ನವ ಕನ್ನಡತ್ವ ನಿರ್ಮಾಣದ ಆಚಾರ್ಯ ಕುವೆಂಪು

ಡಾ. ಬಂಜಗೆರೆ ಜಯಪ್ರಕಾಶ
(ಬಂಜಗೆರೆ ಅವರ ’ನವ ಕನ್ನಡತ್ವ ನಿರ್ಮಾಣದ ಆಚಾರ್ಯ ಕುವೆಂಪು’ ಎಂಬ ಲೇಖನದ ಆಯ್ದ ಭಾಗಗಳು ಆಯಾಮದ ಓದುಗರಿಗಾಗಿ...)
 
ಕುವೆಂಪು ತಮ್ಮ ಕಾವ್ಯದಲ್ಲಿ `ಸಂದೇಶ' ಸಾರುತ್ತಾರೆ. ಸಂದೇಶಗಳನ್ನು ತಲುಪಿಸುವುದಕ್ಕಾಗಿಯೇ ಅವರು ಕವಿತೆ ಬರೆಯುತ್ತಾರೆ ಎಂದರೂ ತಪ್ಪಿಲ್ಲ. ರಾಮಾಯಣವನ್ನು ಅವರು ಮತ್ತೊಂದು ಸಲ ಮಹಾಕಾವ್ಯವನ್ನಾಗಿ ಬರೆಯುವುದರ ಹಿಂದೆ ಈ `ನವ ದರ್ಶನ'ವನ್ನು ಸಾರುವ ಅಭೀಪ್ಸೆಯೇ ಪ್ರಮುಖವಾಗಿತ್ತೆಂಬುದನ್ನು ಅನೇಕ ವಿಮರ್ಶಕರು ಗುರುತಿಸಿದ್ದಾರೆ. ಜಲಗಾರ, ಬೆರಳ್ಗೆ ಕೊರಳ್, ಶೂದ್ರ ತಪಸ್ವಿ ಮುಂತಾದ ಸಾಹಿತ್ಯ ಕೃತಿಗಳಲ್ಲೂ ಅವರು ಪ್ರತಿಪಾದಿಸಬಯಸಿದ್ದು ನಿರ್ದಿಷ್ಟವಾದೊಂದು ದರ್ಶನವನ್ನು.
 
’ನನ್ನ ಕೃತಿ ಕಲೆಯಲ್ಲ
ನಾನು ಕವಿಯಲ್ಲ
ಕಲೆಗಾಗಿ ಕಲೆಯೆಂಬ
ಹೊಳ್ಳು ನೆಲೆಯಿಲ್ಲ'
ಎಂಬ ಸಾಲುಗಳಲ್ಲಿ ಪ್ರಕಟವಾಗಿರುವ ನಿಲುವು
’ಖಡ್ಗಗಳಿಗೆಮ್ಮುಸಿರೆ
ಹರಿವಜ್ರಸಾಣೆ
ನಮ್ಮ ಲೇಖನಿಗಿಂತ
ಬರಸಿಡಿಲ ಕಾಣೆ'
ಎಂಬ ನಂಬಿಕೆ,
ನಮ್ಮ ಇಂದಿನ ಕನಸು
ನಿಮ್ಮ ನಾಳೆಯ ಮನಸು'
 
ಎಂಬ ಆಶಯ ಕುವೆಂಪು ಅವರನ್ನು ನವೋದಯ ಎಂಬ ಸಾಹಿತ್ಯ ಮಾರ್ಗದ ನಡುವಿನ ಬಂಡಾಯ ಪಥಿಕನನ್ನಾಗಿಸಿತ್ತು. ಮುಂದೆ ಬಂಡಾಯ ಸಾಹಿತ್ಯ ತನ್ನ ಘೋಷವಾಕ್ಯವಾಗಿ ಮಾಡಿಕೊಂಡ `ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣಮಿತ್ರ' ಎಂಬುದು ಕುವೆಂಪು ಅವರ ಈ ಪದಗುಚ್ಛಗಳ ಸಾರಾಂಶರೂಪಿಯಂತಿರುವುದು ಕೇವಲ ಕಾಕತಾಳೀಯ ಎಂದು ನಾನು ಭಾವಿಸುವುದಿಲ್ಲ.
 
ನವೋದಯ ಸಾಹಿತ್ಯ ಪಂಥ ಎಂದು ಕರೆಯಲ್ಪಡುವ ಸಾಹಿತ್ಯ ಕಾಲಾವಧಿ ಏಕಾಕೃತಿಯದಲ್ಲ. ಅದರಲ್ಲಿ ಕ್ರಿಯಶೀಲವಾಗಿದ್ದ ಎಲ್ಲ ಲೇಖಕರ ನೆಲೆಗಳೂ ಒಂದೇ ಅಲ್ಲ. ಯಾಕೆಂದರೆ ಅಲ್ಲಿ ಕವಿಯೆಂಬ ವೀಣೆಯನ್ನು ಮಿಡಿದ ಲೋಕದ ಬೆರಳುಗಳು ಬೇರೆ ಬೇರೆಯಾಗಿದ್ದವು ಎಂಬುದನ್ನು ನಾನು ಆರಂಭದಲ್ಲೇ ಹೇಳಿದ್ದೇನೆ.
 
ನವೋದಯ ಸಾಹಿತ್ಯ ನಿರ್ಮಿತಿಯನ್ನು `ರಮ್ಯ ಪಂಥ'ವೆಂದು, `ಪ್ರಕೃತಿ ಆರಾಧಕರ' ಪಂಥವೆಂದು, `ದೇಶಾಭಿಮಾನಿ ಆದರ್ಶ ಪ್ರೇರಿತ' ಸಾಹಿತ್ಯವೆಂದು ಹಲವು ವಿಧದಲ್ಲಿ ಬಣ್ಣಿಸಲಾಗಿದೆ. ಆದರೆ ಕುವೆಂಪು ಕಾವ್ಯ ಈ ಎಲ್ಲ ಗುಣ ವಿಶೇಷಗಳ ನಡುವೆಯೇ ತನ್ನ ಜನಮುಖೀ, ದೇಸಿ ಸತ್ವದ `ಪ್ರತಿ ಸಾಂಸ್ಕೃತಿಕ' ಆಶಯಗಳನ್ನು ಬಹಳ ಬಲವಾಗಿ ಉಳಿಸಿಕೊಂಡು ಬಂದಿದೆ: ಕುವೆಂಪು ಅವರಿಗೂ ಆ ಕಾಲದ ಇತರ ಲೇಖಕರಿಗೂ ಇದ್ದ ವ್ಯತ್ಯಾಸವನ್ನಿಲ್ಲಿ ನಾವು ಗುರ್ತಿಸಬಹುದು. ಕುವೆಂಪು ಅವರಿಗೆ ಹೊರಗಿನ ಹೋರಾಟದಷ್ಟೇ ಒಳಗಿನ ಹೋರಾಟವೂ ಮುಖ್ಯವಾಗಿತ್ತು. ಉಳಿದವರಿಗೆ ಹೊರಗಿನ ಹೋರಾಟದ ಬಗ್ಗೆ ಆಸಕ್ತಿ; ಒಳಗಿನ ಸ್ಥಿತಿಯ ಬಗ್ಗೆ ಸಹಾನುಭೂತಿ, ಆದರೆ ಕುವೆಂಪು ಅವರಂತೆ ಅದಕ್ಕಾಗಿ ಅವರು ಹೋರಾಡಬೇಕಾದ ಅಗತ್ಯವಿರಲಿಲ್ಲ. ಕುವೆಂಪು ಕಾವ್ಯ `ಚರಿತ್ರೆ'ಯನ್ನು ತನ್ನ ಒಡಲಲ್ಲಿಟ್ಟುಕೊಂಡೆ ಸೃಷ್ಟಿಯಾದ ಕಾವ್ಯ.
 
ಈ ವಿಶ್ಲೇಷಣೆಯನ್ನು ಕುವೆಂಪು ತಮ್ಮ ಕಾವ್ಯ ನಿರ್ಮಿತಿಗೆ ಆರಿಸಿಕೊಂಡ ವಸ್ತುಗಳ ಮುಖಾಂತರ ಅತ್ಯಂತ ಚೆನ್ನಾಗಿ ಸಮರ್ಥಿಸಬಹುದು. ಹೊರಗಿನದರಷ್ಟೇ ಒಳಗಿನ ಶೋಷಣೆಯ ಬಗ್ಗೆ ಜಾಗೃತವಾಗಿರಬೇಕಾದ ಅಗತ್ಯ ಎಂಬುದು ಅಂದಿನ ಮಟ್ಟಿಗೆ ಬಹಳ ಮುಖ್ಯ ಪ್ರಮೇಯವಾಗಿತ್ತು. ಡಾ. ಬಿ ಆರ್ ಅಂಬೇಡ್ಕರ್ ಸ್ವಾತಂತ್ರ್ಯ ಚಳವಳಿಗೆ ಮುಖಾಮುಖಿಯಾದದ್ದು ಈ ನೆಲೆಯಲ್ಲಿಯೇ. ಪಾತಳಿಗಳು ಬೇರೆ ಇರಬಹುದು ಆದರೆ ಅಂತಹುದೇ ಸಮಾನಾಂತರ ಪ್ರಮೇಯವೊಂದು ಕುವೆಂಪು ಅವರಲ್ಲಿ ಜಾಗೃತವಾಗಿದ್ದು ಅದರ ಮುಖಾಂತರವೇ ಅವರು `ನವ ಕನ್ನಡತ್ವ' ನಿರ್ಮಾಣದ ಹಾದಿಯನ್ನು ಪ್ರತಿಪಾದಿಸಿದರು. ಅವರ `ರೈತನ ದೃಷ್ಟಿ' ಎಂಬ ಪ್ರಸಿದ್ಧ ಕವಿತೆಯ ಸಾಲುಗಳು ಅದನ್ನು ನಿರೂಪಿಸುವುದು ಹೀಗೆ:
 
ಕರಿಯರದೋ, ಬಿಳಿಯರದೋ ಯಾರದಾದರೆ ಏನು?
ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ
ವಿಜಯನಗರವೊ ಮೊಘಲರಾಳ್ವಿಕೆಯೋ? ಇಂಗ್ಲಿಶರೋ?
ಎಲ್ಲರೂ ಜಿಗಣೆಗಳೆ ನನ್ನ ನೆತ್ತರಿಗೆ!
ಕತ್ತಿ ಪರದೇಶಿಯಾದರೆ ಮಾತ್ರ ನೋವೆ?
ನಮ್ಮವರೆ ಹದ ಹಾಕಿ ತಿವಿದರದು ಹೂವೆ?
 
ಸಾಮ್ರಾಜ್ಯವೆಂಬುದೇ ಶೋಷಣೆಯ ಅಸ್ತ್ರ: ಅದರಲ್ಲೂ ಆ ಅಸ್ತ್ರ ಪೀಡಿಸುವುದು ಮುಖ್ಯವಾಗಿ ರೈತರನ್ನು ಎಂಬ ದೃಷ್ಟಿಕೋನ ಕುವೆಂಪು ಅವರನ್ನು ರಮ್ಯ ನಾಡಾಭಿಮಾನಿ/ದೇಶಾಭಿಮಾನಿ ಧಾರೆಗಳಿಂದ ಭಿನ್ನರನ್ನಾಗಿಸುತ್ತದೆ. ಕಾವ್ಯದ ಕೆಲವು ಸಾಲುಗಳ ಮುಖಾಂತರ ಕವಿಯೊಬ್ಬನ ಧೋರಣೆಯನ್ನು ಸಾರಾಸಗಟಾಗಿ ತೀರ್ಮಾನಿಸಬರುವುದಿಲ್ಲ. ಆದರೆ ಕನ್ನಡ ಸಂಸ್ಕೃತಿಯ ಬಗ್ಗೆ ಅವರು ರಮ್ಯ ಅಭಿಮಾನಿಗಳಿಗಿಂತ ಭಿನ್ನ ನಿಲುವು ಹೊಂದಿದ್ದರು ಎಂಬುದಕ್ಕೆ ನಂತರದ ಚರಿತ್ರೆಯೂ ಪುರಾವೆಗಳನ್ನು ಹೊಂದಿದೆ.
`ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಇರುವುದೆಲ್ಲ ಬೂಸಾ' ಎಂಬ ಬಸವಲಿಂಗಪ್ಪನವರನ್ನು ಕುವೆಂಪು ಬೆಂಬಲಿಸಿದ್ದು, ಈ ಬಗೆಯ ಆಂತರಿಕ ಶೋಷಣೆಯ ಕುರಿತಾಗಿನ ವಾಸ್ತವಿಕ ಎಚ್ಚರದಿಂದಲೇ.
 
ಸಾಮಾನ್ಯ ದೇಶಾಭಿಮಾನಿ/ನಾಡಾಭಿಮಾನಿ ಹೋರಾಟಗಳಲ್ಲಿ `ಹೆರರ' ಆಧಿಪತ್ಯದ ಮೇಲಿನ ಆಕ್ರೋಶ ಮುಖ್ಯವಾಗಿ, ಅದನ್ನು ಬಲಪಡಿಸಲಿಕ್ಕಾಗಿ ನಮ್ಮವರ ಇತಿಹಾಸವನ್ನು ವೈಭವೀಕರಿಸಿ ಆರಾಧಿಸುವುದು ಸಂಭವಿಸುತ್ತದೆ. ಅಂತಹ ಭಾವಾವೇಶಗಳಿಗೆ ಉತ್ತರವೆಂಬಂತೆ ಕುವೆಂಪು ಈ ವರ್ಣ/ಜಾತಿ ಪ್ರಜ್ಞೆಯ ನಿಲುವನ್ನು ಮುಂದಿಕ್ಕುತ್ತಿದ್ದಾರೆ. ಇದು ಬಹಳ ಆಳವಾದ ಪರಿಣಾಮವುಳ್ಳ ನಿಲುವು.
ಪರತಂತ್ರವೆಂಬುದೊಂದೇ ಒಂದು ಸಮಾಜದ ದೌರ್ಭಾಗ್ಯಕ್ಕೆ ಕಾರಣವಾಗಿಲ್ಲ. ಅದರಷ್ಟೇ ಮುಖ್ಯವಾಗಿ ಆ ಸಮಾಜದ ಆಂತರಿಕ ಆಧಿಪತ್ಯಗಳು ದುಡಿಯುವವರ ಹೆಗಲ ಮೇಲೆ ದಾಸ್ಯದ ನೊಗ ಹೊರಿಸಿವೆ. ಭಾವಾವೇಶದ ಅಭಿಮಾನದಿಂದ ಅದನ್ನು ಮರೆಮಾಡುವಂತಿಲ್ಲ.
ಆಗಿನ ಸ್ವಾತಂತ್ರ್ಯ ಚಳವಳಿಯ ಹಲವು ನೇತಾರರು ರಾಜಮಹಾರಾಜರ ಆಳ್ವಿಕೆಗಳನ್ನು ಕೀರ್ತಿಸುತ್ತಾ,
`ಭಗವದ್ಗೀತೆ'ಯ ಮುಖಾಂತರ ದೇಶಪ್ರೇಮವನ್ನು ಪ್ರತಿಪಾದಿಸುತ್ತಿರುವಾಗ, ಮತ್ತೊಂದು ಕಡೆ ಬೆಳೆಯುತ್ತಿದ್ದ ಕರ್ನಾಟಕ ಏಕೀರಣದ ಚಳವಳಿ ವಿಜಯನಗರವನ್ನು ತಾಯಿ ಭುವನೇಶ್ವರಿಯನ್ನು ಚಳವಳಿಯ ಪ್ರೇರಣಾ ಮಾದರಿಗಳಾಗಿ ಮುಂದಿಡುತ್ತಿದ್ದಾರೆ. ಕುವೆಂಪು ಅವರಲ್ಲಿ ಗಟ್ಟಿಗೊಂಡಿದ್ದ ಈ `ವರ್ಣಪ್ರಜ್ಞೆ', `ನಮ್ಮವರೇ ಹದ ಹಾಕಿ ತಿವಿದರದು ಹೂವೆ' ಎಂಬ ಎಚ್ಚರ ಅತ್ಯಂತ ಪ್ರಸ್ತುತವಾದುದಾಗಿತ್ತು. ಈ ವರ್ಣ ಪ್ರಜ್ಞೆಯೇ ಅವರ ಭಾಷಾ ಪ್ರಜ್ಞೆಯ ಹಿಂದೆಯೂ ಕೆಲಸ ಮಾಡಿದೆ.
 
ಸಾಯುತಿದೆ ನಿಮ್ಮ ನುಡಿ, ಈ ಕನ್ನಡದ ಕಂದರಿರ
ಹೊರ ನುಡಿಯ ಹೊರೆಯಿಂದ ಕುಸಿದು ಕುಗ್ಗಿ
ರಾಜ ನುಡಿಯೆಂದೊಂದು, ರಾಷ್ಟ್ರ ನುಡಿಯೆಂದೊಂದು
ದೇವ ನುಡಿಯೆಂದೊಂದು ಹತ್ತಿ ಜಗ್ಗಿ.
 
ಕನ್ನಡ ಸಂರಕ್ಷಣೆಯ ಹೋರಾಟದಲ್ಲಿದ್ದ ಎಷ್ಟೋ ಜನರಿಗೆ ಸಂಸ್ಕೃತ ಹಾಗೂ ಹಿಂದಿ ಭಾಷೆಗಳು ಉಂಟುಮಾಡುವ ಅಪಾಯವನ್ನು ಅರಿಯಲಾಗಲೀ, ಅದನ್ನು ಆಡಲಾಗಲೀ ಅವರ ವರ್ಗ ಪ್ರಜ್ಞೆ ಅವಕಾಶ ಕೊಡಲಿಲ್ಲ. ಅತ್ಯಂತ ನಿಚ್ಚಳವಾಗಿ ಅದನ್ನು ಮಂಡಿಸಿದ ಕುವೆಂಪು ಅದನ್ನೊಂದು ಸಮಗ್ರ ಗ್ರಹಿಕೆಯನ್ನಾಗಿ ರೂಪಿಸಿದ್ದರು. ಅವರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭಾಷಾ ನೀತಿಗಳಲ್ಲಿ ಒಂದು ಏಕಸೂತ್ರವಿದೆ.
ಈ ಬಗೆಯ ಸ್ಪಷ್ಟ ತಿಳುವಳಿಕೆಯ ಹಿನ್ನೆಲೆಯೊಂದಿಗೇ ಅವರು ರೈತನನ್ನು, ಗೊಬ್ಬರವನ್ನು ತಮ್ಮ ಕಾವ್ಯದ ಪ್ರತೀಕ ವಸ್ತುಗಳನ್ನಾಗಿ ಸ್ವೀಕರಿಸಿದ್ದರು. ಆಗಿನ ಸಾಹಿತ್ಯ ವಲಯಗಳಲ್ಲಿ ಅಲಿಖಿತವಾಗಿ ಚಲಾವಣೆಗೊಳ್ಳುತ್ತಿದ್ದ `ಶೂದ್ರನೇನು ಬರೆದಾನು ಬಿಡು ಗೊಬ್ಬರ' ಎಂಬಂತಹ ಪೂರ್ವಾಗ್ರಹಪೀಡಿತ ಪ್ರತಿಕ್ರಿಯೆಗಳನ್ನು ಕುವೆಂಪು ಎದುರಿಸಿದ ವಿಧಾನ ಅದು. ಇಂದು ನಾವು ಮಾತನಾಡುತ್ತಿರುವ `ಪ್ರತಿ ಸಂಸ್ಕೃತಿ' ನಿರ್ಮಾಣ ವಿಧಾನಗಳ ಮೂಲವನ್ನು ನಾವು ಕುವೆಂಪು ಅವರಲ್ಲಿ ಕಾಣಬಹುದು. ರೈತ ಹಾಗೂ ಗೊಬ್ಬರಗಳು ಕಾವ್ಯದ ವಸ್ತುವಾಗುವುದು, ನಾಯಿಗುತ್ತಿ ಮತ್ತು ಗುತ್ತಿನಾಯಿ ಕಾದಂಬರಿಯ ಪ್ರಮುಖ ಪಾತ್ರಗಳಾಗುವುದು ಕುವೆಂಪು ಅವರಿಗಿದ್ದ ಈ `ಪ್ರತಿ ಸಂಸ್ಕೃತಿ' ನಿರ್ಮಾಣದ ದೃಷ್ಟಿಕೋನದಿಂದಾಗಿ ಎಂಬುದನ್ನು ನಾವಿಲ್ಲಿ ಗುರುತಿಸಬೇಕು. ದಿವ್ಯ ಮಹತ್ತಿನ ವಸ್ತುಗಳನ್ನಾಯ್ದುಕೊಂಡು ಕಾವ್ಯ ರಚನೆ ಮಾಡುವ ಹಾದಿಯನ್ನು ಬಿಟ್ಟು ಸಾಮಾನ್ಯ ವಸ್ತುಗಳಿಗೆ ಮಹತ್ವ ತರುವ ಪ್ರಯತ್ನವೇ ಒಂದು ಪ್ರಜ್ಞಾಪೂರ್ವಕ ಜನಮುಖಿ ನಿಲುವು:
 
’ನೇಗಿಲ್ ಲೇಖನಿ ತಕ್ಕಡಿ ಕತ್ತಿ
ನಮಗೆಲ್ಲ ಸಮರಸ ಸಂಪತ್ತಿ
`ಶ್ರೀ ಸಾಮಾನ್ಯ'ರೋ ನಾವು
ಓ ಬನ್ನೀಂ
ಸಾಮಾನ್ಯದ ಪೂಜೆಗೆ ದೀಕ್ಷೆಯ ಕೊಳ್ಳಿ’
 
ಒಂದು ಬಗೆಯಲ್ಲಿ ಸಮಾಜವಾದಿ ಸಂಸ್ಕೃತಿಯ ಉದ್ಘೋಷಣೆಯಾಗಿರುವ ಈ ಸಾಲುಗಳು ಕುವೆಂಪು ಅವರೊಳಗಿದ್ದ ವರ್ಣ ಸಂಘರ್ಷದ ವೈಚಾರಿಕತೆಯಿಂದಾಗಿ ಮೂಡಿಬಂದವುಗಳು. ಇದು ಅವರ ಕಾವ್ಯ ನಿರ್ಮಾಣದ ಒಂದು ಮುಖ್ಯ ಪ್ರೇರಣೆ: ರಾಜ್ಯ ಸಾಮ್ರಾಜ್ಯಗಳ ಏಳು ಬೀಳಿನ ನಡುವೆ ಸದ್ದಿಲ್ಲದ ರೈತನ ದುಡಿಮೆಯಿಂದ ಲೋಕಕ್ಕೆ ಅನ್ನವನ್ನು ಬೆಳೆಯುವ ರೈತನ ಕಾಯಕ. ಯಾವ ರೀತಿಯಲ್ಲೂ ಯೋಗಿಯಾದವನು ಕೈಗೊಳ್ಳುವ ಲೋಕ ಕಲ್ಯಾಣಕರವಾದ ತಪಸ್ಸಿಗೆ ಕಡಿಮೆಯಾದುದೇನಲ್ಲ ಎನ್ನುವುದು ಕುವೆಂಪು ಅವರ ನಿಲುವು. ಕುವೆಂಪು ಅವರ ವೈಚಾರಿಕತೆ, ಈ ಬಗೆಯ ಸಾಮಾನ್ಯತೆಯನ್ನು ಕುರಿತ ಗೌರವದಿಂದ ಪ್ರಾರಂಭವಾಗುತ್ತದೆ. ರೈತನನ್ನು ನೇಗಿಲಯೋಗಿ ಎಂದು ಕರೆದು ಗೌರವಿಸಿದ ಮೊದಲ ಕವಿ ಕುವೆಂಪು. ಹಾಗೆಯೇ ಸ್ವಾತಂತ್ರೋತ್ತರ ಭಾರತದ ಸಾಮಾನ್ಯ ಜನಸಮುದಾಯವನ್ನು ಶ್ರೀ ಸಾಮಾನ್ಯರೆಂದು ಹೊಸ ಹೆಸರಿನಿಂದ ಕರೆದು, ಅವರೊಂದಿಗೆ ತಮ್ಮನ್ನು ಸಮೀಕರಿಸಿಕೊಂಡವರು ಕುವೆಂಪು.
 
’ರೈತ' ಎಂಬುದು ಗ್ರಾಮೀಣ ಶ್ರಮ ಸಂಸ್ಕೃತಿಯ ಸಂಕೇತವಾಗಿರುವುದನ್ನು ನಾವು ಗಮನಿಸಬೇಕು. `ರೈತ' ಜಾತಿಯಿಂದ ಬಂದ ಕುವೆಂಪು ತಮ್ಮ ಜಾತಿ ಹೆಗ್ಗಳಿಕೆಯ ಪ್ರಯತ್ನದಲ್ಲಿ `ರೈತ'ನನ್ನು `ನೇಗಿಲಯೋಗಿ' ಮಾಡಿದ್ದಾರೆ ಎಂಬ ಏಕ ಆಯಾಮದ ತೀರ್ಮಾನಕ್ಕೆ ನಾವಿಲ್ಲಿ ಬರಬಾರದು. ನೇಗಿಲಯೋಗಿಯನ್ನು ಕುರಿತು ಹಾಡಿದಂತೆಯೇ ಗೊಬ್ಬರವನ್ನು ಕುರಿತೂ ಅವರು ಹಾಡಿರುವುದು ಈ ಮಾತಿಗೆ ಪೂರಕವಾಗಿ ನಿಲ್ಲಬಲ್ಲದು:
 
’ಗೊಬ್ಬರವನ್ನಲ್ಲಗಳೆಯುವೆ ಏಕೆ ಮರದ ತುದಿ
ನಲ್ಗಂಪುವೆತ್ತಿ ತಂಗಾಳಿಗೊಲೆಯುವ ಹೂವೆ?
ಬೇರುಗಳಿಗಿಲ್ಲದಿದ್ದರೆ ಗೊಬ್ಬರಂ, ಹೇಳೆನಗೆ
ವೃಕ್ಷಕೆಲ್ಲಿಯದು ಹೂವಿನ ಹಬ್ಬ? ಗೊಬ್ಬರದ
ಜೀವವನೆ ಹೀರಿ ಕೊಬ್ಬಿಹ ಹೂವೆ, ಕಬ್ಬಕ್ಕೆ
ನೀಂ ಮಾತ್ರ ವಸ್ತುವೇಂ/ನಿನ್ನಂತೆ ಗೊಬ್ಬರಂ
ಕಬ್ಬಕ್ಕೆ ಸಾಮಗ್ರಿಯಾಗಬಾರದೆ ಹೇಳು?’
 
ಹೂವಿನಂತೆಯೇ ಗೊಬ್ಬರ; ಕೋಗಿಲೆಯಂತೆಯೇ ಕಾಜಾಣ: ಯೋಗಿಯಂತೆಯೇ ರೈತ; ತಪಸ್ಸಿನಂತೆಯೇ ಶ್ರಮ; ಹೀಗೆ ಕುವೆಂಪು ಪ್ರತಿ ಸಂಸ್ಕೃತಿ ಪ್ರತೀಕಗಳನ್ನು ಆಯ್ದುಕೊಳ್ಳುತ್ತಾ ಕಾವ್ಯ ನಿರ್ಮಿಸಿದ್ದಾರೆ. ಅವರಿಗದೊಂದು ಸಾಂಸ್ಕೃತಿಕ ಯುದ್ಧ. ಅದು ನಿಜ ಕನ್ನಡತ್ವದ ನೆಲೆಗಟ್ಟಾಗಿಯೂ ಅವರ ಕಣ್ಣೊಳಗಿದೆ. ಯಜಮಾನ ಸಂಸ್ಕೃತಿಯ ಸಾಂಸ್ಕೃತಿಕ ಪ್ರತೀಕಗಳಿಗೆ `ಪ್ರತಿ ಮಾದರಿ' ನಿಮರ್ಾಣ ಮಾಡುವಂತೆಯೇ, ರಾಜಕೀಯ ಸಂಸ್ಕೃತಿಯ ಮಾದರಿಗಳಿಗೂ `ಎದುರು' ನಿಮರ್ಿಸುವ ಹವಣು ಅವರಲ್ಲಿ ಅಪ್ರಜ್ಞಾಪೂರ್ವಕವಾಗಿದೆ ಅಥವಾ ಪ್ರಜ್ಞಾಪೂರ್ವಕವಾಗಿದ್ದಾಗಲೂ ಅದರ ವ್ಯಾಪ್ತಿ ಸಾಮಾಜಿಕ ಸಾಂಸ್ಕೃತಿಕ ಪ್ರತಿರೋಧ ನಿಮರ್ಾಣದಷ್ಟು ಬಲಿಷ್ಠವಾಗಿಲ್ಲ ಎನ್ನಬಹುದೇನೋ.
 
ಭಾರತದ ರಾಷ್ಟ್ರಗೀತೆ ಜನಗಣಮನಕ್ಕೆ `ಪ್ರತಿ'ಯೆಂಬಂತೆ ಕರ್ಮಾಟಕಕ್ಕೊಂದು `ಜಯಹೇ ಕರ್ನಾಟಕ ಮಾತೆ' ನಾಡಗೀತೆಯನ್ನವರು ಬರೆದಿದ್ದಾರೆ. ಇದನ್ನು ಕೇವಲ ಕಾವ್ಯ ಪ್ರ್ರವೃತ್ತಿ ಎನ್ನುವಂತಿಲ್ಲ. ರಾಜಕೀಯ ನಿಲುವು ಸ್ಪಷ್ಟವಾಗಿಯೇ ಇದೆ. ಭಾರತವನ್ನು ಏಕಾಕೃತಿಯ ಸಂಸ್ಕೃತಿ ಧಾರೆ ಎನ್ನಲು ಬಯಸದ ಕುವೆಂಪು ಅದನ್ನು ರಾಜಕೀಯವಾಗಿಯೂ ಏಕೀಕೃತ ದೇಶ ಎನ್ನುವ ನಿಲುವಿನವರಲ್ಲ. ಅಧಿಕಾರ ವಿಕೇಂದ್ರೀಕರಣದ ಪರವಾಗಿ ಕುವೆಂಪು ಅವರಿಗಿದ್ದ ಒಲವು ಹೇಗೂ ಎಲ್ಲರಿಗೂ ಗೊತ್ತಿದೆ. ಸಾಂಸ್ಕೃತಿಕ ರಾಜಕೀಯದ ದೃಷ್ಟಿಯಿಂದ ಇದೊಂದು ಗಮನಾರ್ಹ ನಿಲುವು. ಭಾರತವನ್ನು ಕೇಂದ್ರೀಕೃತ ವ್ಯವಸ್ಥೆಯಡಿಗೆ ತರಬೇಕೆಂಬ ಬಯಕೆ, ಹಲವು ಪ್ರಾದೇಶಿಕ ಆಶೋತ್ತರಗಳನ್ನು ಕೇವಲ ಅಧೀನವೆಂಬಂತೆ ಗುರುತಿಸುವ ಪ್ರ್ರವೃತ್ತಿ ಸ್ವಾತಂತ್ರ್ಯಾಂದೋಲನ ಮುಂಚೂಣಿ ಶಕ್ತಿಗಳಲ್ಲಿತ್ತು. ಅದಕ್ಕಾಗಿಯೇ ಭಾಷಾವಾರು ಪ್ರಾಂತ್ಯಗಳ ರಚನೆಯನ್ನು ವಿರೋಧಿಸುತ್ತಾ, ಮುಂದೂಡುತ್ತಾ ಬಂದ ಕಾಂಗ್ರೆಸ್ ಪ್ರವೃತ್ತಿ ಈಗ ಚರಿತ್ರೆ. ಅಂತಹ ಸನ್ನಿವೇಶದಲ್ಲಿ ನಾಡಗೀತೆಯೊಂದನ್ನು ಬರೆಯ ಹೊರಟ ಕುವೆಂಪು ಅವರು ರಾಜಕೀಯ ಪ್ರತಿಸಂಸ್ಕೃತಿಯನ್ನು ಅಥವಾ ಬಹು ಸಂಸ್ಕೃತಿಯನ್ನು ಆಶಿಸುತ್ತಿದ್ದಾರೆ. ಕುವೆಂಪು ಅವರು ನೆನಪಿನ ದೋಣಿ ಕೃತಿಯಲ್ಲಿ ಬರೆದುಕೊಂಡಿರುವ ಉಲ್ಲೇಖ ಇಲ್ಲಿ ಗಮನಿಸುವಂತಿದೆ:
 
"...ಇದೊಂದು ಸ್ವಾರಸ್ಯದ ವಿಷಯ. ೧೯೨೪-೨೫ರ ನನ್ನೊಂದು ಹಸ್ತಪ್ರತಿಯಲ್ಲಿ `ಕರ್ನಾಟಕ ರಾಷ್ಟ್ರಗೀತೆ' ಎಂಬ ಕವನ ಇದೆ. ಅದು ನನ್ನ `ಜಯಹೇ ಕರ್ನಾಟಕ ಮಾತೆ' ಎಂಬ ನಾಡಗೀತೆಯ ಪ್ರಪಿತಾಮಹನೋ ಪ್ರಪ್ರಪಿತಾಮಹನೋ ಆಗಿರಬೇಕು. ಠಾಕೂರರ ಜನಗಣಮನದಂತೆ ನಮ್ಮ ನಾಡಿಗೂ ಒಂದು ರಾಷ್ಟ್ರಗೀತೆಯನ್ನು ನೀಡುವ ಪ್ರಯತ್ನದ ಭ್ರೂಣ ಸ್ಥಿತಿಯಂತಿದೆ ಅದು. ಅದರ ರಚನೆಯ ರೂಪಾಂಶ ನಾನು ಬೆಳೆದಂತೆಲ್ಲಾ ಬದಲಾವಣೆ ಹೊಂದುತ್ತಾ (ಭಾವ ಮತ್ತು ಭಾಷೆ ಎರಡರಲ್ಲಿಯೂ) ಕಡೆಗೆ `ಕೊಳಲು' ಕವನ ಸಂಗ್ರಹ ಅಚ್ಚಾದಾಗ ಒಂದು ಸ್ಥಿಮಿತಕ್ಕೆ ನಿಂತಿತು. ಮತ್ತು ೧೯೭೦-೭೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅದನ್ನು ನಾಡಗೀತೆಯನ್ನಾಗಿ ಅಧಿಕೃತವಾಗಿ ಸ್ವೀಕರಿಸಿದಾಗ ಮೂರು ನಿಮಿಷಗಳಲ್ಲಿ ಅದನ್ನು ಹಾಡಿ ಮುಗಿಸುವಂತೆ ಸಂಗ್ರಹಿಸಿಕೊಳ್ಳಲಾಯಿತು. ೪೭ ವರ್ಷಗಳ ನಂತರ ೧೯೭೨ನೆಯ ಜುಲೈ ತಿಂಗಳಲ್ಲಿ (ನಾನೀಗ ಇದನ್ನು ಬರೆಯುತ್ತಿರುವುದು ೨೭-೦೭-೧೯೭೨) ನಾಡಿಗೆ ಕರ್ನಾಟಕ ಎಂಬ ಹೆಸರಿಡುವ ನಿರ್ಣಯವನ್ನು ವಿಧಾನಸಭೆ ಅಂಗೀಕರಿಸಿದೆ. ಬಹುಶಃ ಪರಿಷತ್ತು ಅಂಗೀಕರಿಸಿರುವ ನಾಡಗೀತೆಯನ್ನು ಸರ್ಕಾರವು ಒಪ್ಪುತ್ತದೆಂದು ಹಾರೈಸುತ್ತೇನೆ. ಭಾವ ಮತ್ತು ಭಾಷೆ ಎರಡರ ದೃಷ್ಟಿಯಿಂದಲೂ ಕವಿಯ ವಿಕಾಸವನ್ನು ಗುರ್ತಿಸಲು ನೆರವಾಗುತ್ತದೆಂದು ಅದರ ಪೂರ್ತಿ ಪಾಠವನ್ನು, ಯಾವುದನ್ನೂ ತಿದ್ದಲು ಹೋಗದೆ, ಅದರ ಎಲ್ಲ ನ್ಯೂನತೆ ದೋಷಗಳೊಡನೆ ಇಲ್ಲಿ ಕೊಡುತ್ತೇನೆ. ಹೈದರ, ಟಿಪ್ಪು, ಶಿವಾಜಿ, ತುಕಾರಾಂ, ಪಂಪ, ಪುಲಿಕೇಶಿ, ಕೆಂಪೇಗೌಡ, ಅರ್ಥವಾಗದ `ಮಾ ರಾಮಾ' ಈ ಎಲ್ಲ ಹೆಸರುಗಳ ಕಲಬೆರಕೆಯ ವಿಚಿತ್ರ ಪಾಕವಿರುವುದನ್ನು ಓದುಗರು ದರಸ್ಮಿತರಾಗಿ ಗಮನಿಸಬಹುದು."
 
ನಾಡಗೀತೆಯೊಂದನ್ನು ಬರೆಯುವ ಹಂಬಲ ಹಾಗೂ ಅದರೊಳಗೆ ವಿಭಿನ್ನ ಪರಂಪರೆಗಳ ಮಿಳಿತವನ್ನು ಸೂಚಿಸುವಂತೆ ಇರುವ ಹೆಸರುಗಳ ಪಟ್ಟಿ ಈಗ ಮಾನ್ಯಗೊಂಡಿರುವ ನಾಡಗೀತೆಗಿಂತ ಆಗಿನ ಪ್ರಯತ್ನದಲ್ಲೇ ಕುವೆಂಪು ದೃಷ್ಟಿಕೋನಕ್ಕೆ ಹೆಚ್ಚು ಸಮೀಪದಲ್ಲಿರುವಂತಿದೆ.
 
* * *
ಮುಖ್ಯವಾಗಿ ಕುವೆಂಪು ಚಿಂತನೆಯ ಕನ್ನಡತ್ವದ ಮಾದರಿಯನ್ನು ಅರ್ಥಮಾಡಿಕೊಳ್ಳಲು ಇವೆಲ್ಲವೂ ನಮಗೆ ಆಧಾರವನ್ನೊದಗಿಸುತ್ತಿದ್ದು, ಅವರ ನಿಲುವುಗಳಲ್ಲಿ ಒಂದು ಸ್ಪಷ್ಟ ಏಕಸೂತ್ರತೆ ಇದೆ. ಕೆಲವು ಅಂಶಗಳಲ್ಲಿ ಜನಮುಖಿಯೂ ಮತ್ತೆಷ್ಟೋ ಅಂಶಗಳಲ್ಲಿ ಜನವಿರೋಧಿಯೂ ಆಗಿರುವಂತಹ ವಿರೋಧಾಭಾಸಕರ ಚಿಂತನೆಗಳು ಕುವೆಂಪು ಕಾವ್ಯದಲ್ಲಿ ನಮಗೆ ಕಂಡುಬರುವುದಿಲ್ಲ. ವಿಜ್ಞಾನದ ಅಭಿಮಾನಿಯಾಗಿದ್ದೂ ಭೋಗ ವೃತ್ತಿಗೆ ಅವರು ತೋರಿಸಿದ ವಿರೋಧ, ವಿಚಾರವಾದಿಯಾಗಿದ್ದೂ ಆಧ್ಯಾತ್ಮಿಕತೆಯೆಡೆಗೆ ಅವರು ತೋರಿಸಿದ ಪ್ರೀತಿ, ಇವೆಲ್ಲವೂ ಹಿಂದೊಮ್ಮೆ ಅವರನ್ನು ಗೊಂದಲದ ನಿಲುವುಗಳ ಕವಿಯೆಂಬಂತೆ ಚಿತ್ರಿಸುವುದಕ್ಕೆ ಕಾರಣವಾಗಿದ್ದವು. ಅದು ಆಗಿನ ನಮ್ಮ ಅಸಮಗ್ರ ಓದು ಹಾಗೂ ಗ್ರಹಿಕೆಗಳ ಕಾರಣದಿಂದಾಗಿ ಹುಟ್ಟಿಕೊಂಡ ಗೊಂದಲ. ಆದರೆ ಆಧುನಿಕೋತ್ತರ ಚಿಂತನೆಗಳ ನೆಲೆಯಲ್ಲಿ ಇಂದು ಕುವೆಂಪು ತಳೆದಿದ್ದ ನಿಲುವುಗಳಲ್ಲಿ ಅಂತಹ ಗೊಂದಲಗಳಿಲ್ಲದಿರುವುದನ್ನು ನಿರೂಪಿಸಬಹುದಾಗಿದೆ.
 
ವಾಸ್ತವವಾಗಿ ಆಧುನಿಕ ಕನ್ನಡದ ಮೊದಲ ಬಂಡಾಯ ಕವಿಯೆಂಬ ಹೆಗ್ಗಳಿಕೆ ಅವರಿಗೆ ಸಲ್ಲಬೇಕು. ಆದರೆ, ಬಂಡಾಯ ಕಾವ್ಯ ಹುಟ್ಟಿ ಬಂದ ಕಾಲಘಟ್ಟದ ಪ್ರಭಾವಗಳು ಆ ರೀತಿಯ ಪರಿಗಣನೆಗೆ ಅವಕಾಶವಿಲ್ಲದಂತೆ ಮಾಡಿತು ಎಂಬುದನ್ನು ನಾವಿಲ್ಲಿ ಗುರುತಿಸಿಕೊಳ್ಳಬೇಕಾಗುತ್ತದೆ. ಆ ಕಾರಣಗಳನ್ನು ಸರಳವಾಗಿ ನಾನು ಹೀಗೆ ಅರಿತುಕೊಳ್ಳಲು ಪ್ರಯತ್ನಿಸುತ್ತೇನೆ.
 
ಬಂಡಾಯ ಕಾವ್ಯ ಪಂಥವು ತನ್ನ ಜನಮುಖಿ ಕಾವ್ಯ ನಿರ್ಮಾಣಕ್ಕೆ ತತ್ಕ್ಷಣದ ಪ್ರೇರಣೆಗಳನ್ನು ಆಂಧ್ರಪ್ರದೇಶದ ದಿಗಂಬರ ಹಾಗೂ ವಿರಸಂ ಕವಿಗಳಿಂದ, ಮಹಾರಾಷ್ಟ್ರದ ದಲಿತ ಪ್ಯಾಂಥರ್ ಕವಿಗಳಿಂದ ಪಡೆದುಕೊಂಡಿತ್ತು; ದಿಗಂಬರ ಕವಿಗಳು, ದಲಿತ ಪ್ಯಾಂಥರ್ಗಳು ಪರಂಪರೆಯನ್ನು ಪೂರ್ಣವಾಗಿ ನಿರಾಕರಿಸುವ ಆಕ್ರೋಶದ ನೆಲೆ ಹೊಂದಿದವರಾಗಿದ್ದರು. ಆದರೆ ಕುವೆಂಪು ಪರಂಪರೆಯ ಪರಿಭಾಷೆಯೊಂದಿಗೆ ಮಾತನಾಡುವವರಾಗಿದ್ದು, ಅವರನ್ನು ಬಂಡಾಯ ಸಾಹಿತ್ಯಕ್ಕೆ ಮಾದರಿಯಾಗಿ ಸ್ವೀಕರಿಸಲು ಆಗಲಿಲ್ಲ. ಅಷ್ಟೇ ಅಲ್ಲ, ಬಂಡಾಯ ಸಾಹಿತ್ಯ ಪಂಥದ ನಿರ್ಮಾಪಕರಲ್ಲಿ ಬಹುಪಾಲು ಜನ ಮಾರ್ಕ್ಸ್ ವಾದಿ ಹಾಗೂ ಅಂಬೇಡ್ಕರ್ವಾದಿ ಚಿಂತನೆಗಳ ಮೂಲದವರಾಗಿದ್ದು, ಅವರಿಗೆ ಕುವೆಂಪು ಒಂದು ಸ್ಫೂರ್ತಿಯ ಪ್ರತೀಕವಾಗಿರಲು ತೊಡಕುಗಳಿದ್ದವು. ಕಾರಣವೇನೆಂದರೆ, ಕುವೆಂಪು ಅಭಿಜಾತ ಮಾರ್ಕ್ಸ್ ವಾದದ ವಕ್ತಾರರಾಗಿರಲಿಲ್ಲ; ಹಾಗೆಯೇ ಅಂಬೇಡ್ಕರ್ ಚಿಂತನೆಗಳನ್ನೂ ತಮ್ಮ ಬರಹಗಳಲ್ಲಿ ಉಲ್ಲೇಖಿಸಿದವರಾಗಿರಲಿಲ್ಲ.
 
ಅಲ್ಲದೆ ಬಂಡಾಯ ಪಂಥದ ಸಂಪ್ರದಾಯ ನಿರಾಕರಣೆಯೆಂಬುದು ನಾಸ್ತಿಕವಾದಿ ವೈಚಾರಿಕ ನಿಲುವಿನ ರೂಪ ಪಡೆದುಕೊಂಡಿತ್ತಾದ್ದರಿಂದ ಅದನ್ನು ಪ್ರಭುತ್ವದ ಭಾಗವೆಂಬಂತೆ ಬಂಡಾಯ ಸಾಹಿತ್ಯದ ಸೈದ್ಧಾಂತಿಕ ನಿಲುವುಗಳು ಪರಿಭಾವಿಸಿಕೊಂಡವು. ರಾಜ್ಯ ಸರ್ಕಾರದ ನಿಯಂತ್ರಣದಲ್ಲಿ ಪ್ರಭಾವೀ ಸ್ಥಾನಮಾನ ಪಡೆದುಕೊಂಡ ಜಾತಿ ಕೇವಲ `ಗೊಬ್ಬರದೊಡನಾಡುವ ರೈತ' ಹಾಗೂ `ಪುರೋಹಿತಶಾಹಿಯಿಂದ ದಮನಿತ' ಎಂಬ ತನ್ನ ಜನಪ್ರಿಯ ಗ್ರಹಿಕೆಯ ನೆಲೆಯನ್ನು ಕಳೆದುಕೊಳ್ಳತೊಡಗಿತ್ತು. ಬಂಡಾಯ ಸಾಹಿತ್ಯ ಚಳವಳಿಯ ಮುಂಚೂಣಿಗೆ ಬಂದವರಲ್ಲಿ ಬಹುಪಾಲು ಜನ ಅತಿ ಹಿಂದುಳಿದ ಹಾಗೂ ದಲಿತ ಜಾತಿಗಳಿಗೆ ಸೇರಿದವರಾಗಿದ್ದರು. ಕರ್ನಾಟಕದ ಸಾಮಾಜಿಕ ವಾಸ್ತವದಲ್ಲಿ ಒಕ್ಕಲಿಗರಿಗೂ ಮೇಲೆ ಹೆಸರಿಸಿದ ಜಾತಿಗಳಿಗೂ ಇದ್ದ ವೈರುಧ್ಯಗಳು ಪರೋಕ್ಷವಾಗಿ ಕುವೆಂಪು ಪ್ರೇರಣೆಯ ಮಾದರಿಗಳನ್ನು ಲಾಂಛನವಾಗಿ ಸ್ವೀಕರಿಸಲು ಅಡ್ಡಿಯಾದವು.
 
ಸಾಲದ್ದಕ್ಕೆ ೧೯೮೦ರ ದಶಕವೆಂಬುದು ಒಕ್ಕಲಿಗ ಜಾತಿ ತನ್ನನ್ನೊಂದು ಸಂಘಟಿತ ರಾಜಕೀಯ ಸಮುದಾಯವನ್ನಾಗಿ ರೂಪಿಸಿಕೊಳ್ಳಲು ತೀವ್ರವಾಗಿ ಪ್ರಯತ್ನಿಸತೊಡಗಿದ ಕಾಲಘಟ್ಟವೂ ಆಗಿದ್ದು, ತನ್ನ ಜಾತಿ ಅಸ್ಮಿತೆಯ ಸಂಚಯೀಕರಣದ ಪ್ರಯತ್ನದಲ್ಲಿ ಹಳೆ ಮೈಸೂರು ಪ್ರಾಂತ್ಯದ ಒಕ್ಕಲಿಗರು ಕುವೆಂಪು ಅವರ ಭಾವಚಿತ್ರವನ್ನು ಒಂದು ಲಾಂಛನದಂತೆ ಬಳಸತೊಡಗಿದ್ದರು. ಇದು ತನ್ನಷ್ಟಕ್ಕೆ ತಪ್ಪಲ್ಲವಾದರೂ, ಅಸಂಘಟಿತವಾಗಿದ್ದ ಇತರೆ ಹಿಂದುಳಿದ ಜಾತಿ ಹಾಗೂ ದಲಿತ ಸಮುದಾಯಗಳಿಗೆ ಅಪಾಯದ ಸೂಚನೆಯಾಗಿ ಕಂಡಿತ್ತು. ಕುವೆಂಪು ಅವರನ್ನು ಮುಂದಿಟ್ಟುಕೊಳ್ಳುವುದು ಪರೋಕ್ಷವಾಗಿ ಒಕ್ಕಲಿಗ ಜಾತಿಯ ಅನುಯಾಯಿತ್ವವನ್ನು ಒಪ್ಪಿಕೊಂಡಂತೆ ಎಂದು ಆಗ ಭಾಸವಾಗಿದ್ದರೆ ಆಶ್ಚರ್ಯವಿಲ್ಲ. ಆಗ ದೇವರಾಜ ಅರಸು ರಾಜಕೀಯ ಮಾದರಿಯ ಹಿಂದುಳಿದ ವರ್ಗ ಜಾಗೃತಿ ಸಾಕಷ್ಟು ಪ್ರಭಾವಶಾಲಿಯಾಗಿದ್ದು ಅರಸರು ಒಕ್ಕಲಿಗರನ್ನು ಕರ್ನಾಟಕದ ಬಲಿಷ್ಠ ಜಾತಿಯನ್ನಾಗಿ ಪರಿಗಣಿಸಿದ್ದರು.
 
ಆಗ ಬಂಡಾಯ ಸಾಹಿತ್ಯ ಪಂಥವು ವ್ಯವಸ್ಥಾ ವಿರೋಧಿ ನೆಲೆಯ ಘೋಷಣೆಗಳನ್ನು ಹೊಂದಿತ್ತು. ಆ ವ್ಯವಸ್ಥೆಯ ಸಾಂಸ್ಕೃತಿಕ ಲಾಂಛನವೆಂಬಂತಿದ್ದ ಕನ್ನಡ ಸಾಹಿತ್ಯ ಪರಿಷತ್ನಿಂದ ಸನ್ಮಾನ್ಯರಾಗಿದ್ದ ಕುವೆಂಪು, ರಾಜ್ಯ ಸರ್ಕಾರದ ವತಿಯಿಂದಲೇ
`ರಾಷ್ಟ್ರ ಕವಿ' ಎಂಬ ಮಾನ್ಯತೆ ಪಡೆದಿದ್ದ ಕುವೆಂಪು, ಶ್ರೀ ರಾಮಾಯಣ ದರ್ಶನಂ ಕಾವ್ಯ ಬರೆದು ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪು, ಜನಮುಖೀ ಬಂಡಾಯ ಕಾವ್ಯಕ್ಕೆ ಆದ್ಯರೆಂಬಂತೆ ಬಿಂಬಿಸುವುದಕ್ಕೆ ಸೂಕ್ತವಾದ ಮಾದರಿಯಾಗಿ ಕಾಣಲಿಲ್ಲ. ಹಾಗೆಂದೇ ನೆರೆಯ ರಾಜ್ಯದ ಕ್ರಾಂತಿಕಾರಿ ಕವಿ ಶ್ರೀ ಶ್ರೀ ಬಂಡಾಯ ಸಾಹಿತ್ಯ ಸಂಘಟನೆಯನ್ನು ಉದ್ಘಾಟಿಸಲು ಸರಿಯಾದ ಮಾದರಿಯಾಗಿ ಕಂಡರು.
 
ಮತ್ತೊಂದು ಕಡೆ ಕುವೆಂಪು ಅವರ ವಿಚಾರ ಧಾರೆಯಿಂದ ಸಾಕಷ್ಟು ಪ್ರೇರಣೆಯನ್ನು ಪಡೆದಿದ್ದ ಸಮಾಜವಾದಿ ಚಳವಳಿಯ ಹಲವಾರು ನಾಯಕರು ಕಾಂಗ್ರೆಸ್ ರಾಜಕೀಯದೊಳಕ್ಕೆ ವಿಲೀನರಾಗಿಬಿಟ್ಟಿದ್ದರಿಂದ ಕುವೆಂಪು ವಿಚಾರ ಪರಂಪರೆಯ ವಾರಸುದಾರರಾಗಿ ನಿಲ್ಲಲಿಕ್ಕೆ ಅವಕಾಶವಿರಲಿಲ್ಲ. ೧೯೭೦ರ ದಶಕದ ನಂತರ ಕರ್ನಾಟಕ ಸಾಮಾಜಿಕ ಪ್ರಸ್ತುತತೆಯ ಜನಪರ ಚಳವಳಿಗಳ ಯಾವುದೇ ವೇದಿಕೆಯಲ್ಲೂ ಕುವೆಂಪು ಅವರು ಪಾಲ್ಗೊಳ್ಳಲಿಲ್ಲ. ಬದಲಿಗೆ ಪ್ರಗತಿಪರರಿಂದ ಸಾಕಷ್ಟು ವಿರೋಧ ಎದುರಿಸಿದ ಸರ್ಕಾರಿ ಪ್ರಾಯೋಜಿತ ವಿಶ್ವ ಕನ್ನಡ ಸಮ್ಮೇಳನದಂತಹ ವೇದಿಕೆಗಳಿಗೆ ಹೋಗಿದ್ದರು. ಯಾವುದೇ ರಾಜಕೀಯ ಪಕ್ಷದೊಂದಿಗೆ ಬೆಂಬಲಪೂರ್ವಕ ಸಂಪರ್ಕ ಇಟ್ಟುಕೊಂಡವರಾಗಿಲ್ಲದಿದ್ದಾಗಲೂ ಸರ್ಕಾರದ ವತಿಯಿಂದ ಕೊಡಮಾಡಲ್ಪಟ್ಟ ಮಾನ ಸಮ್ಮಾನಗಳಿಗೆ ಕುವೆಂಪು ವಿರೋಧವನ್ನು ವ್ಯಕ್ತಪಡಿಸಲಿಲ್ಲ.
 
ಲೋಕ ವಿದ್ಯಮಾನದ ಇಂತಹ ಸಂಕೀರ್ಣ ವಿಚಾರಗಳ ಹಿನ್ನೆಲೆಯಲ್ಲಿ ಕುವೆಂಪು ಅವರ ಆಶಯಗಳ ಗಹನತೆ, ವೈಚಾರಿಕ ಪ್ರಖರತೆ, `ಪ್ರತಿ ಸಂಸ್ಕೃತಿ' ನಿರ್ಮಾಣಪರವಾದ ಪ್ರತಿಪಾದನೆ, ದೇಸಿ ಅಂತಃಸತ್ವದ ಬಗೆಗಿನ ನಿಷ್ಠೆ ಎಂಬವುಗಳು ಕಳೆದ ಎರಡು ದಶಕಗಳ ಕಾಲಾವಧಿಯಲ್ಲಿ ಎಡಪಂಥೀಯ ಸಾಂಸ್ಕೃತಿಕ ಕ್ಷೇತ್ರದ ಮುಂಚೂಣಿಗೆ ಬರದೆ ಮಸುಕುಗೊಂಡವು. ಇದರಲ್ಲಿ ಕುವೆಂಪು ಕಾವ್ಯ ನಿರ್ಮಾಣದ ಹಾದಿಯ ತೊಡಕೂ ಸೇರಿತ್ತೆಂಬುದನ್ನು ನಾವು ಒಪ್ಪಿಕೊಳ್ಳಬೇಕು. ಸಾಂಸ್ಕೃತಿಕವಾಗಿ ದೇಸಿ ನೆಲೆಗಳ ಪರವಾಗಿದ್ದ, ಭಾಷಿಕವಾಗಿ ಕನ್ನಡದ ಪರವಾಗಿದ್ದ ಕುವೆಂಪು ತಮ್ಮ ಕವಿತಾ ರಚನೆಯಲ್ಲಿ ಸಂಸ್ಕೃತ ಭೂಯಿಷ್ಟ ಶಿಷ್ಟ ಭಾಷೆಯನ್ನು ಬಳಸಿಕೊಂಡಿದ್ದರಿಂದ ಅವರ ಭಾವಗೀತೆಗಳಿಗೆ ಒದಗಿದ ವ್ಯಾಪಕ ಜನಪ್ರಿಯತೆ ಅವರ ಕವಿತೆಗಳ ಓದಿಗೆ ದೊರೆಯಲಿಲ್ಲ. ಹೊಸ ತಲೆಮಾರಿನ ಯುವಕರು ಇದರಿಂದ ಕುವೆಂಪು ಸಾಹಿತ್ಯದ ಓದಿಗೆ ಎರವಾದರು.
ಇದು ಇಂತಹ ಹಲವು ಕಾರಣಗಳಿಂದ ಅಥವಾ ಮತ್ತಾವುದೋ ಕಾರಣಗಳಿಂದ ಆಗಿರಬಹುದು - ಕುವೆಂಪು ಪ್ರತಿಪಾದಿಸಿದ ಚಿಂತನೆಗಳ ನೆಲೆಗಟ್ಟು ಸ್ವಾತಂತ್ರೋತ್ತರ ಕನ್ನಡತ್ವ ನಿರ್ಮಾಣದ ತಳಹದಿಯಾಗಿ ನಿಂತಿದೆ ಹಾಗೂ ಅದರ ಮುಖ್ಯ ಪ್ರೇರಣೆಗಳು ಕುವೆಂಪು ಕಾವ್ಯ ಹಾಗೂ ಸಾಹಿತ್ಯದ ಮೂಲದಿಂದ ಒದಗಿಬಂದಿವೆ ಎಂಬುದನ್ನು ಪ್ರಕಟವಾಗಿ ಪ್ರತಿಪಾದಿಸಲು ಯಾರೂ ಮುಂದಾಗಲಿಲ್ಲ. ಆದರೆ ಈಗ-
 
ರಾಜಭಾಷೆ ದೇವ ಭಾಷೆಗಳ ಬಂಧನದಿಂದ ಬಿಡಿಸಿಕೊಂಡ ಮಾತೃಭಾಷೆ;
ಯಜಮಾನ ಸಂಸ್ಕೃತಿಗೆ ಸವಾಲೊಡ್ಡುವ ದೇಸಿ ಸಂಸ್ಕೃತಿ;
ಮೌಢ್ಯ ಕಂದಾಚಾರಗಳನ್ನು ಮೀರಿ ನಿಲ್ಲುವ ವಿಚಾರಮತಿ;
ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಪ್ರಜಾತಾಂತ್ರಿಕ ನಿಲುವು;
ಸಾಂಸ್ಥಿಕ ಮತ ಧರ್ಮಗಳನ್ನು ನಿರಾಕರಿಸಿದ ವಿಶ್ವ ಚೇತನದಲ್ಲಿ ನಂಬಿಕೆ ಇರಿಸಿದ ಆಧ್ಯಾತ್ಮಿಕತೆ;
ವಿಜ್ಞಾನದ ಪ್ರಗತಿಯನ್ನು ಮೆಚ್ಚಿಯೂ ಭೋಗಾಸಕ್ತ ಜೀವನ ಮಾದರಿಗೆ ನಿರಾಕರಣೆ;
ಮಹಿಳೆಯನ್ನು ಮಾತೆ, ಸಹಧಮರ್ಿಣಿ ಹಾಗೂ ಸತಿ ಎಂದು ಗೌರವಿಸುವ ಮೌಲ್ಯ;
ಸಾಮಾನ್ಯವೂ ಅಸಮಾನ್ಯವೂ ಒಂದೇ ಎಂಬ ದೃಷ್ಟಿಕೋನ;
ಪ್ರಕೃತಿಯೇ ದೇಗುಲ ಎಂಬ ಪರಿಸರ ಪ್ರೀತಿ;
ಶಿವನಿಲ್ಲದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ
ಎಂಬ ಸಾಹಿತ್ಯದ ಮೌಲ್ಯ - ಮುಂತಾದವುಗಳನ್ನು ಸ್ಥೂಲವಾಗಿ ಕುವೆಂಪು ಕಾವ್ಯದ ಆಶಯಾತ್ಮಕ ಪ್ರತಿಪಾದನೆಗಳೆಂದು ನಾವು ಪರಿಗಣಿಸುವುದಾದರೆ, ಅದು ಇಂದಿಗೂ ನವ ಕನ್ನಡತ್ವ ನಿರ್ಮಾಣದ ಪ್ರಯತ್ನಗಳಿಗೆ ಭದ್ರ ಆಧಾರ ಸ್ತಂಭಗಳನ್ನೊದಗಿಸುವ ಭೂಮಿಕೆಯಾಗಿದೆ ಎಂಬುದು ಎಲ್ಲರೂ ಒಪ್ಪುವ ಮಾತಾಗಿದೆ. ಈ ಹಿನ್ನೆಲೆಯಲ್ಲಿ ನಾವು `ಹೊಸ ಕನ್ನಡತ್ವ ನಿರ್ಮಾಣ ಪ್ರಕ್ರಿಯೆಯ ಸಾಂಸ್ಕೃತಿಕ ಆಚಾರ್ಯ' ಕುವೆಂಪು ಸಾಹಿತ್ಯದ ಮರು ಓದಿಗೆ ನಮ್ಮ ತಲೆಮಾರನ್ನು ಪ್ರೇರೇಪಿಸಬೇಕಾಗಿದೆ.
 
 
 
ಮೂಲ: ಆಸ್ವಾಲ್ಡ್ ಎಮ್ಸ್ಥಲಿ, ದಕ್ಷಿಣ ಆಫ್ರಿಕಾ 
ಕನ್ನಡಕ್ಕೆ: ಡಾ ಎಚ್ ಎಸ್ ರಾಘವೇಂದ್ರ ರಾವ್
 
 
ಹಾದಿಬದಿಯಲ್ಲೊಂದು ಅಗ್ಗಿಷ್ಟಿಕೆ 
 
 ನಸುನೀಲಿ ಹೊಗೆಚೆಲ್ಲುವ, ಅಗ್ಗಿಷ್ಟಿಕೆಯ ಸುತ್ತ
ಯಾರೋ ಸೇದಿ ಒಗೆದ ಕೊ
ರೆಬೀಡಿ ಸೇದುತ್ತ
ಕಾಡುಹರಟುವ ಕುಡುಕ ನಾವಿಕರ ಹೋಲುತ್ತ
ಕತೆಹಂಚಿಕೊಳ್ಳುತ್ತ, ಬೆಚ್ಚಗಾಗುತ್ತ
ಮುದುರಿ ಕುಳಿತಿದ್ದಾರೆ, ಮನೆಬಿಟ್ಟ ಮಕ್ಕಳು.
ಚಳಿಗಾಳಿ ಹೀರುತಿದೆ ಮೈಯ ಕಣಕಣವನ್ನು
ಕರುವು ಹೀರುವ ಹಾಗೆ ತಾಯ್ಕೆಚ್ಚಲನ್ನು.
ಹೊಗೆಯ ಹಾವಳಿಯಿಂದ ಕೆಂಪಡರಿದ ಕಣ್ಣು
ಬೆಂಕಿನಾಲಿಗೆ ಬರೆದ ಗೆರೆಗೆರೆ ಮುಖ ಬೆನ್ನು
ಒಬ್ಬ ಆಕಳಿಸಿದ,
ನಿದ್ದೆತುಂಬಿದ ಕಣ್ಣ ನವಿರಾಗಿ ಉಜ್ಜಿದ.
ಕನಸಿನಲ್ಲೆನುವಂತೆ ಹೀಗೆ ಗೊಣಗುಟ್ಟಿದ:
"ನಾನೊಮ್ಮೆ ತಿಂದಿದ್ದೆ ಇಡಿ ಇಡಿ ಬ್ರೆಡ್ಡನ್ನು
ಜಾಮಿಲ್ಲದ, ಬಟರಿಲ್ಲದ ಬರಿ ಬರಿ ಬ್ರಡ್ಡನ್ನು"
ಆಮೇಲೆ,
ಬೆಚ್ಚಗಿನ ಮನೆಯಿಂದ ಹೆಣ್ಣು ಹೊರಬಂದಳು
ಚಳಿಗಾಳಿಯ ಹೊರಗಿಟ್ಟಿದೆ ಮೈಮುಚ್ಚಿದ ಶಾಲು.
ಆಗಬೇಕಿದೆ ಅಡಿಗೆ, ಬೆಂಕಿಬೇಕಿದೆ ಒಳಗೆ
ಒಳಗೆಹೋಯಿತು, ಒಲೆಯು
, ಇವರು ಚಳಿಗೆ.
ನಕ್ಷತ್ರರಹಿತ ಕಡುಕಪ್ಪು ರಾತ್ರಿ,
ಆ.. .. ಎಂದು ಬಾಯ್ತೆರೆದ ಕೊನೆಯಿರದ ರಾತ್ರಿ
ಎಲ್ಲರನು ನುಂಗಿತು, ಹಾಗೇನೆ ಉಳಿಯಿತು