ಅಂಗಳ      ಕರುಣೆ ಕಣ್ಣ ತೆರೆಯೇ
Print this pageAdd to Favorite
 

ನಮಗೆ ನಾವೇ ಕಡೆಗೆ... 

 

ನಮ್ಮ ಸುತ್ತೆಲ್ಲಾ ಅನೇಕ ಬದಲಾವಣೆ ಕಾಣುತ್ತಿದೆ. ಹೆಚ್ಚಿನವು ಒಳ್ಳೆಯದಲ್ಲ. ಖಂಡ ಖಂಡಗಳ ಭೂಭಾಗಗಳಲ್ಲಿ ದೌರ್ಜನ್ಯವನ್ನು ವಿರೋಧಿಸಿ ಕ್ರಾಂತಿಯಾಗುತ್ತಿದೆ. ಕ್ರಾಂತಿ ಮಾಡುವವರಿಗೆ ಸಾರ್ಥಕವೆನಿಸಿದರೂ, ಗಲಾಟೆ ದೊಂಬಿಯಿಂದ ಸುತ್ತಮುತ್ತಲ ಮಕ್ಕಳು, ವೃಧ್ಧರು, ಅಸಹಾಯಕರು ಕಷ್ಟ ಅನುಭವಿಸುತ್ತಿದ್ದಾರೆ. ಒಳ್ಳೆಯ ನಾಳೆಗಳನ್ನು ಸಾಧಿಸಲು ಕಷ್ಟ ನೋವುಗಳನ್ನು ಅನುಭವಿಸುವುದು ಆ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವವರಿಗೆ ತ್ಯಾಗ ಎನಿಸಬಹುದು. ಆದರೂ ಅವು ಸಾವು ನೋವುಗಳೇ.
 

 
 
ಭೂಮಿಯೇ ಕೆಲವೆಡೆ ಜನರನ್ನು ಮುಳುಗಿಸಿ, ಬಾಯಿಗೆ ತುಂಬಿಸಿ, ನೆಲ ಸಾರಿಸುವ ಕೆಲಸ ಮಾಡುತ್ತಿದ್ದಾಳೆ. ಸತ್ತವರೇನೋ ಹೋದರು. ಸುನಾಮಿ, ಭೂಕಂಪವನ್ನು ಎದುರಿಸಿ ಜಪಾನಿನಲ್ಲಿ ಬದುಕಿರುವವರಿಗೆ ಅಣು ಸೋರಿಕೆಯ ಪರಿಣಾಮ ಯಾವ ರೀತಿ ಕಾಡುತ್ತದೆಯೋ ಸಧ್ಯದಲ್ಲೇ ನೋಡಸಿಗುತ್ತದೆ.

 

 

ಬಡತನ ಸಿಗುವ ಬಡಪಾಯಿಗಳನ್ನೇ ತಿಂದುಕೊಳ್ಳುತ್ತಿದೆ. ಹೊಸ ರೋಗಗಳು ಮಾಯಾವಿಯವೇಷ ಧರಿಸಿ ಉಸಿರು ಸೇರುತ್ತಿವೆ. ಒಮ್ಮೆ ಅತ್ಯಂತ ಸಮೃಧ್ಧವಾಗಿದ್ದು ಇಡೀ ಮನುಷ್ಯ ಸಂಕುಲವನ್ನು ಸೃಷ್ಟಿ ಮಾಡಿಕೊಟ್ಟ ನೆಲ ಹಾಗೆ ಮಾಡಿದ ತಪ್ಪಿಗೋ ಎಂಬಂತೆ ಬರಡಾಗಿ ಸಾವಿರ ಹೋಳಾಗಿ ಕೂತಿದೆ. ಸೋಮಾಲಿಯಾ, ಇಥಿಯೋಪಿಯಾ, ರುವಾಂಡಾ, ಘಾನಾ ಹೀಗೆ ಆಫ್ರಿಕಾದ ಹಲವಾರು ದೇಶಗಳು ಭಯಂಕರ ಬರದ ಸ್ಥಿತಿ ಎದುರಿಸುತ್ತಿವೆ. ಹಸುಕರುಜನಗಳಿಗೆ ತಾವು-ಮೇವಿಲ್ಲ, ನೀರಿಲ್ಲ. ಬದುಕಲು ಅತ್ಯಗತ್ಯವಾದ ಯಾವುದೂ ಸಿಗುತ್ತಿಲ್ಲ.

 
ಇತ್ತ ಇಟಲಿ, ಪೋರ್ಚುಗಲ್ ಗ್ರೀಸ್ ದೇಶಗಳಲ್ಲಿ ಎಕಾನಮಿ ಎಂಬ ಮನುಷ್ಯ ಸೃಷ್ಟಿಸಿದ ಪೆಡಂಭೂತ ಲಂಗು ಲಗಾಮಿಲ್ಲದೆ ಬಡವರನ್ನು, ಕಾರ್ಮಿಕರನ್ನು ಹೊಸಕಿ ಹಾಕುತ್ತಿದೆ. ಪ್ರಜಾಪ್ರಭುತ್ವವೆಂಬ ಪರಿಕಲ್ಪನೆಯನ್ನು ಕಟ್ಟಿಕೊಟ್ಟ ದೇಶ ಗ್ರೀಸ್ ನಲ್ಲೀಗ ಮಹಾನ್ ಅರಾಜಕತೆ. ಆಡಳಿತವೆಂಬುದು ಬದುಕಿದ್ದರೂ ಗ್ರೀಸ್ ತನ್ನನ್ನು ಉಳಿಸಿ ಎಂದು ಯುರೋಪಿನ ಇತರ ಶ್ರೀಮಂತ ರಾಷ್ಟ್ರಗಳ ಕೃಪೆಗೆ ಅಂಗಲಾಚಿದೆ. ಮಕ್ಕಳಿಗೆ ಸ್ಕೂಲು ಕೋಣೆಗಳಿದ್ದರೂ ಸ್ಕೂಲು ಪುಸ್ತಕಗಳಿಲ್ಲ. ಸರ್ಕಾರ ಪ್ರಿಂಟ್ ಮಾಡಲು ತಯಾರಿಲ್ಲ. ಕಾರಣ ದುಡ್ಡಿಲ್ಲ! ಇದು ಬಿಜಾಪುರ ಅಥವಾ ಚಾಮರಾಜನಗರದ ಹಳ್ಳಿಯೊಂದರ ಕಥೆಯಲ್ಲ. ವಿಶ್ವದೆಲ್ಲೆಡೆ, ಬಡವ, ಸಿರಿವಂತ ರಾಷ್ಟ್ರಗಳ ಬೇಧವಿಲ್ಲದೆ ಆಗುತ್ತಿರುವ ಬದಲಾವಣೆ!
 

 
ಈ ಭಯಂಕರ ಬದಲಾವಣೆಯ ಆರಂಭದಕ್ಕೆ ನಾವೀಗ ಸಾಕ್ಷಿಯಾಗುತ್ತಿದ್ದೇವೆ. ಇದು ನಿಲ್ಲುವಂತದಲ್ಲ. ಇನ್ನು ನಿತ್ಯ ನಿರಂತರ. ಆಹಾರ, ನೀರು, ನೆರಳು, ಸ್ವಚ್ಚ ಗಾಳಿ, ಬದುಕಲು ಬೇಕಾಗುವ ಸಣ್ಣ ಸಣ್ಣ ಅತ್ಯಗತ್ಯಗಳೂ ಬಡವರ ಅಥವಾ ಕಡಿಮೆ ಸಂಪಾದನೆಯಿರುವವರ ಕೈಯ್ಯಿಂದ ಜಾರಿ ಹೋಗುತ್ತಿವೆ. ಸಂಪೂರ್ಣ ಮಾಯವಾಗುತ್ತಿವೆಯಾ? ಇಲ್ಲ. ಉಳ್ಳವರ ಸೇಫ್ ಲಾಕ್ ಗಳಿಗೆ ಸೇರುತ್ತಿವೆ.
 
ಇದು ಇರುವ ಭೂಮಿಯನ್ನು ಜಲ-ನೆಲೆಯನ್ನು ಸ್ವಚ್ಚವಾಗಿಟ್ಟುಕೊಳ್ಳಲೇ ಬೇಕಾಗಿರುವ ಪರ್ವಕಾಲ. ಅದೂ ನಿಮಗೆ ಸ್ವಸ್ಥವಾಗಿ ಬದುಕಬೇಕೆಂದಿದ್ದರೆ! ಇರುವ ಕಡಿಮೆ ಸಂಪನ್ಮೂಲಗಳನ್ನು ಜೊತೆಗಾರರೊಂದಿಗೆ ಸೌಹಾರ್ದದಿಂದ ಹಂಚಿಕೊಳ್ಳುತ್ತಲೇ ಅದನ್ನು ಕಾಯ್ದಿಟ್ಟುಕೊಳ್ಳುವ ಕಾಲ. ಇದು ಪರಸ್ಪರ ಪ್ರೀತಿ ದಯೆ ಕರುಣೆಯಿಂದ ಕಳೆಯಬೇಕಾದ ಕಾಲ. ನಿಮಗೆ ಹಾಗೆನ್ನಿಸುವುದಿಲ್ಲವೇ?
 
 
 
 
 
 
 
 
 
 
 
 
Copyright © 2011 Neemgrove Media
All Rights Reserved