ಅಂಗಳ      ಖುರಪುಟ
Print this pageAdd to Favorite


 
ಬೇಕಿಂಗ್ ಸೋಡಾ-ಮೇಪಲ್ ಸಿರಪ್ ಗೆ ಹೆದರುವ ಕ್ಯಾನ್ಸರ್!

ಔಷಧವಿರದ, ಗುಣವಿರದ ರೋಗವಾಗಿ ಒಂದೊಮ್ಮೆ ಕಾಡಿದ್ದ ಕ್ಯಾನ್ಸರ್ ರೋಗಕ್ಕೆ ಕೀಮೋ ಥೆರಪಿ, ಶಸ್ತ್ರ ಚಿಕಿತ್ಸೆ ಇತ್ಯಾದಿ ರೋಗ ನಿಯಂತ್ರಕ ಕ್ರಮಗಳನ್ನು ಇಂಗ್ಲಿಷ್ ವೈದ್ಯಕೀಯ ಪದ್ಧತಿ ಸೂಚಿಸಿದೆ. ಇದಲ್ಲದೇ ವಿಶ್ವದ ವಿಭಿನ್ನ ಪರ್ಯಾಯ ಔಷಧೀಯ ಪದ್ಧತಿಗಳೂ ಕ್ಯಾನ್ಸರ್ ಎಂಬ ಗ್ರಂಥಿ ಖಾಯಿಲೆಗೆ ತಮ್ಮದೇ ರೀತಿಯಲ್ಲಿ ಮದ್ದುಗಳನ್ನು ಸೂಚಿಸಿವೆ. ನಮ್ಮ ಆಧುನಿಕ ಜೀವನ, ಇನ್ಸ್ಟಂಟ್ ಆಹಾರ ಪದ್ಧತಿಗಳು, ಆಹಾರಗಳಲ್ಲಿಯ ಕಲಬೆರಕೆ ಇವೆಲ್ಲವೂ ಕ್ಯಾನ್ಸರ್ ರೋಗವನ್ನು ಸಮೃದ್ದವಾಗಿ ಬೆಳೆಯಲು ಸಹಾಯ ಮಾಡಿಕೊಡುತ್ತಿವೆಯಾದ್ದರಿಂದ ಕ್ಯಾನ್ಸರ್ ಬಂದ ಮೇಲೆ ಕಷ್ಟಪಡುತ್ತಾ ಅದನ್ನು ಗುಣ ಪಡಿಸಿಕೊಳ್ಳುವುದಕ್ಕಿಂತ ಕ್ಯಾನ್ಸರ್ ನಮ್ಮ ದೇಹಕ್ಕೆ ಸುಳಿಯದಿರುವಂತೆ ತಡೆಗಟ್ಟುವುದು ಬಹಳ ಮುಖ್ಯ ಎಂದು ಪರ್ಯಾಯ ಔಷಧೀಯ ಪದ್ಧತಿಗಳು ನಮ್ಮನ್ನು ಎಚ್ಚರಿಸುತ್ತವೆ.
 
ಡಾಕ್ಟರ್ ಜಿಮ್ ಕೆಲ್ಮನ್ ಅಮೆರಿಕಾದ ವಿವಾದಾತ್ಮಕ ಜನಪದ ವೈದ್ಯ. ಈತ ಬಹಳ ವರ್ಷಗಳಿಂದಲೂ ತಮ್ಮದೇ ಮನೆಮದ್ದಿನ ಚಿಕಿತ್ಸಾ ಪದ್ಧತಿಯಿಂದ ಕ್ಯಾನ್ಸರ್ ಅನ್ನು ಗುಣ ಪಡಿಸಿರುವ ತಜ್ನ. ಕೆಲ್ಮನ್ ರ ಚಿಕಿತ್ಸೆಯಿಂದ ಕ್ಯಾನ್ಸರ್ ಮುಕ್ತರಾಗಿರುವ ಅಭಿಮಾನಿಗಳ ಹಿಂಡೇ ಅಮೆರಿಕಾದಲ್ಲಿದೆ. ಜಿಮ್ ಕೆಲ್ಮನ್ ಸೂಚಿಸುವ ಕ್ಯಾನ್ಸರ್ ಚಿಕಿತ್ಸೆ ಬಹಳ ಸುಲಭವಾದದ್ದು.
ಬೇಕಿಂಗ್ ಸೋಡಾ ಮತ್ತು ಶುದ್ಧ ಮೇಪಲ್ ಸಿರಪ್ ನ ಮಿಶ್ರಣ (ನೇಟಿವ್ ಇಂಡಿಯನ್/ರೆಡ್ ಇಂಡಿಯನ್ ಜನರು ಕಂಡು ಹಿಡಿದು ಉಪಯೋಗಿಸುತ್ತಿದ್ದರೆನ್ನಲಾದ ಮೇಪಲ್ ಸಿರಪ್ ಅಥವಾ ಮೇಪಲ್ ಕ್ಷಾರ ನಮ್ಮ ಜೋನಿ ಬೆಲ್ಲದಂತಹ ಸಿಹಿ ಪದಾರ್ಥ. ಇದನ್ನು ಸಕ್ಕರೆ ಮೇಪಲ್ ಅಥವಾ ಕೆಂಪು ಮೇಪಲ್ ಮರಗಳಿಂದ ತೆಗೆಯುವ ರಸದಿಂದ ತಯಾರಿಸುತ್ತಾರೆ) ಕ್ಯಾನ್ಸರ್ ಅನ್ನು ಗುಣಪಡಿಸುವುದಷ್ಟೇ ಅಲ್ಲದೆ ಕ್ಯಾನ್ಸರ್ ನಿಯಂತ್ರಕವಾಗಿಯೂ ಕೆಲಸ ಮಾಡುತ್ತದೆ ಎಂದು ಕೆಲ್ಮನ್ ಅಭಿಪ್ರಾಯ ಪಡುತ್ತಾರೆ. ಕ್ಯಾನ್ಸರ್ ಅಥವಾ ಯಾವುದೇ ಬಗೆಯ ರೋಗ ಪೀಡಿತವಾಗುವ ದೇಹಗಳು ಅಸಿಡಿಕ್ ಪ್ರವೃತ್ತಿಯದಾಗಿರುತ್ತವೆ. ಅಂಥ ದೇಹವನ್ನು ಆಲ್ಕಲೈನ್ ಪ್ರವೃತ್ತಿಯದನ್ನಾಗಿ ಮಾಡಿಕೊಂಡರೆ ರೋಗಬಾಧೆಯೂ ತಪ್ಪುತ್ತದೆ ಮತ್ತು ಬೇರೆ ಯಾವ ರೋಗ ಬರದಂತೆ ನಿಯಂತ್ರಣವೂ ಸಾಧ್ಯ ಎನ್ನುವುದು ಕೆಲ್ಮನ್ ಅಭಿಪ್ರಾಯ.
 
ಇನ್ನು ಇವರು ಬದುಕಲು ಸಾಧ್ಯವಿಲ್ಲ ಎಂದು ಡಾಕ್ಟರರು ಕೈ ಬಿಟ್ಟಿದ್ದ ನೂರಾರು ಕ್ಯಾನ್ಸರ್ ಪೀಡಿತರನ್ನು ಗುಣ ಮಾಡಿರುವ ಖ್ಯಾತಿಯ ಕೆಲ್ಮನ್, ಕ್ಯಾನ್ಸರ್ ಅನ್ನು ’ಸಕ್ಕರೆ ಬಾಕ’ ಎಂದು ಕರೆಯುತ್ತಾರೆ. ಕ್ಯಾನ್ಸರ್ ದೇಹದಲ್ಲಿರುವ ಸಕ್ಕರೆ ಅಥವಾ ಅತಿಯಾದ ಗ್ಲುಕೋಸ್ ಅನ್ನು ತಿನ್ನುತ್ತಾ ಬೆಳೆಯುತ್ತದೆ. ಕ್ಯಾನ್ಸರ್ ತಡೆಗಟ್ಟುವ ಸಲುವಾಗಿ ಮೊಟ್ಟಮೊದಲು ಸಕ್ಕರೆ ತಿನ್ನುವುದನ್ನು ನಿಲ್ಲಿಸಬೇಕು ಎನ್ನುವ ಈತ ಮೇಪಲ್ ಸಿರಪ್ ನಂತಹ ಸಿಹಿ ಹೇಗೆ ಕ್ಯಾನ್ಸರ್ ತಡೆಯುತ್ತದೆ ಎನ್ನುವುದಕ್ಕೆ ಸರಳ ವಿವರಣೆ ಕೊಡುತ್ತಾರೆ.
 
ಬೇಕಿಂಗ್ ಸೋಡಾ ದೇಹದಲ್ಲಿನ ಆಲ್ಕಲೈನ್ ಅನ್ನು ಸಮತೋಲನದಲ್ಲಿಡುತ್ತದೆ. ಈ ಸೋಡಾವನ್ನು ಮೇಪಲ್ ಸಿರಪ್ನೊಂದಿಗೆ ಬೆರೆಸಿ ಸೇವಿಸಿದಾಗ ದೇಹದಲ್ಲಿನ ಕ್ಯಾನ್ಸರ್ ಸೆಲ್ ಗಳು ಮೇಪಲ್ ಸಿರಪ್ ನ ಸಕ್ಕರೆಯನ್ನು ಕಬಳಿಸಲು ಅದನ್ನು ಹೀರುತ್ತವೆ. ಆಗ ಮೇಪಲ್ ಸಿರಪ್ನೊಂದಿಗೆ ಮಿಶ್ರವಾಗಿರುವ ಬೇಕಿಂಗ್ ಸೋಡಾ ಅಂಶ ಕ್ಯಾನ್ಸರ್ ಸೆಲ್ ಗಳೊಳಗೆ ಅತಿಕ್ರಮಣ ಮಾಡಿ ಅಸಿಡಿಕ್ ಆಗಿರುವ ಕ್ಯಾನ್ಸರ್ ಸೆಲ್ಗಳನ್ನು ಆಲ್ಕಲೈನ್ ಧಾಳಿಗೆ ಒಳಪಡಿಸುತ್ತವೆ. ನಿಯಮಿತವಾಗಿ ಒಂದು ಚಮಚ ಈ ಮಿಶ್ರಣವನ್ನು ಸೇವಿಸುತ್ತಿದ್ದರೆ ಕ್ರಮೇಣ ಕ್ಯಾನ್ಸರ್ ಕಡಿಮೆಯಾಗುತ್ತದೆ ಎಂದು ಕೆಲ್ಮನ್ ಹೇಳುತ್ತಾರೆ. ಇದರ ಜೊತೆಗೇ ಕ್ಯಾನ್ಸರ್ನಿಂದ ಮುಕ್ತಿ ಪಡೆಯಲು ಮೈದಾ ಮತ್ತು ಸಕ್ಕರೆಯ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಆಹಾರದಲ್ಲಿ ನಿಯಮಿತ ಪ್ರಮಾಣದ ಐಯೊಡೀನ್, ಸಿ ವೈಟಮಿನ್, ಮೊಸರು ಮುಂತಾದ ಪ್ರೋ ಬಿಯಾಟಿಕ್, ಶುದ್ಧವಾದ ನೀರಿನ ಸೇವನೆ ಮತ್ತು ಬೆಳಗು-ಸಂಜೆಯ ಸೂರ್ಯ ಸ್ನಾನವನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯವೆನ್ನುತ್ತಾರೆ. ಮೇಪಲ್ ಸಿರಪ್, ಬೇಕಿಂಗ್ ಸೋಡಾದ ಬಳಕೆ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಒಳ್ಳೆಯದಾದ್ದರಿಂದ ಈ ಪಾನಕ ಯಾರಿಗೂ ಯಾವುದೇ ರೀತಿಯ ದುಷ್ಪರಿಣಾಮ ಉಂಟು ಮಾಡದು ಎನ್ನುತ್ತಾರೆ.
 
ಜಿಮ್ ಕೆಲ್ಮನ್ ಸೂಚಿಸುವ ಕ್ಯಾನ್ಸರ್ ತಡೆಗಟ್ಟಲು ಸಹಾಯಕಾರಿಯಾಗುವ ಸರಳ ಮಿಶ್ರಣ ಇದು:
ಆರ್ಗ್ಯಾನಿಕ್ (ಗ್ರೇಡ್ ’ಬಿ’) ಮೇಪಲ್ ಸಿರಪ್ -೩ ಚಮಚ
 
ಬೇಕಿಂಗ್ ಸೋಡಾ (ಅಲ್ಯುಮಿನಿಯಮ್ ಮಿಶ್ರಿತ ಅಲ್ಲದಿರುವುದು)-೧ ಚಮಚ
 
ಇವೆರಡನ್ನೂ ಸಣ್ಣ ಬಟ್ಟಲಿನಲ್ಲಿ ಬೆರೆಸಿ ಒಲೆಯ ಮೇಲೆ ೩-೪ ನಿಮಿಷ ಬೆಚ್ಚಗೆ ಮಾಡಿಕೊಳ್ಳಬೇಕು (ನೀರು ಹಾಕಬಾರದು). ಹೆಚ್ಚು ಬಿಸಿ ಮಾಡಿದಲ್ಲಿ ಮೇಪಲ್ ಸಿರಪ್ ಸುಟ್ಟು ಕಹಿಯಾಗುವುದರಿಂದ ಕಡಿಮೆ ಉರಿಯಲ್ಲಿ ಸ್ವಲ್ಪವೇ ಬೆಚ್ಚಗೆ ಮಾಡಿಕೊಳ್ಳಬೇಕು. ಕ್ಯಾನ್ಸರ್ ನಿಂದ ಬಳಲುತ್ತಿರುವವರು ದಿನಕ್ಕೆ ೨-೩ ಚಮಚ ಸೇವಿಸಬೇಕು. ಕ್ಯಾನ್ಸರ್ ತಡೆಗಟ್ಟಲು ದಿನಕ್ಕೆ ೧ ಚಮಚ ಸೇವಿಸಿದರೆ ಸಾಕು.
 


 
ಬೇಕಿತ್ತಾ ’ಆಕ್ಯುಪೈ’ ನಿಮ್ಮೂರು?! ಒಂದು ಪುಟ್ಟ ಟಿಪ್ಪಣಿ

 (ಪ್ರಜಾವಾಣಿಯ ’ಸಂಗತ’ ವಿಭಾಗದಲ್ಲಿ ಅಕ್ಟೋಬರ್ ೧೭ ರಂದು ಪ್ರಕಟವಾದ ಬರಹದ ಮುಂದುವರಿದ ಭಾಗ)
 
ವಿಶ್ವದ ಯಾವ ಭಾಗದಲ್ಲಿ ಏನೇ ಗದ್ದಲ, ಗಲಾಟೆ, ಏಳುಬೀಳು, ತೊಂದರೆ, ವಿಜಯೋತ್ಸಾಹ ಆದರೂ ಅದರ ವಾಸನೆ ಹಿಡಿದು ಖಡಾಖಂಡಿತವಾಗಿ ಒಂದು ಚೂರಾದರೂ ಮೂಗು ತೂರಿಸಿ, ಈ ವಾಸನೆಯಿಂದ ನಮಗೇನು ಲಾಭ, ಏನು ನಷ್ಟ? ಎಂದು ಲೆಕ್ಕಾಚಾರ ಹಾಕಿ, ದಾಳ ಸೆಣೆಯಲು ತುದಿಗಾಲಲ್ಲೇ ಕಾದಿರುತ್ತಿದ್ದ ಅಮೆರಿಕಾ ಎಂಬ ದೇಶದ ರಾಜಕೀಯಕ್ಕೆ, ರಾಜಕಾರಣಿಗಳಿಗೆ, ಸಿರಿವಂತರಿಗೆ ಇದು ಮುಜುಗರದ ಕಾಲ. ತಮ್ಮ ಮಣ್ಣಿನ ಮೈಯ್ಯಿಂದಲೇ ಈಗ ಕಡಕ್ಕಾಗಿ ಹೊಮ್ಮುತ್ತಿರುವ ಬಡವರ, ಮಧ್ಯಮ ವರ್ಗದ ಬೇಸತ್ತ ಬೆವರಿನ ವಾಸನೆಗೆ ಈಗ ತಮ್ಮ ಮೂಗನ್ನು ಹಿಡಿಯುವುದರ ಜೊತೆಗೆ, ಮೈಗೆ ಮೈಯ್ಯೇ ಮೈಲಿಗೆಯಾಗಿ ಹೋಗಿದೆಯೆಂದು ಅದನ್ನು ತಿಕ್ಕಿ ತೊಳೆದು, ಸಾಧ್ಯವಾದರೆ ಹೊಸ ಬಣ್ಣ ಹಚ್ಚಿಸಿ ಪಾಲಿಶ್ ಮಾಡಿಸಿ ಬಿಡೋಣ ಎಂಬ ಹುನ್ನಾರದಲ್ಲಿದ್ದಾರೆ.
 
ಇಡೀ ಅಮೆರಿಕಾದ ಜನತೆ ಇಂದು ೯೯ ಶೇಕಡಾ ಮತ್ತು ೧ ಶೇಕಡಾದಂತೆ ಭಾಗವಾಗಿದೆ; ಕೆಲಸ ಕಳೆದುಕೊಂಡವರು, ಕಳೆದುಕೊಳ್ಳುತ್ತಿರುವವರು, ಮನೆಗಳ ಮಾರ್ಟ್ಗೇಜ್ ಕಟ್ಟಲಾರದೆ ಬೀದಿಗೆ ಬಿದ್ದಿರುವವರು, ಶಾಲಾ ಟೀಚರುಗಳು, ಕಾರ್ಮಿಕರು, ದಿನಗೂಲಿಯವರು, ಫೀಜ಼ುಗಳ ಭಾರ  ಹೊರಲಾಗದೆ ಹೆಣಗುತ್ತಿರುವ ವಿದ್ಯಾರ್ಥಿಗಳು, ಅನಾರೋಗ್ಯ ಕಾಡುತ್ತಿರುವವರು, ಕೂಲಿ ಕಾರ್ಮಿಕರು, ಸರ್ಕಾರೇತರ, ಖಾಸಗಿಯೇತರ ಸಂಘ ಸಂಸ್ಥೆಗಳವರು, ಪರಿಸರವಾದಿಗಳು, ರೈತರು, ವಯಸ್ಸಾದವರು-ಒಟ್ಟಿನಲ್ಲಿ ಬಡವರು ಮತ್ತು ಮಧ್ಯಮವರ್ಗದವರು ಈ ೯೯%ದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರೆ, ಶ್ರೀಮಂತ ಮಾಧ್ಯಮಗಳ ಒಡೆಯರು, ಬ್ಯಾಂಕುಗಳ-ಕಾರ್ಪೊರೇಷನ್ಗಳ ಸಿ ಇ ಓಗಳು, ಉದ್ಯಮಾಧಿಪತಿಗಳು, ರಿಪಬ್ಲಿಕನ್ ಪಕ್ಷದವರು-ಅಮೆರಿಕಾದ ಎಲ್ಲಾ ಶ್ರೀಮಂತರೂ ಉಳಿದ ೧ ಶೇಕಡದಲ್ಲಿ ಸೇರಿದ್ದಾರೆ.೧ ಶೇಕಡಾ ಇರುವ ಅಮೆರಿಕಾದ ಅತ್ಯಂತ ಶ್ರೀಮಂತರು ತಮ್ಮ ಅಗಾಧ ಸಂಪತ್ತಿಗನುಗುಣವಾಗಿ ತೆರಿಗೆ ಕೊಡದೆ ಮಧ್ಯಮ ವರ್ಗದವರು ಕೊಡುವಷ್ಟೇ ತೆರಿಗೆಯನ್ನು ಕಟ್ಟುತ್ತಾ ದೇಶಕ್ಕೆ ವಂಚನೆ ಮಾಡುತ್ತಿದ್ದಾರೆ. ಅಂತಹ ೧ ಶೇಕಡಾ ಸಿರಿವಂತರಿಗೆ ಹೆಚ್ಚು ತೆರಿಗೆ ಹಾಕಿ, ಅದು ಬಿಟ್ಟು ೯೯ ಶೇಕಡಾ ಬಡ-ಮಧ್ಯಮ ವರ್ಗದವರನ್ನು ಯಾಕೆ ಪೀಡಿಸುತ್ತೀರಿ ಎಂದು ಇದುವರೆಗೂ ಇದನ್ನು ಕಂಡೂ ತಟಸ್ಥರಂತಿದ್ದ ಅಮೆರಿಕನ್ ಜನಸಾಮಾನ್ಯ ಈಗ ಪ್ರತಿಭಟನೆ ಮಾಡಲು ಮುಂದೆ ಬಂದಿದ್ದಾನೆ. ಟ್ಯುನೀಷಿಯಾ, ಸಿರಿಯಾ, ಈಜಿಪ್ಟ್ ನಲ್ಲಿ ಕ್ರಾಂತಿಯಾದಾಗ ಮನೆಗಳಲ್ಲೇ ಕೂತು ಅದನ್ನು ನೋಡಿ ಬೆಚ್ಚಗಾದ ಈ ದೇಶ ಈಗ ಹೊಸದೊಂದು ಬಗೆಯ ಹೋರಾಟಕ್ಕಿಳಿದಿದೆ.
 
ಅಮೆರಿಕಾದ ತೆರೆದ ಮಾರುಕಟ್ಟೆಯನ್ನು ಇನ್ನೂ ಬೆತ್ತಲೆ ಮಾಡಿ ಇಡೀ ದೇಶದ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ನೂಕಲು ಕಾರಣವಾಗಿರುವ ಧನದಾಹೀ ಕಾರ್ಪೊರೇಷನ್ನುಗಳನ್ನು, ಜನಸಾಮನ್ಯರು (ಅಂದರೆ ೯೯%ದವರು) ಎದುರು ಹಾಕಿಕೊಳ್ಳುವ ಅನನ್ಯ ಧೈರ್ಯ ಮಾಡಿ ಬೀದಿಗಿಳಿದಿದ್ದರೆ, ಕಾರ್ಪೊರೇಷನ್ನುಗಳಿಲ್ಲದೆ ಅಮೆರಿಕಾ ಇಲ್ಲ, ಸಂಪತ್ತಿನ ಸಮಾನ ಹಂಚಿಕೆಯಲ್ಲಿ ಅಮೆರಿಕಾ ನಂಬಿಕೆ ಇಡುವುದಿಲ್ಲ, ನಮ್ಮದು ಕಮ್ಯುನಿಸಂ ಅಲ್ಲ, ಈ ದಂಗೆ ಕೋರರು ನಮ್ಮನ್ನು ಕೊಂದು ನಮ್ಮ ಸಂಪತ್ತನ್ನು ಲೂಟಿ ಮಾಡಲು ಬಿಡೆವು ಎಂದು ಅಮೆರಿಕನ್ ಶ್ರೀಮಂತರು (ಅಂದರೆ ೧% ಮಂದಿ) ಹೆದರಿ ಒಟ್ಟಾಗುತ್ತಿದ್ದಾರೆ. ಇಲ್ಲಿ ಪುಟ್ಟದೊಂದು ಕ್ರಾಂತಿ ಮೈತಳೆದಿದೆ. ಹೋರಾಟ ಹಬ್ಬುತ್ತಿದೆ. ಇದು ನಿಜಕ್ಕೂ ಬದಲಾವಣೆಯ ಕಾಲ.
 
ಆಕ್ಯುಪೈ ವಾಲ್ ಸ್ಟ್ರೀಟ್!
 
ಅಮೆರಿಕಾದ ರಾಜಧಾನಿ ವಾಷಿಂಗ್ಟನ್ನಿನ ಶ್ವೇತ ಭವನದ ಮುಂದೆ ಒಂದು ದಿನದಲ್ಲಿ ಹತ್ತಿಪ್ಪತ್ತು ಧರಣಿ, ಮೆರವಣಿಗೆ-ಹೋರಾಟಗಳು ನಡೆಯುತ್ತಿರುತ್ತವೆ. ಇರಾಕ್ ಯುಧ್ಧ ನಿಲ್ಲಿಸಿ...ಇಲ್ಲಿ ನಮಗೆ ಕೆಲಸ ಸೃಷ್ಟಿಸಿ ಅಂತ ಗುಂಪೊಂದು ಘೋಷಣೆ ಕೂಗುತ್ತಿದ್ದರೆ, ನನ್ನ ಸೈನಿಕ ಮಗನ ಸಾವಿಗೆ ಕಾರಣ ಜಾರ್ಜ್ ಬುಶ್ಶೋ ಅಥವಾ ಅಫ್ಘಾನಿಸ್ತಾನದ ಭಯೋತ್ಪಾದಕರೋ ಅಂತ ತಾಯಿಯೊಬ್ಬಳು ಬೋರ್ಡು ಹಿಡಿದು ಕೂತಿರುತ್ತಾಳೆ. ನನ್ನ ಮನೆ ಉಳಿಸಿಕೊಡಿ, ಕೆಲಸ ಕೊಡಿ ಎಂದು ನಿರುದ್ಯೋಗಿ ನಿರ್ಗತಿಕನೊಬ್ಬ ಟೆಂಟು ಹಾಕಿರುತ್ತಾನೆ, ಮುಸ್ಲಿಂಮರ ಮೇಲಿನ ಅನಾವಶ್ಯಕ ವಿಚಾರಣೆಯನ್ನು ನಿಲ್ಲಿಸಿ ಎಂದು ಮುಸ್ಲಿಂ ಗುಂಪೊಂದು ಧರಣಿ ಕೂತಿರುತ್ತದೆ...ಹೀಗೇ...ವಾಶಿಂಗ್ಟನ್ನಿನ ರಾಜಕೀಯವಲಯಗಳಲ್ಲಿ ನಡೆಯುವ ರಾಜಕೀಯ ನಾಟಕದಂತೆ ಅಲ್ಲಿನ ಬೀದಿಗಳ ಮೇಲೂ ಜನ ತಮ್ಮ ಬದುಕು ಹರಡಿಕೊಂಡಿರುತ್ತಾರೆ. ಇದು ನಿತ್ಯದ ಪರಿ.
 
ಹೀಗೇ, ಸೆಪ್ಟೆಂಬರ್ ೧೭ ರಂದು ಒಂದಷ್ಟು ಜನ ’ವಾಲ್ ಸ್ಟ್ರೀಟ್ ಗೆ ಮುತ್ತಿಗೆ’ ಅಥವಾ ’ಆಕ್ಯುಪೈ ವಾಲ್ ಸ್ಟ್ರೀಟ್’ ಎಂದು ನ್ಯೂಯಾರ್ಕಿನಲ್ಲಿ ಕಲೆತಾಗ ಮತ್ತೊಂದಷ್ಟು ಹೊಟ್ಟೆಗಿಲ್ಲದ ಕೆಲಸವಿಲ್ಲದವರ ಒಂದೆರಡು ದಿನದ ಕೂಗಾಟವೆಂದು ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ವಾಲ್ ಸ್ಟ್ರ‍ೀಟಿನ ಠೀಕು ಠಾಕು ಮಂದಿಯಂತೂ ಹೋರಾಟಗಾರರನ್ನು ಕುತೂಹಲಕ್ಕೂ ಕಣ್ಣೆತ್ತಿ ನೋಡಿರಲಿಲ್ಲ. ಅವರಿಗೆ ಇದು ಬೋನಸ್ ಬರುವ ಸಮಯ. ಉನ್ನತ ಹುದ್ದೆಯಲ್ಲಿರುವವರಿಗೆ ಈ ಬಾರಿ ದೊಡ್ಡ ಬೋನಸ್ ಪ್ಯಾಕೇಜ್ ಗಳು ನಿರ್ಧಾರವಾಗಿದ್ದವು. ಕಂಪನಿಯ ಕೆಳಹಂತದ ಸಾವಿರಾರು ಕೆಲಸಗಾರರನ್ನು ಆಗಷ್ಟೇ ತೆಗೆದುಹಾಕಿ ಕಂಪನಿಗಳಿಗೆ ದುಡ್ಡು ಉಳಿಸಿದ ಸಂದರ್ಭಕ್ಕೆ ಅವರನ್ನು ಸನ್ಮಾನಿಸಲಾಗುತ್ತಿತ್ತು. ಅವರು ಸಂಭ್ರಮಿಸುವುದರಲ್ಲಿ ಬ್ಯುಸಿಯಾಗಿದ್ದರೆ ಇತ್ತ ನ್ಯೂಯಾರ್ಕಿನ ಜುಕೊಟಿ ಪಾರ್ಕಿನ ಇಕ್ಕೆಲಗಳಿಂದ ನಿಧಾನಕ್ಕೆ ಜನ ಸೇರುತ್ತಾ ವಾಲ್ ಸ್ಟ್ರೀಟ್ ಅನ್ನು ಮುತ್ತಿಗೆ ಹಾಕುವ ಯೋಜನೆಗೆ ಕೈಗೂಡಿಸುತ್ತಿದ್ದರು.
 
ವಾಲ್ ಸ್ಟ್ರೀಟೇ ಏಕೆ?
 
ಗೋಡೆಗಳ ರಸ್ತೆ ಅಥವಾ ರಸ್ತೆಯೇ ಗೋಡೆ...ಈಗಿನ ಚಳುವಳಿಯ ಸಂದರ್ಭದಲ್ಲಿ ಈ ಹೆಸರು ಅನೇಕ ಉಪಮೆಗಳನ್ನು ಕೊಡುತ್ತದೆ. ವಾಲ್ ಸ್ಟ್ರೀಟ್ ಎಂಬ ನೂಯಾರ್ಕಿನ ಈ ಸಣ್ಣ ವಿಶ್ವವಿಖ್ಯಾತ ರಸ್ತೆಯನ್ನು ಅಮೆರಿಕಾ ಮತ್ತು ಇಡೀ ವಿಶ್ವದ ಆರ್ಥಿಕ ನಾಡಿ ಎನ್ನಬಹುದು. ಅಮೆರಿಕಾದ ಮುಕ್ತ ಮಾರುಕಟ್ಟೆಯ ಆಯವ್ಯಯ, ಆಗುಹೋಗುಗಳನ್ನೆಲ್ಲಾ ನಿಯಂತ್ರಣದಲ್ಲಿಡುತ್ತಿದ್ದ ಈ ವಾಲ್ ಸ್ಟ್ರ‍ೀಟ್ ಗೂಳಿಯ ಆರಾಧಕ. ಹೂಂಕರಿಸುತ್ತಾ, ಮುಂದೆ ಬರುವವರನ್ನು ತಿವಿಯಲು, ಹಿಂದೆ ಬಂದವರನ್ನು ಒದೆಯಲು ತಯಾರಿರುವಂತೆ ಕಾಣುವ ಗೂಳಿಯ ಬೃಹತ್ ಪ್ರತಿಮೆಯೊಂದು ವಾಲ್ ಸ್ಟ್ರ‍ೀಟ್ ನ ಚಿನ್ಹೆ. ಒಂದೊಮ್ಮೆ ಬರೀ ಅಮೆರಿಕಾ ಮತ್ತು ಪಾಶ್ಚಿಮಾತ್ಯ ಪ್ರಪಂಚಕ್ಕೆ ಸೀಮಿತವಾಗಿದ್ದ ಇಲ್ಲಿನ ಚಟುವಟಿಕೆಗಳು, ವಿಶ್ವದ ಇತರೆ ಭಾಗಗಳು ಜಾಗತೀಕರಣಕ್ಕೆ ತಮ್ಮನ್ನು ತಾವು ಎದೆ ಬಿರಿದು ತೆರೆದುಕೊಂಡಂತೆ ವಿಶ್ವದಾದ್ಯಂತ ಹರಡಿದ್ದವು. ಆಗ, ಈ ರಸ್ತೆಗೆ, ಇದರಲ್ಲಿನ ಭಾರೀ ಕಟ್ಟಡಗಳ ಒಳಗೆ ಮೆತ್ತನೆಯ ಸೀಟಿನ ಮೇಲೆ ಕುಳಿತು ಬಿಲಿಯನ್ ಗಟ್ಟಲೆ ಹಣದ ಬಗ್ಗೆ ಸರ್ವತಂತ್ರ ಸ್ವತಂತ್ರ ತೀರ್ಮಾನ ತೆಗೆದುಕೊಳ್ಳುವ ಸಿ ಇ ಒಗಳಿಗೆ ಎಲ್ಲಿಲ್ಲದ ಅಧಿಕಾರ ಬಂದಿತ್ತು (ಈಗಲೂ ಇದೆ!).
 
ವಾಲ್ ಸ್ಟ್ರೀಟ್ ಜನಸಾಮಾನ್ಯರಿಂದ ದೂರ, ಕಟ್ಟಡಗಳ ಒಳಗೇ ಕಾರ್ಯ ನಿರ್ವಹಿಸುವ ಹೊಸಯುಗದ ಮಾರುಕಟ್ಟೆ. ಅಮೆರಿಕಾದ ಷೇರು ಸೂಚ್ಯಂಕವಾದ ಡವ್, ನ್ಯಾಸ್ಡಾಕ್ ಎಲ್ಲವುಗಳ ವಕ್ತಾರ. ಮಾರುಕಟ್ಟೆಯೆಂದ ಮೇಲೆ ಮಾರಾಟಗಾರು ಇರದೆ ಇರುತ್ತಾರೆಯೇ? ಇಲ್ಲಿನ ಷೇರು ಬೋರ್ಡುಗಳ ಲೆಕ್ಕ ಮೇಲೇರುವಂತೆಯೋ ಅಥವಾ ಕೆಳಗೆ ಮುಗ್ಗರಿಸುವಂತೆಯೋ ಮಾಡಿ ಕೈ ತುಂಬಾ ಹಣ ಮಾಡಿಕೊಳ್ಳುವ ಚತುರ ಚಾಣಾಕ್ಷ ದಲ್ಲಾಳಿಗಳು, ವ್ಯಾಪಾರಿಗಳು ವಾಲ್ ಸ್ಟ್ರ‍ೀಟ್ ನ ಜೀವಾಳ. ಇವರ ಧರ್ಮ-ವ್ಯಾಪಾರ; ದೇವರು-ಹಣ. ಜನ ಹಿತ, ದೇಶ ಹಿತ ಇವರು ಹತ್ತಿರ ಸೇರಿಸದ ಆಲೋಚನೆಗಳು. ಇವರು ದೇಶಾತೀತರು. ಹಣ ಎಲ್ಲಿದೆ ಎಂದರೆ ಅಲ್ಲಿಗೆ ತಮ್ಮನ್ನು ಸ್ಥಳಾಂತರಿಸಿಕೊಳ್ಳಬಲ್ಲ ಸಾಧಕರು. ಯಾರ ಹಣ? ಯಾವ ಮೂಲದಿಂದ ಬಂದ ಹಣ? ಎಷ್ಟು ಕಷ್ಟಪಟ್ಟು ಹೂಡಿದ್ದಾರೆ? ಅಥವಾ ಯಾರ ತಲೆ ಒಡೆದಿದ್ದಾರೆ ಎಂದು ತಿಳಿಯುವುದು ಇವರ ವೃತ್ತಿಗೆ ತಕ್ಕುದಲ್ಲ. ಹಣದೊಡನೆ ಆಟ ಆಡುವುದು, ಸಾಧ್ಯವಾದರೆ ಈ ಆಟದಲ್ಲಿ ಆ ಹಣವನ್ನು ದುಪ್ಪಟ್ಟು ಮಾಡುವುದು ಅಥವಾ ಕಳೆದುಕೊಳ್ಳುವುದು ಇವರ ನಿತ್ಯದ ಕಸುಬು. ಅಮೆರಿಕಾದ್ದು ಮುಕ್ತ ಮಾರುಕಟ್ಟೆಯಾದ್ದರಿಂದ ಹಣ ಮಾಡಿದರೂ ಬಂಪರ್, ಕಳೆದುಕೊಂಡರೂ ಸೂಪರ್ ಬಂಪರ್. ನಾವೇ ಕಂಡುಕೊಂಡಿರುವ ಷೇರು ಪೇಟೆಯೆಂಬ ಆತ್ಯಾಧುನಿಕ ಜೂಜಾಟದ ನಿಯಂತ್ರಕರಿವರು. ಇವರು ಆಡುವುದು ಅಥವಾ ಕಳೆಯುವುದು ಹೂಡಿಕೆದಾರರ ಹಣವನ್ನಾದ್ದರಿಂದ ಗಳಿಸಿದರೂ ಕಳಿಸಿದರೂ ಇವರದ್ದೇನಿದ್ದರೂ ಕಮಿಷನ್ನಿನ, ಸಂಬಳದ ಬಿಸಿನೆಸ್ಸು. ಕಳೆದು ಹೋಗುವ ಹಣ ಇವರದ್ದಲ್ಲ. ಹಾಗಾಗಿ, ಇವತ್ತು ಅಮೆರಿಕಾದಲ್ಲಿನ ಆರ್ಥಿಕ ಮುಗ್ಗಟ್ಟಿನಿಂದ ಇವರ ಕಯ್ಯಲ್ಲಿ ಆಟವಾಡಿಸಿಕೊಳ್ಳುತ್ತಿರುವ ಹಣ ಕಡಿಮೆಯಾಗಿದೆಯೇ ಹೊರತು ಇವರೆಲ್ಲಾ ಸೊಂಪಾಗಿಯೇ ಇದ್ದಾರೆ. ಇನ್ನು ನಾಲ್ಕು ಜಾಗತಿಕ ರಿಸೆಷನ್ ಗಳು ಬಂದರೂ ಇವರಿಗೇನೂ ಆಗದು. ಅಷ್ಟು ಗಟ್ಟಿ ಕುಳಗಳಿವರು.
 
ದಶಕಗಳಿಂದ ಈ ಬಗೆಯ ರಾಮ ಶ್ಯಾಮನ ಹಣದಾಟ ನಡೆಸಿಕೊಂಡು ಬಂದಿದ್ದ ಲೀಮನ್ ಬ್ರದರ್ಸ್ ಮತ್ತು ಮೆರಿಲ್ ಲಿಂಚ್ ಎಂಬ ಬ್ಯಾಂಕುಗಳು ಅಥವಾ ಸಾಲ ಕೊಡುವ ಸಂಸ್ಥೆಗಳು ಆರ್ಥಿಕ ಹೊರೆ ಹೆಚ್ಚಾಗಿದೆಯೆಂದು ನಾಲ್ಕು ವರ್ಷಗಳ ಹಿಂದೆ ಅನಾಮತ್ ಮುಗ್ಗರಿಸಿ ಬಿದ್ದಿದ್ದವು. ಷೇರು ಮಾರ್ಕೆಟ್ ಯಥಾ ಪ್ರಕಾರ ಕುಸಿದಿತ್ತು. ಹೂಡಿಕೆದಾರರು ಕಂಗಾಲಾಗಿದ್ದರು. ಆಗ ಅಮೆರಿಕನ್ ಸರ್ಕಾರ ಬಿಲಿಯನ್ ಗಟ್ಟಲೆ ಹಣ ಸಹಾಯ ಮಾಡಿತ್ತು. ಅದನ್ನು ಪಡೆದ ಸಂಸ್ಥೆಗಳು ತಮ್ಮ ಗಾತ್ರ ಮತ್ತು ನಷ್ಟಗಳನ್ನು ನಿಯಂತ್ರಿಸಿಕೊಳ್ಳುವ ನೆಪದಲ್ಲಿ ಸಾವಿರಾರು ಕೆಲಸಗಾರರನ್ನು ಕಡಿಮೆ ಮಾಡಿಕೊಂಡಿದ್ದವು. ಆದರೆ ಅವುಗಳ ಮುಖ್ಯಸ್ಥರು, ಸಿ ಇ ಒ ಗಳು ಮಿಲಿಯನ್ ಗಟ್ಟಲೆ ಸಂಬಳ, ಬೋನಸ್ ಗಳನ್ನು ಪಡೆಯುವುದನ್ನು ನಿಲ್ಲಿಸಿರಲಿಲ್ಲ. ಸರ್ಕಾರದಿಂದ ಸುಲಭವಾಗಿ ಹಣ ಬರುತ್ತಿದೆಯೆಂದಾಗ ಯಾರು ತಾನೆ ಕಡಿಮೆ ಬೋನಸ್ ಗೆ ಸುಮ್ಮನಾಗುತ್ತಾರೆ? ಆಗ ಸಿ ಇ ಒ ಗಳಿಗೆ ಬೋನಸ್ ಕೋಡುವುದಲ್ಲದೆ ಅವರ ಕುಟುಂಬದವರ ಅತ್ಯಾಧುನಿಕ ಕ್ಲಿನಿಕ್ಕುಗಳಲ್ಲಿಯ ಸೌಂದರ್ಯ ಚಿಕಿತ್ಸೆ, ವಿದೇಶ ಯಾತ್ರೆ ಇತ್ಯಾದಿಗಳ ಬಿಲ್ ಅನ್ನು ಕೂಡಾ ಆಯಾ ಸಂಸ್ಥೆಗಳೇ ಭರಿಸಿದ್ದವು. ಇದು ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು, ಪ್ರತಿಯೊಬ್ಬ ಅಮೆರಿಕನ್ ಪ್ರಜೆಯೂ ಈ ಬಗ್ಗೆ ತಿಳಿದಿದ್ದ. ಆದರೆ ಆಗ ಯಾರಿಗೂ ಅದನ್ನು ವಿರೋಧಿಸುವ ಅಗತ್ಯ ಕಂಡಿರಲಿಲ್ಲ, ಟೈಮ್ ಸಿಕ್ಕಿರಲಿಲ್ಲ...
 
೨೦೦೦ರದ ’ಡಾಟ್ ಕಾಂ’ ರಿಸೆಷನ್ ನಿಂದ ಸುಧಾರಿಸಿಕೊಂಡರೂ ರಿಯಲ್ ಎಸ್ಟೇಟ್-ಮಾರ್ಟ್ಗೇಜ್ ತೊಂದರೆ, ಬ್ಯಾಂಕುಗಳ ದಿವಾಳಿ ಹೀಗೆ ೨೦೦೭ರಿಂದ ಅಮೆರಿಕದ ಆರ್ಥಿಕ ಪರಿಸ್ಥಿತಿ ಜಾರುತ್ತಿದೆ. ಆರ್ಥಿಕ ಮುಗ್ಗಟ್ಟೇಕೆ ಎಂಬುದರ ಪೂರ್ತಿ ಲೆಕ್ಕಾಚಾರ ಅಮೆರಿಕಾ ಸರ್ಕಾರದ ಹತ್ತಿರವೂ ಇಲ್ಲ, ಅದು ವಾಲ್ ಸ್ಟ್ರ‍ೀಟ್ ಅನ್ನು ನಿಯಂತ್ರಿಸುವ ಖಾಸಗೀ ಬಂಡವಾಳದಾರರಿಗೆ, ಕಂಪನಿಗಳಿಗೆ ಮಾತ್ರ ಗೊತ್ತಿದೆ. ಅಮೆರಿಕಾ ಇವತ್ತು ಖಾಸಗೀ ಕಾರ್ಪೊರೇಷನ್ ಗಳು, ಖಾಸಗೀ ಬ್ಯಾಂಕ್ಗಳು ಮತ್ತು ಕಂಪನಿಗಳು ಕೊಡುವ ಲೆಕ್ಕವನ್ನೇ ನಂಬಿ ಕೂರುವ ದುರಂತದ ಸ್ಥಿತಿಯಲ್ಲಿದೆ. ಮುಕ್ತ ಮಾರುಕಟ್ಟೆಯ ಹೆಸರಿನಲ್ಲಿ ’ಕ್ರೆಡಿಟ್ ಕಾರ್ಡ್ ಸಂಸ್ಕೃತಿ’ಯ ರೂವಾರಿಯಾಗಿ ಕೇವಲ ಖರೀದಿದಾರರನ್ನೇ, ಬಳಕೆದಾರರನ್ನೇ ಹುಟ್ಟಿಸಿದ ತಪ್ಪಿಗೆ ಇವತ್ತು ದುಪ್ಪಟ್ಟು ಕಷ್ಟ ಅನುಭವಿಸುತ್ತಿದೆ. ಸರ್ಕಾರಕ್ಕೆ ಜನರಿಗಾಗಿ ಖರ್ಚು ಮಾಡಲು ಹಣ ಇಲ್ಲ. ಜನ ಕೆಲಸ, ಮನೆ ಕಳೆದುಕೊಂಡು ಬೀದಿಗಿಳಿಯುತ್ತಿದ್ದಾರೆ. ಕಡೆಗೂ ತಮ್ಮ ಈ ದುಸ್ಥಿತಿಗೆ ಕಾರಣ ಯಾರು ಎಂದು ತಿಳಿದು, ಪರಿಹಾರ ಕಂಡುಕೊಳ್ಳುವ ತೀರ್ಮಾನ ತೆಗೆದುಕೊಂಡಿದ್ದಾರೆ.
 
ಈಗ ಅಮೆರಿಕನ್ ಜನಸಾಮಾನ್ಯ ಅಂಡು ಸುಟ್ಟ ಬೆಕ್ಕಿನಂತಾಗಿದ್ದಾನೆ. ಕೆಲಸವೂ ಸಿಗುತ್ತಿಲ್ಲ, ತೆರಿಗೆ ಕಟ್ಟುವುದೂ ನಿಲ್ಲುತ್ತಿಲ್ಲ...ಇಷ್ಟು ದಿನ ತನ್ನನ್ನು ಆಟ ಆಡಿಸಿದ, ಬೇಕಾಬಿಟ್ಟಿ ಸುಲಿದ ಕಾರ್ಪೋರೇಷನ್ ಪ್ರಭುಗಳನ್ನು ಈಗ ವಿರೋಧಿಸುವ ಧೈರ್ಯ ಮಾಡಿದ್ದಾನೆ. ವಾಂಕೂವರಿನ ಖಾಸಗೀಕರಣ ವಿರೋಧೀ-ಸರ್ಕಾರೇತರ ಜನಸಂಘಟನೆಯೊಂದರಲ್ಲಿ, ಅದರ ಮ್ಯಾಗಜೀನುಗಳಲ್ಲಿ ತಿಂಗಳುಗಳ ಹಿಂದೆ ವಾಲ್ ಸ್ಟ್ರ‍ೀಟ್ ಮಾಡುತ್ತಿರುವ ಮೋಸದ ಬಗ್ಗೆ ಶುರುವಾದ ಚರ್ಚೆಯನ್ನು ಕೇಳಿಸಿಕೊಂಡಿದ್ದಾನೆ. ನ್ಯೂಯಾರ್ಕಿನ ವಾಲ್ ಸ್ಟ್ರ‍ೀಟ್ ನಲ್ಲಿ ನೂರಿನ್ನೂರು ಜನರಿಂದ ಮೊದಲ ಹಂತವಾಗಿ ಶುರುವಾದ ಚಳುವಳಿ ಈಗ ಬೋಸ್ಟನ್, ಸ್ಯಾನ್ ಫ್ರಾನ್ಸ್ಸಿಸ್ಕೋ, ಶಿಕಾಗೋ, ಇಂಡಿಯಾನಾಪೊಲಿಸ್, ಅಟ್ಲಾಂಟಾ, ಮಯಾಮಿ, ಡೆನ್ವರ್, ಸಿಯಾಟಲ್, ಫಿಲಡೆಲ್ಫಿಯಾ ಇತ್ಯಾದಿ ಅಮೆರಿಕಾದ ಪ್ರತೀ ಪ್ರಮುಖ ನಗರಗಳಿಗೂ ಹಬ್ಬಿದೆ. ದಿನೇ ದಿನೇ ಹೆಚ್ಚು ಜನ ಸೇರುತ್ತಿದ್ದಾರೆ. ಪಾರ್ಕುಗಳಲ್ಲಿ, ಸಾರ್ವಜನಿಕ ಜಾಗಗಳಲ್ಲಿ ಸತ್ಯಾಗ್ರಹ ಕೂರುತ್ತಿದ್ದಾರೆ. ಅಮೆರಿಕನ್ ಜನ ಬೀದಿಗೆ ಬಿದ್ದಿರುವುದಕ್ಕೆ, ಅಮೆರಿಕಾ ಬೇಡದ ಯುದ್ಧಗಳನ್ನು ಮಾಡುವುದಕ್ಕೆ, ಇಡೀ ಅಮೆರಿಕಾ ಇವತ್ತು ವಿಶ್ವದ ದೃಷ್ಟಿಯಲ್ಲಿ ಬೀಳುತ್ತಿರುವುದಕ್ಕೆ ಈ ಕಾರ್ಪೊರೇಷನ್ ಧಣಿಗಳ ದುರಾಸೆಯೇ ಕಾರಣ ಎನ್ನುತ್ತಾ ಬಂಡವಾಳಶಾಹೀ ಧೋರಣೆಯನ್ನು ವಿರೋಧಿಸುತ್ತಾ ಬಂಡಾಯ ಹೂಡುತ್ತಿದ್ದಾರೆ. ಇದು ನಿಜಕ್ಕೂ ಅಚ್ಚರಿಯ ಸಂಚಲನ. ಸ್ವಲ್ಪ ತಡವಾಗಿ ಆಗಿದೆ ಎಂಬುದು ನಿಜವಾದರೂ ಇಡೀ ವಿಶ್ವ ಸ್ವಾಗತಿಸಬೇಕಾದ, ಪ್ರೋತ್ಸಾಹಿಸಬೇಕಾದ ಪ್ರಜಾಪ್ರಭುತ್ವದ ಸ್ವಾತಂತ್ರಕ್ಕಾಗಿ ಪ್ರಜೆಗಳ ಹೋರಾಟ.
 
ಬೇಡಿಕೆಗಳು
 
'ಆಕ್ಯುಪೈ ವಾಲ್ ಸ್ಟ್ರೀಟ್' ಚಳುವಳಿಯ ಬೇಡಿಕೆಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಈಗಷ್ಟೇ ಕಣ್ಣುತೆರೆದಿರುವ ಚಳುವಳಿ ಇನ್ನೂ ತನ್ನ ಬೇಡಿಕೆಗಳನ್ನು ಖಡಾಖಂಡಿತವಾಗಿ, ಕಟ್ಟುನಿಟ್ಟಾಗಿ ರೂಪಿಸುವ ನಿಟ್ಟಿನಲ್ಲಿದೆ. ಜನರು ತಮ್ಮ ತಟಸ್ಥತೆಯಿಂದ ಎದ್ದು ಪೂರಾ ಚಳುವಳಿಗಿಳಿಯುವುದು ಇನ್ನೂ ಬಾಕಿ ಇದೆ, ಒಮ್ಮೆ ಚಳುವಳಿ ಸಂಪೂರ್ಣ ಸಾಮರ್ಥ್ಯ ಪಡೆದುಕೊಂಡ ಮೇಲೆ ಬೇಡಿಕೆಗಳನ್ನು ಮುಂದಿಡುತ್ತೇವೆ ಎಂದು ಚಳುವಳಿಯ ನೇತೃತ್ವ ವಹಿಸಿರುವವರು ಹೇಳಿಕೆ ಕೊಟ್ಟಿದ್ದಾರೆ. ಚಳುವಳಿ ಕೆಲವು ಮೂಲಭೂತ ಬೇಡಿಕೆಗಳು ಹೀಗಿವೆ.
 
೧) ಬಂಡವಾಳಶಾಹಿಗಳಿಗೆ, ಖಾಸಗೀ ಕಾರ್ಪೊರೇಷನ್ ಗಳಿಗೆ ಲಾಭದಾಯಕವಾಗುವಂತಿರುವ ಅಮೆರಿಕಾದ ಕೆಲವು ಕಾನೂನುಗಳನ್ನು ಬದಲಾಯಿಸಿ ಬಿಗಿಗೊಳಿಸಲೇ ಬೇಕು ಮತ್ತು ವಾಲ್ ಸ್ಟ್ರೀಟ್ ಅನ್ನು ಮುಷ್ಟಿಯಲ್ಲಿಟ್ಟುಕೊಂಡು, ಸರ್ಕಾರದ ಹಣ ಮತ್ತು ಹೂಡಿಕೆದಾರರ ಹಣದಲ್ಲಿ ಬೇಜವಾಬ್ದಾರಿಯುತವಾಗಿ ವರ್ತಿಸಿ ದೇಶವನ್ನು ಆರ್ಥಿಕ ಅತಂತ್ರ ಸ್ಥಿತಿಗೆ ತಂದಿರುವ ಕಾರ್ಪೊರೇಷನ್ ಗಳ ಮಾಲೀಕರು, ಸಿ ಇ ಒ, ದಲ್ಲಾಳಿಗಳನ್ನು ಕ್ರಿಮಿನಲ್ ವಿಚಾರಣೆಗೆ ಒಳಪಡಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಪಟ್ಟು.
 
೨) ಈಗಿರುವ ಕಾನೂನ ಪ್ರಕಾರ ಅಮೆರಿಕಾದ ಕಾರ್ಪೊರೇಷನ್ಗಳು ಎಷ್ಟು ಬೇಕಾದರೂ ಹಣ ಚೆಲ್ಲಿ ಅಮೆರಿಕಾದ ಚುನಾವಣೆಗಳ ದಿಕ್ಕು ಬದಲಿಸಬಹುದು, ಸ್ಪರ್ಧಿಯೊಬ್ಬನನ್ನು ಬೆಂಬಲಿಸಬಹುದು, ಅಥವಾ ಜನಪ್ರಿಯ ಅಭ್ಯರ್ಥಿಗೆ ವಿರುದ್ಧ ಖಾಸಗೀ ಪ್ರತಿಸ್ಪರ್ಧಿಯೊಬ್ಬನನ್ನು ನಿಲ್ಲಿಸಬಹುದು. ಕಾರ್ಪೊರೇಷನ್ ಅಥವಾ ಖಾಸಗೀ ಬಂಡವಾಳಶಾಹಿಗಳಿಗೆ ಪ್ರಜಾಪ್ರಭುತ್ವದ ಚಟುವಟಿಕೆಗಳಲ್ಲಿ ಈ ಪ್ರಮಾಣದ ಹಿಡಿತ ಇರದಂತೆ ಖಡಾಖಂಡಿತವಾಗಿ ನೋಡಿಕೊಳ್ಳುವಂತಹ ಕಠಿಣ ಕಾನೂನಿನ ರಚನೆಗಾಗಿ ಒತ್ತಾಯ.
 
೩) ಈಗ ಮುಖ್ಯವಾಗಿ ಬಂಡವಾಳಶಾಹೀ ಆಸಕ್ತಿಯ ಹಿಡಿತದಲ್ಲಿರುವ ಅಮೆರಿಕನ್ ಮಾಧ್ಯಮಗಳನ್ನು ನಿಯಂತ್ರಿಸುವುದು, ಅಮೆರಿಕಾದ ಅಚ್ಚರಿಯ ಜನಪರಾಲೋಚನೆಯ ಸಿರಿವಂತ ವಾರನ್ ಬಫೆಟ್ ಸೂಚಿಸಿರುವಂತೆ ಕಾರ್ಪೊರೇಷನ್ ಗಳಿಗೆ, ಸಿರಿವಂತರುಗಳಿಗೆ ಹೆಚ್ಚಿನ ತೆರಿಗೆಯನ್ನು ವಿಧಿಸುವುದು ಮತ್ತು ಸಿರಿವಂತರು, ಕಾರ್ಪೊರೇಷನ್ ಗಳು ಬೇರೆ ದೇಶಗಳಲ್ಲಿ ತಮ್ಮ ಸ್ವತ್ತು, ಆಸ್ತಿಯನ್ನು ಅಡಗಿಸಿ ತೆರಿಗೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವ ಕಾನೂನನ್ನು ತಕ್ಷಣವೇ ರೂಪಿಸುವುದು.
 
೪) ಜನ ಸಾಮಾನ್ಯರ ಹೂಡಿಕೆದಾರರ ಹಣ ಆಟಿಕೆಯಾಗದಂತೆ ವಾಲ್ ಸ್ಟ್ರ‍ೀಟ್ ನ ಚಟುವಟಿಕೆಗಳ ಮೇಲೆ ಸದಾ ಹದ್ದುಗಣ್ಣಿಟ್ಟು, ಸೂಕ್ತ ರೆಗ್ಯುಲೇಷನ್ ಗಳಿಂದ ಅದನ್ನು ಸರ್ಕಾರದ ನಿಯಂತಣದಲ್ಲಿಟ್ಟುಕೊಳ್ಳುವುದು.
 
೫) ಸಂಸತ್ತಿನ ಲಾಬಿಕೋರರನ್ನು ನಿಯಂತ್ರಣದಲ್ಲಿಟ್ಟು ಅವರು ಹಣದ ಪ್ರಭಾವದಿಂದ ಸರ್ಕಾರದ ಪಾಲಿಸಿಯನ್ನು ಬದಲಾಯಿಸುವಲ್ಲಿ ಅಥವಾ ತಿರುಚುವಲ್ಲಿ ಯಶಸ್ವಿಯಾಗದಂತೆ, ಭಾಗಿಯಾಗದಂತೆ ನಿಯಂತ್ರಿಸಲು ಕಾನೂನಿನ ಒತ್ತಾಯ.
 
೫) ಪ್ರತಿಷ್ಟಿತ ಖಾಸಗೀ ಕಾರ್ಪೊರೇಷನ್-ಕಂಪನಿಗಳಲ್ಲಿ ಕೆಲಸಕ್ಕಿದ್ದು ಅಲ್ಲಿಂದ ಉನ್ನತ ಸರ್ಕಾರೀ ಹುದ್ದೆಗಳನ್ನು ಆಕ್ರಮಿಸಿ, ಖಾಸಗಿಯವರಿಗೆ ಬೇಕಾಗುವ ಕೆಲಸ ಮಾಡಿಕೊಡುವ ನೌಕರರನ್ನು ಕಾನೂನು ಬಧ್ಧವಾಗಿ ತಡೆಯಲಾಗುವ ಅಗತ್ಯ, ಹಾಗೇ ಖಾಸಗೀ ಕಂಪನಿಗಳ ಉದ್ಯೋಗಿಗಳಾಗಿ ಅಮೆರಿಕಾದ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ಪಟ್ಟಕ್ಕೆ ಬರುವವರನ್ನು ತಡೆಯಲು ತುರ್ತು ಕಾನೂನಿನ ಅತ್ಯಗತ್ಯ.
 
೬) ಈಗಿರುವ "ಕಾರ್ಪೊರೇಷನ್ಗಳೂ ಜನರೇ...ಅವರಿಗೂ ಸ್ವಾತಂತ್ರ್ಯ, ಕಾನೂನಿನ ಅಡಚಣೆಯಿಲ್ಲದೆ ಆಸ್ತಿ ಮಾಡಿಕೊಳ್ಳುವ ಹಕ್ಕು ಮತ್ತು ಇಚ್ಚೆಯಿಂದ ಬದುಕುವ ಹಕ್ಕಿದೆ’ ಎಂದಿರುವ ಸಂವಿಧಾನದ ತಿದ್ದುಪಡ್ಡಿಯೊಂದನ್ನು ಮರುತಿದ್ದುಪಡಿ ಮಾಡಿ ಕಾರ್ಪೊರೇಷನ್ ಗಳನ್ನು ವ್ಯಕ್ತಿ ಎಂದು ಭಾವಿಸದೇ ಅದಕ್ಕೆ ಪ್ರಜೆಯೊಬ್ಬನಿಗೆ ಕೊಡುವ ಎಲ್ಲ ಸ್ವಾತಂತ್ರವನ್ನೂ ಕೊಡದೆ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂಬ ಒತ್ತಾಯ.
 
ಒಬಾಮಾರ ಪಾತ್ರ
 
ಆಕ್ಯುಪೈ ವಾಲ್ ಸ್ಟ್ರೀಟ್ ಎಂಬ ಜನ ಹೋರಾಟ ಅಮೆರಿಕಾ ಎಂಬ ದೇಶದಲ್ಲಿ ಇವತ್ತು ತಿಂಗಳ ಮುಖ ಕಾಣಲು ಸಾಧ್ಯವಾಗಿರುವುದು ಬರಾಕ್ ಒಬಾಮಾ ಅವರು ಅಧ್ಯಕ್ಷರಾಗಿರುವುದರಿಂದ ಮಾತ್ರ. ಎರಡನೇ ಅವಧಿಯಲ್ಲಿ ತಾನು ಅಧ್ಯಕ್ಷನಾಗುತ್ತೇನೋ ಇಲ್ಲವೋ ಎಂಬ ಬಗ್ಗೆ ಒಬಾಮಾರಿಗೆ ಅತ್ಯಂತ ಕಾಳಜಿ ಇದ್ದಂತಿಲ್ಲ. ಅವರು ಈ ಸಂಚಲನವನ್ನು ಅಚ್ಚರಿಯಿಂದ, ಬೆರಗಿನಿಂದ ಮತ್ತು ಅಷ್ಟೇ ಹುಷಾರಿನಿಂದ ನೋಡುತ್ತಿರುವಂತಿದೆ. ಒಬಾಮಾರಲ್ಲದೆ ಜಾರ್ಜ್ ಬುಶ್, ಡಿಕ್ ಚೇನಿ ಯಂತಹ ಬೇರೆ ಯಾರಾದರೂ ಅಮೆರಿಕಾದ ಅಧ್ಯಕ್ಷರಾಗಿದಿದ್ದರೆ ಈ ಹೋರಾಟ ರೂಪುಗೊಂಡ ದಿನವೇ ಹೋರಾಟಗಾರರನ್ನೆಲ್ಲಾ ಎಲ್ಲರೂ ’ವೆಪೆನ್ಸ್ ಆಫ್ ಮಾಸ್ ಡಿಸ್ಟ್ರಕ್ಷನ್’ ಎಂತಲೋ, ಗಡಾಫಿ ಅಥವಾ ಇರಾಕಿನಿಂದ ಅಮೆರಿಕದಲ್ಲಿ ಅಶಾಂತಿ ಎಬ್ಬಿಸಲು ಬಂದ ಬಿಳಿಯ ಗೂಢಚಾರರು ಎಂತಲೋ ಸುದ್ದಿ ಎಬ್ಬಿಸಿ ಎಲ್ಲರನ್ನೂ ಯಾವುದೋ ದ್ವೀಪದ ಜೈಲುಗಳಿಗೆ ತುಂಬಿಸಿಬಿಡುತ್ತಿದ್ದರು. ಆದರೆ ಒಬಾಮಾ ಜನಪರ ಕಾಳಜಿಯ ವ್ಯಕ್ತಿ, ಯುದ್ಧ ವಿರೋಧಿ. ಖಾಸಗಿಯವರ, ಕಾರ್ಪೋರೇಷನ್ ಗಳ ಹಣದ ದಾಹಕ್ಕೆ ಇದು ಅಮೆರಿಕನ್ ಪ್ರಜೆ ತೋರಿಸುತ್ತಿರುವ ವಿರೋಧ ಮತ್ತು ತಿರಸ್ಕಾರ ಎಂದು ಒಬಾಮಾ ಹೇಳಿಕೆ ಕೊಟ್ಟು ಈ ಹೋರಾಟ ಜನ ಮತ್ತು ಸರ್ಕಾರದ ನಡುವೆ ಅಲ್ಲ, ಜನ ಮತ್ತು ಬಂಡವಾಳಶಾಹಿಯ ವಿರುದ್ಧ ಎಂದು ತಾವು ತೆರೆಮರೆಯಲ್ಲಿ ನಿಂತಿದ್ದಾರೆ. ಸರ್ಕಾರ ಮಾಡಲು ಸಾಧ್ಯವಾಗದೇ ಇರುವ ಕೆಲಸವನ್ನು ಜನರು ಮಾಡ ಹೊರಟಿರುವುದನ್ನು ಬೆಂಬಲಿಸಿ ಸ್ವಾಗತಿಸಿದ್ದಾರೆ. ಜನ ವಾಲ್ ಸ್ಟ್ರ‍ೀಟಿನ ವಿರುದ್ಧ, ಬಂದವಾಳಶಾಹಿಗಳ ವಿರುದ್ಧ ಹೆಚ್ಚು ಸಂಘಟಿತರಾದರೆ ಮುಂದಿನ ಚುನಾವಣೆಯಲ್ಲಿ ಒಬಾಮರಿಗೆ ಅನುಕೂಲ.
 
ರಿಪಬ್ಲಿಕನ್ನರ ಕಷ್ಟ
 
ಈಗ ಆಕ್ಯುಪೈ ಅಮೆರಿಕಾ ಚಳುವಳಿಯನ್ನು ರಿಪಬ್ಲಿಕನ್ ಪಕ್ಷ ವೈಯುಕ್ತಿಕವಾಗಿ ತೆಗೆದುಕೊಂಡಂತಿದೆ. ಬೀದಿಗಿಳಿದು ತಮ್ಮ ಬದುಕು, ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ೯೯% ಅಮೆರಿಕನ್ನರು/ಡೆಮಾಕ್ರೆಟ್ ಗಳು ಮತ್ತು ಉಳಿದ ೧% ಸಿರಿವಂತರು/ರಿಪಬ್ಲಿಕನ್ನರು ಎಂಬರ್ಥದ ವಿಭಾಗೀಯ ಸ್ಥಿತಿ ಈಗ ಅಮೆರಿಕಾದಲ್ಲಿ ಕಾಣಬರುತ್ತಿದೆ. ರಿಪಬ್ಲಿಕನ್ ರಾಜಕಾರಣಿಗಳು ಈ ಚಳುವಳಿ ಅಮೆರಿಕಾವನ್ನು ಕಮ್ಯುನಿಸ್ಟ್ ಅನ್ನಾಗಿ ಪರಿವರ್ತಿಸಬಹುದು ಎಂದೆಲ್ಲಾ ಹುಚ್ಚು ಹೇಳಿಕೆ ಕೊಡುತ್ತಿದ್ದಾರೆ. ಹುಷಾರಾಗಿರಿ! ಬೀದಿಗಿಳಿದಿರುವ ದಂಗೆ ಕೋರರು ನಮ್ಮಗಳ ಮನೆಗೆ ನುಗ್ಗಿ ನಮ್ಮ ಸಂಪತ್ತನ್ನು ಲೂಟಿ ಮಾಡಿಕೊಂಡು ನಮ್ಮನ್ನೆಲ್ಲಾ ಕೊಂದು ಹಾಕಲಿದ್ದಾರೆ’ ಎಂದು ಗ್ಲೆನ್ ಬೆಕ್ ಎಂಬ ರಿಪಬ್ಲಿಕನ್ ಮಾಧ್ಯಮದವ ಗೋಳಾಡಿಕೊಂಡಿದ್ದಾರೆ. ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಯಾಗಿರುವ ಹರ್ಮನ್ ಕೇನ್ ಎಂಬಾತ ಚಳುವಳಿ ಮಾಡೋದು ಬಿಟ್ಟು ’ಹೋಗಿ ಮೊದಲು ಕೆಲಸ ಹುಡುಕಿಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ. ಕೆಲಸ ಸಿಗುತ್ತಿದ್ದಿದ್ದರೆ ಜನ ಚಳುವಳಿ ಏಕೆ ಮಾಡುತ್ತಿದ್ದರು ಎನ್ನುವುದನ್ನೂ ಯೋಚಿಸಲಾಗದ ಪಾರ್ಟಿ ಈತ.ಚಳುವಳಿ ಮಾಡುತ್ತಿರುವವರ ಕುರಿತು ಜನರಿಗೆ ಭಯ, ಆತಂಕ ಬರುವಂತೆ, ಚಳುವಳಿಕಾರರನ್ನು ದಂಗೆ ಕೋರರಂತೆ, ಹಿಂಸಾತ್ಮಕವೆನ್ನುವಂತೆ ಚಿತ್ರಿಸುವ ಪ್ರಯತ್ನಗಳನ್ನು ರಿಪಬ್ಲಿಕನ್ನರು ಮಾಡತೊಡಗಿದ್ದಾರೆ. ದಿನೇ ದಿನೇ ಹೆಚ್ಚುತ್ತಿರುವ ಚಳುವಳಿಯ ಗಾತ್ರ ಮತ್ತು ಗಂಭೀರತೆಗೆ ರಿಪಬ್ಲಿಕನ್ನರು ಹೆದರಿರುವುದೂ ಮತ್ತು ಚಳುವಳಿಯನ್ನು ಒಡೆಯಲು ಮಾಡುತ್ತಿರುವ ಪ್ರಯತ್ನವೂ ಇದಾಗಿದೆ ಎನ್ನಬಹುದು.
 
’ಆಕ್ಯುಪೈ ವಾಲ್ ಸ್ಟ್ರೀಟ್’ ಚಳುವಳಿಗೆ ಯಾವುದೋ ಶ್ರೀಮಂತ ಉದ್ಯಮಿಗಳ ಹಣ ಬೆಂಬಲವಿದೆ ಆ ಕಾರಣಕ್ಕಾಗಿಯೇ ಈ ಹೋರಾಟ ಕೂಡಾ ಒಂದು ರಾಜಕೀಯ ಪ್ರೇರಿತ ಹೋರಾಟ ಎಂದು ಕೆಲವು ಬಲಪಂಥೀಯ ಮಾಧ್ಯಮಗಳು ಸಾಧಿಸಹೊರಟಿವೆ. ಈ ಜನಾಂದೋಲನವೂ ರಾಜಕೀಯ ಎಂದು ಸ್ವಲ್ಪ ಮಟ್ಟಿಗಾದರೂ ಗುಲ್ಲು ಮಾಡಿದರೆ ಮತ್ತಷ್ಟು ಜನ ಸೇರುವುದನ್ನು ತಡೆಯಬಹುದು, ಚಳುವಳಿಯನ್ನು ಒಡೆಯಬಹುದು ಎನ್ನುವ ಹುನ್ನಾರ ಅವರದ್ದಿರಬಹುದು. ’ಆಕ್ಯುಪೈ ವಾಲ್ ಸ್ಟ್ರ‍ೀಟ್’ ಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ ನೂರಾರು ಮಂದಿ ದಿನದಿನಕ್ಕೂ ತಮಗಾಗುವ ದೇಣಿಗೆ ಕೊಡುತ್ತಿದ್ದಾರೆ. ನ್ಯೂಯಾರ್ಕಿನಲ್ಲಿ ಕಲೆತಿರುವ ಸಾವಿರಾರು ಮಂದಿಗೆ ಊಟ-ನೀರಿನ ವ್ಯವಸ್ತೆಗೆ ಅನುಕೂಲ ಮಾಡಲು ರೈತರು ತಾವು ಬೆಳೆದ ದವಸ, ಹಣ್ಣು, ತರಕಾರಿಗಳನ್ನು ನ್ಯೂಯಾರ್ಕಿಗೆ ಕಳಿಸಿಕೊಡುತ್ತಿದ್ದಾರೆ. ಸಣ್ಣ ಪುಟ್ಟ ಬೇಕರಿಯ ಒಡೆಯರು ಬ್ರೆಡ್-ಬನ್ನುಗಳನ್ನು ಕಳಿಸಿಕೊಡುತ್ತಿದ್ದಾರೆ. ಬಟ್ಟೆ, ಪುಸ್ತಕ, ನೀರು, ಛತ್ರಿ, ಹಾಸಲು-ಹೊದೆಯಲು, ಟೆಂಟುಗಳು, ಸ್ವೆಟರ್ಗಳು, ಸಾಕ್ಸ್ ಗಳು ಎಲ್ಲವೂ ಜನರಿಂದ ದೇಣಿಗೆಯಾಗಿ ಬರುತ್ತಿವೆ ಮತ್ತು ಹೋರಾಟಗಾರರು ಸ್ವತಃ ಒಟ್ಟು ಮಾಡುತ್ತಿದ್ದಾರೆ. ತಮಗೆ ಬರುತ್ತಿರುವ ದವಸ, ತರಕಾರಿಗಳನ್ನು ಅಡಿಗೆ ಮಾಡಿಕೊಳ್ಳಲು ಪಾರ್ಕಿನ ಒಂದು ಭಾಗದಲ್ಲೇ ಅಡಿಗೆ ಮಾಡುವ ಸ್ಥಳ ಮಾಡಿಕೊಳ್ಳಲಾಗಿದೆ. ದೇಣಿಗೆಯಾಗಿ ಬಂದ ಸಣ್ಣ ಪುಟ್ಟ ಪದಾರ್ಥಗಳನ್ನು ಅಲ್ಲಿಯೇ ಕಡಿಮೆ ಬೆಲೆಗೆ ಮಾರಿ ಆ ಹಣವನ್ನು ಚಳುವಳಿಗಾರರ ಮೂಲಭೂತ ಖರ್ಚುಗಳಿಗೆ (ಶೌಚಾಲಯ, ಪಾರ್ಕಿನ ಸ್ವಚ್ಚತೆ ಇತ್ಯಾದಿ) ಬಳಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ದಿನಕ್ಕೂ ಹನಿ ಹನಿ ಸೇರುತ್ತಿದೆ. ಈಗಾಗಲೇ ಅರ್ಧ ಮಿಲಿಯನ್ ಅಷ್ಟು ಹಣ ಒಟ್ಟಾಗಿದೆ. ಚಳುವಳಿಗಾರರು ಹಣವನ್ನು ಪೋಲು ಮಾಡದೆ ದೂರದೃಷ್ಟಿಯಿಂದ ಬಳಸಿಕೊಳ್ಳುತ್ತಿದ್ದಾರೆಂಬ ನಂಬಿಕೆಗೆ ಪಾತ್ರರಾಗುತ್ತಿದ್ದಾರೆ.
 
ಎತ್ತ ಸಾಗಲಿದೆ?
 
ನ್ಯೂಯಾರ್ಕಿನಲ್ಲಿ ಕಲೆತಿರುವ ಜನ ವಾರಗಳ ಹಿಂದೆಯಷ್ಟೆ ಮೀಡಿಯಾ ದೊರೆ ರೂಪರ್ಟ್ ಮರ್ಡೋಕ್, ಜೆಪಿ ಮಾರ್ಗನ್ ಕಂಪನಿಯ ಜೇಮಿ ಡಿಮಾನ್ ಮತ್ತಿತರ ಸಿ ಇ ಒ ಗಳ ಐಷಾರಾಮೀ ಮನೆಗಳ ಮುಂದೆಯೆಲ್ಲಾ ಧರಣಿ ಮಾಡಿ ಬಂದಿದ್ದಾರೆ. ಅದೇ ಮರ್ಡೋಕ್ ನ ಚಾನೆಲ್, ಪತ್ರಿಕೆಗಳಲ್ಲಿ ಬಿತ್ತರವಾಗುವ ಸುದ್ದಿ, ಕಥೆ, ಧಾರಾವಾಹಿಗಳಿಗೇ ತಲೆ ತೆರೆದುಕೊಂಡಿದ್ದಾರೆ. ಮೋನ್ಸಾಂಟೋನಂತಹ ಕಾರ್ಪೊರೇಷನ್ ಗಳು ಉತ್ಪಾದಿಸುತ್ತಿರುವ ಪ್ರಯೋಗಶಾಲೆಯ ತಿಂಡಿ-ಊಟಗಳಿಗೆ ಅವರು ಮಾರು ಹೋಗಿರುವುದು ಮರೆತಂತಿದ್ದಾರೆ. ಬಂಡವಾಳಶಾಹಿಗಳು ಅವರ ಇಡೀ ಉಸಿರನ್ನು ಆವರಿಸಿದ್ದು ಈ ಚಳುವಳಿ ಪ್ರತಿ ಮನೆಯ ಅಡಿಗೆಮನೆ ಅಥವಾ ಟಿವಿ ಕೋಣೆಗಳಿಂದು ಶುರುವಾಗಬೇಕೆಂಬ ಸತ್ಯ ಇನ್ನೂ ವಿಷದವಾಗಬೇಕಿದೆ. ಈಗ ಈ ಚಳುವಳಿ ನಿಖರ, ಪ್ರಖರ ರೂಪ ತಳೆಯಬೇಕಿದ್ದಲ್ಲಿ ಅಮೆರಿಕಾಗೊಬ್ಬ ಗಾಂಧಿ ಬೇಕು. ’ಸ್ವದೇಶಿ ಮಾತ್ರ!’ ವಿದೇಶದಿಂದ ಆಮದಾದದ್ದು, ತಯಾರಾದದ್ದನ್ನು ಬಳಸುವುದಿಲ್ಲ ಎಂದು ಗಾಂಧಿ ಭಾರತಕ್ಕೆ ಸ್ವಾತಂತ್ರ ಚಳುವಳಿ ರೂಪಿಸಿಕೊಟ್ಟಂತೆ, ಕಾರ್ಪೊರೇಷನ್ ಗಳಿಂದ ಹುಟ್ಟಿದ್ದನ್ನು ನಾನು ಬಳಸುವುದಿಲ್ಲ, ಪಾಲಿಸುವುದಿಲ್ಲ ಎಂದು ಪ್ರತಿಯೊಬ್ಬ ಅಮೆರಿಕನ್ ಪ್ರಜೆಯೂ ಹಠ ತೊಟ್ಟರೆ ಈ ಹೋರಾಟ ಖಂಡಿತಾ ಬಂಡವಾಳಶಾಹಿಗಳನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಬಲ್ಲದು.
 
ಚಳುವಳಿ ಶುರುವಾಗಿ ಈಗಷ್ಟೇ ಒಂದುವರೆ ತಿಂಗಳಾಗಿದೆ. ಚಳುವಳಿಕಾರರಲ್ಲಿ ೧೦೦ ಕ್ಕೂ ಹೆಚ್ಚು ಮಂದಿಯನ್ನು ಖೈದು ಮಾಡಲಾಗಿದೆ. ಈಗಾಗಲೇ ಅಮೆರಿಕಾದಲ್ಲಿ ಎಲುಬು ಕರಗಿಸುವ ಚಳಿ, ಹಿಮದ ಸಿಂಚನ ಶುರುವಾಗಿದೆ. ೧೩೫ ವರ್ಷಗಳ ನಂತರ ನ್ಯೂಯಾರ್ಕ್ ನಲ್ಲಿ ಈ ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿಯೇ ಹಿಮಪಾತವಾಗಿದೆ. ಆದರೂ ಚಳುವಳಿಗಾರರು ಹೆದರಿದಂತಿಲ್ಲ. ಜ಼ುಕೋಟಿ ಪಾರ್ಕಿನಲ್ಲಿ ಟೆಂಟುಗಳನ್ನು ಹಾಕಿಕೊಂಡು ಕುಳಿತೇ ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ. ಮುಂಬರಲಿರುವ ಕೊರೆವ ಚಳಿಗಾಲ, ಹಿಮಪಾತದಂತಹ ಅಂಶಗಳು ಆಕ್ಯುಪೈ ವಾಲ್ಸ್ಟ್ರ‍ೀಟ್ ನ ಮುಂದಿನ ಹೆಜ್ಜೆಗಳನ್ನು ಎಷ್ಟರ ಮಟ್ಟಿಗೆ ಬದಲಾಯಿಸಬಹುದು ನೋಡಬೇಕಿದೆ. ಆದರೂ ಅಮೆರಿಕಾದ ಇತಿಹಾಸದಲ್ಲಿ ಇದುವರೆಗೆ ನಡೆದಿರುವ ಯಾವ ಪ್ರಮುಖ ಜನಾಂದೋಲನವೂ ಸೋತು ತಣ್ಣಗಾಗಿಲ್ಲ. ಒಂದಿಲ್ಲೊಂದು ಬಗೆಯ ಸಂವಿಧಾನಾತ್ಮಕ ಬದಲಾವಣೆಯ ಹೊಸ ಅಲೆಗಳನ್ನು ತಂದೇ ಇದೆ. ಮಹಿಳೆಯರ ಹಕ್ಕಿಗಾಗಿನ ಹೋರಾಟ, ಆಫ್ರೋ ಅಮೆರಿಕನ್ನರ ಹಕ್ಕಿಗಾಗಿನ ಹೋರಾಟ ಇಲ್ಲಿ ನೆನಪಿಸಿಕೊಳ್ಳಬಹುದಾದ ಕೆಲವು ಉದಾಹರಣೆಗಳು. ಅಮೆರಿಕಾದಲ್ಲಾಗುವ ಈ ಬದಲಾವಣೆಗಳು ಪ್ರಪಂಚದ ಬೇರೆ ದೇಶಗಳಲ್ಲೂ ಒಂದಿಲ್ಲೊಂದು ರೀತಿಯ ಬದಲಾವಣೆಗೆ ಕಾರಣವಾಗಿವೆ. ವಿಶ್ವಕ್ಕೆ ಬದಲಾವಣೆ (ಒಳ್ಳೆಯದಾಗಲೀ ಕೆಟ್ಟದಾಗಲೀ) ಬೇಕೆಂದರೆ ಅದು ಅಮೆರಿಕಾದಲ್ಲೇ ಶುರುವಾಗಬೇಕಾ ಎಂಬ ಪ್ರಶ್ನೆ ಬರಬಹುದು. ಆದರೆ ಆಗಿರುವುದೇ ಹಾಗೆ. ವಿಪರ್ಯಾಸವೆಂಬಂತೆ, ಬಂಡವಾಳಶಾಹಿಗಳಾಗಲೀ, ವಿಜ್ನಾನದ ಜೊತೆ ಆಟ-ಚೆಲ್ಲಾಟ ಆಡುವ ಪರಿಯಾಗಲೀ, ಅಣುಬಾಂಬ್ ಬಳಕೆಯಾಗಲೀ, ಜಾಗತೀಕರಣದ ಹೆಜ್ಜೆಗಳಾಗಲೀ, ಐತಿಹಾಸಿಕವಾಗಿ ವಿಶ್ವದ ಅತಿಮುಖ್ಯ ಬದಲಾವಣೆಗಳ ಹರಿಕಾರನ ಬಿರುದು ಅಮೆರಿಕಾ ಪಾಲಿಗೆ ಸಲ್ಲುತ್ತದೆ.
 
ಈಗಾಗಲೇ ಅಕ್ಟೋಬರ್ ೧೫ರಿಂದ ’ಆಕ್ಯುಪೈ ವಾಲ್ ಸ್ಟ್ರೀಟ್’ ನಂತೆಯೇ ಆಯಾ ದೇಶಗಳ ಪ್ರಮುಖ ವಾಣಿಜ್ಯ ಕೇಂದ್ರಗಳನ್ನು ಮುತ್ತಿಗೆ ಹಾಕುವ ಯೋಜನೆ ವಿಶ್ವದ ೮೦ ಕ್ಕೂ ಹೆಚ್ಚು ದೇಶಗಳಲ್ಲಿ ಚಾಲನೆಗೊಂಡಿದೆ. ಇಟಲಿಯ ಮಂದಿ ಚಳುವಳಿಯನ್ನು ಹಿಂಸಾರೂಪಕ್ಕೂ ಕೊಂಡು ಹೋಗಿದ್ದಾರೆ. ಪ್ರಜಾಪ್ರಭುತ್ವವನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿರುವ, ಜನ ಸಾಮಾನ್ಯರನ್ನು ದಿಕ್ಕುತಪ್ಪಿಸುತ್ತಿರುವ ಬಂಡವಾಳಶಾಹಿಗಳ ವಿರುದ್ಧದ ವಿಶ್ವವ್ಯಾಪೀ ಹೋರಾಟವಾಗಿ ಇದು ರೂಪುಗೊಳ್ಳಲಿದೆ. ಅದರ ಅತ್ಯಗತ್ಯ ಈಗಿದೆ. ಈ ಚಳುವಳಿ ತರುವ ಬದಲಾವಣೆ ತಕ್ಷಣದ್ದಲ್ಲದಿರಬಹುದು. ಆದರೆ ಜನ ಅರಿತಿದ್ದಾರೆ, ಒಗ್ಗೂಡಿದ್ದಾರೆ, ವಿರೋಧಿಸುತ್ತಿದ್ದಾರೆ, ರಾಜಕಾರಣಿಗಳನ್ನು ಆಯ್ಕೆ ಮಾಡುವಾಗ, ಕಂಪನಿಗಳ ಉತ್ಪನ್ನಗಳನ್ನು ಖರೀದಿ ಮಾಡುವಾಗ, ಹುಟ್ಟಿರುವುದೇ ಖರೀದಿ ಮಾಡಲು ಎಂಬ ಮನಸ್ಥಿತಿಯಿಂದ ಸಂಪೂರ್ಣ ಹೊರಬರಲು ಈ ಅರಿವು ಸಹಾಯ ಮಾಡುವಂತಾದರೆ...ಅದೇ ಗೆಲುವಿನ ಸೂಚಕವಲ್ಲವೇ?
 

 

 


  
 
 
 
 
Copyright © 2011 Neemgrove Media
All Rights Reserved