರು. ’ಅವತ್ತು ಈರುಳ್ಳಿ ಪಕೋಡ-ಪೈನಾಪಲ್ ಕೇಸರಿ ಬಾತ್-ಫಿಲ್ಟರ್ ಕಾಫಿ ಮಾಡಿ ಅವರ ಮೇಲೆ ಪ್ರಯೋಗ ಮಾಡಣ ಅಂತ ಪ್ಲಾನ್ ಮಾಡಿದ್ದೀನಿ’ ನನ್ನ ಮಾತು ಕೇಳಿ ಸ್ಮಿತಾ ನಕ್ಕರು. ನಾವು ಗೆಳತಿಯರು ಎರಡು ಮೂರು ನಿಮಿಷ ಪರಸ್ಪರ ಕಣ್ಣು ನಾಟಿಕೊಂಡೆವು. ಮುಖದಲ್ಲಿ ಮಂದಹಾಸ. ’ನಿನಗೇನಾದ್ರೂ ಹೆಲ್ಪ್ ಬೇಕಾದ್ರೆ ಕೇಳು’ ಸ್ಮಿತಾ ಆಫರ್ ಮಾಡಿದಾಗ ನನಗೆ ತುಂಬಾ ಖುಷಿಯಾಯಿತು. ’ನೀವೂ ಬರಬೇಕು...ನಿಮಗೂ ಫ್ರೆಂಡ್ ಮಾಡಿಸಿಕೊಡ್ತೀನಿ...’ಎಂದೆ. ’ಓಕೆ. ಪಕ್ಕಾ ಬರ್ತಿನಿ. ಹಾಗಾದ್ರೆ ಕೇಸರಿ ಬಾತ್ ನಾನು ತರ್ತೀನಿ...’ ಸ್ಮಿತಾ ತಕ್ಷಣ ಹೇಳಿದರು.
 
ಎಂಥ ಗೆಳತಿ! ಹತ್ತು ನಿಮಿಷದ ಹಿಂದೆ ದನಿಯನ್ನು ಪಿಸುಗುಟ್ಟುವಂತೆ ಮಾಡಿ ’ಅವರು ಹೋಮೋಸೆಕ್ಷುಅಲ್ ಗಳು’ ಎಂದಿದ್ದಾಕೆ ಈಗ ನಾನೂ ಹೆಲ್ಪ್ ಮಾಡ್ತಿನಿ ಎನ್ನುತ್ತಿದ್ದಾರೆ. ಹಾಗೆ ಪಿಸುಗುಟ್ಟಿದ ದನಿ ಬಹುಷಃ ರುಚಿ ಶಾ ದು ಇದ್ದಿರಬಹುದು. ಈಗ ಓಕೆ ಎಂದು ಹುರುಪಿನಿಂದ ಹೇಳುತ್ತಿರುವ ದನಿ ಮೋಸ್ಟ್ಲಿ ಹುಚ್ಚು ಹುಡುಗಿ ಬೇಲಾಳ ಸಹವಾಸದ್ದೇನೋ...ಎನ್ನಿಸಿತು. ನಮ್ಮಂಥಾ ಹುಚ್ಚು ಹುಡುಗಿಯರೇ ಹೀಗೆ. ಪುಟ್ಟದೊಂದು ಗೆಳೆತನ-ಪ್ರೀತಿ-ವಿಶ್ವಾಸದ ಸೆಲೆ ಇದ್ದರೆ ಬಾಕಿ ಯಾವ ವಿಷಯವೂ ದೊಡ್ದದಾಗುವುದಿಲ್ಲ. ಸಮಾಜ, ಹಿರಿಯರು ಅಥವಾ ಹೊರಗಿನ ಇನ್ಫ್ಲುಯೆನ್ಸ್ ಗಳು ನಮ್ಮನ್ನು ಹೀಗೆ ಇರಿ, ಹೀಗೆ ಮಾಡಿ, ಹೀಗೇ ಯೋಚಿಸಿ ಅಂತ ನಿರ್ದೇಶಿಸಿದಾಗ ನಾವೂ ’ಕುರಿಗಳು ಸಾರ್ ಕುರಿಗಳು’ ಎಂಬಂತೆ ದೊಡ್ಡಿಯಲ್ಲಿ ದಡ್ಡವರಾಗಿ ಇದ್ದುಬಿಡುತ್ತೇವೆ. ಆದರೆ ನಮ್ಮ ಮನಸ್ಸು ನಮ್ಮದು, ನಮ್ಮ ತೀರ್ಮಾನ ನಮ್ಮದು, ನಮ್ಮದೇ ಯೋಚನೆ-ಆಲೋಚನಾ ಕ್ರಮಕ್ಕೆ ಅವಕಾಶ-ಪ್ರೋತ್ಸಾಹ ಸಿಕ್ಕಾಗ, ನಮ್ಮಲ್ಲಿ ಭರವಸೆ ಇಡುವ ಸಹೃದಯರು ಸಿಕ್ಕಾಗ ನಾವು ಅರಳುವ ರೀತಿಯೇ ಬೇರೆ. ಸ್ಮಿತಾ-ನಾನು ನಮ್ಮ ಹೊಸ ಗೆಳತಿಯರನ್ನು ಮನೆಗೆ ಆಮಂತ್ರಿಸುವ ಪ್ಲಾನ್ ಪಕ್ಕಾ ಮಾಡಿಕೊಂಡು ಅವತ್ತು ನಮ್ಮಲೇ ಇದ್ದ ಏನೋ ಒಂದನ್ನು ಜಯಿಸಿದ ಖುಷಿಯಲ್ಲಿ ಊಟ ಮಾಡಿದೆವು.  

(ಮುಂದುವರಿಯುವುದು)