|
ಅಮೆರಿಕಾಗ್ಯಾಕೆ ರಾಜಮನೆತನದ ಒಬ್ಸೆಷನ್?!
ಮೊನ್ನೆ ಬ್ರಿಟನ್ನಿನ ರಾಜಕುಮಾರ ’ಸಾಮಾನ್ಯ’ಳೊಬ್ಬಳನ್ನು ಮದುವೆಯಾದ. ತಮ್ಮದೇ ಮನೆಯಲ್ಲಿ ಮದುವೆಯಾಯಿತೆನ್ನುವಷ್ಟು ಬ್ರಿಟನ್ ತುಂಬಾ ಅದೇ ಸಂಭ್ರಮ. ಜನ ಈ ವಧು ವರನನನ್ನು ನೋಡಲು ಟೆಂಟು ಹಾಕಿ ಕಾಯುತ್ತಿದ್ದರಂತೆ! ಹೋಗಲಿ ಬಿಡಿ. ಅವರ ದೇಶ, ಅವರ ಸಡಗರ, ಅವರ ರಾಜಕುಮಾರ, ಅವನ ಹೊಸ ಹೆಂಡತಿ...
ಆದರೆ ಬ್ರಿಟನ್ನಿನ ಪಾಲಿಸಿಗಳನ್ನು, ಅಲ್ಲಿನ ಜೀವನ ಶೈಲಿಯನ್ನು ತಿರಸ್ಕರಿಸಿ, ಬಂಡಾಯವೆದ್ದು, ಎಲ್ಲವನ್ನೂ ಅದರ ವಿರುದ್ಧವಾಗೇ ಮಾಡಿ ನಾಡು ಕಟ್ಟಿದ ಅಮೆರಿಕನ್ನರಿಗೆ ಅದರಲ್ಲೂ ಅಮೆರಿಕಾದ ಶ್ರೀಮಂತರಿಗೆ ಮತ್ತು ಮಾಧ್ಯಮದವರಿಗೆ ಬ್ರಿಟನ್ನಿನ ರಾಜ ಮನೆತನದವನನ್ನು ಕಂಡರೆ ಇಲ್ಲದ ಒಬ್ಸೆಷನ್. ನಿಮಗೆ ಗೊತ್ತಿರಬಹುದು, ಬ್ರಿಟನ್ನಿನಲ್ಲಿ ಬೀಗ ತೆಗೆಯಲು ಕೀಯನ್ನು ಬೀಗದೊಳಗೆ ತುರುಕಿಸಿ ಬಲಗಡೆಗೆ ತಿರುಗಿಸಿದರೆ ಅಮೆರಿಕಾದಲ್ಲಿ ಎಡಗಡೆಗೆ ತಿರುಗಿಸಬೇಕು, ಬ್ರಿಟನ್ನಿನಲ್ಲಿ ವಾಹನಗಳು ರಸ್ತೆಯ ಎಡಬದಿಯಲ್ಲಿ ಚಲಿಸಿದರೆ ಅಮೆರಿಕಾದಲ್ಲಿ ವಾಹನಗಳು ಬಲಬದಿಯಲ್ಲಿ ಚಲಿಸಬೇಕು, ಅದಿರಲಿ ಬ್ರಿಟನ್ನಿನ ಕಕ್ಕಸ್ಸುಗಳಲ್ಲಿ ಫ್ಲಶ್ ಮಾಡಿದರೆ ನೀರು ಯಾವ ದಿಕ್ಕಿನಲ್ಲಿ ತಿರುಗಿ ಚರಂಡಿಗೆ ಹೋಗುತ್ತದೋ ಅಮೆರಿಕಾದಲ್ಲಿ ಅದರ ವಿರುಧ್ಧ ದಿಕ್ಕಿಗೆ ತಿರುಗುತ್ತದೆ! ಇಂಥಾ ಉದಾಹರಣೆಗಳು ಅನೇಕ. ಅಂಥದ್ದರಲ್ಲಿ...
ರಾಜಕುಮಾರ ಮತ್ತು ವಿಲಿಯಮ್ಸ್ ಮತ್ತು ಕೇಟ್ ರ ಮದುವೆಯ ಸಂದರ್ಭದ ನೆನಪಿಗಾಗಿ ಅಮೆರಿಕಾದ ಅಂಚೆ ಇಲಾಖೆ ಹೊಸದೊಂದು ಸ್ಟಾಂಪ್ ಅನ್ನು ತರಲಿದೆ! ಅಮೆರಿಕಾದ ಮಾಧ್ಯಮಗಳೂ ವಿಶ್ವದ ಇತರೆ ಹಲವು ದೇಶಗಳಂತೆ ಅವರ ಮದುವೆಯನ್ನು ನೇರ ಪ್ರಸಾರ ಮಾಡಲಿದ್ದಾರೆ...ಈ ಇಡೀ ವಾರಾಂತ್ಯ ಅಮೆರಿಕಾದ ಜನ ’ರಾಯಲ್’ ಮದುವೆಯ ಟಿವಿ ಪ್ರಸಾರವನ್ನು ಸ್ನೇಹಿತರು, ಬಂಧುಗಳ ಜೊತೆ ಕಲೆತು ’ರಾಯಲ್ ವೆಡ್ಡಿಂಗ್ ಪಾರ್ಟಿ’ ಮಾಡಿಕೊಂಡು, ಊಟ, ಡ್ಯಾನ್ಸ್ ಮಾಡಿಕೊಂಡು ಜೊತೆಯಾಗಿ ಹೇಗೆ ನೋಡಬಹುದು ಅಂತ ಮಾಧ್ಯಮಗಳು ಸಲಹೆ ಕೊಡುತ್ತಿವೆ. ’ಹೌ ಟು ಥ್ರೋ ರಾಯಲ್ ವೆಡ್ಡಿಂಗ್ ಪಾರ್ಟಿ’ ಅಂತ ಹಣೆಬರಹದಲ್ಲಿ ಮ್ಯಾಗಜೀನುಗಳೂ ಮಾರಾಟವಾಗುತ್ತಿವೆ!
ರಾಯಲ್ ವೆಡ್ಡಿಂಗ್ ನ ನೇರ ಪ್ರಸಾರ ಆದಮೇಲೆ ಹತ್ತು ಹಲವು ಟಿವಿ ಚಾನೆಲ್ ಗಳು ಮದುವೆಯ ’ಆಫ್ಟರ್ ಪಾರ್ಟಿ’ ಮಾಡಿಕೊಂಡು ಯಾರು ಯಾವ ಬಟ್ಟೆ ಹಾಕಿಕೊಂಡಿದ್ದರು? ಹೇಗೆ ಹಾಕಿಕೊಂಡಿದ್ದರು? ಯಾವ ಡಿಸೈನರ್ ಬಟ್ಟೆ ಚನ್ನಾಗಿತ್ತು? ಯಾರ ಡ್ರೆಸ್ ಸೆನ್ಸ್ ಹೇಗಿತ್ತು? ಕೇಟ್ ಹೇಗೆ ಕಾಣುತ್ತಿದ್ದಳು ಅವರಮ್ಮ ಹೇಗೆ ಕಾಣುತ್ತಿದ್ದರು? ರಾಣಿಯ ಮುಖಭಾವ ಹೇಗಿತ್ತು? ವಧು ವರರ ಕಿಸ್ ಹೇಗಿತ್ತು ಅಂತ ಕಾಮೆಂಟ್ ಮಾಡಿಕೊಂಡು ಕೂತಿದ್ದಾರೆ!!!
ಪಾಪ! ಯಾವತ್ತೂ ಯಾವ ರಾಜ ರಾಣಿಯರಿಂದಲೂ ಆಳಿಸಿಕೊಳ್ಳದ ಅಮೆರಿಕಾಗೆ ಒಂಥರಾ ಅನಾಥ ಪ್ರಜ್ನೆ ಕಾಡುತ್ತದೋ ಏನೋ? ನಮ್ಮ ದೇಶದಲ್ಲಿ ಕೆಲಸಕ್ಕೆ ಬಾರದೆ ಕೂತಿರುವ ಒಂದಷ್ಟು ’ರಾಯಲ್’ ಜನರನ್ನು ಅಮೆರಿಕಾಗೆ ಶಿಪ್ ಮಾಡಿದರೆ ಹೇಗೆ?
|