ಮಳೆ ನೀರು: ನ್ಯೂಯಾರ್ಕಿನಲ್ಲೊಂದು ಹೊಸ ಪ್ರಯತ್ನ

ನ್ಯೂಯಾರ್ಕ್ ನಗರದ ಪರಿಸರ ಸಂರಕ್ಷಣಾ ವಿಭಾಗ ಮಳೆ ನೀರಿನ ಸಮರ್ಥ ಉಪಯೋಗಕ್ಕೆಂದು ಇದೊಂದು ಪುಟ್ಟ ಪ್ರಯತ್ನ ಮಾಡಲಿದೆ. ನ್ಯೂಯಾರ್ಕ ಸಿಟಿಯ ಪ್ರತೀ ಮನೆ ಮಾಲೀಕರಿಗೂ ೫೫ ಗ್ಯಾಲನ್ ನೀರನ್ನು ಶೇಖರಿಸಿಡಲು ಶಕ್ತಿ ಇರುವ ಒಂದೊಂದು ಬ್ಯಾರಲ್ ಗಳನ್ನು ಉಚಿತವಾಗಿ ವಿತರಿಸಲಿದೆ.
ಇದೇನೂ ಹೊಚ್ಚ ಹೊಸ ಪ್ರಯತ್ನವಲ್ಲ. ೨೦೦೮ ರಿಂದಲೇ ನ್ಯೂಯಾರ್ಕ್ ಸಿಟಿ ಈ ರೀತಿಯ ಮಳೆ ನೀರು ಶೇಖರಣಾ ಬ್ಯಾರೆಲ್ ಗಳ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಯೋಚಿಸಿತ್ತು. ಆಗ ಆಸಕ್ತಿಯಿರುವ ಪ್ರಜೆಗಳು ತಾವಾಗಿಯೇ ಅರ್ಜಿ ಹಾಕಿದ್ದರೆ ಮಾತ್ರ ಬ್ಯಾರೆಲ್ ಗಳನ್ನು ಕೊಡಲಾಗುತ್ತಿತ್ತು. ೨೦೦೮ ರಿಂದ ನಿಯಮಿತವಾಗಿ ಜನಪ್ರಿಯವಾಗ ಈ ಶೇಖರಣಾ ವಿಧಾನ ಈಗ ಇನ್ನಷ್ಟು ಹುರುಪು ಪಡೆದುಕೊಂಡಿದೆ.
ಅಟ್ಲಾಂಟಿಕ್ ಸಾಗರದ ಮೇಲೆ ಪೂರ್ವಾಭಿಮುಖವಾಗಿ ಹಾಯುವ ದಟ್ಟ ಶೀತಲ ಮಾರುತಗಳಿಂದಾಗಿ ನ್ಯೂಯಾರ್ಕಿನ ಮಳೆಗಾಲ ತೀವ್ರವಾಗಿರುತ್ತದೆ. ಆಗ ಬೀಳುವ ಭಾರೀ ಮಳೆ ನ್ಯೂಯಾರ್ಕ್ ಸಿಟಿಯ ಒಳಚರಂಡಿ ವ್ಯವಸ್ಥೆಯ ಮೇಲೆ ಬಹಳ ಒತ್ತಡ ಹಾಕುವುದರಿಂದ ಈ ಬ್ಯಾರೆಲ್ ಗಳ ಉಪಯೋಗ ಸಿಟಿ ಗೆ ಹಲವಾರು ರೀತಿಯಲ್ಲಿ ಸಹಾಯ ಮಾಡಲಿದೆಯಂತೆ.

ನ್ಯೂಯಾರ್ಕಿನ ನಿವಾಸಿಗಳು ಈ ಬ್ಯಾರೆಲ್ ಗಳನ್ನು ಮನೆಗಳ ಚಾವಣಿಯಿಂದ ನೀರು ಕೆಳಗೆ ಸುರಿಯುವ ಪೈಪುಗಳಿಗೆ ಅಳವಡಿಸಿದರೆ ಆಯಿತು. ಮಳೆ ಬಿದ್ದಾಗ ಈ ಸರಳವಾದೊಂದು ವ್ಯವಸ್ಥೆಯ ಸಹಾಯದಿಂದ ನೀರನ್ನು ಶೇಖರಿಸಿಟ್ಟುಕೊಂಡಲ್ಲಿ ಚರಂಡಿಗೆ ನುಗ್ಗುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಹೇಗೂ ನ್ಯೂಯಾರ್ಕಿನ ಬೇಸಿಗೆಯಲ್ಲಿ ಮನೆಗಳ ಕೈತೋಟಕ್ಕೆ ಬಳಸುವ ನೀರಿನ ಪ್ರಮಾಣವೂ ಹೆಚ್ಚಂತೆ. ಮಳೆ ನೀರನ್ನು ಕೈ ತೋಟಗಳಿಗೆ ಬಳಸುವುದರಿಂದ ಅಲ್ಲಿನ ನಿವಾಸಿಗಳಿಗೆ ನೀರಿನ ಖರ್ಚು ಕಡಿಮೆ ಮತ್ತು ಬೇಸಿಗೆಯಲ್ಲಿ ನೀರನ್ನು ಹೆಚ್ಚಾಗಿ ಸರಬರಾಜು ಮಾಡುವ ಒತ್ತಡ ನ್ಯೂಯಾರ್ಕ್ ನಗರಕ್ಕೂ ಇರುವುದಿಲ್ಲ. ಹಾಗೇ ನೀರು ಅತಿಯಾಗಿ ಚರಂಡಿಗೆ ನುಗ್ಗಿ ಕುಡಿಯುವ ನೀರಿನ ವ್ಯವಸ್ಥೆಗಿರುವ ಪೈಪುಗಳಿಗೆ ಸೋರಿ ಅದನ್ನು ಕಲುಷಿತಗೊಳಿಸಬಹುದೆಂಬ ಯೋಚನೆಯೂ ಇರುವುದಿಲ್ಲ.

ಉಚಿತವಾಗಿ ಬೇಡ ಮಾರಾಯರೆ! ಕೈಗೆಟುಕುವ ಸಬ್ಸಿಡಿ ದರದಲ್ಲಿ ಬೆಂಗಳೂರು, ಮೈಸೂರು, ಹಾಸನ ಇತ್ಯಾದಿ ನಗರಗಳ ಪ್ರತೀ ಮನೆಗೂ ಈ ರೀತಿಯ ಬ್ಯಾರೆಲ್ ಗಳನ್ನು ಒದಗಿಸಿ ಅದರ ಬಳಕೆಯನ್ನು ಕಡ್ಡಾಯ ಮಾಡಿದರೆ ಎಷ್ಟೆಲ್ಲಾ ನೀರು ಉಳಿಸಬಹುದು!! ಅಲ್ಲದೆ, ಅತಿಯಾಗಿ ಮಳೆಯಾದಾಗ ಉಕ್ಕಿ ಹರಿದು ಜನ-ವಾಹನಗಳನ್ನು ಬಲಿ ತೆಗೆದುಕೊಳ್ಳುವ ಬೆಂಗಳೂರಿನ ತೆರೆದ ಚರಂಡಿಗಳ ಅಟ್ಟಹಾಸವನ್ನೂ ಸ್ವಲ್ಪ ತಡೆಯಬಹುದು.

ಏಷಿಯಾ ಖಂಡದಲ್ಲಿ ಸಧ್ಯದಲ್ಲಿ ಕಾಡಲಿರುವುದು ಎರಡು ಸಮಸ್ಯೆಗಳು. ಒಂದು ಬೆಳೆಯುತ್ತಿರುವ ಜನಸಮೂಹಕ್ಕೆ ಕೈಗೆಟಕುವ ಬೆಲೆಯಲ್ಲಿ ಆಹಾರ ಒದಗಿಸಿವುದು ಮತ್ತೊಂದು ಸ್ವಚ್ಚವಾದ ಕುಡಿಯುವ ಮತ್ತು ಮನೆಬಳಕೆಯ ನೀರನ್ನು ಒದಗಿಸಿವುದು. ಈ ಸರಳ ತಂತ್ರವನ್ನೂ ಮನೆಮನೆಯಲ್ಲೂ ಬಳಸುವಂತಾದರೆ ಮನೆ ಮುಂದಲ ಕೈತೋಟದ ಹಸಿರೂ ಹೆಚ್ಚಬಹುದು, ತರಕಾರಿ ಬೆಳೆಯಬಹುದು, ಜೇಬಿಗೂ ಸಮಾಧಾನ, ಬೇಸಿಗೆಯಲ್ಲಿ ನಮಗೂ-ಭೂಮಿಗೂ ತಂಪು.  
 
 
 

ಚರ್ನೋಬಿಲ್ ೨೫ ವರ್ಷಗಳು...ಜಪಾನಿನಲ್ಲಿ ಹೆಚ್ಚಿದ ಆತ್ಮಹತ್ಯೆಗಳೂ


ಜಪಾನಿನಲ್ಲಿ ಮೇ ತಿಂಗಳಿಂದ ನವೆಂಬರ್ ವರೆಗೆ ಘೋಷಿತ ಟೈಫೂನ್(ಚಂಡಮಾರುತ)ಗಳ ಕಾಲ. ಜಪಾನ್ ಇರುವ ಪೂರ್ವ ಮತ್ತು ಉತ್ತರ ಪೆಸಿಫಿಕ್ ಬೇಸಿನ್ ನಲ್ಲಿ ಈ ಬಾರಿ ಅಂದರೆ ೨೦೧೧ರಲ್ಲಿ, ೧೬ ಸಾಧಾರಣ ಸಾಮರ್ಥ್ಯದ ಚಂಡ ಮಾರುತಗಳು, ೪ ಅತ್ಯಂತ ಶಕ್ತಿಯುತ ಚಂಡಮಾರುತಗಳು ಮತ್ತು ಸುಮಾರು ೨೫-೨೬ ರಭಸದಿಂದ ಬೀಸುವ ಮಾರುತಗಳು ಬೀಸಲಿದೆಯೆಂದು ಚಂಡಮಾರುತಗಳನ್ನು ಮಾನಿಟರ್ ಮಾಡುವ ಅಂತರರಾಷ್ಟ್ರ‍ೀಯ ಹವಾಮಾನ ಸಂಸ್ಥೆಯೊಂದು ವರದಿ ಮಾಡಿದೆ. ಚಂಡಮಾರುತಗಳ ಕಾಲ ಪ್ರಾರಂಭವಾಗುವ ಮುನ್ನ ನ್ಯೂಕ್ಲಿಯರ್ ಪ್ಲಾಂಟ್ ಗಳ ಸೋರುವಿಕೆಯನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳುವುದು ನಮ್ಮ ಪರಮ ಉದ್ದೇಶ ಎಂದು ಜಪಾನ್ ಕೂಡಾ ತಿಳಿಸಿದೆ. ಫುಕೋಷೊಮಾ ನ್ಯೂಕ್ಲಿಯರ್ ಪ್ಲಾಂಟ್ ನ ಸುತ್ತಲೂ ಪಿರಮಿಡ್ ನಂತೆ ಸಂಪೂರ್ಣ ಮುಚ್ಚಿ ಬಿಡುವ ಕಟ್ಟಡವೊಂದನ್ನು ಕಟ್ಟುವ ಬಗ್ಗೆಯೂ ಜಪಾನ್ ಯೋಚನೆ ಮಾಡುತ್ತಿದೆ. ಯೋಚನೆ ಮಾಡಲು ಹೆಚ್ಚು ಸಮಯ ಇಲ್ಲ. ಹಾಗೇ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿರುವ ಜಪಾನ್ ಈಗ ಸುಲಭದಲ್ಲಿ ಸಂಪನ್ಮೂಲಗಳನ್ನು ಬಳಸುವ ಸ್ಥಿತಿಯಲ್ಲಿಯೂ ಇಲ್ಲ.

ಏಪ್ರಿಲ್ ೨೫ಕ್ಕೆ ಚರ್ನೋಬಿಲ್ ದುರಂತ ನಡೆದು ೨೫ ವರ್ಷಗಳಾದವು. ಈಗಲೂ ’ಚರ್ನೋಬಿಲ್’ ಎಂಬ ಹೆಸರು ಕೇಳಿದಾಗ ಇಡೀ ವಿಶ್ವದ ಜನರಲ್ಲಿ ಚುಳ್ಳನೆ ನಡುಕ. ವಿಕಿರಣ ಸೋರಿಕೆಯಿಂದ ಸಹಸ್ರಾರು ಪ್ರಾಣಹಾನಿ, ಜನರ ದೈಹಿಕ ಆರೋಗ್ಯದ ಮೇಲೆ ಆದ ಭಯಾನಕ ಪರಿಣಾಮಗಳಷ್ಟೇ ಅಲ್ಲದೆ ಚರ್ನೋಬಿಲ್ ಸುತ್ತಮುತ್ತಲ ಪ್ರದೇಶದ ಜನ ದಶಕಗಳ ಕಾಲ ಮಾನಸಿಕ ಖಿನ್ನತೆ, ನಿರಾಸೆ, ಆತಂಕ, ಭಯ, ಜೀವನದ ಕುರಿತು ಜಿಗುಪ್ಸೆಯಂತಹ ಮನೋವೇದನೆಗಳನ್ನು ಎದುರಿಸಿದ್ದರು. ಚರ್ನೋಬಿಲ್ ಘಟನೆಗೆ ಸಾಕ್ಷಿಯಾದವರ ಅನುಭವಗಳನ್ನು ಕೇಳಿದರೆ ಎಂಥವರಿಗೂ ಸಾವು ತಣ್ಣಗೆ ಸ್ಪರ್ಷಿಸಿ ಹೋದಂತಾಗುತ್ತದೆ.
 
ಈಗ ಫುಕೋಷೀಮಾದ ಸೋರಿಕೆ ಕಣ್ಣೆದುರಿಗಿದೆ. ಚೆರ್ನೋಬಿಲ್ ನಲ್ಲಿ ಸೋರಿದ ಪ್ರಮಾಣಕ್ಕಿಂತಲೂ ಹೆಚ್ಚು ವಿಕಿರಣ ಪರಿಸರವನ್ನು ಸೇರಿಯಾಗಿದೆ ಎಂದು ಅಳೆಯಲಾಗಿದೆ. ಒಂದು ಅಣುಬಾಂಬ್ ಸ್ಫೋಟವಾದಾಗ ಆಗುವ ಪರಿಣಾಮ ಕ್ಷಿಪ್ರವಾದರೆ ಸೋರಿಕೆಯ ಪರಿಣಾಮವೇ ಬೇರೆಯದ್ದು.
 
ವಿಕಿರಣ ಹರಡುವುದು ಗಾಳಿ ಮತ್ತು ಮಳೆಯಿಂದ ಅಥವಾ ಮಳೆ ಮಾರುತಗಳಿಂದ. ಒಂದು ಪ್ರದೇಶದಿಂದ ಮತ್ತೊಂದು ಭೌಗೋಳಿಕ ಪ್ರದೇಶಕ್ಕೆ ಹಾಯುವ ಮಾರುತಗಳು ವಿಕಿರಣಗಳನ್ನೂ ಹೊತ್ತೊಯ್ದು ಮಳೆ ಸುರಿಸುತ್ತವೆ. ಅವು ಮಳೆಸುರಿದೆಡೆಯೆಲ್ಲಾ ವಿಕಿರಣವೂ ನೆಲ ಸೇರುತ್ತದೆ. ಆ ಜಾಗದಲ್ಲಿ ಸರೋವರ, ನದಿ, ತೊರೆ, ಹಳ್ಳ ಕೊಳ್ಳಗಳಿದ್ದರೆ ವಿಕಿರಣ ಅಲ್ಲಿಯ ನೀರಿನಲ್ಲಿ ಸೇರುತ್ತದೆ. ಆ ಪ್ರದೇಶದಲ್ಲಿ ಹುಲ್ಲುಗಾವಲುಗಳಿದ್ದರೆ ವಿಕಿರಣ ಹುಲ್ಲಿನ ಮೇಲೆ ಚೆಲ್ಲುತ್ತದೆ, ಆ ಹುಲ್ಲನ್ನು ಮೇಯುವ ಹಸುಗಳನ್ನು ಅವುಗಳ ಹಾಲನ್ನೂ ಸೇರಿ ಮನುಷ್ಯನ ದೇಹವನ್ನು ಪ್ರವೇಶಿಸುತ್ತದೆ. ಕ್ರಮೇಣ ಥೈರಾಯಿಡ್ ಕ್ಯಾನ್ಸರ್, ಮನುಷ್ಯರಲ್ಲಿ-ಜೀವಿಗಳಲ್ಲಿ ಫಲವತ್ತತೆಯ ಸಮಸ್ಯೆ ಇತ್ಯಾದಿಗಳನ್ನು ಸೃಷ್ಟಿಸುತ್ತದೆ, ಹೆಚ್ಚಿಸುತ್ತದೆ. ಇದೆಲ್ಲ ಆಗಲು ಸ್ವಲ್ಪ ಸಮಯ ಬೇಕು. ಹಾಗಾಗಿ, ಫುಕೋಷಿಮಾದ ವಿಕಿರಣ ಸೋರಿಕೆಯಿಂದ ಆದ, ಮುಂದೆ ಆಗಲಿರುವ ದುರಂತಗಳನ್ನು ಕಾಣಲು ಸ್ವಲ್ಪ ಸಮಯ ಬೇಕು. ಈಗಾಗಲೇ ಹೆಂಗಸರು-ಮಕ್ಕಳು, ಹಾಲು ಕುಡಿಯುವಾಗ, ಚೀಜ್ ತಿನ್ನುವಾಗ ಎಚ್ಚರಿಕೆಯಿಂದ ಇರಿ ಎಂದು ಫ್ರಾನ್ಸ್ ಜನತೆಗೆ ಎಚ್ಚರಿಸಿದೆ. ಜಪಾನಿನ ಹಲವಾರು ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ಹಲವಾರು ರಾಷ್ಟ್ರಗಳು ನಿರ್ಬಂಧ ಹಾಕುತ್ತಿವೆ. ವಿಶ್ವದ ಬೇರೆ ಬೇರೆ ರಾಷ್ಟ್ರಗಳ ನದಿ-ಕೊಳಗಳಲ್ಲಿ ವಿಕಿರಣ ಪತ್ತೆಯಾಗಿದೆ.
 
ಇನ್ನು ಫುಕೋಷಿಮಾದ ನ್ಯೂಕ್ಲಿಯರ್ ಪ್ಲಾಂಟ್ ಗಳನ್ನು ರಿಪೇರಿ ಮಾಡಿ ಸೋರಿಕೆಯನ್ನು ಸಂಪೂರ್ಣ ನಿಲ್ಲಿಸಿ, ಮುಂದೆ ಸೋರಬಹುದಾದ ಸಾಧ್ಯತೆಯನ್ನೂ ತಪ್ಪಿಸುವ ಮುನ್ನವೇ ಜಪಾನಿನ ಕಡೆಗೆ ಒಂದು ಶಕ್ತಿಶಾಲಿ ಚಂಡಮಾರುತ ಬೀಸಿದರೆ?! ಅಬ್ಬಾ! ನಾವು ನಿಜಕ್ಕೂ ನಮ್ಮ ಪರಿಸರವನ್ನು ಗಾಜಿನ ಮನೆಯನ್ನಾಗಿ ಮಾಡಿಬಿಟ್ಟಿದ್ದೇವೆ!!! ಇನ್ನೊಂದೆರಡು ಬಲವಾದ ಏಟುಗಳು ಸಾಕು ಇಡೀ ವಿಶ್ವಕ್ಕೇ ಮರ್ಮಾಘಾತವಾಗಲು.
 
ಇದೆಲ್ಲದರ ಮಧ್ಯೆ ಜಪಾನಿನಲ್ಲಿ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ ಎಂದು ವರದಿಯಾಗುತ್ತಿದೆ. ಜಪಾನಿನಲ್ಲಿ, ಸಾಂಪ್ರದಾಯಿಕವಾಗಿ ಆತ್ಮಹತ್ಯೆ ಎಂದರೆ ತುಂಬಾ ಗೌರವದ ವಿಷಯ! ವ್ಯಕ್ತಿಯೊಬ್ಬನು ತನ್ನ ಸೋಲನ್ನು ಕಾಣುವ ಮುಂಚೆ ತನ್ನ ಘನತೆಯನ್ನು ಕಾಪಾಡಿಕೊಳ್ಳಲು ತನ್ನ ಪ್ರಾಣವನ್ನು ತೆಗೆದುಕೊಂಡು ಬಿಡುವುದು ತುಂಬಾ ಸಾಮಾನ್ಯ ಮತ್ತು ಸಮಾಜದ ಒಪ್ಪಿಗೆ ಪಡೆದ ವಿಷಯ. ಸಮುರಾಯ್ ಗಳ ತಮ್ಮ ಗೌರವಾನ್ವಿತ ಅಂತ್ಯ ಕಂಡುಕೊಳ್ಳುವ ಅಸ್ತ್ರ ಅದು. ನಿಮಗೆ ಗೊತ್ತಿರಬಹುದು. ಜಪಾನಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಜೀವ ತೆಗೆದುಕೊಳ್ಳುವವರ ಸಂಖ್ಯೆ ಸಿಕ್ಕಾಪಟ್ಟೆ ಜಾಸ್ತಿ. ಇತ್ತೀಚಿನ ವರ್ಷಗಳಲ್ಲಿ ಜರುತ್ತಿರುವ ಜಪಾನೀ ಎಕಾನಮಿಯ ದೆಸೆಯಿಂದ, ನಿರುದ್ಯೋಗ, ಹಣಕಾಸಿನ ಲಾಸ್ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ದುಪ್ಪಟ್ಟಾಗಿತ್ತಂತೆ. ಈಗ ಮಾರ್ಚ್ ೧೧ ರ ಭೂಕಂಪ, ಸುನಾಮಿಯ ಪರಿಣಾಮವಾಗಿ ಮತ್ತೆ ಆತ್ಮಹತ್ಯೆಗಳ ಸಂಖ್ಯೆ ಏರುತ್ತಿದೆಯಂತೆ. ಸುನಾಮಿಯಲ್ಲಿ ಕಳೆದು ಹೋಗಿರುವ ತನ್ನ ಕಂದಮ್ಮನನ್ನು ಹುಡುಕಲಾರದ ತಂದೆ, ಸುನಾಮಿಯಿಂದ ನಾಶವಾದ ಪ್ರದೇಶದ ಸ್ವಚ್ಚತಾ ಕಾರ್ಯ ಮಾಡುತ್ತಿದ್ದ ಸರ್ಕಾರೀ ನೌಕರ, ತಾನು ಬೆಳೆದಿದ್ದ ಎಲೆಕೋಸಿನ ಬೆಳೆಮೇಲೆ ವಿಕಿರಣ ಬಿದ್ದು ಇಡೀ ಬೆಳೆ ಬಳಸಲು ಅಯೋಗ್ಯವಾಯಿತೆಂದು ನೊಂದ ರೈತ ಹೀಗೇ...ಜನ ಭವಿಷ್ಯದ ಆಸೆ ಕಳೆದುಕೊಂಡು, ಇಡೀ ನಾಡನ್ನು ಆವರಿಸಿರುವ ಆಘಾತದ ಛಾಯೆಯಲ್ಲಿ ಖಿನ್ನರಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ವರದಿಗಳು ಬರುತ್ತಿವೆ.
 
ಜಪಾನೀ ಸರ್ಕಾರ ಆತ್ಮಹತ್ಯೆಯ ಯೋಚನೆ ಬರುತ್ತಿರುವವರಿಗೆ ಕೌನ್ಸೆಲಿಂಗ್ ಮಾಡಲು ಹಾಟ್ ಲೈನ್ ಗಳನ್ನು ಆರಂಭಿಸಿದೆ. ಸುನಾಮಿ, ಭೂಕಂಪ ಮತ್ತು ವಿಕಿರಣ ಸೋರಿಕೆಯಿಂದ ಎಲ್ಲವನ್ನೂ ಕಳೆದುಕೊಂಡು ಸರ್ಕಾರೀ ನಿರ್ಮಿತ ತಾತ್ಕಾಲಿಕ ಶೆಲ್ಟರ್ ಗಳಲ್ಲಿ ಇರುವ ಜನರಿಗೆ ಮನಸ್ಸಿಗೆ ಧೈರ್ಯ ತುಂಬುವ ಕೌನ್ಸೆಲಿಂಗ್ ಕಾರ್ಯಕ್ರಮಗಳನ್ನು ತುರ್ತಾಗಿ ಆಯೋಜಿಸುತ್ತಿದೆ. ಪುಟ್ಟ ಜಪಾನ್ ಗೆ ಇದು ಕಷ್ಟದ ಕಾಲ. ಒಂದು ಇಡೀ ದೇಶವಾಗಿ ಅದರ ಮನೋಸ್ಥೈರ್ಯವನ್ನು, ಆರ್ಥಿಕ ಶಕ್ತಿಯನ್ನು, ಕ್ಷಮತೆಯನ್ನು ಪರೀಕ್ಷಿಸುವ ಕಾಲ. ಸ್ವಲ್ಪ ಪರಿಸರದ ಕೋಪದಿಂದಾದದ್ದು, ಮತ್ತಷ್ಟನ್ನು ತಾನೇ ತಂದುಕೊಂಡದ್ದು.
 
ಜಪಾನ್ ನ್ಯೂಕ್ಲಿಯರ್ ಅನ್ನು ತಿರಸ್ಕರಿಸಿ ಮತ್ತೆ ಏಷಿಯಾದ ಪ್ರಬಲ ಶಕ್ತಿಯಾಗಿ ಮೇಲೇಳುವಂತಾಗಲಿ.
ಹಾಗೇ...ಮತ್ತೊಂದು ಟೈಫೂನ್ ಅದರ ಬೆನ್ನು ಮುರಿಯದಿರಲಿ. ವಿಕಿರಣದ ಸೋರಿಕೆಯನ್ನು ಜಗದ್ ವ್ಯಾಪಿ ಮಾಡದಿರಲಿ.
ನೋಡಿ!!! ಪರಿಸರದ ಶಕ್ತಿಯ ಮುಂದೆ ನಮ್ಮ ಪ್ರಕಾಂಡ ಪಾಂಡಿತ್ಯ ಎಷ್ಟು ಅಸಹಾಯಕ!!!
ನಿಜಕ್ಕೂ!! ನ್ಯೂಕ್ಲಿಯರ್ ಬಳಕೆ ನಮಗೆ ಬೇಕೇ?!!
 
 
 
ಗಾತ್ರ ಮುಖ್ಯವೋ, ಫಲವತ್ತತೆ ಮುಖ್ಯವೋ
 
ಕುಲಾಂತರಿ ತಳಿಗಳು ಪ್ರಕೃತಿಗೆ, ಜೀವಿಗಳ ದೇಹಕ್ಕೆ ಯಾವ ರೀತಿ, ಎಷ್ಟು ಮಾರಕ ಎಂದು ಹೇಳುತ್ತಲೇ ಕುಲಾಂತರಿ ತಳಿಗಳನ್ನು ಬೆಳೆಯುವ ರೀತಿ, ಉಪಯೋಗಿಸುವ ಕೀಟನಾಶಕಗಳು, ಅದರಿಂದಾಗುವ ಆನಾರೋಗ್ಯ, ಕೆಡುತ್ತಿರುವ ಧರೆಯ ಆರೋಗ್ಯ, ನಮ್ಮನ್ನು ಮ್ಯಾನಿಪ್ಯುಲೇಟ್ ಮಾಡುತ್ತಿರುವ ಶ್ರೀಮಂತ ಕಾರ್ಪೊರೇಷನ್ಗಳು, ಕುರಿಗಳಂತೆ ಹಳ್ಳಕ್ಕೆ ಬೀಳುತ್ತಿರುವ ನಾವು...ಎಲ್ಲವನ್ನೂ ಒಂದು ಸರಪಣಿಯನ್ನಾಗಿ ಪೋಣಿಸಿಡುವ ಪ್ರಯತ್ನ ನಮ್ಮದು. ಇದಕ್ಕೆ ಕೊನೆಯಿಲ್ಲ. ಹೇಳುವುದು ಧರೆಯಷ್ಟೇ ಇದೆ.
 
ಸ್ಕಾಟ್ ಲ್ಯಾಂಡಿನ ಒಂದು ಪ್ರಯೋಗ: ಕುಲಾಂತರಿ ತಳಿಗಳನ್ನು ತಿನ್ನಿಸಿ ಬೆಳೆಸಿದ ಕೀಟಗಳನ್ನು ಲೇಡಿ ಬಗ್ ಗಳಿಗೆ ತಿನ್ನಿಸಿ ಸಾಕಲಾಯಿತಂತೆ. ಆ ಲೇಡಿ ಬಗ್ ಗಳು ತಮ್ಮ ಸಾಧಾರಣ ಆಯುಷ್ಯಕ್ಕಿಂತ ಅರ್ಧ ಮಾತ್ರ ಬದುಕಿದವಂತೆ. ಪ್ರತೀ ಬಾರಿ ಇಡುತ್ತಿದ್ದುದಕ್ಕಿಂತ ಅರ್ಧದಷ್ಟು ಕಡಿಮೆ ಮೊಟ್ಟೆಗಳನ್ನು ಇಟ್ಟವಂತೆ. ಇಟ್ಟ ಮೊಟ್ಟೆಗಳಲ್ಲಿ ಅರ್ಧದಷ್ಟವು ಫಲವತ್ತಾಗಿರಲಿಲ್ಲವಂತೆ! ಇದು ಒಂದು ಪುಟ್ಟ ಉದಾಹರಣೆ ಅಷ್ಟೇ.
ಈ ಚಿತ್ರದಲ್ಲಿರುವುದು ಕುಲಾಂತರಿ ಕಡಲೆಕಾಯಿ ಬೀಜಗಳು. ಸಾಧಾರಣ ಕಡಲೆ ಕಾಯಿಗೆ ಈ ಗಾತ್ರ ಬರಲು ಯಾವ ಜೀವಿಯ ಅಥವ ಇನ್ಯಾವುದರ ಕಸಿ ಮಾಡಿಸಿದರೋ? ನೀವೇ ಯೋಚಿಸಿ...
 
 
 
 
 
 

 
 
 
 
 
Copyright © 2011 Neemgrove Media
All Rights Reserved