ಮತದಾರ

 
ಡಾ. ಹಿ. ಶಿ. ರಾ.
 
 
 
ಈಗ, ನಾವು, ಮನುಷ್ಯರು ಈ ಭೂಮಿ ನಮಗಾಗಿಯೆ ಇರುವುದು ನಂಬಿದ್ದೇವೆ. ಈ ನಂಬಿಕೆ ಮುಗ್ಧವೊ, ಮೂಢವೋ ಅಥವಾ ಅಹಂಕಾರದಿಂದ ಹುಟ್ಟಿದ್ದೋ ತಿಳಿಯದು. ನಮ್ಮ ನೆನ್ನೆಯವರು ಭೂಮಿಯನ್ನು ಮರೆತು ಬದುಕಿದ್ದರು. ನಮ್ಮದು ಮೂರುದಿನದ ಬಾಳು; ಈ ಮದ್ಯೆ ನಾವು ತಕರಾರು ಮಾಡುವುದು ಏನು? ಎಂದುಕೊಂಡು ಏನೋ ಒಂದು ಕಾರ್ಯಾಚರಣೆಯನ್ನು ಇಟ್ಟುಕೊಂಡಿದ್ದರು. ಅದರೊಳಗೆ ಹುದುಗಿಕೊಂಡೆ ಉಳಿದೆಲ್ಲವುಗಳ ಬಗ್ಗೆ ಮಾತನಾಡುತ್ತಿದ್ದರು. ಹೀಗೆ ಅವರು ಸತ್ತಂತೆ ಬದುಕಿಯೊ, ಬದುಕಿ ಸತ್ತಂತೆಯೋ ಇದ್ದದರಿಂದ ಅವರು ಆಳುವ ಧರ್ಮ ಮತ್ತು ರಾಜಕೀಯ ಪ್ರಭುಗಳಿಗೆ ದಾಳವಾಗಿದ್ದರು.

ಈಗ ನಮಗೆ ಬದುಕಿನ ನಶ್ವರ ತತ್ವದಲ್ಲಿ ನಂಬಿಕೆ ಇಲ್ಲ. ಈಗೇನಿದ್ದರು ನಾನು ಮತ್ತು ನನ್ನದು ಎಂಬುದೇ ಮುಖ್ಯ. ಕುಟುಂಬವೂ ಸೇರಿಕೊಂಡಂತೆ ಸಮಾಜ, ನಾಡು, ದೇಶ ಎಂಬ ಸಾಂಘಿಕ ವ್ಯವಸ್ತೆಗಳ ಬಗ್ಗೆ ದಾಸ್ಯ, ಬದ್ಧತೆಯೂ ಇಲ್ಲ. ಅವು ಇವೆ ಎನ್ನುವ ಕಾರಣಕ್ಕೆ ಇವೆ ಎನ್ನುವುದನ್ನು ಬಿಟ್ಟರೆ ಅವುಗಳಿಂದ ಪ್ರಯೋಜನವೇನೂ ಇಲ್ಲ ಎಂದೇ ತಿಳಿಯಲಾಗಿದೆ. ಯಾಕೆಂದರೆ ಆ ವ್ಯವಸ್ತೆಯೊಳಗೆ ಇನ್ನೊಬ್ಬ ಮನುಷ್ಯ ಇದ್ದಾನಲ್ಲ! ’ಅವನೇ’ ಇವನಿಗೆ ಬೇಡವಾದವನು. ಅವನು ಯಾವುದಾದರೂಂದು ರೀತಿಯಲ್ಲಿ ಇವನಿಗೆ ಸ್ಪರ್ಧಿಯೇ. ಅಂಥವನು ಇರುವ ವ್ಯವಸ್ತೆ ಇವನದಾಗುವುದು ಸಾಧ್ಯವಿಲ್ಲ. ಎದುರಿಗೆ ಇನ್ನೊಬ್ಬ ಮನುಷ್ಯನಿಲ್ಲ, ಇರಬಾರದು ಎಂಬ ಜೀವನ ತತ್ವ ಹುಟ್ಟಿಕೊಂಡಿದೆ. ಇನ್ನೊಬ್ಬ ಇದ್ದನೆನ್ನಿ. ಅವನು ಸಂಪನ್ಮೂಲ ಅಥವ ಬಳಕೆದಾರನಾಗಿ ಮಾತ್ರ ಇರಬೇಕೆನ್ನುತ್ತಾನೆ ಇವನು.

ಈ, ಇವನು ಯಾರಿರಬಹುದು? ಸುಲಭದಲ್ಲಿ ಕಾಣುವವನು ರಾಜಕಾರಣಿ. ದೊಡ್ಡ ಸಮಾಜ ದ್ರೋಹಿಯಾಗಿ ಎದುರು ಕಾಣುವವನೇ ಇವನು. ಎಲ್ಲರ ಆಕ್ರೋಶಕ್ಕೆ ಒಳಗಾಗಿರುವವನೂ ಇವನೆ. ಒಮ್ಮೊಮ್ಮೆ ಹತ್ತಿರ ಆಪದ್ಬಾಂಧವನಾಗಿ ಕಾಣುವವನೂ ಈ ಮನುಷ್ಯನೆ! ಒಮ್ಮೆ ರಾಕ್ಷಸನಾಗಿಯೊ, ಮತ್ತೊಮ್ಮೆ ಬಹಳ ಚಿಲ್ಲರೆಯಾಗಿಯೊ, ಮಗದೊಮ್ಮೆ ಬಹಳ ಹತ್ತಿರದವನಂತೆಯೆ ಕಾಣುವ ಇವನು ಯಾರಿರಬಹುದು? ಇವನಲ್ಲ ನಮ್ಮವ. ಇವ ಎಲ್ಲರವ, ಕೊನೆಗೆ ಎಲ್ಲಿಯೂ ಸಲ್ಲದವ. ಇವನೇ! ಇವನೇ ಪ್ರಜಾಪ್ರಭುತ್ವ ವ್ಯವಸ್ತೆಯ ಪರಮ ದಲ್ಲಾಳಿ. ಇವನು ಚೆಲ್ಲಾಟವನ್ನೆ ಪ್ರಜಾಪ್ರಭುತ್ವ ಎಂದು ಕರೆದಿರುವವನು. ಪ್ರಜೆ ಮತ್ತು ಪ್ರಭುಗಳ ಮಧ್ಯೆ ಚಂದದ ನಾಟಕವನ್ನಾಡುತ್ತಾ ಪ್ರಜೆಗಳಿಗೆ ಪ್ರಭು ಮತ್ತು ಪ್ರಭುವಿಗೆ ಪ್ರಜೆ ಕಂಡರೂ ಕಾಣದಂತೆ ಇರಿಸಿದ್ದಾನೆ. ಇವನೇ ಇವತ್ತಿನ ಮತದಾರ. ಮಾರಾಟಕ್ಕಿರುವವನು.
ಇಲ್ಲಿ ಭೂಮಿಗಾಗಿ, ಜನರಿಗಾಗಿ ನಿಂತವರು ಯಾರೂ ಇಲ್ಲ. ಪ್ರಜೆಗೆ ತೃಪ್ತಿ, ಪ್ರಭುವಿಗೆ ಸಂತ್ರಪ್ತಿಪಡಿಸುವುದೇ ಪ್ರಜಾದಲ್ಲಾಳಿಗಳ ಕೆಲಸವಾಗಿದೆ. ಬರಡಾದ ಪ್ರಜೆಗೆ ಏನನ್ನಾದರೂ ತುಂಬಿಕೊಳ್ಳುವ ತವಕ. ತಾತ್ಕಾಲಿಕ ತೃಪ್ತಿ ಅವನ ಬೇಡಿಕೆ. ಅದು ಹಣ. ಹಣ ಸಿಗದಿದ್ದರೆ ಹೆಂಡವಾದರೂ ಸರಿ, ಮಾಂಸವಾದರೂ ಸರಿ. ಬೇರೆ ಹೆಣ್ಣನ್ನು ಮುಟ್ಟಿಸಿಕೊಂಡರೆ ಸಾಕು ಎನ್ನುವವರೂ ಇದ್ದಾರಂತೆ! ಹೀಗೆ ಸಾಮಾಜಿಕ ವ್ಯಕ್ತಿಯಾಗುವುದಕ್ಕಿಂತ ರಾಜಕಾರಣಿಗಳಿಗೆ ಮತದಾರನಾಗುವುದರಿಂದ ಮಾತ್ರ ಇಂಥ ಅನುಕೂಲಗಳು ಸುಲಭವಾಗಿ ಸಿಗಲು ಸಾಧ್ಯ ಅಂತ ಈ ಮತದಾರ ತಿಳಿದಂತಿದೆ.
 
ಪ್ರಜಾಪ್ರಭುತತ್ವದ ದೃಷ್ಟಿಯಿಂದ ಬಿಟ್ಟುಬಿಡಿ, ಪ್ರಜಾಪ್ರಭುತ್ವವನ್ನು ಪ್ರತಿನಿಧಿಸುತ್ತೇನೆ ಎಂದುಕೊಂಡಿರುವ ರಾಜಕಾರಣಿಯ ದೃಷ್ಟಿಯಿಂದ ಸಮಾಜದೊಳಗಿನ ವ್ಯಕ್ತಿಗಳು ’ಮತದಾರ’ರಾಗಿ ಪರಿವರ್ತನೆಯಾಗುವುದು ಅನುಕೂಲ. ಈಗ ಸಾಮಾಜಿಕ ವ್ಯಕ್ತಿಯೆ ಬೇರೆ-ಮತದಾರನೇ ಬೇರೆ ಎಂಬ ಪರಿಸ್ತಿತಿ ಉಂಟಾಗಿದೆ. ಮನೆಯಲ್ಲಿ, ಕುಟುಂಬದಲ್ಲಿ ಮತ್ತು ಸಮುದಾಯದಲ್ಲಿ ಇರುವವನು ಸಾಮಾಜಿಕ ವ್ಯಕ್ತಿಯಂತೆ. ಮತ ಚಲಾಯಿಸುವವನು ಮತದಾರನಂತೆ. ಈ ಮತದಾರನೆಂಬುವನೇ ಬೇರೆ ಮನುಷ್ಯ. ಆತ ಪ್ರತ್ಯೇಕ, ಸ್ವತಂತ್ರ, ಸ್ವೇಚ್ಚಾಚಾರಿ. ಚುನಾವಣೆ ಆರಂಭವಾಗಿ ಅದು ಮುಗಿಯುವವರೆಗೆ ಆತ ಮತದಾರ ಮಾತ್ರವೇ ಆಗಿರುತ್ತಾನೆ. ಇಂಥವರು ಚುನಾವಣೆಯ ಸಂದರ್ಭದಲ್ಲಿ ಸೃಷ್ಟಿಯಾಗುತ್ತಾರೆ, ಸಮಾಜದ ಮಧ್ಯೆ ಹಾಗೆಯೇ ಉಳಿದುಬಿಡುತ್ತಾರೆ. ಆದ್ದರಿಂದ ಸಮಾಜವೆನ್ನುವುದೇ ಮತದಾರರ ಗುಂಪು ಎಂದು ಹೇಳುವ ಪರಿಸ್ತಿತಿಯೂ ಇದೆ.
 
ಜನ ಮೇಯಲು ಹೊರಟಿದ್ದಾರೆ. ರಾಜಕಾರಣಿಗಳು ಮೇಸಲು ನಿಂತಿದ್ದಾರೆ. ಯಜಮಾನ ಈ ಇಬ್ಬರಿಗೂ ಹುಲ್ಲುಮಾಡಿಕೊಟ್ಟು ಬೆಳೆಸುತ್ತಿದ್ದಾನೆ. ಮಾರಿಕೊಳ್ಳಲೂಬಹುದು, ಮಾರಿಗೆ ಬಲಿ ಕೊಡಲೂಬಹುದು. ಆ ಮಾರಿ ಬೇರೆ ಇನ್ಯಾರು? ಬೆಳೆ ಉಳಿಯುತ್ತಿಲ್ಲ, ಬಯಲು ಉಳಿಯುತ್ತಿಲ್ಲ: ಹಿಂದೆ ಬಹುದೊಡ್ಡ ಮಿಡತೆಗಳ ಹಿಂಡು ಬಂದು ತೆನೆ ಬಲಿತ ಬೆಳೆಯ ಮೇಲೆ ಕೂತು ಮೂರು ಮುಕ್ಕಾಲು ಗಳಿಗೆಯಲ್ಲಿ ತಿಂದು, ಬರೀ ಕಾಂಡವನ್ನಷ್ಟೇ ಬಿಟ್ಟು ಹಾರಿ ಹೊಗುತ್ತಿತ್ತಂತೆ! ಅದೇ ಪರಿಸ್ತಿತಿ ಈಗ. ಮನುಷ್ಯರೆಂಬ ಈ ಮಿಡತೆಗಳು ಹೊರಟಿವೆ. ಇವು ವೆಜ್ ಮತ್ತು ನಾನೆವೆಜ್ ಎರಡೂ ಆಗಿವೆ. ಅನ್ನವೂ ಆಗಬಹುದು ಹಂದಿಯೂ ಆಗಬಹುದು. ಬೆಳೆಗಳು, ಸಾಕು ಪ್ರಾಣಿಗಳನ್ನು ತಿನ್ನಲಿ. ಅವನ್ನು ಹೇಗೋ ಪುನರುತ್ಪಾದನೆ ಮಾಡಿಕೊಳ್ಳಬಹುದು. ಆದರೆ, ಹಕ್ಕಿ-ಪಕ್ಷಿ, ಜೀವಸಂಕುಲಗಳು ಇವೆಲ್ಲ! ಅವು ಉಳಿಯುವುದು ಹೇಗೆ?