(ಪುಟ ೧೬)

 

ತೈಥಕ ಥಕಥಕ ಕುಣೀಸುತಲಿತ್ತಾ... ಮ್ಯಾಕ್ರೋ ಶಾಪಿಂಗ್ ಮಾಡಿಸುತಿತ್ತಾ...ಹಸಿರೂ ಕಾಂಚಾಣಾ!!

ಬೇಲಾ ಮರವ೦ತೆ
 
ಬರೆಯಬೇಕು, ಒಂದು ಅಂಕಣಕ್ಕೆ ದಾಖಲಿಸಬೇಕು ಎಂದು ಕೂತು ನಾನೂ ಒಂದೊಂದಾಗಿ ನನ್ನ ಅಮೆರಿಕಾ ವಾಸದ ಹೊಸತಿನ ನೆನಪುಗಳನ್ನು ಹೆಕ್ಕಿ ತೆಗೆಯುತ್ತಿದ್ದೇನೆ. ಕೆಲವೊಮ್ಮೆ ವರ್ತಮಾನವನ್ನು ಬರೆಯಬೇಕೆನಿಸುತ್ತದೆ. ಈಗ ಎರಡು ವರ್ಷಗಳಿಂದ ಆಗುತ್ತಿರುವ ಎಕನಾಮಿಕ್ ರಿಸೆಷನ್ ಇಲ್ಲಿನ ಜನ-ಮನೆಗಳಿಗೆ ಹೇಗೆ ಪರಿಣಾಮ ಬೀರಿದೆ ಎಂದು ನಾನು ಕಂಡದ್ದನ್ನು ಹಂಚಿಕೊಳ್ಳಬೇಕು ಎನ್ನಿಸುತ್ತಿದೆ. ಅಮೆರಿಕಾದಲ್ಲಿ ವಾಸವಾಗಿರುವ ನಾನು ಇದುವರೆಗೂ ಕಾಣುತ್ತಾ ಬಂದಿರುವ ಭಾರತೀಯ ಕುಟುಂಬಗಳ ಜೀವನ ಶೈಲಿ, ಅವರ ಆಯ್ಕೆಗಳು, ಅವರ ಹುಡುಕಾಟ, ಅವರ ಭಾರತ ಕುರಿತಾದ ಅದಮ್ಯ ಪ್ರೀತಿ, ಸಂಪ್ರದಾಯ-ಸಂಸ್ಕೃತಿಯ ಕಲೆಸಿಹೋಗಿರುವ ಅರ್ಥಗಳು, ಅವರ ಪೈಪೋಟಿ, ಕೆಲವೊಮ್ಮೆ ಢಾಳಾಗು ಕಾಣುವ ಸಣ್ಣತನ ಇವನ್ನೆಲ್ಲಾ ಬರೆದುಬಿಡಬೇಕು ಎನ್ನಿಸುತ್ತದೆ. ಕೆಟ್ಟದ್ದನ್ನು ಹುಡುಕಿ ಬರೆಯಬೇಕೆಂದಲ್ಲ. ಕೆಟ್ಟದ್ದು ಅತಿಯಾಗಿ ಕಾಣುವಂತಿದ್ದರೆ ಅದನ್ನು ಮುಚ್ಚಿಡುವ ಅಗತ್ಯವಿಲ್ಲವಲ್ಲಾ. ನೋಡೋಣ...ಲಹರಿ ಎಲ್ಲಿಗೆ ಹರಿಯುತ್ತದೆ...
ಅಮೆರಿಕಾ ಈಗ ನಾಲ್ಕೈದು ವರ್ಷಗಳಿಂದ ತುಂಬಾ ಫ಼ಾಸ್ಟ್ ಆಗಿ ಬದಲಾಗುತ್ತಿದೆ ಅಂತ ನನ್ನ ಭಾವನೆ. ನಾನು ಬಂದಾಗಿಂದ ನೋಡಿದ್ದನ್ನೇ ಬದಲಾವಣೆ ಎನ್ನುತ್ತಿದ್ದೇನೆ ಅಂತ ತಿಳಿದುಬಿಡಬೇಡಿ! ಸ್ವಲ್ಪ ಓದಿ, ತಿಳಿದು ಹಾಗೆ ಭಾವಿಸಿಕೊಂಡಿದ್ದೇನೆ ಅಷ್ಟೆ. ೨೦೦೦ ದಲ್ಲಿ ಡಾಟ್ ಕಾಮ್ ಟೆಕ್ನಾಲಜಿ ಢಮಾರ್ ಆಗಿ, ರಿಸೆಷನ್ ಆದಾಗಿನಿಂದ ಅಮೆರಿಕದ ಎಕಾನಮಿ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಅಥವಾ ಮೇರು ಮುಖದಲ್ಲಿ ಚಲಿಸುತ್ತಿಲ್ಲ. ಇದು ನಿಜ. ಐತಿಹಾಸಿಕವಾಗಿ ಅಮೆರಿಕಾ ಕಾಣುತ್ತಿರುವ ಬದಲಾವಣೆಗಳಲ್ಲಿ ಬರಾಕ್ ಒಬಾಮಾ ಅವರ ನಾಯಕತ್ವ ಬಹಳ ದೊಡ್ಡದು. ಒಬ್ಬ ಮುಸ್ಲಿಂ ಮೂಲದ ಕಪ್ಪು ನಾಯಕನನ್ನು ಅಮೆರಿಕಾ ಕಡೆಗೂ ಒಪ್ಪಿದ್ದು ತುಂಬಾ ಸಂತೋಷವಾದರೂ ಒಬ್ಬ ಹೆಂಗಸನ್ನು ಅಧ್ಯಕ್ಷಳನ್ನಾಗಿ ಒಪ್ಪದ ಅಮೆರಿಕನ್ನರು ನನಗೆ ಆಶ್ಚರ್ಯ ಹುಟ್ಟಿಸುತ್ತಾರೆ! ಅಮೆರಿಕಾದಲ್ಲಿ ಒಬ್ಬ ಮಹಿಳೆ ಅಧ್ಯಕ್ಷಳಾಗುವ ದಿನ ಇನ್ನು ೧೦-೨೦ ವರ್ಷದಲ್ಲಿ ಬರುವಂತಾದರೆ ನಾನು ಎಲ್ಲಿದ್ದರೂ ಸಡಗರ ಪಡುತ್ತೇನೆ. (ಹೇಳಲಾಗುವುದಿಲ್ಲ ಮಾರಾಯರೆ! ಸಾರಾ ಪೇಲಿನ್ ಯಾಕೋ ರಿಪಬ್ಲಿಕನ್ ಘಟಾನುಘಟಿಗಳನ್ನೆಲ್ಲಾ ಮಗ್ಗ ಮಲಗಿಸುವ ಪಾರ್ಟಿ ಥರ ಕಾಣುತ್ತಿದ್ದಾರೆ!).  
 
ನಾನು ಬಂದ ಹೊಸತರಲ್ಲಿ ಒಂದು ಸಂಜೆ ಪ್ರಶಾಂತ್ ನನ್ನನ್ನು ಕಾಸ್ಟ್ ಕೋ ಎನ್ನುವ ಬೃಹತ್ ಅಂಗಡಿಯೊಂದಕ್ಕೆ ಕರೆದುಕೊಂಡು ಹೋಗಿದ್ದರು. ಒಂದು ದೊಡ್ಡ ಫ್ಯಾಕ್ಟರಿಯಷ್ಟು ದೊಡ್ಡ ಅಂಗಡಿ! ಅಮೆರಿಕನ್ನರು ಬಳಸುವ ದಿನಸಿಗಳಾದ ಬ್ರೆಡ್, ಸೀರಿಯಲ್, ಬೆಣ್ಣೆ, ಚೀಜ಼್, ಮೊಸರು, ಮಾಂಸ, ಹಣ್ಣುಗಳು, ಬಟ್ಟೆ, ಚಾಕೊಲೇಟ್, ಮನೆಗೆ ಪೀಠೋಪಕರಣಗಳು, ಗಿಡಗಳು, ಕಾರಿಗೆ ಟೈರ್, ಪ್ಲಾಸ್ಟಿಕ್ ತಟ್ಟೆ ಲೋಟಗಳು, ಹಾಸಿಗೆ, ಬಟ್ಟೆ ಒಗೆಯುವ ಸೋಪು ಹೀಗೆ ಎಲ್ಲವೂ ಸಿಗುವ ಬೃಹತ್ ಅಂಗಡಿ. ನನಗೆ ಕಾಸ್ಟ್ ಕೋ ಹೊಕ್ಕಾಗ ಅದರ ಗಾತ್ರ, ಅಲ್ಲಿ ರಾಶಿ ರಾಶಿಯಾಗಿ ಪೇರಿಸಿಟ್ಟಿದ್ದ ಅಗಾಧ ಸಾಮಾನುಗಳನ್ನು ನೋಡುತ್ತಾ ಇದೇನು ಯುದ್ಧ ಕಾಲ ಬಂದರೆ ಬೇಕಾಗುತ್ತೆ ಅಂತ ಇಷ್ಟೋಂದನ್ನು ಒಟ್ಟಿಗೆ ಸ್ಟೋರ್ ಮಾಡಿಕೊಂಡು ಇಟ್ಟಿದ್ದಾರೇನಪ್ಪಾ!? ಅನ್ನುವಷ್ಟು ಆಶ್ಚರ್ಯ ಪಟ್ಟಿದ್ದೆ. ನಾನು ಕಳೆದು ಹೋಗುವ ಪಾರ್ಟಿ ಅಂತ ಈಗ ಚನ್ನಾಗಿ ಗೊತ್ತಾಗಿದ್ದ ಪ್ರಶಾಂತ ಇಡೀ ಅಂಗಡಿಯನ್ನು ನಿನ್ನದೇ ಪೇಸ್ ನಲ್ಲಿ ಆರಾಮಾಗಿ ಸುತ್ತಾಡು ಅಂತ ನನ್ನನ್ನು ಅಲ್ಲೊಂದು ಕಡೆ ಬಿಟ್ಟು, ಕೈಗೆ ಸೆಲ್ ಫೋನ್ ತಗುಲಿಸಿ ಶಾಪಿಂಗ್ ಲಿಸ್ಟ್ ಹಿಡಿದು ಅಂಗಡಿಯ ಒಳಗೆ ಹೊಕ್ಕಿದ್ದರು. (ಹೊರಗೆ ಹೋದಾಗ ನಾನು ಎಲ್ಲಾದರೂ ನೋಡುತ್ತಾ ಅಲ್ಲೇ ಕಣ್ಣು ಮೂಗು ಬಾಯಿ ಬಿಟ್ಟುಕೊಂಡು ನಿಂತು ಬಿಡುತ್ತಿದ್ದೇನಾದ್ದರಿಂದ ಪ್ರಶಾಂತನಿಂದ ಕಳೆದುಹೋಗದಿರಲಿ ಅಂತ ನನಗೊಂದು ಸೆಲ್ ಫೋನ್ ಕೊಡಿಸಲಾಗಿತ್ತು). ನೂರಾರು ಬಲ್ಬ್ ಗಳ ಬೆಳಕಿನಲ್ಲಿ ಬೆಳ್ಳಂಬೆಳಿಗ್ಗೆಯಂತೆ ಕೋರೈಸುತ್ತಿದ್ದ ಆ ಬೃಹತ್ ಸಾಮಾನು ಫ್ಯಾಕ್ಟರಿಯ ಪ್ರತಿಯೊಂದು ಐಲ್ ಗಳನ್ನೂ ಮೇಲಿಂದ ಕೆಳಕ್ಕೆ ನೋಡುತ್ತಾ ತಿರುಗಾಡಿದ್ದೆ.
 
ಮುಕ್ಕಾಲು ಗಂಟೆಯಲ್ಲಿ ಪ್ರಶಾಂತ ಕಾಲ್ ಮಾಡಿ ನಾನಿದ್ದಲ್ಲಿಗೆ ಬಂದರು. ಒಂದು ದೊಡ್ಡ ಶಾಪಿಂಗ್ ಕಾರ್ಟ್ ನ ತುಂಬಾ ಸಾಮಾನು ತಂದಿದ್ದರು. ನಮ್ಮಲ್ಲಿ ಸೀಮೆಎಣ್ಣೆ ತುಂಬಿಸಿಕೊಳ್ಳುವಂತಹ ಪ್ಲಾಸ್ಟಿಕ್ ಕ್ಯಾನ್ ಗಳನ್ನು ಹೋಲುವ ಎರಡು ಕ್ಯಾನ್ ಗಳಲ್ಲಿ ಹಾಲು ತಂದಿದ್ದರು. ದೊಡ್ಡ ಸೀರಿಯಲ್ ಡಬ್ಬ, ಇನ್ನೂ ಹಣ್ಣಾಗಲು ವಾರ ತಾಗುವ ಹಸಿರು ಬಾಳೆ ಹಣ್ಣುಗಳು, ಒಂದಷ್ಟು ದಪ್ಪಮೆಣಸಿನಕಾಯಿ, ಚಾಕೊಲೇಟ್, ಐವತ್ತು ಅರವತ್ತು ಟಿಶ್ಯೂ ಪೇಪರ್ ರೋಲ್ ಗಳ ಪ್ಯಾಕ್ ಹೀಗೇ...ಐವತ್ತು ಜನರಿಗೆ ಒಮ್ಮೆಗೇ ಅಡಿಗೆ ಮಾಡಲು ಸಾಕಾಗುವ ಸಾಮಾನುಗಳನ್ನು ತಂದಿದ್ದರು. ’ಯಾಕಪ್ಪಾ ಇಡೀ ಸ್ಯಾನ್ ಫ್ರಾನ್ಸಿಸ್ಕೋ ಜನರ ಬಮ್ ಒರೆಸುವಷ್ಟು ಟಿಶ್ಯೂ ತಂದಿದ್ದೀಯಲ್ಲಾ...ಕಮ್ಯೂನಿಟಿ ಸರ್ವಿಸ್ ಮಾಡೋಣಾ ಅಂತಲಾ ಅಥವಾ ಅಂಗಡಿ ಇಡೋಣಾ ಅಂತಲಾ?!’ ನಾನು ಗೆಳೆತನದ ಸಲುಗೆಯಿಂದ ಕಿಚಾಯಿಸಿ ಕೇಳಿದ್ದೆ. ಆಗ ಗೊತ್ತಾಗಿದ್ದು ನನಗೆ ಈ ಕಾಸ್ಟ್ ಕೋ ದ ವಿಷಯ. ಕಾಸ್ಟ್ ಕೋ ಒಂದು ಹೋಲ್ ಸೇಲ್ ಮಾರುಕಟ್ಟೆ. ಇಲ್ಲಿ ಹೆಚ್ಚು ಕೊಂಡಷ್ಟೂ ಬೆಲೆ ಕಡಿಮೆ. ಎಲ್ಲವನ್ನೂ ಬಂಡಲ್ ಬಂಡಲ್ ಗಳಲ್ಲಿಯೇ ಕೊಳ್ಳಬೇಕಿತ್ತು! ಕಾರಿನ ಟ್ರಂಕ್ ತುಂಬಿ ತುಳುಕುವಷ್ಟು ಹೋಲ್ ಸೇಲ್ ಆಗಿ ಖರೀದಿ ಮಾಡಿ ಮನೆಗೆ ಬರುವಾಗ ನಾನು ಕಾರಿನಲ್ಲಿದ್ದೆ, ಮನಸ್ಸು ಊರಿಗೆ ಬಂದಿತ್ತು.
 
ನಾವು ತುಂಬಾ ಚಿಕ್ಕವರಿರುವಾಗ ನಮ್ಮ ಮನೆಗೆ ಪಕ್ಕದ ಬೀದಿಯ ನಾಯರ್ ಅಂಗಡಿಯಿಂದ ಸಾಮಾನು ತರುತ್ತಿದ್ದೆವು. ಅಕ್ಕಿ, ರಾಗಿ, ಕೆಲವು ಕಾಳುಗಳು ಊರಿಂದ ಬಂದರೂ ಧನಿಯಾ, ಮೆಣಸಿನಕಾಯಿ, ಇತ್ಯಾದಿ ಮಸಾಲೆ, ತರಕಾರಿ, ಎಣ್ಣೆಗಳೆಲ್ಲಾ ನಾಯರ್ ಅಂಗಡಿಯಿಂದಲೇ ಸಪ್ಲೈ ಆಗುತ್ತಿತ್ತು. ತಿಂಗಳಿಗೊಮ್ಮೆ ಸಾಮಾನು ತರುವ ಅಭ್ಯಾಸ ಆಗ ಇರಲಿಲ್ಲ. ಅವತ್ತು ಬೆಳಿಗ್ಗೆ ಅಮ್ಮ ಉಪ್ಪಿಟ್ಟು ಮಾಡಲು ಡಿಸೈಡ್ ಮಾಡಿದರೆ ನಾಲ್ಕಾಣಿ ಕೊತ್ತಂಬರಿ ಸೊಪ್ಪು, ಒಂದು ನಿಂಬೆ ಹಣ್ಣು, ಒಂದು ರುಪಾಯಿಗೆ ಹಸಿಮೆಣಸಿನಕಾಯಿ, ಒಂದು ಪಾವು ಉಪ್ಪಿಟ್ಟು ರವೆ-ಅಮ್ಮ ಗಟ್ಟು ಹಾಕಿಸಿ ಕೈಗೆ ಮೂರೋ ನಾಲ್ಕೋ ರುಪಾಯಿ ಕೊಟ್ಟು ’ಚಿಲ್ಲರೆ ಜೋಪಾನ ಕಣ್ರೋ...ಸರಿಯಾಗಿ ಲೆಕ್ಕ ಹಾಕಿಕೊಂಡು ಬನ್ನಿ. ಸಾಮಾನು ಹುಷಾರು...ದಾರೀಲಿ ತೂಕಡಿಸಿ ತಪ್ ಅನ್ನಬೇಡಿ’!’ ಅಂತೆಲ್ಲಾ ಎಚ್ಚರಿಕೆ ಕೊಟ್ಟು ಕಳಿಸುತ್ತಿದರು. ನಾನು ನನ್ನ ತಮ್ಮ ನಾಯರ್ ಮುಂದೆ ನಮ್ಮ ಲಿಸ್ಟ್ ಒದರಿಬಿಟ್ಟರೆ ಸಾಕು, ಆತನೇ ರವೆಯನ್ನು ಕೋನಾಕಾರದ ಪೇಪರ್ ಚೀಲ ಕಟ್ಟಿ, ಉಳಿದ ಸಾಮಾನುಗಳನ್ನು ನಮ್ಮ ಕೈ, ಜೇಬುಗಳಲ್ಲಿ ತುಂಬಿಸಿ ಕಳಿಸುತ್ತಿದ್ದರು. ಬೆಳಿಗ್ಗೆ ಅಮ್ಮ-ಅಪ್ಪ ಸಾಮಾನು ತರಲು ಕಳಿಸಿದ ಮೂಡ್ ನೆನಪಿನಲ್ಲಿಟ್ಟುಕೊಂಡು ಅದು ಸ್ವಲ್ಪವಾದರೂ ಪ್ರಸನ್ನವಾಗಿತ್ತು ಅಂತ ನಮ್ಮ ಮನಸ್ಸಿಗೆ ಅನ್ನಿಸಿದ್ದರೆ (ಇದೊಂದು ವಿಷಯದಲ್ಲಿ, ಅವರ ಮೂಡ್ ಹೆಂಗಿದ್ದರೂ ನಾವು ಚನ್ನಾಗಿದೆ ಅಂದುಕೊಂಡುಬಿಡುತ್ತಿದ್ದೆವು) ಮುಲಾಜಿಲ್ಲದೆ ಮೂರು ಬೋಟಿಯನ್ನೋ, ಮೂರು ಹಾಲುಕೋವಾವನ್ನೋ ತೆಗೆದುಕೊಂಡು ಮನೆಗೆ ಬರುತ್ತಿದ್ದೆವು.
 
ಸಾಮಾನನ್ನು ಅಮ್ಮನಿಗೆ ಕೊಟ್ಟು, ಚಿಲ್ಲರೆಯನ್ನು ಕೊಟ್ಟಾಗ ಅಮ್ಮ ಉಳಿದದ್ದು ಎಲ್ರೋ ಅಂತ ಕೇಳಿದಾಗ ಬೆಕ್ಕಿನ ಮರಿಗಳ ಥರ ಮುಖ ಮಾಡಿಕೊಂಡು ಅವರ ಮುಖ ನೋಡುತ್ತಾ ನಿಲ್ಲುತ್ತಿದ್ದೆವು. ನಮ್ಮ ಬೆಕ್ಕಿನ ಮರಿಗಳ ಮುಖ ಸಿಕ್ಕಾಪಟ್ಟೆ ಹಿಟ್ ಆಗಿದ್ದು, ಅದರ ಮುದ್ದಿನ ಖೆಡ್ಡಾಗೆ ಅಮ್ಮ (ಅವರು ಒಪ್ಪಿಕೊಳ್ಳದಿದ್ದರೂ) ಬೀಳುತ್ತಿದ್ದರು. ನಮಗದು ಗೊತ್ತಿತ್ತು! ಬರೀ ಗದರಿಸಿ ಅಡಿಗೆ ಮನೆಯಿಂದ ಹೊರಕ್ಕೆ ಕಳಿಸಿಬಿಡುತ್ತಿದ್ದರು. ನಾವು ಸಾಮಾನು ತರಲು ಚಂಗ್ ಅಂತ ನೆಗೆದು ಬಂದಾಗಲೇ ಅಪ್ಪನಿಗೆ ನಮ್ಮ ಪ್ಲಾನ್ ಗೊತ್ತಾಗಿಬಿಡುತ್ತಿದುದರಿಂದ ಅವರು ನಮ್ಮನ್ನು ಕೇಳಿ ಮಾತು ವೇಸ್ಟ್ ಮಾಡಿಕೊಳ್ಳೂವ ಗೋಜಿಗೂ ಹೋಗುತ್ತಿರಲಿಲ್ಲ. ನಾವು ಬರೀ ಬೋಟಿ ಅಥವಾ ಹಾಲ್ಕೋವಾ ಪಾರ್ಟಿಗಳು ಅಂತ ಅವರಿಗೆ ತುಂಬಾ ನಂಬಿಕೆಯಿತ್ತು.
ಸ್ವಲ್ಪ ವರ್ಷಗಳ ನಂತರ ನಮ್ಮ ಪಕ್ಕದ ಬೀದಿಯ ನಾಯರ್ ರ ಅಂಗಡಿ ಹೊಸತನಕ್ಕೆ ತೆರೆದುಕೊಂಡು ಸ್ವಲ್ಪ ಮಾಡ್ರನ್ ಆಗಿತ್ತು. ಅಮ್ಮನೂ ನಾಲ್ಕಾಣೆ, ಎಂಟಾಣೆಗೆ ಸಾಮಾನು ತರಿಸದೆ ಎರಡು ವಾರಕ್ಕೊಮ್ಮೆ ಅಪ್ಪನ ಕೈಲಿ ಲಿಸ್ಟ್ ಕಳಿಸುತ್ತಿದ್ದರು. ನಾವು ಹಾಲ್ಕೋವ ಬೋಟಿಯಿಂದ ಚೂರು ಬೆಳೆದಿದ್ದೆವು. ಆಗಾಗ ಅಪ್ಪನೇ ಮ್ಯಾಂಗೋ ಮೂಡ್ ಅನ್ನೋ, ಜೆಮ್ಸ್ ಅನ್ನೋ ಕೊಟ್ಟು ನಮಗೇ ಚಿಕ್ಕವರ ಥರ ಟ್ರ‍ಿಟ್ ಮಾಡುತ್ತಾರಲ್ಲಾ ಎಂಬ ಮುಜುಗರ ಹುಟ್ಟಿಸುತ್ತಿದ್ದರು. ಅದಾಗಿ ಇನ್ನಷ್ಟು ವರ್ಷಗಳಾಗುವಷ್ಟರಲ್ಲಿ ನಾಯರ್ ಅಂಗಡಿ ಮುಚ್ಚಿಬಿಟ್ಟಿತು. ನಾಯರ್ ರ ಮಗ ದುಬೈ ಗೆ ಹೋಗಿ ದುಡಿಯುತ್ತಿದ್ದ. ನಾಯರ್ ’ಕೂಲ್ ಜಾಯಿಂಟ್’ ಅನ್ನುವ ಬೇಕರಿ ಓಪನ್ ಮಾಡಿದ್ದರು. ಅದಂತೂ ಪುಂಡ ಪಡ್ಡೆ ಹುಡುಗರ ಹಾಟ್ ಹಾಟ್ ಅಡ್ಡಾ ಆಗಿಬಿಟ್ಟಿದ್ದರಿಂದ ನಮ್ಮಮ್ಮ ಅಪ್ಪನ ಲಾಯಲ್ಟಿಯನ್ನು ಕಳೆದುಕೊಂಡಿತ್ತು. ಆಗ ಅಮ್ಮ ಇನ್ನೊಂದು ಅಂಗಡಿ ಹುಡುಕಿಕೊಂಡಿದ್ದರು. ಲಿಸ್ಟ್ ಕಳಿಸುತ್ತಿದ್ದರು, ಒಬ್ಬ ಹುಡುಗ ಸಾಮಾನು ತಂದುಕೊಡುತ್ತಿದ್ದ. ಅವರೂ ಮಲೆಯಾಳಿಗಳೇ. ಇದು ನಮ್ಮ ಪುಟ್ಟ ಸಂಸಾರದ ಮತ್ತು ನಮ್ಮಂತೆಯೇ ನಮ್ಮೂರಲ್ಲಿ ಇದ್ದ ಸಾವಿರಾರು ಸಂಸಾರಗಳ ಮೈಕ್ರ‍ೋ ಶಾಪಿಂಗ್. ನಾನು ಸಂಸಾರ ಶುರು ಮಾಡಿ ಅಮೆರಿಕಾದಲ್ಲಿ ಶುರು ಮಾಡಿದ್ದು ಮ್ಯಾಕ್ರ‍ೋ ಶಾಪಿಂಗ್! ಬರೀ ಕಾಸ್ಟ್ ಕೋ ದಲ್ಲಿ ಮಾತ್ರ ಅಲ್ಲ, ಎಲ್ಲೆಲ್ಲೂ! ನಾನು ಊರೊಂದರಿಂದ ಮಾರುಕಟ್ಟೆಯೊಂದಕ್ಕೆ ವಲಸೆ ಬಂದಿದ್ದೆ!!

ಯಾಕೆ ಗೊತ್ತಾ...
ಅಮೆರಿಕಾದ್ದು ಗ್ರಾಹಕರ ಮಾರುಕಟ್ಟೆ. ಕೊಳ್ಳುಗರಿಂದಲೇ ಚಲಿಸುವ, ಓಡುವ, ಮುಗ್ಗರಿಸುವ ಮಾರುಕಟ್ಟೆ. ಅದಕ್ಕೇ ಅಮೆರಿಕನ್ ಗ್ರಾಹಕನನ್ನು ಸದಾ ಗ್ರಾಹಕನನ್ನಾಗಿಯೇ ಉಳಿಸಿಕೊಂಡು, ಅವನ ಕೊಳ್ಳುವ ಹಸಿವನ್ನು ಹೆಚ್ಚಿಸಿಕೊಳ್ಳುವಂತೆ ಬೆಳೆಸಿಕೊಂಡು ಹೋದರೇ ಅಮೆರಿಕಾದ ಎಕಾನಮಿ ಎಂಬ ಚಕ್ರ ಮುಂದೆ ಸಾಗುವುದು. ಅಪ್ಪನ ದಿನ, ಅಮ್ಮನ ದಿನ, ಅಜ್ಜ ಅಜ್ಜಿಯಂದಿರ ದಿನ, ಕೆಲಸಗಾರರ ದಿನ, ಇಂಡಿಪೆಂಡೆನ್ಸ್ ಡೇ, ಕೊಲಂಬಸ್ ಡೇ, ಈಸ್ಟರ್, ವಸಂತ ಋತು ಶುರುವಾಗುವ ದಿನ, ಹೀಗೆ ತಿಂಗಳಲ್ಲಿ ೫-೬ ದಿನ ಜನರಿಗೆ ಅಂಗಡಿಗಳಿಗೆ ಹೋಗಿ ಸಾಮಾನು ಕೊಳ್ಳಲಿಕ್ಕೆ ಎಂತಲೇ ಇಲ್ಲದ ಶಾಪಿಂಗ್ ಹಬ್ಬಗಳನ್ನು ನಾನು ನೋಡಿದ್ದು ಅಮೆರಿಕಾದಲ್ಲೇ. "ವಸಂತ ಋತು ಬರುತ್ತಿದೆ ಅದಕ್ಕೆ ಈ ವರ್ಷದ ಫ್ಯಾಷನ್ ಬಣ್ಣ ಪಿಂಕ್...ಬನ್ನಿ ಒಳ್ಳೊಳ್ಳೆ ಬಟ್ಟೆಗಳನ್ನು ರಿಯಾಯಿತಿ ದರದಲ್ಲಿ ಕೊಂಡಿಟ್ಟುಕೊಳ್ಳಿ..ಈ ವರ್ಷದಲ್ಲಿ ಇಷ್ಟು ಕಮ್ಮಿ ಬೆಲೆಯಲ್ಲಿ ನಾವು ಇದೊಂದು ಬಾರಿ ಮಾತ್ರ ಮಾರುವುದು.." ಅಂತ ಫೆಬ್ರವರಿಯಲ್ಲಿ ಜಾಹೀರಾತು ಶುರು ಆಗುತ್ತದೆ. ಏಪ್ರಿಲ್ ನಲ್ಲಿ "ಬಿರು ಬೇಸಿಗೆ ಬರುತ್ತಿದೆ...ಬನ್ನಿ ಈಜುಡುಗೆಗಳನ್ನು, ಈ ಬಾರಿಯ ಬೇಸಿಗೆಯ ಹಾಟ್ ಕಲೆಕ್ಷನ್ ಗಳನ್ನು ಖರೀದಿಸಿಟ್ಟುಕೊಳ್ಳಿ...ನೀವು ೫೦ ಡಾಲರ್ ಖರ್ಚು ಮಾಡಿದರೆ ನಾವು ೧೦ ಡಾಲರ್ ವಾಪಸ್ ಕೊಡುತ್ತೇವೆ..." ಎನ್ನುತ್ತಾರೆ. ಆಗಸ್ಟ್ ನಲ್ಲಿ ಫಾಲ್ ಸೀಸನ್ ಗೆ ಹೊಸ ಬಣ್ಣ ನಿರ್ಧಾರವಾಗಿರುತ್ತದೆ. ಆಗ ಅದರ ಭರಾಟೆ. ಅದಾದ ನಂತರ ಚಳಿಗಾಲಕ್ಕೆ ಸಿದ್ಧತೆ! ಒಟ್ಟಿನಲ್ಲಿ ಅಮೆರಿಕನ್ ಗ್ರಾಹಕರಿಗೆ ಕನಸು ಕಾಣಲೂ ಪುರುಸೊತ್ತು ಅಥವಾ ಸೃಜನಶೀಲತೆಗೆ ಜಾಗ ಕೊಡದಂತೆ ಕಂಡೂ ಕೇಳಿರದ ಬಣ್ಣ ಡಿಸೈನುಗಳ ಸಾಮಾನುಗಳು ಹೊಸ ಹೊಸ ಋತು-ಹಬ್ಬಗಳಿಗೆ ಅನುಗುಣವಾಗಿ ಅಂಗಡಿಗಳಲ್ಲಿ ಕೂತಿರುತ್ತವೆ. ಅವನ್ನು ನೋಡುವುದೇ ಒಂದು ಚಂದ. ಬರೀ ನೋಡಿ, ಕೊಳ್ಳುವ ಆಸೆಯನ್ನು ನಿಗ್ರಹಿಸುವುದು ಸ್ವಲ್ಪ ಸಂತರಿಗೆ, ಪಕ್ಕಾ ಜಿಪುಣರಿಗೆ ಅಥವಾ ಏಷಿಯಾದಲ್ಲಿ ಹುಟ್ಟಿ ಬೆಳೆದ ನಮ್ಮಂತವರಿಗೆ ಮಾತ್ರ ಸಾಧ್ಯ! ನಮಗೆ ಒಂದು ಸಣ್ಣ ಬಟ್ಟೆಗೆ ಸಾವಿರಾರು ರುಪಾಯಿಗಳನ್ನು ಕೊಡಲು ಹೊಟ್ಟೆ ಉರಿಯುತ್ತದೆ ನೋಡಿ! ಅದೇ ಬಣ್ಣದ, ಆದರೆ ಆ ಡಿಸೈನರ್ ಅಥವಾ ಬ್ರಾಂಡ್ ನ ಟ್ಯಾಗ್ ಇಲ್ಲದ ಅದೇ ರೀತಿಯ ಬಟ್ಟೆ ಬೆಂಗಳೂರಿನ ಚಿಕ್ಕಪೇಟೆಗೋ ಸಫೀನಾ ಪ್ಲಾಜ಼ಾಗೋ ಹೋದರೆ ೩೦೦ ರುಪಾಯಿಗೆ ಸಿಗುತ್ತದೆ ಅಂತ ನಮಗೆ ಗೊತ್ತಿರುತ್ತದೆ. ಅದೇ ಬಟ್ಟೆಗಳನ್ನು ಹಾಕಿಕೊಂಡೇ ನಾವು ಕಾಲು ಶತಮಾನ ಸಾಕಷ್ಟು ಖುಷಿಯಾಗಿಯೇ ಕಾಲಕಳೆದಿರುತ್ತೇವೆ!! ಬ್ರಾಂಡ್ ಎಂಬ ಜೇಬು ಕಡಿಯುವ ಮತ್ತು ಸುಳ್ಳು ಅಂತಸ್ತು ತೋರಿಸಿಕೊಳ್ಳುವ ಗೀಳನ್ನು ಹಚ್ಚಿಸಿಕೊಳ್ಳದಿದ್ದರೆ ಅಮೆರಿಕಾದಲ್ಲಿ ಅಂಥ ಗ್ರಾಹಕರು ನಿಜಕ್ಕೂ ಸಂತರೇ!
ಹಾಗಂತ ಎಲ್ಲಾ ಅಮೆರಿಕನ್ನರೂ ದುಂಬಾಲು ಬಿದ್ದು ಎಲ್ಲಾ ಹೊಸ ವಸ್ತುಗಳನ್ನು ಧಿಡೀರ್ ಅಂತ ಖರೀದಿ ಮಾಡುಬಿಡುತ್ತಾರಾ? ಇಲ್ಲ. ಅವರಲ್ಲೂ ಕೆಲವರು ಒಂದು ಋತು ಮುಗಿದು ಮತ್ತೊಂದು ಋತು ಬದಲಾಗುವವರೆಗೂ ಕಾಯುತ್ತಾರೆ. ಆಗ ಹಿಂದಿನ ಋತುಗೆ/ಹಬ್ಬಕ್ಕೆ ’ಹಾಟ್’ ಆಗಿದ್ದ ವಸ್ತು ಸ್ವಲ್ಪ ತಂಗಳಾಗಿರುತ್ತದೆ. ಅದರ ಬೆಲೆ ಬಿದ್ದಿರುತ್ತದೆ. ಆ ಸರಕನ್ನು ಖಾಲಿ ಮಾಡಿಕೊಂಡು ಮುಂದಿನ ಹೊಸ ಸರಕು ತಂದು ಜೋಡಿಸಿಕೊಳ್ಳಲು ಅಂಗಡಿಗಳೂ ತಯಾರಾಗಿರುತ್ತವೆ. ಆಗ ಎರಡನೇ ಸುತ್ತಿನ ವ್ಯಾಪಾರ ನಡೆಯುತ್ತದೆ. ಆಗ ಅಷ್ಟು ಭರಾಟೆಯಿರುವುದಿಲ್ಲ. ಈಗ ಅಮೆರಿಕಾದ ಗ್ರಾಹಕರಲ್ಲೂ ಬಹಳಷ್ಟು ಬದಲಾವಣೆ ಕಾಣತೊಡಗಿದೆ!
ವರ್ಷದಿಂದೀಚೆಗೆ ನಾನಿರುವ ಜಾಗದ ಸುತ್ತಮತ್ತಲಲ್ಲೇ ಇದ್ದ ಹಲವಾರು ಅಂಗಡಿಗಳು ಜಾಗ ಖಾಲಿಮಾಡಿಕೊಂಡು ಹೋಗುತ್ತಿವೆ. ಬಟ್ಟೆಗಳ ಅಂಗಡಿ ಗ್ಯಾಪ್, ಎಲೆಕ್ಟ್ರಾನಿಕ್ ಸಾಮಾನುಗಳ ಅಂಗಡಿ ಸರ್ಕ್ಯುಟ್ ಸಿಟಿ, ಮನೆ ಸಾಮಾನುಗಳ ಪಿಯರ್ ವನ್ ಇಂಪೋರ್ಟ್ಸ್, ಮಕ್ಕಳ ಆಟಿಕೆಗಳ ಕೆ ಬಿ ಟಾಯ್ಸ್, ಪ್ರಾಯೋಗಿಕ ಎಲೆಕ್ಟ್ರಾನಿಕ್ ಸಾಮಾನುಗಳ ಶಾರ್ಪರ್ ಇಮೇಜ್, ಶೂ ಅಂಗಡಿ ಫುಟ್ ಲಾಕರ್, ಪುಸ್ತಕಗಳ ಬಾರ್ಡರ್ಸ್ ಒಂದರ ಹಿಂದೊಂದು ನಿರ್ಗಮಿಸುತ್ತಿವೆ. ಇದೆಲ್ಲವೂ ಎರಡು ಮೂರು ವರ್ಷದಿಂದ ಸೊರಗಿ ಕೂತಿರುವ ಎಕಾನಮಿಯ ಕೃಪೆ. ದುಡ್ಡು ಬಂದರೆ ಧುತ್ತೆಂದು ಅಂಗಡಿ ಕಡೆ ಹೊರಡುವ ಅಮೆರಿಕನ್ ಗ್ರಾಹಕರು ದುಡ್ಡಿಲ್ಲದೆ, ಕೆಲಸಗಳಿಲ್ಲದೆ ಕಷ್ಟದಲ್ಲಿದ್ದಾರೆ. ಖರ್ಚು ಮಾಡಲಾಗದೆ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.
ಇಲ್ಲಿನ ಪ್ರಬಲ ’ಕೊಳ್ಳುಗರ’ ಮಾರುಕಟ್ಟೆ ಮಾಧ್ಯಮಗಳ ಜೊತೆ ಸೇರಿ ತಮ್ಮ ಚಮತ್ಕಾರ, ಚಮಕ್ ಧಮಕ್ ಗಳನ್ನು ತೋರಿಸಿ ಸೃಷ್ಟಿ ಮಾಡಿದ್ದ, ಲ್ಯಾಬೋರೇಟರಿಯ ಇಲಿಯಂತೆ ಎಣೆಯಿಲ್ಲದೆ ಖರೀದಿ ಮಾಡಲು ಟ್ರೇನ್ ಆಗಿದ್ದ ಬಕಾಸುರ ಅಮೆರಿಕನ್ ಗ್ರಾಹಕ ಈಗ ಚೂರು ಬುದ್ಧಿಕಲಿತಂತಿದ್ದಾನೆ. ಅಥವಾ ಕೈಸುಟ್ಟುಕೊಂಡಿರುವುದರಿಂದ ಸಧ್ಯಕ್ಕೆ ಕೊಳ್ಳುವ ಚಟಕ್ಕೆ ಕಡಿವಾಣ ಹಾಕಿಕೊಂಡಿದ್ದಾನೆ. ’ಶಾಪ್ ಅಂಟಿಲ್ ಯು ಡ್ರಾಪ್’ (shop until you drop) ನಂತಹ ಸ್ಲೋಗನ್ ಗಳನ್ನು ಹುಟ್ಟು ಹಾಕಿ ಹಾಗೇ ಮಾಡುವುದನ್ನೇ ದೊಡ್ಡ ಫ್ಯಾಷನ್ ಎಂಬಂತೆ ಭ್ರಮೆಯನ್ನು ಸೃಷ್ಟಿಸಿದ್ದ ಮಾರುಕಟ್ಟೆ ಈಗ ಹಲ್ಲು ಕಡಿದುಕೊಂಡು ಕೂತಿದೆ. ಊಹೂಂ! ಏನು ತಿಪ್ಪರಲಾಗ ಹಾಕಿದರೂ ಗ್ರಾಹಕರು ಮಾಡುತ್ತಿರುವ ಖರ್ಚು ಏರುತ್ತಿಲ್ಲ. ಅಗತ್ಯ ವಸ್ತುಗಳನ್ನು ಬಿಟ್ಟು ಬೇರೆ ಕಡೆ ನೋಡಲೂ ಗ್ರಾಹಕ ಕೇಳುತ್ತಿಲ್ಲ. ಅವನಿಗೆ ಖರೀದಿ ಮಾಡಲು ಆಸಕ್ತಿ-ಆಸೆ ಇದ್ದರೂ ಈಗ ಜೇಬು ಖಾಲಿ. ಮುಂಚೆ ಬೇಕಾಬಿಟ್ಟಿ ಸಾಲ ಕೊಟ್ಟು ಬಡ್ಡಿ ಪೀಕುತ್ತಿದ್ದ ಕ್ರೆಡಿಟ್ ಕಾರ್ಡ್ ಕಂಪನಿಗಳೂ ಈಗ ಸಾಲ ಕೊಡಲು ಹಿಂದೆ ಮುಂದೆ ನೋಡುತ್ತಿವೆ. ಅವಕ್ಕೂ ಈಗ ಅಳಿವು ಉಳಿವಿನ ಪ್ರಶ್ನೆ.
ಸಂಪತ್ತಿನ ಸುಪತ್ತಿಗೆ ಎಂಬತ್ತಿದ್ದ ನಮ್ಮ ಅಮೆರಿಕಾ ಈಗ ಯಾಕೆ ಹೀಗಾಯಿತು ಅಂತ ಪಂಡಿತರು ಮಾತಾಡಲು ಶುರು ಮಾಡುತ್ತಿದ್ದಾರೆ. ಕಂಡಿದ್ದೆಲ್ಲವನ್ನೂ ಕೊಂಡು ಕೂಡಿಟ್ಟುಕೊಳ್ಳುತ್ತಿದ್ದ ಅಮೆರಿಕನ್ ಗ್ರಾಹಕರ ಕಡೆ ಕೈ ತೋರಿಸುತ್ತಿದ್ದಾರೆ. ಸ್ವಲ್ಪ ಪ್ರಜ್ನಾವಂತ ಪಂಡಿತರು ಈ ಬಕಾಸುರ ಗ್ರಾಹಕನನ್ನು ಸೃಷ್ಟಿಸಿದ್ದು ಯಾರು ಅಂತಲೂ ಕೇಳಿಕೊಂಡು ತಮ್ಮ ಮಾಧ್ಯಮಗಳನ್ನು, ಮಾಧ್ಯಮಗಳನ್ನು ಹಿಡಿತದಲ್ಲಿಟ್ಟುಕೊಂಡಿರುವ ಬಂಡವಾಳಶಾಹಿಗಳತ್ತ ಹೆದರುತ್ತಲೇ ಬೊಟ್ಟು ಮಾಡುತ್ತಿದ್ದಾರೆ, ಕೊಳ್ಳುವುದು ನಿಂತರೆ ಅಮೆರಿಕನ್ ಎಕಾನಮಿ ಏನಾಗಬಹುದು ಎಂದು ಯೋಚಿಸುತ್ತಿದ್ದಾರೆ. ಜನರಿಂದ ಎಕಾನಮಿ, ಎಕಾನಮಿಯಿಂದ ಜನರು ಎಂಬಂತೆ ಇಬ್ಬರನ್ನು ಬೇರ್ಪಡಿಸಲಾರದಷ್ಟು ಗಟ್ಟಿ ಬೆಸುಗೆ ಇರುವುದರಿಂದ ಇಬ್ಬರಿಗೂ ನೋವಾಗದ ಹಾಗೆ ಈ ಬಿರುಬೆಸುಗೆಯನ್ನು ನಿಧಾನಕ್ಕೆ ಸ್ವಲ್ಪ ಸ್ವಲ್ಪವೇ ಸಡಿಲ ಮಾಡಿಕೊಳ್ಳುವುದು ಹೇಗೆ ಎಂತಲೂ ಯೋಚಿಸುತ್ತಿದ್ದಾರೆ. ಇದೊಂದು ದೊಡ್ಡ ಬದಲಾವಣೆ!
ಅಮೆರಿಕಾದ ಈ ಬದಲಾವಣೆ ಅಂದರೆ ಕ್ಯಾಪಿಟಲಿಸಮ್ ನಿಂದ ಚೂರೇ ಚೂರು, ನಿಧಾನಕ್ಕಾದರೂ ಸೋಷಿಯಲಿಸಂ ಕಡೆ ತಲೆ ತಿರುಗಿಸಿ ನೋಡುತ್ತಿರುವುದು! ಬಂಡವಾಳಶಾಹಿಗಳು ಹಣಕ್ಕೆ, ಲಾಭಕ್ಕೆ ನಿಯತ್ತು ತೋರಿಸಿ ಜನರಿಗೆ ಕೈ ಕೊಟ್ಟು ದೇಶದ ಎಕಾನಮಿಯನ್ನು ಜಾರಬಂಡೆ ಇಳಿಸಿರುವುದು ಅಮೆರಿಕನ್ ಜನ ಸಾಮಾನ್ಯರಿಗೆ ಸ್ವಲ್ಪವಾದರೂ ಗೊತ್ತಾಗತೊಡಗಿದೆ ಎನ್ನಿಸುತ್ತಿದೆ. ಇಷ್ಟು ವರ್ಷ ಉಳಿತಾಯ ಅಂದರೆ ಏನು ಅಂತ ಗೊತ್ತಿಲ್ಲದೆ ಖರ್ಚು ಮಾಡುತ್ತಿದ್ದ ಅಮೆರಿಕನ್ ಜನ ಸಾಮಾನ್ಯ ಈಗ ’ಸೇವಿಂಗ್’ ಎನ್ನುವುದರ ಬಗ್ಗೆ ಮಾತಾಡುವುದೇ ಒಂದು ದೊಡ್ದ ಬೌದ್ಧಿಕ ಸಂವಾದ ಎನ್ನುವಂತೆ ಆಗಿದ್ದಾರೆ.
ಮೀಡಿಯಾಗಳಲ್ಲೂ ಸೇವ್ ಮಾಡಿಸುವುದೇ ಒಂದು ದೊಡ್ಡ ವಿಷಯ. ದೊಡ್ಡ ದೊಡ್ಡ ಎಸ್ ಯು ವಿ ಗಳನ್ನು ಡ್ರೈವ್ ಮಾಡುವುದು, ಬೃಹತ್ ಮನೆಗಳಲ್ಲಿ ಇರುವುದು ಬಿಗ್ ಅಮೆರಿಕನ್ ಇಗೋ, ಬಿಗ್ ಇಸ್ ಬೆಟರ್ ಎಂದುಕೊಂಡಿದ್ದ ಜನರಿಗೆ ಎಲ್ಲ ಕಡೆಯಿಂದಲೂ ಡೌನ್ ಸೈಜ಼್ ಮಾಡುವುದು ಬೆಟರ್, ಸ್ಮಾಲ್ ಇಸ್ ಕೂಲ್ ಎನ್ನುವ ಪಾಠ ಸಿಗುತ್ತಿದೆ. ಶಕ್ತಿ ಉಳಿಸಿ, ಇಂಧನ ಉಳಿಸಿ, ದುಡ್ಡು ಉಳಿಸಿ, ಭವಿಷ್ಯಕ್ಕೆ ಸರಿಯಾದ ಪ್ಲಾನ್ ಮಾಡಿ...ಎಂಬ ಸಲಹೆ. ಅಮೆರಿಕಾದ ಜನಸಾಮಾನ್ಯರು ಮೀಡಿಯಾದ ಮಾತನ್ನು ಜಗದ್ಗುರುಗಳ ಮಾತಂತೆ ಕೇಳುತ್ತಾರೆ ಪಾಲಿಸುತ್ತಾರೆ ಅಂತ ನನ್ನ ಅನಿಸಿಕೆ. ಓಪ್ರಾ ವಿನ್ಫ್ರೀ ಯ ಭಕ್ತರು ಕೆಲವರಾದರೆ, ಗ್ಲೆನ್ ಬೆಕ್ ನ ಅನುಯಾಯಿಗಳು ಇನ್ನಷ್ಟು ಜನ, ಸೂಜ಼ಿ ಓರ್ಮನ್ ನ ಪಡೆ ಒಂದಷ್ಟು...
ಇದೆಲ್ಲದರ ಮಧ್ಯೆ, ಏಷಿಯಾ ಆರ್ಥಿಕವಾಗಿ ಸಿಕ್ಕಾಪಟ್ಟೆ ಬೆಳೆಯತೊಡಗಿದೆ. ಅಂದರೆ ತಂತ್ರಜ್ನಾನದ ಅಭಿವೃದ್ಧಿಯ ಜೊತೆಗೆ ಅಲ್ಲಿಯೂ ಉತ್ತಮ ಗ್ರಾಹಕರನ್ನು ತಯಾರಿಸುವ ಕೆಲಸ ಆರಂಭವಾಗಿದೆ, ಅದು ಬಹು ಮಟ್ಟಿಗೆ ಯಶಸ್ವಿಯೂ ಆಗುತ್ತಿದೆ. ಈಗ ಇಡೀ ವಿಶ್ವ "ತಾನು ಏನನ್ನು ಬೇಕಾದರೂ ಕೊಳ್ಳಬಲ್ಲೆ, ಹೇಗಾದರೂ ಕೊಳ್ಳಬಲ್ಲೆ!" ಎಂದು ಬೀಗುತ್ತಿರುವ ಏಷಿಯಾದ ಹೊಸ ಬಕರಾ ಗ್ರಾಹಕನನ್ನು ಗಮನಿಸುತ್ತಿದೆ. ಮಾರುಕಟ್ಟೆಯ ಒಡೆಯರು ಆ ಗ್ರಾಹಕನನ್ನು ಓಲೈಸುವ, ಅವನಿಗೆ ಇನ್ನೂ ಕೊಳ್ಳುವ ಹುಚ್ಚು ಹತ್ತಿಸುವ ಆಟಕ್ಕೆ ಸನ್ನದ್ಧರಾಗಿದ್ದಾರೆ.  
 
 
 
 
 
 
Copyright © 2011 Neemgrove Media
All Rights Reserved