ಬೇಕಾಗುವ ಪದಾರ್ಥಗಳು:

ಮೊಳಕೆ ಬರಿಸಿದ ಹುರುಳಿಕಾಳು: ೧ ದೊಡ್ದ ಬಟ್ಟಲು (ಒಂದು ಪಾವಿನಷ್ಟು)

ಟೊಮ್ಯಾಟೊ: ೨ ಮಧ್ಯಮ ಗಾತ್ರದ್ದು (ಕತ್ತರಿಸಿದ್ದು)

ಬದನೆಕಾಯಿ: ೮-೧೦ ಗುಳ್ಳಗಳು (ದಪ್ಪದಾದರೆ ೧-ತೀರಾ ದಪ್ಪದು ಬೇಡ)

ಅಲೂಗಡ್ಡೆ: ೧ ಮಧ್ಯಮ ಗಾತ್ರದ್ದು

ಸಾಸಿವೆ:೧/೨ ಚಮಚ

ಕರಿಬೇವು:೨ ಕಡ್ಡಿ

ಎಣ್ಣೆ: ೧ ಟೇಬಲ್ ಚಮಚ

ಉಪ್ಪು: ರುಚಿಗೆ ತಕ್ಕಷ್ಟು

ಮಸಾಲೆಗೆ:
ತೆಂಗಿನ ತುರಿ: ೧ ಬಟ್ಟಲು (ಅರ್ಧ ಹೋಳಿನಷ್ಟು)
ಈರುಳ್ಳಿ: ೧ ದಪ್ಪದು
 
ಬೆಳ್ಳುಳ್ಳಿ: ೪-೫ ಹಿಕಳು
 
ಅಚ್ಚಮೆಣಸಿನಕಾಯಿ ಪುಡಿ: ೧ ಚಮಚ (ಖಾರ ಬೇಕಾದಲ್ಲಿ ಹೆಚ್ಚು)
 
ಧನಿಯಾ ಪುಡಿ: ೧ ಚಮಚ (ಖಾರ ಬೇಕಾದಲ್ಲಿ ಹೆಚ್ಚು)
 
ಕೊತ್ತಂಬರಿ ಸೊಪ್ಪು: ಕಾಲು ಕಟ್ಟು
 
ಚಕ್ಕೆ:೧ (ಸಣ್ಣ ಚೂರು)
 
ಲವಂಗ: ೨

 

 

 
 
 
 
 

 

ಬಗೆ-೧
ಮೊಳಕೆ ಹುರುಳಿಕಾಳು ಸಾರು

ಶ್ರೀಮತಿ ದಮಯಂತಿ

 
ವಿಧಾನ:
 • ಮಸಾಲೆಯ ಎಲ್ಲಾ ಪದಾರ್ಥಗಳನ್ನೂ ಸಣ್ಣಗೆ ರುಬ್ಬಿಟ್ಟುಕೊಳ್ಳಿ.
 • ಅಗಲ ಬಾಯಿ ಮತ್ತು ದಪ್ಪ ತಳದ ಪಾತ್ರೆಯೊಂದನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಬಿಸಿಮಾಡಿ. ಎಣ್ಣೆ ಕಾದಾಗ ಸಾಸಿವೆ, ಕರಿಬೇವು ಒಗ್ಗರಣೆ ಹಾಕಿ ಅದಕ್ಕೆ ಮೊಳಕೆಕಾಳನ್ನು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. (ಹುರಿಯುವಾಗ ಮರದ ಸೌಟು ಬಳಸಿ. ಮೊನಚಾದ ಸೌಟು ಬಳಸಿದರೆ ಮೊಳಕೆಕಾಳುಗಳು ಕಲೆಸಿ ಹೋಗುತ್ತವೆ).
 • ಕಾಳು ಸ್ವಲ್ಪ ಮೆತ್ತಗೆ ಆದ ಮೇಲೆ ಅದಕ್ಕೆ ರುಬ್ಬಿಟ್ಟುಕೊಂಡ ಮಸಾಲೆ ಸೇರಿಸಿ, ಬೆರೆಸಿ.
 • ನಂತರ ಅದಕ್ಕೆ ಟೊಮ್ಯಾಟೋ, ಬದನೆಕಾಯಿ ಮತ್ತು ಆಲೂಗಡ್ಡೆಯ ಚೂರುಗಳನ್ನು ಸೇರಿಸಿ ಸರಿಯಾಗಿ ಕಲೆಸಿ.
 • ಇದಕ್ಕೆ ೧ ಕಪ್ ನೀರು ಹಾಕಿ (ತುಂಬ ಗಟ್ಟಿಯಿದ್ದರೆ ಮತ್ತಷ್ಟು ನೀರು ಹಾಕಿ), ಪಾತ್ರೆಯನ್ನು ಒಂದು ತಟ್ಟೆಯಿಂದ ಮುಚ್ಚಿ ಸ್ವಲ್ಪ ಹೊತ್ತು ಕುದಿಯಲು ಬಿಡಿ.
 • ಚನ್ನಾಗಿ ಕುದಿದ ಮೇಲೆ ಉಪ್ಪು ಸೇರಿಸಿ ಮತ್ತಷ್ಟು ಕುದಿಸಿ.
 • ಬಯಲುಸೀಮೆಯ ಒಕ್ಕಲು ಮನೆಗಳಲ್ಲಿ ವಿಶೇಷವಾಗಿ ತಯಾರಾಗುವ ಈ ರುಚಿಕರ ಸಾರನ್ನು ಮುದ್ದೆಯ ಜೊತೆ ಸವಿಯಲಾಗುತ್ತದೆ. ಇದನ್ನು ಚಪಾತಿ, ಕಿನ್ವಾ ಜೊತೆಯಲ್ಲೂ ಬಳಸಬಹುದು.
 
 
ಬಗೆ ೨
ವಿಶ್ವದೆಲ್ಲೆಡೆಯ ಅಡುಗೆ-ತಿನಿಸುಗಳ ಹಾಗೂ ನಮ್ಮ ನಿಮ್ಮ ಪಾಕ ಪ್ರಯೋಗ ಶಾಲೆಗಳಲ್ಲಿ ಹುಟ್ಟುವ ಹೊಸ ರುಚಿಗಳ ವಿನಿಮಯ.
 
 ಬೇಕಾಗುವ ಪದಾರ್ಥಗಳು:
 
ಹಳದಿ ಬಣ್ಣದ, ಗಟ್ಟಿ ಹೊರಮೈ ಇರುವ ಸ್ಪಗೆಟಿ ಸ್ಕ್ವಾಶ್: ೧ ಮಧ್ಯಮ ಗಾತ್ರದ್ದು
 
ಬೆಳ್ಳುಳ್ಳಿ: ೩-೪ ಎಳೆ (ಬಿಡಿಸಿ ಸಣ್ಣಗೆ ಕತ್ತರಿಸಬೇಕು)
 
ಸಿಹಿ/ಥಾಯಿ ತುಳಸಿ: ೮-೧೦ ಎಲೆಗಳು
 
ಆಲಿವ್ ಎಣ್ಣೆ: ೪ ಚಮಚ
 
ತುರಿದ ಚೀಸ್: ೧ ಬಟ್ಟಲು (೨-೩ ಚೀಸ್ಗಳ ಮಿಶ್ರಣ ಆಗಬಹುದು)
 
ಕಾಳು ಮೆಣಸಿನ ಪುಡಿ: ೧/೨ ಚಮಚ (ಖಾರ ಹೆಚ್ಚು ಬೇಕಾದಲ್ಲಿ ಹೆಚ್ಚು ಬಳಸಿ)
 
ಕೆಂಪು ಮೆಣಸಿನ ಪುಡಿ: ೧/೪ ಚಮಚ
 
ಸಕ್ಕರೆ: ೧ ಚಮಚ
 
ಉಪ್ಪು: ರುಚಿಗೆ ತಕ್ಕಷ್ಟು
 
 
 
 

 

ಬೆಳ್ಳುಳ್ಳಿ ಮತ್ತು ತುಳಸಿ (ಸ್ವೀಟ್/ಥಾಯಿ ಬೇಸಿಲ್) ಜೊತೆಗಿನ ಸ್ಪಗೆಟಿ ಸ್ಕ್ವಾಶ್  

 
ವಿಧಾನ:
 • ಸ್ಪಗೆಟಿ ಸ್ಕ್ವಾಶ್ ಅನ್ನು ಅರ್ಧಕ್ಕೆ ಕತ್ತರಿಸಿ, ಅದರ ಮಧ್ಯದ ಬೀಜ ಮತ್ತು ತಿರುಳನ್ನು ತೆಗೆದುಬಿಡಿ.
 • ಕತ್ತರಿಸಿದ ಎರಡು ಭಾಗಗಳನ್ನು ಒಂದು ಬೇಕಿಂಗ್ ಬಟ್ಟಲಿನಲ್ಲಿ ಬೋರಲು (ಉಲ್ಟಾಪಲ್ಟಾ) ಇಡಿ. ಸ್ಕ್ವಾಶ್ ನ ಹೊರಮೈ ಅನ್ನು ಚಾಕುವಿನಿಂದ ೨-೩ ಬಾರಿ ಚುಚ್ಚಿ ಶಾಖ ಹೊರಹೋಗಲು ಅನುವು ಮಾಡಿ. ಆ ಬೇಕಿಂಗ್ ಬಟ್ಟಲಿಗೆ ೨ ಕಪ್ ನೀರು ಹಾಕಿ. ಅವನ್ ಅನ್ನು ೩೭೦ ಡಿಗ್ರಿಗೆ ಹಚ್ಚಿಟ್ಟು ಸ್ಕ್ವಾಶ್ ಪಾತ್ರೆಯನ್ನು ಅವನ್ ಒಳಗಿಡಿ. (ಇದನ್ನು ಗಾಜಿನ ಬಟ್ಟಲಿನಲ್ಲಿಟ್ಟು ಮೈಕ್ರೋವೇವ್ ಕೂಡಾ ಮಾಡಬಹುದು. ಅಥವಾ ಪ್ರೆಶರ್ ಕುಕ್ಕರಿನಲ್ಲಿಟ್ಟೂ ಬೇಯಿಸಬಹುದು).
 • ೩೦ ರಿಂದ ೩೫ ನಿಮಿಷ ಬೇಯಲು ಬಿಡಿ.
 • ಸ್ಕ್ವಾಶ್ ಬೆಂದಿದೆ ಎನಿಸಿದಾಗ (ಬೆಂದಾಗ ಸಿಪ್ಪೆ ಕಾಯಿಯಿಂದ ಬಿಡಿಸಿಕೊಳ್ಳುತ್ತದೆ ಮತ್ತು ಒಳ್ಳೆಯ ಪರಿಮಳ ಬರುತ್ತದೆ) ಅವನ್ ಆರಿಸಿ ಸ್ಕ್ವಾಶ್ ಅನ್ನು ತಣ್ಣಗಾಗಲು ಬಿಡಿ.
 • ತಣ್ಣಗಾದ ಮೇಲೆ ಒಂದು ಫೋರ್ಕ್ ಅಥವಾ ಸ್ಪೂನ್ ನಿಂದ ಬೆಂದಿರುವ ಭಾಗವನ್ನು ಎಳೆಯಿರಿ. ಅದು ನೂಡಲ್ಸ್ ನ ರೀತಿಯಲ್ಲಿ ಬಿಡಿಸಿಕೊಂಡು ಬರುತ್ತದೆ.
 • ಹಾಗೆ ಬಂದ ಸ್ಕ್ವಾಶ್ ನ ’ಸ್ಪಗೆಟಿ’ಯನ್ನು ಒಂದು ತಟ್ಟೆಯಲ್ಲಿಟ್ಟು ಆರಲು ಬಿಡಿ.
 • ಒಂದು ಅಗಲ ಬಾಯಿಯ ಬಾಣಲೆಯನ್ನು ಕಡಿಮೆ ಶಾಖದಲ್ಲಿ ಒಲೆಯ ಮೇಲಿಟ್ಟು ಆಲಿವ್ ಎಣ್ಣೆಯನ್ನು ಬಿಸಿ ಮಾಡಿ.
 • ಎಣ್ಣೆ ಸ್ವಲ್ಪ ಬಿಸಿಯಾದಾಗ ಅದಕ್ಕೆ ಸಣ್ಣಗೆ ಹೆಚ್ಚಿಟ್ಟುಕೊಂಡ ಬೆಳ್ಳುಳ್ಳಿ ಚೂರುಗಳನ್ನು ಹಾಕಿ ಹುರಿಯಿರಿ.
 • ಬೆಳ್ಳುಳ್ಳಿ (ಹಸಿ ವಾಸನೆ ಹೋಗುವಂತೆ ಮಾತ್ರ ಬೇಯಿಸಬೇಕು) ಸ್ವಲ್ಪ ಬೇಯುತ್ತಿದ್ದಂತೆ ಅದಕ್ಕೆ ಕೆಂಪು ಮೆಣಸಿನ ಪುಡಿ, ಕಾಳು ಮೆಣಸಿನ ಪುಡಿ ಹಾಕಿ ಕಲೆಸಿ.
 • ನಂತರ ಸಿಹಿ ತುಳಸಿ ಎಲೆಗಳನ್ನು ಸೇರಿಸಿ. ಮಿಕ್ಸ್ ಮಾಡಿ.
 • ಇವೆಲ್ಲವನ್ನೂ ಒಂದು ನಿಮಿಷ ಕಡಿಮೆ ಶಾಖದಲ್ಲಿ ಹುರಿದು, ಇದಕ್ಕೆ ಬಿಡಿಸಿಕೊಂಡ ಸ್ಕ್ವಾಶ್ ನ ಎಳೆಗಳನ್ನು (ನೂಡಲ್ಗಳನ್ನು) ಸೇರಿಸಿ.
 • ಇದಕ್ಕೆ ಸಕ್ಕರೆ ಮತ್ತು ಉಪ್ಪು ಹಾಕಿ ಚನ್ನಾಗಿ ಬೆರೆಸಿ.
 • ಇದನ್ನು ಬಿಸಿ ಬಿಸಿ ಇದ್ದಾಗಲೇ ತುರಿದ ಚೀಸ್ ಜೊತೆಗೆ ಆಸ್ವಾದಿಸಿ.

 

 
 
 
 
 
Copyright © 2011 Neemgrove Media
All Rights Reserved