ಅಂಗಳ      ಗಾಳಿ ಅಂಗಿ ಚುಂಗು ಹಿಡಿದು
Print this pageAdd to Favorite
 

 ಗಾಳಿ ಅಂಗಿ ಚುಂಗು ಹಿಡಿದು
ಕಾಲಿಗಷ್ಟು ಚಕ್ರ ಕಟ್ಟಿ
ಮೆಲ್ಲ ಮೆಲ್ಲ ಸಿಲ್ಲಿ ಗಲ್ಲಿ
ಕೋಟೆ ಕೊತ್ತಲ ಊರು ಸುತ್ತಿ
ಕಣ್ಣು ಕಂಡ ಪಟಗಳನ್ನು
ಮನದ ಪದಕೆ ತಳಿಕೆ ಹಾಕಿ
ಹಿಗ್ಗು ಸುಗ್ಗಿ ಎಲ್ಲ ಸುರಿದು
ಪುಟದ ಮೇಲೆ ತಟಪಟಾ...

 
 

ಜರ್ಮನಿ: ಕಲೋನ್ ನಗರದಲ್ಲಿ ಬಾರ್ ಹಾಪಿಂಗ್!

ಟೋನಿ
 
ಎಲ್ಲರನ್ನೂ ಮತ್ತೆ ಬಸ್ ಹತ್ತಿಸಿಕೊಂಡ ಜ್ಯೂಜ಼ರ್ ಜರ್ಮನಿಯ ಕಲೋನ್ ನಗರದಲ್ಲಿ ನಿಮಗೆ ಶಾಪಿಂಗ್ ಗಾಗಿ ೩ ಗಂಟೆಗಳ ಕಾಲ ಸಮಯ ನೀಡಲಾಗುವುದೆಂದು ಮೈಕಿನಲ್ಲಿ ಹೇಳಿದ. ಬಸ್ಸಿನಲ್ಲಿದ್ದ ಕೆಲವು ಶಾಪಿಂಗ್ ಪ್ರಿಯ ಮಹಿಳೆಯರು ಹೋ ಎಂದು ಹರ್ಷೋದ್ಘಾರ ಮಾಡಿದವರೇ ಥಾಂಕ್ಯೂ ಥಾಂಕ್ಯೂ ಎಂದು ಜ್ಯೂಜ಼ರನಿಗೆ ಕೃತಜ್ನತೆ ಅರ್ಪಿಸಿದರು. ಮುಂದೆ ಕುಳಿತಿದ್ದ ಭಟ್ಟರು ರಾಜೇಗೌಡರತ್ತ ನೋಡಿ ತಮ್ಮ ಮೊಣಕೈ ಎತ್ತಿ ತೋರಿಸಿದರು. ರಾಜೇಗೌಡರು ಪ್ರತಿಯಾಗಿ ಕೈ ಮೇಲೆತ್ತಿ ಓಕೆ ಎಂದರು. ಭಟ್ಟರು ರಾಜೇಗೌಡರಿಗೆ ಮೊಣಕೈ ತೋರಿಸಿದ್ದು, ಇವರು ಅದಕ್ಕೆ ಪ್ರತಿಕ್ರಿಯಿಸಿದ್ದು ಕಂಡ ನಾನು ಇದೇನು ಇವರು ಗುಪ್ತ ವ್ಯವಹಾರದಲ್ಲಿ ತೊಡಗಿದೆಯಂತಲ್ಲಾ ಎಂಬ ಕೆಟ್ಟ ಕುತೂಹಲದಿಂದ ನನ್ನ ಮುಂದಿನ ಸೀಟಿನಲ್ಲಿ ಕೂತಿದ್ದ ರಾಜೇಗೌಡರನ್ನು ’ಏನ್ ಗೌಡ್ರೇ, ನೀವೂ ಭಟ್ಟರೂ ಏನೋ ಗುಪ್ತವಾಗಿ ವ್ಯವಹರಿಸುವಂತಿದೆ’ ಅಂದದ್ದಕ್ಕೆ ’ಏನೂ ಇಲ್ಲಾ ಕಣ್ರೀ, ಆ ಭಟ್ಟರು ಬಿಯರ್ ಬಾಟಲಿನ ಬಗ್ಗೆ ನೆನಪಿಸುತ್ತಿದ್ದಾರಷ್ಟೆ. ಅವರು ಬೆಳಿಗ್ಗೆ ಬೆಲ್ಜಿಯಂನಿಂದ ಹೊರಟಾಗಿನಿಂದಲೂ ಮೂರ್ನಾಲ್ಕು ಬಾರಿ ಜರ್ಮನಿಯ ಫೇಮಸ್ ಬಿಯರ್ ಬಾಟಲಿನ ಬಗ್ಗೆಯೇ ಹೇಳಿದರು ಕಣ್ರೀ, ಅದೆಂಥಾ ಮಹಾ ಬಿಯರ್ ನಾನು ನೊಡ್ದೇ ಇರೋದು! ಈ ಭಟ್ಟರು ಹೇಳಿದಾಗಿನಿಂದ ನನಗೂ ಅದರ ರುಚಿ ನೋಡಬೇಕೆನಿಸಿಬಿಟ್ಟಿದೆ ಕಣ್ರೀ’. ಅಂದರು. ಏನೋ ಕುತೂಹಲ ಸಂಗತಿಯನ್ನು ಹೇಳಬಹುದೆಂದು ಕಾತುರದಿಂದಿದ್ದ ನನಗೆ ಅವರು ಕೇವಲ ಬಿಯರ್ ಬಗ್ಗೆ ಪ್ರಸ್ತಾಪಿಸಿದ್ದು ಕೇಳಿ ನಿರಾಶೆಯಾಯಿತು.
 
ಕಲೋನ್ ನಗರದ ಪರ್ಫ಼್ಯೂಮ್ ಪ್ರಸಿದ್ದಿಯೆಂದು ಜ್ಯೂಜ಼ರ್ ಹೇಳತೊಡಗಿದ್ದ. ಅದಕ್ಕೆ ಪರ್ಫ್ಯೂಮ್ ನ ಇನ್ನೊಂದು ಹೆಸರು ಕಲೋನ್ ವಾಟರ್ ಅಂತಲೇ ಎಂದು ತಿಳಿಸಿದ. ಅಲ್ಲಿ ಒಳ್ಳೊಳ್ಳೆಯ ಐಟಂಗಳು ಏನೇನು ಸಿಗಬಹುದೆಂದು ಆತ ಹೇಳತೊಡಗಿದ್ದನ್ನು ಶಾಪಿಂಗ್ ಪ್ರಿಯ ಮಹಿಳೆಯರು ಕೇಳಿಸಿಕೊಂಡು ಆಗಲೇ ಶಾಪಿಂಗ್ ಕನಸು ಶುರು ಮಾಡಿಕೊಂಡಿದ್ದರು. ನನಗೆ ಆ ವಿಷಯಗಳ ಬಗ್ಗೆ ಆಸಕ್ತಿಯಿರದಿದ್ದರಿಂದ ರಾಜೇಗೌಡರತ್ತ ಬಗ್ಗಿ ಮಾತಿಗೆಳೆದೆ. ನಾವು ಮಾತನಾಡಲಿಕ್ಕೆ ಆರಂಭಿಸಿದ್ದೇ ತಡ ಕೆಲವು ಶಾಪಿಂಗ್ ಪ್ರಿಯ ಮಹಿಳೆಯರು ಶ್ ಎಂದು ಬೆರಳು ಬಾಯಿಗಡ್ಡವಿಟ್ಟು ನಮ್ಮತ್ತ ತಿರುಗಿ ಗುರಾಯಿಸಿದರು. ನಾವು ಮಾತನಾಡತೊಡಗಿದ್ದು ಅವರ ಏಕಾಗ್ರತೆಯ ಆಲಿಸುವಿಕೆಗೆ ಭಂಗವುಂಟುಮಾಡಿತ್ತು. ಅವರ ಸಿಟ್ಟಿನ ನೋಟಕ್ಕೆ ನಾವೇಕೆ ಗುರಿಯಾಗಬೇಕೆಂದು ನಾವು ಮಾತು ನಿಲ್ಲಿಸಿದವರು ಜ್ಯೂಜ಼ರ್ ಮಾತು ನಿಲ್ಲಿಸುವವರೆಗೂ ಅಕ್ಕ ಪಕ್ಕ ಪ್ರಕೃತಿಯನ್ನು ಸವಿಯುತ್ತಾ ತೆಪ್ಪಗೆ ಕೂರಬೇಕಾಯಿತು.
 
ಮದ್ಯಾಹ್ನ ಕಲೋನ್ ನಗರ ತಲುಪಿದೆವು. ಅದೊಂದು ಸುಂದರವಾದ ನಗರ. ಇಲ್ಲಿನ ಕಲೋನ್ ಕೆಥೆಡ್ರಲ್ ಜಗತ್ಪ್ರಸಿದ್ದವಾದುದು. ಇದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಚರ್ಚ್! ಇದು ಮೂಲತಃ ರೋಮನ್ ಕ್ಯಾಥೊಲಿಕ್ ಚರ್ಚಾದರೂ ಈಗ ಜರ್ಮನ್ ಕ್ಯಾಥೊಲೊಸಿಸಮ್ ನ ದ್ಯೋತಕ. ಇಲ್ಲಿ ಸಂತ ಪೀಟರ್ ಮತ್ತು ವರ್ಜಿನ್ ಮೇರಿಯನ್ನು ಪೂಜಿಸುತ್ತಾರಂತೆ. ಯುನೆಸ್ಕೋ ಇದನ್ನು ಈಗ ’ವರ್ಲ್ಡ್ ಹೆರಿಟೇಜ್ ಜಾಗ’ ವನ್ನಾಗಿ ಘೋಷಿಸಿದೆ. ಇದನ್ನು ೧೨೪೭-೪೮ ರಲ್ಲಿ ಕಟ್ಟಲು ಶುರು ಮಾಡಿ ೧೮೮೦ ಕ್ಕೆ ಸಂಪೂರ್ಣವಾಗಿ ಕಾಟ್ಟಿ ಮುಗಿಸಿದರಂತೆ! ಅಂದರೆ ಬರೋಬರಿ ಆರುನೂರು ವರ್ಷಗಳು! ಇಲ್ಲಿಗೆ ಏನಿಲ್ಲವೆಂದರೂ ದಿನಕ್ಕೆ ೧೫-೨೦ ಸಾವಿರ ಪ್ರವಾಸಿಗಳು ಭೇಟಿ ಕೊಡುತ್ತಾರಂತೆ. ಅದನ್ನು ನೋಡುವುದೇ ಅತ್ಯಂತ ಖುಷಿಯೆನಿಸಿತು. ಅದೊಂದು ಅದ್ಭುತವಾದ ವಾಸ್ತುಶಿಲ್ಪದ ಕೆತ್ತನೆಯಾಗಿತ್ತು. ಇಂದಿನ ಯಾವುದೇ ಆಧುನಿಕ ತಾಂತ್ರಿಕ ಉಪಕರಣಗಳಿಲ್ಲದಿದ್ದಾಗಲೂ ಅಷ್ಟು ಬೃಹತ್ತಾದ ಚರ್ಚ್ ನಿರ್ಮಿಸಿರುವ ಶಿಲ್ಫಿಗಳಿಗೆ ಮನದಲ್ಲೇ ವಂದಿಸಿದೆ. ಆ ಬೃಹತ್ತಾದ ಚರ್ಚ್ಅನ್ನು ಪೂರ್ಣವಾಗಿ ನೊಡಬೇಕೆಂದರೇ ಒಂದು ದಿನವಾದರೂ ಬೇಕಿತ್ತು. ಆರುನೂರು ವರ್ಷಗಳಲ್ಲಿ ಅದನ್ನು ನಿರ್ಮಿಸಲು ಅದೆಷ್ಟು ಸಾವಿರ ಶಿಲ್ಪಿಗಳು ಕೆಲಸ ಮಾಡಿರಬಹುದೆಂದು ಊಹಿಸಿಕೊಂಡವನಿಗೆ ಅದ್ಭುತ ಕೆತ್ತನೆಯ ಇಂತಹ ಬೃಹತ್ ಸ್ಮಾರಕಗಳು ಅನೇಕ ಸಾಮ್ರಾಜ್ಯಗಳು ಅಳಿದುಹೋದರೂ, ಯುದ್ಧಗಳಾದರೂ ಉಳಿದಿರುವುದು ಆಶ್ಚರ್ಯವೆನಿಸಿತು. ಬಹುಶಃ ಅಲ್ಲಿನ ರಾಜರುಗಳ ನಡುವಿನ ಕಲಹಗಳಿಗೆ ಸಿಕ್ಕಿ ಬಸವಳಿದು ಅಂತೂ ಅಂತಿಮವಾಗಿ ಅದು ಪೂರ್ಣಗೊಳ್ಳಲು ಆರುನೂರು ವರ್ಷಗಳಾಗಿರಬಹುದೆನಿಸಿತು.
 
ಎರಡನೆಯ ಮಹಾಯುದ್ದದ ಸಂದರ್ಭದಲ್ಲಿ ಕಲೋನ್ ನಗರದ ಮೇಲೆ ಧಾಳಿ ನಡೆದಿತ್ತಾದರೂ ಈ ಕೆಥೆಡ್ರಲ್ (ಚರ್ಚ್) ಗೆ ಅನಾಹುತವೇನೂ ಆಗಿರಲಿಲ್ಲ. ಎರಡನೆಯ ಮಹಾಯುದ್ದದಲ್ಲಿ ಅಮೇರಿಕವೇನಾದರೂ ತನ್ನ ಬಾಂಬಿನ ಧಾಳಿಯನ್ನು ಜರ್ಮನಿಯ ಮೇಲೆ ನಡೆಸಿದ್ದಲ್ಲಿ ಇಂದು ಜರ್ಮನಿಯ ಅನೇಕ ಪುರಾತನ ಕಟ್ಟಡಗಳು ಕಣ್ಮರೆಯಾಗುತ್ತಿದ್ದವು.
ಕಲೋನ್ ನಗರದಲ್ಲಿ ಅನೇಕ ಪುರಾತನ ಕಟ್ಟಡಗಳಿದ್ದವು. ಈ ನಗರದಲ್ಲಿನ ಹಲವಾರು ಸ್ಥಳಗಳನ್ನು ನಮಗೆ ತೋರಿಸಿದ ಜ್ಯೂಜ಼ರ್ ಶಾಪಿಂಗ್ ಗಾಗಿ ಮೂರು ಗಂಟೆಗಳ ಸಮಯ ಕೊಟ್ಟಿದ್ದ. ಅದಕ್ಕಾಗೇ ಕಾಯುತ್ತಿದ್ದ ಕೆಲವರು ಕಲೋನ್ ನ ಭಾರೀ ಮಾರುಕಟ್ಟೆಯತ್ತ ದಿಕ್ಕಾಪಾಲಾಗಿ ಓಡಿದ್ದರು. ಭಟ್ಟರು, ರಾಜೇಗೌಡರು ಯಾವುದೋ ಗಹನವಾದ ಚರ್ಚೆ ಮಾಡುತ್ತಿದ್ದವರಂತೆ ಕಂಡು ಬಂದದ್ದರಿಂದ ಅವರ ಬಳಿ ಹೋದೆ. ಇಬ್ಬರೂ ಬಿಯರ್ ಬಾಟಲ್ಲಿನ ಬಗ್ಗೆ ಚರ್ಚಿಸುತ್ತಿದ್ದರು. ಅವರ ಕುತೂಹಲವನ್ನು ತಣಿಸುವ ಸಲುವಾಗಿ ನಾನೂ ಅವರ ಜತೆ ಸೇರಿಕೊಂಡೆ. ಮೂವರೂ ಮಾರುಕಟ್ಟೆಯಲ್ಲಿ ಎಲ್ಲಿ ಬಿಯರ್ ಬಾಟಲ್ ಸಿಗಬಹುದೆಂದು ಹುಡುಕುತ್ತಾ ಹೊರಟೆವು. ಅಲ್ಲಿ ರಸ್ತೆಬದಿಯ ಅಂಗಡಿಯಲ್ಲೇ ದೊಡ್ಡ ದೊಡ್ಡ, ಡಿಸೈನ್ ಡಿಸೈನ್ ಆದ ಬಿಯರ್ ಬಾಟಲುಗಳನ್ನು ಒಪ್ಪವಾಗಿ ಜೋಡಿಸಿಟ್ಟಿದ್ದರು. ಅಷ್ಟು ದೊಡ್ಡ ಬಿಯರ್ ಬಾಟಲ್ಲುಗಳನ್ನು ಹೇಗೆ ತೆಗೆದುಕೊಂಡುಹೋಗುವುದೆಂದು ಇಬ್ಬರೂ ತಲೆಕೆಡಿಸಿಕೊಂಡರು.
 
ಆ ಬಿಯರ್ ಬಾಟಲಿಗಳು ಮನೆಯಲ್ಲಿ ಸಂಗ್ರಹಿಸಿಡುವಂತವಾಗಿದ್ದವು. ಅದರಲ್ಲಿರುವ ಬಿಯರ್ ಏನು ಮಾಡುವುದೆಂದು ಅವರು ಯೋಚನೆ ಮಾಡುತ್ತಿದ್ದಾಗ ನಾನು ಬೇಕಾದರೆ ಅದರಲ್ಲಿರುವ ಬಿಯರನ್ನು ಖಾಲಿಮಾಡಿ ಬಾಟಲಿನ ತೂಕವನ್ನು ಹಗುರಗೊಳಿಸಿಕೊಡುವುದಾಗಿ ಅವರಿಗೆ ಉಪಕಾರ ಮಾಡುವವನಂತೆ ಹೇಳಿದೆ. ರಾಜೇಗೌಡರು, ಭಟ್ಟರು ಒಂದೊಂದು ಬಾಟಲನ್ನು ಕೈಗೆತ್ತಿಕೊಂಡರು. ಅದನ್ನು ಹೇಗೆ ತೆರೆಯಬೇಕೆಂದು ಅವರು ಬಾಟಲಿಯ ಸುತ್ತ ಮುತ್ತ ನೋಡತೊಡಗಿದರು. ಅಷ್ಟರಲ್ಲಿ ಅಂಗಡಿಯ ಹುಡುಗ ಬಾಟಲಿಯ ಮೇಲಿದ್ದ ಡಿಸೈನಾಗಿದ್ದ ಮೇಲ್ಬಾಗವನ್ನು ಬಿಚ್ಚತೊಡಗಿದ. ಬಿಯರ್ ಬಾಟಲನ್ನು ಓಪನರ್ ನಿಂದ ತೆಗೆಯುವುದನ್ನು ನೋಡಿದ್ದ ನಮಗೆ ಅವನು ತಿರುಗಿಸಿ ತಿರುಗಿಸಿ ಮುಚ್ಚಳವನ್ನು ಬಿಚ್ಚುವುದನ್ನು ಕಂಡು ಆಶ್ಚರ್ಯವಾಯಿತು. ಹಾಗೆ ಬಿಚ್ಚಿದವನೇ ಬಾಟಲಿಯನ್ನು ಉಲ್ಟಾ ಮಾಡಲು ಹೊರಟ. ಅವನು ಬಾಟಲಿಯನ್ನು ಉಲ್ಟಾ ಮಾಡುವಂತೆ ಬಗ್ಗಿಸಿದ್ದೇ ತಡ ’ಹೊಯ್ ಹೊಯ್ ಚೆಲ್ತದೇ, ಚೆಲ್ತದೇ’ ಎಂದು ಭಟ್ಟರು ಕೂಗಿದರು. ಹಾಗೆ ಅವರು ಕನ್ನಡದಲ್ಲಿ ಕೂಗಿದ್ದು ಕೇಳಿ ಗಾಬರಿಯಾದ ಅಂಗಡಿಯ ಹುಡುಗ ಇವರು ನನ್ನನ್ನು ಬೈದರೆಂದೇ ಬಾವಿಸಿ ಬಾಟಲಿಯನ್ನು ತಟ್ಟನೇ ಮೇಜಿನ ಮೇಲಿಟ್ಟು ಪಿಳಿ ಪಿಳಿ ಕಣ್ಣುಬಿಡತೊಡಗಿದ್ದ.
 
ಆತ ಆ ದೊಡ್ಡ ಬಿಯರ್ ಬಾಟಲಿಯ ಮುಚ್ಚಳವನ್ನು ತೆಗೆದು ತಲೆಕೆಳಗೆ ಮಾಡಿದ್ದರೂ ಅದರಿಂದ ಒಂದು ಹನಿ ಕೂಡಾ ಬಿಯರ್ ಹೊರಗೆ ಬಾರದ್ದನ್ನು ಕಂಡು ನಮಗೆ ಆಶ್ಚರ್ಯವಾಗಿತ್ತು. ನಾನು ಕುತೂಹಲದಿಂದ ಅವನಿಟ್ಟ ಬಾಟಲನ್ನು ಕೈಗೆತ್ತಿಕೊಂಡು ಬಾಟಲಿಯ ಒಳಗೆ ನೊಡಿದರೆ ಅದರಲ್ಲಿ ಬಿಯರೂ ಇಲ್ಲ, ಎಂಥದೂ ಇರಲಿಲ್ಲ. ’ರೀ ಇದು ಖಾಲಿ ಬಾಟಲ್ ಕಣ್ರೀ, ಇದರಲ್ಲಿ ಬಿಯರ್ ಇಲ್ಲ’ ಅಂದೆ. ಕೂಡಲೇ ಅವರಿಬ್ಬರೂ ಒಂದೊಂದು ಬಾಟಲನ್ನು ಕೈಗೆತ್ತಿಕೊಂಡು ’ಹೌದು ಕಣ್ರೀ, ಇವೆಲ್ಲಾ ಖಾಲಿ ಬಾಟಲಿಗಳೇ’ ಅಂದರು. ಅವು ಒರಿಜಿನಲ್ ಬಿಯರ್ ಇರುವ ಬಾಟಲಿಗಳಾಗಿರದೆ ಮನೆಯ ಶೋಕೇಸಿನಲ್ಲಿ ಶೋಗಾಗಿ ಇಡುವಂತಹ ಬಾಟಲಿಗಳಾಗಿದ್ದವು. ಯಾವಾಗ ಅದರಲ್ಲಿ ಬಿಯರ್ ಇಲ್ಲವೆಂದು ಮೂವರ ಗಮನಕ್ಕೆ ಬಂದಿತೋ ಮೊದಲು ನೋಡಿದಾಗ ಅಂದ ಚಂದವಾಗಿ ಕಂಡಿದ್ದ ಆ ಬಾಟಲಿಗಳು ಯಾವುದಕ್ಕೂ ಪ್ರಯೋಜನಕ್ಕೆ ಬಾರದ ನಿಷ್ಪ್ರಯೋಜಕ ವಸ್ತುವಂತೆ ಕಾಣತೊಡಗಿದವು. ’ರೀ ಭಟ್ರೇ, ಬೆಳಿಗ್ಗಿಂದ ಬಿಯರ್ ಬಿಯರ್ ಎಂದು ಕನವರಿಸುತ್ತಿದ್ರಲ್ಲಾ ತಗಂಡೋಗಿ ನಾಲ್ಕು ಬಾಟಲಿಗಳನ್ನ’ ಅಂದೆ. ’ಯಾರಿಗ್ರೀ ಬೇಕು, ಈ ಖಾಲಿ ಬಾಟಲುಗಳು’ ಅಂದವರೇ ಇನ್ನೆಲ್ಲಿ ಅಂಗಡಿಯವನು ತನಗೆ ಆ ಬಾಟಲನ್ನು ತಗಲಾಕಿಬಿಡುತ್ತಾನೋ ಎಂದು ಅವಸರದಿಂದ ಜಾಗ ಖಾಲಿ ಮಾಡಿದರು. ಬಿಯರ್ ಖಾಲಿ ಮಾಡಬಹುದೆಂಬ ಆಸೆಯಿಂದ ಅವರೊಟ್ಟಿಗೆ ಹೋಗಿದ್ದ ನಾನು ಸುಮ್ಮನೇ ಹತ್ತು ನಿಮಿಷ ವ್ಯರ್ಥವಾಯಿತೆಂದು ಗೊಣಗುತ್ತಾ ಕಲೋನ್ ನಗರ ಸುತ್ತಾಡಲು ಹೊರಟೆ. ದೂರದಲ್ಲಿ ಗುರುಬಸವಯ್ಯನವರು ಬರುವುದು ಕಾಣಿಸಿತು. ಇನ್ನೆಲ್ಲಿ ಅವರ ಕ್ಯಾಮರಾದಿಂದ ಫೋಟೋ ತೆಗೆಯಿರೆಂದು ಗಂಟು ಬೀಳುತ್ತಾರೋ ಎಂಬ ಭಯದಿಂದ ಪಕ್ಕದ ಗಲ್ಲಿಯಲ್ಲಿ ನುಗ್ಗಿ ಜನಸಂದಣಿಯಲ್ಲಿ ತೂರಿಕೊಂಡೆ. ಅವರ ಕ್ಯಾಮರಾ ಒಂದು ಮಹಾನ್ ಯಡವಟ್ಟು ಐಟಂ. ಈಗಾಗಲೇ ಸುಮಾರು ಫಜೀತಿಗೆ ಸಿಕ್ಕಿಸಿತ್ತು. ನಾನೊಬ್ಬನೇ ಅಲ್ಲ, ನಮ್ಮ ಜತೆ ಪ್ರವಾಸದಲ್ಲಿದ್ದವರೆಲ್ಲರೂ ಅವರ ಕ್ಯಾಮರಾ ಸಹವಾಸ ತಪ್ಪಿಸಿಕೊಂಡರೇ ಸಾಕೆಂದು ಅವರನ್ನು ಕಂಡಕೂಡಲೇ ತಪ್ಪಿಸಿಕೊಳ್ಳತೊಡಗಿದ್ದರು (ಮುಂದೆ ಅವರ ಕ್ಯಾಮರಾದ ಮಹಿಮೆಯನ್ನು ವಿವರಿಸುತ್ತೇನೆ).
 
ಜರ್ಮನಿಯಲ್ಲೂ ಚಳಿ ನಡುಗಿಸುತ್ತಿತ್ತು. ಅಲ್ಲಿಯ ಬಹುತೇಕ ಅಂಗಡಿಗಳಲ್ಲಿ ವ್ಯಾಪಾರಸ್ಥರು ಇಂಗ್ಲಿಷ್ ಮಾತನಾಡುತ್ತಿದ್ದರು. ಜನರೂ ಅಷ್ಟೇ. ತುಂಬಾ ವಿನಯವಾಗಿ ಕೂಲಾಗಿ ಮಾತಾಡುತ್ತಿದ್ದರು. ಮುಖ ಗಂಟು ಹಾಕಿಕೊಂಡು ಕೇಳಿದ್ದಷ್ಟಕ್ಕೇ ಉತ್ತರಿಸುತ್ತಿದ್ದ ಶಿಸ್ತಿನ ಬ್ರಿಟಿಷರಿಗೂ, ಬಿಂದಾಸ್ ಪ್ರವೃತ್ತಿಯ ಫ಼್ರೆಂಚರಿಗೂ ಹೋಲಿಸಿದರೆ ಜರ್ಮನಿಯರು ಸೌಮ್ಯರಂತೆ ಕಂಡುಬಂದರು. ಅಲ್ಲಿನ ಅಂಗಡಿಯೊಂದರ ಮಾಲೀಕ ನಾನು ಭಾರತದವನೆಂದು ತಿಳಿದ ಕೂಡಲೇ ಖುಶಿಯಾಗಿ ’ಏನು ನಿಮ್ಮ ಭಾರತದಲ್ಲಿ ಎರಡು ಸಾವಿರ ಡಾಲರುಗಳಿಗೆಲ್ಲಾ ಟಾಟಾ ಕಂಪನಿಯವರು ಹೊಸ ಕಾರು ಕೊಡುತ್ತಿದ್ದಾರಲ್ಲಾ, ವಾಟ್ ಎ ನೈಸ್ ಥಿಂಗ್’ ಅಂದ. ನಮ್ಮ ನಾನೋ ಕಾರು ಒಂದು ಲಕ್ಷ ರೂಗಳಿಗೆ ಸಿಗುತ್ತದೆನ್ನುವುದು ಯೂರೋಪಿನಲ್ಲೆಲ್ಲಾ ಸುದ್ದಿಯಾಗಿತ್ತು. ಸಣ್ಣ ಸಣ್ಣ ಗಲ್ಲಿಗಳನ್ನು ಸುತ್ತಾಡಿದ ನಾನು ಶಾಪಿಂಗ್ ಸಂಸ್ಕೃತಿಯ ವಿರೋಧಿಯಾಗಿದ್ದರಿಂದ ಯಾವ ಶೋ ರೂಮಿನೊಳಕ್ಕೂ ಹೋಗದೇ ಸಣ್ಣ ಅಂಗಡಿಯೊಂದರಲ್ಲಿ ನೆನಪಿಗಿರಲಿ ಎಂದು ಒಂದಷ್ಟು ಕೀ ಚೈನುಗಳನ್ನು ಕೊಂಡುಕೊಂಡೆ. ಅಲ್ಲೊಬ್ಬ ಕಪ್ಪಗಿದ್ದ, ದಪ್ಪಗಿದ್ದ ವ್ಯಕ್ತಿಯೊಬ್ಬ ರಸ್ತೆ ಮದ್ಯದಲ್ಲಿ ಒಂದೆರಡು ಬಾಟಲು ನೀರು ಕುಡಿದವ, ಮತ್ತೆ ಹೊಟ್ಟೆಯಿಂದ ಆ ನೀರನ್ನು ವಾಪಸು ತೆಗೆದು ಬಾಯಿಯಿಂದ ಕೊಳಾಯಿಯಲ್ಲಿ ನೀರು ಬರುವಂತೆ ಬಿಡತೊಡಗಿದ್ದ. ನಮ್ಮ ಮಾರ್ಕೆಟ್, ಕಲಾಸಿಪಾಳ್ಯದಲ್ಲಿ ಹಾವಾಡಿಸುವವರ ಕಲೆಯಂತೆ ಈತನೂ ಒಂದು ಚಾಪೆಯನ್ನು ಹಾಕಿ ನೀರನ್ನು ಕುಡಿಯುವುದು ಮತ್ತೆ ಅದೇ ನೀರನ್ನು ವಾಪಸು ತೆಗೆಯುವುದು ಮಾಡುತ್ತಿದ್ದ. ಆತನ ಸಾಹಸವನ್ನು ನೋಡುತ್ತಿದ್ದ ಪ್ರವಾಸಿಗರು ಆತನ ಚಾಪೆಗೆ ಚಿಲ್ಲರೆ ನಾಣ್ಯಗಳನ್ನು ಹಾಕಿ ಮುಂದೆ ಹೋಗುತ್ತಿದ್ದರು. ಯೂರೋಪಿನಲ್ಲಿಯೂ ರಸ್ತೆ ಬದಿಯಲ್ಲಿ ಮನರಂಜನೆ ನೀಡುವವರಿದ್ದಾರಲ್ಲಾ ಎಂದು ಖುಶಿಯಾದ ನಾನು ಅವನ ಫೋಟೊ ತೆಗೆದು ನನ್ನಲ್ಲಿದ್ದ ಅಷ್ಟಿಷ್ಟು ಸೆಂಟ್ಸ್ ಗಳನ್ನು ಹಾಕಿದೆ.
 
ಹಾಗೆ ಒಬ್ಬೊಬ್ಬನೇ ಸುತ್ತಾಡುವುದರಲ್ಲಿ ಮುಂಚಿನಿಂದಲೂ ನನಗೆಂತದೋ ಖುಶಿಯಾಗುತ್ತಿತ್ತು. ನಾನು ಈ ಬಗೆಯ ಪ್ರವಾಸಿ. ಬಹಳಷ್ಟು ಜನರಿಗೆ ನನ್ನ ಶೈಲಿಯಿಂದ ಇರುಸುಮುರುಸಾಗಬಹುದೇನೋ. ಜ್ಯೂಜರ್ ತಂದಿಳಿಸಿದ್ದ ಮಾರುಕಟ್ಟೆಯ ರಸ್ತೆಗಳಲ್ಲಿ ನಡೆಯುತ್ತಿದ್ದಾಗ ನಮ್ಮ ಸಹ ಪ್ರವಾಸಿಗರು ಅಲ್ಲಲ್ಲಿ ಸಿಕ್ಕಿ ಹಲೋ ಎಂದು ಮುಂದೆ ಹೋಗುತ್ತಿದ್ದರು. ಚಳಿಗೆ ಕೊಂಚ ಮೈ ಬೆಚ್ಚಗೆ ಮಾಡಿಕೊಳ್ಳೊಣವೆಂದು ಬಾರುಗಳತ್ತ ಕಣ್ಣಾಡಿಸತೊಡಗಿದೆ. ಮಾರುಕಟ್ಟೆ ತುಂಬಾ ದೊಡ್ಡದಾಗಿದ್ದರಿಂದ ನಾವು ಅನೇಕ ಬಾರಿ ಸುತ್ತಾಡಿ ನಾವು ಹೊರಟಿದ್ದ ಜಾಗಕ್ಕೆ ಹಿಂದಿರುಗುವಾಗ ದಾರಿತಪ್ಪುತ್ತಿತ್ತು. ಪ್ರತಿಬಾರಿ ಒಂದೊಂದು ದೇಶದಲ್ಲಿ ನಮ್ಮನ್ನು ಸುತ್ತಾಡಲು ಬಿಟ್ಟಾಗೆಲ್ಲಾ ಜ್ಯೂಜ಼ರ್ ಮತ್ತೆ ನಮಗೆ ಎಲ್ಲಿ ಬರಬೇಕೆಂದು ಲ್ಯಾಂಡ್ ಮಾರ್ಕ್ ಹೇಳುತ್ತಿದ್ದರಿಂದ ಅದನ್ನು ಬರೆದಿಟ್ಟುಕೊಳ್ಳುತ್ತಿದ್ದೆವು. ಯಾಕೆಂದರೆ ಅವನು ಹೇಳಿದ್ದ ಸಮಯಕ್ಕೆ ಸರಿಯಾಗಿ ನಾವುಗಳು ಅಲ್ಲಿ ಹಾಜರಾಗಿರಬೇಕಿತ್ತು. ರಾತ್ರಿಗಳ ಅಲೆದಾಟದಲ್ಲಿ ಸಮಯದ ಸಮಸ್ಯೆಯಿರುತ್ತಿರಲಿಲ್ಲ.
 
ಹಾಗೇ, ಅಲ್ಲೊಂದು ಬಾರಿನ ಬೋರ್ಡು ಕಾಣಿಸಿದ್ದರಿಂದ ಅದರೊಳಗೆ ಹೊಕ್ಕೆ. ಮಬ್ಬುಗತ್ತಲಿನ ಬಾರಿನ ಒಳಹೊಕ್ಕಾಗ ಅಲ್ಲಿದ್ದವರು ಸರಿಯಾಗಿ ಕಾಣಿಸುತ್ತಿರಲಿಲ್ಲ. ಟೇಬಲೊಂದರಲ್ಲಿ ಕೂತು ಮೆನು ತೆಗೆದು ಅಲ್ಲಿನ ವಿಶೇಷತೆಯ ಬಗ್ಗೆ ಹುಡುಕತೊಡಗಿದ್ದೆ. ’ರಂ ತಗಳ್ರೀ, ಇಲ್ಲಿನ ಸ್ಪೆಷಲ್ ಡ್ರಿಂಕ್ ಅದು’ ಎಂಬ ಅಪ್ಪಟ ಕನ್ನಡದ ಅಣಿ ಮುತ್ತು ಕೇಳಿ ಆಶ್ಚರ್ಯದಿಂದ ತಿರುಗಿ ನೋಡಿದರೆ ನಮ್ಮ ಕಪ್ಪದ್ ಅವರ ಗೆಳೆಯನೊಂದಿಗೆ ಅದಾಗಲೇ ಅಲ್ಲಿ ಬಂದು ಸೆಟಲ್ ಆಗಿದ್ದರು. ನಾನು ಅವರು ಹೇಳಿದ್ದರಿಂದ ಅದನ್ನೇ ಟೇಸ್ಟ್ ನೋಡಲು ಆರ್ಡರ್ ಮಾಡಿದೆ. ನಮ್ಮಲ್ಲಾದರೆ ರಂ ಕಪ್ಪು ಅಥವಾ ಬಿಳಿ ಬಣ್ಣದ್ದಾಗಿರುತ್ತದೆ. ಆದರೆ ಅಲ್ಲಿನ ವೈಟರಳು ತಂದ ರಂ ವಿಸ್ಕಿಯ ಬಣ್ಣದ್ದಾಗಿದ್ದರಿಂದ ಅವಳೇನಾದರೂ ವಿಸ್ಕಿ ತಂದು ಬಿಟ್ಟಳೋ ಎಂದು ನಾನು ರಂ ಆರ್ಡರ್ ಮಾಡಿದ್ದೆಂದು ಅವಳಿಗೆ ಹೇಳಿದೆ. ನಸುನಕ್ಕ ಅವಳು ರಮ್ಮನ್ನೇ ಕೊಟ್ಟಿರುವುದಾಗಿ ಹೇಳಿದಳು. ಅವಳಿಗೆ ಥಾಂಕ್ಸ್ ಹೇಳಿ ಮುಂದುವರಿಸಿದೆ. ನನ್ನ ಟೇಬಲ್ ನಲ್ಲಿ ನಾನೊಬ್ಬನೇ ಇದ್ದುದರಿಂದ ಕಪ್ಪದ್ ಹಾಗೂ ಅವರ ಸ್ನೇಹಿತ ತಮ್ಮೆಲ್ಲಾ ಐಟ್ಂ ಗಳನ್ನೂ ನನ್ನ ಟೇಬಲ್ಲಿಗೇ ತಂದು ಕೂತರು.
 
ಮೂವರೂ ಚಳಿಗೆ ಖುಶಿಯಾಗಿ ಹರಟುತ್ತಾ ಗುಂಡು ಹಾಕುವಾಗ ಮತ್ತೊಂದು ಪರಿಚಿತ ಆಕೃತಿ ಬಾರೊಳಗೆ ಬಂದದ್ದು ಕಂಡು ’ನೋಡ್ರೀ ನಿಮ್ಮ ಮೈಸೂರ್ ನವರು ಮತ್ತೊಬ್ರು ಬಂದ್ರಲ್ರೀ’ ಎಂದರು. ಅತ್ತ ತಿರುಗಿ ನೋಡಿದರೆ ನಮ್ಮ ಭಟ್ಟರು. ಅವರು ನಮಗೆ ಕಂಡರಾದರೂ ಬಾರೊಳಗಿನ ಮಬ್ಬುಗತ್ತಲಲ್ಲಿ ಹೊರಗಡೆಯಿಂದ ಬಂದವರಿಗೆ ನಾವು ತಕ್ಷಣಕ್ಕೆ ಕಾಣುತ್ತಿರಲಿಲ್ಲ. ’ಬರ್ರೀ ಭಟೇ ಬರ್ರೀ’ ಅಂದೆ. ಕಣ್ಣುಜ್ಜಿಕೊಂಡು ನಮ್ಮತ್ತ ನೋಡುತ್ತಾ ಹಸನ್ಮುಖರಾದ ಭಟ್ಟರು ನಮ್ಮಲ್ಲಿಗೆ ಬಂದವರೇ ’ಎಲ್ಲಿ ಹೋಗಿಬಿಟ್ಟಿರಿ ನೀವು, ಆ ಹೆಂಗಸರು ನನ್ನನ್ನು ಶಾಪಿಂಗ್ ಗೆಂದು ಎಳೆದುಕೊಂಡು ಹೋಗಿಬಿಟ್ರು ಮಾರಾಯ್ರಾ, ಹೇಗೋ ಅವರ ಕಣ್ಣು ತಪ್ಪಿಸಿಕೊಂಡು ಬಂದು ನಿಮ್ಮನ್ನೂ ಗೌಡರನ್ನೂ ಹುಡುಕಿದೆ... ಇಬ್ಬರೂ ಸಿಗಲಿಲ್ಲ ಹಾಗೇ ಬಾರು ಹುಡುಕಿಕೊಂಡು ಬಂದರೆ ನೀವಿಲ್ಲಿ ಕೂತಿರಲ್ಲಾ’ ಎಂದರು. ’ಶಾಪಿಂಗ್ ಎಲ್ಲಾ ಆಯ್ತಾ ಭಟ್ಟರೇ’ ಅಂದದ್ದಕ್ಕೆ ’ಥೂ ಅದೆಂತಾ ಶಾಪಿಂಗ್ ಮಾಡ್ತಾರೋ ಈ ಹೆಂಗಸ್ರು, ಸುಮ್ಮನೇ ಇಡೀ ಮಾರ್ಕೆಟ್ ಎಲ್ಲಾ ಸುತ್ತಾಡಿಸಿಬಿಟ್ರು ಮಾರಾಯ್ರ, ಒಂದೂ ಸಾಮಾನು ಕೊಳ್ಳಲಿಲ್ಲ. ಸುಮ್ಮನೇ ಎರಡು ಗಂಟೆ ಅವರ ಜತೆ ಸುತ್ತಾಡಿ ಸಾಕಾಗಿ ಹೋಯ್ತು, ಏನದ್ರೂ ಮಾಡಿಕೊಳ್ಳಿ ಅಂತಾ ಟಾಯ್ಲೆಟ್ ಗೆ ಹೋಗಬೇಕೆಂದು ಸುಳ್ಳು ಹೇಳಿ ತಪ್ಪಿಸಿಕೊಂಡು ಬಂದೆ’ ಅಂದರು. ’ಇಲ್ಲೆಲ್ಲಾ ಶಾಪಿಂಗ್ ಮಾಡೋದು ವೇಸ್ಟ್ ಕಣ್ರೀ, ಸುಮ್ಮನೆ ಜಾಗ ನೋಡುತ್ತಾ ಎಂಜಾಯ್ ಮಾಡಬೇಕು ಇಲ್ಲಿಗಿಂತ ಕಡಿಮೆ ಬೆಲೆಯಲ್ಲಿ ನಮ್ಮ ಊರುಗಳಲ್ಲೇ ಬೇಕಾದ್ದು ಸಿಗುತ್ತೆ. ಪ್ರವಾಸ ಹೋಗೋದು ಖುಷಿಯಾಗಿ ಆನಂದವನ್ನು ಅನುಭವಿಸಲು, ಅಲ್ವೇನ್ರೀ ಕಪ್ಪದ್ ಹೇಳಿದಾಗ ’ಅದು ಸರಿ’ ಎಂದ ಭಟ್ಟರು ಗ್ಲಾಸನ್ನು ಮೇಲೆತ್ತಿ ಚಿಯರ್ಸ್ ಅಂದರು.
ಅದಾಗಲೇ ಎರಡು ಮೂರು ಬಾರಿ ಯೂರೋಪ್ ಪ್ರವಾಸ ಮಾಡಿದ್ದ ಕಪ್ಪದ್ ನಮಗೆ ಮಾರ್ಗದರ್ಶಕರಾಗಿದ್ದರು. ಗೊತ್ತು ಗುರಿಯಿಲ್ಲದೆ ಅಲೆಯುವ ಸ್ವಭಾವದವನಾದ ನನಗೆ ಅವರು ಅಲ್ಲಿನ ಸ್ಥಳಗಳ ಬಗ್ಗೆ ನೀಡುತ್ತಿದ್ದ ಮಾಹಿತಿಗಳು ಅಮೂಲ್ಯವಾಗಿದ್ದವು. ಎರಡೆರಡು ಪೆಗ್ ಆರ್ಡರ್ ಹೇಳಿ ಯೂರೋಪಿನ ನಗರಗಳ ಬಗ್ಗೆ ಕಪ್ಪದ್ ಹೇಳುತ್ತಿದ್ದ ಮಾಹಿತಿಗಳು ಸ್ವಾರಸ್ಯಕರವಾಗಿದ್ದರಿಂದ ಎಲ್ಲರೂ ಅವರ ಮಾತನ್ನು ಕೇಳುತ್ತಾ ಗುಂಡು ಮುಗಿಸಿ ಎದ್ದೆವು. ಭಟ್ಟರು ಹೆಂಗಸರು ನನ್ನನ್ನು ಹುಡುಕುತ್ತಿರುತ್ತಾರೆಂದು ಅವಸರದಿಂದ ಓಡಿದ್ದರು. ಮುಂದೆ ಸ್ವಿಜರ್ ಲೆಂಡಿನಲ್ಲಿ ಸಿಕ್ಕಾಪಟ್ಟೆ ಚಳಿ ಇರುತ್ತದೆಂದೂ ಕೆಲವೆಡೆ ಮೈನಸ್ ಡಿಗ್ರಿಯಿರುವುದರಿಂದ ಡ್ರಿಂಕ್ಸ್ ಬೇಕಾಗುತ್ತದೆಂದು ಹೇಳಿದ ಕಪ್ಪದ್ ಅಲ್ಲಿ ಎಲ್ಲವೂ ದುಬಾರಿಯಾಗಿರುವುದರಿಂದ ಇಲ್ಲಿಯೇ ನಿಮಗೆ ಬೇಕಾದಷ್ಟು ಸ್ಟಾಕ್ ತೆಗೆದುಕೊಂಡುಬಿಡುವುದು ಒಳ್ಳೆಯದೆಂದು ಸಲಹೆ ನೀಡಿದ್ದರಿಂದ ಒಂದಷ್ಟು ಪಾರ್ಸಲ್ ತೆಗೆದಿಟ್ಟುಕೊಂಡೆವು. ಹೊರಗೆ ಬಂದು ಇನ್ನೂ ಸಮಯವಿದ್ದುದರಿಂದ ಸುತ್ತಾಡಲು ಒಂದೊಂದು ದಿಕ್ಕಿಗೆ ಹೊರಟೆವು.
 
(ಮುಂದುವರಿಯುವುದು)  
 
 

 
 
 
 
 
Copyright © 2011 Neemgrove Media
All Rights Reserved