ಅಂಗಳ      ಖುರಪುಟ
Print this pageAdd to Favorite


 
ಆಸ್ಪರ್ಟೇಮ್-ಪ್ರತೀ ದೇಹವನ್ನೂ ಹೊಕ್ಕುತ್ತಿರುವ ನಿತ್ಯ ವಿಷ!

ಆಸ್ಪರ್ಟೇಮ್! ಹೆಚ್ಚಿನವರು ಈ ಹೆಸರನ್ನು ತಕ್ಷಣಕ್ಕೆ ಗುರುತಿಸಲಾರರು. ಬೇಡ ಬಿಡಿ. ರೆಸ್ಟೋರಾಂಟ್ ಗಳಲ್ಲಿ, ಸುಪರ್ ಮಾರ್ಕೆಟ್ ಗಳಲ್ಲಿ ಮಾರಾಟವಾಗುವ ಈಕ್ವಲ್, ಕ್ಯಾನ್ದೆರೆಲ್ ಅಥವಾ ನ್ಯೂಟ್ರಾಸ್ವೀಟ್ ಗಳೆಂಬ ಆರ್ಟಿಫಿಶಿಯಲ್ ಸಕ್ಕರೆಗಳು ಗೊತ್ತುಂಟಾ? ಅಥವಾ ಡಯಟ್ ಕೋಲಾಗಳು ಗೊತ್ತುಂಟಾ? ಸಕ್ಕರೆ ಖಾಯಿಲೆ ಇರುವವರು ಬಳಸುವ ಸ್ವೀಟನರ್ ಗಳಂತೂ ಎಲ್ಲರಿಗೂ ಗೊತ್ತೇ ಗೊತ್ತು. ಈ ಎಲ್ಲಾ ವಸ್ತುಗಳಲ್ಲಿರುವ ಮುಖ್ಯ ರಾಸಾಯನಿಕವೇ ಆಸ್ಪರ್ಟೇಮ್. ಆಸ್ಪರ್ಟೇಮ್ ಸಕ್ಕರೆಯಂತೆ ಕಬ್ಬು ಅಥವಾ ಬೀಟ್ ರೂಟ್ ನಂತಹ ನಿಸರ್ಗದತ್ತ ವಸ್ತುಗಳಿಂದ ಬಂದುದಲ್ಲ. ಇದು ಆಸ್ಪರಾಟಿಕ್ ಆಸಿಡ್ ನಿಂದ ಬರುವಂತಹ ಮೀತೈಲ್ ಎಸ್ಟೆರ್. ಅಂದರೆ ರಾಸಾಯನಿಕ ವಸ್ತು. ಸ್ವಾಭಾವಿಕವಲ್ಲದ ಪ್ರಯೋಗ ಶಾಲೆಯಲ್ಲಿ ಸೃಷ್ಟಿಯಾಗುವ ಸಿಂಥೆಟಿಕ್ ರಾಸಾಯನಿಕ. ಸರಳವಾಗಿ ಹೇಳುವುದಾದರೆ ಒಂದೆರಡು ರಾಸಾಯನಿಕ ವಸ್ತುಗಳ ಆಕಸ್ಮಿಕ ಬೆರೆಸುವಿಕೆಯಿಂದ ಉಂಟಾದ ’ಸಿಹಿ’ ರುಚಿಯ ರಾಸಾಯನಿಕ. ವ್ಯತ್ಯಾಸ ನೆನಪಿರಲಿ- ಇದು ರಾಸಾಯನಿಕ; ನಿಜವಾದ ಸಿಹಿಯಲ್ಲ.

ಇದು ಮನುಷ್ಯರ ದೇಹ ಸೇರಿದಾಗ ಸಕ್ಕರೆಯಂತೆ ಗ್ಲೂಕೋಸ್ ಆಗಿ ಪರಿವರ್ತಿತವಾಗುವುದಿಲ್ಲ, ಸಕ್ಕರೆಯಲ್ಲಿರುವಂತೆ ಹೆಚ್ಚು ಕ್ಯಾಲೋರಿಯನ್ನೂ ದೇಹಕ್ಕೆ ತುಂಬುವುದಿಲ್ಲ. ಆದರೆ ಸಕ್ಕರೆಯ ಸುಹಿಯ ಅನುಭವವನ್ನೇ ಬಾಯಿಗೆ ಕೊಡುತ್ತದೆ. ಸಕ್ಕರೆಯಲ್ಲಿನ ಗ್ಲೂಕೋಸ್, ಕ್ಯಾಲೋರಿ ಬೇಕಾಗದ ಆದರೆ ’ಸಿಹಿ’ಯ ರುಚಿ ಬೇಕಾಗುವ ವಸ್ತುಗಳಿಗೆ ವ್ಯಕ್ತಿಗಳಿಗೆ ಆಸ್ಪರ್ಟೇಮ್ ಅನ್ನು ದಿವ್ಯ ಔಷಧವೆನ್ನುವಂತೆ ಮಾರಾಟ ಮಾಡಲಾಗುತ್ತದೆ. ಇದು ಮಿಲಿಯನ್ ಡಾಲರ್ಗಳ ಬಿಸಿನೆಸ್.

ಆಸ್ಪರ್ಟೇಮ್ ಅನ್ನು ಎಲ್ಲ ಬಗೆಯ ಕೋಲಾಗಳಿಗೆ, ಡಯಟ್ ಕೋಲಾಗಳಿಗೆ, ಡಯಟ್ ಆಹಾರ ಪದಾರ್ಥಗಳಿಗೆ, ಚೂಯಿಂಗ್ ಗಮ್, ಅಂಗಡಿಯಲ್ಲಿ ಸಿಗುವ ಸಾವಿರಾರು ಸಿಹಿ ತಿನಿಸುಗಳಿಗೆ, ಔಷಧಗಳಿಗೆ, ಪಾನೀಯಗಳಿಗೆ, ಸಿಹಿ ಮೊಸರಿಗೆ, ಸಕ್ಕರೆ ಖಾಯಿಲೆ ಇರುವವರಿಗಾಗಿ ತಯಾರಾಗುವ ಎಲ್ಲಾ ಬಗೆಯ ತಿನಿಸು-ಪೇಯಗಳಿಗೆ, ಪ್ರೊಟೀನ್ ಶೇಕ್ ಗಳಿಗೆ, ಕಡೆಗೆ ಮಕ್ಕಳಿಗಾಗಿ ಮಾರಾಟವಾಗುವ ’ಬೇಬಿ ವಾಟರ್’ ಗೂ ಯಥೇಚ್ಚವಾಗಿ ಬಳಸಲಾಗುತ್ತದೆ.

ಆಸ್ಪರ್ಟೇಮ್ ಬಳಕೆಯಿಂದ ದೇಹಕ್ಕೆ ಕ್ಯಾಲೋರಿ ಅಥವಾ ಗ್ಲೂಕೋಸ್ ಇಲ್ಲದೆ, ಬಾಯಿಗೆ ಸಕ್ಕರೆಯ ಸವಿ ಸಿಗುವುದಕ್ಕಿಂತ ಇನ್ನೂ ಸಾಕಷ್ಟು ಬಳುವಳಿಗಳಿವೆ. ಆಸ್ಪರ್ಟೇಮ್ ಅನ್ನು ದಿನನಿತ್ಯ ಸ್ವೀಟ್ನರ್ಗಳ ರೂಪದಲ್ಲೋ, ಪೇಯಗಳ ರೂಪದಲ್ಲೋ ಇನ್ಯಾವ ರೂಪದಲ್ಲೋ ಬಳಸುವವರಿಗೆ ಸ್ಥೂಲಕಾಯ, ಮೈಗೇನ್, ಮೆದುಳಿನ ತೊಂದರೆಗಳಷ್ಟೇ ಅಲ್ಲದೆ ಡಯಾಬಿಟೀಸ್ ಇಲ್ಲದವರಿಗೂ ಡಯಾಬಿಟೀಸ್ ಬರುವ ಪ್ರಮೇಯವೇ ಹೆಚ್ಚು. ವೈದ್ಯಕೀಯ ಕ್ಷೇತ್ರ ಇದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ಸಾಕ್ಷ್ಯಾಧಾರ ಒದಗಿಸಿದ್ದರೂ ಎಫ್ ಡಿ ಎ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಕೈಗೊಳ್ಳುವ ಸಾಧ್ಯತೆಯೂ ಇಲ್ಲ. ಏಕೆಂದರೆ ಆಸ್ಪರ್ಟೇಮ್ ಈಗ ಅಮೆರಿಕಾ ಮತ್ತು ಬ್ರಿಟನ್ನಿನಲ್ಲಿ ಮಾರಾಟವಾಗುವ ಸಿದ್ಧ ಆಹಾರ ಪದಾರ್ಥಗಳಲ್ಲಿ ಒಂದಲ್ಲ ಒಂದು ರೂಪದಲ್ಲಿ ಉಪಯೋಗವಾಗುತ್ತಿದೆ. ಈಗಾಗಲೇ ತಿಳಿಸಿದಂತೆ ಇದು ಬಹಳ ಲಾಭದಾಯಕ ರಾಸಾಯನಿಕ. ಕಬ್ಬು, ಬೀಟ್, ಮೆಕ್ಕೆ ಜೋಳ ಅಥವಾ ಜೇನು ತುಪ್ಪದಂತಹ ಸ್ವಾಭಾವಿಕ ವಸ್ತುಗಳಿಗೆ ಹಣ ತೆರದೆ, ಕಷ್ಟ ಪಡದೆ ಪ್ರಯೋಗ ಶಾಲೆಯಲ್ಲಿ ಕುಳಿತು ಒಂದೆರಡು ರಾಸಾಯನಿಕಗಳನ್ನು ಬೆರೆಸಿ ಸುಲಭವಾಗಿ ಪಡೆಯಬಹುದಾದ ವಸ್ತು. ಇದನ್ನು ಸಾರಾ ಸಗಟು ಉತ್ಪಾದಿಸಿ, ಅಮೆರಿಕಾದ ಹೋಲ್ ಸೇಲ್ ಸಿದ್ಧ ಆಹಾರಗಳಿಗೆ ಬಳಕೆ ಮಾಡಿಕೊಂಡರೆ ಎಷ್ಟು ಲಾಭ! ಅಲ್ಲವೇ. ಜನರಿಗೆ ಸ್ಥೂಲಕಾಯ, ಅನಾರೋಗ್ಯ ಬರುತ್ತದೆಂಬ ಕಾಳಜಿ ಬಂಡವಾಳಶಾಹಿ ಉದ್ಯಮಿಗಳಿಗೆ ಇದ್ದಿದ್ದರೆ ಅಮೆರಿಕನ್ ಜನರ ಆರೋಗ್ಯ ಇಂದು ಈ ಸ್ಥಿತಿಯಲ್ಲಿರುತ್ತಿರಲಿಲ್ಲ...

ಅದಿರಲಿ. ಆಸ್ಪರ್ಟೇಮ್ ಎಂಥ ವಿಷವೆಂದು ಪರೀಕ್ಷೆ ಮಾಡಲು ನೀವೇ ಮಾಡಿ ನೋಡಿ: ಎರಡು ಚಮಚ ಆಸ್ಪರ್ಟೇಮ್ ಅಥವಾ ನ್ಯೂಟ್ರಾಸ್ವೀಟ್ ಅನ್ನು ಸಣ್ಣ ಬಟ್ಟಲಿಗೆ ಹಾಕಿಕೊಂಡು ಅದಕ್ಕೆ ಒಂದು ಹನಿ ಜೇನುತುಪ್ಪ ಹಾಕಿ ಕಲೆಸಿ ನಿಮ್ಮಮನೆಯ ಹತ್ತಿರ ಸಿಗುವ ಇರುವೆ ಗೂಡಿನ ಹತ್ತಿರ ಇಡಿ. ಜೇನುತುಪ್ಪದ ವಾಸನೆಗೆ ಅದನ್ನು ಮುತ್ತುವ ಇರುವೆಗಳು ನಿಮಿಷದಲ್ಲಿ ಸತ್ತು ಬಿಳುತ್ತವೆ! ಅಷ್ಟೇ ಅಲ್ಲ. ಆಸ್ಪರ್ಟೇಮ್ ಅನ್ನು ಸ್ವಲ್ಪ ಅನ್ನದ ಜೊತೆಗೋ, ರುಚಿಯಾದ ಖಾದ್ಯದ ಜೊತೆಗೋ ಬೆರೆಸಿ ಜಿರಳೆಗಳು ಓಡಾಡುವ ಜಾಗಲ್ಲಿಟ್ಟರೆ ಜಿರಳೆಗಳೂ ಢಮಾರ್! ಅಂದ ಮೇಲೆ ಅದನ್ನು ದಿನನಿತ್ಯ ಬಳಸುವ ನಾವು???
ಹೊಟ್ಟೆಗೆ ಸೇರಿಸುವ ಮೊದಲು ನೀವು ಬಳಸುವ ಸಿದ್ಧ ಆಹಾರಗಳ, ಸಿಹಿಗಳ, ಪೇಯಗಳ ಮೇಲೆ ನಮೂದಿತವಾಗಿರುವ ಪದಾರ್ಥಗಳನ್ನು ಒಮ್ಮೆ ಓದಿ ನೋಡಿ...

 
 


 
ವಾಲ್ ಸ್ಟ್ರೀಟ್ ಗೆ ಲಗ್ಗೆ ಇಡಿ!!!

ಮಧ್ಯ ಪ್ರಾಚ್ಯ ದೇಶಗಳಲ್ಲಿ ಕ್ರಾಂತಿ ಶುರುವಾದಾಗ, ಸಾಮ್ರಾಜ್ಯಗಳು ಅಲ್ಲಾಡುವಾಗ, ಜನರ ಆಕ್ರೋಶ ದಹಿಸುವಾಗ ಅಮೆರಿಕಾ ತಣ್ಣಗೆ ಕೂತು ನೋಡುತ್ತಿತ್ತು. ಅದು ಅವರ ಹಣೆ ಬರಹ ಎಂಬಂತೆ. ಲಿಬಿಯಾದ ಗಡಾಫಿ ಸೆಟೆದು ನಿಂತಾಗ ನ್ಯಾಟೋನ ಬೆನ್ನು ತಿವಿದು ಮೊದಲು ಇವನನ್ನು ಸೆಟಲ್ ಮಾಡು ಎಂದು ಸುಪಾರಿ ಕೊಟ್ಟಿತ್ತು. ಕ್ರಾಂತಿಯಾಗುವುದು ತನಗಿಂತ ಬಡ ದೇಶಗಳಲ್ಲಿ, ರೋಸಿ ಹೋದ ಜನರ ಬಿಸಿಯುಸಿರಿನಲ್ಲಿ ಮಾತ್ರ ಎಂದೆಣಿಸಿತ್ತು. ಆದರೀಗ ಅದೇ ಕ್ರಾಂತಿ ಕಿಡಿ ಸಾವಧಾನವಾಗಿ ಅಮೆರಿಕದಲ್ಲಿ ಹೊಳೆದಿದೆ. ಯಾವುದೋ ನಿರ್ಜನ ನ್ಯಾಷನಲ್ ಪಾರ್ಕಿನಲ್ಲಲ್ಲ...ಅಮೆರಿಕಾದ ಮರ್ಮಸ್ಥಾನ, ನ್ಯೂಯಾರ್ಕ್ ನಗರದ ರಾಜಬೀದಿಯಲ್ಲಿ!!!
ಪ್ರಜಾಪ್ರಭುತ್ವ ಎಂಬುದನ್ನು ನಗೆಪಾಟಲು ಮಾಡಿ ಜನಸಾಮಾನ್ಯರ ಸ್ವತ್ತಿನಲ್ಲಿ ಸಿಕ್ಕದ್ದನ್ನು ಬಾಚಿಕೊಂಡು ಇನ್ನೂ ನುಂಗಲು ಹಪಹಪಿಸುತ್ತಿರುವ ಕಾರ್ಪೋರೇಷನ್ ಗಳ ತೀರದ ದುರಾಸೆ, ಮೋಸ, ಕುತಂತ್ರವನ್ನು ಕಂಡೂ ಕಾಣದಂತೆ ಇದ್ದ ಅಮೆರಿಕನ್ ಜನ ಸಾಮಾನ್ಯರು ಈಗ ವಾಲ್ ಸ್ಟ್ರೀಟ್ಗೆ  ಮುತ್ತಿಗೆ ಹಾಕುವ ಹೋರಾಟಕ್ಕಿಳಿದಿದ್ದಾರೆ! ಈ ವಾಲ್ ಸ್ಟ್ರೀಟ್ ಎಂಬ ನ್ಯೂಯಾರ್ಕ್ ನ ಒಂದು ರಸ್ತೆ, ಒಂದು ಸಣ್ಣ ಗಲ್ಲಿ, ಪ್ರಪಂಚದ ವಾಣಿಜ್ಯ, ಆರ್ಥಿಕ ವಹಿವಾಟುಗಳನ್ನು ನಿಯಂತ್ರಿಸುವ ಸ್ಥಳ. ಎಲೆಕ್ಟ್ರಾನಿಕ್ ಬೋರ್ಡ್ ಗಳ ಮೇಲೆ ಮಿನಿಮಿನುಗುವ ಅಂಕಿಗಳನ್ನು ತೋರಿಸಿಯೇ, ಸ್ಟಾಕುಗಳೆಂಬ ಬೇಕಾಬಿಟ್ಟಿ ಏರಿಳಿಯುವ ಗಾಳಿಪಟಗಳ ಸೂತ್ರ ಅಲ್ಲಾಡಿಸಿಯೇ ಇಲ್ಲಿನ ಬಂಡವಾಳಗಾರರು ಮಿಲಿಯನ್ ಗಟ್ಟಲೆ ಹಣ ಮಾಡಿಕೊಳ್ಳುತ್ತಾರೆ. ಇಲ್ಲಿರುವ ವಿಖ್ಯಾತ ಬ್ಯಾಂಕುಗಳು ಅಭಿವೃಧ್ಧಿಗೆ ಹಣ ಒದಗಿಸುವುದಷ್ಟೇ ಅಲ್ಲದೆ, ದೇಶ ಆರ್ಥಿಕ ದುಸ್ಥಿತಿಗೆ ಬಂದಾಗ ಸರ್ಕಾರದಿಂದ ಬೇಕಾದಷ್ಟನ್ನು ಬಾಚಿಕೊಂಡು ಪಾಪರ್ ಚೀಟಿ ಪಡೆದುಕೊಂಡು ಬೀಗ ಹಾಕಿಕೊಂಡು ಬಿಡುತ್ತವೆ.
 
ಕಾಂಚಾಣ ಝಣಜಣ ಎನ್ನುವಾಗ ಇಲ್ಲಿ ಎಲ್ಲರೂ ಹಾಡಿ ಕುಣಿಯುವ ಸಂತೆ. ಜನ ಕಷ್ಟದಲ್ಲಿದ್ದಾರೆ, ತಾವು ಮಾಡದ ಸಾಲಗಳಿಗೆ ತೆರಿಗೆ ಕಟ್ಟುತ್ತಿದ್ದಾರೆ ಎನ್ನುವ ನಿಜ ಹೊರಗೆ ಬರುವ ಪರಿಸ್ಥಿತಿ ಬರುತ್ತಿದ್ದಂತೇ ಈ ಸಂತೆ ಭಣಗುಡುತ್ತದೆ. ಕಂಪನಿಗಳು ಮುಚ್ಚಿಕೊಳ್ಳುತ್ತವೆ. ನನ್ನ ಹತ್ತಿರ ಇನ್ನು ದುಡ್ಡಿಲ್ಲ ಅಂತ ಬಾಗಿಲು ಹಾಕಿಕೊಳ್ಳುತ್ತವೆ. ಸರ್ಕಾರ ಹಣವನ್ನು ಧಾರಾಳವಾಗಿ ಪ್ರಿಂಟ್ ಮಾಡಿ ಈ ಕಂಪನಿಗಳಿಗೆ ಕೊಟ್ಟು ಕೆಲಸ ಮಾಡಪ್ಪಾ ಎಂದು ಕೇಳಿಕೊಳ್ಳುತ್ತದೆ. ಇಲ್ಲ ಆಗಲ್ಲ, ಇನ್ನೂ ದುಡ್ಡು ಸಾಲಲ್ಲ ಅಂತ ಕಂಪನಿ ಕೈ ಚಾಚುತ್ತದೆ, ಇಲ್ಲವೇ ಮತ್ತೆ ಬಾಗಿಲು ಮುಚ್ಚಿಕೊಳ್ಳುತ್ತದೆ. ಜನರ ದುಡ್ಡು ಗುಳುಂ ಗುಳುಂ.
 
ಜನ ಬೇಸತ್ತಿದ್ದಾರೆ. ತಮ್ಮನ್ನು ಕೇಳುವವರಿಲ್ಲ. ಓಟು ಹಾಕಿದರೂ ತೆರಿಗೆ ಕಟ್ಟೂವುದನ್ನು ಬಿಟ್ಟರೆ ನಮಗೆ ಬೇರೆ ಅಸ್ತಿತ್ವವಿಲ್ಲ ಎಂಬ ನಿರಾಸೆ ಆಕ್ರೋಶ ತರಿಸಿದೆ. ಅಮೆರಿಕಾದ ಎಕಾನಮಿ ಕಷ್ಟ ಪಡುತ್ತಿದೆ. ಕಂಪನಿಗಳು ಕೆಲಸಗಳನ್ನು ಕಡಿಮೆ ಮಾಡುತಿವೆ. ನಿರುದ್ಯೋಗ ಹೆಚ್ಚುತ್ತಿದೆ. ನಿರುದ್ಯೋಗಿ ಭತ್ಯೆಯ ಮೇಲಿದ್ದವರಿಗೆ ತಿಂಗಳುಗಟ್ಟಲೆ ಭತ್ಯೆ ಕೊಡುವುದಕ್ಕೆ ಈಗ ಸರ್ಕಾರಕ್ಕೂ ಆಗುತ್ತಿಲ್ಲ. ಹಣವಿಲ್ಲ, ಸಾಲ ತೆಗೆದುಕೊಳ್ಳುವಂತಿಲ್ಲ. ಪರಿಸ್ಥಿತಿ ನಿಧಾನಕ್ಕೆ ಕೆಳಮುಖವಾಗಿ ಸಾಗುತ್ತಿದೆ.
ವಾಲ್ ಸ್ಟ್ರೀಟ್ ನ ಕಾರ್ಪೋರೇಷನ್, ಬಂಡವಾಳಶಾಹಿಗಳ ದುರಾಸೆ, ಅಪ್ರಾಮಾಣಿಕತೆಯಿಂದ ಇಡೀ ಅಮೆರಿಕಾ ಇಂದು ಈ ಪರಿಯ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದೆ, ತಲೆಯೆತ್ತಲಾಗದ ಆರ್ಥಿಕ ಹಿಂಜರಿತಕ್ಕೆ ಕುಸಿಯುತ್ತಿದೆ ಎಂದು ಕಡೆಗೂ ಅರ್ಥ ಮಾಡಿಕೊಂಡು, ಕೋಪ ಮಾಡಿಕೊಂಡು, ಅದನ್ನು ವ್ಯಕ್ತಮಾಡುವ ಸಲುವಾಗಿ ಜನ ಈಗ ನ್ಯೂಯಾರ್ಕಿನ ಬೀದಿಗಿಳಿದಿದ್ದಾರೆ. ಗುಂಪು ಹನಿಹನಿಯಾಗಿ ಸೇರುತ್ತಿದೆ. ವಾಲ್ ಸ್ಟ್ರ‍ೀಟ್ ನಲ್ಲಿ ಶುರುವಾಗಿರುವ ಮುತ್ತಿಗೆ ಅಮೆರಿಕಾದ ಎಲ್ಲ ಮುಖ್ಯ ನಗರಗಳಲ್ಲೂ ಹರಡಿದೆ. ಬರಹಗಾರರು, ಕಲಾವಿದರು, ಬೋಧಕವರ್ಗ, ಕಾರ್ಮಿಕರು ಹಲವಾರು ಸಂಘ ಸಂಸ್ಥೆಗಳು ಒಟ್ಟಾಗುತ್ತಿವೆ. ಇದು ಮೊದಲ ಹಂತ. ಮುಂದೇನಾಗುವುದೋ ನೋಡಬೇಕು.
 
ಈ ಜನಶಕ್ತಿಯನ್ನು ಕಾರ್ಪೊರೇಟ್ ಕಳ್ಳರು, ವಾಲ್ ಸ್ಟ್ರೀಟ್ ನ ಹಣ ಹತ್ತಿಕ್ಕದಿರಲಿ...ಜನರಿಗೇ ಗೆಲುವಾಗಲಿ ಎಂಬ ಕಳಕಳಿಯ ಆಶಯ.

 

 
ಡೆನ್ಮಾರ್ಕಿನಲ್ಲಿ ಕೊಬ್ಬಿಗೂ ಟ್ಯಾಕ್ಸ್!

 

ಡೆನ್ಮಾರ್ಕಿನ ಆರೋಗ್ಯ ಸಚಿವ ಕೆಲವು ’ಪಾಪದ ತೆರಿಗೆ’ಗಳನ್ನು (ಸಿನ್ ಟ್ಯಾಕ್ಸ್) ಜಾರಿಗೊಳಿಸಿದ್ದಾರೆ. ಮೊನ್ನೆ ಶನಿವಾರದಿಂದ (ಅಕ್ಟೋಬರ್ ೧ರಿಂದ) ಹೆಚ್ಚು ಕೊಬ್ಬಿನಂಶ (ಫ್ಯಾಟ್) ಇರುವ ತಿಂಡಿ ಪದಾರ್ಥಗಳಿಗೆ ಬೆಣ್ಣೆ, ಹ್ಯಾಮ್ ಬರ್ಗರ್, ಚೀಸ್, ಕರಿದ ಪದಾರ್ಥಗಳ ಬೆಲೆಯೆಲ್ಲಾ ಹೆಚ್ಚಲಿದೆ. ಬೆಲೆ ಹೆಚ್ಚಿರುವ ಪದಾರ್ಥವನ್ನು ಜನ ಸುಲಭವಾಗಿ, ಸರಿಯಾಗಿ ಅಲೋಚನೆ ಮಾಡದೆ ಕೊಳ್ಳಲಾರರು ಎಂಬ ಜನತೆಯ ಮೇಲಿನ ನಂಬಿಕೆಯಿಂದ ಡೆನ್ಮಾರ್ಕ್ ಈ ತೀರ್ಮಾನ ತೆಗೆದುಕೊಂಡಿದೆ. ಈಗಾಗಲೇ ಡೆನ್ಮಾರ್ಕ್ ಜನ ಕೋಲಾ ಪೇಯ ಮತ್ತು ಮಿಠಾಯಿಗಳಿಗೆ ಹೆಚ್ಚು ತೆರಿಗೆ ಕೊಡುತ್ತಿದ್ದಾರೆ. ಡೆನ್ಮಾರ್ಕ್ ಕೊಲೆಸ್ಟ್ರಾಲ್ ಹೆಚ್ಚಿಸುವ ಟ್ರಾಸ್ ಫ್ಯಾಟ್ ನ ಬಳಕೆಯನ್ನೂ ಸಂಪೂರ್ಣವಾಗಿ ನಿಷೇಧಿಸಿ ಬಿಟ್ಟಿದೆ. ಹಾಗಂತ ಈ ದೇಶದಲ್ಲಿ ಸ್ಥೂಲಕಾಯತ್ವ ಹೆಚ್ಚೇನೂ ಇಲ್ಲ. ಯುರೋಪ್ ನ ಇತರೆ ರಾಷ್ಟ್ರಗಳಿಂತಲೂ ಇಲ್ಲಿ ಜನ ಸಪೂರವಾಗಿಯೇ ಇದ್ದಾರೆ. ಆದರೆ ಇವರ ಸರಾಸರಿ ಆಯುಷ್ಯ ಸ್ವಲ್ಪ ಕಡಿಮೆಯಂತೆ (ನಮ್ಮ ಭಾರತದಷ್ಟು ಕಡಿಮೆ ಅಲ್ಲ ಬಿಡಿ). ಅವರಿಗೆ ನಿಜಕ್ಕೂ ತಮ್ಮ ದೇಶದ ಜನರ ಆರೋಗ್ಯ, ಆಯಸ್ಸಿನ ಮೇಲೆ ಎಷ್ಟು ಕಾಳಜಿ!
ಇತ್ತ ಅಮೆರಿಕಾದಲ್ಲಿ ಜನ ನೀರನ್ನೂ ಕುಡಿಯದೆ ದಿನಕ್ಕೆ ಗ್ಯಾಲನ್ ಗಟ್ಟಲೆ ಕೋಕಕೋಲಾ, ಪೆಪ್ಸಿ ಗಳಂತ ಸೋಡಾಗಳನ್ನು ಕುಡಿದುಕೊಂಡು ಆರೋಗ್ಯ ಕೆಡಿಸಿಕೊಂಡು ಕೋಲಾ ಕಂಪನಿಗಳನ್ನು ಪ್ರತಿ ಕ್ಷಣ ಶ್ರೀಮಂತಗೊಳಿಸುತ್ತಿದ್ದಾರೆ. ಬೆಳಿಗ್ಗೆ ಎದ್ದರೆ ಫ಼್ರೆಂಚ್ ಫ್ರೈ, ಚಿಪ್ಸ್, ಬರ್ಗರ್ ಎಂದು ಶುರುವಾಗುವ ಊಟದ ದಿನಚರಿ ರಾತ್ರಿ ಮಲಗುವ ಮುನ್ನ ಫುಲ್ ಫ್ಯಾಟ್ ಐಸ್ ಕ್ರೀಂಗಳಲ್ಲಿ ಬ್ರೇಕು ತೆಗೆದುಕೊಳ್ಳುತ್ತದೆ. ಹಾಗೇನಾದರೂ ಡೆನ್ಮಾರ್ಕಿನಂತಹ ಒಬ್ಬ ಹುಲಿಯ ಹಾಲು ಕುಡಿದ ಸಚಿವ ಅಮೆರಿಕಾನಲ್ಲಿ ಮಾರಾಟವಾಗುವ, ತಿನ್ನಲ್ಪಡುವ ಸೋಡಾ, ಕೊಬ್ಬಿನ ಪದಾರ್ಥಗಳಿಗೆ ಟ್ಯಾಕ್ಸ್ ಏರಿಸಿಬಿಟ್ಟರೇ...(ಸೀರಿಯಸ್ಸಾಗಿ ಮಾರಾಯ್ರೇ) ಇಲ್ಲಿನ ಡಾಕ್ಟರರು, ಹಾಸ್ಪೆಟಲ್, ಆಹಾರ ಉತ್ಪಾದನಾ ಉದ್ಯಮ, ಸೂಪರ್ ಮಾರುಕಟ್ಟೆಗಳು, ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ಎಲ್ಲವೂ ಅಮೆರಿಕನ್ ಸೆನೆಟ್ಗೇ ಮುತ್ತಿಗೆ ಹಾಕಿ ಆ ಸಚಿವನನ್ನು ಅದೇ ಕೊಬ್ಬಿನಲ್ಲಿ ಇಡಿಯಾಗಿ ಫ್ರೈ ಮಾಡಿ ಅಡ್ಡಡ್ಡ ನುಂಗಿಬಿಡುತ್ತವೆ. ಪಾಪ. ಅಮೆರಿಕಾದ ಜನ!
 
ಅಂದಹಾಗೇ ಅಮೆರಿಕಾದ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗ ಅಂದರೆ ೩೩.೮ ಶೇಕಡಾ ಮಂದಿ ಸ್ಥೂಲಕಾಯರು. ಹಾಗೇ ೧೭ ಶೇಕಡಾ ಮಕ್ಕಳು ಮತ್ತು ಯುವಜನರೂ ಸ್ಥೂಲಕಾಯರು.
 

  
 
 
 
 
Copyright © 2011 Neemgrove Media
All Rights Reserved