ಲಾವಿನೋ ಹಾಡು-೨

೧೯೬೬ ರಲ್ಲಿ ಪ್ರಕಟವಾದ ಉಗಾಂಡಾದ ಪ್ರಸಿದ್ಧ ಕವಿ ಒಕೋಟ್ ಪಿ ಬಿಟೆಕ್ ರ ’ಸಾಂಗ್ ಆಫ್ ಲಾವಿನೋ’ ಒಂದು ನೀಳ್ಗವಿತೆ. ಆಫ್ರಿಕಾದ ಸಂಸ್ಕೃತಿ, ಸೊಗಡು ವಸಾಹತುಶಾಹೀ ಸಂಸ್ಕೃತಿಯ ಕಾಲ್ತುಳಿತಕ್ಕೆ ಸಿಲುಕಿ ನಲುಗಿದಾಗ ಲಾವೀನೋ ಎಂಬ ಎದೆಗಾತಿ ಆಫ್ರಿಕನ್ ಮಹಿಳೆಯ ರೋಷ, ಕೋಪ, ನೋವಿನ ಸೊಲ್ಲಾಗಿ ಹೊರಬಂದ ಈ ಕವಿತೆಗಳು ಅತ್ಯಂತ ಗಾಢವಾದ ಉಪಮೆಗಳನ್ನು ಕಟ್ಟಿಕೊಡುತ್ತವೆ. ಈ ನೀಳ್ಗವಿತೆಯನ್ನು ಸಣ್ಣ ಭಾಗಗಳನ್ನಾಗಿಸಿ ಕನ್ನಡಕ್ಕೆ ಶ್ರೀ ಎಚ್. ಎಸ್. ರಾಘವೇಂದ್ರ ರಾವ್ ಅವರು ಅನುವಾದಿಸಿ ಆಯಾಮದ ಓದುಗರೊಡನೆ ಹಂಚಿಕೊಂಡಿದ್ದಾರೆ.

 
ಈಗ ಒಕೋಲ್ ಗೆ

ಹಳೆಯಕಾಲದ ಹುಡುಗಿಯರ ಮೇಲೆ ಪ್ರೀತಿ ಇಲ್ಲ.

ಅವನಿಗೆ ಅಪ್ ಟು ಡೇಟ್ ಹುಡುಗಿ ಬೇಕು

ಆ ಸುಂದರಿ ಹೆಸರೇ ಕ್ಲೆಮಂಟೈನ್.

ಅಪ್ ಟು ಡೇಟ್ ಕ್ಲೆಮಂಟೈನ್

ಅವಳದು ಒಂದೇ ಕನಸು

ಬಿಳಿಯಳಂತೆ ಕಂಡರೆ ಸಾಕು

ಅದೇ ವೆರಿ ವೆರಿ ಫೈನ್.

 

ಅವಳ ತುಟಿಗಳು ಕಡುಕಡು ಕೆಂಪು

ಉರಿವ ಇದ್ದಿಲ ಬೇಗೆ.

ರಕ್ತದಲ್ಲಿ ಮೂತಿ ಮುಳುಗಿಸಿದ

ಕಾಡುಬೆಕ್ಕಿನ ಹಾಗೆ.

ಅವಳ ಬಾಯೋ ತೆರೆದ ಹುಣ್ಣು,

ಪಿಶಾಚಿಯಂಥ ಹೆಣ್ಣು

 
 

ಟೀನಾ, ಟೀನಾ ಮುದ್ದು ಟೀನಾ

ಹಚ್ಚುತಾಳೆ ಬೂದೀನಾ

ಕಪ್ಪುಮುಖಕೆ ಬಿಳಿಯ ಬೂದಿ,

ಮಂಕು ಮಂಕು ವದನ.

ಮಧ್ಯರಾತ್ರಿ ಕುಣಿಯಹೊರಟ

ಮಾಟಗಾತಿಯಂತೆ

ಕಾಣುತಾಳೆ ನಮ್ಮ ಟೀನಾ

ಥೇಟುಕೋತಿಯಂತೆ.

ಮುಖಕೆ ಹೇಲುಬೂದಿ ಹಚ್ಚಿ

ಕುಣಿಯುತಾಳೆ ಟೀನಾ

ಮೈಯ್ಯ ತುಂಬ ಬೆವರು ಹನಿ

ಟೀನಾನಾ, ಇವಳು

ಬೂದೀ ಕೋಳೀನಾ?? 

 
 
 
 
 

 ನೆನಪಿನಂಗಳದಿಂದ...

ಡಾ. ರಾಜೇಗೌಡ ಹೊಸಹಳ್ಳಿ
 
(ಅಲ್ಲಲ್ಲಿ ಅಷ್ಟಷ್ಟನ್ನು ಹೆಕ್ಕುತ್ತಾ ಪೋಣಿಸುತ್ತಿರುವ ಮಾಲೆ)
 
೧) ಕೊಣಾಜೆ ಎಂಬ ಬೋರೆ ಮೇಲೆ ಮಳೆಬಿದ್ದ ಕೂಡಲೇ ಸೋರುವ ಕಟ್ಟಡಗಳನ್ನು ಕಟ್ಟಲಾಗಿ, ನಮ್ಮ ಸ್ನಾತಕೋತ್ತರ ಕೇಂದ್ರವು ಮಂಗಳೂರಿನ ಸೇಂಟ್ ಅಲಾಶಿಯಸ್ ಕಾಲೇಜಿನಾವರಣದಲ್ಲೆ ನಡೆಯುತ್ತಿತ್ತು. ಆದರೂ ವರ್ಷದ ನಡುವೆಯೇ ಕೊಣಾಜೆಗೆ ಸ್ಥಾಳಾಂತರಿಸಲಾಯಿತು. ಅದು ೧೯೭೨ರ ನಡುವೆ. ಸೋರುವ ಕಟ್ಟಡಗಳ ಮೇಲೆ ಸೀಟು ಹೊದಿಸಿ ಮೇಲ್ಮನೆ ಮಾಡಲಾಯಿತು. ತಾತ್ಕಾಲಿಕವಾಗಿ ಹಾಸ್ಟೆಲ್, ಡಾರ್ಮೆಟರಿ ಮಾಡಲಾಯಿತು. ಎಲ್ಲರಿಗೂ ಸಾಕಾಗಲಿಲ್ಲ. ಎಸ್.ವಿ ಪರಮೇಶ್ವರ ಭಟ್ಟರು, ಲಕ್ಕಪ್ಪ ಗೌಡರು, ವಿವೇಕ ರೈ ಇವರೆಲ್ಲ ಆಗ ಗುರುಗಳು. ಸ್ಥಳೀಯ ಗ್ರಾಮಸ್ಥರು ತಮ್ಮ ಒಪ್ಪಾರುಗಳನ್ನು ವಿದ್ಯಾರ್ಥಿಗಳಿಗೆ ಸರಿಪಡಿಸಿದರು. ಆಡಿನ, ದನಗಳ ಕೊಟ್ಟಿಗೆಗಳನ್ನು ಚೊಕ್ಕಗೊಳಿಸಿ ರೂಂಗಳನ್ನಾಗಿ ಪರಿವರ್ತಿಸಿ ಬಾಡಿಗೆಗೆ ಬಿಟ್ಟರು. ವಿದ್ಯಾರ್ಥಿಗಳು ಊಟ ತಿಂಡಿಗೆ ಏನು ಮಾಡಬೇಕು! ಅಕ್ಕಿಯನ್ನು ಘಟ್ಟದ ಮೇಲಿನ ನಾವು ಕಿಟ್ ಬ್ಯಾಗು, ಸೂಟ್ ಕೇಸ್ ಗಳಲ್ಲಿ ಕದ್ದು ತಂದೆವು. ಮೂಟೆಯಲ್ಲಿ ತರಲು ಬಸ್ಸಿನಲ್ಲಿ ಹಿಡಿದಾರು ಎಂಬ ಆಗಿನ ಲೆವಿ ಕಾನೂನು ಭಯ. ಅಕ್ಕಿಯನ್ನು ಜಿಲ್ಲೆಯಿಂದ ಜಿಲ್ಲೆಗೆ ಸಾಗಿಸಲು ನಿರ್ಬಂಧವಿತ್ತು.
 

 
ಇಡ್ಲಿ ಮಾಡುವ ಗುಡಿಸಲು ಹೋಟೆಲೊಂದರಲ್ಲಿ ಬೆಳಗಿನ ತಿಂಡಿಯನ್ನು ಗೊತ್ತು ಪಡಿಸಿಕೊಂಡೆವು. ಊಟಕ್ಕೆ ಎಂತದೋ ಸಾರು ಕಾಯಿಸಿ ಅಕ್ಕಿಯನ್ನು ಚಿನ್ನದಂತೆ ಅಳೆದೂ ಸುರಿದೂ ಅನ್ನ ಮಾಡಿಕೊಳ್ಳುತ್ತಿದ್ದೆವು. ಎಲ್ಲಾ ಹಳ್ಳಿಯಿಂದ ಬಂದಿದ್ದ ರೈತಾಪಿ ಮಕ್ಕಳು ನಾವು. ಬೆಳಗಿನ ಇಡ್ಲಿಗಳು ನಮಗೆಲ್ಲಾ ಮಲ್ಲಿಗೆ ಹೂವಿನಂತೆ ಘಮಘಮ ಅನ್ನುತ್ತಾ ಬೇಗ ಬೇಗನೇ ಗುಡಿಸಲಿಗೆ ಕರೆಯುತ್ತಿದ್ದವು. ಹೀಗಿರುವಾಗ ಒಂದು ದಿನ ಹೋಟೇಲ್ ಮಾಲೀಕ ಗುಡಿಸಲ ಮುಂದೆ ಕುಳಿತು ಬೀಡಿ ಕಟ್ಟುತ್ತಿದ್ದಾನೆ! ಯಾಕಪ್ಪಾ...ತಿಂಡಿ ಎಲ್ಲಾಪ್ಪಾ ಅಂದರೆ ಆಗೋದಿಲ್ಲ ಮಾರಾಯರೆ ಹೋಟೆಲ್ ಬಂದ್ ಮಾಡಿದೀನಿ. ಇಡ್ಲಿ ಕೊಡೋದಿರಲಿ, ಇಡ್ಲಿಗೆ ಚಟ್ನಿ ಕೊಡೋಕೆ ಕೂಡಾ ನನ್ನಿಂದ ಸಾಧ್ಯವಿಲ್ಲ ಅಂದು ಬಿಟ್ಟ. ಘಟ್ಟದ ಕೆಳಗಿನವರು ಇಡ್ಲಿಗೆ ಮಾಡುವ ಕಾಯಿಚಟ್ನಿಯನ್ನು ನಾವು ಇಡ್ಲಿಗಿಂತಾ ಹೆಚ್ಚಾಗಿ ತಿನ್ನಲು ಪ್ರಾರಂಭಿಸಿದ್ದ ಕಾರಣಕ್ಕೆ ಹೋಟೆಲ್ ಬಂದ್ ಆಗಿತ್ತು!
***
 
೨) ದೇವರಿಗೆ ಬೀಡಿ ಸೇದೋ ಚಟ
 
’ಎಲ್ಲಾ ದೇವರನ್ನೂ ಮುಂದೆ ನೋಡು, ಅಲೆನಾಥನ ಹಿಂದೆ ನೋಡು’ ಅನ್ನೊದೊಂದು ಮಾತುಂಟು. ಈ ದೇವರಿಗೆ ಬೀಡಿ ಸೇದೋ ಚಟ. ’ಹೇ ಹೋಗೇ ಬೀಡಿ ಸೇದಬೇಕು ಬೆಂಕಿ ತಾ’ ಎಂದು ಹೆಂಡತಿಗೆ ಹೇಳಿದ. ಹೋದಳು. ದಾರೀಲಿ ಹೊಲೇರು ದನಾ ಕುಯ್ತಿದ್ದರು. ನೋಡ್ತಾ ನಿಂತಳು. ಬರೋದು ತಡಾ ಆಯ್ತು. ಮೊದಲೇ ಮುನಿ ಅಂತೋನು! ’ಏನೇ ಮುಂಡೆ ಯಾವನ್ನ ನೋಡ್ತಾ ನಿಂತಿದ್ದೆ, ಯಾಕೆ ಈಟೊತ್ತಾಯ್ತು, ಅಂದವನೇ ಅವಳ ಸೊಂಟಕ್ಕೆ ಒದ್ದ. ಅವಳ ಸೊಂಟ ಮುರ್ದು ಹೋಯ್ತು. ಪಾಪ ಹೆಂಗೆ ನರಳ್ತಾ ಬಿದ್ದವಳೇ ನೋಡು!
 
ಈ ಜನಪದ ಪುರಾಣ ಕಥೆ ಹಾಸನ ಹಳೆಬೀಡು ನಡುವೆ ಕೊಂಡಜ್ಜಿ ಎಂಬ ಗ್ರಾಮದಲ್ಲಿರುವ ಅಲೆನಾಥ ದೇವರ ಕಥೆ. ಶಿಷ್ಟರು ಇವನನ್ನು ವರದರಾಜಸ್ವಾಮಿ ಎನ್ನುವುದುಂಟು. ವಿಗ್ರಹ ೧೮ ಅಡಿಯಿದ್ದು ಬೃಹತ್ತಾದ ಸುಂದರ ಮೂರ್ತಿ. ಹಿಂಬದಿಯ ಬೆನ್ನು, ಪೃಷ್ಟಾಂಗಗಳೆಲ್ಲವೂ ಕೌತುಕ ಪಡುವಂತಹದು. ಗುಡಿಯ ಪೌಳಿಯಲ್ಲಿ ಸೊಂಟ ಮುರಿದ ಸ್ತ್ರೀ ವಿಗ್ರಹಕ್ಕೂ ಇವನಿಗೂ ಹೊಸೆದಿರುವ ಗ್ರಾಮೀಣ ಬದುಕಿನ ಈ ಕಥಾ ಹೊಂದಾಣಿಕೆಯಲ್ಲಿ ಪಿತೃಪ್ರಧಾನ ಕ್ರೌರ್ಯ ತೀಕ್ಷ್ಣತೆ ಇದ್ದು ವರ್ಣ ಪದ್ಧತಿಯ ಹಾಗೂ ಆಹಾರ ಪದ್ಧತಿಯ ಅಂತರವಿದೆ. ದೇವರ ಹೆಸರು ಜೈನ ಮಾದರಿಯಲ್ಲಿದ್ದು, ವಿಗ್ರಹವು ವೈಷ್ಣವ ಮಾದರಿ ಸ್ವರೂಪ ಪಡೆದು ರಾಮಾನುಜರು ಜೈನ ದೊರೆಯನ್ನು ವಿಷ್ಣುವರ್ಧನನನ್ನಾಗಿಸಿದ ಮತ ಪರಿವರ್ತನೆಗೂ ಸಾಕ್ಷಿಯಾಗಿದೆ.
***
 
೩) ಪ್ರಾಮಾಣಿಕ ಎಂ ಎಲ್ ಎ ಸಿಟ್ಟು
 
ಬೋರೇಗೌಡರು ಸಕಲೇಶಪುರ ಕ್ಷೇತ್ರದ ಶಾಸಕರಾಗಿದ್ದರು. ಅವರದ್ದು ಬೇಲೂರು ಬಳೆ ಮುಗುಳೂರು. ವಿಧಾನಸಭೆ ನಡೆಯುತ್ತಿತ್ತು. ಹಾಸನ ಕಡೆಯಿಂದ ಬಂದವರೊಬ್ಬರಿಂದ ಮುಂಗಾರು ಮಳೆ ಆಗಿರುವ ಸುದ್ದಿ ತಿಳಿದು ಗದ್ದೆ ಹದ ಮಾಡಲು ಹೊರಟೇ ಬಿಟ್ಟರು. (ಸ್ವಾತಂತ್ರ ಹೋರಾಟದಲ್ಲಿ ನಾಲ್ಕಾರು ವರ್ಷ ತೀರ್ಥಹಳ್ಳಿ ಜೈಲು ಸೇರಿ ಕೂರೆ ಬಟ್ಟೆ ಹಾಕೋದಿಲ್ಲ ಎಂದು ಕ್ವಾಮಣದರಿವೇಲಿ ಚಡೇ ನಿಂತ ಮುಂಗೋಪಿ ಹೋರಾಟಗಾರ ಇವರಾಗಿದ್ದರು. ಅದೇ ಅವಧಿಯಲ್ಲಿ ಪತ್ನಿ ವಿಯೋಗವಾಗಿ ಮುಂದೆ ಮಕ್ಕಳನ್ನು ಒಂಟಿಯಾಗಿ ಬೆಳೆಸಿ ಓದಿಸುತ್ತಿದ್ದರು). ಹಾಸನದಲ್ಲಿ ನೇಗಿಲಿನ ಗುಳ, ಜಗಣೆ ಇಂತವನೆಲ್ಲಾ ಬ್ಯಾಗಿನಲ್ಲಿ ಹಿಡಿದು ಬಸ್ಸಿಗೆ ಹತ್ತಿದರು. ಆಗ ಖಾಸಗೀ ಬಸ್ಸಿನವರು ಹದ್ದು ಮೀರಿದ್ದರು. ಒಬ್ಬ ಎಂ ಎಲ್ ಎ ಎಂಬ ಗಮನವೂ ಇಲ್ಲದೆ ಬಸ್ ಏಜಂಟ್ ಕೂರಲು ಸೀಟು ಕೊಡಲಿಲ್ಲ. ಆಗ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದರು.
 
ನನ್ನಂತವನಿಗೇ ಹೀಗಾದರೆ ಶ್ರೀಸಾಮಾನ್ಯರ ಪಾಡೇನು! ಮೊಳದುದ್ದ ಮೂಗಿನ ಗೌಡರಿಗೆ ಎಲ್ಲಿಲ್ಲದ ಕೋಪ ಉಕ್ಕಿ ಬಸ್ಸಿನಿಂದ ವಾಪಸು ಇಳಿದು ಬೆಂಗಳೂರು ಬಸ್ಸು ಹತ್ತಿದರು. ಬಂದವರೇ ಮುಖ್ಯಮಂತ್ರಿ ಮುಂದೆ ನಿಂತು ಈಗಲೇ ಎಲ್ಲಾ ಖಾಸಗೀ ಬಸ್ಸುಗಳನ್ನು ಸರ್ಕಾರ ವಹಿಸಿಕೊಳ್ಳುವಂತೆ ಆರ್ಡಿನೆನ್ಸ್ ಹೊರಡಿಸಬೇಕೆಂದು ಹಠ ಹಿಡಿದರು. ಇಲ್ಲವೇ ನನ್ನ ರಾಜಿನಾಮೆ ತಗೊಳ್ಳಿ ಎಂದು ಕುಳಿತರು. ಗೌಡರ ಗುಟುರಿಕೆಯ ಅರಿವಿದ್ದ ಮುಖ್ಯಮಂತ್ರಿಗಳು ಹಾಸನ ಜಿಲ್ಲೆಯ ಎಲ್ಲಾ ಖಾಸಗಿ ಬಸ್ಸುಗಳನ್ನು ಆರ್ಡಿನೆನ್ಸ್ ಹೊರಡಿಸಿ ನಿಂತ ನಿಂತ ಜಾಗದಲ್ಲಿಯೇ ವಶಪಡಿಸಿಕೊಂಡು ಕೆಂಪು ಬಣ್ಣ ಬಳಿದು ರಾತ್ರಿ ಬೆಳಗಾಗೋದರೊಳಗೆ ಅದೇ ಡ್ರೈವರ್ ಕಂಡಕ್ಟರ್ ಬಳಸಿಕೊಂಡು ರಸ್ತೆಗೆ ಬಿಟ್ಟರು. ರಾಜ್ಯದ ಮೊದಲ ಸರ್ಕಾರಿ ಸಾಮ್ಯದ ಮೋಟರ್ ಬಂದದ್ದು ಹಾಸನದಲ್ಲಿ. ಅನಂತರ ಎಲ್ಲಾ ಜಿಲ್ಲೆಗೂ ವಿಸ್ತರಿಸಲಾಯಿತು.
 
(ಮುಂದುವರಿಯುವುದು)
 
 
 
 
 
 
 
Copyright © 2011 Neemgrove Media
All Rights Reserved