ಭಾಗ-೫
ಒಂದಷ್ಟು ಜನ ಯೂರೋಪಿಯನ್ನರನ್ನೂ, ಏಷಿಯಾದವರನ್ನೂ, ಆಸ್ಟ್ರೇಲಿಯಾದವರನ್ನೂ ಉತ್ತರ ಅಮೆರಿಕಾದ ಒಂದಷ್ಟು ಸಾಮಾನ್ಯ ಜನರೊಂದಿಗೆ ನಿಲ್ಲಿಸಿ ಹೋಲಿಸಿ ನೋಡಿ. ಬೇರೆ ಎಲ್ಲಾ ಜನರಿಗಿಂತಲೂ ಅಮೆರಿಕಾದ ಮಂದಿ ಹೆಚ್ಚು ಎತ್ತರಕ್ಕೂ, ಹೆಚ್ಚು ದಪ್ಪಕ್ಕೂ ಇರುತ್ತಾರೆ. ಅವರ ದೇಹಗಳ ಫ್ರೇಮೇ ಬೇರೆ ಎನ್ನಿಸುವಂತಿರುತ್ತಾರೆ. ೩-೪ ದಶಕಗಳ ಹಿಂದೆ ಅಮೆರಿಕದ ಜನ ಹೀಗಿರಲಿಲ್ಲ. ಅವರೂ ಎಲ್ಲಾ ನಾರ್ಮಲ್ ಹೋಮೋಸೇಪಿಯನ್ಸ್ ಗಳಂತೆಯೇ ಸರಾಸರಿ ಉದ್ದ ಗಾತ್ರ ಹೊಂದಿದ್ದರು. ಆದರೆ ೩-೪ ದಶಕಗಳ ಈಚೆ ಎಲ್ಲರೂ ಅಮೆರಿಕಾ ದೇಶದ ಸೈಜ಼ು, ಅದರ ಸರ್ಕಾರದ ’ಇಗೋ’ ದಂತೆಯೇ ಊದತೊಡಗಿದರು. ಬೇರೆಲ್ಲ ದೇಶಗಳ ಜನರಿಗಿಂತ ಹೆಚ್ಚೇ ಇದ್ದ ಗಾತ್ರ ಅವರಿಗೆ ಇದು ತಾವು ದೈಹಿಕವಾಗಿ ಬಲಶಾಲಿಗಳೆಂಬ ಭ್ರಮೆಯನ್ನೂ ಹುಟ್ಟಿಸಿರಬಹುದು. ಕೆಲವೇ ಕೆಲವು ವಿಜ್ನಾನಿಗಳು ಉತ್ತರ ಅಮೆರಿಕಾದ ಜನರ ಈ ಗಾತ್ರದ ಹೆಚ್ಚಳಕ್ಕೆ ಮತ್ತು ಈಗ ವಿಶ್ವದೆಲ್ಲೆಡೆ ಪಸರಿಸುತ್ತಿರುವ ಗಾತ್ರದ ಹೆಚ್ಚುವಿಕೆಗೆ ಅಮೆರಿಕಾದ ಆಹಾರ ಕ್ರಮವನ್ನು, ಅದರಲ್ಲೂ ಮುಖ್ಯವಾಗಿ ಜೆನೆಟಿಕಲಿ ಮಾಡಿಫೈಡ್ ಆಹಾರ ಪದಾರ್ಥಗಳನ್ನು ಕಾರಣವನ್ನಾಗಿಸುತ್ತಿದ್ದಾರೆ. ದೊಡ್ದದಿದ್ದಷ್ಟೂ ಗ್ರೇಟ್ ಅಥವಾ ’ಬಿಗ್ ಇಸ್ ಬೆಟರ್’ ಎಂದು ಬಡಿದುಕೊಳ್ಳುವ ಟಿವಿ ಜಾಹೀರಾತುಗಳ ಮಾತು ಕೇಳಿಕೊಂಡೇ ಸರ್ವವನ್ನೂ ’ಬಿಗ್’ ಮಾಡಿಕೊಂಡೇ ಜೀವಿಸುತ್ತಿರುವ ಅಮೆರಿಕನ್ ಜನರಿಗೆ ಈಗ ಈ ’ಬಿಗ್’ ಭೂತದ ಕಾಟ ಹೆಚ್ಚಾಗಿದೆ.
ದಪ್ಪ ಇದ್ದರೆ, ಭಾರೀ ಗಾತ್ರಕ್ಕಿದ್ದರೆ ಏನು ಪ್ರಾಬ್ಲಮ್? ಕೆಲವರಿಗೆ ಪ್ರಶ್ನೆ ಏಳಬಹುದು. ನಾವು ಸೌಂದರ್ಯದ ದೃಷ್ಟಿಯಿಂದ ದಪ್ಪ-ಸಣ್ಣ-ಗಾತ್ರದ ಮಾತನ್ನಾಡುತ್ತಿಲ್ಲ. ನಮ್ಮ ದೇಹಕ್ಕೆ ನುಸುಳುವ ಪ್ರಯೋಗ ಶಾಲೆಯಲ್ಲಿ ತಯಾರಾಗುವ ಈ ಪರಾಯಾ ಅಂಶಗಳು ದೇಹವನ್ನು ಥಂಡಿಯಾಗಿ ಬೆಳೆಸುತ್ತವೆ. ಆದರೆ ನಮ್ಮ ದೇಹಕ್ಕೆ ರಕ್ತ ಪಂಪ್ ಮಾಡುವ ನಮ್ಮ ಪುಟ್ಟ ಹೃದಯದ ಸಾಮರ್ಥ್ಯವನ್ನಲ್ಲ! ನಮ್ಮ ರಕ್ತನಾಡಿಗಳ ಸಾಮರ್ಥ್ಯವನ್ನಲ್ಲ! ಹಾಗಾಗಿ ನಮ್ಮ ದೇಹದಲ್ಲಿನ ಅತೀ ಮುಖ್ಯವಾದ ಅಂಗಗಳು ನಮ್ಮದೇ ಭಾರೀ ಧಡೂತಿ ದೇಹದ ಮಾಮೂಲಿ ಕೆಲಸಗಳನ್ನು ಮಾಡುತ್ತಲೇ ಸುಸ್ತು ಹೊಡೆದು ಹೋಗುತ್ತವೆ. ಅಂಗಗಳಿಗೆ ಪ್ರತಿ ಕ್ಷಣ ಮಾಡುವ ನಿರ್ಧರಿತ ಕೆಲಸಗಳ ಜೊತೆಗೇ ತಮ್ಮನ್ನು ತಾವು ಸ್ವಚ್ಚವಾಗಿಟ್ಟುಕೊಳ್ಳುವ ರಿಲ್ಯಾಕ್ಸ್ ಮಾಡಬೇಕಿರುವ ಅಗತ್ಯವೂ ಇರುತ್ತದೆ! ಪ್ರಕೃತಿಯೇ ಅದಕ್ಕೆ ತನ್ನನ್ನು ತಾನು ಸೆಲ್ಫ್ ರಿಜುವಿನೇಟ್ ಮಾಡಿಕೊಳ್ಳುವ ಸೂತ್ರಗಳನ್ನೂ ಹೇಳಿಕೊಟ್ಟಿರುತ್ತದೆ. ಆದರೆ ಅವಕ್ಕೂ ಸ್ವಲ್ಪ ಟೈಮ್ ಬೇಕಲ್ಲಾ...ನಾವು ಪ್ರತಿ ನಿತ್ಯ ಬೇಡದ ಕಸಗಳನ್ನೇ ಹೊಟ್ಟೆಗೆ ತುಂಬಿಕೊಳ್ಳುತ್ತಿದ್ದರೆ ಅವಾದರೂ ಎಷ್ಟು ಸಹಿಸಿಯಾವು?! ಇದು ನಮ್ಮ ಅಷ್ಟೇನೂ ವೈಜ್ನಾನಿಕವಾಗಿ ಕಾಣಿಸದ ಆದರೂ ಸತ್ಯವಾಗಿರುವ ಸರಳ ವಿವರಣೆ.
ಹಿಂದೆ, ನವಜಾತ ಶಿಶುಗಳಿಗೆ ತಾಯಿಯ ಹಾಲೇ ಸಂಪೂರ್ಣ ಆಹಾರವಾಗಿತ್ತು. ಕಾರಣಾಂತರದಿಂದ ಮಕ್ಕಳಿಗೆ ಹಾಲೂಡಲಾಗದ ಕೆಲ ತಾಯಂದಿರು ಹಸುವಿನ ಹಾಲಿನ ಮೊರೆ ಹೋಗುತ್ತಿದ್ದರು. ಆದರೀಗ ತಾಯಂದಿರಿಗೆ ಯಾವ ಫಜೀತಿಯೂ ಇಲ್ಲ! ಹಾಲುಣಿಸಬೇಕೆನ್ನುವ ಒತ್ತಾಯವೂ ಇಲ್ಲ. ಅಂಗಡಿಗೆ ಹೋದರೆ ಬಗೆ ಬಗೆಯ ಹಾಲಿನ ಪುಡಿಯ ಡಬ್ಬಿಗಳು. ಒಂದರಲ್ಲಿ ಮಿದುಳು ಚುರುಕಾಗುವ ಸಾಮಾನೊಂದು ಮಿಶ್ರವಾಗಿದ್ದರೆ, ಮತ್ತೊಂದರಲ್ಲಿ ದಷ್ಟಪುಷ್ಟವಾಗಿ ಬೆಳೆಯಲು ಸಹಾಯವಾಗುವ ಸಾಮಾನು! ಅವರು ಯಾವುದಾದರೊಂದನ್ನು ಅಥವಾ ಎರಡನ್ನೂ ಆಯ್ಕೆ ಮಾಡಬಹುದು! ನೀರಿನಲ್ಲಿ ಕಲೆಸಿ ಈ ಹಾಲನ್ನು ಮಕ್ಕಳಿಗೆ ಉಣಿಸಿದರೆ ಎರಡೇ ವಾರದಲ್ಲಿ ಅವರ ಸೌತೆಕಾಯಿಯಂಥ ದೇಹ ಪುಟ್ಟ ಹಲಸಿನಹಣ್ಣಿನ ಗಾತ್ರಕ್ಕೆ ಬಂದಿರುತ್ತದೆ. ಆಗ ಗುಂಡಗಿರುವ ಮಗುವನ್ನು ನೋಡಲೂ ಚಂದ. ಇದು ನಮ್ಮ ಜನರ ಮನಸ್ಥಿತಿ.
ಏನಿರುತ್ತದೆ ಹೀಗೆ ಕಲೆಸಿ ಕುಡಿಸುವ ಮ್ಯಾಜಿಕ್ ಹಾಲಿನಲ್ಲಿ?! ಶೇಕಡಾ ೯೦ರಷ್ಟು ತಾಯಂದಿರು ಆ ಹಾಲಿನ ಪುಡಿ ಡಬ್ಬಿಗಳ ಮೇಲೆ ಅತ್ಯಂತ ಸಣ್ಣ ಅಕ್ಷರಗಳಲ್ಲಿ ಬರೆದಿರಲ್ಪಡುವ ಸಾಮಗ್ರಿಗಳ ಪೂರ್ಣ ಪಟ್ಟಿಯನ್ನು ಓದಿರುವುದೂ ಇಲ್ಲ. ಅಕಸ್ಮಾತ್ ಕಣ್ಣಾಡಿಸಿದ್ದರೂ ಮೊದಲು ಕಾಣುವ ’ಕೌಸ್ ಮಿಲ್ಕ್, ವಿಟಮಿನ್ ಎ, ವಿಟಮಿನ್ ಡಿ, ಫೋಲಿಕ್ ಆಸಿಡ್...’ ಇಷ್ಟನ್ನು ಓದಿ ’ಓ ಹೌದಾ!...ಹಾಗಾದ್ರೆ ಮಗೂಗೆ ಹಾಲು ಕೊಟ್ರೆ ಸಾಕು ಎಲ್ಲಾ ಪೌಷ್ಟಿಕಾಂಶಗಳೂ ಸಿಗುತ್ವೆ’ ಎಂದುಕೊಂಡು ಮಕ್ಕಳಿಗೆ ಆ ಹಾಲನ್ನು ಒತ್ತಾಯ ಮಾಡಿ ಮಾಡಿ ಕುಡಿಸುತ್ತಾರೆ. ಇರಬಹುದು. ಮಗುವಿಗೆ ಬೇಕಾದ ಎಲ್ಲಾ ಪೌಷ್ಟಿಕಾಂಶಗಳೂ ಈ ಹಾಲಿನ ಪುಡಿಯಲ್ಲೇ ಸಿಗಬಹುದು. ಆದರೆ ಈ ಪುಡಿಯ ಮೂಲ ಯಾವುದು? ಎಲ್ಲಿಂದ ಹುಟ್ಟಿತು ಈ ಪುಡಿ? ಅದಕ್ಕೆ ಸೇರಿಸುವ ಪೌಷ್ಟಿಕ ಸಾಮಗ್ರಿಗಳ ಮೂಲ ಯಾವುದು? ಯಾರಿಗೂ ಕೇರ್ ಇಲ್ಲ. ಕೇರ್ ಮಾಡುವಷ್ಟು ಟೈಮ್ ಕೂಡಾ ಇಲ್ಲ.
ಇದುವರೆಗೂ ’ಆರ್ಗ್ಯಾನಿಕ್’ ಎಂಬ ಹಣೆಪಟ್ಟಿಯಿಲ್ಲದೆ ತಯಾರಾಗುತ್ತಿದ್ದ ಎಲ್ಲ ಹಾಲಿನ ಪುಡಿಗಳಿಗೂ ಜೆನೆಟಿಕಲಿ ಮಾಡಿಫೈಡ್ ಹಸುಗಳ (ಅದೇ...ಆ ಸದಾ ಬಾಣಂತಿ-ಬಂಧಿ ಹಸುಗಳನ್ನು ನೆನಪಿಸಿಕೊಳ್ಳಿ!) ಹಾಲಿನಿಂದ ಸಂಸ್ಕರಿಸಿದ ಪುಡಿಯನ್ನೇ ಉಪಯೋಗಿಸಲಾಗುತ್ತಿತ್ತು. ಹಸುಳೆಗಳಿಗೆ ಅದರ ರುಚಿ ಇಷ್ಟವಾಗಲಿ, ಅವು ಹೆಚ್ಚು ಹೆಚ್ಚು ಅದನ್ನು ಕುಡಿಯಲಿ, ಇನ್ಯಾವುದೇ ಜೆನೆಟಿಕಲಿ ಮಾಡಿಫೈಡ್ ಫಾರ್ಮ್ ಜೀವಿಗಳಂತೇ (ಪೋಷಕರು ನಮ್ಮನ್ನು ಕ್ಷಮಿಸಬೇಕು. ನೀವು ನಿಮ್ಮ ಮಕ್ಕಳಿಗೆ ಹಾಲಿನ ಪುಡಿ ಕೊಟ್ಟು ಬೆಳೆಸಿದ್ದರೆ...ನಮ್ಮ ಬರವಣಿಗೆ ನಿಮಗೆ ಪಾಪಪ್ರಜ್ನೆ ಹುಟ್ಟಿಸುವುದಕ್ಕಲ್ಲ. ನಿಮ್ಮ ಪುಟಾಣಿಗಳನ್ನು ಹೀಯಾಳಿಸುವುದಕ್ಕಲ್ಲ. ನಾವೆಲ್ಲರೂ ಈ ಚಕ್ರವ್ಯೂಹದಲ್ಲಿ ಸಿಕ್ಕಿದವರೇ. ಅರಿವು ನಮಗೆ ಮುಂದಾದರೂ ದಾರಿದೀಪವಾಗಬೇಕು
ಎಂಬುದಷ್ಟೇ ನಮ್ಮ ಉದ್ದೇಶ) ಬೇಗ ಬೇಗ ದಷ್ಟ ಪುಷ್ಟವಾಗಿ ಬೆಳೆಯುವಂತಾಗಲಿ ಎಂದು ಹಾಲಿನ ಪುಡಿಗೆ ಫ್ಲೇವರ್ ಹೆಚ್ಚು ಮಾಡಲು ಅಡಿಟಿವ್ ಗಳನ್ನು, ಹಲ್ಲು ಜೋಳದ ಪುಡಿಯನ್ನು ಬೆರೆಸಲಾಗುತ್ತಿತ್ತು. ಈಗಲೂ ಬೆರೆಸಲಾಗುತ್ತಿದೆ. ಬೆರೆಸಲ್ಪಡುವ ಈ ಎಲ್ಲ ವಸ್ತುಗಳಿಗೂ ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗದ ಸಂಕೀರ್ಣ ಹೆಸರುಗಳನ್ನಿಟ್ಟು ಅದನ್ನು ಡಬ್ಬಿಗಳ ಮೇಲೆ ನಮೂದಿಸಲಾಗುತ್ತದೆ.
ಆದರೀಗ ಕುಲಾಂತರಿ ತಳಿಗಳು ಸೃಷ್ಟಿಸುವ ಅವಾಂತರಗಳನ್ನು ಚೂರು ಚೂರೇ ಅರಿಯುತ್ತಿರುವ ಕೆಲವು ಜಾಗೃತ ಅಮೆರಿಕನ್ ಗ್ರಾಹಕರು ತಾವು ಸೂಪರ್ ಮಾರ್ಕೆಟ್ ಗಳಿಂದ ಕೊಂಡು ತರುವ ಎಲ್ಲಾ ಆಹಾರ ಪದಾರ್ಥಗಳ ಮೇಲೂ ’ಈ ಪದಾರ್ಥವನ್ನು ಜೆನೆಟಿಕಲಿ ಮಾಡಿಫೈಡ್ ಉತ್ಪನ್ನಗಳಿಂದ ತಯಾರಿಸಿದ್ದು’ ಎಂದು ನಮೂದಿಸಬೇಕೆಂದು ಅಮೆರಿಕಾದ ’ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್’ ಗೆ ಕೇಳಿಕೊಂಡಿದ್ದಾರೆ. ಸರ್ಕಾರ ಅವರ ಬೇಡಿಕೆಯನ್ನು ಒಪ್ಪುವುದಿರಲಿ, ಕೇಳುವ ಸ್ಥಿತಿಯಲ್ಲೂ ಇಲ್ಲ. ಅಮೆರಿಕಾದ ಫುಡ್ ಮಾಫಿಯಾ ಅಷ್ಟು ಸುಲಭವಾಗಿ ಸರ್ಕಾರವನ್ನು ಜನರಿಗೆ ಸೊಪ್ಪು ಹಾಕಲು ಬಿಡುವುದೂ ಇಲ್ಲ. ಅಲ್ಲಿಯವರೆಗೂ ಸೂಪರ್ ಮಾರ್ಕೆಟ್ ನ ಪ್ರತೀ ಐಲ್ ’isle’ ಗಳ ಅಂಗುಲ ಅಂಗುಲಗಳಲ್ಲಿಯೂ ಥರಾವರಿ ವೇಷ ಹಾಕಿ ನಿಂತಿರುವ, ಕಡಿಮೆ ಬೆಲೆಯ ಈ ಸಿಹಿ ವಿಷಗಳು ನಮ್ಮ ಜೀವವನ್ನು ಕಲುಷಿತಗೊಳಿಸದೆ, ಕುಟ್ಟು ಹಿಡಿಸದೆ ಇರುವುದಿಲ್ಲ.