ಅಂಗಳ      ಹಾಡು ಹಕ್ಕಿ
Print this pageAdd to Favorite


ಮೈಕಲ್ ನಿಜಕ್ಕೂ ಆ ಮಕ್ಕಳನ್ನು ಮುಟ್ಟಲಿಲ್ಲ...

ನವಮಿ
 
ನಮ್ಮ ಮೈಕಲ್ ಜ್ಯಾಕ್ಸನ್ ಸತ್ತ ಮೇಲೂ ಸುದ್ದಿ ಮಾಡುವುದನ್ನು ಬಿಡಲಿಲ್ಲ. ಈಗ ಕೋರ್ಟಿನಲ್ಲಿ ಅವನ ಸಾವನ್ನು ಕೊಲೆ ಎಂದು ಸಾಬೀತು ಪಡಿಸುವ ಹಣಾಹಣಿ ನಡೆಯುತ್ತಿದೆ. ಜ್ಯಾಕ್ಸನ್ ಸಾಯುವ ಹೊತ್ತಿನಲ್ಲಿ ಅವನನ್ನು ಶುಶ್ರೂಶೆ ಮಾಡುತ್ತಿದ್ದ ಡಾಕ್ಟರ್ ಕಾನ್ರಾಡ್ ಮ್ಯುರೇ ಮೈಕೆನ್ ನ ದುರ್ಬಲ್ ದೇಹದೊಳಕ್ಕೆ ಅತಿಯಾದ ಪ್ರಮಾಣದ ಔಷಧಿಗಳನ್ನು ಕೊಟ್ಟು ಅದರ ವೈಪರೀತ್ಯದಿಂದ ಜ್ಯಾಕ್ಸನ್ ಪ್ರಾಣ ಕಳೆದುಕೊಂಡ ಎಂದು ವಾದ ಪ್ರತಿವಾದಗಳಾಗುತ್ತಿವೆ. ಯಾರು ಗೆದ್ದರೆ ಯಾರಿಗೆ ಲಾಭ ಗೊತ್ತಿಲ್ಲ. ಬಹುಃಷ ಈ ವಿಚಾರನೆಯಿಂದ ಅದನ್ನು ಬಿಸಿ ಸುದ್ದಿಯಾಗಿ ಪ್ರಕಟ ಮಾಡುವ ಮಾಧ್ಯಮದವರಿಗೆ ಹೆಚ್ಚಿನ ಲಾಭ. ಜ್ಯಾಕ್ಸನ್ ನ ಆತ್ಮಕ್ಕೆ ಈ ಫಲಿತಾಂಶದಿಂದೇನೂ ವಿಶೇಷ ಖುಷಿಯಾಗದು. ಸಮಾಧಾನ ಅಥವಾ ಇನ್ನೂ ಹೆಚ್ಚಿನ ನೋವು ಅವನ ಕುಟುಂಬದವರಿಗೆ, ಮಿತ್ರರಿಗೆ, ಪ್ರೀತಿಸುವವರಿಗೆ.
ಅಪ್ರತಿಮ ಪ್ರತಿಭಾವಂತ ಮೈಕಲ್ ಎಳೆ ಬಾಲಕನಾಗಿದ್ದಾಗಲೇ ಪ್ರಸಿದ್ಧಿಗೆ ಬಂದ. ಹಾಡುತ್ತಾ, ಕುಣಿಯುತ್ತಾ, ಬಣ್ಣ ಹಚ್ಚಿ ಶೋ ಕೊಡುತ್ತಾ ತನ್ನ ಬಾಲ್ಯವನ್ನು ಕಳೆದುಕೊಂಡು ಬಿಟ್ಟ. ಮೈಕಲ್ ತನ್ನ ಬಾಲ್ಯವನ್ನು ಪ್ರೀತಿಸಿದಷ್ಟು ಮತ್ತೇನನ್ನೂ ಪ್ರೀತಿಸಲೇ ಇಲ್ಲ. ಬಾಲ್ಯವೆಂಬುದು ಅವನ ಒಬ್ಸೆಷನ್. ಅವನು ಅಲ್ಲಿಂದ ಪ್ರಸಿದ್ಧಿ ಜನಪ್ರಿಯತೆಯ ಶಿಖರ ಏರುತ್ತಲೇ ಬಂದ. ಬೆಳೆಯುತ್ತಲೇ ಬಂದ. ದೇಹ ಸುಮಾರಾಗಿ ಬೆಳೆದರೂ ಅವನ ಪ್ರಸಿದ್ದಿಯ ಎತ್ತರಕ್ಕೆ ಅವನ ಮನಸ್ಸು ಬೆಳೆಯಲೇ ಇಲ್ಲ. ಸರಿಯಾಗಿ ಹೇಳಬೇಕೆಂದರೆ, ಬಲಿಯಲೇ ಇಲ್ಲ. ದೊಡ್ಡ ಮೈಕಲ್ ನ ಒಳಗೆ ಆ ಪುಟ್ಟ ಬಾಲಕ ಮೈಕಲ್ ಸ್ಥಾಪಿತನಾಗೇ ಉಳಿದುಬಿಟ್ಟ.
 
ಕಳೆದುಹೋಗಿರುವ ಬಾಲ್ಯವನ್ನು ತನ್ನೊಳಗೆ ಬಂಧಿಯಾಗಿಟ್ಟುಕೊಂಡು ಮತ್ತೆ ಅದನ್ನು ಸವಿಯ ಬಯಸಿದ ಮೈಕಲ್ ಅದಕ್ಕಾಗಿ ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಮನೆಯ ಸುತ್ತ ಆಟಿಕೆಗಳನ್ನು ತಂದಿರಿಸಿಕೊಂಡ. ಜಯಂಟ್ ವೀಲ್, ಕರೋಸಲ್, ಜಾರುಬಂಡಿ, ಉಯ್ಯಾಲೆ ಮಾಡಿಸ್ಕೊಂಡ. ಹಿತ್ತಿಲಿನಲ್ಲೇ ಎಲ್ಲ ಬಗೆಯ ಪ್ರಾಣಿಗಳನ್ನು ಸಾಕಿಕೊಂಡು ಜ಼ೂ ’ ಸೃಷ್ಟಿಸಿಕೊಂಡ. ಪುಟ್ಟ ಮಕ್ಕಳ ಜೊತೆ ಸ್ನೇಹ ಮಾಡಿಕೊಂಡು ಅವರನ್ನು ಮನೆಗೆ ಕರೆದುಕೊಂಡು ಬಂದು ಆಟ ಆಡಿದ. ಅವರೊಡನೆ ತಾನೂ ಮಗುವಾಗಲು ಪ್ರಯತ್ನ ಪಟ್ಟ. ಮೊನ್ನೆ ನ್ಯಾಯಾಲಯದಲ್ಲಿ ಕೇಳಿಸಲಾದ ಅವನ ಕೊನೆ ದಿನಗಳ ಅರೆ ಪ್ರಜ್ನಾಸ್ಥಿತಿಯ ಅರಳು ಮರಳು ಸಂಭಾಷಣೆಯಲ್ಲಿ ’ನಾನು ಮಕ್ಕಳನ್ನು ತುಂಬಾ ಪ್ರೀತಿಸ್ತೀನಿ...ಅವರ ಕಷ್ಟ ನೋವುಗಳು ನನಗರ್ಥ ಆಗುತ್ವೆ...ನನಗೆ ಮಗುವಾಗಿರೋಕೆ ಆಗ್ಲೇ ಇಲ್ಲ...’ ಎಂದೆಲ್ಲಾ ಕೊರಗಿದ್ದ.
ಮೈಕಲ್ ನ ಜನಪ್ರಿಯತೆ ಸಹಿಸಲಾಗದಿದ್ದ ಬಿಳಿಯರಿಗೆ ಅವನನ್ನು ಬೀದಿಗೆಳೆಯಲು ಏನಾದರೂ ಅವಕಾಶ, ಸುದ್ದಿ ಬೇಕಿತ್ತು. ಮೈಕಲ್ ಮಕ್ಕಳ ಜೊತೆ ಆಟವಾಡುವುದನ್ನು ತಿರುಚಿದ ಅಮೆರಿಕಾದ ’ಬಿಳಿ ಮಾಧ್ಯಮ’ ಮೈಕಲ್ ಮಕ್ಕಳನ್ನು ಕಾಮುಕವಾಗಿ ಮುಟ್ಟಿ ಅವರಿಂದ ಸುಖ ಪಡೆಯುತ್ತಾನೆಂದು ಸುದ್ದಿ ಮಾಡಿದ್ದರು. ಮೈಕಲ್ ಜ್ಯಾಕ್ಸನ್ ಕೋರ್ಟಿಗೆ, ಬೀದಿಗೆ ಇಳಿದಿದ್ದ. ವರ್ಷಾನುಗಟ್ಟಲೇ ಹೋರಾಡಿದ್ದ. ನೊಂದು ಕಣ್ಣೀರು ಹಾಕಿದ್ದ. ನಾನೂ ಮಗುವಂತೇ ಎಂದಿದ್ದ. ವಿಚಾರಣೆ ಮಾಡಿದ ಕೋರ್ಟ್ ಕಡೆಗೆ ಅವನನ್ನು ನಿರಪರಾಧಿಯೆಂದರೂ ಬಿಳಿಯರು ಸುದ್ದಿಯನ್ನು ಸಾಯಗೊಡಲೇ ಇಲ್ಲ. ಮೈಕಲ್ ಇದೊಂದು ಆಪಾದನೆಯಿಂದ ಕೊನೆಯುಸಿರಿನವರೆಗೂ ಜರ್ಜರಿತನಾಗಿಬಿಟ್ಟಿದ್ದ.
 
ಆದರೆ ಮೂರು ಮಕ್ಕಳ ತಂದೆ ಮೈಕಲ್ ತನ್ನ ದುರ್ಬಲ ದೇಹಕ್ಕೆ ತನ್ನ ಡಾಕ್ಟರ್ ನಿಂದ ಅತಿಯಾದ ಔಷಧ ಪಡೆದು (ಹಾಗೆಂದೇ ಇಟ್ಟುಕೊಳ್ಳೋಣ) ಸಾವಿನರಮನೆಗೆ ಹೊರಟು ಬಿಟ್ಟ. ಇದು ಭೂತ.
 
ಇತ್ತೀಚೆಗೆ ಅಟ್ಲಾಂಟಾದ ಪಾರ್ಕ್ ಒಂದರಲ್ಲಿ ’ಕಪ್ಪು ಕಲಾವಿದರ’ ಹಬ್ಬ ಇತ್ತು. ಸುಮಾರು ಆಫ್ರೋ ಅಮೆರಿಕನ್ ಚಿತ್ರ ಕಲಾವಿದರು, ಸಂಗೀತಗಾರರು, ಶಿಲ್ಪಿಗಳು, ಅಡಿಗೆ ಮಾಡುವವರು ಎಲ್ಲರೂ ಕಲೆತಿದ್ದರು. ಅಲ್ಲಿ ಎಲ್ಲರದ್ದೂ ಪುಟ್ಟ ಮಳಿಗೆಗಳ ಸಾಮ್ರಾಜ್ಯ. ಪಾರ್ಕಿನ ಹಸಿರು ಹುಲ್ಲಿನ ಮಧ್ಯದಲ್ಲೊಂದು ವೇದಿಕೆ ಕೂಡಾ ನಿರ್ಮಾಣವಾಗಿತ್ತು. ಕಲಾವಿದರು ಹಿಪ್ ಹಾಪ್, ಜ್ಯಾಜ಼್, ಬ್ಲೂ ಸಂಗೀತ ಶೈಲಿಗಳಲ್ಲಿ ಹಾಡುತ್ತಿದ್ದರು, ನುಡಿಸುತ್ತಿದ್ದರು. ಸೇರಿದ್ದ ಆಸಕ್ತರು ಮೈಮರೆತು ಕುಣಿಯುತ್ತಿದ್ದರು. ಅಲ್ಲೊಬ್ಬ ಆಫ್ರೋ ಅಮೆರಿಕನ್ ಹೆಂಗಸು, ಮೈಕಲ್ ಜ್ಯಾಕ್ಸನನ ಅಭಿಮಾನಿ ಜ್ಯಾಕ್ಸನ್ ನ ಕುಟುಂಬ ವರ್ಗಕ್ಕಿಂತ ಅತ್ಯಂತ ಆಪ್ತವಾಗಿ ಮೈಕಲ್ ನನ್ನು ನೆನೆಸಿಕೊಳ್ಳುತ್ತಾ ’ಮೈಕಲ್...ನಮಗೆ ಗೊತ್ತು. ನೀನು ಆ ಮಕ್ಕಳನ್ನು ಮುಟ್ಟಲಿಲ್ಲ. ನೀನು ಖುಷಿಯಾಗಿದ್ದೀಯಾ ತಾನೇ...ಚನ್ನಾಗಿ ರೆಸ್ಟ್ ಮಾಡು ನನ್ನ ಹುಡುಗಾ...’ ಅಂತ ಕಣ್ಣೆವೆ ತುಂಬಿಕೊಂಡು ಜನರನ್ನು ಸೇರಿಸಿಕೊಂಡು ’ಮೈಕಲ್ ಜ್ಯಾಕ್ಸನ್ ಆ ಮಕ್ಕಳನ್ನು ಮುಟ್ಟಲಿಲ್ಲ...ಬನ್ನಿ...ನೀವೂ ಹೇಳಿ. ಅವನಿಗೆ ಕೇಳಿಸಲಿ...ಅವನು ನೆಮ್ಮದಿಯಾಗಿ ಮಲಗಲಿ’ ಅಂತ ವಿನಂತಿ ಮಾಡುತ್ತಿದ್ದಳು. ಅಲ್ಲಿ ಸೇರಿದ್ದ ಜನರನ್ನು ನಿಲ್ಲಿಸಿ ನಿಲ್ಲಿಸಿ ’ನೀವೂ ಹೇಳಿ’ ಅಂತ ಪ್ರೀತಿ ಪೂರ್ವಕ ಒತ್ತಾಯ ಮಾಡುತ್ತಿದ್ದಳು.
 
ಹತ್ತಿರ ಹೋಗಿ ನೋಡಿದೆ. ಆಕೆ ದುಡ್ಡಿಗಾಗಿ ಮಾಡುತ್ತಿದ್ದಾಳಾ ಅಥವಾ ಏನನ್ನಾದರೂ ಮಾರಾಟಮಾಡುವ ಸಲುವಾಗಿ ಹೀಗೆ ಮಾಡುತ್ತಿದ್ದಾಳಾ ಎಂಬ ಕೆಟ್ಟ ಅನುಮಾನದಿಂದ. ಇಲ್ಲ. ಜ್ಯಾಕ್ಸನ್ ಗೆ ತನ್ನದೇ ಜನರಿಂದ ’ನಮಗೆ ಗೊತ್ತು ಕಣಪ್ಪಾ...ನೀನು ತಪ್ಪಿತಸ್ಥನಲ್ಲ ಅಂತಾ...ಮಲಗು ಮಿತ್ರಾ’ ಅಂತ ಮತ್ತೊಮ್ಮೆ ಆಶಿಸಲು ಜನರನ್ನು ಕೇಳಿಕೊಳ್ಳುತ್ತಿದ್ದಳು. ಅದೇ ಸ್ಲೋಗನ್ ನ ಟಿ ಶರ್ಟ್ ಹಾಕಿಕೊಂಡಿದ್ದಳು. ಅದಕ್ಕೆಂದೇ ಅಲ್ಲಿಗೆ ಬಂದಂತಿದ್ದಳು. ಆಕೆ ಶ್ರೀಮಂತೆ ಎನಿಸಲಿಲ್ಲ. ಆದರೆ ಜ್ಯಾಕ್ಸನ್ ಮೇಲಿನ ಅವಳ ಪ್ರೀತಿ-ಅಭಿಮಾನ ಶ್ರೀಮಂತವಾಗಿತ್ತು. ’ನಿಮ್ಮ ಒಬ್ಬೊಬ್ಬರ ಮಾತೂ ಅವನಿಗೆ ಕೇಳಲಿ, ಅವನ ಮೇಳೆ ಆಪಾದನೆ ಮಾಡಿದವರಿಗೆ ಕೇಳಲಿ.. ಬನ್ನಿ...’ ಆಕೆ ಕೇಳಿಬರುತ್ತಿದ್ದ ಹಾಡಿಗೆ ಅಲುಗಾಡುತ್ತಲೇ ತನ್ನ ಕೆಲಸ ಮುಂದುವರೆಸಿದ್ದಳು. ’
 
’ಮೈಕಲ್ ನೀನು ನಿಜಕ್ಕೂ ಆ ಮಕ್ಕಳನ್ನು ಮುಟ್ಟಲಿಲ್ಲ. ಜಾಸ್ತಿ ಯೋಚನೆ ಮಾಡಬೇಡ...ಖುಷಿಯಾಗಿರು...ನಿನ್ನನು ಯಾವಾಗಲೂ ತುಂಬಾ ಪ್ರೀತಿಸುತ್ತೇನೆ ನಂಬುತ್ತೇವೆ ಕಣಪ್ಪಾ..’ ಆ ಹೆಂಗಸಿನ ದೆಸೆಯಿಂದ ಮತ್ತೊಮ್ಮೆ ನನ್ನ ಪ್ರೀತಿಯ ಮೈಕಲ್ ಜೊತೆ ಮನದಲ್ಲೇ ಮಾತಾಡಿ, ಹಾಡಿಗೆ ಓಲಾಡಿ ಮನೆಗೆ ಬಂದೆ. ಆತ ಮತ್ತೊಮ್ಮೆ ಹುಟ್ಟುವುದೇ ಆದರೆ ಗಿಲ್ಲಿದಾಂಡು, ಗೋಲಿ, ಬುಗುರಿ, ಮರಕೋತಿ ಆಡಿಕೊಂಡು, ತೊರೆ ಹಾಯ್ದು, ಎಮ್ಮೆ ಕರ ಅಟ್ಟಾಡಿಸಿಕೊಂಡು ಅಮ್ಮನ ಹತ್ತಿರ ಮುದ್ದಾಗಿ ಬೈಸಿಕೊಂಡು ಬೆಳೆಯುವಂಥ ಸುಂದರ ಜೀವನ ಸಿಗಲಿ ಎಂದು ನೂರನೇ ಸಾರಿ ಪ್ರಾರ್ಥಿಸಿಕೊಂಡೆ.
 
 


 
 
 
 
 
Copyright © 2011 Neemgrove Media
All Rights Reserved