ಅಂಗಳ      ಒಂದೂರಂತೆ
Print this pageAdd to Favorite

ಬೆಳ್ಳುಳ್ಳಿ 

ಸಣ್ಣ ಸಣ್ಣಿ 
 'ಅಕ್ಕಂದಿರಿಗೆ' 'ಪಚ್ಚೆ'ಯಿಡುವ ದ್ರಾವಿಡ ಆಚರಣೆ-ಒಂದು ಪರಿಚಯ (ಜಿ.ಶ್ರೀನಿವಾಸಯ್ಯ)
 
 

ಹಾ ಸವಿಗಾರ

ಒಂದು ಹಳ್ಳಿಲಿ ಒಬ್ಬ ಗಂಡ, ಒಬ್ಬಳು ಹೆಂಡತಿ ಹೊಸದಾಗಿ ಮದುವೆಯಾಗಿ ಚಿಕ್ಕ ಸಂಸಾರ ಹೂಡಿದರು. ಆ ಗಂಡನಿಗೆ ಒಬ್ಬ ಮುದಿ ತಾಯಿ ಇದ್ದಳು. ಅವಳೂ ಇವರ ಜೊತೆ ಮನೆಲೇ ಇದ್ದಳು. ಹೆಂಡತಿಗೆ ಅವಳತ್ತೆ ಕಂಡರೆ ತೀರಾ ತಾತ್ಸಾರ. ಈ ಕೆಲಸಕ್ಕೆ ಬಾರದ ಮುದುಕಿಗೆ ನಾನ್ಯಾಕೆ ಮಾಡಿ ಹಾಕಬೇಕು ಅಂತ. ಅವಳು ಗಂಡನನ್ನು ಕರೆದು ’ಮನೆಯೊಳಗೆ ನಮಗೇ ಮಲಗಲು ಜಾಗ ಇಲ್ಲ. ನೀವು ನಿಮ್ಮವ್ವನನ್ನು ಮನೆ ಜಗಲಿಗೆ ಹಾಕಿ. ಅವಳು ಅಲ್ಲೇ ಮಲಗಲಿ...’ ಅಂದಳು. ಮುದಿ ಅವ್ವನನ್ನ ಮನೆ ಹೊರಗೆ ಮಲಗಿಸಿದರೆ ಹಳ್ಳೀ ಜನ ಏನೆಂದುಕೊಂಡಾರು ಅಂತ ಗಂಡನಿಗೆ ಭಯ. ಮೊದಮೊದಲಿಗೆ ಅವನು ಹೆಂಡತಿಯ ಸಲಹೆಯನ್ನು ಒಪ್ಪಲಿಲ್ಲ. ಆದರೆ ಹೆಂಡತಿ ಕಾಟ ದಿನ ದಿನಾ ಹೆಚ್ಚಾದಾಗ ಬೇರೆ ಮಾರ್ಗ ಕಾಣಲಿಲ್ಲ. ಮನೆಯ ಜಗಲಿಗೆ ತಡಿಕೆ ಕಟ್ಟಿಸಿ ಅವ್ವನನ್ನು ಅಲ್ಲಿಗೆ ಹಾಕಿದ.

ಸ್ವಲ್ಪದಿನ ಕಳೆಯಿತು. ಹೆಂಡತಿ ಈ ಮುದುಕಿಯಿಂದ ಏನೂ ಉಪಯೋಗವಿಲ್ಲ. ಇವಳಿದ್ದರೆ ಸುಮ್ಮನೆ ಏನಾದರೂ ಕಿರಿಕಿರಿ ಮಾಡುತ್ತಾಳೆ. ನನ್ನ ಮೇಲೆ ಚಾಡಿ ಹೇಳಿ ತನ್ನ ಮಗನನ್ನು ಹತ್ತಿರ ಸೆಳೆದುಕೊಂಡು ಬಿಡುತ್ತಾಳೆ ಅಂತ ಯೋಚಸಿದಳು. ಅತ್ತೆಗೆ ಸರಿಯಾಗಿ ಊಟವನ್ನು ಕೊಡುವುದನ್ನೇ ನಿಲ್ಲಿಸಿದಳು. ಬೇಕಾದಾಗ ಅರ್ಧ ಸೌಟು ಬೇಯಿಸಿದ ಹುರುಳಿಕಾಳು ಮತ್ತು ಒಂದು ಉಪ್ಪಿನ ಕಾಯನ್ನು ಕೊಡುತ್ತಿದ್ದಳು. ಉಳಿದಂತೆ ಗಂಡನಿಗೆ ಗೊತ್ತಾಗದಂತೆ ರಾಗಿ ಅಂಬಲಿ ಮತ್ತು ಒಂದು ಉಪ್ಪಿನಕಾಯಿ ಮಾತ್ರ ಅಂತ ಪತ್ಯ ಮಾಡಿ ಬಿಟ್ಟಳು.
 
ಒಂದು ರಾತ್ರಿ ಆ ಹೆಂಡತಿ ಅತ್ತೆಗೆ ಬಿಸಿ ಬಿಸಿ ಬೆಂದ ಹುರುಳಿ ಕಾಳು, ಒಂದು ಉಪ್ಪಿನ ಕಾಯಿ ಮತ್ತು ಒಂದು ಮೊಗೆ ನೀರು ಕೊಟ್ಟು ಬಾಗಿಲು ಹಾಕಿಕೊಂಡಳು. ಬಾಗಿಲ ಒಳ ಚಿಲಕ ಹಾಕಿಕೊಂಡು ಇನ್ನೇನು ಮಲಗಲು ಹೋಗಬೇಕು, ಅಷ್ಟರಲ್ಲಿ ಮನೆಯ ಹೊರಗಿಂದ ಮುದುಕಿ ಹಾಡುವ ಸ್ವರ ಕೇಳಿಸಿತು:

ಹಾ...ಸವಿಗಾರ ಹೊ...ರುಚಿಗಾರ
ಎಲ್ಲಿದ್ದೆಯೊ, ನನ್ನ ಮನದ ಮೋಜುಗಾರ
ಬೆಂದ ಮನಕೆ, ನೊಂದ ಮನಕೆ
ಮುದ ನೀಡುವೆ ಆಹಾ, ಚಂದಗಾರ
ಹೆಂಡತಿ ತಕ್ಷಣ ಬನ್ರಿ ಇಲ್ಲಿ...ಬನ್ರೀ...ಎಂದು ಪಿಸುಗುಡುತ್ತಾ ಗಂಡನನ್ನು ಕರೆದಳು. ’ಕೇಳಿಸ್ಕಳ್ರೀ...ಸರಿಯಾಗಿ ಕೇಳಿಸ್ಕಳಿ...ನಿಮ್ಮವ್ವನ ಹಾಡಾ...’ ಅಂತ ಗಂಡನ ಕಿವಿಯನ್ನು ಕದಕ್ಕೆ ಒತ್ತಿದಳು. ಆ ಮುದುಕಿ ಮತ್ತೆ ಅದೇ ಹಾಡು ಹಾಡಿಕೊಂತು. ’ನೋಡಿದ್ರಾ...ನಿಮ್ಮವ್ವ ಸಂಪನ್ನೆ ಅಂತ ತಿಳ್ಕಂಡಿದ್ರಲ. ಇಷ್ಟು ವಯಸ್ಸಾದ್ರೂ ಏನು ಆಟ ನಡೆಸವ್ಳೆ. ಈಗ್ಲಾದ್ರು ಗೊತ್ತಾಯ್ತಾ...’ ಅಂದಳು. ಅವನು ’ಏನೇ ಅದು?’ ಅಂದ. ’ಅದ್ಕೆ ನಾನು ನಿಮ್ಮನ್ನ ದಡ್ಡ ಅನ್ನದು... ಅಷ್ಟೂ ಗೊತ್ತಾಗಲ್ವಾ?! ನಿಮ್ಮವ್ವ ಯಾರೋ ಗೆಣೆಕಾರನ್ನ ಕರಿತಾ ಇದ್ದಾಳೆ. ಈ ವಯಸ್ಸಿಗೂ ಹೀಗೆ ಮಾಡ್ತಳೆ ಅಂದ್ರೆ ಹಿಂದೆ ಅದ್ಯಾವ ಥರ ಇದ್ಲೋ ಏನೋ...’ ಅಂದಳು. ’ಈಗ ಏನು ಮಾಡದೇ" ಅಂತ ಗಂಡನೂ ಬೇಜಾರು ಮಾಡಿಕೊಂಡ. ’ಇನ್ನೇನ್ ಮಾಡ್ತಿರಿ...ನಿಮ್ಮವ್ವ ಹೀಗೆ ಅಂತ ಗೊತ್ತಾದರೆ ನಮ್ಮ ಮಾನ ಮರ್ಯಾದೆ ಉಳಿಯುತ್ತಾ, ನಾವು ಊರ ಜನದ ಮುಂದೆ ಮುಖ ಎತ್ತಿಕೊಂಡು ತಿರ್ಗಾಡಕಾಗುತ್ತಾ...ಎಲ್ಲಾ ಥೂ ಚೀ ಅಂತರೆ...ಇವಳನ್ನ ತಂಗಂಡೂಗಿ ಹೊಳೆಗೆ ಬಿಸಾಕಿ ಬರದೇ ವಾಸಿ’ ಅಂದಳು. ’ಅದೇ ಸೈ ಬಿಡೂ’ ಅಂತ ಗಂಡ ಒಪ್ಪಿಕೊಂಡ.

ಇನ್ನೊಂದು ದಿನ ರಾತ್ರಿ ಹೆಂಡತಿ ಹೇಳಿದಳು. ’...ನಾನು ಹೋಗಿ ನಿಮ್ಮವ್ವನಿಗೆ ಬಿಸಿ ಬಿಸಿ ಹುರುಳಿ ಕೊಡ್ತೀನಿ. ಆಗ ನಿಮ್ಮವ್ವ ಅವಳ ಗೆಣೆಕಾರನ್ನ ಕರೀತಾಳೆ. ನಾನು ಅದೇ ಸಮಯ ನೋಡಿಕೊಂಡು ನಿಮ್ಮನ್ನ ಕರಿತೀನಿ. ನೀವು ಚಕ್ಕಂತ ಬಂದು ಇಬ್ಬರನ್ನು ಹಿಡಿದುಕೊಂಡು ಬಿಡಿ. ತಗಂಡು ಹೋಗಿ ಇಬ್ಬರನ್ನೂ ಹೊಳೆಗೆ ಎಸೆದು ಬಿಡಣ’ ಅಂದಳು. ಸೊಸೆ ಅತ್ತೆಗೆ ಬೆಂದ ಬಿಸಿ ಬಿಸಿ ಹುರುಳಿಕಾಳು-ಉಪ್ಪಿನಕಾಯಿ ಕೊಟ್ಟಳು. ಆ ಮುದುಕಿ ಒಂದು ಒಂದು ಕೈಯ್ಯಿಂದ ಹುರುಳಿ ಬೆಂಗ್ಳವನ್ನು ಬಾಯಿಗೆ ಹಾಕಿಕೊಂಡು ಇನ್ನೊಂದು ಕೈಯ್ಯಲ್ಲಿ ಉಪ್ಪಿನಕಾಯನ್ನು ಹಿಡಿದುಕೊಂಡು ಅದನ್ನು ನೆಕ್ಕುತ್ತಾ, ನೆಂಚಿಕೊಳ್ಳುತ್ತಾ:
ಹಾ...ಸವಿಗಾರ ಹೊ...ರುಚಿಗಾರ
ಎಲ್ಲಿದ್ದೆಯೊ, ನನ್ನ ಮನದ ಮೋಜುಗಾರ
ಬೆಂದ ಮನಕೆ, ನೊಂದ ಮನಕೆ
ಮುದ ನೀಡುವೆ ಆಹಾ, ಚಂದಗಾರ
 
ಅಂತ ಹಾಡಿಕೊಂಡಳು. ಅವಳ ಹಾಡನ್ನ ಅಲ್ಲೇ ಹೋಗುತ್ತಿದ್ದ ಒಬ್ಬ ಕುಡುಕ ಕೇಳಿಸಿಕೊಂಡು ಯಾರಪ್ಪಾ ಇವಳು ಅಂತ ಅಲ್ಲಿಗೆ ಬಂದ. ಅವನ ಕಣ್ಣಿಗೆ ಅಲ್ಲಿ ಮುದುಕಿಯ ಗೆಣೆಕಾರ ಬರುತ್ತಾನೆ ಅಂತ ಕಾಯುತ್ತಿದ್ದ ಸೊಸೆ ಕಾಣಿಸಿದಳು. ಇವಳೆ ನನ್ನನ್ನು ಕರೆದದ್ದು ಅಂತ ಅವಳನ್ನು ತಬ್ಬಿಕೊಂಡ. ಸೊಸೆ ಗಾಬರಿಯಿಂದ ’ಬಿಡ್ಲಾ ನನ್ನ...ಬಿಡ್ಲಾ ನನ್ನ...’ ಅಂತ ಕೂಗಿದಳು. ಗಂಡ ಇದನ್ನು ಕೇಳಿಸಿಕೊಂಡು ಆ ಕದೀಮನನ್ನು ನನ್ನ ಹೆಂಡತಿನೇ ಹಿಡಿದು ಬಿಟ್ಟಿದ್ದಾಳೆ ಅಂತ ಹೊರ ಬಂದು ನೋಡಿದ. ಆ ಗಂಡಸು ತನ್ನ ಹೆಂಡತಿಯನ್ನೇ ಹಿಡಿದುಕೊಂಡು ಬಿಟ್ಟಿದ್ದಾನೆ! ನನ್ನ ಹೆಂಡತೀನೇ ದೊಡ್ಡ ಕಳ್ಳಿ. ಇಲ್ಲದ ಸುಳ್ಳು ಹೇಳಿ ನನ್ನ ಅವ್ವನ ಬಗ್ಗೆ ಚಾಡಿ ಹೇಳಿ ನಮ್ಮವ್ವನಿಗೆ ಕಷ್ಟ ಕೊಡುತ್ತಿದ್ದಾಳೆ ಅಂತ ತಿಳಿದುಕೊಂಡು ಹೆಂಡತಿಯನ್ನು ಎತ್ತಿಕೊಂಡು ಹೋಗಿ ಹೊಳೆಗೆ ಬಿಸಾಡಿ ಬಂದ. 
(ಸಂಗ್ರಹ)
 
 
ಕಲೆಯಾಗಿ-ಕಥೆಯಾಗಿ ನಮ್ಮ ಜಾನಪದದಲ್ಲಿ, ಜನಪದರ ಜೀವನದಲ್ಲಿ ಹಾಸುಹೊಕ್ಕಾಗಿರುವ ಕೆಲವು ಅಭ್ಯಾಸಗಳನ್ನು, ವಸ್ತುಗಳನ್ನು ಆಯಾಮದ ಓದುಗರಿಗಾಗಿ ಪರಿಚಯಿಸಿಕೊಡಲಿದ್ದೇವೆ. ಒಂದೂರಂತೆ ಅಂಕಣದಲ್ಲಿ ಕಥೆಗಳೊಂದಿಗೆ ನೆಂಚಿಕೊಳ್ಳಿ. 
 

ಬಯಲು ಸೀಮೆಯ 'ಬೇಟೆ'ಯಲ್ಲಿ ಬಳಕೆಯಾಗುವ ವಸ್ತುಗಳ ಪರಿಚಯ

ಚಿತ್ರ-ಜಿ.ಶ್ರೀನಿವಾಸಯ್ಯ

 

’ಬೇಟೆ’ ಮೂಲ ಮಾನವನ ಮೊದಲ ಪ್ರವೃತ್ತಿ. ನಾಗರೀಕತೆಯ ಸೊಂಕೂ ಕಾಣದ ಕಾಲದಲ್ಲಿ ಮಾಂಸಾಹಾರಿ ಪ್ರಾಣಿಗಳಂತೆಯೇ ಮನುಷ್ಯನಿಗೂ ಆಹಾರ ಹುಟ್ಟುತ್ತಿದ್ದುದು ಬೇಟೆಯಿಂದಲೇ. ಇವತ್ತಿಗೂ ನಮ್ಮ ಜನಪದರಲ್ಲಿ, ಹಳ್ಳಿಗಳಲ್ಲಿ ಅಷ್ಟಷ್ಟು ಚಲಾವಣೆಯಲ್ಲಿರುವ ಬೇಟೆಯ ಕ್ರಿಯೆಗೆ ಅನುಕೂಲವಾಗುವ ಕೆಲವು ಅಸ್ತ್ರ, ಸಾಮಾನುಗಳ ಪರಿಚಯ ಇಲ್ಲಿದೆ.