ವಾಲ್ ಸ್ಟ್ರೀಟ್ ಗೆ ಅಡವಿಟ್ಟುಕೊಂಡವನ ಒಂದು ಪುಟ

ನವೀನ್ ಪಿ ದಾಸ್

 
ಓ ಹಂಸಿನೀ ಮೇರಿ ಹಂಸಿನೀ...
ಕಹಾ ಉಡ್ ಚಲೀ...
ಮೇರೆ ಅರ್ಮಾನೋಂಕೆ...
ಪಂಖ್ ಲಗಾಕೇ...

ನನ್ನಷ್ಟಕ್ಕೆ ಹಮ್ ಮಾಡುತ್ತಾ ಅಪಾರ್ಟ್ಮೆಂಟಿನ ಕಿಟಕಿಯಿಂದ ಕೆಳಗೆ ನೋಡುತ್ತಿದ್ದೆ. ಹೊರಗೆ ಸಣ್ಣ ಜಿಟಿಜಿಟಿ ಮಳೆ. ಇವತ್ತು ಭಾನುವಾರ. ಹೊರಗೆ ಹೋಗುವ ಪ್ಲಾನ್ ಇತ್ತು. ಆದರೆ ವೆದರ್ ಗೋಳಾಡುತ್ತಿತ್ತು. ಹಿಂದೆಯಿಂದ ಮೆಲ್ಲಗೆ ಬೆನ್ನು ತಟ್ಟಿ ’ಯಾರೋ ಅದೂ ನಿನ್ನ ಹೊಸಾ ಹಂಸಿನೀ...ನನ್ನನ್ನಾಗ್ಲೇ ಸೆಕೆಂಡ್ ಸೀಟಿಗೆ ಹಾಕಿದ್ಯಾ...’ ಹೆಂಡತಿ ಸಾಫ್ಟ್ ವಾಯ್ಸ್ ನಲ್ಲಿ ಕೇಳಿದಳು. ’ವಾಟ್ ಅ ಸಾಂಗ್ ಅಲ್ವಾ...ಕೇಳ್ತಾ ಇದ್ರೆ ಎಲ್ಲ ಮರೆತು ಹೋಗುವಂತೆ ಆಗುತ್ತೆ’ ಎಂದೆ. ’ಸಾಕು ಟಾಪಿಕ್ ಚೇಂಜ್ ಮಾಡಬೇಡ...ಎಲ್ಲಿ ತೋರಿಸು ನಿನ್ನ ಹಂಸಿನೀನಾ’ ಪಟ್ಟು ಹಿಡಿದಳು. ನನ್ನದು ನ್ಯೂಯಾರ್ಕಿನ ಅಪಾರ್ಟ್ಮೆಂಟ್. ಕಿಟಕಿಯಿಂದ ಹೊರಗೆ ನೋಡಿದರೆ ಮಾಡೆಲ್ ಗಳಂತಹ ಹುಡುಗಿಯರಿಂದ ಫ್ಯಾಷನಬಲ್ ಹಣ್ಣು ಹಣ್ಣು ಮುದುಕಿಯರೂ ಕಾಣಸಿಗುತ್ತಾರೆ. ನನ್ನ ಅದೃಷ್ಟಕ್ಕೆ ಯಾರೋ ಅಜ್ಜಿ ಅವರ ಅಳಿಲಿನ ಥರದ ನಾಯಿ ಮರಿ ಹಿಡಿದುಕೊಂಡು ರೋಡ್ ಕ್ರಾಸ್ ಮಾಡುತ್ತಿದ್ದರು. ತೋರಿಸಿದೆ. ’ಅಲ್ಲಿ ನೋಡು..ಎಷ್ಟು ಹಾಡಿದರೂ ಕೇಳಿಸಿಕೊಳ್ಳದೇ ನನ್ನ ಹಾರ್ಟ್ನ ಒಂದು ಸೆಕೆಂಡೂ ನೋಡದೆ ಹೋಗೇ ಬಿಡ್ತಾ ಇದ್ದಾಳೆ..’ ಅಂತ ತೋರಿಸಿದೆ. ನಿಧಾನಕ್ಕೆ ರಸ್ತೆ ದಾಟಿ ವಾಕ್ ವೇನಲ್ಲಿ ನಡೆಯುತ್ತಿದ್ದ ನನ್ನ ಹಂಸಿನಿ ಅಜ್ಜಿಯ ಪುಟಾಣಿ ಆಕಾರ, ಅವರ ಕಂಕುಳಲ್ಲಿದ್ದ ನಾಯಿಯನ್ನು ನೋಡಿ ಇಬ್ಬರೂ ಬೆಳಗಿನ ಡೋಸ್ ತೀರುವಷ್ಟು ನಗಾಡಿಕೊಂಡೆವು.

 

’ಇವತ್ತು ಏನು ಮಾಡಣ? ನನಗಂತೂ ಹೊರಗೆ ಹೋಗಕೇ ಮೂಡಿಲ್ಲ’ ಅವಳಿಗೆ ಸಣ್ಣಗೆ ಸುರಿಯುವ ಮಳೆ ಕಂಡರೆ ಆಗಲ್ಲ. ನಾನು ಯೋಚಿಸಿದೆ. ನನ್ನ ಜೊತೆ ಅವಳು ಬರಲ್ಲ ಅಂದರೆ ನನಗೆ ಒಂದು ಜಾಗಕ್ಕೆ ಹೋಗಿ ಬರುವುದಿತ್ತು. ’ಹಾಗಾದ್ರೆ ನೀನು ಮನೇಲಿರು, ನನಗೆ ಸ್ವಲ್ಪ ಕೆಲ್ಸ ಇದೆ ಮುಗಿಸಿ ಬರ್ತೀನಿ’ ಅಂದೆ. ’ಇಂಪಾರ್ಟೆಂಟಾ? ಅಲ್ಲ ಅಂದ್ರೆ ಹೇಳು ಜ಼ಿಂದಗಿ ನ ಮಿಲೇ ದೊಬಾರಾ ಮೂವಿ ನೋಡಣ’ ಅಂದಳು. ’ಇಲ್ಲ, ನೀನು ಬರಲ್ಲ ಅಂದ್ರೆ ನಾನು ಹೋಗಿ ಒಂದು ಗಂಟೇಲಿ ವಾಪಸ್ ಬರ್ತಿನಿ.. ಆಮೇಲೆ ನೋಡಣ.’ ಅಂದೆ. ’ಎಲ್ಲಿಗೆ ಅಂತಾದ್ರೂ ಹೇಳ್ತಿಯಾ’ ಅಂದಾಗ ಎರಡು ಮೂರು ವಾರದಿಂದ ನನ್ನ ಮನಸ್ಸಿನಲ್ಲಿ ಮೊಳೆತಿದ್ದ ಆಸೆಯನ್ನು ಹೇಳೇಬಿಡಲಾ ಅನ್ನಿಸಿತು. ’ಜುಕೋಟಿ ಪಾರ್ಕ್ ಗೆ’ ಅಂದೆ. ’ವಾಟ್! ಅಲ್ಲಿ ಅಷ್ಟು ಜನ ಇದ್ದಾರೆ. ಪೊಲೀಸ್ ಇದ್ದಾರೆ, ನೀನು ಅಲ್ಲಿಗೆ ಹೋಗಿದ್ದು ಗೊತ್ತಾದ್ರೆ ನಿನ್ನ ಕಂಪನಿಯವರು ಕೆಲಸದಿಂದ ತೆಗೆದು ಬಿಟ್ರೆ??? ತಮಾಷೆ ಮಾಡ್ತಿಲ್ಲ ತಾನೆ?!’ ಅವಳು ತುಂಬಾ ಟೆನ್ಷನ್ ಪಾರ್ಟಿ. ನಾನು ಆಕ್ಯುಪೈ ವಾಲ್ ಸ್ಟ್ರೀಟ್ ಮೂವ್ಮೆಂಟ್ ಗೆ ಅಂತ ಜನ ಸೇರಿದ್ದನ್ನು ನೋಡಿ ಬರಲು ಪ್ಲಾನ್ ಮಾಡಿದ್ದು ಅವಳಿಗೆ ಗೊತ್ತಾಯಿತು.

 

ನಿಜ. ನಾನೂ ವಾಲ್ ಸ್ಟ್ರೀಟ್ ನಲ್ಲಿ ಕೆಲಸ ಮಾಡುವವನು. ಆದರೆ ನಾನು ಶ್ರೀಮಂತ ಅಲ್ಲ. ನನ್ನ ಓದು, ಸಾಮರ್ಥ್ಯದಿಂದ ಅಲ್ಲಿನ ಒಂದು ಒಳ್ಳೆಯ ಕಂಪನಿಯಲ್ಲಿ ಕೆಲಸಗಳಿಸಿದ್ದೆ. ನನ್ನ 'ಅಮೆರಿಕನ್ ಕನಸು' ಕಟ್ಟಿಕೊಳ್ಳಲು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆ. ನಾನು ಯಾರಿಗೂ ಮೋಸ ಮಾಡಿರಲಿಲ್ಲ, ಆದರೆ ಈ ಜನ ವಿರೋಧಿಸುತ್ತಿದ್ದ ಕ್ಯಾಪಿಟಲಿಸ್ಟಿಕ್ ಕಂಪನಿಯ ಒಂದು ಭಾಗವಾಗಿದ್ದೆ. ಆದರೂ ನಾನೂ ಅವರು ಹೇಳುತ್ತಿದ್ದ ೯೯%ನವನು. ನಾನೂ ಎಲ್ಲರಂತೆ ದೊಡ್ಡ ತೆರಿಗೆ ಕಟ್ಟುತ್ತಿದ್ದೆ. ನನ್ನ ಕಂಪನಿಯ ಸೀನಿಯರ್ಗಳು ತೆಗೆದುಕೊಳ್ಳುವ ಸಂಬಳ, ಬೋನಸ್ ಕೇಳಿ ಆಶ್ಚರ್ಯ ಹೊಟ್ಟೆಉರಿ ಪಡುತ್ತಿದ್ದೆ. ಜನ ವಾಲ್ ಸ್ಟ್ರೀಟ್ ಅನ್ನು ಆಕ್ಯುಪೈ ಮಾಡಲು ರೆಡಿಯಾಗಿದ್ದಾರೆ ಎಂದು ಸುದ್ದಿಯಾಗಿದ್ದಾಗ ’ಇವರಿಗೆ ತಲೆಸರಿಯಿಲ್ಲ’ ಎಂದುಕೊಂಡಿದ್ದೆ. ಆದರೆ ಇಡೀ ಅಮೆರಿಕಾ ಅವರ ಜೊತೆಗೆ ಸೇರಿದಾಗ ’ವಾವ್ ನಾನೂ ಒಂದು ಅಮೆರಿಕನ್ ರೆವಲ್ಯೂಷನ್ ಅನ್ನು ನೋಡುತ್ತಿದ್ದೇನೆ’ ಎನಿಸಿತ್ತು. ದಿನಾ ಕೆಲಸಕ್ಕೆ ಹೋಗಿ ಬರುವ ಟೈಟ್ ಶೆಡ್ಯೂಲ್ ನಲ್ಲಿ ಅಲ್ಲಿ ಸ್ಟ್ರೈಕ್ ಮಾಡುತ್ತಿದ್ದ ಜನರನ್ನು ಹತ್ತಿರದಿಂದ, ಸಮಾಧಾನವಾಗಿ ನೋಡಲಿಕ್ಕಾಗಿರಲಿಲ್ಲ. ಜೊತೆಗೆ ನಾನು ಅಲ್ಲಿ ಆರಾಮಕ್ಕೆ ಚಳುವಳಿ ನೋಡುತ್ತಾ ನಿಂತಿರುವುದು ನಮ್ಮ ಕಂಪನಿಯ ಯಾರಿಗಾದರೂ ಕಾಣಿಸಿ ಅವರಿಗೆ ಅನುಮಾನಗಳು ಬಂದರೆ ನನ್ನ ಕೆಲಸಕ್ಕೇ ಕುತ್ತು ಬಂದರೆ ಅನ್ನುವ ಭಯ!

ಇವತ್ತು ಭಾನುವಾರ, ಜಿಟಿಜಿಟಿ ಮಳೆ. ದೊಡ್ಡ ಕೋಟ್, ಹುಡ್ ಹಾಕಿಕೊಂಡು ಹೋಗಿ ನೋಡಿ ಬಂದೇ ಬಿಡೋಣ ಎನ್ನಿಸಿತ್ತು. ಅವಳಿಗೂ ಹೇಳಿ ಕನ್ವಿನ್ಸ್ ಮಾಡಿದೆ. ’ತುಂಬಾ ಹತ್ತಿರಕ್ಕೆ, ಫೋಟೋಗ್ರಾಫರ್ಸ್, ಪೊಲೀಸ್ ಅಥವಾ ಮಾರ್ಚಿಂಗ್ ಇರೋ ಕಡೆ ಹೋಗಬೇಡಾನೋ...ಪ್ಲೀಸ್...ಬೇಗ ಬಂದು ಬಿಡು...’ ಆಲ್ಮೋಸ್ಟ್ ಬೇಡಿಕೊಂಡಳು. ನಾನು ನನ್ನನ್ನು ಉದ್ದದ ಕೋಟ್ ಒಂದರಲ್ಲಿ ಕವರ್ ಮಾಡಿಕೊಂಡು ಹೊರಟೆ. ನಾನೇ ರೆವಲ್ಯೂಷನ್ ನಲ್ಲಿ ಇದ್ದಷ್ಟು ಥ್ರಿಲ್ ಆಗುತ್ತಿತ್ತು. ಅಕಸ್ಮಾತ್ ಯಾರಾದರೂ ನನ್ನನು ನೋಡಿ ನನ್ನ ಕೆಲಸಕ್ಕೆ ತೊಂದರೆಯಾದರೆ ಏನು ಮಾಡುವುದು ಅಂತಲೂ ಮನಸ್ಸು ಭಯಪಡುತ್ತಿತ್ತು. ಟ್ಯಾಕ್ಸಿ ಹಿಡಿದು ಹೊರಟೆ. ಪಾರ್ಕಿನಿಂದ ಸುಮಾರು ದೂರದಲ್ಲಿ ನಿಲ್ಲಿಸಿದೆ. ಅಲ್ಲೇ ಇದ್ದ ಎಟಿಎಮ್ ಗೆ ಹೋಗಿ ಸ್ವಲ್ಪ ದುಡ್ಡು ತೆಗೆದುಕೊಂಡೆ. ನನ್ನೊಳಗಿದ್ದ ಯುವ ರಕ್ತ ಗೈಡ್ ಮಾಡಲು ಸ್ಟಾರ್ಟ್ ಮಾಡಿತ್ತು. ಅಲ್ಲಿ ಇಲ್ಲಿ ಸಂಬಂಧ ಪಡದ ಸ್ಟ್ರೀಟ್ ಗಳನ್ನೆಲ್ಲಾ ದಾಟಿಕೊಂಡು ಏನೋ ಬೇರೆ ಕೆಲಸ ಮಾಡುವವನಂತೆ ಆ ಅಂಗಡಿಗೆ, ಈ ಕಾಫಿ ಬಾರ್ಗೆ ನುಗ್ಗಿ ಕಡೆಗೂ ಪಾರ್ಕಿನ ಹತ್ತಿರಕ್ಕೆ ಬಂದೆ.

 

ನಮಗಿನ್ನು ಬೇರೆ ದಿಕ್ಕಿಲ್ಲ...ಇದೇ ನಮ್ಮ ಮನೆ ಎಂಬಂತೆ ಮುನ್ನೂರು ನಾನೂರು ಜನ ಪಾರ್ಕಿನ ತುಂಬೆಲ್ಲಾ ಹರಡಿಕೊಂಡಿದ್ದರು. ಪಾರ್ಕ್ ಒಂಥರಾ ರೆಫ್ಯೂಜಿ ಏರಿಯಾ ಥರ ಕಾಣಿಸುತ್ತಿತ್ತು. ಯಾವಾಗಲೂ ಕ್ಲೀನ್ ಆಗಿರುತ್ತಿದ್ದ ಪಾರ್ಕ್ ಅಷ್ಟು ಜನರ ವಾಸಸ್ಥಾನವಾಗಿ ಅಂದಕಳೆದುಕೊಂಡಂತಿತ್ತು. ಅಲ್ಲಿನ ಮುಖಗಳನ್ನು ನೋಡಿದೆ. ಯಾರಾದರೂ ಪರಿಚಯದವರಿರಬಹುದಾ ಎಂಬ ಕುತೂಹಲದಲ್ಲಿ. ಜೀನ್ಸ್, ಜ್ಯಾಕೆಟ್, ಟೈಟ್ಸ್ ಹಾಕಿಕೊಂಡು ಬಿಸಿಲು ಮಳೆ ಗಾಳಿಗೆ ತಮ್ಮನ್ನು ಒಡ್ಡಿಕೊಂಡು ತಮ್ಮ ಜೀವನದ ಸಾರ್ಥಕತೆ ಕಂಡುಕೊಳ್ಳಬೇಕೆನ್ನುವ ಆಸೆ ಹೊತ್ತ ಸ್ಟೂಡೆಂಟ್ಸ್ ಗಳೇ ಜಾಸ್ತಿ ಇದ್ದರು. ಎಲ್ಲ ಥರದವರೂ ಇದ್ದರು. ಎಲ್ಲರ ಮುಖದಲ್ಲೂ ಏನೋ ಒಂದು ಥರದ ಬ್ರೈಟ್ ಕಳೆ. ಅವರು ಇನ್ನೇನು ಮಾರ್ಚಿಂಗ್ ಹೊರಡಲಿದ್ದರೆನ್ನಿಸುತ್ತದೆ ಯಾರೋ ಒಬ್ಬ ಲೀಡರ್ ಇನ್ಸ್ಟ್ರಕ್ಷನ್ ಕೊಡುತ್ತಿದ್ದರು. ಇದೇ ಪ್ರೊಟೆಸ್ಟ್ ನಮ್ಮೂರಿನಲ್ಲೇನಾದರೂ ಆಗಿದ್ದರೆ ನಾನೂ ನನ್ನ ಫ್ರೆಂಡ್ಸ್ ಜೊತೆ ಅಲ್ಲಿ ಒಂದು ಬೋರ್ಡ್ ಹಿಡಿದು ನಿಂತುಕೊಂಡಿರುತ್ತಿದ್ದನ್ನು ಊಹಿಸಿಕೊಂಡೆ. ತುಂಬಾ ಖುಶಿಆಯಿತು. ಈಗಲೂ ಏನು? ಹೋಗು ಸ್ವಲ್ಪ ಹೊತ್ತು ಮಾರ್ಚಿಂಗ್ ನಲ್ಲಿ ನಿಂತು ಬಾ ಅಂತ ಮನಸ್ಸು ಒತ್ತಾಯ ಮಾಡುತ್ತಿತ್ತು. ಕೆಲಸ ಕಳೆದುಕೊಂಡ್ರೆ ಹೆಂಡತಿ, ಅಪ್ಪ, ಅಮ್ಮನ ಪಾಡೇನು? ನಿನ್ನ ವೀಸಾ ಸ್ಟೇಟಸ್ ಕ್ಯಾನ್ಸಲ್ ಆದ್ರೆ ಗತಿ ಏನು?! ಅಂತ ಮೆದುಳು ಎಚ್ಚರಿಕೆ ಕೊಟ್ಟಿತು. ಮೆದುಳಿನ ಮಾತು ಹೊಟ್ಟೆ ತುಂಬಿಸುತ್ತಿತ್ತು. ನನ್ನ ಅಸಹಾಯಕತೆ ಬಗ್ಗೆ ತುಂಬಾ ಬೇಜಾರಾದರೂ ಅದರ ಮಾತು ಕೇಳಿದೆ. ಅಲ್ಲೊಂದು ಕಡೆ ಡೊನೇಷನ್ ಎಂದು ಬೋರ್ಡ್ ಹಾಕಿತ್ತು. ಅಲ್ಲಿಗೆ ಹೋಗಿ ಅಲ್ಲಿ ಕುಳಿತಿದ್ದ ಅಜ್ಜಿಯೊಬ್ಬರ ಕೈಗೆ ಆಗಷ್ಟೇ ಎಟಿಎಂ ನಿಂದ ತೆಗೆದುಕೊಂಡಿದ್ದ ಸ್ವಲ್ಪ ದುಡ್ಡು ಕೊಟ್ಟೆ. ’ನಿನ್ನ ಹೆಸರೇನು ಫ್ರೆಂಡ್?’ ಆಕೆ ಕೇಳಿದರು. ಅಪ್ಪನ ಹೆಸರು ಹೇಳಿದೆ. ನನ್ನ ಹೆಸರು ಹೇಳಲೂ ಭಯ! ಛೇ!! ಎಂಥಾ ಪರಿಸ್ಥಿತಿ ಎನ್ನಿಸಿತು. ಅವರಿಗೆ ಗುಡ್ ಲಕ್ ಹೇಳಿ ವಾಪಸ್ ಹೊರಟೆ.

 

ಸೆಲ್ಲಿಂಗ್ ಬಗ್ಗೆ ಯೋಚನೆ ಬಂತು. ನಾನು ನನ್ನ ಮನಸ್ಸನ್ನು ಸೆಲ್ ಮಾಡಿಕೊಂಡಿದ್ದೀನಾ ಕೇಳಿಕೊಂಡೆ. ಓಹ್ ಯೆಸ್! ಖಂಡಿತಾ! ಸೌಲಭ್ಯ, ಹೊಸ ಬದುಕು, ಹೊಸ ಕನಸಿನ ಹಿಂದೆ ಬಿದ್ದು ಬೇರೊಂದು ದೇಶ ಅಥವಾ ವ್ಯವಸ್ಥೆ, ಕಾನೂನಿನ ಅಡಿಗೆ ಬಂದಾಗ ನಮ್ಮ ಕೆಲವು ಇಷ್ಟಗಳನ್ನು ಅಡವಿಡಬೇಕಾಗುತ್ತದೆ, ನಮ್ಮನ್ನು ನಾವು ಅಡವಿಟ್ಟುಕೊಳ್ಳಬೇಕಾಗುತ್ತದೆ ಅಥವಾ ಕೆಲವೊಮ್ಮೆ ಮಾರಿಕೊಳ್ಳಬೇಕಾಗುತ್ತದೆ...ನೀನೂ ಅಂಥವರಲ್ಲಿ ಒಬ್ಬ ಅಂತ ಅಂತರಂಗ ನಿರ್ದಯವಾಗಿ ಹೇಳಿತು. ಭಾರದ ಮನಸ್ಸು ಹೊತ್ತು ಮನೆ ದಿಕ್ಕಿಗೆ ಒಂದೇ ಸಮ ನಡೆದೆ. ಮನೆಗೆ ಹೋದ ಮೇಲೆ ಜಿಂದಗೀ ನಾ ಮಿಲೇ ದೊಬಾರಾ (ಜೀವನ ಇನ್ನೊಂದು ಸಾರಿ ಸಿಗಲ್ಲ!), ಮನಸ್ಸಿಗೆ ಬಂದದ್ದನ್ನು ಮಾಡೋ ದಡ್ದ ಎಂದು ಇನ್ನಷ್ಟು ಹೀಯಾಳಿಸುವ ಮೂವಿ ನೋಡುವ ಕಾರ್ಯಕ್ರಮ ಇತ್ತು.

(ಅನುವಾದ: ಆಯಾಮ)  

 


 
 
 
 
 
Copyright © 2011 Neemgrove Media
All Rights Reserved