ಅಂಗಳ      ಧರೆ ಹತ್ತಿ ಉರಿದೊಡೆ
Print this pageAdd to Favorite
 
 
 
  

ವರ್ಣರಂಜಿತ ಹವಳ ದ್ವೀಪಗಳ ಬಿಳೀ ಭವಿಷ್ಯ

 

 

ತಣ್ಣನೆ ಬೀಸುವ ಉಪ್ಪು ಮಿಶ್ರಿತ ಮೀನು ವಾಸನೆಯ ಗಾಳಿಗೆ ಅರ್ಧಂಬರ್ಧ ತೆರೆದುಕೊಳ್ಳುತ್ತಾ, ಆಕಾಶ ನೋಡುತ್ತಾ, ಪ್ರತಿದಿನದ ಬೋರಿಂಗ್ ದಿನಚರಿಯಲ್ಲಿ ಮನಸ್ಸಿನ ಕಪ್ಪು ಕೋಣೆಯೊಳಗೆಲ್ಲೋ ಕಳೆದು ಹೋಗಿದ್ದ ’ರೋಮ್ಯಾಂಟಿಕ್’ ನನ್ನು ಹೊರಗೆ ಕರೆಸಿಕೊಂಡು, ಕಾಲ್ಬೆರಳಿನಲ್ಲಿ ಉಸುಕು ಕೆರೆಯುತ್ತಾ, ಸಮುದ್ರದಂಡೆಯಲ್ಲಿ ಕೂತು ಪ್ರೀತಿ ಮಾತಾಡುವಾಗ, ಭೇಲ್ ಪುರಿ ತಿನ್ನುವಾಗ ಅಥವಾ ಅಲೆಗಳ ಜೊತೆ ಆಡುವಾಗ ಸಮುದ್ರದಿಂದ ನಾವು ಏನನ್ನೆಲ್ಲಾ ಪಡೆಯುತ್ತಿದ್ದೇವೆ, ಏನು ಯೋಚನೆ ನಡೆಸಿದ್ದಾಳೆ ಈ ಮಹಾಮಾತೆ ಎಂಬ ಯೋಚನೆ ಮನಸ್ಸಿಗೆ ಬರುವುದಿಲ್ಲ. ಆಕೆಯೊಂದು ಅನಂತ ಸೌಂದರ್ಯದ ಖನಿ-ನಾನು ಆಸ್ವಾದಕನೆಂಬುದಷ್ಟೇ ನಮ್ಮ ಮನಸ್ಸಿನಲ್ಲಿ.
 
ಅಲ್ಲೇ ನಾವು ಕೂತ ಮರಳ ರಾಶಿಯಿಂದ ೩೦-೪೦ ಮೈಲು ದೂರದಲ್ಲಿ ಪುಟ್ಟ ಸುಂದರ ಜೀವಿಗಳ ಬ್ರಹ್ಮಾಂಡ ಸಮುದಾಯವೊಂದು ಬದುಕಿನ ಬಣ್ಣ ಉಳಿಸಿಕೊಳ್ಳಲು, ಉಳಿಯಲು, ಬೆಳೆಯಲು ಏಗುತ್ತಿದೆ ಎನ್ನುವುದೂ ನಮಗೆ ಗೊತ್ತಿರುವುದಿಲ್ಲ. ಗೊತ್ತಿದ್ದರೂ ಆ ತಂಗಾಳಿಯಲ್ಲಿ ನೆನಪಿಗೆ ಬರುವುದಿಲ್ಲ. ಸಮುದ್ರದ ಮೊರೆವ ಅಲೆಗಳ ಒಡಲಲ್ಲಿ ಆ ಜೀವಿಗಳ ಗೋಳಾಟ-ನೋವು ಕರಗಿ ಹೋಗಿರುವುದರಿಂದಲೇ ಅವಳ ಮೊರೆತಕ್ಕಷ್ಟು ಕೋಪ ಎನ್ನುವುದೂ ನಮಗನ್ನಿಸುವುದಿಲ್ಲ. ಅವಳ ಒಡಲಿನಲ್ಲಿ ನಮ್ಮಂತೆಯೇ ದಿನನಿತ್ಯದ ಜೀವನ-ಭರಾಟೆ ನಡೆಸಿರುವ ಅಗಾಧ ಜೀವರಾಶಿಗಳ ಬದುಕಿನ ಚಟುವಟಿಕೆಯ ಬಗ್ಗೆ, ಜೀವಕ್ಕಾಗಿ ಅವು ನಡೆಸುವ ಕ್ಷಣಕ್ಷಣದ ಹೋರಾಟದ ಬಗ್ಗೆ ನಮಗಿರುವ ಕುತೂಹಲ ಕಡಿಮೆಯೇ. ನಮಗೇನಿದ್ದರೂ ನಮ್ಮ ಬೇಕು ಬೇಡಗಳಷ್ಟೇ.
 
ಈ ಕಥೆ ನಮ್ಮ ಭೂಮಿಯನ್ನು ಹೊದ್ದಿರುವ ನಮ್ಮ ಸಮುದ್ರಗಳಲ್ಲಿ ಬೆಳೆಯಬೇಕಿರುವ ಹವಳ ದ್ವೀಪಗಳೆನ್ನುವ ಸುಂದರ-ವಿಸ್ಮಯದ ಪ್ರಪಂಚಗಳನ್ನು ಕಟ್ಟಿಕೊಂಡಿರುವ ಜೀವಿಗಳದ್ದು. ಸಂತೋಷದ ಕಥೆಯಲ್ಲ, ಒಂದು ವಿಷಾದಗಾಥೆ. ನೀಲ ಸಮುದ್ರದಲ್ಲಿ ಬಣ್ಣ ಬಣ್ಣ ಚಿತ್ತಾರದ ಕಾಲೊನಿಗಳನ್ನು ಕಟ್ಟಿಕೊಳ್ಳುವ ಪಾಲಿಪ್ಸ್ ಎಂಬ ಪುಟಾಣಿ ಸಮುದ್ರ ಜೀವಿಗಳ ಸಮುದಾಯವನ್ನು ನಾವು ಹವಳ ಎನ್ನುತ್ತೇವೆ. ಈ ಅಸಂಖ್ಯಾತ ಪಾಲಿಪ್ಸ್ ಗಳು ಒಂದನ್ನೊಂದು ಗಟ್ಟಿಯಾಗಿ ಅಪ್ಪಿಕೊಂಡು-ಅಂಟಿಕೊಂಡು ಸಾಮರಸ್ಯದಿಂದ ಕಟ್ಟಿಕೊಳ್ಳುವ ಸುಂದರವಾದ ರಚನೆಗಳನ್ನು ಹವಳ ದ್ವೀಪಗಳೆನ್ನುತ್ತೇವೆ. ಈ ಬಾರಿಯ ಕಥೆ ಈ ಹವಳಗಳದ್ದು.
 
ಧರೆ ಹತ್ತಿ ಉರಿವಾಗ ಧರೆಯ ಮೇಲಿನ, ಒಳಗಿನ ಎಲ್ಲ ಜೀವರಾಶಿಗಳ ಬದುಕಿನಲ್ಲೂ ಅಸಾಮಾನ್ಯ ಬದಲಾವಣೆಗಳಾಗುತ್ತವೆ. ಉರಿವ ಧರೆ ಹೇಗೆ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲವೋ ಹಾಗೇ ಜೀವರಾಶಿಗಳ ಬದುಕಿನಲ್ಲಾಗುವ ಹಲವಾರು ಅಸಾಮಾನ್ಯ ಬದಲಾವಣೆಗಳೂ ತಕ್ಷಣಕ್ಕೆ ಗೋಚರವಾಗುವುದಿಲ್ಲ. ಭೌತಿಕ ಬದಲಾವಣೆಗಳು ಕಣ್ಣಿಗೆ ಕಂಡರೂ ರಾಸಾಯನಿಕ, ಜೈವಿಕ, ಭಾವನಾತ್ಮಕ, ಸಂವೇದನಾತ್ಮಕ ಬದಲಾವಣೆಗಳು ಸೂಕ್ಷ್ಮವಾಗಿ ಗಮನಿಸಿದಾಗ ಅರಿವಿಗೆ ಬರುತ್ತವೆ. ಗ್ಲೋಬಲ್ ವಾರ್ಮಿಂಗ್ ಎಂಬ ಪ್ರಕ್ರಿಯಿಂದಾಗುತ್ತಿರುವ ಭೌತಿಕ ಬದಲಾವಣೆಗಳು ನಮ್ಮ ಕಣ್ಣ ಮುಂದಿವೆ. ಮಾಯವಾಗುತ್ತಿರುವ ಫಲವತ್ತಾದ ಸಾವಯವ ಹಸಿರು ಭೂಮಿ, ಉಸಿರಿಗೆ ಸಿಕ್ಕದ ಸ್ವಚ್ಚ ಗಾಳಿ, ಕರಗುತ್ತಿರುವ ನಿತ್ಯ ಹರಿದ್ವರ್ಣ ಕಾನನಗಳು-ರೈನ್ ಫಾರೆಸ್ಟ್ ಗಳು, ಅಗಲವಾಗುತ್ತಿರುವ ಮರುಭೂಮಿಗಳು, ಸೊರಗುತ್ತಿರುವ ಜೀವನದಿಗಳು, ದಿನನಿತ್ಯ ಕಣ್ಮರೆಯಾಗುತ್ತಿರುವ ಅದೆಷ್ಟೋ ಬಗೆಯ ಜೀವಿಗಳು, ಇವೆಲ್ಲವೂ ನಮ್ಮ ಕಣ್ಣ ಮುಂದೆಯೇ ಇವೆ. ಅವುಗಳ ಕಣ್ಮರೆಗೆ ಕಾರಣವೂ ನಮಗೆ ಗೊತ್ತಿದೆ. ಆದರೆ ತಿಂಗಳ ಬಿಲ್ ಕಟ್ಟುವ ಗಡಿಬಿಡಿ, ಮಕ್ಕಳ ಬರ್ತ್ ಡೇ ಪಾರ್ಟಿ ಮಾಡುವ ಸಡಗರ, ಹೊಸಾ ಕಾರು ಕೊಳ್ಳುವ ಖುಷಿ, ಮೊನ್ನೆ ತಾನೆ ರಿಲೀಸ್ ಆಗಿರುವ ಪಿಚ್ಚರ್, ಸಾಯುವ ಮುಂಚೆ ಅದನ್ನೂ ಮಾಡಿ ನೋಡೇ ಬಿಡಬೇಕೆಂಬ ಭರ-ಇವುಗಳ ಮಧ್ಯೆ ಕಳೆದು ಹೋಗಿರುವ ನಮಗೆ ಇವೆಲ್ಲ ಪರಿಸರದ ಆಗುವಿಕೆಗಳು ಅಷ್ಟು ಮನಸ್ಸು ತಟ್ಟುತ್ತಿಲ್ಲ...ನಮ್ಮ ಪಾಲಿಗೆ ಇವೆಲ್ಲಾ ’ದಿನಾ ಸಾಯುವವರ’ ಲಿಸ್ಟ್ ಗೆ ಸೇರಿ ಬಿಟ್ಟಿವೆ. ಅಳಲು, ಕ್ರಿಯಾಶೀಲರಾಗಲೂ ನಮಗೆ ವ್ಯವಧಾನವಿಲ್ಲ. ಆದರೂ ಒಮ್ಮೆ ಇತ್ತ ಗಮನ ಹರಿಸಿದರೆ...
ಈ ಪಾಲಿಪ್ಸ್ ಗಳೆಂಬ ಹವಳಗಳದ್ದು ವಿಶೇಷವಾದ ಬದುಕು. ಇವು ಸಮುದ್ರದಾಳದಲ್ಲಿ ಜ಼ುಅಜ಼ೆಂತಲೈ (ಜ಼ುಅಜ಼ೆಂತಲೀ) ಎಂಬ ಆಲ್ಗೈಗಳೊಂದಿಗೆ ಬೆರೆತು ಜೀವಿಸುತ್ತವೆ. ಜ಼ುಅಜ಼ೆಂತಲೈ ಎಂಬ ವರ್ಣರಂಜಿತ ಆಲ್ಗೈಗಳು ಬೇರೆ ಜೀವಿಗಳು ತಮ್ಮನ್ನು ತಿನ್ನುವುದನ್ನು ತಪ್ಪಿಸಿಕೊಳ್ಳಲು ಪಾಲಿಪ್ಸ್ ಗಳ ಹೊಟ್ಟೆ ಸೇರಿ ಬದುಕುತ್ತವೆ. ತಮ್ಮನ್ನು ಹೊಟ್ಟೆಯಲ್ಲಿಟ್ಟುಕೊಂಡು ಸಾಕುವ ಪಾಲಿಪ್ಸ್ ಗಳಿಗೆ ಸಹಾಯಾರ್ಥವಾಗಿಯೆಂಬಂತೆ ಅವಕ್ಕೆ ಬೇಕಾಗುವ ಹಲವಾರು ಬಗೆಯ ಪೋಷಕಾಂಶಗಳನ್ನು ಒದಗಿಸುತ್ತವೆ ಮತ್ತು ಪಾಲಿಪ್ಸ್(ಹವಳ)ಗಳಿಗೆ ಬಗೆಬಗೆಯ ಬಣ್ಣಗಳನ್ನು ಒದಗಿಸುತ್ತವೆ. ಈ ಸಾಮರಸ್ಯದ ಜೀವನ ಸಮುದ್ರದಲ್ಲಿ ಕಾಲಾನುಕಾಲದಿಂದಲೂ ನಡೆದು ಬಂದಿರುವುದಲ್ಲದೆ ಜ಼ುಅಜ಼ೆಂತಲೈಗೆ ಪಾಲಿಪ್ಸ್ ಮತ್ತು ಪಾಲಿಪ್ಸ್ಗಳಿಗೆ ಜ಼ುಅಜ಼ಂತೈ-ಬಿಟ್ಟರೆ ಬೇರೆ ಅಸ್ತಿತ್ವವಿಲ್ಲ. ಆದರೆ ಈಗ ಮನುಷ್ಯನ ಆಧುನೀಕತೆ, ಕೈಗಾರಿಕೀಕರಣ, ಕಾಡುಗಳ ಕಡಿಯುವಿಕೆಯಿಂದ ಈ ಎರಡು ಜೀವಿಗಳ ನಡುವಿನ ಸಾಮರಸ್ಯ ಕೆಟ್ಟು ಜ಼ುಅಜ಼ೆಂತಲೈಗಳು ದಿಕ್ಕೆಟ್ಟು, ಹವಳಗಳು ಸಾರಾಸಗಟಾಗಿ ಬಣ್ಣ ಮತ್ತು ಬದುಕು ಕಳೆದುಕೊಳ್ಳುವ ಸಮಯ ಬಂದಿದೆ!
 
ಕಳೆದೆರಡು ದಶಕಗಳಲ್ಲಿ ವಿಜ್ನಾನಿಗಳು ಹವಳಗಳ ಬಣ್ಣ ಕಳೆದುಕೊಳ್ಳುವಿಕೆ ಅಥವಾ ಕೋರಲ್ ಬ್ಲೀಚಿಂಗ್ ಎಂಬ ಹೊಸ ಚಟುವಟಿಕೆಯನ್ನು ಗಮನಿಸಿ ಅಭ್ಯಸಿಸಿದ್ದರು. ಅದಕ್ಕೆ ಸೂಕ್ತ ಕಾರಣಗಳನ್ನು ಹುಡುಕಿದ್ದರು. ಕಾರಣಗಳು ನೇರವಾಗಿ ಅಲ್ಲದಿದ್ದರೂ ಮಾನವನ ಆಧುನೀಕರಣದ ಹುಚ್ಚಿನ ಓಟದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದವು. ಹವಲಗಳ ಬಣ್ಣ ಕಳೆದುಕೊಳ್ಳುವಿಕೆ ಹೆಚ್ಚಾಗದಿರಲಿ ಎಂಬಂತೆ ವಿಜ್ನಾನಿಗಳ ಸಮೂಹ ಎಚ್ಚರಿಕೆ ಕೂಡಾ ನೀಡಿತ್ತು. ಈ ಎಚ್ಚರಿಕೆಗಳು ಹೆಚ್ಚಿನ ಪಕ್ಷ ವೈಜ್ನಾನಿಕ ರಿಪೋರ್ಟ್ ಗಳಲ್ಲೇ ಉಳಿದಿದ್ದವು. ಆದರೆ ಈಚಿನ ಎರಡು ಮೂರು ವರ್ಷಗಳಲ್ಲಿ ಕೋರಲ್ ಬ್ಲೀಚಿಂಗ್ ಅತ್ಯಂತ ತೀವ್ರವಾಗಿ ಆಗುತ್ತಿದೆ. ಪ್ರಪಂಚದ ಯಾವ ಸಮುದ್ರಗಳಲ್ಲಿ ಹವಳ ಸಂಖ್ಯೆ ಹೆಚ್ಚಿದೆಯೋ ಅಲ್ಲೆಲ್ಲವೂ ಈಗ ಹವಳಗಳು ಬಣ್ಣ ಕಳೆದುಕೊಂಡು ಸಾಯಲಾರಂಭಿಸಿವೆ. ಅದಕ್ಕೆ ವಿಜ್ನಾನಿಗಳು ಕಂಡುಹಿಡಿದಿರುವ ಬಹುಮುಖ್ಯ ಕಾರಣಗಳು ಇವು. ಇವೆಲ್ಲಾ ಕಾರಣಗಳೂ ಗ್ಲೋಬಲ್ ವಾರ್ಮಿಂಗ್ ನ ಕೃಪೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ...

೧) ವಾತಾವರಣದ ಉಷ್ಣತೆಯಲ್ಲಿ ಏರಿಕೆ
೨) ಓಜ಼ೋನ್ ಪದರದ ಹರಿಯುವಿಕೆಯಿಂದಾಗಿ ಸಮುದ್ರದೊಳಗೆ ಸೋರುತ್ತಿರುವ ಅಲ್ಟ್ರಾವಯಲೆಟ್ ಕಿರಣಗಳು
೩) ನೀರಿನೊಳಗೆ ಮನುಷ್ಯರು, ಕೈರ್ಗಾರಿಕೆಗಳು ವಿಸರ್ಜಿಸಲಾಗುತ್ತಿರುವ ಅಪಾರ ಪ್ರಮಾಣದ ರಾಸಾಯನಿಕಗಳು
೪) ರಾಸಾಯನಿಕಗಳು, ತ್ಯಾಜ್ಯವಸ್ತುಗಳಿಂದ ಸಮುದ್ರದ ನೀರಿನಲ್ಲಿ ಹೆಚ್ಚಿರುವ ಆಮ್ಲೀಯತೆ
೫) ಹವಳ ದ್ವೀಪಗಳನ್ನು ನೋಡುವ ನೆಪದಲ್ಲಿ ಸ್ಕೂಬಾ ಡೈವ್ ಮಾಡುವವರು ಅಥವಾ ಸಮುದ್ರಕ್ಕಿಳಿಯುವವರ ಮುಟ್ಟುವಿಕೆ
೬) ಸಮುದ್ರದ ನೀರಿನ ಉಪ್ಪಿನ ಮಟ್ಟದಲ್ಲಿ ಏರುಪೇರು ಉಂಟಾಗುತ್ತಿರುವುದು
೭) ಇತ್ತೀಚಿನ ವರ್ಷಗಳಲ್ಲಿ ಎಲ್ಲಿಲ್ಲದ ರಭಸದಲ್ಲಿ ಸಮುದ್ರದ ಮೇಲೆ ಬೀಸುತ್ತಿರುವ ಉಷ್ಣ ಮಾರುತಗಳು
೮) ಸಮುದ್ರ ಜೀವಿಗಳಲ್ಲಿ ಹೆಚ್ಚುತ್ತಿರುವ ಅಸಂಖ್ಯಾತ ರೋಗಗಳು (ಸಮುದ್ರಕ್ಕೆ ಅಸಂಖ್ಯಾತ ಬ್ಯಾರಲ್ಗಳಷ್ಟು ಕಚ್ಚಾ ತೈಲ ಸೋರಿಸಿಯೂ ಬೀಗಿ ವಹಿವಾಟು ನಡೆಸುವ ಬಿಪಿಯಂತಹ ಕೊಲೆಗಡುಕ ಕಂಪನಿಗಳ ಪಾಲೂ ಸೇರುತ್ತದೆ)
 
ಸೂಕ್ಷ್ಮ ಜೀವಿಗಳಾದ ಪಾಲಿಪ್ಸ್ಗಳು ವಾತಾವರಣದ, ನೀರಿನ ಏರುತ್ತಿರುವ ಉಷ್ಣತೆ ತಡೆಯಲಾರದೆ, ನೀರಿನಲ್ಲಿನ ರಾಸಾಯನಿಕ ಅಸಮತೋಲನ ತಡೆಯಲಾರದೆ, ಸಮುದ್ರದ ಮೇಲಿನಿಂದ ಒಳ ಬರುತ್ತಿರುವ ಅಲ್ಟ್ರಾವಯಲೆಟ್ ಕಿರಣಗಳನ್ನು ತಡೆಯಲಾರದೆ ಅದಕ್ಕೆ ಪ್ರತಿಕ್ರಿಯೆಯೆಂಬಂತೆ ತಾವು ಹೊಟ್ಟೆಯೊಳಗಿಟ್ಟುಕೊಂಡು ಪೋಷಿಸುವ ಜ಼ುಅಜ಼ೆಂತಲೈ ಆಲ್ಗೈಗಳನ್ನು ಉಗುಳಿಬಿಡುತ್ತವೆ. ಆಗ ಪುಟ್ಟ ಪಾಲಿಪ್ಸ್ ಗಳ ಒಳ ಮೈ ಪಾರದರ್ಶಕವಾಗಿ ಅವು ಬಣ್ಣ ಕಳೆದುಕೊಳ್ಳುತ್ತವೆ. ಅವುಗಳ ದೇಹ ಚಕ್ಕಳವಾಗುತ್ತದೆ. ಊಟ ಒದಗಿಸುತ್ತಿದ್ದ ಆಲ್ಗೈಗಳನ್ನು ಹೊರಗೆ ಹಾಕುವುದರಿಂದ, ಮತ್ತು ಬೇರೆ ರೀತಿಯಲ್ಲಿ ಆಹಾರ ಹುಡುಕಿಕೊಳ್ಳಲು ನಿಸರ್ಗ ಅವಕ್ಕೆ ಬೇರ್ಯಾವ ಪರ್ಯಾಯ ಮಾರ್ಗೋಪಾಯಗಳನ್ನೂ ಕಲಿಸಿಲ್ಲವಾದ್ದರಿಂದ ಅವು ಹೊಟ್ಟೆಗೆ ಏನೂ ಸಿಗದೆ ಸತ್ತು ಹೋಗುತ್ತವೆ. ಇದು ಒಂದು ಹವಳದ ಕಥೆಯಲ್ಲ. ಮೈಲುಗಟ್ಟಲೆ ಹಬ್ಬಿರುವ ಅಸಂಖ್ಯಾತ ಹವಳ ದ್ವೀಪಗಳ ಕಥೆ!
 
ನೀರಿನ ಉಷ್ಣತೆಯ ಏರುಪೇರನ್ನು ಬಲಿಷ್ಟವಾದ ಹವಳದ್ವೀಪಗಳು ಸ್ವಲ್ಪ ಮಟ್ಟಿಗೆ ತಡೆದುಕೊಂಡರೂ ಎಳೆಯಾದ ದ್ವೀಪಗಳಿಗೆ ಆ ಶಕ್ತಿಯಿರುವುದಿಲ್ಲ. ನೀರಿನ ಉಷ್ಣತೆ ಈಗ ಪ್ರತೀ ವರ್ಷವೂ ಏರುತ್ತಿರುವುದರಿಂದ ಈ ಪರಿಸ್ಥಿತಿಯಿಂದ ಹವಳ ಸಂಕುಲ ಸ್ವಲ್ಪವಾದರೂ ಸುಧಾರಿಸಿಕೊಳ್ಳಲೂ ಆಗುತ್ತಿಲ್ಲ. ಅಂಡಮಾನ್ ನಿಕೋಬಾರ್ ದ್ವೀಪಗಳ ಹತ್ತಿರವಿರುವ, ಫಿಲಿಪೀನ್ಸ್ ಇತ್ಯಾದಿ ಏಶಿಯಾ ಖಂಡದ ದೇಶಗಳ ವಿಶಿಷ್ಟ ಬಣ್ಣಗಳ ಹವಳ ದ್ವೀಪಗಳನ್ನು ಸೌಂದರ್ಯ, ಆಭರಣ ಮತ್ತು ಔಷಧೀಯ ಕಾರಣಗಳಿಗಾಗಿ ಕೀಳಲಾಗುತ್ತಿರುವುದರಿಂದ ಅವುಗಳ ಉಳಿಯುವಿಕೆಗೇ ಕುತ್ತು ಬಂದಂತಾಗಿದೆ. ೨೦೧೦ರಿಂದ ಆಸ್ಟ್ರ‍ೇಲಿಯಾ, ನ್ಯೂಜ಼ಿಲ್ಯಾಂಡ್, ಥಾಯಿಲ್ಯಾಂಡ್, ಭಾರತದ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹ, ಶ್ರೀಲಂಕಾ, ಕುವೈತ್ ನ ಸಮುದ್ರಭಾಗಗಳಲ್ಲಿ, ಕ್ಯಾರಿಬಿಯನ್ ಸಮುದ್ರ ಮತ್ತು ಗಲ್ಫ್ ಆಫ್ ಮೆಕ್ಸಿಕೋ ಸಮುದ್ರಗಳಲ್ಲಿ ಅತೀವವಾಗಿ ಕೋರಲ್ ಬ್ಲೀಚಿಂಗ್ ನಡೆಯತೊಡಗಿದೆ.
 
ಕೋರಲ್ ಬ್ಲೀಚಿಂಗ್ ಅನ್ನು ತಡೆಗಟ್ಟಲು ವಿಶ್ವದ ಎಲ್ಲಾ ದೇಶಗಳೂ ಜೊತೆಗೂಡಿ ಗ್ಲೋಬಲ್ ವಾರ್ಮಿಂಗ್ ಎಂಬ ಭೀಕರ ಸಮಸ್ಯೆಯನ್ನು ಸೂಕ್ತವಾಗಿ ಎದುರಿಸಲಾಗಬೇಕು. ಇದಲ್ಲದೆ ಪ್ರಾದೇಶಿಕ ಕೋರಲ್ ಬ್ಲೀಚಿಂಗ್ ಅನ್ನು ತಡೆಗಟ್ಟಲು ಅಲ್ಲಿನ ಸರ್ಕಾರ ಅಥವಾ ಆಯಾ ಪ್ರದೇಶದ ಕಾನೂನಿನ ಸಹಾಯದ ಅತ್ಯಗತ್ಯವಿದೆ ಎನ್ನುತ್ತಾರೆ ಪರಿಸರ ವಿಜ್ನಾನಿಗಳು. ಬದುಕಿರುವ ಈ ಸೂಕ್ಷ್ಮ ಹವಳಗಳನ್ನು ಮುಟ್ಟುವುದಾಗಲೀ, ಕಿತ್ತು ಮಾರುವುದನ್ನಾಗಲೀ ಮಾಡುವವರಿಗೆ ಕಟ್ಟುನಿಟ್ಟಿನ ಶಿಕ್ಷೆಯ ಜೊತೆಗೆ ಆಯಾ ದೇಶದ ಸಮುದ್ರ ಭಾಗಗಳಲ್ಲಿ ಜೀವಂತವಿರುವ ಹವಳ ದ್ವೀಪಗಳು ಇರುವ ಕಡೆ ’ರಕ್ಷಣಾ ಸಮುದ್ರ ಪ್ರದೇಶ’ವೆಂದು ಘೋಷಿಸಿ ಅದನ್ನು ಕಾಯುವ ಅಗತ್ಯವೂ ಸರ್ಕಾರಕ್ಕಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಜನರಿಗೆ ಆಳ ಸಮುದ್ರ ಜಿಗಿತ, ಸ್ಕೂಬಾ ಡೈವಿಂಗ್ ಮಾಡಲು ಅನುವು ಮಾಡಿಕೊಟ್ಟಿರುವುದರಿಂದ ಅವರು ಹವಳಗಳ ಅತ್ಯಂತ ಸಮೀಪ ಹೋಗದಂತೆ, ಅವನ್ನು ಮುಟ್ಟಿ ನಾಶಮಾಡದಂತೆ ತಡೆಯುವ ಅಗತ್ಯವೂ ಇದೆ. ವರ್ಷಗಳಿಂದ ಪರಿಸರ ವಿಜ್ನಾನಿಗಳು-ಪ್ರೇಮಿಗಳು ಕೇಳಿಕೊಳ್ಳುತ್ತಿರುವಂತೆ ಕಾರ್ಖಾನೆಗಳು, ಕೈಗಾರಿಕೆಗಳು ನದಿ-ಸಮುದ್ರದ ನೀರಿಗೆ ರಾಸಾಯನಿಕ ತ್ಯಾಜ್ಯಗಳನ್ನು ಬಿಡಲಾಗದಂತೆ ಕಠಿಣ ಕಾನೂನುಗಳಾಗಬೇಕು, ರಾಸಾಯನಿಕಗಳ ಉಪಯೋಗಗಳು ವಿಶ್ವದಲ್ಲಿ ಕಡಿಮೆಯಾದಷ್ಟೂ ಸಮುದ್ರದ ಜೀವಜಂತುಗಳ ಆರೋಗ್ಯವಲ್ಲದೇ ಭೂಮಿಯ ಮೇಲಿನ ಆರೋಗ್ಯವನ್ನೂ ಗಮನಾರ್ಹವಾಗಿ ಹೆಚ್ಚಿಸಬಹುದು ಎನ್ನುತ್ತಾರೆ ವಿಜ್ನಾನಿಗಳು.
 
ಭೂಮಿಯ ಮೇಲಿನ ಜೀವರಾಶಿಗಳಂತೆಯೇ ಸಮುದ್ರದಲ್ಲಿನ ಜೀವಿಗಳೂ ಉಳಿಯುವಿಕೆ ಮತ್ತು ಆಹಾರಕ್ಕಾಗಿ ಒಂದನ್ನೊಂದು ಸದಾ ಅವಲಂಬಿಸಿರುವಿದರಿಂದ ಹವಳ ದ್ವೀಪಗಳು ಇದೇ ರೀತಿ ನಾಶವಾಗುತ್ತಾ ಹೋದಲ್ಲಿ ಅವುಗಳನ್ನು ಅವಲಂಬಿಸಿ ಬೆಳೆಯುವ ಅಸಂಖ್ಯಾತ ಬಗೆಯ ಬಣ್ಣ ಬಣ್ಣದ ಮೀನುಗಳ ಭವಿಷ್ಯ ಏನಾಗಬಹುದು ಎಂಬ ಭಯ ವಿಜ್ನಾನಿಗಳಿಗೆ. ಈ ಭಯ ಎಲ್ಲಿಯವರೆಗೂ ಕೇವಲ ವಿಜ್ನಾನಿಗಳನ್ನಷ್ಟೇ ಕಾಡುತ್ತದೋ, ಎಲ್ಲಿಯವರೆಗೂ ವೈಜ್ನಾನಿಕ ಟಿಪ್ಪಣಿಗಳಲ್ಲೇ ಉಳಿದುಬಿಡುತ್ತದೋ ಅಲ್ಲಿಯವರೆಗೂ ಅಪಾಯ ತಪ್ಪಿದ್ದಲ್ಲ. ಕಳೆದುಕೊಳ್ಳುತ್ತಿರುವುದರ ಅರಿವು ವಿಜ್ನಾನಿಗಳ ಸಮೂಹದಿಂದ ಜನಸಾಮಾನ್ಯರೆಡೆಗೂ ಹರಿದು ಅವರೂ ಸ್ವಲ್ಪ ಕ್ರಿಯಾಶೀಲರಾಗುವಂತಾದರೆ...
 
 
 
 

 

ನಮ್ಮ ತಟ್ಟೆಯಲ್ಲಿರುವ ಕುಲಾಂತರಿ ಊಟ

 
ಅಮೆರಿಕಾದಲ್ಲಿ ಬೆಳೆಯುವ ಈ ಹಣ್ಣು-ತರಕಾರಿ, ಧಾನ್ಯಗಳಲ್ಲಿ ಒಟ್ಟು ಎಷ್ಟು ಕುಲಾಂತರಿ ಅಥವಾ ಜೆನೆಟಿಕಲಿ ಮಾಡಿಫೈಡ್ ಇರಬಹುದು ಊಹಿಸಬಲ್ಲಿರಾ? ೨೦೧೦ರಲ್ಲಿ ಇಲ್ಲಿನ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ ಡಿ ಎ) ಲೆಕ್ಕ ಕೊಟ್ಟಿದ್ದು ಹೀಗಿದೆ. ಎಫ್ ಡಿ ಎ ಈಗಾಗಲೇ ಜನರ ನಂಬಿಕೆ ಕಳೆದುಕೊಂಡಿದೆ.
ಆದರೂ ಅದು ಕೊಟ್ಟಿರುವ ಲೆಕ್ಕಾಚಾರವನ್ನು ನಿಮ್ಮ ಮುಂದಿಡುತ್ತಿದ್ದೇವೆ.
 
ಸೋಯಾ-೯೧%
ಜೋಳ-೮೫%
ಸಕ್ಕರೆ ಬೀಟ್-೯೦%
ಕನೋಲಾ-೮೮%
ಹತ್ತಿ-೮೮%
ಹವಾಯಿಯನ್ ಪಪಾಯಾ-೬೦%
ಜ಼ುಕಿನಿ-೫೦%
ಹಳದಿ ಸ್ಕ್ವಾಶ್-೫೦%
 
 
ಮಾರುಕಟ್ಟೆಯಲ್ಲಿರುವ ನೂರಾರು ಬಗೆಯ ಹಣ್ಣು ತರಕಾರಿಗಳಲ್ಲಿ ಇವು ಬೆರಳೆಣಿಕೆಯಷ್ಟು ಮಾತ್ರ. ಟೊಮ್ಯಾಟೋ, ಅಲೂಗಡ್ಡೆ, ಅಕ್ಕಿ, ಬಾರ್ಲಿ, ಗೋಧಿ, ಹುರುಳಿಕಾಯಿ, ಬದನೆ, ಹಸಿಮೆಣಸು, ದಪ್ಪಮೆಣಸಿನಕಾಯಿ, ಬ್ರಾಕ್ಲಿ, ಲೆಟ್ಯುಸ್, ಟರ್ನಿಪ್, ಕ್ಯಾರೆಟ್, ಶುಂಠಿ, ಬೆಳ್ಳುಳ್ಳಿ ಎಲ್ಲವೂ ಅಮೆರಿಕಾದಲ್ಲಿ ಕುಲಾಂತರಿಗಳೇ. ಆದರೆ ಇವುಗಲ ಲೆಕ್ಕವನ್ನು ಎಫ್ ಡಿ ಏ ಇನ್ನೂ ಕೊಟ್ಟಿಲ್ಲ. ಗಾಬರಿಯಾಗುವ ವಿಷಯವೆಂದರೆ, ಈಗ ಅಮೆರಿಕಾ ನಂತರ ಕುಲಾಂತರಿ ಬೀಜಗಳನ್ನು ತಯಾರಿಸಿ ಮಾರುವ ಮೋನ್ಸಾಂಟೋ ನಂತಹ ಕಂಪನಿಗಳು ಈಗಾಗಲೇ ಒಂದು ಕಾಲಿಟ್ಟಿರುವುದು ಬ್ರೆಜ಼ಿಲ್ ಮತ್ತು ಭಾರತದಲ್ಲಿ!
 

 

 
 
 
 
 
Copyright © 2011 Neemgrove Media
All Rights Reserved