ಬೆಳ್ಳುಳ್ಳಿ 

ಗೂಬೆ ಕೊಟ್ಟ ಸಿರಿ

(ಸಂಗ್ರಹ)

 

ಒಂದಾನೊಂದು ಕಾಲದಲ್ಲಿ ಒಂದೂರಿತ್ತು. ಆ ಊರಲ್ಲಿ ಸಿಂಗ್ರಿ ಮತ್ತು ಸುಬ್ಬ ಅಂತ ಇಬ್ಬರು ನೆರೆಮನೆಯವರು ಇದ್ರು. ಸುಬ್ಬ ಭಾಳಾ ಅನುಕೂಲವಾಗಿದ್ದ. ಉಪ್ಪರಿಗೆ ಮನೆ, ಹಸು ಕರು, ಆಳು ಕಾಳು, ಜಮೀನು ಎಲ್ಲಾ ಇತ್ತು. ಅದೇ ಅವನ ಪಕ್ಕದ ಮನೆಯ ಸಿಂಗ್ರಿಗೆ ಮನೆ ತುಂಬಾ ಮಕ್ಕಳಿದ್ವು, ಆದ್ರೆ ಗಂಜಿಗೂ ಗತಿಯಿರಲಿಲ್ಲ. ಭಾಳಾ ಬಡತನ ಕಷ್ಟ ಬಿಟ್ರೆ ಅವನ ಹತ್ತಿರ ಏನೂ ಇರಲಿಲ್ಲ.

ಸುಬ್ಬ ದಿನಾ ಬೆಳಿಗ್ಗೆ ಎದ್ದು ಊರ ಮುಂದಿನ ಅರಳೀಮರದ ಮೇಲೆ ಕೂತಿರುತ್ತಿದ್ದ ಗರುಡಾಳ ಸ್ವಾಮಿಯ ಮುಖಾ ನೋಡುತ್ತಿದ್ದ. ಸಿಂಗ್ರಿ ಬೆಳಿಗ್ಗೆ ಎದ್ದವನು ಹಿತ್ತಲಿನ ಮರದಲ್ಲಿರುತ್ತಿದ್ದ ಗೂಬೆಯನ್ನು ನೋಡಿಕೊಂಡು ಬರುತ್ತಿದ್ದ. ಹಿಂಗೇ ನಡೀತು. ಸಿಂಗ್ರಿಯ ಬಡತನ ಇನ್ನೂ ಹೆಚ್ಚಾಗ್ತಲೇ ಇತ್ತು.
 
ಆ ಗೂಬೆ ದಿನಾ "ಇವನ್ಯಾಕೆ ದಿನಾ ನನ್ನ ಮುಖ ನೋಡ್ತನೆ? ಊರ ಜನರೆಲ್ಲ ಗರುಡನ ಮುಖ ನೋಡಿದರೆ ಇವನು ಮಾತ್ರ ನನ್ನ ಮುಖ ನೋಡ್ತನಲ್ಲಾ!" ಅಂತ ಯೋಚಿಸುತ್ತಿತ್ತು. ಒಂದು ದಿನ ಸಿಂಗ್ರಿ ಗೂಬೆಯ ಮುಖವನ್ನು ನೋಡಲು ಹೋದ. ಆಗ ಆ ಗೂಬೆ
 
"ಅಲ್ಲಾ ಕಣಪ್ಪಾ ಸಿಂಗ್ರಿ...ದಿನಾ ನನ್ನ ಮುಖ ಯಾಕೆ ನೋಡ್ತೀಯಪ್ಪಾ? ಆ ಗರುಡನನ್ನಾದ್ರೂ ನೋಡಬಾರದಾ? ನಿನ್ನ ಕಷ್ಟನಾದ್ರೂ ಕಳಿಯದು" ಅಂತ ಹೇಳಿತು. "ಗೂಬಣ್ಣಾ...ಅನುಕೂಲಸ್ತರು, ಬಡವರು ಎಲ್ಲರೂ ಆ ಗರುಡಾಳ ಸ್ವಾಮಿನೇ ನೋಡ್ತರೆ...ನೀನಾದ್ರೂ ಏನಾದ್ರೂ ಮಾಡಿ ನನ್ನ ಬಡತನ ಹೋಗಿಸಪ್ಪಾ" ಅಂತ ಸಿಂಗ್ರಿ ಗೂಬೆಯನ್ನು ಕೇಳಿಕೊಂಡ. "ಇದೊಳ್ಳೆ ಕೆಲಸವಾಯಿತಲ್ಲಪ್ಪಾ...ನಿನ್ನ ಬಡತನವನ್ನು ನಾನು ಹೆಂಗೆ ಹೋಗಿಸಲೀ!" ಅಂತ ಯೋಚನೆ ಮಾಡಿ ಕೊನೆಗೆ ಸಿಂಗ್ರಿಗೆ ಒಂದು ಉಪಾಯ ಹೇಳಿತು.
 
" ನೋಡಪ್ಪಾ ಸಿಂಗ್ರಿ...ನಾಳೆ ಶುಕ್ರವಾರ. ಹೆಂಗಿದ್ರೂ ಲಕ್ಷ್ಮಿ ಎಲ್ಲರ ಮನೆಗೂ ಒಂದು ಸುತ್ತು ಬರ್ತಳೆ. ನೀನೂ ನಿನ್ನ ಹೆಂಡತಿ ನಿಮ್ಮ ಮನೆನೆಲ್ಲಾ ಚನ್ನಾಗಿ ಗುಡಿಸಿ ಒರೆಸಿ ಚನ್ನಾಗಿಟ್ಟುಕೊಂಡಿರಿ. ಮನೆ ಬಾಗಿಲಿಗೆ ನೀರು ರಂಗೋಲಿ ಹಾಕಿ ಅರಿಸಿನ ಕುಂಕುಮ ಹಚ್ಚಿಟ್ಟಿರಿ. ಲಕ್ಷ್ಮಮ್ಮ ನಿಮ್ಮ ಮನೆ ಒಳಗೆ ಬರ್ತಳೆ. ಆಗ ನಾನೂ ಅಲ್ಲಿಗೆ ಬಂದಿರ್ತಿನಿ. ಲಕ್ಷ್ಮಿ ನಿಮ್ಮ ಮನೆ ಒಳಗೆ ಹೋದ ತಕ್ಷಣ ನೀನು ನನ್ನನ್ನು ಹಿಡಿದು ಕತ್ತಿಯಲ್ಲಿ ಕಡಿದು ನನ್ನ ರಕ್ತವನ್ನು ನಿಮ್ಮ ಮನೆಯ ಹೊಸಲಿನ ಮುಂದೆ ಚೆಲ್ಲಿಬಿಡಿ...ಆಗ ಎಲ್ಲಾ ಒಳ್ಳೆದಾಗುತ್ತೆ" ಎಂದಿತು. ನನ್ನನ್ನೇ ಸಾಯಿಸಿಬಿಡು ಎಂದು ಗೂಬೆ ಕೊಟ್ಟ ಉಪಾಯದಿಂದ ಸಿಂಗ್ರಿಗೆ ಬೇಜಾರಾಯಿತು. ಆದರೂ ಮನೆಯಲ್ಲಿ ಯಾವಾಗಲೂ ಹಸಿದು ಕೂತಿರುತ್ತಿದ್ದ ಮಕ್ಕಳಿಗಾಗಿಯಾದರೂ ಗೂಬೆ ಹೇಳಿದಂತೆ ಕೇಳಬೇಕು ಎಂದುಕೊಂಡ.
 
ಮಾರನೇ ದಿನ ಗಂಡ ಹೆಂಡತಿ ಮನೆಯನ್ನೆಲ್ಲಾ ಚೊಕ್ಕ ಮಾಡಿದರು. ಬಾಗಿಲಿಗೆ ರಂಗೋಲಿ ಹಚ್ಚಿ ಲಕ್ಷ್ಮಿ ಬರುವುದನ್ನೇ ಕಾದರು. ಲಕ್ಷ್ಮಿ ಮನೆ ಒಳಗೆ ಬಂದಳು. ಆಗ ಗೂಬೆ ಹಾರಿ ಸಿಂಗ್ರಿಯ ಬಾಗಿಲಿನ ಹತ್ತಿರ ಬಂದಿತು. ಸಿಂಗ್ರಿ ಅದನ್ನು ಪಕ್ಕನೆ ಹಿಡಿದು, ಕೊಯ್ದು ಅದರ ರಕ್ತವನ್ನು ಹೊಸಿಲಿನ ಮುಂದೆ ಚೆಲ್ಲಿಬಿಟ್ಟ. ಒಳಗೆ ಬಂದಿದ್ದ ಲಕ್ಷ್ಮಿ ಮನೆ ನೋಡಿಕೊಂಡು ಹೊರಗಡೆ ಹೋಗಲು ಬಾಗಿಲಿನ ಹತ್ತಿರ ಬಂದಳು. ಅಲ್ಲಿ ಚೆಲ್ಲಿದ್ದ ರಕ್ತವನ್ನು ನೋಡಿ ಮನೆಯೊಳಗೇ ನಿಂತುಬಿಟ್ಟಳು. ಆಗ ಸಿಂಗ್ರಿಯ ಕಷ್ಟ ನಿಂತು ಅವನಿಗೂ ಹೊಲ ಮನೆ, ಕಸು ಕರು, ಆಳು ಕಾಳು ದಕ್ಕಿತು. ಅವನು ಸುಬ್ಬನಿಗಿಂತಲೂ ಅನುಕೂಲಸ್ತ ಆದ. ಸಿಂಗ್ರಿ ಗೂಬೆಯನ್ನು ಮನಸ್ಸಿನಲ್ಲೇ ನೆನೆದುಕೊಂಡು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿಕೊಂದು ಒಳ್ಳೆಯ ಥರದಲ್ಲಿ ಬದುಕಿದ. ಆದರೆ ಲಕ್ಷ್ಮಿಯನ್ನು ಹೆದರಿಸಿ ಒಬ್ಬನ ಹತ್ತಿರವೇ ನಿಲ್ಲುವಂತೆ ಮಾಡಿದ ಗೂಬೆ ಜನರ ಕೋಪಕ್ಕೆ ಬಿತ್ತು. ನಿನ್ನನ್ನು ನೋಡುವುದೇ ಇಲ್ಲ ಹೋಗು! ಅಂತ ಜನ ಅದಕ್ಕೆ ಬಹಿಷ್ಕಾರ ಹಾಕಿಬಿಟ್ಟರು!
 
  
 
 
 
 
 
 
Copyright © 2011 Neemgrove Media
All Rights Reserved