ಅಂಗಳ      ಗಾಳಿ ಅಂಗಿ ಚುಂಗು ಹಿಡಿದು
Print this pageAdd to Favorite
 

 ಗಾಳಿ ಅಂಗಿ ಚುಂಗು ಹಿಡಿದು
ಕಾಲಿಗಷ್ಟು ಚಕ್ರ ಕಟ್ಟಿ
ಮೆಲ್ಲ ಮೆಲ್ಲ ಸಿಲ್ಲಿ ಗಲ್ಲಿ
ಕೋಟೆ ಕೊತ್ತಲ ಊರು ಸುತ್ತಿ
ಕಣ್ಣು ಕಂಡ ಪಟಗಳನ್ನು
ಮನದ ಪದಕೆ ತಳಿಕೆ ಹಾಕಿ
ಹಿಗ್ಗು ಸುಗ್ಗಿ ಎಲ್ಲ ಸುರಿದು
ಪುಟದ ಮೇಲೆ ತಟಪಟಾ...

 
 

ಯೂರೋಪಿನ ಹೈಟೆಕ್ ಕಳ್ಳರೂ ಅನುಸರಿಸುವ ಕಳ್ಳತನದ ಯೂನಿವರ್ಸಲ್ ಅಲಿಖಿತ ನಿಯಮ!!

ಟೋನಿ
ನನಗೆ ಸಿಟ್ಟು ನೆತ್ತಿಗೇರಿತ್ತು. ನಾನು ಕಿರುಚಿದ ರಭಸ ಹೇಗಿತ್ತೆಂದರೆ ನನ್ನ ಮುಂದೆ ಹೋಗುತ್ತಿದ್ದವರು, ನನ್ನ ಹಿಂದೆ ಹೋಗುತ್ತಿದ್ದವರು, ನನ್ನ ಅಕ್ಕ ಪಕ್ಕವಿದ್ದವರೆಲ್ಲಾ ಸರಕ್ಕನೆ ನಿಂತು ಒಂದು ಕ್ಷಣ ನನ್ನತ್ತ ತಿರುಗಿದ್ದರು. ನನಗೋ ಅದ್ಯಾವುದರ ಪರಿವೆಯೂ ಇರಲಿಲ್ಲ. ನನ್ನ ಸಿಟ್ಟೆಲ್ಲಾ ಕೇಂದ್ರೀಕ್ರತವಾಗಿದ್ದು ಆ ಕಳ್ಳರ ಮೇಲೆಯೇ.
ಸುಮ್ಮನೆ ನನ್ನ ಪಾಡಿಗೆ ಬರುತ್ತಿದ್ದವನನ್ನು ಬಲವಂತದಿಂದ ಮಾತನಾಡಿಸಿ, ಭಾರತವನ್ನೂ, ಅಮಿತಾಬ್ ಬಚ್ಚನ್ನನನ್ನೂ ಪ್ರೀತಿಸುವುದಾಗಿ ಭಾವನಾತ್ಮಕವಾಗಿ ಒಂದು ಕ್ಷಣ ನಮ್ಮಿಂದ ಮೆಚ್ಚುಗೆ ಪಡೆದು, ನನ್ನನ್ನು ತಬ್ಬಿ ಹೆಜ್ಜೆ ಹಾಕಿ ಕುಣಿದು, ಆ ಮೆಚ್ಚುಗೆಯ ದುರ್ಲಾಭ ಪಡೆದು ನನ್ನ ಪರ್ಸ್ ಎಗುರಿಸಿದ್ದು ನನಗೆ ಅಪಾರ ಸಿಟ್ಟು ತರಿಸಿತ್ತು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದರೂ ಮಂಡ್ಯ ಜಿಲ್ಲೆಯ ಮೂಲದವನಾದ ನನಗೆ ಆ ಜಿಲ್ಲೆಯ ಕೆಲವು ಗುಣಗಳೂ ರಕ್ತಗತವಾಗಿ ಬಂದಿದ್ದವು. ಆ ಗುಣಗಳಲ್ಲಿ ನನಗೆ ಹೆಚ್ಚು ಅಂಟಿಕೊಂಡಿದ್ದು ಸಿಟ್ಟಿನ ಸ್ವಭಾವ. ಅದರಲ್ಲೂ ರಾಮ ಮನೋಹರ ಲೋಹಿಯಾರನ್ನು ಓದಿಕೊಂಡ ನಂತರವಂತೂ ಅನ್ಯಾಯವನ್ನು ಕಂಡಲ್ಲಿ ಪ್ರತಿಭಟಿಸಬೇಕೆಂಬ ಗುಣವನ್ನು ನನ್ನಲ್ಲಿ ಅಳವಡಿಸಿಕೊಂಡದ್ದರಿಂದ ನನ್ನ ಸಿಟ್ಟಿಗೆ ನಾನೇ ಒಂದು ತಾರ್ಕಿಕ ಕಾರಣ ನೀಡಿ ಸಮರ್ಥಿಸಿಕೊಳ್ಳತೊಡಗಿದ್ದೆ. ಆ ದರಿದ್ರ ಕಳ್ಳರ ಗ್ರಹಚಾರ ಇಂದು ನೆಟ್ಟಗಿರಲಿಲ್ಲವೆಂದು ಕಾಣುತ್ತೆ. ನನ್ನ ಮೇಲೆ ತಮ್ಮ ಕೈಚಳಕ ತೋರಲು ಬಂದು ತಗಲಾಕಿಕೊಂಡಿದ್ದರು. ನನ್ನ ಸಿಟ್ಟಿನ ಕೂಗು ಜೋರಾಗಿ ಹೋಗುತ್ತಿದ್ದ ಕಳ್ಳನನ್ನೂ ತಡೆದು ನಿಲ್ಲಿಸಿತ್ತು. ಸಾಮಾನ್ಯವಾಗಿ ಮೆದು ದನಿಯಲ್ಲಿಯೇ ಮಾತನಾಡುವ ಅಭ್ಯಾಸವಿದ್ದ ನಾನು ಈ ಪರಿ ಜೋರಾಗಿ ಕೂಗಿದ್ದು ನನಗೇ ಆಶ್ಚರ್ಯವುಂಟುಮಾಡಿತ್ತು. ಅಂತೂ ನನ್ನ ಕೂಗು ಯೂರೋಪ್ ಖಂಡದ ಬೆಲ್ಜಿಯಂ ದೇಶದ ಬೀದಿಯಲ್ಲಿ ಪ್ರತಿದ್ವನಿಸಿ ಕಳ್ಳರೂ ಸೇರಿದಂತೆ ಸುತ್ತ ಮುತ್ತಲಿದ್ದವರನ್ನೆಲ್ಲಾ ಒಂದು ಕ್ಷಣ ನನ್ನತ್ತ ನೋಡುವಂತೆ ಮಾಡಿತ್ತು. ಪರವಾಗಿಲ್ಲ ಮಂಡ್ಯ ಮೂಲದವನಾಗಿದ್ದಕ್ಕೂ ಸಾರ್ಥಕವಾಯಿತೆಂದು ನನಗನ್ನಿಸಿತ್ತು. ತಟ್ಟನೆ ನಿಂತ ಕಳ್ಳ ನನ್ನತ್ತ ತಿರುಗಿ ದಿಟ್ಟಿಸತೊಡಗಿದ.
 
ನನಗೋ ಆ ಕ್ಷಣದಲ್ಲಿ ಆತನನ್ನು ಹಿಡಿದು ಚಚ್ಚಬೇಕೆನಿಸಿತ್ತು. ನಿಂತು ನನ್ನತ್ತಲೇ ನೋಡುತ್ತಿದ್ದ ಕಳ್ಳನ ಬಳಿಗೆ ರಭಸದಿಂದ ಹೋದೆ. ನನ್ನನ್ನೇ ಬೆದರುಗಣ್ಣಿನಿಂದ ನೋಡುತ್ತಿದ್ದ ಅವನಿಗೆ ’ಗಿವ್ ಮಿ ಮೈ ಪರ್ಸ್’ ಎಂದೆ. ಆತ ತನ್ನ ಜೇಬಿನಲ್ಲಿದ್ದ ನನ್ನ ಪರ್ಸ್ ಅನ್ನು ಹೊರತೆಗೆದು ಮೇಲೆತ್ತಿ ಮತ್ತೊಂದು ಕೈಯನ್ನು ಬಾಯಿಗಿಟ್ಟುಕೊಂಡು ಜೋರಾಗಿ ಸಿಳ್ಳೆ ಹಾಕಿದ. ನನಗೋ ಆತ ನಿಂತು ಸಿಳ್ಳೆ ಯಾಕೆ ಹೊಡೆದನೆಂದು ಆಗ ಗೊತ್ತಾಗಲಿಲ್ಲ. ಅಷ್ಟರಲ್ಲಿ ಬಹುದೂರ ಹೋಗಿದ್ದ ಆತನ ಸಹಪಾಠಿ ಕಳ್ಳರು ಈತನತ್ತಲೇ ನೋಡುತ್ತಿದ್ದರು. ಅವರಿಗೆ ಕಾಣಿಸುವಂತೆ ನನ್ನ ಪರ್ಸ್ ಅನ್ನು ಮೇಲಕ್ಕೆತ್ತಿ ತೋರಿಸಿದ ರೊಮೇನಿಯಾದವನೆಂದು ಹೇಳಿಕೊಂಡಿದ್ದ ಕಳ್ಳ ಕೂಡಲೇ ಪರ್ಸ್ ಅನ್ನು ನನ್ನ ಕೈಗಿತ್ತ.
ಈ ಬೋ.... ನನ್ನ ಪರ್ಸ್ ಅನ್ನು ನನಗೆ ಕೊಡುವುದಕ್ಕೂ ಸಿಳ್ಳೆ ಹೊಡೆದು ತನ್ನ ಸಹಪಾಠಿಗಳ ಅಪ್ಪಣೆ ಪಡೆಯುತ್ತಿದ್ದಾನಲ್ಲಾ ಎಂಬ ಸಿಟ್ಟಿನಿಂದ ಅವನಿಗೆ ಬಾಯಿಗೆ ಬಂದಂತೆ ಕನ್ನಡದಲ್ಲಿ ಬೈಯ್ಯತೊಡಗಿದೆ. ಅವನಿಗೆಲ್ಲಿ ಅರ್ಥವಾಗುತ್ತದೆ ನನ್ನ ಕನ್ನಡದ ಬೈಗುಳ. ಯಾರಿಗಾದರೂ ಸಡನ್ನಾಗಿ ಬೈಯ್ಯಬೇಕೆನಿಸಿದರೆ ಮೊದಲು ಬರುವುದೇ ನಮ್ಮ ಮಾತೃಭಾಷೆಯಲ್ಲವೇ. ಆ ಸಂದರ್ಭದಲ್ಲಿ ನಾನೆಲ್ಲಿ ಇಂಗ್ಲೀಷಿನ ಬೈಗುಳಗಳನ್ನು ಹುಡುಕಿಕೊಂಡು ಕೂರಲಿ? ನನಗೆ ಆ ಭಾಷೆಯಲ್ಲಿನ ಬೈಗುಳಗಳ ಶಬ್ಧದ ಅಭಾವವಿದ್ದುದರಿಂದ ಅವುಗಳನ್ನು ನೆನಪು ಮಾಡಿಕೊಂಡು ಹುಡುಕಿ ಹುಡುಕಿ ಹೆಕ್ಕಿ ತೆಗೆದು ಅವುಗಳನ್ನು ಈ ಕಳ್ಳನ ಮೇಲೆ ಪ್ರಯೋಗಿಸುವ ವ್ಯವಧಾನವಂತೂ ಇರಲಿಲ್ಲವೆನ್ನಿ. ನನ್ನ ಕನ್ನಡದ ಬೈಗುಳಗಳು ಅವನಿಗೆ ಅರ್ಥವಾಗದಿದ್ದರೂ ನಾನು ಜೋರಾದ ದನಿಯಲ್ಲಿ ಬೈಯ್ಯುತ್ತಿದ್ದ ಫ಼ೋರ್ಸಿಗೆ ಅವು ಭಾರೀ ಬೈಗುಳಗಳೇ ಆಗಿರಬಹುದೆಂದು ಆತ ಭಾವಿಸಿದ್ದಂತೂ ದಿಟ. ಆ ಕ್ಷಣದಲ್ಲಿ ಆತನಿಗೆ ಇಷ್ಟೆಲ್ಲಾ ಬೈದರು ಏನೂ ಪ್ರತಿಕ್ರಿಯೆ ನೀಡದೇ ನೀಂತಿರುವುದನ್ನು ಕಂಡು ನನಗೆ ಮತ್ತಷ್ಟು ರೇಗಿತ್ತು. ನಾನು ಕನ್ನಡದಲ್ಲಿ ಬೈಯ್ಯುತ್ತಿರುವುದು ಆತನಿಗೆ ಅರ್ಥವಾಗುತ್ತಿಲ್ಲ ಎಂದು ನನಗೆ ತೋಚಲೇ ಇಲ್ಲ. ಕಣ್ಣನ್ನು ಪಿಳಿ ಪಿಳಿ ಬಿಡುತ್ತಾ ನನ್ನತ್ತಲೇ ನೋಡುತ್ತಿದ್ದವನಿಗೆ ಎರಡು ಬಾರಿಸಲು ಹೋದೆ. ಆಗ ಆತ ಪರ್ಸ್ ಅನ್ನು ನನ್ನ ಕೈಗಿತ್ತವನೇ ಓಡತೊಡಗಿದ್ದ. ಅವನು ಓಡತೊಡಗಿದ ಮೇಲೆ ಇಂಗ್ಲಿಷಿನಲ್ಲಿ ನೆನಪಾದ ಒಂದೆರಡು ಬೈಗುಳಗಳನ್ನು ಬೈದೆ. ಆದರೆ ಅವು ಅವನ ಕಿವಿಗೆ ಬೀಳಲೇ ಇಲ್ಲ. ನಾನು ಕನ್ನಡದಲ್ಲಿ ಬೈದ ಅಷ್ಟೂ ಬೈಗುಳಗಳನ್ನು ಅವನು ಕೇಳಿಸಿಕೊಂಡಿದ್ದರೂ ಅವನಿಗರ್ಥವಾಗಿರಲಿಲ್ಲ; ಅವನಿಗರ್ಥವಾಗುವ ಭಾಷೆಯಲ್ಲಿ ಬೈಯ್ಯುವ ಹೊತ್ತಿಗೆ ಅವನು ಓಡಿ ಹೋಗಿದ್ದ. ಅವನಿಗೆ ತಾಗದಿದ್ದರೂ ಇಂಗ್ಲಿಷಿನಲ್ಲಿಯೂ ಬೈದೆನೆಂಬ ಸಮಾಧಾನ ನನ್ನದಾಗಿತ್ತು. ಅವನನ್ನು ಒಂದೆರಡು ಹೆಜ್ಜೆ ಅಟ್ಟಿಸಿಕೊಂಡು ಹೋದೆನಾದರೂ ಆತ ಅಲ್ಲಿಯೇ ಇದ್ದ ಕಾರು ಪಾರ್ಕಿಂಗ್ ಕಟ್ಟಡದೊಳಕ್ಕೆ ನುಸುಳಿ ಮರೆಯಾದ.
 
ನಾನು ನನ್ನ ಪರ್ಸ್ ಕಳುವಾಗಿರುವುದನ್ನು ನೋಡಿಕೊಳ್ಳುವುದು ಐದಾರು ಸೆಕೆಂಡುಗಳು ತಡವಾಗಿದ್ದರೂ ಅದು ಮತ್ತೆ ನನಗೆ ಸಿಗುತ್ತಿರಲಿಲ್ಲ. ಕಳ್ಳನ ಸಹಪಾಠಿಗಳೆಲ್ಲಾ ಆಗಲೇ ಬಹುದೂರ ಹೋಗಿದ್ದರಾದರೂ ನನ್ನ ಪರ್ಸ್ ಅನ್ನು ತನ್ನ ಬಳಿಯಿಟ್ಟುಕೊಂಡಿದ್ದ ಕಳ್ಳನೇ ನನಗೆ ಸಿಕ್ಕಿದ್ದರಿಂದ ನನ್ನ ಪರ್ಸ್ ಹಾಗೂ ಅದರಲ್ಲಿದ್ದ ಹಣ ನನಗೆ ಹಿಂದಿರುಗಿತ್ತು. ಅಷ್ಟರಲ್ಲಾಗಲೇ ನನ್ನ ಮುಂದೆ ಹೋಗುತ್ತಿದ್ದ ನನ್ನ ಸಹ ಪ್ರವಾಸಿಗರೆಲ್ಲಾ ಹಿಂದಿರುಗಿ ನನ್ನ ಬಳಿ ಬಂದಿದ್ದರು. ಅವರಿಗೆಲ್ಲಾ ನಾನು ಜೋರಾಗಿ ಕೂಗಿದ್ದು, ಕಳ್ಳನ ಬಳಿ ಬೈದಾಡಿದ್ದು ಆಶ್ಚರ್ಯವುಂಟುಮಾಡಿತ್ತು. ಬಂದವರೇ ವಿಷಯ ತಿಳಿದು ’ಅಯ್ಯೋ, ಹೇಗೋ ನಿಮ್ಮ ಹಣ ವಾಪಸ್ ಪಡೆದಿರಲ್ಲಾ ಬಿಡಿ’ ಎಂದರೆ ಇನ್ನು ಕೆಲವರು ಲೊಚಗುಟ್ಟುತ್ತಾ ತಮಗನಿಸಿದ ಅಭಿಪ್ರಾಯಗಳನ್ನೆಲ್ಲಾ ಧಾರಾಳವಾಗಿ ವ್ಯಕ್ತಪಡಿಸಿದ್ದರು. ಇನ್ನು ಕೆಲವರಂತೂ ನೀವು ಹಣ ಪಡೆದ ನಂತರ ಆ ಕಳ್ಳನನ್ನು ಅಟ್ಟಿಸಿಕೊಂಡು ಹೋಗಬಾರದಿತ್ತೆಂದು ಉಪದೇಶವನ್ನೂ ನೀಡಿದರು.
 
ನಾನು ಕಳ್ಳನನ್ನು ಜೋರಾಗಿ ಕೂಗಿ ಕರೆದಾಗ ಸುತ್ತಮುತ್ತಲಿದ್ದವರೆಲ್ಲಾ ತಿರುಗಿ ನೋಡಿದ್ದರಾದರೂ, ನಾನು ಕಳ್ಳನ ಬಳಿಹೋಗಿ ಅವನನ್ನು ಹಿಡಿದಾಗಲೂ ಯಾರೂ ಹತ್ತಿರಕ್ಕೆ ಬಾರದೇ ಎಲ್ಲರೂ ನಿಂತಲ್ಲೇ ನಿಂತಿದ್ದರು. ಕಳ್ಳ ಓಡಿ ಹೋದ ನಂತರ ಹತ್ತಿರ ಬಂದು ತಲೆಗೊಂದೊಂದು ಮಾತಾಡತೊಡಗಿದ್ದರು. ನಾನು ಕಳ್ಳನನ್ನು ಹಿಡಿದಿದ್ದಾಗಲೀ, ಅವನಿಂದ ನನ್ನ ಪರ್ಸ್ ಪಡೆದ್ದಾಗಲೀ, ಕೆಲವರಿಗೆ ಮುಖ್ಯವಾಗದೇ ನಾನು ಅವನನ್ನು ಒಂದೆರಡು ಹೆಜ್ಜೆ ಓಡಿಸಿಕೊಂಡು ಹೋಗಿದ್ದೇ ತಪ್ಪಾಗಿತ್ತು. ಸುಮ್ಮನೆ ಕಳ್ಳರನ್ನು ಹಿಡಿದು ಅವನನ್ನು ಪೋಲೀಸರಿಗೆ ಒಪ್ಪಿಸಿ ದೂರು ಗೀರು ನೀಡುತ್ತಾ ಕೂತರೆ ನಮ್ಮ ಸಮಯವೆಲ್ಲಾ ಹಾಳಾಗುತ್ತಿತ್ತು, ಹೇಗೋ ಪರ್ಸ್ ಸಿಕ್ಕಿತಲ್ಲಾ ಅವನನ್ನು ಓಡಿಸಿಕೊಂಡು ಹೋಗಬಾರದಿತ್ತೆಂಬ ಉದಾರ ನಿಲುವು ಹಲವರದ್ದಾಗಿತ್ತು. ನಮ್ಮೊಡನಿದ್ದ ಬಂಗಾಳಿ ಅರಬಿಂದೋ ರಾಯ್ ಅವರಂತೂ ಹತ್ತಿರ ಬಂದು ನನ್ನನ್ನು ಅಪ್ಪಿಕೊಂಡವರೇ ’ಬಹುತ್ ಅಚ್ಚಾ ಕಿಯಾ ತುಮ್ನೇ, ತುಮಾರಾ ಪರ್ಸನಾಲಿಟೀ ದೇಕ್ಕೇ ಡರ್ ಗಯಾ ಓ ಬದ್ಮಾಷ್ ಲೋಗ್’ ಎಂದು ಹರ್ಷ ವ್ಯಕ್ತಪಡಿಸಿದರು. ರಾಜೇಗೌಡರಂತೂ ’ಅವರು ನಿಮ್ಮನ್ನು ನೋಡಿ ಪರ್ಸ್ ವಾಪಸ್ಸು ಕೊಟ್ಟಿದ್ದಾರೆ, ನಾನಾಗಿದ್ದರೆ ತಳ್ಳಿ ಓಡಿ ಬಿಡುತ್ತಿದ್ದರು! ಹೇಗೋ ಕಂಡು ಹಿಡಿದು ಪರ್ಸ್ ವಾಪಸ್ ಪಡೆದಿರಲ್ಲಾ ಬಿಡಿ’ ಎಂದು ಆ ಕಳ್ಳರ ಪ್ರಯೋಗ ತಮ್ಮ ಮೇಲಾಗದ್ದಕ್ಕೆ ಖುಷಿಯಾದರು.
ಬೆಲ್ಜಿಯಂ ನಲ್ಲಿ ಸುತ್ತಾಡಿ ಬಸ್ ಬಳಿಗೆ ಬಂದು ಕೂತಾಗ ಮತ್ತೆ ಕಳ್ಳರ ಘಟನೆ ಮನಸ್ಸಿನಲ್ಲಿ. ನಮ್ಮ ಜತೆಯಿದ್ದವರು ಕೆಲವರು ಕಳ್ಳನನ್ನು ಅಟ್ಟಿಸಿಕೊಂಡು ಹೋದದ್ದೇ ತಪ್ಪೆಂಬಂತೆ ಮಾತಾಡಿದ್ದು ಕಂಡು ನನಗೆ ನಗು ಬಂದಿತ್ತು. ಇದು ನಮ್ಮ ಬೆಂಗಳೂರಿನಲ್ಲಿ ನಡೆದಿದ್ದಲ್ಲಿ ಕಳ್ಳನಿಗೆ ಯಾವ ರೀತಿ ಧರ್ಮದೇಟುಗಳು ಬೀಳುತ್ತಿತ್ತವೆಂಬುದಕ್ಕೆ ಹಳೇ ಘಟನೆಯೊಂದು ನೆನಪಾಗಿತ್ತು. ಈ ಯೂರೋಪಿನ ಹೈಟೆಕ್ ಜೇಬು ಕಳ್ಳರಂತೆ ನಮ್ಮಲ್ಲಿ ಯಾವನೇ ಜೇಬುಗಳ್ಳ ಬಂದು ತನ್ನನ್ನು ಪರಿಚಯಿಸಿಕೊಂಡು, ಸ್ನೇಹ ಮಾಡಿಕೊಂಡು ಜೇಬಿಗೆ ಕೈಹಾಕುವುದಿಲ್ಲ. ನಮ್ಮ ಜೇಬುಗಳ್ಳರದ್ದೇನಿದ್ದರೂ ಜನಜಂಗುಳಿಯಿರುವೆಡೆಯಲ್ಲೇ ನಡೆಯುವಂತ ತೆರೆಮರೆಯ ಕಸರತ್ತು. ಕಿಕ್ಕಿರಿದು ತುಂಬಿರುವ ಬೆಂಗಳೂರಿನ ಸಿಟಿ ಬಸ್ಸುಗಳು, ಜಾತ್ರೆಗಳು, ರಾಜಕಾರಣಿಗಳು ನಡೆಸುವ ರ‍್ಯಾಲಿಗಳು, ಬೆಂಗಳೂರಿನ ಸಂಡೇ ಬಜಾರು ಹೀಗೆ ಅತ್ಯಂತ ಜನ ಸೇರುವ ಜಾಗಗಳೇ ಅವರ ಅದಾಯದ ಮೂಲ. ಹಿಂದೆ ಸಿನಿಮಾ ಥಿಯೇಟರುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದರಾದರೂ ಈಗೀಗ ಕನ್ನಡ ಸಿನಿಮಾಗಳನ್ನು ನೋಡುವುದಕ್ಕೆ ಜನರೇ ಕಡಿಮೆಯಾಗಿರುವುದರಿಂದ ಜೇಬುಗಳ್ಳರು ಅತ್ತ ಕಡೆ ತಲೆಯೂ ಹಾಕುವುದಿಲ್ಲ.
 
ಹಲವು ವರ್ಷದ ಹಿಂದೆ ಕೆಲಸದ ನಿಮಿತ್ತ ಬೆಂಗಳೂರಿನ ಜನಜಂಗುಳಿಯ ಪ್ರದೇಶ ಕಲಾಸಿಪಾಳ್ಯಕ್ಕೆ ಹೋಗಿದ್ದೆ. ಅಲ್ಲಿ ಒಂದಿಬ್ಬರನ್ನು ಬಸ್ಸಿನಿಂದ ಕೆಳಗೆ ಎಳೆದು ತಂದು ಜನರು ತಾರಾಮಾರಾ ಬಡಿಯುತ್ತಿರುವುದು ಕಂಡು ಬಂತು. ಇಂಥಾ ಘಟನೆಗಳನ್ನು ಹತ್ತಿರದಿಂದ ನೋಡುವ ಕೆಟ್ಟ ಕುತೂಹಲ ನನ್ನದ್ದು. ಅವರು ಪಿಕ್ ಪಾಕೆಟ್ ಕಳ್ಳರೆಂದೂ, ಬಸ್ಸಿನಲ್ಲಿ ಪ್ರಯಾಣಿಕರೊಬ್ಬರ ಪರ್ಸ್ ಕದಿಯುವಾಗ ಸಿಕ್ಕಿ ಬಿದ್ದಿದ್ದಾರೆಂದೂ ಅಲ್ಲಿದ್ದವನೊಬ್ಬ ಹೇಳಿದ. ಹಾಗೆ ಹೇಳಿದವನೇ ತಾನೂ ಜನರೊಂದಿಗೆ ಸೇರಿಕೊಂಡು ಆ ಕಳ್ಳರಿಗೆ ನಾಲ್ಕು ಬಾರಿಸಿದ. ’ನೀನೂ ಆ ಬಸ್ಸಿನಲ್ಲಿದ್ದೆಯಾ?’ ಎಂದು ನಾನವನನ್ನು ಕೇಳಿದೆ. ಅದಕ್ಕಾತ ’ಇಲ್ಲ ಸಾರ್, ನಾನೆಲ್ಲೋ ಹೋಗ್ತಿದ್ದೆ, ಇಲ್ಲಿ ಕಳ್ರನ್ ಹಿಡಿದಿದ್ರಲ್ಲಾ...ಸುಮ್ಮನೇ ಬಿಡಬಾರದು ಈ ಕಳ್ಳ ನನ್ಮಕ್ಕಳನ್ನ. ಕಷ್ಟಪಟ್ಟು ದುಡಿದು ತಿನ್ನುವುದಕ್ಕೆ ಇವರಿಗೇನು ದಾಡಿ ಸಾರ್? ಅದಕ್ಕೇ ನಾನೂ ನಾಲ್ಕು ಬಾರಿಸಿದೆ’ ಅಂದ. ಈತ ಆ ಬಸ್ಸಿನಲ್ಲಿರಲಿಲ್ಲ, ಕಳ್ಳರಿಂದ ಪಿಕ್ ಪಾಕೆಟ್ ಮಾಡಿಸಿಕೊಂಡ ವ್ಯಕ್ತಿಯೂ ಇವನಿಗೆ ಗೊತ್ತಿದ್ದವನಲ್ಲ. ಇವನಿಗೂ ಆ ಘಟನೆಗೂ ಯಾವುದೇ ಸಂಬಂಧವಿರಲಿಲ್ಲ. ಆದರೂ ತನ್ನದೇ ಹಣ ಕಳವು ಮಾಡಿದರೆಂಬಂತೆ ಆ ಕಳ್ಳರಿಗೆ ತಾನೂ ಬಾರಿಸಿದ್ದ. ಸುತ್ತಮುತ್ತ ನಿಂತಿದ್ದವರೆಲ್ಲರೂ ನನ್ನದೂ ಒಂದಿರಲಿ ಎಂಬಂತೆ ಆ ಕಳ್ಳರಿಗೆ ಬಾರಿಸಿ ಹೋಗುತ್ತಿದ್ದರು. ಯಾರಿಗೆ ಯಾರ ಮೇಲೆ ಕೋಪವಿತ್ತೋ? ಮನೆಯಲ್ಲಿ ಹೆಂಡತಿಯೊಂದಿಗೆ ಮುನಿಸಿಕೊಂಡು ಬಂದಿದ್ದವರೆಲ್ಲಾ ತಮ್ಮ ಹೆಂಡತಿಯರಿಗೆ ಹೊಡೆಯಲಾಗದ ಸಿಟ್ಟನ್ನೆಲ್ಲಾ ಈ ಕಳ್ಳರ ಮೇಲೇ ತೀರಿಸಿಕೊಂಡಂತಿತ್ತು. ಕೆಲವರು ಆ ಗುಂಪಿನೊಳಗೆ ನುಗ್ಗಿ ಕಳ್ಳರಿಗೆ ಹೊಡೆಯಲಾಗದ್ದಕ್ಕೆ ಛೇ, ಎಂಥಾ ಅವಕಾಶ ತಪ್ಪಿಹೋಯಿತೆಂದುಕೊಳ್ಳುತ್ತಾ ಹೊಡೆಯುತ್ತಿದ್ದವರನ್ನೇ ಇನ್ನೂ ನಾಲ್ಕು ಬಾರಿಸಿ ಆ ಸೂ..... ಮಕ್ಳಿಗೆ ಎಂದು ತಮ್ಮ ಪರವಾಗಿ ನಾಲ್ಕೇಟು ಹೆಚ್ಚಿಗೆ ಬೀಳುವಂತೆ ಮಾಡಿ ಕಳ್ಳರಿಗೆ ಹೊಡೆಯುವಲ್ಲಿ ತಮ್ಮ ಪಾಲು ಸಂದಾಯವಾಯಿತೆಂದುಕೊಂಡು ಮುಂದಕ್ಕೆ ಹೋಗುತ್ತಿದ್ದರು. ಕಳ್ಳರಿಗೆ ಹೊಡೆದು ಸುಸ್ತಾದ ಕೆಲವರು ಆ ಕೆಲಸವನ್ನು ಅಲ್ಲಿಗೆ ಬರುವ ಹೊಸಬರಿಗೆ ಒಪ್ಪಿಸಿ ತಾವು ಹೋಗುತ್ತಿದ್ದರು. ಒಂದು ತರದಲ್ಲಿ ರಿಲೇ ಓಟದಂತೆ ಈ ಕಳ್ಳರಿಗೆ ಹೊಡೆಯುವ ಕೆಲಸ ಮುಂದುವರೆದಿತ್ತು.
 
ಅಷ್ಟರಲ್ಲಿ ಅಲ್ಲಿಗೆ ಬಂದ ಪೋಲೀಸನೊಬ್ಬ ಆ ಕಳ್ಳರನ್ನು ಪೋಲೀಸ್ ಠಾಣೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ. ಆಗ ಅಲ್ಲಿದ್ದ ಜನರ ಕೋಪವೆಲ್ಲಾ ಪೋಲೀಸನ ವಿರುದ್ದ ತಿರುಗಿತ್ತು ಅವರಲ್ಲಿ ಕೆಲವರು ಕೂಗಾಡುತ್ತಾ ’ಏನ್ರೀ, ನೀವು ಹಿಡಿದಿದ್ದೀರೆನ್ರೀ, ಯಾವನಾದ್ರೂ ಒಬ್ಬ ಪಿಕ್ ಪಾಕೆಟ್ ಮಾಡುವವನನ್ನು ನೀವಾಗಿ ನೀವೇ ಹಿಡಿದಿದ್ದೀರಾ? ನಾವು ಹಿಡಿದುಕೊಟ್ಟ ಮೇಲೆ ಬರ್ತೀರಾ, ಸ್ಟೇಷನ್ನಿಗೆ ಕರಕೊಂಡು ಹೋಗಿ ನಿಮ್ಮ ವ್ಯವಹಾರ ಮುಗಿಸಿಕೊಂಡು ಬಿಟ್ಟು ಕಳಿಸ್ತೀರಾ, ಅಷ್ಟೇ ನೀವು ಮಾಡುವುದು, ಕರಿಸ್ರೀ ನಿಮ್ಮ ಕಮೀಷನರ್ ನ ಇಲ್ಲಿಗೆ, ಅಲ್ಲೀವರ್ಗೂ ನಾವು ಈ ಕಳ್ಳರನ್ನು ಬಿಡುವುದಿಲ್ಲ’ ಎಂದು ಕೂಗಾಡಿದ್ದರು. ಆ ಪೇದೆ ಒಬ್ಬನೇ ಬಂದಿದ್ದರಿಂದ ಏನನ್ನೂ ಮಾಡಲಾಗದೇ, ಈ ಜನರೆದುರು ಆ ಕಳ್ಳರ ಕೃತ್ಯದಲ್ಲಿ ತಾನೂ ಪಾಲುದಾರ ಅನ್ನಿಸಿಕೊಳ್ಳಬೇಕಾಯಿತಲ್ಲಾ ಎಂಬ ಬೇಸರದಿಂದ ಜಾಗ ಖಾಲಿ ಮಾಡಿದ್ದ. ಹಾಗೆ ಪೋಲಿಸನನ್ನು ದಬಾಯಿಸಿ ಕಳಿಸಿದ್ದರಿದ ನೆರೆದಿದ್ದ ಜನ ಪೋಲೀಸನ ಮೇಲಿನ ಸಿಟ್ಟನ್ನೂ ಆ ಕಳ್ಳರ ಮೇಲೆ ತೀರಿಸಿಕೊಳ್ಳತೊಡಗಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಕಳ್ಳರ ವಿಷಯ ತಿಳಿದವನೇ ಕೆಂಡಾಮಂಡಲವಾಗಿ ಜನರನ್ನು ಭೇದಿಸಿಕೊಂಡು ಮುನ್ನುಗ್ಗಿ ಆ ಕಳ್ಳರಿಗೆ ಮನಬಂದಂತೆ ಬಡಿಯತೊಡಗಿದ್ದ. ಅವನು ಕೂಗಾಡುತ್ತಾ ಬಡಿಯುವುದನ್ನು ಕಂಡ ಜನ ಅವನ ಹಣವನ್ನೇ ಕಳ್ಳರು ಕದ್ದಿರಬಹುದೆಂದು ಮಾತಾಡಿಕೊಳ್ಳತೊಡಗಿದ್ದರು. ಆ ಕಳ್ಳರಿಗೆ ಬಡಿದು ಸುಸ್ತಾಗಿ ಬೀಡಿ ಸೇದಿ ಸುಧಾರಿಸಿಕೊಳ್ಳಲು ಬಂದವನ್ನು ’ನಿಮ್ಮದೇನಾ ಹಣ ಕಳುವಾಗಿದ್ದು? ಎಷ್ಟು ಕದ್ದರು?’ ಎಂದು ಕೇಳಿದೆ. ಅದಕ್ಕಾತ ’ಸಾರ್, ಈ ಸೂ.... ಮಕ್ಳನ್ನ ಒಂದು ವರ್ಷದಿಂದ ಹುಡುಕ್ತಿದ್ದೆ, ಇದೇ ಬಸ್ಸಿನಲ್ಲಿ ನನ್ನ ಐನೂರು ರೂಪಾಯಿ ಎಗರಿಸಿದ್ದರು, ಈ ನನ್ನ ಮಕ್ಳು ಇವತ್ತು ನನ್ನ ಕೈಗೆ ಸಿಕ್ಕಿದ್ದಾರೆ ಇವ್ರನ್ನ ನಾನು ಬಿಡ್ತೀನಾ?’ ಎಂದ. ’ಒಂದು ವರ್ಷದ ಹಿಂದೆ ನಿನ್ನ ಪರ್ಸ್ ಎಗರಿಸಿದ್ದವರು ಇವರೇನಾ?,’ ಎಂದು ಕೇಳಿದೆ. ಅದಕ್ಕಾತ ’ ಇವರಂಗೇ ಇದ್ರು ಸಾರ್,’ ಅಂದ. ’ಮತ್ತೆ ಅವತ್ಯಾಕ್ರಿ ಅವರನ್ನ ಹಿಡೀಲಿಲ್ಲ’ ಅಂದದ್ದಕ್ಕೆ, ’ಅಯ್ಯೋ, ಅವರನ್ನ ನೋಡಿದ್ರೆ ಬಿಡ್ತಿದ್ನಾ, ನಾನು ಬಸ್ಸಿಂದ ಇಳಿದ ಮೇಲೇ ನನ್ನ ಹಣ ಎಗರಿಸಿದ್ದು ಗೊತ್ತಾಗಿದ್ದು ಸಾರ್, ತುಂಬಾ ಚಾಲಾಕಿಗಳು ಈ ಸೂ....ಮಕ್ಳು, ಬಿಡಬಾರದು ಸಾರ್’ ಎಂದು ಹೇಳಿದವನೇ ಒಂದು ವರ್ಷದ ಹಿಂದೆ ಕಳೆದುಕೊಂಡ ಐನೂರು ರೂಪಾಯಿ ನೆನಪಾಗಿ ಮತ್ತೆ ಕಳ್ಳರಿಗೆ ಬಾರಿಸಲು ಹೋದ.
 
ಒಂದು ವರ್ಷದ ಹಿಂದೆ ಈತನ ಹಣವನ್ನು ಯಾರು ಎಗರಿಸಿದ್ದರೋ, ಅವರ ಮುಖವನ್ನೂ ನೋಡಲಿಲ್ಲವೆಂದು ಹೇಳುವ ಈತ ತನ್ನ ಐನೂರು ರೂ ಕದ್ದಿದ್ದ ಆ ಕಳ್ಳರಿಗಾಗಿ ಒಂದು ವರ್ಷದಿಂದ ಕೆಲಸ ಕಾರ್ಯವನ್ನೆಲ್ಲಾ ಬಿಟ್ಟು ಹುಡುಕುತ್ತಿದ್ದವನಂತೆ ಮಾತನಾಡಿದ್ದ. ಈಗ ಸಿಕ್ಕಿ ಬಿದ್ದಿರುವ ಕಳ್ಳರೇ ತನ್ನ ಹಣವನ್ನೂ ಕದ್ದವರೆಂದು ಈತನೇ ನ್ಯಾಯಾದೀಶನಂತೆ ತೀರ್ಪು ನೀಡಿ ಅದಕ್ಕೆ ದಂಡನೆಯನ್ನೂ ಕೊಟ್ಟುಬಿಟ್ಟಿದ್ದ. ಅಂತೂ ಅಲ್ಲಿ ಬರುವವರೆಲ್ಲಾ ಕೊಟ್ಟ ಧರ್ಮದೇಟಿನಿಂದಾಗಿ ಆ ಇಬ್ಬರೂ ಕಳ್ಳರೂ ಹೈರಾಣಾಗಿದ್ದರು. ಅಷ್ಟರಲ್ಲಿ ಪೋಲಿಸ್ ಜೀಪೊಂದು ಬಂದು, ನಿತ್ರಾಣರಾಗಿದ್ದ ಕಳ್ಳರನ್ನು ಜನರಿಂದ ಬಿಡಿಸಿಕೊಂಡು ಜೀಪಿನೊಳಕ್ಕೆ ಎತ್ತಾಕಿಕೊಂಡು ಹೋದರು. ಕಳ್ಳರನ್ನು ಹೊಡೆದು ಸುಸ್ತಾಗಿದ್ದವರು, ಹೊಸದಾಗಿ ಕಳ್ಳರನ್ನು ಹೊಡೆಯಲು ಬಂದು ಅವಕಾಶ ವಂಚಿತರಾದವರೆಲ್ಲಾ ಕಳ್ಳರೊಟ್ಟಿಗೆ ಪೋಲೀಸರಿಗೂ ಮನಸಾರೆ ಬೈದು ಅಲ್ಲಿಂದ ಕದಲಿದ್ದರು.
ನಮ್ಮೂರಿನ ಘಟನೆ ನೆನಪಾಗಿ ನನ್ನಲ್ಲೇ ನಕ್ಕಿದ್ದೆ. ಇಲ್ಲಿ ಯೂರೋಪಿನ ಜೇಬುಗಳ್ಳರು ರೆಡ್ ಹ್ಯಾಂಡಾಗಿ ಸಿಕ್ಕಿದ್ದರೂ ಕೆಲವರು ಅವರಿಗೆ ಬೈದದ್ದು, ಅಟ್ಟಿಸಿಕೊಂಡು ಹೋದದ್ದೇ ತಪ್ಪೆನ್ನುವಂತೆ ಮಾತಾಡಿದ್ದರು! ನಾನು ಕಳ್ಳನ ಬಳಿ ಹೋಗಿ ’ಸಾರ್, ಪ್ಲೀಸ್ ಗೀವ್ ಮೈ ಪರ್ಸ್, ಪ್ಲೀಸ್, ಪ್ಲೀಸ್...ಪ್ಲೀಸ್’ ಎಂದು ಕೇಳಿದ್ದರೆ ಆ ಕಳ್ಳ ನನ್ನ ಪರ್ಸ್ ಕೊಡುತ್ತಿದ್ದನಾ?? ನಮ್ಮೂರಿನ ಕಳ್ಳರಿಗೆ ಹೋಲಿಸಿದರೆ ಯೂರೋಪಿನ ಈ ಹೈಟೆಕ್ ಕಳ್ಳರು ದಡ್ಡರೆಂದೇ ನನಗನಿಸಿತು. ಅವರೇ ಬಂದು ಪರಿಚಯಿಸಿಕೊಂಡು ಡಾನ್ಸ್ ಗೀನ್ಸ್ ನಾಟಕವಾಡಿ ಕದಿಯುತ್ತಿದ್ದರಿಂದ ಅವರ ಮುಖ ಪರಿಚಯ ಚೆನ್ನಾಗಿ ಅಚ್ಚಾಗುತ್ತಿತ್ತು. ಹಣ ಕಳೆದುಕೊಂಡದ್ದು ಕೂಡಲೇ ಗೊತ್ತಾದಲ್ಲಿ ಅವರನ್ನು ಹಿಡಿಯುವುದು ಸುಲಭವಾಗಿತ್ತು. ನಮ್ಮೂರಿನಂತಾಗಿದ್ದರೆ ನನಗೆ ಈ ಕಳ್ಳರನ್ನು ಪತ್ತೆ ಹಚ್ಚುವುದು ಸಾಧ್ಯವೇ ಇರಲಿಲ್ಲ.
 
ನನ್ನನ್ನು ಕಾಡಿದ ಮತ್ತೊಂದು ಪ್ರಶ್ನೆಯೆಂದರೆ ಆ ರೊಮೇನಿಯಾದ ಕಳ್ಳ ನನ್ನ ಪರ್ಸ್ ಹಿಂದಿರುಗಿಸುವಾಗ ಜೋರಾಗಿ ಶಿಳ್ಳೆ ಹೊಡೆದು ಆ ಪರ್ಸ್ ಹಿಡಿದಿದ್ದ ಕೈ ಮೇಲೆಕ್ಕೆತ್ತಿ ತನ್ನ ಸಹಪಾಠಿಗಳಿಗೆ ತೋರಿಸಿದ್ದು! ಅದನ್ನೇ ಯೋಚಿಸುತ್ತಿದ್ದವನಿಗೆ ಈ ಪಿಕ್ ಪಾಕೆಟ್ ಮಾಡುವವರ ಬಗ್ಗೆ ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ನನ್ನ ಸ್ನೇಹಿತನೊಬ್ಬ ಹೇಳಿದ್ದ ವಿಷಯಗಳನ್ನು ನೆನಪಿಸಿಕೊಂಡ ನಂತರವೇ ಉತ್ತರ ಹೊಳೆದದ್ದು. ಈ ಪಿಕ್ ಪಾಕೆಟ್ ಮಾಡುವ ಕದೀಮರು ಒಬ್ಬೊಬ್ಬರೇ ಕಾರ್ಯಾಚರಣೆ ನಡೆಸುವುದಿಲ್ಲ, ಐದಾರು ಜನರ ಗುಂಪು ಒಟ್ಟಿಗೇ ಕಾರ್ಯಪ್ರವ್ರತ್ತರಾಗುತ್ತಾರೆ. ಹಣವಿಟ್ಟವನಂತೆ ಕಾಣುವ ಯಾವನಾದರೂ ಮಿಕವನ್ನು ಇವರೆಲ್ಲಾ ಒಟ್ಟಿಗೇ ಸ್ಟಡಿ ಮಾಡಿಯೇ ಆರಿಸಿಕೊಳ್ಳುವುದು. ಪರ್ಸ್ ಎಗರಿಸುವುದರಲ್ಲಿ ನಿಪುಣನಾದವನನ್ನು ಮುಂದೆ ಬಿಟ್ಟು ಅವನನ್ನು ಇವರೆಲ್ಲಾ ಅನುಸರಿಸುತ್ತಿರುತ್ತಾರೆ. ಹಣವಿರುವ ಪರ್ಸ್ ಅನ್ನು ಎಗರಿಸಿದ ನಂತರ ಅದು ಒಬ್ಬೊಬ್ಬರಿಂದ ಕೈ ಬದಲಿಸಿಬಿಡುತ್ತದೆ. ಪರ್ಸ್ ಎಗರಿಸಿದವನು ಯಾವುದೇ ಅಪಾಯಕ್ಕೆ ಸಿಲುಕಿಕೊಳ್ಳದೆ ಹಿಂದಿರುವುವವರೆಗೂ ಇವರೆಲ್ಲಾ ಆತನ ಮೇಲೆ ಕಣ್ಣಿಟ್ಟಿರುತ್ತಾರೆ. ಪಿಕ್ ಪಾಕೆಟ್ ಮಾಡುವವರಲ್ಲಿ ಕೆಲವು ಅಲಿಖಿತ ನಿಯಮಗಳಿರುತ್ತವೆ. ಅವುಗಳನ್ನು ಮಾತ್ರ ಆ ಕಳ್ಳರು ತಮ್ಮೊಳಗೆ ತಪ್ಪದೇ ಪಾಲಿಸುತ್ತಾರೆ. ಎಗರಿಸಿದ ಪರ್ಸ್ ಅನ್ನು ಒಬ್ಬನೇ ಕಳ್ಳ ತೆಗೆದು ನೋಡುವಂತಿಲ್ಲ. ಅದನ್ನು ಗುಂಪಿನ ಸದಸ್ಯರೆಲ್ಲರೂ ಸೇರಿದಾಗಲೇ ತೆಗೆಯಬೇಕು. ಏಕೆಂದರೆ ಅದರಲ್ಲಿರುವ ಹಣ ಎಲ್ಲರಿಗೂ ಸಮನಾಗಿ ಹಂಚಿಕೆಯಾಗಬೇಕಿರುವುದರಿಂದ, ಒಬ್ಬನೇ ತೆಗೆದಲ್ಲಿ ಅವನೂ ಕೊಂಚ
ಹಣವನ್ನು ಎಗರಿಸಿ ಸುಳ್ಳು ಲೆಕ್ಕ ಕೊಡುವ ಸಂಭವವಿರುವುದರಿಂದ ಅದಕ್ಕೆ ಆಸ್ಪದ ಕೊಡದೇ ಎಲ್ಲರ ಸಮ್ಮುಖದಲ್ಲಿಯೇ ಹಣವನ್ನು ಎಣಿಸಿ ಹಂಚಿಕೊಳ್ಳಬೇಕಿತ್ತು.
ಇಲ್ಲಿ ಬೆಲ್ಜಿಯಂ ನಲ್ಲಿಯೂ ಅದೇ ನಿಯಮಗಳಿದ್ದಿರಬಹುದು, ವಂಚಕರುಗಳದ್ದೇ ಒಂದು ಪ್ರಪಂಚವಾದ್ದರಿಂದ ಪ್ರಪಂಚದಾದ್ಯಂತ ಇರುವ ಎಲ್ಲಾ ಪಿಕ್ ಪಾಕೆಟ್ ಕಳ್ಳರಲ್ಲಿಯೂ ಸಮಾನವಾದ ಅಲಿಖಿತ ನಿಯಮಗಳಿರಬದೆಂದು ನಾನು ಊಹಿಸಿದೆ. ನನ್ನ ಪರ್ಸ್ ಎಗರಿಸಿದ್ದ ಕಳ್ಳ ಪರ್ಸ್ ಹಿಂದಿರುಗಿಸುವಾಗ ಶಿಳ್ಳೆ ಹಾಕಿ ದೂರದಲ್ಲಿದ್ದ ಸಹಕಳ್ಳರಿಗೆ ಅದನ್ನು ತೋರಿಸಿ ನಂತರ ನನಗೆ ಕೊಟ್ಟು ಓಡಿದ್ದು ಇದೇ ಅಲಿಖಿತ ನಿಯಮದ ಒಂದು ಭಾಗವಿರಬಹುದು. ಒಂದು ವೇಳೆ ಆತ ಅದನ್ನು ಅವರಿಗೆ ತೋರಿಸದೇ ನನಗೆ ಹಿಂದಿರುಗಿಸಿದ್ದಲ್ಲಿ ತಮಗೆ ಮೋಸ ಮಾಡಲು ಸುಳ್ಳು ಹೇಳುತ್ತಿದ್ದಾನೆಂದು ತನ್ನ ಸಹಪಾಠಿಗಳಿಂದಲೇ ಅವನಿಗೆ ಧರ್ಮದೇಟುಗಳು ಬೀಳುವುದು ಖಾತರಿಯಾಗಿತ್ತು. ಅವನು ಹಾಗೇ ಕೊಟ್ಟುಬಿಟ್ಟು ನಂತರ ಅವನ ಸಂಗಡಿಗರಿಗೆ ಹೇಳಿದ್ದಲ್ಲಿ ಅವರು ಯಾವುದೇ ಕಾರಣಕ್ಕೂ ನಂಬುತ್ತಿರಲಿಲ್ಲ. ಆಗ ನನ್ನನ್ನು ಹುಡುಕಿ ಅವರನ್ನು ನನ್ನ ಬಳಿ ಕರೆದುಕೊಂಡು ಬಂದು ಪರ್ಸ್ ವಾಪಸ್ ಕೊಟ್ಟದ್ದರ ಬಗ್ಗೆ ನನ್ನಿಂದ ಸಾಕ್ಷಿ ಹೇಳಿಸುವುದು ಸಾಧ್ಯವಾಗದ ಕೆಲಸವಾಗಿದ್ದರಿಂದ ಧರ್ಮದೇಟು ತಿನ್ನುವ ಉಸಾಬರಿಯೇ ಬೇಡವೆಂದು ಅವನು ಅವರೆಲ್ಲರಿಗೂ ಗೊತ್ತಾಗುವಂತೆಯೇ ಮಾಡಿ ನನ್ನ ಪರ್ಸ್ ಹಿಂದಿರುಗಿಸಿದ್ದ. ವಿಶ್ವದಾದ್ಯಂತ ಇರುವ ಪಿಕ್ ಪಾಕೆಟ್ ಕಳ್ಳರೆಲ್ಲರೂ ಯೂನಿವರ್ಸಲ್ ಆಗಿರುವ ಕಳ್ಳತನದ ಅಲಿಖಿತ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದನ್ನು ಕಣ್ಣಾರೆ ಕಂಡ ನನಗೆ ಅಚ್ಚರಿಯಾಗಿತ್ತು. ’ಲುಕ್ ಅಟ್ ದಟ್ ಬ್ಯೂಟಿಫುಲ್ ಚರ್ಚ್’ ಎಂದು ಜ್ಯೂಜರ್ ಮೈಕಿನಲ್ಲಿ ಹೇಳಿದಾಗಲೇ ಪಿಕ್ ಪಾಕೆಟ್ ಪ್ರಪಂಚದ ಬಗ್ಗೆಯೇ ಯೋಚಿಸುತ್ತಿದ್ದ ನಾನು ಬೆಲ್ಜಿಯಂ ನಗರದ ಪ್ರದಕ್ಷಿಣೆ ವೀಕ್ಷಿಸಲು ರೆಡಿಯಾಗಿ ಕೂತೆ.
(ಮುಂದುವರಿಯುವುದು)  
 
 

 

 
 
 
 
 
 
 
 
 
Copyright © 2011 Neemgrove Media
All Rights Reserved