ಅಂಗಳ      ಒಂದೂರಂತೆ
Print this pageAdd to Favorite

 

 

ಗಂಡ ಹೆಚ್ಚೋ ಹೇಣ್ತಿ ಹೆಚ್ಚೋ ಹೇಳೋ ಅಂದ್ರೆ ತಂದಿಟ್ಟ ಗೆಳೆಯ

 
 
(ಸಂಗ್ರಹ)
 
ಚಿತ್ರ: ಮಹಿಮಾ ಪಟೇಲ್
 
 
ಒಂದೂರಲ್ಲಿ ಒಬ್ಬ ಗಂಡ ಹೇಣ್ತಿ ಚಂದಾಕ್ ಸಂಸಾರ ಮಾಡಿಕೊಂಡಿದ್ರು. ಇಬ್ಬರೂ ಗೇದು ಚನ್ನಾಗಿ ಹೊಲ ಮನೆ ಕೆಲಸ ಮಾಡಿಕೊಂಡಿದ್ರು. ಒಂದ್ ದಿನ ಗಂಡ ಹೇಣ್ತಿಗೆ ’ನಾಳೀಕೆ ನಾನು ವತ್ತಾರಿಕೇ ಪಕ್ಕದೂರ್ನ ಸಂತೆಕಡಿಕೆ ಓಬರ್ಬೇಕು...ಬೇಗ ಗಂಜಿ ಕಾಯ್ಸಿಡು’ ಅಂದ. ಹೇಣ್ತಿ ತಾನೂ ಸಂತೆಗೆ ಬರಲಾ ಅಂತ ಕೇಳಿದಳು. ಗಂಡ ಬೇಡ ಅಂದ. ಹೇಣ್ತಿಗೆ ಕೋಪ ಬಂತು. ’ಅಷ್ಟು ವತಾರೆ ನಾನ್ಯಾಕೆ ಏಳ್ಬೇಕು? ಬೇಕಾದ್ರೆ ನೀನೇ ಎದ್ದು ಗಂಜಿನಾರಾ ಕಾಯ್ಸಿಕೋ, ಅಂಡ್ನಾರಾ ಕಾಯ್ಸಿಕೋ’ ಅಂದಳು.
 
ಹೇಣ್ತಿ ಹಂಗದ್ದದ್ದು ಕೇಳಿ ಗಂಡನಿಗೆ ಕೋಪ ಬಂತು. ’ನಿನ್ನ ಮದಿವೆ ಆಗಿರದು ಯಾಕೆ ಅಂತ ತಿಳ್ಕಂಡಿದೀಯಾ? ಸುಮ್ಮನೆದ್ದು ಗಂಜಿ ಕಾಯ್ಸು’ ಅಂತ ಗಲಾಟೆ ಮಾಡಿದ. ’ನಿನ್ನನ್ನು ಮದಿವಾಗಿದ್ದು ಬರೀ ಗಂಜಿ ಕಾಯ್ಸಕಾ? ನಿಂತರನೇ ನಾನೂ ಗೇಯಲ್ವಾ...ನಂಗೆ ನಾಳೆ ಗಂಜಿ ಕಾಯ್ಸಕಾಗಕಿಲ್ಲ. ಬೇಕಾದ್ರೆ ನೀನೇ ಮಾಡಿಕೋ’ ಅಂತ ಹೆಂಡತಿ ಪಟ್ಟು ಹಿಡಿದಳು. ಇಬ್ಬರು ನಾನು ಹೆಚ್ಚೋ ನೀನು ಹೆಚ್ಚೊ ಅಂತ ಇಡೀ ದಿನ ಜಗಳ ಆಡಿದರು. ’ನಾನು ಏನೇನ್ ಕೆಲಸ ಮಾಡ್ತೀನೋ ಅದೆಲ್ಲನೂ ನೀನೂ ಮಾಡಿ ತೋರಿಸು. ಆಗ ನೀನೂ ನನ್ನ ಸಮ ಅಂತ ನಂಬ್ತೀನಿ. ನೀನೇನಾದ್ರೂ ನಾನು ಮಾಡಿದ ಕೆಲಸ ಮಾಡದೆ ಸೋತ್ರೆ ನಾನು ಹೇಳಿದ್ದು ಕೇಳಿಕೊಂಡು ಇರಬೇಕು, ನಾನು ಸೋತ್ರೆ ನೀನು ಹೇಳಿದಂಗೆ ಕೇಳಿಕೊಂಡಿರ್ತೀನಿ’ ಅಂತ ಗಂಡ ಹೇಣ್ತಿಗೆ ಸವಾಲ್ ಹಾಕಿದ. ಹೇಣ್ತಿ ಸಂತೋಷದಿಂದ ಒಪ್ಪಿದಳು.

ಗಂಡ ಮೊದಲು ಒಂದೆಕರೆ ಹೊಲ ಉತ್ತಿ ಬಂದ. ಹೇಣ್ತಿ ಅವನಿಗಿಂತ ನಾನೇನು ಕಡಿಮೆ ಅಂತ ಅವನಿಗಿಂತಲೂ ಚನ್ನಾಗಿ ಎರಡೆಕರೆ ಹೊಲ ಉತ್ತಿ ಬಂದಳು. ಗಂಡ ದೊಡ್ಡದೊಂದು ತೆಂಗಿನ ಮರ ಹತ್ತಿ ತೋರಿಸಿದ. ಹೇಣ್ತಿ ಅದಕ್ಕಿಂತ ದೊಡ್ಡ ತೆಂಗಿನ ಮರ ಹುಡುಕಿ ಹತ್ತಿ ತೋರಿಸಿದಳು. ಮನೆ ಪಕ್ಕದ ಬಾವಿಯಿಂದ ಗಂಡ ಐವತ್ತು ಬಿಂದಿಗೆ ನೀರು ಸೇದಿದ. ದಿನಾ ನಿರು ಸೇದಿ ರೂಡಿಯಿದ್ದ ಹೇಣ್ತಿ ಅವನಿಗಿಂತ ಬೇಗ ಅರವತ್ತು ಬಿಂದಿಗೆ ನೀರು ಸೇದಾಕಿದಳು. ಗಂಡ ಕತ್ತಿ ತಗಂಡು ಹೆಬ್ಬಲಸಿನ ಮರ ಕಡಿದು ಹಾಕಿದರೆ ಹೇಣ್ತಿ ಅದೇ ಕತ್ತಿ ತಗಂಡು ದೊಡ್ಡ ಅತ್ತಿಮರವನ್ನೇ ಕಡಿದು ಬೀಳಿಸಿದಳು. ಗಂಡ ಇಪ್ಪತ್ತು ಹೊರೆ ಹುಲ್ಲು ತಂದರೆ ಹೇಣ್ತಿ ಮೂವತ್ತು ಹೊರೆ ಹುಲ್ಲು ಕೂದಾಕಿದಳು. ’ಎಲಾ ಇವಳಾ!’ ಅಂದ್ಕಂಡ ಅವನು.
 
’ಇವಳಿಗೇನಾರಾ ಮಾಡಬೇಕಲ್ಲಾ’ ಅಂತ ಯೋಚಿಸಿ ಗಂಡ ತೋಟದ ಬಾವಿಗಿಳಿದನು. ಹೇಣ್ತಿಯೂ ಸಲೀಸಾಗಿ ಬಾವಿಗಿಳಿದಳು. ಗಂಡ ಅವನಿಗೆ ಗೊತ್ತಿದ್ದ ಎಲ್ಲಾ ಕಷ್ಟದ ಕೆಲಸವನ್ನೂ ಮಾಡಿದನು. ಹೇಣ್ತಿ ಅದ್ಯಾವ ಸೀಮೆ ಅಂತ ಎಲ್ಲನೂ ಮಾಡಿಬಿಟ್ಟಳು. ಗಂಡನಿಗೆ ’ಏನಪ್ಪಾ ಮಾದದು ಇವಳ್ನಾ’ ಅಂತ ಯೋಚನೆ ಬಂತು. ಆಗ ಹೇಣ್ತಿ ಗಂಡನಿಗೆ ಅಡಿಗೆ ಮಾಡಿ ಬಡಿಸಕೆ ಹೇಳಿದಳು. ಗಂಡ ಏನಪ್ಪಾ ಮಾಡ್ಲಿ ಅಂತ ಅಳುತ್ತಾ ಕೂತುಬಿಟ್ಟ.
 
ಗಂಡನ ಗೆಳೆಯ ಅವತ್ತು ಇವರ ಮನೆ ತಾಕೆ ಬಂದ. ಗಂಡ ಅಳ್ತಿದ್ದ ನೋಡಿ, ’ಯಾಕಪ್ಪಾ ಹಿಂಗ್ ಕಣ್ಣೀರ್ ಹಾಕ್ತಿದೀಯಾ...ನಿನ್ನ ಹೇಣ್ತಿ ಏನಾರ ಹೋಗಿ ಬಿಟ್ಲಾ’ ಅಂತ ಕೇಳಿದ. ’ಹೋಗದೇನು ನನ್ನನ್ನೇ ಕಳಿಸ್ತಾ ಅವಳೇ!’ ಅಂತ ಗಂಡ ತನ್ನ ಗೆಳೆಯನಿಗೆ ತನ್ನ ಸವಾಲಿನ ವಿಚಾರ ತಿಳಿಸಿ ತಾನು ಸೋಲ ಹಂಗಾಗಿರೋದನ್ನೂ ಹೇಳಿಕೊಂಡ. ಆ ಗೆಳೆಯ ಮಹಾನ್ ಕೊರಮ ಜಾಣ. ಗಂಡನ ಎಲ್ಲಾ ಮಾತು ಕೇಳಿಸಿಕೊಂಡು ’ನೋಡಪ್ಪಾ ನೀನು ಅಡಿಗೆ ನಾಳೆ ಮಾಡ್ತಿನಿ ಕಣೆ ಅಂತ ಮನಿಕಂಡು ಬಿಡು...ನಾಳೆ ಬೆಳಿಗ್ಗೆ ಎದ್ದವನೇ ನಾಲ್ಕು ಜನ ಹೆಂಗಸರು, ನಾಲ್ಕು ಜನ ಗಂಡಸರನ್ನು ಮನೆ ಮುಂದೆ ಸೇರಿಸು. ಆಗ ನಾನು ಬರ್ತಿನಿ. ನೀನೇ ಗೆಲ್ಲುವಂಗೆ ಮಾಡ್ತಿನಿ’ ಅಂತ ಗಂಡನಿಗೆ ಧೈರ್ಯ ಹೇಳಿದ.
 
ಗಂಡ ಬೆಳಿಗ್ಗೆ ಎದ್ದವನೇ ಸುತ್ತಲಿನ ನಾಲ್ಕು ಹೆಂಗಸರು-ಗಂಡಸರನ್ನು ಮನೆ ಹತ್ತಿರ ಸೇರಿಸಿದ. ಅವನ ಗೆಳೆಯನೂ ಬಂದ. ಹೇಣ್ತಿ ತಯಾರಾಗಿ ಕೂತಿದ್ದಳು. ಆಗ ಆ ಗೆಳೆಯ ಅಲ್ಲಿ ಬಂದಿದ್ದ ಜನರಿಗೆ ಈ ಗಂಡ ಹೆಂಡಿರ ಸವಾಲನ್ನು ತಿಳಿಸಿ ಹೇಣ್ತಿಯನ್ನು ಕರೆದು ’ನೋಡಮ್ಮಾ ಈಗ ನಾನು ಮಾಡು ಅನ್ನದನ್ನ ನೀನು-ನಿನ ಗಂಡ ಮಾಡಿ ತೀರಿಸಬೇಕು, ಮೊದಲು ನೀನು ಮಾಡ್ತಿಯೋ ನಿನ್ನ ಗಂಡ ಮಾಡ್ಲೋ’ ಅಂದ. ಮೊದಲು ನನ್ನ ಗಂಡಾನೇ ಮಾಡಬೇಕು..ಅವನು ಮಾಡಿದ್ದನ್ನು ನಾನು ಮಾಡಿ ತೋರುಸ್ತೀನಿ’ ಅಂತ ಹೇಣ್ತಿ ಹೇಳಿದಳು. ಆ ಗೆಳೆಯ ಅವಳ ಗಂಡನ್ನ ಕರೆದು ಮನೆ ಪಕ್ಕದಲ್ಲಿದ್ದ ಕೊಟ್ಟಿಗೆಯ ಗೋಡೆ ತೋರಿಸಿ ಅಲ್ಲಿ ಚಿತ್ತಾರವಾಗಿ ಉಚ್ಚೆ ಹೊಯ್ದು ಬಾರಪ್ಪಾ’ ಅಂದ. ಗಂಡ ಅವನ ಗೆಳೆಯ ಹೇಳ್ದಂಗೆ ಎಲ್ಲರೆದುರಿಗೆ ಹೊಯ್ದು ಬಂದ. ಈಗ ಆ ಗೆಳೆಯ ಅವನ ಹೇಣ್ತೀನ ಕರೆದು ’ನೀನೂ ಆ ಕೊಟ್ಟಿಗೆಯ ಗೋಡೆ ಮೇಲೆ ನಿನ ಗಂಡನ ತರ ಚಿತ್ತಾರಕ್ಕೆ ಉಚ್ಚೆ ಹೊಯ್ದು ಬಾರಮ್ಮಾ’ ಅಂದ. ಹೇಣ್ತಿ ’ನಾ ವಲ್ಲೆ, ನಾ ಅದನ್ನ ಮಾಡಲ್ಲ, ಬೇರೆ ಏನಾರಾ ಕೆಲ್ಸ ಕೊಡಿ’ ಅಂದ್ಲು. ಆಗ ಆ ಗೆಳೆಯ 'ಸವಾಲು ಅಂದ್ರೆ ಸವಾಲು ಕಣಮ್ಮಾ...ನೀನು ಮಾಡಕಾಗ್ದೆ ಸೋತೆ, ನಿನ್ನ ಗಂಡನೇ ಗೆದ್ದ. ಇನ್ನು ಮೇಲೆ ನೀನು ಅವನು ಹೇಳಿದಂಗೇ ಕೇಳಿಕೊಂಡಿರಬೇಕು’ ಅಂತ ನ್ಯಾಯ ತೀರ್ಮಾನ ಮಾಡಿದ.
 
ಹೇಣ್ತಿ ಸೋಲೊಪ್ಪಿಕೊಂಡ್ಳು. ಗಂಡ ಹೇಣ್ತಿ ಮುಂಚಿನ ಥರಾನೆ ಚನ್ನಾಗಿ ಬದುಕಿದ್ರು. ಆದ್ರೂ ಇವತ್ಗೂ ಹೇಣ್ತಿಗೆ ಗಂಡನ ಗೆಳೆಯನ್ನ ಕಂಡ್ರೆ ಕೆಂಡ್ದಂತಾ ಕೋಪ.
 
  
 
 
 
 
 
 
Copyright © 2011 Neemgrove Media
All Rights Reserved