ಪುಟ್ಟ ಹಳ್ಳಿಯ ಸೇಬಿನ ಹಬ್ಬ


ಜೀನ್ ವಿಲಿಯಮ್ಸ್ ನಮ್ಮ ಆಫಿಸ್ ನಲ್ಲಿ ಎಚ್ ಆರ್ ಮ್ಯಾನೇಜರ್. ಬಿಳಿ ಅಮೆರಿಕನ್. ಆಕೆಗೆ ೫೦-೫೫ ವರ್ಷ ಇರಬಹುದು. ಬರೀ ಮಾತಿನಮಲ್ಲಿ. ಕಂಡಾಗಲೆಲ್ಲಾ ಏನಾದರೂ ಮಾತಿಗೆಳೆಯುತ್ತಿದ್ದರು. ಆಕೆಯ ಮೊಮ್ಮಗ ಪಿಗ್ಗಿ ಯ ಮೇಲೆ ಕೂರಲು ಹೋಗಿ ಬಿದ್ದದ್ದು, ಮಗಳಿಗೆ ಸೀಜ಼ರ್ ಆಗಿ ಆಸ್ಪತ್ರೆಗೆ ಸೇರಿಸಿದ್ದು, ತಾನು ಪರ್ಸ್ ಕಳೆದುಕೊಂಡಿದ್ದು, ಕಳೆದು ಹೋದ ಸೋಷಿಯಲ್ ಸೆಕ್ಯುರಿಟಿ ಕಾರ್ಡ್ ಮತ್ತೆ ಮಾಡಿಸಲು ಹೋದಾಗ ಅಲ್ಲಿ ಆಫಿಸ್ ನಲ್ಲಿ ಒಂದು ಗಂಟೆ ಕಾಯಬೇಕಾಗಿ ಬಂದಿದ್ದು ಎಲ್ಲವನ್ನೂ ಬ್ರೇಕಿಲ್ಲದೆ ತಮ್ಮ ಒಂಥರಾ ಕೀರಲು ವಾಯ್ಸ್ ನಲ್ಲಿ ಹೇಳಿ ತಲೆಚಿಟ್ಟು ಹಿಡಿಸುತ್ತಿದ್ದರು. ಅವರು ಎಚ್ ಆರ್ ಮ್ಯಾನೇಜರ್ ಆದ್ದರಿಂದ ಅವರನ್ನು ಇಗ್ನೋರ್ ಮಾಡುವಂತೆಯೂ ಇರಲಿಲ್ಲ. ಈ ವಿಷಯ ಈ ವ್ಯಕ್ತಿಗೆ ಆಸಕ್ತಿ ತರಬಹುದು ಅಥವಾ ಸಂಬಂಧವೇ ಇಲ್ಲದಿರಬಹುದು ಅಂತ ಆಕೆ ತನ್ನ ಲೈಫ್ ನಲ್ಲೇ ಯೋಚನೆ ಮಾಡಿಲ್ಲ ಅನ್ನಿಸುತ್ತೆ. ನನ್ನ ಕ್ಯೂಬಿಕಲ್ ನಿಂದ ಬ್ರೇಕ್ ರೂಮ್ ಗೆ ಹೋಗುವಾಗೆಲ್ಲಾ ನಾನು ಜೀನ್ ಮುಂದೆಯೇ ಹೋಗಬೇಕಾಗುತ್ತಿತ್ತು. ನಾನು ಇಂಡಿಯನ್ ಆದ್ದರಿಂದ ತನ್ನ ಪಶ್ಮೀನಾ ಶಾಲ್ ಗಳ ಆಸಕ್ತಿ ಬಗ್ಗೆ ಮಾತಾಡಲು ನಾನೇ ಬೆಸ್ಟ್ ವ್ಯಕ್ತಿ ಅಂತ ಆಕೆ ಡಿಸೈಡ್ ಮಾಡಿಬಿಟ್ಟಿದ್ದರು. ನನಗೆ ಅವರು ಹೇಳಿದ ಯಾವ ವಿಷಯವೂ ಗೊತ್ತಿರಲಿಲ್ಲ. ನಾನು ಪಶ್ಮೀನಾ ಬಗ್ಗೆ ಕೇಳಿದ್ದೇ ಆಕೆಯ ಬಾಯಿಂದ! ನಾನು ಆಕೆಯ ವಾಯ್ಸ್ ಕೇಳಿಸದ ಟೈಮ್ ನೋಡಿಕೊಂಡು ಬ್ರೇಕ್ ರೂಮ್ ಗೆ ಹೋಗುತ್ತಿದ್ದೆ. ನನ್ನ ದುರಾದೄಷ್ಟ! ಆದರೆ ಆಕೆಯ ಕೈಯ್ಯಿಂದ ತಪ್ಪಿಸಿಕೊಳ್ಳಲು ಆಗುತ್ತಲೇ ಇರಲಿಲ್ಲ.

ಅವತ್ತು ಆಗಷ್ಟೇ ಆಫಿಸ್ ಒಳಗೆ ಬಂದಿದ್ದೆ. "ಹೇ ಟಿಕ್...ವಾಟ್ ಆರ್ ಯೂ ಅಪ್ ಟು ದಿಸ್ ಸ್ಯಾಟರ್ಡೇ?’ ಅಂದರು. ’ನಾನು ವಾರದ ಗ್ರೋಸರಿ ಮಾಡೋದೆಲ್ಲಾ ಸ್ಯಾಟರ್ಡೇ ನೇ’ ಅಂದೆ. ’ಓಕೆ. ಗುಡ್. ಹಾಗಾದ್ರೆ ಈ ಸಾರಿ ಗ್ರೋಸರಿ ಮಾಡೊದನ್ನು ಸಂಡೇ ಗೆ ಇಟ್ಕೊ..ಸ್ಯಾಟರ್ಡೇ ಫ್ರೀ ಮಾಡಿಕೊಂಡು ನಮ್ಮ ಊರಿಗೆ ಬಾ’ ಅಂತ ಕೈಗೆ ಒಂದು ಸಣ್ಣ ಕಾರ್ಡ್ ಕೊಟ್ಟರು. ಅವರ ಹಳ್ಳಿಯ ಆಪಲ್ ಫೆಸ್ಟಿವಲ್ ನ ಇನ್ವಿಟೇಷನ್ ಅದು. ಜೀನ್ ನಾನಿದ್ದ ಸಿಟಿಯ ಉತ್ತರದಲ್ಲಿದ್ದ ಎಲಿಜೇ ಎಂಬ ಒಂದು ಪುಟ್ಟ ಹಳ್ಳಿಯಲ್ಲಿ ಫಾರ್ಮ್ ಹೌಸ್ ಕಟ್ಟಿಕೊಂಡು ಫಾರ್ಮ್ ಮಧ್ಯದಲ್ಲಿ ಇದ್ದರು. ದಿನಾ ೮೦ ಮೈಲಿ ಡ್ರೈವ್ ಮಾಡಿಕೊಂಡು ಆಫೀಸ್ ಗೆ ಬರುತ್ತಿದ್ದರು. ಬೆಳಿಗ್ಗೆ ಐದುಗಂಟೆಗೆ ತಮ್ಮ ಊರು ಬಿಟ್ಟರೆ ೭ ಗಂಟೆಗೆ ಆಫೀಸ್ ನಲ್ಲಿರುತ್ತಿದ್ದರು. ನಾನು ಕಾರ್ಡ್ ಕೈಯ್ಯಲಿ ಹಿಡಿದು ಓದುತ್ತಿದ್ದೆ. "ತಪ್ಪಿಸಿಕೊಳ್ಳಬೇಡ. ಯೂ ವಿಲ್ ಎಂಜಾಯ್ ಇಟ್. ನಾನು ಕಾಯ್ತಾ ಇರ್ತಿನಿ ಬಾ, ನಿನ್ನ ಫ್ಯಾಮಿಲಿ ಅಥವಾ ಫ್ರೆಂಡ್ಸ್ ಕೂಡಾ ವೆಲ್ಕಂ’ ಅಂದರು. ಒಕೆ ಅಂದೆ.
ಎಚ್ ಆರ್ ಮ್ಯಾನೇಜರ್ ಜೊತೆಯ ಫ್ರೆಂಡ್ಶಿಪ್ ಕೆಡಿಸಿಕೊಳ್ಳಲು ನಾನು ರೆಡಿ ಇರಲಿಲ್ಲ. ಶನಿವಾರ ನನ್ನ ಒಂದಿಬ್ಬರು ಫ್ರೆಂಡ್ಸ್ ನ ಜೊತೆಗೆ ಬರಲು ಒಪ್ಪಿಸಿದ್ದೆ. ಒಂದುವರೆ ಗಂಟೆಯ ಡ್ರೈವ್. ಸಿಟಿ ಬಿಡುತ್ತಲೇ ಪುಟ್ಟ ಪುಟ್ಟ ಹಸಿರು ಬೆಟ್ಟಗಳ ಮಧ್ಯೆ ಡ್ರೈವ್ ಮಾಡಿಕೊಂಡು ಹೊರಟೆವು. ಎಲಿಜೇ ಸಣ್ಣ ಅಮೆರಿಕನ್ ಹಳ್ಳಿ. ೧೫೦೦ ಜನರಿರುವ ಹಳ್ಳಿ. ಹಳ್ಳಿ ಅಂತ ಹೆಸರಿಗೆ. ಇಂಡಿಯಾದವರಿಗೆ ಅದೂ ಒಂದು ಒಳ್ಳೆ ಟೂರಿಸ್ಟ್ ಜಾಗದ ಥರ ಇತ್ತು. ಲೋಕಲ್ ಫಾರ್ಮರ್ಸ್ ಮಾರ್ಕೆಟ್, ಹೂವಿನ ಅಂಗಡಿ, ಒಂದು ಫಾರ್ಮಸಿ, ನಾಲ್ಕೈದು ಬೇರೆ ಬೇರೆ ಥರದ ಚಾಪೆಲ್ ಗಳು, ಫಾರ್ಮ್ ಮಧ್ಯ ಮಧ್ಯಗಳಲ್ಲಿ ದೊಡ್ಡ ದೊಡ್ಡ ಮನೆಗಳು, ಮನೆಯ ಪಕ್ಕದಲ್ಲಿ ಸಣ್ಣ ಕೊಳಗಳು, ಅಲ್ಲಲ್ಲಿ ಹಲ್ಲು ಜೋಳದ, ಕಡಲೆಬೀಜದ ಫಾರ್ಮ್ಗಳು ಎಲ್ಲವನ್ನೂ ದಾಟಿಕೊಂಡು ನಮ್ಮ ಜಿಪಿಎಸ್ ಸರಿಯಾಗಿ ಆಪಲ್ ಫ಼ೆಸ್ಟಿವಲ್ ಇದ್ದ ಜಾಗಕ್ಕೆ ಕರೆದುಕೊಂಡು ಬಂದಿತ್ತು. ಹಳ್ಳಿಯ ಟೌನ್ ಹಾಲ್ ಹಿಂದಿನ ಬಯಲಲ್ಲಿ ಜನ ಸೇರಿದ್ದರು. ಆಗಲೇ ತುಂಬಾ ಜನ. ನಾವು ಹೋದಾಗ ಎಲ್ಲರೂ ನಮ್ಮನ್ನು ನೋಡುವವರೇ. ನಾವು ಮಾತ್ರ ಕಂದು ಬಣ್ಣದವರು. ಒಬ್ಬರೋ ಇಬ್ಬರೋ ಆಫ್ರೋ ಅಮೆರಿಕನ್ ಕುಟುಂಬಗಳು ಕಂಡವು.
 
ಇದ್ಯಾಕೆ ಇಲ್ಲಿಗೆ ಬಂದೆನಪ್ಪಾ ಅಂತ ಮುಜುಗರ ಆಯಿತು. ಅಲ್ಲಿ ನಮ್ಮಲ್ಲಿ ನಡೆಯುವ ಎಗ್ಸಿಬಿಷನ್ ಥರದಲ್ಲೇ ಪುಟ್ಟದಾಗಿ ಟೆಂಟ್, ಅಂಗಡಿಗಳನ್ನು ಇಟ್ಟುಕೊಂಡಿದ್ದರು. ಜೋರಾಗಿ ಮ್ಯೂಸಿಕ್ ಚಾಲೂ ಇತ್ತು. ಎಲ್ಲ ಕಡೆಗಳಲ್ಲೂ ಸೇಬಿನ ಹಣ್ಣಿನ ಚಿತ್ರವೇ. ಜನ ಸೇಬಿನ ಹಣ್ಣಿನ ಆಕಾರದ ಹ್ಯಾಟ್ ಹಾಕಿ, ಸೇಬಿನ ಚಿತ್ರದ ಷರ್ಟ್ ಹಾಕಿ ನಡೆಯುತ್ತಿದ್ದರು. ಅಂಗಡಿಗಳಲ್ಲಿ ಕೆಂಪು ಸೇಬು, ಹಸಿರು ಸೇಬುಗಳ ಮತ್ತು ಸೇಬಿನ ಪೈ, ಜ್ಯಾಮ್, ಜೂಸ್, ಕ್ಯಾಂಡಿಗಳ ಮಾರಾಟ ನಡೆಯುತ್ತಿತ್ತು. ನಾನು ಮತ್ತು ನನ್ನ ಫ್ರೆಂಡ್ಸ್ ಸೇಬಿನ ಜೂಸ್ ಕುಡಿಯುತ್ತಾ ಎಲ್ಲಾಕಡೆ ನೋಡಿಕೊಂಡು ಸುತ್ತಾಡುತ್ತಿದ್ದೆವು. ಆ ಫೀಲ್ಡ್ ನ ಮಧ್ಯದಲ್ಲಿ ಒಂದು ಸಣ್ಣ ಶಾಮಿಯಾನ ಹಾಕಿ ಅಲ್ಲಿ ಒಂದು ಪುಟ್ಟ ಸ್ಟೇಜ್ ಮಾಡಿದ್ದರು. ದೊಡ್ಡ ದೊಡ್ಡ ಹೆಂಗಸರು ಗಂಡಸರು ಆ ಮ್ಯೂಸಿಕ್ಕಿಗೆ ಡ್ಯಾನ್ಸ್ ಮಾಡುತ್ತಿದ್ದರು. ಆ ಶಾಮಿಯಾನಾದ ಒಳಗೆ ಹೋಗಿ ನಿಂತೆವು. ಇಲ್ಲಿ ಜೀನ್ ರನ್ನು ಹೇಗೆ ಹುಡುಕುವುದು ಯೋಚಿಸುತ್ತಿದ್ದೆ. "ಹೇ ಬಡ್ಸ್...ಹಿಯರ್ ಹಿಯರ್" ಜೋರಾಗಿ ಕರೆದಂತಾಯಿತು. ಜೀನ್ ವಾಯ್ಸ್. ಎಲ್ಲ ಕಡೆ ಹುಡುಕಾಡಿದೆ. ಆಹ್! ಜೀನ್ ಅಲ್ಲಿದ್ದ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುತ್ತಿದ್ದರು.
 
ಪುಟ್ಟ ಸ್ಕರ್ಟ್ ಹಾಕಿ ಆಪಲ್ ಡ್ಯಾನ್ಸ್ ಮಾಡುತ್ತಿದ್ದ ಆ ಸೆಮಿ ಅಜ್ಜಿಯನ್ನು ನನಗೆ ಗುರುತಿಸಲೂ ಕಷ್ಟವಾಯಿತು. ಅವರು ನಾನು ಅವರ ಕಡೆ ನೋಡಿದಾಗ ಕೈ ಬೀಸಿ ಕರೆಯುತ್ತಿದ್ದರು. ಸ್ಟೇಜಿನ ಹತ್ತಿರಕ್ಕೆ ಹೋದೆ. ’ಗುಡ್ ಟೈಮಿಂಗ್! ನಮ್ಮ ಡ್ಯಾನ್ಸ್ ನೋಡು. ನೀನೂ ನಿನ್ನ ಫ್ರೆಂಡ್ಸ್ ಇಲ್ಲಿಟ್ಟಿರುವ ಚೀಟಿಯಲ್ಲಿ ಇದೇ ಬೆಸ್ಟ್ ಡ್ಯಾನ್ಸ್ ಅಂತ ನಂಬರ್ ಫೈವ್ ಅನ್ನು ನಾಮಿನೇಟ್ ಮಾಡಿ...ನಾನು ಡ್ಯಾನ್ಸ್ ಮುಗಿಸಿ ಬರುತ್ತೇನೆ" ಎಂದು ಕೂಗಿದರು. ಅವರು ಕೂಗಿದ್ದಕ್ಕೆ ಅಲ್ಲಿ ಕೂತು ಡ್ಯಾನ್ಸ್ ನೋಡುತ್ತಿದ್ದ ಕೆಲವು ಜನ ನಮ್ಮ ಕಡೆ ತಿರುಗಿ ಓಹ್ ಈ ಇಂಟರ್ ನ್ಯಾಷನಲ್ ಗೆಸ್ಟ್ ಗಳು ಜೀನ್ ಕಡೆಯವರಾ ಎಂಬಂತೆ ನಮ್ಮತ್ತ ವೇವ್ ಮಾಡಿದರು. ’ಇವರೇ ನಮ್ಮ ಎಚ್ ಆರ್ ಮ್ಯಾನೇಜರ್’ ಅಂತ ನನ್ನ ಫ್ರೆಂಡ್ಸ್ ಗೆ ತೋರಿಸಿದೆ. ಚೋಟುದ್ದದ ಸ್ಕರ್ಟ್ ಹಾಕಿ ಮಕ್ಕಳ ಥರ ಹುಚ್ಚಾಪಟ್ಟೆ ಆಪಲ್ ಡ್ಯಾನ್ಸ್ ಮಾಡುತ್ತಿದ್ದ ಡುಮ್ಮಿ ಅಜ್ಜಿ ನನ್ನ ಫ್ರೆಂಡ್ಸ್ ಗೆ ಕೂಲ್ ಅನಿಸಿದ್ದರು.
ಜೀನ್ ರ ಡ್ಯಾನ್ಸ್ ಆದ ಮೇಲೆ ಅವರ ಡ್ಯಾನ್ಸೇ ಸೂಪರ್ ಅಂತ ಬರೆದಿಟ್ಟು ಬಂದೆ. ಅಲ್ಲಿ ಯಾವ ಯಂಗ್ ಡ್ಯಾನ್ಸ್ ಟೀಮ್ ಕಾಣಲಿಲ್ಲ. ಇನ್ಯಾವ ಅಜ್ಜಿ ಅಜ್ಜಂದಿರ ಡ್ಯಾನ್ಸ್ ನೋಡಲೂ ಮೂಡ್ ಇರಲಿಲ್ಲ. ಅಲ್ಲೇ ತಿರುಗಾಡುತ್ತಿದ್ದ ನಮ್ಮನ್ನು ಹುಡುಕಿಕೊಂಡು ಜೀನ್ ಬಂದರು. ಆ ಅವತಾರದಲ್ಲಿ ನಾನು ಅವರನ್ನು ಯಾವತ್ತೂ ನೋಡಿರಲಿಲ್ಲ. ನನಗೇ ನಾಚಿಕೆಯಾಯಿತು. ಬಂದು ಅವರು-ಅವರ ಗಂಡ ಇಟ್ಟಿದ್ದ ಪುಟ್ಟ ಸ್ಟಾಲ್ ಗೆ ಕರೆದುಕೊಂಡು ಹೋದರು. ಅಲ್ಲಿ ಗೇಲಾ ಸೇಬುಗಳನ್ನು, ಪೈ ಮತ್ತು ಫಾರ್ಮ್ ನಲ್ಲಿ ಬೆಳೆದ ಕೆಲವು ತರಕಾರಿಗಳನ್ನು ಮಾರಾಟಕ್ಕಿಟ್ಟಿದ್ದರು. ನಮ್ಮೆಲ್ಲರಿಗೂ ತಮ್ಮ ತೋಟದ ಸೇಬು, ಪೈ ತಿನ್ನಿಸಿದರು. ತಮ್ಮ ಗಂಡನ ಪರಿಚಯ ಮಾಡಿಸಿದರು. ಅರ್ಧ ಬಿಳಿಯಾಗಿದ್ದ ಗಡ್ದ ಬಿಟ್ಟುಕೊಂಡು ಕಾರ್ಪೆಂಟರ್ ಜೀನ್ಸ್ ಹಾಕಿಕೊಂಡು ಸುಮ್ಮನೆ ಈಜ಼ಿ ಚೇರ್ ನಲ್ಲಿ ಕೂತು ಕಂಟ್ರಿ ಹಾಡು ಕೇಳುತ್ತಿದ್ದ ಆ ಸಾಧು ಚಿತ್ತದ ಮನುಷ್ಯ ನಮ್ಮನ್ನು ನೋಡಿ ನಸುನಕ್ಕರು. ಅವರು ಮಾತಾಡುವುದೇ ಕಮ್ಮಿಯಂತೆ, ಜೀನ್ ಪರಿಚಯಿಸಿದರು. ಈಕೆ ಬಿಟ್ಟರೆ ತಾನೆ!

ಅಲ್ಲೇ ಸ್ವಲ್ಪ ಹೊತ್ತು ತಿರುಗಾಡಿಕೊಂಡು ಅಲ್ಲಿ ಮಾರುತ್ತಿದ್ದ ಸ್ಥಳೀಯ ತಿನಿಸುಗಳ ರುಚಿ ನೋಡಿ ಜೀನ್ ತುಂಬಿಸಿಕೊಟ್ಟಿದ್ದ ಸೇಬು ಬ್ಯಾಗುಗಳನ್ನು ತೆಗೆದುಕೊಂಡು ವಾಪಸ್ ಊರಿಗೆ ಹೊರತೆವು. ನೀವು ಕರೆಯುತ್ತಿರಲಿಲ್ಲದಿದ್ದರೆ ಅಮೆರಿಕಾದ ಈ ಪುಟ್ಟ ಹಳ್ಳಿಯ ಸೇಬಿನ ಹಬ್ಬವನ್ನು ನಾನು ಯಾವತ್ತೂ ಇಷ್ಟು ಹತ್ತಿರದಿಂದ ನೊಡಲಾಗುತ್ತಿರಲ್ಲ...ಅಂತ ಜೀನ್ ಅವರಿಗೆ ಥ್ಯಾಂಕ್ಸ್ ಹೇಳಿದೆ. ’ಯೂ ಬೆಟ್’ ಅಂತ ಕಣ್ಣು ಮಿಟುಕಿಸಿದರು. ಅಲ್ಲಿಂದ ಹೊರಟೆವು.
 
 


 


ಒಂದು ಮುಂಜಾವಿನ ಪುಟ್ಟ ಪಯಣ!!!

ಪ್ರಿಯದರ್ಶಿನಿ ಭಟ್, ಬೆಂಗಳೂರು

ಸಣ್ಣನೆ ಬಿಸಿಲ ರಶ್ಮಿ ಕಿಟಕಿಯ ಪರದೆಯನ್ನು ಸರಿಸುತ್ತ ಮುಖಾರವಿಂದದ ಮೇಲೆ ಬೀಳುತ್ತಿರಲು, ಪುಟ್ಟ ಹಕ್ಕಿಗಳ ಚಿಲಿಪಿಲಿಯಿಂದ ಸಕ್ಕರೆ ನಿದ್ದೆ ಹಾರಿ ಹೋಗಿ, ಥಟ್ಟನೆ ಎಚ್ಚರವಾಯಿತು. ಅಷ್ಟು ಹೊತ್ತು ಕೇಳಿದ್ದು ಹಕ್ಕಿಯ ಗಾನವಲ್ಲ...ನನ್ನ ಮೊಬೈಲಿನಿಂದ ಬಂದಂಥ 'ಎಚ್ಚರಿಕೆಯ ಗಂಟೆ' ಎಂದು ಗೊತ್ತಾಗಿದ್ದೆ, ಇಹಕ್ಕಿಳಿದು ಬಂದೆ. ಅಬ್ಬ ಐದು ಗಂಟೆ ಆಯ್ತೂಂತ ಎದ್ದೆ. ಬೆಳಗಿನ ಕೆಲಸಗಳನ್ನು ಮುಗಿಸಿ ತಡಬಡಾಯಿಸಿ ಕಛೇರಿಗೆ ಹೊರಡಬೇಕಲ್ಲ. ಎಲ್ಲ ಕೆಲಸಗಳನ್ನು ಮುಗಿಸಿ ನನ್ನ 'ಲ್ಯಾಪ್ ಟಾಪ್' ನೊಂದಿಗೆ ಹೊರಟೆ. ಯಾವುದೊ ಆವೇಶದಲ್ಲಿದ್ದಂತೆ ಮಹಡಿಯ ಮೇಲಿಂದ ಡಬಡಬನೆ ಇಳಿದೆ...ಆಟೋ ನಿಲ್ದಾಣಕ್ಕೆ ಓಡೋಡುತ್ತ ಹೋಗಬೇಕಲ್ಲ!

ಆಟೋ ನಿಲ್ದಾಣದಲ್ಲಿ ೨-೩ ಆಟೊ ನಿಂತಿದ್ದುವು. ಗಡಿಬಿಡಿಯ ಸಂದರ್ಭದಲ್ಲಿ ಈ ವಾಹನವು ಪುಷ್ಪಕ ವಿಮಾನದಂತೆಯು, ಆ ಚಾಲಕ ಸುರಲೊಕದ ಸಾರಥಿಯಾಗಿಯು ಕಾಣುವುದರಲ್ಲಿ ಆಶ್ಚರ್ಯವಿಲ್ಲ!! ಇಂದೂ ಅಷ್ಟೇ. ಆ ಕಪ್ಪು-ಹಳದಿ ಬಣ್ಣಗಳ ತೇರನ್ನು ನೋಡಿ ರೋಮಾಂಚನವಾಯಿತು. ಇಲ್ಲಾಂದರೆ ಅಷ್ಟು ಹೊತ್ತಿನಲ್ಲಿ ಆಟೋ ಸಿಗುವುದಕ್ಕೆ ಹರ ಸಾಹಸ ಮಾಡಬೇಕಾಗುತ್ತದೆ. ನನ್ನ ಅದೃಷ್ಟಕ್ಕೆ ಖುಷಿಪಡುತ್ತ, ನನ್ನ ಸ್ವರದಲ್ಲಿ ಆದಷ್ಟು ಮಾಧುರ್ಯವನ್ನು ತುಂಬುತ್ತ ಉಲಿದೆ. "ಕೋರಮಂಗಲಕ್ಕೆ ಬರುತ್ತೀರಾ?". ಅವನು ನನ್ನೆಡೆಗೆ ವಿಚಿತ್ರವಾಗಿ ನೋಡಿ ಏನೂ ಹೇಳದೆ ಆ ಕಡೆಗೆ ತಿರುಗಿದ. ಬೇರೆ ಸಮಯವಾಗಿದ್ದು ಇನ್ನೊಬ್ಬರು ಹೀಗೆ ಮಾಡಿದ್ದರೆ ನನ್ನ ಆತ್ಮಸಮ್ಮಾನಕ್ಕೆ ಧಕ್ಕೆಯುಂಟಾಗಿ ನನ್ನ ಕಾಲ್ಪನಿಕ ಮೂರನೆ ಕಣ್ಣಿನಿಂದ ಅವನನ್ನು ಅಲ್ಲೆ ಭಸ್ಮ ಮಾಡುತಿದ್ದೆ. ಆದರೆ ಸುರಲೋಕದವನಿಗೆ ಏನೂ ಹೇಳದೆ ಮುಂದುವರಿದೆ...
 
ಓಹ್!! ನನ್ನ ಮುಂದಿದ್ದಿದ್ದು ಹಸಿರು-ಹಳದಿ ಬಣ್ಣದ ಹೊಸ ತೇರು. ಬಿಸಿಲಿಗೆ ಆ ಸುಂದರವಾದ ಬಣ್ಣ ಲಕಲಕನೆ ಹೊಳೆಯುತ್ತಿತ್ತು. ಅದರ ಮುಂದಿನ ಆಸನದಲ್ಲಿ ಕುಳಿತಿದ್ದ ಚಾಲಕ ಮಹಾರಾಜನಲ್ಲಿ, ನನ್ನಲ್ಲಿನ ಎಲ್ಲ ವಿನಯವಂತಿಕೆಯನ್ನು ಒಟ್ಟುಗೂಡಿಸಿ ಅದೇ ಪ್ರಶ್ನೆಯನ್ನು ಕೇಳಿದೆ. ಆವನು ನನ್ನ ತಳಮಳಕ್ಕೆ ಕನಿಕರ ಪಡುತ್ತ. "ಇಲ್ಲ" ಅಂದ. "ಮತ್ತೆಲ್ಲಿ ಹೋಗ್ತೀರ?" ಅಂತ ಕೇಳೋಣಾಂತ ಅನಿಸಿದರೂ ಸಂಯಮದಿಂದ ಆ ಪ್ರಶ್ನೆಯನ್ನು ತಡೆಹಿಡಿದೆ! ಕೊನೆಯ ಪ್ರಯತ್ನವೆಂದುಕೊಳ್ಳುತ್ತ ಏನೇನೂ ಉತ್ಸಾಹವಿಲ್ಲದೆ ಮತ್ತೊಬ್ಬನಲ್ಲಿ ಕೇಳಿದೆ. ಕೊನೇಯಲ್ಲಿ ನಿಂತಿತ್ತು ಆ 'ಓಬಿರಾಯನ' ಕಾಲದ ವಾಹನ. ಕಪ್ಪು ಹಳದಿ ಬಣ್ಣದ ಭೇದವೇ ಇಲ್ಲದಂತಾದ ಸ್ಥಿತಿಯಲ್ಲಿತ್ತು. ಆ ವಾಹನದ ಆಸನಗಳೋ ದೇವರಿಗೇ ಪ್ರೀತಿ-ಇಲಿಗಳ ರೌದ್ರಾವತಾರಕ್ಕೆ ಬಸವಳಿದಿದ್ದುವು. 'ಸರಿ ಬನ್ನಿ' ಅನ್ನುವುದು ಕೇಳಿ ನನಗೆ ಸ್ವರ್ಗಕ್ಕೆ ಮೂರೇ ಗೇಣು! ಇಷ್ಟು ಹೊತ್ತು ಕೇವಲವಾಗಿ ಯೋಚಿಸಿದ ವಾಹನದ ಬಗ್ಗೆ ನನಗೀಗ ಪ್ರೀತಿ ಉಕ್ಕಿತು. ಅದರ ಕೋಮಲತೆಗೆ ಧಕ್ಕೆಯಾಗದಂತೆ ನಿಧಾನವಾಗಿ ಏರಿ ಕುಳಿತೆ.
 
ಅಬ್ಬಾ ಹೊರಟಿತು ಸವಾರಿ...ಆ ಪುಟ್ಟದಾದ ಕಿಂಡಿಯಿಂದ ಹೊರಗಿನ ಪ್ರಪಂಚ ವೀಕ್ಷಿಸತೊಡಗಿದೆ. ರಸ್ತೆಗಳ ಅಂಕುಡೊಂಕುಗಳನ್ನು ಆಟೋನಲ್ಲಿ ಅನುಭವಿಸುವಷ್ಟು ಚೆನ್ನಾಗಿ ಇನ್ಯಾವುದರಲ್ಲು ಸಾಧ್ಯವಿಲ್ಲ. ನೇರವಾಗಿ ಹೋಗುತ್ತ ಥಟ್ಟನೆ ಬರುವ ತಿರುವಿನಲ್ಲಿ ತಿರುಗಿದರೆ, ಬಾಲ್ಯದಲ್ಲಿ ಜಾತ್ರೆಯ 'ತಿರುಗು ಬಂಡಿ' ಮೇಲೆ ಕುಳಿತ ಅನುಭವ. ಮತ್ತೆ ನೇರವಾಗಿ ಪಾತಾಳಕ್ಕಿಳಿಯುತಿದ್ದೇವೋ ಅನ್ನುವಂತಹ ರಸ್ತೆ. ನನ್ನ ಮನಸ್ಸು ಹುಚ್ಚೆದ್ದು ಕುಣಿದು ಆಟೋಗಿಂತ ಮುಂದೆ ಓಡುತ್ತಿದೆಯೇನೋ ಅನಿಸಿತು. ಅಕ್ಕಪಕ್ಕದಲ್ಲಿ ರೊಂಯ್ಯನೆ ಬೀಸುವ ಗಾಳಿಗೆ ಮುಖವೊಡ್ಡಿ ಕುಳಿತುಕೊಳ್ಳಬೇಕೆನ್ನುವ ಒಳಗಿನ ಪುಟ್ಟ ಧ್ವನಿಗೆ ವಯಸ್ಸಿನ ಬುಧ್ಧಿಮಾತು ಸುಮ್ಮನಿರುವಂತೆ ಗದರಿಸಿತು.
 
ಬೆಳಗು, ಒಂದು ರೀತಿಯ ಹೊಸತನವನ್ನು ತರುತ್ತದೆ. ನಮ್ಮ ಆಟೋ ಮುಂದುವರಿದಂತೆ ಬದಿಗೆ ಸುಂದರ ಹೂದೋಟ...ಕಲ್ಲು ಬೆಂಚಿನ ಮೇಲೆ ಕುಳಿತು ತಮ್ಮ ಜೀವನದ ಸಂಧ್ಯಾ ಕಾಲದಲ್ಲಿ ಇನ್ನಷ್ಟು ಜೀವಂತಿಕೆ, ಉಲ್ಲಾಸ, ಪ್ರೀತಿ, ವಿಶ್ವಾಸವನ್ನು ತುಂಬುತ್ತ ನಿರಾಳವಾಗಿ ಹರಟೆಯಲ್ಲಿ ತೊಡಗಿರುವ ನಮ್ಮ ಹಿರಿಯರು ಅದೇನೋ ಕೇಳಿದಂತಾಗುತ್ತದೆ....ಇಷ್ಟೆಲ್ಲ ತರಾತುರಿಯಲ್ಲಿ ಓಡಾಡುತ್ತಾ..ಈ 'ಸ್ಟ್ರೆಸ್', 'ಷೇರ್ ಮಾರ್ಕೆಟ್’ ಗಳ ಸುಳಿಯಲ್ಲಿ ಬಳಲುತ್ತ ಏನು ಸಾಧಿಸುತ್ತೀರಿ? ಯಾರಿಗಾಗಿ? ಸ್ವಲ್ಪ ನಿಧಾನವಾಗಿ ಚಲಿಸಿಸುತ್ತ ಜೀವನವನ್ನು ಸವಿಯಿರಿ ಮಕ್ಕಳೆ...ಯಾಕೆಂದರೆ ಕ್ಷಣಗಳು ಕೈಜಾರುತ್ತವೆ...ಮತ್ತೆಂದೂ ಬಾರದೆಡೆಗೆ...ಈ ಮಾತುಗಳನ್ನು ಮೆಲುಕು ಹಾಕುತ್ತಿದ್ದಂತೆಯೆ ಮೆಟ್ರೋ ಕೆಲಸ ನಡೆಯುವ ಸ್ಥಳವನ್ನು ದಾಟುತ್ತಿದ್ದೆವು. ಮನುಷ್ಯನ ಜಾಣ್ಮೆಗೆ ತಲೆದೂಗಲೇ ಬೇಕು. ನಾವು ಎಲ್ಲಿಂದ ಎಲ್ಲಿಗೆ ಬಂದಿದ್ದೇವೆ...ನಮ್ಮೆರಡೂ ಬದಿಯಿಂದ ಮಾತ್ರವಲ್ಲದೆ ನಾವು ಚಲಿಸುವ ರಸ್ತೆಯಡಿಯಲ್ಲಿ, ನಮ್ಮ ತಲೆ ಮೇಲಿಂದಾನೂ ವಾಹನಗಳು ಓಡಾಡುವ ವ್ಯವಸ್ಥೆ ಮಾಡಿಕೊಂಡಿದ್ದೇವೆ...ಇನ್ನು ನಮ್ಮ ಯೋಚನೆಗಳ ವೇಗದಲ್ಲಿ ಓಡುವ ಯಂತ್ರಗಳು ಬರುವಲ್ಲಿ ತಡವಿಲ್ಲ ಅನಿಸಿತು...ನಮ್ಮ ಓಟದ ಗತಿಯಲ್ಲಿ ಜೀವಿಸುವುದನ್ನು ಮರೆತಿದ್ದೇವೆಯೆ? ಯೋಚಿಸಬೇಕು...ನಿಧಾನವಾಗಿ ಮತ್ತೆ ಹೊರಗೆ ನೋಡಿದೆ.
 
ಈಗ ನನಗೆ ಈ ಆಟೋ ಒಂದು ಬಯೋಸ್ಕೊಪ್ನಂತೆ ಭಾಸವಾಯಿತು...ಎಷ್ಟೊಂದು ಕಥೆಗಳು ನಡೆಯುತ್ತಿವೆ ನಮ್ಮ ಸುತ್ತ ಮುತ್ತ...
 
ಸ್ಕೂಟರನ್ನು ಓಡಿಸುತ್ತ ತನ್ನ ಚೀಲವನ್ನು ಇನ್ನಷ್ಟು ಗಟ್ಟಿಯಾಗಿ ತನ್ನೆಡೆಗೆ ಎಳೆಯುವ ಯುವಕ ತನ್ನ ಹೊಸ ಜೀವನ ಸಂಗಾತಿ ಪ್ರೀತಿಯಿಂದ ಕಟ್ಟಿ ಕೊಟ್ಟಿರುವ ಬುತ್ತಿಯನ್ನು ಇನ್ನೂ ಜೋಪಾನ ಮಾಡುವಂತೆನಿಸಿತು...ಕಾರಿನ ಒಳಗೊಂದು ಪ್ರಪಂಚವನ್ನೆ ಮಾಡಿ ತಮ್ಮಷ್ಟಕ್ಕೆ ಗುಸುಗುಟ್ಟುವ ಕುಟುಂಬ ಹೊರಗಿನ ಪ್ರಪಂಚವನ್ನೇ ಮರೆತಂತಿತ್ತು... ಬೈಕ್ ಮೇಲೆ ಸವಾರಿ ಮಾಡುತ್ತ ತನ್ನಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡಿರುವ ಮುಗ್ಧ ಪುಟಾಣಿಯ ಕಂಗಳಲ್ಲಿ ಸಾವಿರಾರು ಕನಸುಗಳು. ಆ ಕಂಗಳ ಸ್ನಿಗ್ಧತೆ ಮಾಸುವ ಮುನ್ನ ಅವಳಿಗೆ ಅಥವ ಅವಳಂಥ ಅನೇಕ ಮಕ್ಕಳಿಗೆ ನಾವು ಕಲಿಸಬೇಕಾಗಿರುವುದು ಬಹಳಷ್ಟಿದೆ. 'ಸೌಂದರ್ಯವಿರುವುದು ನೋಡುವ ಕಂಗಳಲ್ಲೇ ಹೊರತು ವಸ್ತುವಿನಲ್ಲಲ್ಲ'. ಈ ಜಗತ್ತನ್ನು ನಾವು ಹೇಗೆ ನೋಡುತ್ತೇವೋ ಹಾಗೆಯೇ ಅದು ಸ್ಪಂದಿಸುತ್ತದೆ. ನಮ್ಮ ಓಟದ ಗತಿಯನ್ನು ನಾವು ನಿಧಾನಿಸುವ ಕ್ಷಣ ಬಂದಿದೆ...ಈ ಗತಿಯಲ್ಲಿ ನಾವೂ ನಮ್ಮ ಪೀಳಿಗೆಯೂ ಯಂತ್ರಗಳಾಗಿ ಮಾರ್ಪಡುವ ಮುನ್ನ, ಸ್ವಲ್ಪ ಜೀವಿಸೋಣ. 'ಜೀವನ ಅತೀ ಸುಂದರ' ನಾವು ಅದನ್ನು ನೋಡಲು ಕಲಿಯಬೇಕಷ್ಟೆ... ನಾವು ಕಲಿತು ನಮ್ಮ ಮುಂದಿನ ಪೀಳಿಗೆಗೆ ಈ ಸರಳವಾದ ಮಾತನ್ನು ಕಲಿಸಿದ ದಿನ ಎಲ್ಲರೂ ಜೀವಿಸಲು ಪ್ರಾರಂಭಿಸಬಹುದು...
 
ಈ ಮುಂಜಾವಿನ ಗಡಿಬಿಡಿಯಲ್ಲಿ, ಎಲ್ಲರಿಗೂ (ಆಟೋ ಚಾಲಕನನ್ನು ಹಿಡಿದು...ಟ್ರಾಫಿಕ್ ನಿಂದ ಸರಕಾರದ ಆಡಳಿತದವರೆಗು) ಹಿಡಿ ಶಾಪ ಹಾಕುತ್ತಾ, ಸುಂದರ ಕ್ಷಣಗಳಿಗೆ ತಿಲೋದಕ ನೀಡಬಹುದು ಅಥವ, ನನ್ನೊಂದಿಗೆ ನಾನು ಕಾಣಲು ಪ್ರಯತ್ನಿಸುವ ಜಗತ್ತಿನಲ್ಲಿ ನೀವೂ ಸೇರಿಕೊಳ್ಳಬಹುದು. ಬೆಳಗು ಮಂಜುಮುಸುಕಿದ ಸ್ವರ್ಗವನ್ನು ಸೃಷ್ಟಿಸದೇ ಇರಬಹುದು, ನಮ್ಮನ್ನು ಪ್ರೀತಿಯಿಂದ ಎಬ್ಬಿಸುವ ಹಕ್ಕಿಗಳ ಮಧುರ ಇಂಚರವೂ ಕೇಳದಿರಬಹುದು, ಕಲಕಲನೇ ಹರಿಯುವ ಕಣಿವೆಯ ನೀರು, ಸಂಜೆಯರಳಿದ ಮಲ್ಲಿಗೆಯ ಮಧುರ ಕಂಪು ಊರ ತುಂಬ ಹರಡುವಷ್ಟು ಇಲ್ಲದಿರಬಹುದು...ಆದರೆ ಸ್ವರ್ಗವೇ ಧರೆಗಿಳಿದಂತನಿಸುವುದಕ್ಕೆ ಬೇಕಾಗುವುದು ನಿಧಾನವಾಗಿ ಸುತ್ತಮುತ್ತ ನೋಡುವ ನೋಟವಷ್ಟೇ.
 
 
 


 
 
 
 
 
 
Copyright © 2011 Neemgrove Media
All Rights Reserved