ಅಂಗಳ      ಒಂದೂರಂತೆ
Print this pageAdd to Favorite

 

 

ತಂದೆಯ ಕೊನೆ ಬುಧ್ಧಿ ಮಾತು

 
 
(ಸಂಗ್ರಹ)
 
ಚಿತ್ರ: ಮಹಿಮಾ ಪಟೇಲ್
 
ಒಂದೂರಿನಲ್ಲಿ ಗಂಡ ಹೆಂಡತಿ ಇದ್ದರು. ಇಬ್ಬರಿಗೂ ತುಂಬಾ ಬಡಸ್ತನ. ತಿನ್ನುವುದಕ್ಕೂ ಗತಿಯಿಲ್ಲ, ಇನ್ನು ಉಡೋದೇನು ಬಂತು? ಆ ತರದ ಬಡವರು. ಅವರಿಗೊಂದು ಗಂಡು ಮೊಗ ಇತ್ತು. ಹೆಂಗೋ ಹಂಗೇ ಬೆಳೀತು. ಅದಕ್ಕೆ ಏನೂ ವಿದ್ಯ ಬುಧ್ಧಿ ಇಲ್ಲ. ಅವ್ವ-ಅಪ್ಪಯ್ಯ ಹೇಳಿದ್ದನ್ ಕೇಳ್ಕಂಡ್ ಕಾಲ ಹಾಕ್ತಿತ್ತು. ಹಿಂಗೇ ಇರಬೇಕಾದ್ರೆ ಆ ಬಡವಿ ಒಂದಿನ ಸತ್ತು ಹೋದ್ಲು. ಅಷ್ಟರಲ್ಲಿ ಆ ಹುಡುಗ ಒಸಿ ದೊಡ್ಡವನಾಗಿದ್ದ. ಅವನೇ ಅವರಪ್ಪನನ್ನು ನೋಡಿಕೊಂಡ. ಗಂಜಿ ಬೇಸಿ ಹಾಕಿದ. ಅವರಪ್ಪನೂ ಮುದುಕ. ಎಷ್ಟು ದಿನ ಉಳಿದಾನೂ? ಒಂದಿನ ಅವನೂ ಹೋಗಹಂಗಾದ. ನನಗೆ ಸಾಯೋಕಾಲ ಬಂತು ಕಣಪ್ಪಾ ಅಂತ ಮಗನನ್ನು ಹತ್ತಿರ ಕರೆಸಿಕೊಂಡ.
 
’ನೋಡಪ್ಪಾ...ನಿನಗೆ ಬಿಟ್ಟು ಹೋಗಕೆ ನನ್ನ ಹತ್ರ ಹೊಲ-ಮನೆ ಆಸ್ತಿ-ಪಾಸ್ತಿ ಏನೂ ಇಲ್ಲ. ನಿನನ್ನು ಒಬ್ಬನೇ ಬಿಟ್ಟು ನಾನು ಹೊರಟೆ. ಇದೊಂದು ಮಾತು ಮಾತ್ರ ಯಾವಾಗಲೂ ನೆನಪಿಟ್ಟುಕೋ’ ಅಂದು,
’ಕರೆದರೆ ಉಣ್ಣು,
ಕೆರೆದರೆ ಮುಚ್ಚು,
ಮ್ಯಾಲಿನ ಬೀದಿ ಬಿಟ್ಟು ಕೆಳಗಿನ ಬೀದಿಲಿ ಹೋಗು,
ಒಳ್ಳೆ ಮಾತು ಹೇಳೋ ತಾವು ಒಂದು ಗಳಿಗೆ ನಿಂತು ಹೋಗು.
ಜನಕ್ಕೆ ಅಂಜಿ ಹೇಳು,
ಹಂಗೇ...ಅಂಜದೇ ಹೇಳಪ್ಪಾ’ ಅಂತ ಕಣ್ಣುಮುಚ್ಚಿದ. ಮಗ ಅಪ್ಪ ಹೇಳಿದ ಮಾತನ್ನ ಮನಸ್ಸಿಗೆ ಇಟ್ಟುಕೊಂಡ.
ಹೊಲ ಮನೆ ಇಲ್ಲ. ಅಪ್ಪನೂ ಇಲ್ಲ, ಅವ್ವನೂ ಇಲ್ಲ. ಆ ಊರಲ್ಲಿ ಈ ಹುಡುಗ ಇನ್ನೇನು ಮಾಡ್ತನೆ? ಆ ಊರು ಬಿಟ್ಟು ಕೆಲಸ ಹುಡುಕಿಕೊಂಡು ದೂರದಲ್ಲಿದ್ದ ಪಟ್ಟಣಕ್ಕೆ ಬಂದ. ಆ ಪಟ್ಟಣಕ್ಕೊಬ್ಬ ದೊರೆ ಇದ್ದ. ಅವನು ಈ ಹುಡುಗನ್ನ ನೋಡಿ ’ನನ್ನ ಹತ್ತಿರ ಕೆಲಸಕ್ಕೆ ಬರ್ತಿಯೇನಪ್ಪಾ? ಮಲಗಲು ಜಾಗ, ಊಟ ಕೊಡ್ತೀನಿ’ ಅಂತ ಕರೆದ. ಈ ಹುಡುಗ ಅವರಪ್ಪನ ಮೊದಲ ಮಾತು ನೆನಪಿಸಿಕೊಂಡ. "ಊ ಸ್ವಾಮಿ ನೀವು ಕರೆದರೆ ಬಂದೇ ಬರ್ತಿನಿ" ಅಂತ ಆ ದೊರೆಮನೆಯಲ್ಲಿ ಬಂದು ಜೀತಕ್ಕೆ ಸೇರಿಕೊಂಡ. ಆ ದೊರೆ ಈ ಹುಡುಗನ್ನ ಅವನ ಕುದುರೆಲಾಯಕ್ಕೆ ಸೇರಿಸಿಕೊಂಡ.
 
ಒಂದು ದಿನ ಈ ಹುಡುಗ ಆ ದೊರೆಯ ಹೆಂಡ್ತಿ ಕುದುರೆಲಾಯದಲ್ಲಿ ಒಬ್ಬ ಕುದುರೆ ನೋಡಿಕೊಳ್ಳುವವನ ಜೊತೆ ಚಕ್ಕಂದ ಆಡ್ತಿದ್ದು ನೋಡಿದ. ಆ ದೊರೆ ಹೆಂಡ್ತಿ ನಗಾಡ್ತಾ ಮಾತಾಡ್ತಾ ಕಾಲಿನಲ್ಲಿ ನೆಲ ಕೆರಿತಾ ಇದ್ಳು. ಆ ಹುಡುಗನಿಗೆ ಅವರಪ್ಪ ಹೇಳಿದ ಎರಡನೇ ಮಾತು ನೆನಪಿಗೆ ಬಂತು. ಹಿಂದೆ ಮುಂದೆ ನೋಡದೆ. ಆ ಕುದುರೆಯವನು ದೊರೆಹೆಂಡ್ತಿ ಇಬ್ಬರ ಮೇಲೂ ಒಂದಷ್ಟು ಮಣ್ಣು ಹಾಕಿಬಿಟ್ಟ. ಇವನ್ಯಾವನು ನನ್ನ ಮೈ ಮೇಲೆ ಮಣ್ಣು ಹಾಕಿದವನು ಅಂತ ದೊರೆಯ ಹೆಂಡ್ತಿಗೆ ಭಾಳಾ ಕೋಪ ಬಂತು. ’ನೋಡಿ ನೀವು ಜೀತಕ್ಕೆ ತಂದಿಟ್ಟ ಹುಡುಗ ಹಿಂಗೆ ಮಾಡಿದ’ ಅಂತ ದೊರೆಗೆ ದೂರು ಕೊಟ್ಟಳು. ದೊರೆಗೂ ಆ ಹುಡುಗನ ಮೇಲೆ ಕೋಪ ಬಂತು. ಅವನನ್ನು ಹಿಡಿದುಕೊಂಡು ಬಂದು ಶೂಲಕ್ಕೆ ಹಾಕುವಂತೆ ತನ್ನ ಜನರನ್ನು ಕಳಿಸಿದ.
ಈ ಹುಡುಗ ಅವರಪ್ಪನ ಮಾತು ಕೇಳಿಕೊಂಡು ಯಾವತ್ತಿನಂತೆ ಊರ ಮ್ಯಾಲಿನ ಬೀದಿಯಲ್ಲಿ ಓಡಾಡದೆ ಕೆಳಗಿನ ಬೀದಿಯಲ್ಲಿ ಹೋಗುತ್ತಿದ್ದ. ಅವನಿಗೆ ದೊರೆ ಮುನಿಸಿಕೊಂಡಿರುವ ವಿಚಾರ ಗೊತ್ತೇ ಇಲ್ಲ. ಇಷ್ಟರಲ್ಲಿ, ಈ ಹುಡುಗನ್ನ ಎಲ್ಲಿದ್ದರೂ ಹಿಡಿದುಕೊಂಡು ಬಾ ಅಂತ ದೊರೆ ಹೆಂಡ್ತಿ ಅವಳ ಗೆಣೆಕಾರ ಕುದುರೆಕಾರನನ್ನೂ ಅಟ್ಟಿಸಿದಳು. ಅವನೂ ಈ ಹುಡುಗನ್ನ ಹುಡುಕಲು ಓಡಿದ.
 
ಈ ಹುಡುಗ ಊರ ಕೆಳಗಿನ ಬೀದಿಲಿ ಬರಬೇಕಾದರೆ ಯಾರೋ ಒಳ್ಳೆ ಮನುಷ್ರು ಅಲ್ಲಿ ಕೂತು ರಾಮಾಯ್ಣ ಓದುತ್ತಿದ್ದರು. ಈ ಹುಡುಗನಿಗೆ ಅವರಪ್ಪ ಹೇಳಿದ ಮಾತು ನೆನಪಾಯಿತು. ಅಲ್ಲೇ ಒಂದು ನಿಮಿಷ ರಾಮಾಯ್ಣ ಕೇಳಲು ಬೇರೆ ಜನರ ಮಧ್ಯೆ ನಿಂತುಕೊಂಡ. ಈ ಕಡೆ, ಈ ಹುಡುಗನ್ನ ಹುಡುಕೊಂಡು ದೊರೆಯ ಹೆಂಡ್ತಿಯ ಗೆಣೆಕಾರ ಎಲ್ಲಾ ಕಡೆ ಓಡಾಡಿದ. ಹುಚ್ಚಾಪಟ್ಟೆ ಅನುಮಾನ ಬರುವಂತೆ ಓಡಾಡುತ್ತಿದ್ದ ಅವನನ್ನು ನೋಡಿ ದೊರೆಯ ಕಡೆಯ ಜನ ಇವನೇ ಆ ಕೇಡಿಗ ಇರಬೇಕು ಅಂದುಕೊಂಡು ಅವನ್ನನ್ನು ಹಿಡಿದು ತಂದು ಶೂಲಕ್ಕೆ ಹಾಕಿ ಸುಮ್ಮನಾದರು.
 
ಈ ಹುಡುಗ ರಾಮಾಯ್ಣ ಕೇಳಿ ಮುಗಿಸಿ ಯಾವತ್ತಿನಂತೆ ಕೆಲಸಕ್ಕೆ ದೊರೆ ಮನೆಗೆ ಬಂದ. ದೊರೆಗೆ ಇದೇನಪ್ಪಾ ಇಲ್ಲೇನೋ ರಹಸ್ಯ ವಿಷಯ ಇದೆ ಎನಿಸಿತು. ಈ ಹುಡುಗನನ್ನು ಕೂರಿಸಿಕೊಂಡು ನಿನ್ನ ಕಥೆ ಹೇಳಪ್ಪಾ, ಏನಾಯಿತು ಎಲ್ಲಾ ಹೇಳು ಅಂತ ಹೇಳಿಸಿದ. ಹುಡುಗನಿಗೆ ಅವರಪ್ಪ ಹೇಳಿದ ಕೊನೆ ಮಾತು ನೆನಪಿಗೆ ಬಂತು. ’ಸ್ವಾಮಿ ಅಂಜಿ ಹೇಳಲೋ? ಅಂಜದೆ ಹೇಳಲೋ?’ ಅಂತ ದೊರೆಯನ್ನು ಕೇಳಿದ. ’ಅಂಜದೆ ಎಲ್ಲಾ ಹೇಳಪ್ಪಾ’ ಅಂತ ದೊರೆ ಹೇಳಿದ್ದಕ್ಕೆ ಈ ಹುಡುಗ ಕಂಡಿದ್ದು, ಕೇಳಿದ್ದು ಇದುವರೆಗೆ ಆಗಿದ್ದು ಎಲ್ಲಾ ವಿಚಾರ ಹೇಳಿದ. ದೊರೆಗೆ ತನ್ನ ಹೆಂಡ್ತಿಯ ವಿಚಾರ ತಿಳಿಯಿತು. ಅವಳನ್ನು ಕರೆಸಿ ನಿಜ ತಿಳಿದುಕೊಂಡು ಅವಳನ್ನೂ ಶೂಲಕ್ಕೆ ಹಾಕಿದ. ’ನೀನು ಒಳ್ಳೆ ಹುಡುಗ ಕಣಪ್ಪಾ...ನನಗೆ ತಮ್ಮನಂತೆ ಇರು’ ಅಂತ ಈ ಹುಡುಗನಿಗೆ ಆಸ್ತಿ ಕೊಟ್ಟು ತನ್ನ ಹತ್ತಿರವೇ ಇಟ್ಟುಕೊಂಡ. ಆ ಹುಡುಗ ಹೊಲ ಮನೆ ಗಾಡಿ ಮಾಡಿಕೊಂಡು ಚನ್ನಾಗಿ ಬದುಕಿದ.
 
  
 
 
 
 
 
 
Copyright © 2011 Neemgrove Media
All Rights Reserved