ಅಂಗಳ      ನೀನಾರಿಗಾದೆಯೊ ಎಲೆ ಮಾನವ
Print this pageAdd to Favorite
 

ಬಸವ, ನೀನು ಯಾವಾಗ ಬರುವೆ? 

ಡಾ. ಹಿ. ಶಿ. ರಾ.
 
 
 
ನೀನು ಬರುವುದಿಲ್ಲ. ನನಗೆ ಗೊತ್ತು. ಯಾಕಂದರೆ ನೀನು "ಸಂಭವಾಮಿ ಯುಗೇ ಯುಗೇ’ ಆಸೆ ತೋರಿಸಿದವನಲ್ಲ. ಪುರಾಣ ಪುಣ್ಯ ಕಥೆಗಳ ಆರೋಪ ಮಾಡಿಕೊಂಡು ಆವರಣದೊಳಗೆ ಹುಟ್ಟಿದವನಲ್ಲ. ಹಿನ್ನೆಲೆಯಲ್ಲಿ ನೀನು ಬ್ರಾಹ್ಮಣನೂ ಅಲ್ಲ, ಶೂದ್ರನೂ ಅಲ್ಲ. ಯಾಕೆ ಗೊತ್ತ? ಇಂಥ ಸುಳ್ಳುಗಳನ್ನು ನೀನು ಹೇಳಲೇ ಇಲ್ಲವಲ್ಲ. ಹಾಗಿದ್ದು ನಿನ್ನನ್ನು ಯಾವ ಅಪರಾಧಿ ಸ್ಥಾನದಲ್ಲಿ ಇಡಲೂ ನನಗೇ ಅಪರಾಧ ಭಾವ ಕಾಡುತ್ತದೆ. ಸುಳ್ಳು ಹೇಳಿ ಸಮಾಜ ಕಟ್ಟುವುದು ನಿನಗೆ ಗೊತ್ತೇ ಇರಲಿಲ್ಲ ನೋಡು. ಅದು ಹೊಸದೇ ಪಠ್ಯಕ್ರಮ. ನಿನ್ನದು ಹೊಸದೇ ವಿಶ್ವವಿದ್ಯಾನಿಲಯ. ವಿನೂತನ ಪಠನ ಕ್ರಮ. ಅದೇ ಬುದ್ಧ ನೀನು. ನಿನಗೆ ನಮಸ್ಕಾರ.
 
ನಿನ್ನಲ್ಲಿ ದಲಿತರೆಂಬುವರೆ ಇರಲಿಲ್ಲ ನೋಡು. ನಮ್ಮ ಪಂಚವಾರ್ಷಿಕ ಯೋಜನೆಗಳು ಹೊಸ ದಲಿತರನ್ನು ಸೃಷ್ಟಿ ಮಾಡಿ ನಿನ್ನನ್ನು ಗೆಲ್ಲಲಾರದೆ ಸೋತಿವೆ. ನೀನು ಎಲ್ಲರನ್ನೂ ಸೋಲಿಸಿರುವೆ, ನೀನು ಮಾತ್ರ ಸೋಲಲಾರೆ. ಅಂಥ ಸೋಲಲಾರದ ಪದವಿ ಮತ್ಯಾರಿಗಾದರೂ ಉಂಟೆ. ನಿನ್ನ ಎದುರು ನಾವೆಲ್ಲ ಸೋತಿದ್ದೇವೆ. ನೀನೊಬ್ಬನೇ ಅದು ಹೇಗೆ ಗೆದ್ದೆ? ಅದೇ ನನಗೆ ಆಶ್ಚರ್ಯ, ಬ್ರಹ್ಮಾಂಡ ಒಗಟು; ಈಗಲೂ ಯಾ ಹೊತ್ತೂ!
ನಿನ್ನ ನೆನೆದಾಗ ನನ್ನ ವಿಚಾರ, ತರ್ಕ ಇವೆಲ್ಲ ಮಾತಿನ ಹೊಟ್ಟು ಅನಿಸುತ್ತವೆ. ನಮ್ಮ ಮಾತುಗಳಿಗೆ ’ವಚನ’ವೇ ಇಲ್ಲವಲ್ಲ! ಇನ್ನು ನಾವು ಗುರುವಾಗುವುದು ಎಂತು ಶಿವ. ಆ ಗುರುವಾಗುವ ಗುರುತು ತೋರಿಸುವೆಯ. ಭಕ್ತನಾಗಿಯೂ ಭವಿಯಾಗಿಯೂ ಇದು ಬೇಡಿಕೆ ಅಲ್ಲ. ಬೇಡುವವರ ಕೊಡುವವರ ಕರ್ನಾಟಕ ರಾಜಕೀಯದಲ್ಲಿ ನೋಡಿ ಸಾಕಾಗಿದೆ. ಈ ಬಗೆಯ ಬೇಡುವ ಮತದಾರರನ್ನು ನಿನ್ನ ಕಾಲದಲ್ಲಿ ಕಂಡಿದ್ದುಂಟೆ. ಓಡಿ ಬಂದ ಆ ಕಾಲದ ಶರಣರ ಮುಂದೆ ಈ ಬೇಡುವವರ ಗುಡ್ಡೆ ಹಾಕಿ ಸುಡು. ಇಷ್ಟೋಂದು ಅಂತರಂಗವನ್ನು ಹರಾಜಿಗಿಡಬಹುದೆ!.
ಈ ಬಡ್ಡೇತವಕ್ಕೆ ನಿನ್ನ ರಾಜಕೀಯವೂ ಅರ್ಥವಾಗಲಿಲ್ಲವಲ್ಲ ಗುರುವೆ. ವೇದಿಕೆಯ ಮೇಲೆ ಹತ್ತಿ ಮೆರೆದಾಡುವ ಇವಕ್ಕೆ ಕಾಗೆಯಂತೆ ಅಗುಳ ಕಂಡು ಹಲವರ ಕೂಗಿ ಕರೆದು ಹಂಚಿಕೊಂಡ ಪರಿಯ ಪರಿಮಳ ಪಸರಿಸಲೇ ಇಲ್ಲವಲ್ಲ. ಸೋಜಿಗ, ಮಹಾ ಸೋಜಿಗ. ಇಪ್ಪತ್ತೊಂದನೆಯ ಶತಮಾನಕ್ಕೆ ಮತ್ತೆ ಹುಟ್ಟಲಿಲ್ಲವೆಂದರೆ ನಿನ್ನ ಹೇಗೆ ಬದುಕಿಸುವರಯ್ಯ. ನೀನು ಕಾಣೆಯಾಗುವುದ ಕೇಳಿದರೆ ಎದೆ ಒಡೆದು ಹೋಗುತ್ತದೆ. ಕರ್ನಾಟಕವೊಂದು ಶ್ರಾಧ್ಧದ ಗೃಹಕೃತ್ಯದಂತೆ ಭಾಸವಾಗುತ್ತದೆ. ನೀನು ಸದಾ ನಮಗೆ ಕಾಣಿಸುತ್ತಲೇ ಇರಬೇಕು; ದೇವರಾಗಿ ಅಲ್ಲ, ದಾನಿಯಾಗಿ ಅಲ್ಲ: ಈ ಕಸದ ಕರ್ನಾಟಕದೊಳಗಿಂದ ದುಡಿವ ಎರೆಯ ಹುಳುವಾಗಿ, ಸಾವಯವವಾಗಿ.
 
ಬಸವ ನಿನಗೆ ನಿನ್ನವರೆಂಬುವರೆ ಇರಲಿಲ್ಲ. ಈಗಲೂ ಇಲ್ಲ. ಅದಕೇ ನೀನು ಕೂಡಲ ಸಂಗಮಕೆ ಹೋದೆ. ಈಗೆಲ್ಲಿ ಹೋಗುವೆ? ಮಠಗಳಿಗೇ ಹೋದರೆ ನಮ್ಮವರ ಪ್ರಾಣವ ತೆಗೆದ ಹಾಗೆ. ನೀನು ಕೊಲೆಗಡುಕನಾಗುವುದಿಲ್ಲ. ನೀನೇ ಬೇಕಾದರೆ ಮತ್ತೆ ಸಾಯುತ್ತೀಯ; ಈ ಜನರ ಸನ್ನಿಪಾತವ ಬಿಡಿಸಲು ನೀನು ಸದಾ ತಯಾರಾಗುತ್ತೀಯ. ಆದರೆ ನಾವು ಸದಾ ನಿನ್ನನ್ನು ನೇಣುಗಂಬದಲಿ ನೇತಾಡುವುದ ನೋಡಬೇಕಾ? ಬಂದುಬಿಡು ನಮ್ಮ ಮನಕೆ. ಇನ್ನೊಂದು ಆಕಾಶ ತೆರೆದುಕೊಳ್ಳಲಿ. ಹಜಾರೆ, ರಾಮದೇವ ಅವರನ್ನು ಬಿಟ್ಟು ಬಿಡು. ಅವರದು ಒಂಟಿ ಕಾಲಿನ ನಡಿಗೆ. ಎಷ್ಟು ಹೊತ್ತು ನಿಲ್ಲುತ್ತಾರೆ? ನೀನು ಕಟ್ಟಿದ ಕಾಲಿನ ಕಂಭ, ಹೃದಯ ದೇಗುಲ ಇನ್ಯಾರು ಕಟ್ಟುವರಯ್ಯ? ನಾವೇಲ್ಲ ಬೀಡಾಡಿಗಳು. ಕುಟುಂಬವೆಂಬುದಕ್ಕೆ ನೇಣು ಹಾಕಿಕೊಂಡವರು. ಅದಕಲ್ಲವೆ ನಿನ್ನ ಮುಂದೆ ನಾವೆಲ್ಲ ಕುನ್ನಿಗಳು. ನಿನ್ನ ಮುಂದೆ ಬಗ್ಗಿ ನಿಂತಿದ್ದೇವೆ. ಗುಲಾಮತನಕಲ್ಲ; ಹೊಸತಾಗಿಸು, ಅಂಥ, ಮುದಕಾಗಿ.
ನೀ ಹೋದ ಮೇಲೆ ಕರ್ನಾಟಕಕ್ಕೆ ಕರೆಂಟೇ ಹೋಯಿತು. ಯಾರು ತಂದು ಕೊಡುತಾರೆ ಜೀವಸತ್ವ, ಜೀವಜಲ, ನಡೆದಾಡುವ ವ್ಯಕ್ತಿತ್ವ. ಯಾರಿಗೆ ಆ ಖಾತೆ ಕೊಟ್ಟರೂ ಖೋತಾ. ನಮ್ಮ ಬಜೆಟ್ಟೇ ಅಂಥದು. ನೀನು ಮಾತ್ರ ಯಾಹೊತ್ತೂ ಖೋತಾ ಬೀಳಲಿಲ್ಲ. ಅಂಥ ವ್ಯಕ್ತಿತ್ವ ಕರ್ನಾಟಕದಲ್ಲಿ ನೀನೋಬ್ಬನೆ. ಅದಕ್ಕೇ ನೀನು ಕರ್ನಾಟಕದವನು, ನಾವು ಅಲ್ಲಿದ್ದೂ ಪರದೇಶಿಗಳು. ನಮ್ಮವ ನಮ್ಮವ ಅಂದರೆ ಅದು ನೀನೊಬ್ಬನೇ. ಅದ ಬಾಯಿ ಪಾಠ ಮಾಡಿ ಒಪ್ಪಿಸಿದರೆ, ವೇದಿಕೆಯ ಮೇಲೆ ನಿಂತು ನಮ್ಮವ ಎಂದು ಭಾಷಣ ಮಾಡಿದರೆ ಕೆಳಗಿದ್ದವರು ನಗುವರಯ್ಯ. ನಿನ್ನ ನೆನೆದರೆ ಕೈ ಮುಗಿವರಯ್ಯ. ಗಾಳಿಯ ಮಾತು ಬಿಡು. ಆ ನಮ್ಮವನನ್ನು ಮತ್ತೆ ತೋರಿಸು. ಅದಕೆಂದೇ ಕಾಯುತ್ತಿದ್ದೇವೆ.
 
ಕಟ್ ಮಾಡಿದರೆ ನಿನ್ನನ್ನು ನೋಡಲಾಗುವುದಿಲ್ಲ. ಭಾಗ ಮಾಡಿ ಮಾತಾಡಿದರೆ ಅವಮಾನವಾಗುತ್ತದೆ. ನಿನ್ನನ್ನು ಭಾಗ ಮಾಡುವುದು ಹೇಗೆ? ಹಾಗೆ ಮಾಡಿದರೆ ದಲಿತರು ಸುಮ್ಮನಿರುವರೆ. ಬಸವನನ್ನು ಕೊಂದುದಕೆ ಕೇಸು ಹಾಕುತ್ತಾರೆ, ಕಟಕಟೆಯಲ್ಲಿ ನಿಲ್ಲಿಸುತ್ತಾರೆ. ಅವರೊಳಗೆ ಅರ್ಥಮಾಡಿಕೊಂಡವನು ನೀನು, ನೀನೊಬ್ಬನೆ. (ಬರಿ ಶರಣು ಎಂದರೆ ಶನಿಕಾಟ ತಪ್ಪಿಹೋಗುವುದೆ) ನಿನಗೆ ಅದು ಸುಲಭವಾಯಿತು. ಕರ್ನಾಟಕಕೆ ಇನ್ನೂ ನಿನ್ನ ಒಳಸುಳಿ ಅರ್ಥವಾಗುತ್ತಲೇ ಇಲ್ಲ. ಅದಕೇ ಅವರು ಭಜನೆಯಲಿ ತೊಡಗಿದ್ದಾರೆ!
 
ಬಸವ, ನಿನ್ನ ಬಿಟ್ಟು ಕರ್ನಾಟಕ ನನಗೆ ಅರ್ಥವಾಗುವುದಿಲ್ಲ. ನಾನು ನಿನ್ನಿಂದಲೇ ಕರ್ನಾಟಕವನ್ನು ಕಲಿತುಕೊಂಡೆ. ಕರ್ನಾಟಕದ ಜನರ ಗೊತ್ತು ತಿಳಿದುದೂ ನಿನ್ನಿಂದ. ನಿನ್ನ ಆ ಅಲ್ಲಮ, ಅಕ್ಕ, ಸಿದ್ದರಾಮ, ಅಜಗಣ್ಣ, ಮಾರಯ್ಯ, ದಾಸಿಮಯ್ಯ, ಅರಳಯ್ಯ, ಮಾದರಸ...ಎಂಥ ಕೂಡು ಬಾಳು. ಎಂಥ ಥ್ರಿಲ್. ಏನೊಂದು ಭಾವ, ಎಷ್ಟೊಂದು ಸಂಸ್ಕೃತಿ, ವೈವಿಧ್ಯ, ಸಂಭ್ರಮ. ಈ ರಾಜಕಾರಣಿಗಳಿಗೆ ಇವರ್ಯಾರೂ ಪರಿಚಯವೇ ಇಲ್ಲ. ಯಾಕಂದರೆ ಇವರು ಮತದಾರರಲ್ಲ.
 
ನಿನ್ನ ಹೊರತು ಕರ್ನಾಟಕ ಜಗತ್ತು ಸೃಷ್ಟಿಸಿದ ನಾಯಕರನೇ ನಾವು ಕಾಣಲಿಲ್ಲ. ಈಗ ನಮ್ಮ ಮುಂದೆ ಕರ್ನಾಟಕ ಇಲ್ಲ. ಜಾತಿಗಳಿವೆ, ಪಕ್ಷಗಳಿವೆ, ಪಂಗಡಗಳಿವೆ, ಮನುಷ್ಯರಿದ್ದಂತೆ ಕಾಣುತ್ತಿಲ್ಲವಲ್ಲ ಶಿವ. ಕುರಿಗಳ ಪಾಲು ಮಾಡಿ ಮಂದೆಯೊಳಗೆ ಕೂಡಿಕೊಂಡ ಹಾಗೆ ಇದೆ. ಹೆಗಡಿ ದೊಣ್ಣೆ ಹಿಡಿದು ಕಾಯುತ್ತಾ ಇದಾನೆ. ಅವ, ಸ್ವಾಮಿ, ಮಂತ್ರಿಸಿಕೊಟ್ಟಿದ್ದಾನೆ ನಿಂಬೆ ಹಣ್ಣು ಗಮಗಮ. ನೀನು ಕೊಟ್ಟೆ ಕರ್ನಾಟಕ. ಅರಸು ಮತ್ತೆ ಕಾಣಿಸಿದ ಅದನು ಲೋಕಕೆ. ಇನ್ಯಾರು ಬರುವರಯ್ಯ ನಿನ್ನ ಹಿಂದೆ...
 
 
 
 
 
Copyright © 2011 Neemgrove Media
All Rights Reserved