ಇದೀಗ ಮತ್ತೆ ಕಾವೇರಿ ನೀರು ಬಿಡುವ ವಿಷಯದಲ್ಲಿ ಎರಡೂ ರಾಜ್ಯಗಳ ನಡುವೆ ಕಾವು ಏರತೊಡಗಿದೆ. ಕಾವೇರಿ ನದಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾದಾಗೆಲ್ಲಾ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಪ್ರಗತಿಪರ ಹೋರಾಟಗಾರರು, ಇತರೆ ಸಂಘಟನೆಗಳು ಹೋರಾಟ ಮಾಡುತ್ತಲೇ ಬಂದಿವೆ. ಆದರೆ ಈ ಕಾವೇರಿ ಚಳವಳಿಗೆ ಖದರ್ ಬಂದುದು ೯೦ ರ ದಶಕದಲ್ಲಿ. ೧೯೯೧ ರಲ್ಲಿ ಸುಪ್ರೀಂ ಕೋರ್ಟು ನ್ಯಾಯಾಧಿಕರಣಕ್ಕೆ ಮಧ್ಯಂತರ ಆದೇಶ ನೀಡುವ ಅಧಿಕಾರವಿದೆಯೆಂಬ ಅಭಿಪ್ರಾಯ ವ್ಯಕ್ತಪಡಿಸಿಬಿಟ್ಟಿತು. ಅದರಂತೆ ಅದೇ ವರ್ಷ ಕಾವೇರಿ ನ್ಯಾಯಮಂಡಳಿಯು ಕರ್ನಾಟಕ ತಮಿಳುನಾಡಿಗೆ ೨೦೫ ಟಿ.ಎಮ್.ಸಿ ನೀರನ್ನು ಬಿಡಬೇಕೆಂದು ಮಧ್ಯಂತರ ಆದೇಶವನ್ನು ನೀಡಿತ್ತು. ಅಲ್ಲಿಂದಲೇ ಕರ್ನಾಟಕದಲ್ಲಿ ಕಾವೇರಿ ನದಿ ನೀರಿನ ನ್ಯಾಯಕ್ಕಾಗಿ ಪ್ರತಿರೋಧವು ತೀರ್ವ ಸ್ವರೂಪವನ್ನು ಪಡೆಯುವ ಹಂತ ಆರಂಭವಾಯಿತು. ಅಲ್ಲಿಯವರೆಗೆ ಮಂದಗಾಮಿನಿಯಂತೆ ವ್ಯಕ್ತವಾಗುತ್ತಿದ್ದ ಪ್ರತಿಭಟನೆಗೆ ಬೇರೆಯದೇ ಗತಿ-ಚಲನೆ ಪ್ರಾರಂಭವಾಯಿತು. ಅದಕ್ಕೆ ಆಗಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಚಾಲನೆ ನೀಡಿದ್ದರು. ಕಾವೇರಿ ನ್ಯಾಯಾಧೀಕರಣದ ಮಧ್ಯಂತರ ಆದೇಶ ಹೊರಬೀಳುತ್ತಿದ್ದಂತೆಯೇ ಅಘಾತಗೊಂಡಂತಾದ ಅಂದಿನ ಮುಖ್ಯಮಂತ್ರಿ ಬಂಗಾರಪ್ಪನವರು ಆದೇಶಕ್ಕೆ ಪ್ರತಿ ಚಾಟಿಯನ್ನು ಬೀಸಲು ಸಿದ್ದತೆ ನಡೆಸಿದರು. ಸಂಪುಟ ಸಹೋದ್ಯೋಗಿಗಳನ್ನು, ಕಾನೂನು ಪಂಡಿತರನ್ನು, ನೀರಾವರಿ ತಜ್ನರನ್ನು ಕರೆಸಿಕೊಂಡು ಚರ್ಚಿದರು. ಎಲ್ಲರ ಸಲಹೆಯಂತೆ ೧೯೯೧ ರ ಜುಲೈ ೨೫ ರಂದು ಕರ್ನಾಟಕ ಸರ್ಕಾರ ’ಕಾವೇರಿ ಸುಗ್ರೀವಾಗ್ನೆ’ಯನ್ನು ಹೊರಡಿಸಿತು. ಅದರಂತೆ ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ಹಿತರಕ್ಷಣೆಗಾಗಿ ೮,೪೯,೭೦೦ ಹೆಕ್ಟೇರು ಪ್ರದೇಶವನ್ನು ನೀರಾವರಿಗೊಳಪಡಿಸಬೇಕು, ಕಾವೇರಿ ಉಪನದಿಗಳ ನೀರನ್ನು ರಾಜ್ಯದೊಳಗಿನ ಭೂಮಿಗೆ ಉಪಯೋಗಿಸಬೇಕು ಎಂಬ ನ್ಯಾಯಾಂಗಕ್ಕಿಂತ ಶಾಸಕಾಂಗದ ಮೇಲರಿಮೆಯ ಘೋಷಣೆ ಮಾಡಿದ್ದರು. ಬಂಗಾರಪ್ಪನವರ ಈ ದಿಟ್ಟತನದ ಘೋಷಣೆಯನ್ನು ಕಂಡು ರಾಜ್ಯವು ಹೆಮ್ಮೆಯಿಂದ ಬೀಗಿತ್ತು. ಆದರೆ ಕೇಂದ್ರ ಸರ್ಕಾರವು ಬೆಚ್ಚಿಬಿದ್ದು ಕರ್ನಾಟಕ ಸರ್ಕಾರದ ಸುಗ್ರೀವಾಗ್ನೆಯನ್ನು ಸುಪ್ರೀಂ ಕೋರ್ಟಿನ ಅಭಿಪ್ರಾಯಕ್ಕಾಗಿ ಕಳಿಸಿಕೊಟ್ಟಿತ್ತು. ಆಗ ಸುಪ್ರೀಂ ಕೋರ್ಟಿನ ಆದೇಶದಂತೆ ಕೇಂದ್ರ ಸರ್ಕಾರವು ಮಧ್ಯಂತರ ಆದೇಶವನ್ನು ಗೆಜೆಟ್ ನಲ್ಲಿ ಪ್ರಕಟಿಸಿ ಅಧಿಕೃತಗೊಳಿಸಿತ್ತು.
ಕೇಂದ್ರದ ಗೆಜೆಟ್ ಪ್ರಕಟಣೆಯನ್ನು ಕಂಡು ಕರ್ನಾಟಕ ಸರ್ಕಾರವು ನಿಬ್ಬೆರಗಾಯಿತು. ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ರೈತರು ಆಘಾತಗೊಂಡರು. ನಾಡಪ್ರೇಮಿಗಳು ಆಕ್ರೋಶದಿಂದ ಕುದ್ದುಹೋದರು. ಅದರ ತೀವ್ರತೆಯ ಬಿಸಿ ಮೊದಲು ತಟ್ಟಿದ್ದು ಬೆಂಗಳೂರಿಗೆ. ಡಿಸೆಂಬರ್ ೧೧ ರಂದು ಗೆಜೆಟ್ ಪ್ರಕಟಣೆ ಸಂಗತಿ ಖಾತ್ರಿಯಾಗಿ ಬೆಳಿಗ್ಗೆ ೧೧ ಗಂಟೆಗೆಲ್ಲಾ ಜನರಲ್ಲಿ ರೋಷಾವೇಷವನ್ನು ಹುಟ್ಟಿಹಾಕಿತ್ತು. ಆಗ ಅಂತಹ ಅನ್ಯಾಯವನ್ನು ಮೊದಲು ವಿರೋಧಿಸಿದ ಡಾ. ರಾಜಕುಮಾರ್ ಅಭಿಮಾನಿಗಳ ಸಂಘ ಬೀದಿಗಿಳಿಯಲು ಮುಂದಾಗಿತ್ತು. ತರಾತುರಿಯಲ್ಲಿ ಅಭಿಮಾನಿ ಪತ್ರಿಕಾಲಯದ ಕಚೇರಿಯಲ್ಲಿ ಸಭೆ ನಡೆಯಿತು. ಅಲ್ಲಿ ಸಾ.ರಾ.ಗೋವಿಂದು, ಜಾಣಗೆರೆ ವೆಂಕಟರಾಮಯ್ಯ, ಟಿ.ವೆಂಕಟೇಶ್ ಮುಂತಾದ ಪತ್ರಕರ್ತ-ಕನ್ನಡಪರರು ಗಂಭೀರ ಚರ್ಚೆ ನಡೆಸಿ ತುರ್ತಾಗಿ ಭಾರೀ ಪ್ರಮಾಣದ ಪ್ರತಿಭಟನಾ ಮೆರವಣಿಗೆ-ಸಭೆಯನ್ನು ನಡೆಸಬೇಕು ಎಂದು ನಿಶ್ಚಯಿಸಿದರು. ಕಬ್ಬನ್ ಪಾರ್ಕಿನಲ್ಲಿ ನಡೆಸಲು ಉದ್ದೇಶಿಸಿದ ಸಭೆಯಲ್ಲಿ ಹಿರಿಯ ಕನ್ನಡ ಚಿಂತಕ ಡಾ. ಎಮ್. ಚಿದಾನಂದ ಮೂರ್ತಿ, ಕಾನೂನು ತಜ್ನ ಸಿ. ಹೆಚ್. ಹನುಮಂತರಾಯ ಮುಂತಾದವರನ್ನು ಮಾತನಾಡಲು ವಿನಂತಿಸಿಕೊಳ್ಳಲಾಯಿತು. ವಾಸ್ತವವಾಗಿ ಆಗ ಡಾ.ರಾಜಕುಮಾರ್ ಅಭಿಮಾನಿಗಳ ಸಂಘ ಪ್ರಬಲವಾಗಿತ್ತು. ಅದಕ್ಕೆ ಸಾವಿರಾರು ಅಭಿಮಾನಿಗಳ ಬಲವಿತ್ತು. ಹಾಗಾಗಿ ಅದೊಂದು ಬೃಹತ್ ಶಕ್ತಿಯಾಗಿ ರೂಪಿತಗೊಂಡಿತ್ತು. ಕೆಲವಾರು ಪ್ರತಿಭಟನೆಗಳಲ್ಲಿ ತೊಡಗಿಸಿಕೊಂಡು ಹೆಸರಿನಲ್ಲಿತ್ತು. ಅದರಿಂದಾಗಿ ಒಂದೆರಡು ಗಂಟೆಗಳಲ್ಲಿ ಜನರನ್ನು ಸಂಘಟಿಸಲು ಸಾಧ್ಯವಾಗಿತ್ತು. ಮಧ್ಯಾಹ್ನ ೧೨ ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದ ಆಟದ ಮೈದಾನದಲ್ಲಿ ಸಾವಿರಗಟ್ಟಲೆ ಯುವ ಸಮೂಹ ಸೇರಿಕೊಂಡಿತ್ತು. ಅದರ ಮುಖಂಡತ್ವವನ್ನು ಸಾ.ರಾ.ಗೋವಿಂದು, ಜಾಣಗೆರೆ ವೆಂಕಟರಾಮಯ್ಯ, ಟಿ ವೆಂಕಟೇಶ್ ಮುಂತಾದವರು ವಹಿಸಿದ್ದರು.
ಚಳುವಳಿಗಳ ಉಲ್ಲೇಖ ಮಾಡುತ್ತಿರುವ ನಾವು ಚಳುವಳಿ ಮಾಡಲು, ವಿರೋಧ ಮಾಡಲು ಇದೇ ಸರಿಯಾದ ಕ್ರಮವೆಂದು ವಾದಿಸುತ್ತಿಲ್ಲ. ಪ್ರತೀ ಸಮಸ್ಯೆಗೆ ಸಾಮಾನ್ಯ ಜನರು, ರಾಜಕಾರಣಿಗಳು, ಪ್ರತಿಷ್ಟಿತರು, ವ್ಯಾಪಾರಿಗಳು ಸ್ಪಂದಿಸುವ ರೀತಿ, ಅದನ್ನು ವಿರೋಧಿಸುವ ರೀತಿ ಬೇರೆ ಬೇರೆಯದಾಗಿರುತ್ತದೆ. ಕಾವೇರಿ ಚಳುವಳಿಯಲ್ಲೂ ಅದೇ ಮಾದರಿ. ಜನ ಸಾಮಾನ್ಯರು, ಯುವರು ಭಾವನಾತ್ಮಕವಾಗಿ ವಿರೋಧ ಮಾಡುತ್ತಾರೆ. ಅವರ ಹೋರಾಟದಲ್ಲಿ ತಾರ್ಕಿಕತೆಯನ್ನು ಹುಡುಕಿಕೊಂಡು ಹೋಗಲು ಆಗುವುದಿಲ್ಲ. ಅದರ ಅಗತ್ಯವೂ ಇಲ್ಲ. ಅವರು ಭಾವಾವೇಷದಲ್ಲಿ ತಮಗಾದ ಅನ್ಯಾಯಕ್ಕೆ ಸಿಡಿದೆದ್ದು ಪ್ರತಿಭಟಿಸುತ್ತಾರೆ. ಆ ಸಿಟ್ಟು, ಆಕ್ರೋಶವನ್ನು ಕೆಲವೊಮ್ಮೆ ಯಾವುದಾದರೊಂದು ವಸ್ತುವನ್ನು, ಆಸ್ತಿಯನ್ನು ನಾಶಮಾಡುವಲ್ಲೂ ತೊಡಗಿಸಿಬಿಡುತ್ತಾರೆ. ತಮ್ಮ ಭಾವನೆಗಳು ತಲುಪಬೇಕಾದವರಿಗೆ ತೀವ್ರವಾಗಿ ತಲುಪಲಿ ಎಂಬುದು ಅವರ ಉದ್ದೇಶ. ಸ್ವಾತಂತ್ರ ಹೋರಾಟದ ಸಂದರ್ಭದಲ್ಲೂ ಇದು ಸ್ಪಷ್ಟವಾಗಿ ಕಾಣುತ್ತದೆ. ಉತ್ತಮ ಮಾರ್ಗದರ್ಶಕರು, ನಾಯಕರು ಇಂತಹ ಭಾವನಾತ್ಮಕ ಜನ ಸಮೂಹದ ಮುಂಚೂಣಿಯಲ್ಲಿದ್ದರೆ ಹೋರಾಟಗಳು ರಾಜ್ಯ-ದೇಶಗಳನ್ನೇ ಅಲ್ಲಾಡಿಸಿಬಿಡಬಲ್ಲವು. ಜನ ಶಕ್ತಿ ಅಷ್ಟು ಪ್ರಬಲ. ಕಾವೇರಿ ನದಿ ನೀರಿನ ವಿಚಾರದಲ್ಲಿ ವ್ಯಕ್ತವಾದ ಆ ಜನ ಶಕ್ತಿಯ ವೈಖರಿಯನ್ನು ನಾವಿಲ್ಲಿ ದಾಖಲಿಸುತ್ತಿದ್ದೇವೆ.
ಅಂದು ಬೆಂಗಳೂರಿನ ಮಲ್ಲೇಶ್ವರದಲ್ಲಿ ಸೇರಿ ಕಬ್ಬನ್ ಪಾರ್ಕಿನೆಡೆಗೆ ಹೊರಟ ಮೆರವಣಿಗೆ ಶೇಷಾದ್ರಿಪುರದ ವೃತ್ತದ ಬಳಿಗೆ ಬರುವ ಹೊತ್ತಿಗೆ ಭಾರೀ ಗಾತ್ರದ್ದಾಗಿತ್ತು. ಆ ಜನಸಾಗರವನ್ನು ನಿಯಂತ್ರಿಸಲು ಪೋಲೀಸರೂ ಕೂಡಾ ಹರಸಾಹಸ ಪಡುವಂತಾಗಿತ್ತು. ಮೆರವಣಿಗೆಯಲ್ಲಿದ್ದ ಯುವಕರ ಗುಂಪೊಂದು ತಮಿಳುನಾಡಿನ ಮೇಲಿನ ಕೋಪಕ್ಕೆ ಅಲ್ಲಿದ್ದ ತಮಿಳು ಚಿತ್ರಮಂದಿರಗಳ ಮೇಲೆ ಕಲ್ಲು ಬೀರಲು ಆರಂಭಿಸಿತು. ಅಲ್ಲಿದ್ದ ಕಿನೋ ಚಿತ್ರಮಂದಿರದ ಎದುರಿಗಿದ್ದ ಗುಡಿಸಲುಗಳತ್ತ ಆ ಯುವಕರ ದೃಷ್ಟಿ ಹರಿದಿತ್ತು. ಅದಕ್ಕೆ ಕಾರಣ ಆ ಗುಡಿಸಲುಗಳಲ್ಲಿ ವಾಸವಿದ್ದ ಕೆಲ ತಮಿಳುರು ಅತ್ತಕಡೆಯಿಂದ ಮೆರವಣಿಗೆಯ ಮೇಲೆ ಕಲ್ಲುಗಳನ್ನು ತೂರಲಾರಂಭಿಸಿದ್ದು. ಕಾವೇರಿ ವಿಚಾರ ಭುಗಿಲೆದ್ದರೆ ತಮಿಳು ಚಿತ್ರಮಂದಿರಗಳ ಮೇಲೆ ಮೊದಲ ಕೋಪ ಹರಿಹಾಯುವುದು ಸಾಮಾನ್ಯ.ಆ ಮೆರವಣಿಗೆಯ ಮುಂಭಾಗದಲ್ಲಿ ವಾಹನಗಳ ಮೇಲೆ ನಿಂತು ಯುವಕರನ್ನು ಹುರಿದುಂಬಿಸುತ್ತಿದ್ದ ಮುಖಂಡರು ’ಕಾವೇರಿ ನಮ್ಮದು, ರಕ್ತ ಕೊಟ್ಟೇವು ನೀರು ಬಿಡೆವು’ ಎಂದು ಘೋಷಣೆಗಳನ್ನು ಕೂಗತೊಡಗಿದ್ದರು. ಕೂಗು ಮೊಳಗುತ್ತಿತ್ತು. ಆನಂದರಾವ್ ಸರ್ಕಲ್ಲಿನಿಂದ ಮಹಾರಾಣಿ ಕಾಲೇಜ್, ಕೆ.ಆರ್.ಸರ್ಕಲ್, ನೃಪತುಂಗ ರಸ್ತೆಯ ಕಡೆಗೆ ಜನಸಾಗರದಂತ ಮೆರವಣಿಗೆ ಸಾಗಿತ್ತು. ಎಲ್ಲ ಕಡೆಯಿಂದಲೂ ವಾಹನ ಸಂಚಾರ ಸ್ಥಬ್ದ. ರಸ್ತೆಯ ಇಕ್ಕೆಲಗಳಲ್ಲಿ ನಿಂತು ನೋಡುತ್ತಿದ್ದ ಜನ ಮೆರವಣಿಗೆಯನ್ನು ಕಂಡು ಭಾವಪರವಶರಾದಂತೆ ಪ್ರತಿಕ್ರಿಯಿಸುತ್ತಿದ್ದರು. ಎಲ್ಲೆಲ್ಲೂ ಜನವೋ ಜನ. ಎಲ್ಲರ ಬಾಯಲ್ಲೂ ಘೋಷಣೆಗಳು. ಬಿಸಿಲ ಬೇಗೆಯಲ್ಲೂ ಕುಗ್ಗದ ಉತ್ಸಾಹ ಮತ್ತು ಆಕ್ರೋಶ ಎದ್ದು ಕಾಣುತ್ತಿತ್ತು. ಅಲ್ಲಿಂದ ಕಬ್ಬನ್ ಪಾರ್ಕಿನೊಳಗೆ ಪ್ರವೇಶಿಸಿದ ಜನಸಾಗರ ಎದೆಯಲ್ಲಿ ಉಂಟಾಗಿದ್ದ ಭಾವೋದ್ವೇಗವನ್ನು ಅದುಮಿಟ್ಟುಕೊಂಡು ನಾಯಕರು ಎಂತಾ ಮಾತಾಡುತ್ತಾರೆ, ಅದೇನು ಹುಕುಂ ಕೊಡುತ್ತಾರೆ ಎಂಬ ಕುತೂಹಲ ತುಂಬಿಕೊಂದು ಮೌನಕ್ಕೆ ಶರಣಾಗಿದ್ದರು. ವಾಸ್ತವಾಗಿ ಅದು ರಾಜಕೀಯ ರಹಿತ ಸಭೆಯಾಗಿತ್ತು. ಹಿರಿಯ ಸಂಶೋಧಕರಾದ ಡಾ. ಎಮ್. ಚಿದಾನಂದ ಮೂರ್ತಿ, ಖ್ಯಾತ ವಕೀಲರಾದ ಸಿ.ಹೆಚ್. ಹನುಮಂತರಾಯ, ಮಿಕ್ಕಂತೆ ಕನ್ನಡಪರ ಹೋರಾಟಗಾರರಾದ ಸಾ ರಾ ಗೋವಿಂದು, ಜಾಣಗೆರೆ, ವೆಂಕಟೇಶ್ ಮುಂತಾದವರು ವೇದಿಕೆ ಏರಿದ್ದರು. ಅದೇ ಸಂದರ್ಭಕ್ಕೆ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು ವಿಧಾನಸೌಧದಲ್ಲಿ ಸರ್ವ ಪಕ್ಷಗಳ ಸಭೆ ಕರೆದು ಚರ್ಚೆ ನಡೆಸಿದ್ದರು. ಅದು ರಾಜಕೀಯ ಸಭೆಯಾಗಿದ್ದರೆ ಇದು ಚಳವಳಿಗಾರರ ಸಭೆಯಾಗಿತ್ತು.
’ಇಷ್ಟು ಹೊತ್ತಿಗೆ ಕೇಂದ್ರ ಸರ್ಕಾರವು ಕಾವೇರಿ ನ್ಯಾಯಮಂಡಳಿ ನೀಡಿರುವ ಮಧ್ಯಂತರ ಅದೇಶವನ್ನು ಗೆಜೆಟ್ ನಲ್ಲಿ ಪ್ರಕಟಿಸುವ ಕಾರ್ಯವನ್ನು ಪೂರೈಸಿರುತ್ತದೆ. ಇದು ರಾಜ್ಯಕ್ಕೆಸಗಿರುವ ಪರಮ ಅನ್ಯಾಯ. ಕಾವೇರಿ ನ್ಯಾಯಮಂಡಳಿ ಕರ್ನಾಟಕದ ಕಷ್ಟ-ನಷ್ಟಗಳನ್ನು ಅರಿಯದೇ ಹೋದದ್ದು ದುರದೃಷ್ಟಕರ ಸಂಗತಿ. ಕರ್ನಾಟಕದ ಮೇಲೆ ನೆರೆರಾಜ್ಯಗಳ ಜತೆ ಸೇರಿಕೊಂಡು ಕೇಂದ್ರವು ಪ್ರಹಾರ ನಡೆಸಿದೆ. ಇದನ್ನು ಕರ್ನಾಟಕ ಸರ್ಕಾರ ಸಹಿಸಿಕೊಳ್ಳಬಾರದು. ಜನರ ಹೋರಾಟ ಮತ್ತು ಸರ್ಕಾರದ ಕಾನೂನು ಸಮರಗಳ ಮೂಲಕ ನ್ಯಾಯವನ್ನು ಪಡೆದುಕೊಳ್ಳಲು ಮುಂದಾಗಬೇಕು. ಇಲ್ಲದಿದ್ದರೆ ಕರ್ನಾಟಕದ ರೈತರು ತೀರ್ವ ಸಂಕಷ್ಟಕ್ಕೆ ಗುರಿಯಾಗುತ್ತಾರೆ...’ ಎಂದು ವಕೀಲರಾದ ಹನುಮಂತರಾಯರು ಆರಂಭದಲ್ಲೇ ಮಾತಾಡಿ ಜನರ ಎದೆಯಲ್ಲಿ ಕೋಲಾಹಲ ಉಂಟುಮಾಡಿದ್ದರು.
ನಂತರ ಎಮ್. ಚಿದಾನಂದಮೂರ್ತಿಯವರು ’ಕೇಂದ್ರವು ತರಾತುರಿಯಲ್ಲಿ ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ಅದೇಶವನ್ನು ಗೆಜೆಟ್ ನಲ್ಲಿ ಪ್ರಕಟಿಸಿ ರಾಜ್ಯಕ್ಕೆ ದ್ರೋಹ ಮಾಡಿದೆ. ಇದು ರಾಜ್ಯದ ಮೇಲೆ ಆರಂಭದಿದಂದಲೂ ನಡೆಸಿಕೊಂಡು ಬಂದಿರುವ ಮಲತಾಯಿ ಧೋರಣೆಯ ಇನ್ನೊಂದು ಮುಖವಾಗಿದೆ. ಮಧ್ಯಂತರ ತೀರ್ಪು ಕನ್ನಡಿಗರ ಪಾಲಿಗೆ ಮರಣಶಾಸನವಾಗಿದೆ. ಇದನ್ನು ಕರ್ನಾಟಕ ಸರ್ಕಾರ ಒಪ್ಪಿಕೊಂಡು ಪಾಲಿಸಬಾರದು. ಇದರಿಂದ ನಮ್ಮ ರೈತರು ಅನ್ಯಾಯಕ್ಕೆ ಗುರಿಯಾಗುತ್ತಾರೆ. ನಾವು ಸರ್ಕಾರದ ಜೊತೆಗಿರುತ್ತೇವೆ. ರಾಜ್ಯದ ಸಮಸ್ತ ಜನತೆಯೂ ಸರ್ಕಾರದ ಬೆಂಬಲಕ್ಕೆ ನಿಲ್ಲುತ್ತದೆ. ತಮಿಳುನಾಡಿನ ಒತ್ತಡಕ್ಕೆ ಮಣಿದು ಗೆಜೆಟ್ ನಲ್ಲಿ ಆದೇಶವನ್ನು ಪ್ರಕಟಿಸಿ ಅನ್ಯಾಯವನ್ನು ಎಸಗಿದ ಕೇಂದ್ರ ಸರ್ಕಾರದ ವಿರುದ್ದ ಕನ್ನಡಿಗರು ದೊಡ್ಡ ಪ್ರತಿಭಟನೆಗೆ ಮುಂದಾಗಬೇಕು. ನಮ್ಮ ಹೋರಾಟ ಶಾಂತಿ ಮತ್ತು ಶಿಸ್ತಿನಿಂದ ಕೂಡಿರಬೇಕೆಂಬುದನ್ನು ಮರೆಯಬಾರದು...’ ಎಂದು ಜನತೆಗೆ ಕರೆ ಕೊಟ್ಟರು. ಅನಂತರ ಜಾಣಗೆರೆ, ಗೋವಿಂದು, ವೆಂಕಟೇಶ್ ಮುಂತಾದವರು ಯುವಕರಲ್ಲಿ ಕೆಚ್ಚು ಮೂಡಿಸುವಂತೆ ಮಾತಾಡಿದ್ದರು. ಜನರಲ್ಲಿ ಭಾವಾವೇಶ ತಾಂಡವವಾಡುತ್ತಿತ್ತು. ನಾಯಕರು ಏನೇ ಕರೆ ಕೊಟ್ಟರೂ ಅದನ್ನು ಈಡೇರಿಸಲು ಸಜ್ಜುಗೊಂಡಿರುವುದಾಗಿ ಭಾಷಣದ ಮಧ್ಯೆ ಘೋಷಣೆಗಳನ್ನು ಕೂಗತೊಡಗಿದ್ದರು. ಸಹಸ್ರಾರು ಜನರ ಆ ಅಪರೂಪದ ಸಭೆಯಲ್ಲಿ ಕ್ರಾಂತಿಯ ಕಿಡಿ ಹೊತ್ತುರಿಯಲು ತಹತಹಪಡುತ್ತಿದ್ದಂತೆ ಕಂಡು ಬಂತು.
ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಸಭೆ ಮುಕ್ತಾಯಗೊಂಡಿತ್ತು. ಅದೇ ಹೊತ್ತಿಗೆ ವಿಧಾನಸೌದದಲ್ಲಿ ಸೇರಿದ್ದ ಸರ್ವಪಕ್ಷಗಳ ಸಭೆಯೂ ಮುಗಿದಿತ್ತು. ಅದರಲ್ಲಿ ವಿರೋಧಪಕ್ಷಗಳು ನಾಳೆಯೇ ’ಕರ್ನಾಟಕ ಬಂದ್’ ಆಚರಿಸುವಂತೆ ಕರೆಕೊಟ್ಟಿದ್ದವು. ಅದಕ್ಕೆ ರಾಜ್ಯಸರ್ಕಾರವೂ ಪರೋಕ್ಷ ಬೆಂಬಲ ಘೋಷಿಸಿತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸುವುದಾಗಿ ಪ್ರಕಟಿಸಿತ್ತು. ನಾಳಿನ ಬಂದ್ ಗೆ ಕನ್ನಡಪರ, ರೈತಪರ ಸಂಘ-ಸಂಸ್ಥೆಗಳೆಲ್ಲಾ ಬೆಂಬಲ ಘೋಷಿಸಿದ್ದವು.
ದಶಕಗಳ ಹಿಂದೆ ಕಾಣುತ್ತಿದ್ದ ಈ ಕಾವೇರಿ ಪರ ಹೋರಾಟಗಳಲ್ಲಿ ಒಂದು ವಿಶೇಷತೆ ಇತ್ತು. ಕರ್ನಾಟಕದ ಹಿತಾಸಕ್ತಿಗಾಗಿ ಯುವಜನತೆ ಬೀದಿಗಿಳಿದಿತ್ತು. ಕಾವೇರಿ ಸಮಸ್ಯೆಯನ್ನು ದಶಕಗಳಾದರೂ ಪರಿಹರಿಸಿಕೊಳ್ಳಲಾಗದ ರಾಜ್ಯ ಸರ್ಕಾರದ ಮೇಲೆ ಕೊಂಚ ಕೋಪ, ಕೇಂದ್ರ ಸರ್ಕಾರದ ಸಹಾಯದಿಂದ ಕರ್ನಾಟಕವನ್ನು ಪದೇ ಪದೇ ಪೀಡಿಸುತ್ತಿದ್ದ ತಮಿಳುನಾಡಿನ ಮೇಲೆ ಅತೀವ ಆಕ್ರೋಶ, ಬೆಂಗಳೂರಿನಲ್ಲಿ ಆಗ ಸಂಖ್ಯೆಯಲ್ಲಿ ವಿಪರೀತ ಹೆಚ್ಚಾಗಿ ಕನ್ನಡಿಗರಿಗೇ ಸಡ್ಡು ಹೊಡೆದಿದ್ದ ತಮಿಳು ಭಾಷಿಕರ ಮೇಲಿನ ಸಿಟ್ಟು, ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳನ್ನು ಮೂಲೆಗುಂಪು ಮಾಡಿ ಸೂಪರ್ ಹಿಟ್ ಆಗುತ್ತಿದ್ದ ತಮಿಳು ಚಲನ ಚಿತ್ರಗಳು, ಬೆಂಗಳೂರಿನಲ್ಲಿ ನೆಲೆಯಾಗಿದ್ದ ನಿರುದ್ಯೋಗ, ಕುಡಿಯುವ ನೀರಿನ ಸಮಸ್ಯೆ ಇವೆಲ್ಲವೂ ವಿಚಿತ್ರ ರೀತಿಯಲ್ಲಿ ಮಿಶ್ರಣವಾಗಿ ಕಾವೇರಿ ಹೋರಾಟ ಒಂದು ರೀತಿಯಲ್ಲಿ ಕರ್ನಾಟಕವು ತಮಿಳು ನಾಡಿನ ವಿರುದ್ಧ ಸಾರಿದ್ದ ಭಾಷಾ-ಸಂಸ್ಕೃತಿ ಸಮರವಾದಂತಿತ್ತು. ಆಗಿನ ಹೋರಾಟಗಳ ಮುಖಂಡರಿಗೆ ಕನ್ನಡ-ಕರ್ನಾಟಕದ ಹಿತಾಸಕ್ತಿ ಬಗ್ಗೆ ಕಾಳಜಿಯಿತ್ತು. ನಾಡಿಗಾಗಿ ಜನರನ್ನು ಕಲೆಹಾಕಿ ಜನಾಂದೋಲನ ಮಾಡುವ ಸಾಮರ್ಥ್ಯವಿತ್ತು. ತುಡಿತವಿತ್ತು.
(ಮುಂದಿನ ಸಂಚಿಕೆಯಲ್ಲಿ- ’ಕಾವೇರಿ’ದ ಚಳವಳಿಯಿಂದ ಅಕ್ಷರಶಃ ಹತ್ತಿ ಉರಿದ ಬೆಂಗಳೂರು-ಮೈಸೂರು-ಮಂಡ್ಯ ಜಿಲ್ಲೆಗಳು)