ಅಂಗಳ      ಪಂಚವಟಿ
Print this pageAdd to Favorite
 
 
 

 (ಪುಟ ೧೮)

(ಪುಟ )
(ಪುಟ ೧೦)
(ಪುಟ ೧೧)
 (ಪುಟ ೧)  
(ಪುಟ ೧೪)   
(ಪುಟ ೧೫) 
(ಪುಟ ೧೬) 
(ಪುಟ ೧) 
(ಪುಟ ೧)

ಲಾಂಗ್ ಡಿಸ್ಟೆನ್ಸ್ ರಿಲೇಷನ್ಶಿಪ್: ಸ್ವಘೋಷಿತ ಭಯೋತ್ಪಾದಕಿ ಕನ್ನಡಿತಿ ಪವಿತ್ರಾ

ಬೇಲಾ ಮರವ೦ತೆ
 
ಲಾಂಗ್ ಡಿಸ್ಟೆನ್ಸ್ ಸಂಬಂಧಗಳ ಬಾಲ ಹಿಡಿದು, ಹಿಂದಿನ ಪುಟದಲ್ಲಿ ನನ್ನ ಕನ್ನಡದ ಗೆಳತಿಯೊಬ್ಬರ ದುರಂತ ಬರೆದಿದ್ದೆ. ಈ ಪುಟದಲ್ಲಿ ತನ್ನನ್ನು ತಾನು ಭಯೋತ್ಪಾದಕಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ’ಪವಿತ್ರಾ’ಳ ಅರ್ಥವಾಗದ ಮತ್ತೊಂದು ಲಾಂಗ್ ಡಿಸ್ಟನ್ಸ್ ಕಥೆ...
ವಯಸ್ಸು ಮೂವತ್ತೈದು ನಲವತ್ತರ ಒಳಗೆ. ಬಳ್ಳಾರಿಯ ಕುವರಿ. ಅರ್ಧ ಕನ್ನಡ ಅರ್ಧ ತೆಲುಗಿನ ಹಿನ್ನೆಲೆ. ಬಾಯಿಬಿಟ್ಟರೆ ರಾಯಲು ಸೀಮೆಯ ಬಾಂಬುಗಳು. ನೋಡಿದಾಗ ಸ್ವಲ್ಪ ಹುಷಾರಾಗಿರಬೇಕು ಎಂದು ಮನಸ್ಸು ಹೆದರಿಸುವಂಥ ಆಕೃತಿ-ಭಂಗಿ. ಇಲ್ಲಿಯೇ ಎಂಎ ಮುಗಿಸಿ ಕಮ್ಮ್ಯುನಿಟಿ ಕಾಲೇಜ್ ಒಂದರಲ್ಲಿ ಟೀಚರ್. ಹಾಗೇ ತನ್ನ ಪಿ ಎಚ್ ಡಿ ಪದವಿಗೆ ಓದುತ್ತಿದ್ದಾಕೆ. ಹೆಸರು ಪಕ್ಕದ ವಠಾರದ ಹುಡುಗಿಯ ಥರ ಸಾಂಪ್ರದಾಯಿಕವಾಗಿ ಕೇಳಿದರೂ ಪವಿತ್ರಾರಿಗೂ ಅವರ ಹೆಸರಿಗೂ ನಂಟಿರಲಿಲ್ಲ. ಅವರು ಇಲ್ಲಿ ’ಪ್ಯಾಟಿ’ ಆಗಿದ್ದರು. ಆಕೆ ನನ್ನ ಗೆಳತಿಯ ಗಂಡನ ಸೀನಿಯರ್. ಒಂದೇ ಯೂನಿವರ್ಸಿಟಿಯಲ್ಲಿ ಪಿ ಎಚ್ ಡಿ ಓದುತ್ತಿದ್ದರು. ನಾನು ಕನ್ನಡದವಳು, ಇಲ್ಲಿ ಒಬ್ಬಂಟಿ, ನನಗೆ ಸ್ನೇಹಿತರ ಅಗತ್ಯವಿದೆ ಎಂದು ಆಕೆ ತಿಳಿಸಿದ್ದರಿಂದ ನನ್ನ ಗೆಳತಿಯ ಗಂಡ ಅವರನ್ನು ಮನೆಗೆ ಆಹ್ವಾನಿಸಿ ನನ್ನ ಗೆಳತಿ ಮತ್ತು ನನಗೆ ಪರಿಚಯಿಸಿದ್ದರು. ಸುಮ್ಮನೇ ಕ್ಯಾಶುಅಲ್ ಆಗಿ ಮಾತುಕಥೆಗೆಂದು ಒಮ್ಮೆ ಶುರುವಾದ ಭೇಟಿಯನ್ನು ಪವಿತ್ರಾ ಹಲವಾರು ಥರದಲ್ಲಿ ಬಳಸಿಕೊಂಡಿದ್ದರು.
 
ವರ್ಷವೊಂದರ ಮಳೆಗಾಲದಂತೆ ಈ ಪವಿತ್ರಾ ಎಂಬಾಕೆ ಆ ವರ್ಷ ಸುಮಾರು ಮೂರ್ನಾಲ್ಕು ತಿಂಗಳ ಕಾಲ ಪ್ರತೀ ಗುರುವಾರ ಸಂಜೆ ನಮಗೆ ಸಿಗುತ್ತಿದ್ದರು. ಪ್ರತೀ ಗುರುವಾರ ನಾನು ನನ್ನ ಗೆಳತಿ ವಾಕ್ ಮುಗಿಸಿ ಹಾಗೇ ಅವಳ ಮನೆಗೆ ಹೋಗುತ್ತಿದ್ದೆವು. ಸ್ವಲ್ಪ ಹೊತ್ತಿನಲ್ಲೇ ಪವಿತ್ರ ಅಲ್ಲಿರುತ್ತಿದ್ದರು. ಅವರು ನನ್ನ ಗೆಳತಿಯ ಮನೆಗೆ, ಆಕೆಯ ಗಂಡನಿಂದ ತನ್ನ ಪಿ ಎಚ್ ಡಿ ಚಾಪ್ಟರ್ ಗಳನ್ನು ಯೋಗ್ಯವಾಗಿ ಪ್ರೂಫ್ ನೋಡಿಸಿಕೊಳ್ಳಲು ಬರುತ್ತಿದ್ದರು. ವಿಷಯ ಇಬ್ಬರದ್ದೂ ಬೇರೆ ಬೇರೆಯಾಗಿದ್ದರೂ ಪಿಎಚ್ ಡಿ ಪ್ರಬಂಧವನ್ನು ಬರೆಯಲು ಟೆಕ್ನಿಕಲ್ ಆಗಿ ಕೆಲವು ನಿಯಮಗಳಿರುತ್ತವಾದ್ದರಿಂದ ಅದರ ಸಹಾಯ ಪಡೆಯಲು ಮತ್ತು ಮಾತಾಡಿ ಒಂಟಿತನ ನೀಗಿಸಿಕೊಳ್ಳಲು ಬರುತ್ತಿದ್ದರು. ಶುಕ್ರವಾರ ಪವಿತ್ರಾಗೆ ತರಗತಿಗಳಿರುತ್ತಿರಲಿಲ್ಲ. ಆದ್ದರಿಂದ ಅವರೇ ಅವರಿಗಿಷ್ಟವಾದ ಬಿಯರ್ ಕೇಸ್ ಗಳನ್ನು ಹಿಡಿದುಕೊಂಡು ಬರುತ್ತಿದ್ದರು. ಅವರ ಆಸಕ್ತಿಕರ ಬದುಕಿನ ಬಗ್ಗೆ ಕೇಳಲೆಂದೇ ಅದೇ ಅಪಾರ್ಟ್ಮೆಂಟ್ ಕಾಂಪ್ಲೆಕ್ಸಿನಲ್ಲಿದ್ದ ನಾನೂ ಕೂರುತ್ತಿದ್ದೆ. ಅವರಿಗೆ ಮಾತು ಕೇಳಲು ಜನ ಬೇಕು, ನನಗೆ ಪ್ರಪಂಚ ಕಲಿಯಲು ಬಣ್ಣದ ಜನ ಬೇಕು...ಇದು ನನ್ನ ಅವರ ನಂಟು. 
 
ಸುತ್ತ ಕೇಳುವವರಿದ್ದಾಗ ಪವಿತ್ರಾ ತುಂಬಾ ಗಟ್ಟಿದನಿಯಲ್ಲಿ, ತಾನು ಹೇಳುವುದನ್ನು ಎಲ್ಲರೂ ಕೇಳಲೇಬೇಕೆಂಬ ಒತ್ತಾಯದಲ್ಲಿ ಮಾತನಾಡುತ್ತಿದ್ದರು. ಶುರುವಿನಲ್ಲಿ ಬುದ್ಧಿಜೀವಿಯ ಥರ ಮಾತಾಡುತ್ತಿದ್ದ ಒಂದೊಂದಾಗಿ ೨-೩ ಬಿಯರ್ ಹೊಟ್ಟೆಗಿಳಿದ ಮೇಲೆ ಬೇರೆಯೇ ವ್ಯಕ್ತಿಯಾಗುತ್ತಿದ್ದರು. ಅವರಿಗೆ ತಮ್ಮ ಬುದ್ಧಿಮತ್ತೆಯ ಮೇಲೆ ಬಹಳ ಅಭಿಮಾನ. ಆಕೆ ರಾಡಿಕಲ್ ಫೆಮಿನಿಸ್ಟ್. ಕಳೆದ ವರ್ಷ ಮದುವೆಯಾಗಿತ್ತು. ಆದರೆ ಅವರ ಗಂಡ ನ್ಯೂಯಾರ್ಕಿನ ಒಂದು ಸಾಫ್ಟ್ವೇರ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದುದರಿಂದ ಆತನಿಗೆ ಕ್ಯಾಲಿಫೋರ್ನಿಯಾ ಕಡೆಗೆ ಬರಲು ಮನಸ್ಸಿರಲಿಲ್ಲ. ಹಾಗೇ ಈಸ್ಟ್ ಕೋಸ್ಟಿನ ಯಾವುದಾದರೂ ವಿಶ್ವವಿದ್ಯಾನಿಲಯದಲ್ಲಿ ಪವ್ಯಾಸಂಗ ಮುಂದುವರಿಸಲು ಪವಿತ್ರಾರಿಗೆ ಮನಸ್ಸಿರಲಿಲ್ಲ. ಅವರ ಸಂಬಂಧ ಫೋನು, ಅಂತರ್ಜಾಲ ಮತ್ತು ನಿಯಮಿತ ಭೇಟಿಯ ಮೂಲಕ ನಡೆಯುತ್ತಿತ್ತು. 
 
ಪವಿತ್ರಾ ಭಾರತದ ಬಗ್ಗೆ, ಅಲ್ಲಿನ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ, ದೇವಿಯರ ಬಗ್ಗೆ ಬಹಳ ಭಾವುಕವಾಗಿ, ಇಂಟಲೆಕ್ಚುಅಲ್ ಆಗಿ ಮಾತನಾಡುತ್ತಿದ್ದರು. ಅಮೆರಿಕಾದಲ್ಲಿ ಸುಲಭವಾಗಿ ಸಿಗುವ, ತಮಗಿಷ್ಟ ಬಂದಂತಿರಲಾಗುವ ಸ್ವಾತಂತ್ರ ಭಾರತದ ನಿತ್ಯ ಬದುಕಿನಲ್ಲಿ ಸಿಗದಿದ್ದುದ್ದನ್ನು ಆಕೆ ತುಂಬಾ ಉತ್ಕಟವಾಗಿ ದ್ವೇಷಿಸುತ್ತಿದ್ದರು. ’ಕ್ಯಾನ್ ಯು ಇಮ್ಯಾಜಿನ್? ಒಂದು ಬಿಯರ್ ತೆಗೆದುಕೊಳ್ಳಲು ಹುಡುಗಿಯರಿಗೆ ಸ್ವಾತಂತ್ರವಿಲ್ಲ...ಹೌ ಕ್ಯಾನ್ ಯು ಲಿವ್ ಇನ್ ಸಚ್ ಅ ಸಿಚುಯೇಷನ್?!!...ನನ್ನ ಬದುಕನ್ನು ನಾನು ತುಂಬಾ ಪ್ರೀತಿಸುತ್ತೇನೆ...ಮೊದಲು ನನ್ನ ಲೈಫ್, ನನ್ನ ಸರ್ವೈವಲ್, ನನ್ನ ಬೆಳವಣಿಗೆ. ನಂತರ ಉಳಿದೆಲ್ಲವೂ’ ಎಂಬುದು ಅವರ ಪಾಲಿಸಿ. 
ಪವಿತ್ರಾ ಮತ್ತರಾದಮೇಲೆ ಹೇಳುತ್ತಿದ್ದ ವಿಷಯಗಳನ್ನು ಕೇಳಿ ನಾನು ನನ್ನ ಗೆಳತಿ ಅದನ್ನು ಸತ್ಯ ಎಂದು ನಂಬಬೇಕೋ, ಇವರ ಓಪನ್ನೆಸ್ಸ್ ಅನ್ನು ಮೆಚ್ಚಬೇಕೋ ಗೊತ್ತಾಗದೆ ಕಷ್ಟಪಡುತ್ತಿದ್ದೆವು. ಪವಿತ್ರಾರ ಗಂಡ ಐಐಟಿಯ ಮಾಜೀ ವಿದ್ಯಾರ್ಥಿ, ಬಹಳ ಬುದ್ಧಿವಂತರಂತೆ. ಅವರೇ ಪವಿತ್ರಾರ ಓದಿನ ವಿಷಯಕ್ಕೂ ಸಾಫ್ಟ್ ವೇರ್ ಉದ್ಯಮಕ್ಕೂ ಸೇತುವೆಯಾಗುವಂಥ ಪಿಎಚ್ ಡಿ ವಿಷಯವೊಂದನ್ನು ಸೂಚಿಸಿ ಪವಿತ್ರಾರಿಗೆ ಪ್ರತಿ ವಾರವೂ ಟಿಪ್ಪಣಿ ಕೊಡುತ್ತಾ, ತಾವೇ ಪುಟಗಟ್ಟಲೆ ಪ್ರಬಂಧ ಬರೆದುಕೊಡುತ್ತಿದ್ದರಂತೆ! ಅವರಿಗೆ ಪವಿತ್ರಾ ಬೇಗ ಪಿಎಚ್ ಡಿ ಮುಗಿಸಿ ವಾಪಸ್ ಬಂದರೆ ಸಾಕಿತ್ತಂತೆ. ’ಸಹಾಯ ಮಾಡುತ್ತಾನೆ. ಮಾಡದಿದ್ರೆ ನಾನು ಬಿಡುತ್ತೇನಾ? ಮಾಡಲಿ ಬಿಡಿ. ನಾನಂತೂ ಅವನಿದ್ದಲ್ಲಿಗೇ ವಾಪಸ್ ಹೋಗುವ ಬಗ್ಗೆ ಯೋಜನೆ ಮಾಡುತ್ತಿಲ್ಲ. ಅಲ್ಲಿ ಬರೀ ಅವನ ರಿಲೇಟಿವ್ಸೇ ತುಂಬಿಕೊಂಡಿದ್ದಾರೆ. ವಾರ ವಾರ ಒಬ್ಬರದ್ದಾದರೂ ಮುಖ ನೋಡಬೇಕು, ಮಾತಾಡಬೇಕು...ಐ ಹೇಟ್ ಲಿವಿಂಗ್ ಲೈಕ್ ದಟ್’ ಎನ್ನುತ್ತಿದ್ದರು. ’ಹೀಗೆ ಒಂಟಿಯಾಗಿ ಈ ಜಾಗದಲ್ಲಿ ಇದ್ದುಕೊಂಡು ಮತ್ತೇನು ಮಾಡುತ್ತೀರಿ’ ಅಂದರೆ ’ಐ ಡೋಂಟ್ ನೋ! ಆ ಪರಿಸ್ಥಿತಿ ಬಂದಾಗ ಐ ವಿಲ್ ಥಿಂಕ್ ಆಫ್ ಸಂಥಿಂಗ್’ ಎನ್ನುತ್ತಿದ್ದರು. 
 
ಪವಿತ್ರಾರ ಮಾತುಗಳಲ್ಲೇ ಹೇಳುವುದಾದರೆ ಅವರಿಗೆ ಅವರ ಗಂಡನ ಮೇಲೆ ಭಯಂಕರ ಒಬ್ಸೆಷನ್ ಅಂತೆ. ಆತ ಜಾಣ, ಸ್ಪುರದ್ರೂಪಿ, ಯಶಸ್ವೀ ಮನುಷ್ಯ ಆದ್ದರಿಂದ ಯಾರಾದರೂ ಆತನನ್ನು ಹೊಡೆದುಕೊಂಡು ಬಿಡುತ್ತಾರೆ ಎಂಬ ಸದಾ ಭಯ ಆಕೆಗೆ. ’ನೀವು ಪ್ರೀತಿಸಿ ಮದುವೆಯಾದವರು ನಿಮಗ್ಯಾಕೆ ಭಯ’ ಅಂದರೆ ’ನಮ್ಮ ಪ್ರೀತಿದೊಂದು ದೊಡ್ದ ಕಥೆ...ಅವನು ತುಂಬಾ ಗಲಿಬಲ್. ಯಾವಾಗ ಬೇಕಾದ್ರೂ ಮನಸ್ಸು ಚೇಂಜ್ ಮಾಡಿಬಿಡಬಲ್ಲ...ಅವನನ್ನು ಮದುವೆ ಮಾಡಿಕೊಳ್ಳೋಕೆ ಎಷ್ಟು ಕಷ್ಟ ಪಟ್ಟಿದ್ದೀನಿ ಗೊತ್ತಾ...ನನ್ನ ಎಫರ್ಟ್ ಗೆ ನನಗೆ ನೋಬೆಲ್ ಪ್ರೈಜ಼್ ಸಿಗಬೇಕು’ ಎನ್ನುತಿದ್ದರು. ’ಅಷ್ಟು ಕಷ್ಟಪಟ್ಟು ಮದುವೆಯಾಗಿ ಈಗ ದೂರ ಇದ್ದರೆ? ಯಾಕೆ ಅವರನ್ನೇ ಇಲ್ಲಿಗೆ ಕರೆಸಿಕೊಳ್ಳಬಾರದು?’ ನಮ್ಮ ಕುತೂಹಲ ನಿಲ್ಲುತ್ತಿರಲಿಲ್ಲ. ’ಇಲ್ಲ ಇಲ್ಲ..ಹಿ ಈಸ್ ಟೂ ಪ್ರೌಡ್. ಅಲ್ಲಿ ಅವನದ್ದೇ ಬೇಕಾದಷ್ಟಿದೆ. ಹಿ ಇಸ್ ದ ಸಿ ಇ ಓ. ಇಲ್ಲಿ ಅವರ ಕಂಪನಿಯ ಬ್ರಾಂಚ್ ಇಲ್ಲ! ಅದೂ ಸಿಲಿಕಾನ್ ವ್ಯಾಲಿಯಲ್ಲಿ!! ಐ ಕಾಂಟ್ ಅಂಡರ್ಸ್ಟಾಂಡ್! ನೀನೇ ಕ್ಯಾಲಿಫೋರ್ನಿಯಾದಲ್ಲಿ ಒಂದು ಬ್ರಾಂಚ್ ಆಗಬೇಕು ಅಂತ ಶುರು ಮಾಡು ಅಂತಲೂ ಹೇಳಿದ್ದೀನಿ...ಅದೆಲ್ಲಾ ಅವನಿಗೆ ಇಷ್ಟ ಆಗಲ್ಲ. ಆದ್ರೆ ನೊಡಬೇಕು...ಅಷ್ಟರೊಳಗೆ ನಾನು ಪ್ರೆಗ್ನೆಂಟ್ ಆದ್ರೆ ಬೇರೆ ಏನಾದ್ರು ಐಡಿಯಾ ಮಾಡಬಹುದು’ ಎನ್ನುತ್ತಿದ್ದರು.
 
ಪವಿತ್ರಾರ ಗಂಡ ಎರಡು ಮೂರು ತಿಂಗಳಿಗೊಮ್ಮೆ ಎರಡು-ಮೂರು ದಿನಕ್ಕೆ ಒಂದಿಲ್ಲ ಒಂದು ಕೆಲಸ ಮೀಟಿಂಗ್ ಮೇಲೆ ಪವಿತ್ರಾ ಇದ್ದ ಕಡೆ ಬರುತ್ತಿದ್ದರು. ಹಾಗೇ ವರ್ಷಕ್ಕೆರಡು ಬಾರಿ ಪವಿತ್ರಾ ಕೂಡಾ ಆ ಕಡೆ ಹೋಗಿ ಬರುತ್ತಿದ್ದರು. ’ಐ ಲವ್ ಬೀಯಿಂಗ್ ಮ್ಯಾರೀಡ್. ಆದರೆ ಈ ಮದುವೆ ಥಿಂಗ್ ಇಂದ ನನ್ನ ಲೈಫ್ ಎಷ್ಟು ಹಾಳಾಗಿದೆ ಗೊತ್ತಾ...ಟು ಸೇವ್ ಮೈ ಮ್ಯಾರೆಜ್ ನಾನೀಗ ಪ್ರೆಗ್ನೆಂಟ್ ಆಗಬೇಕು. ನಾನು ಅವನಲ್ಲಿಗೆ ಹೋಗುವ ಮುಂಚೆ, ನನ್ನ ಗಂಡ ಬರೋದು ಗೊತ್ತಾದ ಕೂಡ್ಲೇ ಕ್ಲೋಮಿಡ್ (ಕ್ಲೋಮಿಡ್ ಎನ್ನುವುದು ಹೆಂಗಸರ ಅಂಡಾಶಯಗಳು ಹೆಚ್ಚು ಅಂಡಗಳನ್ನು ಉತ್ಪತ್ತಿ ಮಾಡುವಂತೆ ತೆಗೆದುಕೊಳ್ಳುವ ಹಾರ್ಮೋನು ಮಾತ್ರೆಯಂತೆ) ತೆಗೆದುಕೊಳ್ಳೋಕೆ ಶುರು ಮಾಡಬೇಕು...ವಾಟ್ ಅ ನ್ಯುಸೆನ್ಸ್...’ಅಂತ ಬೈದುಕೊಳ್ಳುತ್ತಿದ್ದರು. ’ನಿಮಗಿಷ್ಟ ಇಲ್ಲ ಅಂದ್ರೆ ಯಾಕೆ ಮಕ್ಕಳು ಮರಿ ಎಲ್ಲಾ ಯಾಕೆ ಮಾಡಿಕೋತೀರಿ...’ ಅಂದರೆ ’ನನ್ನ ಗಂಡನಿಗೆ ಇಷ್ಟ...ಹಾಗಂತ ಅವನೇನೂ ಒತ್ತಾಯ ಮಾಡಿಲ್ಲ. ನನ್ನ ಕೆರಿಯರ್-ನನ್ನಿಷ್ಟ ನನ್ನದು, ಅವನ ಕೆರಿಯರ್ ಅವನಿಷ್ಟ ಅವನದು ಅಂತಲೇ ನಮ್ಮ ಒಪ್ಪಂದ. ಆದರೂ ಯು ನೆವರ್ ನೋ ಅ ಮ್ಯಾನ್!! ಅವನಿಗೆ ಸಡನ್ ಆಗಿ ಮಕ್ಕಳೂ ಇಲ್ಲ ಸುಖನೂ ಇಲ್ಲ...ಇವಳನ್ನು ಯಾಕೆ ಕಟ್ಟಿಕೊಂಡಿರಬೇಕು ಅನ್ನಿಸಿದರೆ?!! ಗಾಡ್! ನನಗದನ್ನು ಯೋಚೊಸೋಕೂ ಆಗಲ್ಲ...ಒಂದು ಮಗು ಅನ್ನೋದು ಹುಟ್ಟಿಬಿಟ್ರೆ ನಮ್ಮ ಸಂಬಂಧ ಕಿತ್ತುಹೋಗಲ್ಲ...ಅವನು ನನ್ನನ್ನು ಬಿಡಲ್ಲ...ಅದಕ್ಕೇ ನಾನು ಪ್ರೆಗ್ನೆಂಟ್ ಆಗಲು ಟ್ರೈ ಮಾಡ್ತಾ ಇದ್ದೀನಿ...’ ಎನ್ನುತ್ತಿದ್ದರು. ನಮ್ಮನ್ನಂತೂ ಸುಲಭವಾಗಿ ಬೇಸ್ತು ಬೀಳಿಸುತ್ತಿದ್ದರು.
 
ನಮ್ಮೂರಿನಲ್ಲೇ ಪವಿತ್ರಾರ ಇಬ್ಬರು ಅಣ್ಣಂದಿರು-ಅತ್ತಿಗೆಯರು ಅವರ ಮಕ್ಕಳೆಂಬ ಬಂಧುಗಳೆಲ್ಲರೂ ಇದ್ದರು. ಆದರೆ ಯಾರೊಡನೆಯೂ ಪವಿತ್ರಾರ ಸಂಬಂಧ ಸರಿಯಿರಲಿಲ್ಲ. ’ನನ್ನ ಅತ್ತಿಗೆಯಂದಿರಿಗೆ ನನ್ನನ್ನು-ನನ್ನ ಗಂಡನನ್ನು ಕಂಡರೆ ಹೊಟ್ಟೆ ಉರಿ...ನನಗೆ ಅಷ್ಟು ಒಳ್ಳೆ ಗಂಡ ಸಿಕ್ಕಿದ್ದಾನೆ ಅಂತ ಅಸೂಯೆ ಅವರಿಗೆ. ಬಿಚಸ್! ನಮ್ಮಣ್ಣಂದಿರೂ ಎಲ್ಲ ಅವರ ಹೆಂಡತಿಯ ಮಾತು ಕೇಳಿಕೊಂಡು ಕೂತಿದ್ದಾರೆ, ವೇಸ್ಟ್ ಫೆಲೋಸ್’ ಎಂದು ಉರಿದು ಬೀಳುತ್ತಿದ್ದರು. ಅವರು ನಮ್ಮೊಡನಿದ್ದಾಗಲೇ ಅವರ ಅಣ್ಣಂದಿರ ಅಥವಾ ಅತ್ತಿಗೆಯಂದಿರ ಕ್ಷೇಮ ವಿಚಾರಿಸಿಕೊಳ್ಳುವ ಫೋನ್ ಕರೆಗಳೇನಾದರೂ ಬಂದಾಗ ಆ ಫೋನೇ ಅವರ ಮಾರ್ದವತೆಗೆ, ಸಿಹಿಗೆ ಕರಗಿ ಬಿಡಬೇಕು ಎನ್ನುವಷ್ಟು ನಾಟಕೀಯವಾಗಿ ’ಅಣ್ಣಯ್ಯಾ..ಭಾಭೀ’ ಎಂದು ಮುತ್ತು ಸುರಿಸುತ್ತಿದರು. ಅಣ್ಣ ಮಾತಾಡಿದರೆ ಅವನಿಗೆ ತಮ್ಮನ ಬಗ್ಗೆ ಏನಾದರೊಂದು ಸುಮ್ಮನೆ ಹುಳ ಬಿಡುತ್ತಿದ್ದರು. ಚಿಕ್ಕಣ್ಣ ಫೋನ್ ಮಾಡಿದರೆ ’ನಿನ್ನ ಬಿಟ್ಟರೆ ನನ್ನ ಬಗ್ಗೆ ಯಾರು ಕೇರ್ ತಗೋತಾರೆ? ನೀನು ಫೋನ್ ಮಾಡಿ ತಿಳಿಸಿದರೇ ತಾನೆ ಎಲ್ಲರಿಗೂ ತಿಳಿಯೋದು ನಾನು ಬದುಕಿದ್ದೀನಿ ಅಂತ?’ ಎನ್ನುತ್ತಿದ್ದರು. ನಮ್ಮ ಮುಂದೆಯೇ ನಡೆಯುತ್ತಿದ್ದ ಈ ಆಟ ಗೊತ್ತಾಗದೆ ನಾವು ಕಣ್ಣುಕಣ್ಣು ಬಿಡುತ್ತಿದ್ದೆವು. 
 
ಅವರ ಗಂಡನ ಸಂಬಂಧಿಗಳ ದೊಡ್ಡ ಹಿಂಡೇ ಈಸ್ಟ್ ಕೋಸ್ಟಿನಲ್ಲಿದ್ದರೂ ಅವರೊಡನೆಯೂ ನಮ್ಮ ಪವಿತ್ರಾರಿಗೆ ಸಾಮರಸ್ಯ ಇರಲಿಲ್ಲ. ಕಾರಣ ಸಿಂಪಲ್. ’ಅವರಿಗೆ ನನ್ನನು ಕಂಡ್ರೆ ಆಗಲ್ಲ, ಅಸೂಯೆ’ ಅನ್ನುತ್ತಿದ್ದರು. ಎಲ್ಲರಿಗೂ ಪವಿತ್ರಾರನ್ನು ಕಂಡರೆ ಯಾಕೆ ಅಷ್ಟು ಅಸೂಯೆ ಅಂತ ನಾವೂ ಯೋಚಿಸಿದ್ದೆವು. ಪವಿತ್ರಾರನ್ನು ಯಾವ ದೃಷ್ಟಿಯಲ್ಲಿಯೂ ಸುಂದರಿ ಎನ್ನಲಾಗುತ್ತಿರಲಿಲ್ಲ. ಅವರು ಮಾತಾಡುವುದನ್ನು ಕೇಳಿದಾಗ ಈಕೆ ಮಹಾನ್ ಜಾಣೆ ಎನ್ನಿಸುತ್ತಿತ್ತೇ ಹೊರತು, ಸೂಕ್ಷ್ಮತೆಗಳಿರುವವರು, ಬುದ್ಧಿವಂತೆ ಎನ್ನಲೂ ಆಗುತ್ತಿರಲಿಲ್ಲ. ಅಲ್ಲಿ ಇಲ್ಲಿ ಒಂದೆರಡು ದೊಡ್ಡ ಹೆಸರುಗಳನ್ನು ಉದುರಿಸಿ ಅಥವಾ ಯಾವುದೋ ಒಂದು ರಿಸರ್ಚ್ ಪ್ರಕಾರ ಇದು ಹೀಗೆ ಎಂದು ಬಿಡುತ್ತಿದ್ದರು. ಅವರು ಹೇಳಿದ್ದೇ ನಿಜವಾಗಬೇಕಿತ್ತು. 
 
ಪವಿತ್ರಾರ ಮನಸ್ಸಿಗೆ ಹೋದವಾರ ಒಳ್ಳೆಯವರೆನಿಸಿದ್ದವರು ಇನ್ನೆರಡು ವಾರಗಳಲ್ಲಿ ಕೆಟ್ಟವರಾಗಿ ಬಿಡುತ್ತಿದ್ದರು. ಅವರ ಅಪ್ಪ-ಅಮ್ಮನೂ ಅವರ ಆಸೆಗಳನ್ನು ಅರ್ಥ ಮಾಡಿಕೊಳ್ಳದವರಾಗಿದ್ದರು. ಇನ್ನು ಅತ್ತೆ-ಮಾವನಂತೂ ಮಗನನ್ನು ಇವಳಿಗೆ ಕಳೆದುಕೊಂಡೆವು ಅಂತ ಅತ್ತು ಕರೆದು ನಾಟಕ ಮಾಡಿಬಿಟ್ಟಿದ್ದರಂತೆ. ಹಾಗಾಗಿ ಅವರನ್ನೂ ಪೂರ್ತಿ ಬಾಯ್ಕಾಟ್ ಮಾಡಿದ್ದರು. ’ನಾನು ಅವರ ಪಾಲಿಗೆ ಟೆರರಿಸ್ಟ್ ಆಗಿರ್ತೀನಿ...ಹಾಗಂತ ನಾನೇ ಹೇಳಿದ್ದೀನಿ...ಎನ್ನುತ್ತಿದ್ದರು’. ಅತ್ತೆ ಮಾವ ಗಂಡನ ಮನೆಗೂ ಹೋಗುವಂತಿರಲಿಲ್ಲ. ಅಮೆರಿಕಾಗೆ ಬಂದರೆ ಪವಿತ್ರಾ ಗಂಡನ ಮನೆಯಲ್ಲಿ ಇದ್ದಾಗ ಮಾತ್ರ ಬರಬೇಕು! ಇಲ್ಲದಿದ್ದರೆ ಅಮೆರಿಕಾದಲ್ಲೇ ಇರುವ ಉಳಿದ ಮಕ್ಕಳು, ನೆಂಟರ ಮನೆ ಸುತ್ತಬೇಕು.

ಸ್ವಲ್ಪ ಓದಿಕೊಂಡು ನಾನು ಮನೆಯಲ್ಲಿ ಫ್ರೀ ಇದ್ದೇನೆ ಎಂದು ತಿಳಿದು ಪವಿತ್ರಾ ನನಗೂ ಆಗಾಗ ಏನಾದರೂ ಸಹಾಯ ಮಾಡಿಕೊಡಲು ಕೇಳುತ್ತಿದ್ದರು. ಒಂದೆರಡು ವಿಷಯ ತಿಳಿಸಿ ಅದರ ಬಗ್ಗೆ ಪುಟ್ಟ ನೋಟ್ಸ್ ಬರೆದು ಕೊಡಲು ಕೇಳುತ್ತಿದ್ದರು. ಎರಡು ಮೂರು ಬಾರಿ ಅವರ ಕೆಲಸ ಮಾಡಿಕೊಟ್ಟಿದ್ದೆ. ’ಸ್ವೀಟೀ..’ ಅಂತ ನಾಟಕೀಯವಾದ ಹಗ್ ಕೊಟ್ಟಿದ್ದರು. ಕೆಲಸ ಪ್ರತೀ ಬಾರಿಯೂ ಹೆಚ್ಚಾಗುತ್ತಿದ್ದುದನ್ನು ನೋಡಿ ’ನಾನು ಆಗುವುದಿಲ್ಲ ಮನೇಲಿ ಸ್ವಲ್ಪ ಕೆಲಸ ಇದೆ’ ಎಂದು ಹೇಳಿ ತಪ್ಪಿಸಿಕೊಂಡಾಗ...’ಅವಳನ್ನು ನಾನು ನೈಸ್ ಗರ್ಲ್ ಎಂದುಕೊಂಡಿದ್ದೆ. ತುಂಬಾ ಮೀನ್ ಇದ್ದಾಳೆ, ನನ್ನ ಕಂಡರೆ ಅವಳಿಗೆ ಅಸೂಯೆ ಎನ್ನಿಸುತ್ತೆ’ ಅಂತ ನನ್ನ ಗೆಳತಿಗೇ ಒಪ್ಪಿಸಿಕೊಂಡಿದ್ದರು!
 
ಈಕೆ ತನ್ನನ್ನು ರಾಡಿಕಲ್ ಫೆಮಿನಿಸ್ಟ್ ಎಂದು ಕರೆದುಕೊಳ್ಳುತ್ತಿದ್ದರು. ಆದರೆ ತನ್ನ ಹೆಸರಿನ ಜೊತೆಗೊಂದು ಗಂಡಸಿನ, ಅದರಲ್ಲೂ ಯಶಸ್ವೀ ಗಂಡಸಿನ ಹೆಸರಿರಬೇಕು ಎನ್ನುವ ಆಸೆ. ಫೆಮಿಸಿಸ್ಟ್ ಆಗಿದ್ದರಿಂದಲೇ ನಾನು ಸದಾ ನನ್ನ ಗಂಡನೆಂಬುವನ ಜೊತೆಗಿರುವ ಅಗತ್ಯವಿಲ್ಲ ಎನ್ನುವ ಧೋರಣೆ. ನಿಜಕ್ಕೂ ಅಸ್ತಿತ್ವದಲ್ಲಿಲ್ಲದ ಒಂದು ಸಂಬಧವನ್ನು ಉಳಿಸಿಕೊಳ್ಳಲು, ಒಬ್ಬ ಯಶಸ್ವಿ ಗಂಡಸನ್ನು ತಮ್ಮ ಬದುಕಿನಲ್ಲಿಟ್ಟುಕೊಳ್ಳಲು ಅವರು ಮಾಡುತ್ತಿದ್ದ ಹೆಜ್ಜೆ ಹೆಜ್ಜೆಯ ಪ್ಲಾನ್ ಗಳನ್ನು ಕೇಳಿದಾಗ ನನಗೆ ಮೈ ಜುಮ್ ಎನ್ನುತ್ತಿತ್ತು. ಇವರ ಮದುವೆಗೆ ಇಬ್ಬರ ನಡುವಿನ ಪ್ರೀತಿ ಕಾರಣವೋ, ಈಕೆಯ ಒಬ್ಸೆಷನ್ ಕಾರಣವೋ, ಆ ಗಂಡನ ನಿರ್ಲಿಪ್ತತೆ ಕಾರಣವೋ, ಇಬ್ಬರಿಗೂ ಒಬ್ಬರಿಂದ ಸಿಗುತ್ತಿದ್ದ ದೀರ್ಘ ಸಮಯದ ಬ್ರೇಕ್ ಮತ್ತು ಸ್ವಾತಂತ್ರ ಕಾರಣವೋ ಅಂತ ಯೋಚಿಸಿದಾಗ ಕನ್ಫ಼್ಯೂಷನ್ ಆಗುತ್ತಿತ್ತು.
 
ಯಾಕಪ್ಪಾ ಪವಿತ್ರಾ ಎಂಬ ವ್ಯಕ್ತಿಯ ಮೇಲೆ ಏನೇನೋ ಬರೆಯುತ್ತಿದ್ದಾಳೆ. ಬೇಲಾಗೇನೋ ಆ ಹುಡುಗಿಯ ಮೇಲೆ ದ್ವೇಷ ಇರಬಹುದು ಅಂತ ಅಂದುಕೊಳ್ಳಬೇಡಿ. ಈ ವ್ಯಕ್ತಿಗೆ ನನ್ನ ಬದುಕಿನಲ್ಲಿ ಯಾವ ಪ್ರವೇಶ ಪಾತ್ರವೂ ಇಲ್ಲ. ಆದರೆ ಈಕೆಯನ್ನು ಹೀಗೇ ಗೆಳತಿಯರ ಮುಖೇನ ನೋಡಿ, ಅವರ ವಾಕ್ಚಾತುರ್ಯವನ್ನು ಕೇಳಿ ತಿಳಿದು, ಸ್ವಲ್ಪ ಮಟ್ಟಿಗೆ ಅದರ ಸವಿ ಅನುಭವಿಸಿ, ’ಅಬ್ಬಾ!! ಎಂತಹ ವ್ಯಕ್ತಿ!! ಎನ್ನುವ ವಿಸ್ಮಯಕ್ಕೆ ಬಿದ್ದಿದ್ದೆ.
 
ಒಂದು ಕಾಲದಲ್ಲಿ ಸಾರಾ ಸಗಟಾಗಿದ್ದಂತೆ ಈಗಲೂ ಕೆಲವರು ಪುರುಷರು ಹೇಗೆ ತಮ್ಮ ಗಂಡಸುತನವನ್ನು ತಪ್ಪಾಗಿ ಅರ್ಥೈಸಿಕೊಂಡು ನಾನು ತಾವು ಮಾಡಿದ ಅತ್ಯಾಚಾರ ಅನಾಚಾರ ದಬ್ಬಾಳಿಕೆಯೆಲ್ಲಾ ಸರಿ, ಅದೇ ಲೋಕ ನೀತಿ, ಅದೇ ಪುರುಷತ್ವ ಎಂದು ಘನ ಹುಂಬನಂತಿರುತ್ತಾರೋ ಹಾಗೆ ಫೆಮಿನಿಸಂ ಎನ್ನುವುದನ್ನು ಹುಚ್ಚಾಗಿ ಅರ್ಥ ಮಾಡಿಕೊಂಡು ಬೇಕಾಬಿಟ್ಟಿ ವಿವರಣೆಗಳನ್ನು ಕೊಟ್ಟುಕೊಂಡು ಬದುಕುವ ಇಂಥಹ ರಾಡಿಕಲ್ ಫೆಮಿನಿಸ್ಟ್ ಗಳು ಡೇಂಜರಸ್ ಮಾರಾಯರೇ! ಕುಡಿಯುವುದು, ಸಿಗರೇಟು ಸೇದುವುದು, ತಾಯಿಯಾಗಲು ಇಚ್ಚಿಸದೇ ಇರುವುದು, ಮನೆಯಲ್ಲಿ ಮೂರು ಹೊತ್ತಿನ ಅಡಿಗೆ ಮಾಡಿ ಹಬ್ಬಕ್ಕೆ ಸಂಭ್ರಮ ಪಡುವ ಹೆಂಗಸರನ್ನು ಹೀಯಾಳಿಸುವುದು ಇದೇ ರಾಡಿಕಲ್ ಫೆಮಿನಿಸಮ್ ಆದರೆ ನಮ್ಮಂತವರಿಗೆ ಭಾಳಾ ಕಷ್ಟವಿದೆ ಎನ್ನಿಸುತ್ತದೆ.
 
 
ನಾನೊಮ್ಮೆ ಪ್ರಶಾಂತನನ್ನು ಅವರಿದ್ದ ಸಮಯದಲ್ಲಿ ನನ್ನ ಗೆಳತಿಯ ಮನೆಗೆ ಬರಲು ಹೇಳಿದೆ. ಆತ ಆಫೀಸ್ನಿಂದ ನೇರವಾಗಿ ಅಲ್ಲಿಗೇ ಬಂದ. ಅವರಿಗೆ ಪ್ರಶಾಂತನನ್ನು ಪರಿಚಯಿಸಿದೆ. ಮೊದಲ ಹತ್ತು ನಿಮಿಷ ಅವರಿಗೆ ಬರುವ ಎಲ್ಲಾ ಸ್ಮಾರ್ಟ್ ವಿಷಯಗಳನ್ನೂ ಮಾತನಾಡಿ ಅವನನ್ನು ಇಂಪ್ರೆಸ್ ಮಾಡಿದರು. ನಾನು ಈಗಾಗಲೇ ಆ ಮಾತುಗಳನ್ನು ಸುಮಾರು ಸಾರಿ ಕೇಳಿದ್ದರಿಂದ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದೆ. ಮನೆ ಕಡೆ ಹೊರಟಾಗ ಈಕೆ ನಿನಗೆ ಏನನ್ನಿಸುತ್ತಾರೆ? ಅವರು ತಮ್ಮನ್ನು ನಮಗೆ ತೋರಿಸಿಕೊಳ್ಳುತ್ತಿರುವ ರೂಪ ನಿಜವೋ ಅಥವಾ ನನಗೆ ಅನ್ನಿಸುತ್ತಿರುವುದು ನಿಜವೋ?’ ಅಂತ ಸುಮ್ಮನೆ ಅವನ ಅಭಿಪ್ರಾಯ ಕೇಳಿದ್ದೆ. ’ಕಮಾನ್! ಶಿ ಇಸ್ ಸೋ ಫೇಕ್. ನಿನಗೂ ಅದು ಗೊತ್ತು. ನೀನು ಅವರ ಮಾತಿನ ಎಂಟರ್ಟೇನ್ಮೆಮ್ಟ್ ಪಡೆಯಲು ಮಾತ್ರ ಹೋಗ್ತಿ’ ಎಂದುಬಿಟ್ಟ.
 
ಮಳೆಗಾಲ ಮುಗಿಯುವ ಟೈಮ್...ಒಮ್ಮೆ ಪವಿತ್ರಾ ತುಂಬಾ ಖುಷಿಯ ಮೂಡಿನಲ್ಲಿದ್ದರು. ’ಮುಂದಿನವಾರ ನನ್ನ ಗಂಡ ಬರ್ತಾನೆ, ನೀವೆಲ್ಲರೂ ನಮ್ಮನೇಗೆ ಟೀಗೆ ಬರಬೇಕು’ ಎಂದು ಆಮಂತ್ರಿಸಿದರು. ಅವರ ಹೈ ಪೊರ್ಫೈಲ್ ಗಂಡನನ್ನು ನೋಡುವ ಕೆಟ್ಟ ಕುತೂಹಲ ನಮಗೆ. ಹೋಗೇ ಹೋದ್ವಿ. ಕುಷಲೋಪರಿಗಳಾದವು. ಪವಿತ್ರಾರ ಬಾಯಿಂದ ಮಾತ್ರ ಅವರ ಬಗ್ಗೆ ಕೇಳಿದ್ದೆವಾದ್ದರಿಂದ ಯಾವ ಸೀಮೆಯ ವ್ಯಕ್ತಿ ಇವರು ಎಂಬ ಕುತೂಹಲವಿತ್ತು ನೋಡಿ...ಆ ವ್ಯಕ್ತಿ ಸ್ವಲ್ಪ ಸಂಕೋಚದ ಸ್ವಭಾವದವರು, ಸರಳ ಮನುಷ್ಯ ಎನಿಸಿದರು. ಯಾವುದೇ ಬಿಗುವಿಲ್ಲದೆ ಮಾತಾಡಿದರು. ನಾವು ಮಾತಾಡುವಾಗ ಕುಳಿತು ಕೇಳಿದರು. ಪವಿತ್ರಾರ ಸಾಮಾನ್ಯ ನಡವಳಿಕೆ ಹೇಗಿರುತ್ತಿತ್ತೋ ಅದರ ಪೂರಾ ವಿರುದ್ಧದಂತಿದ್ದರು.
 
 
ಪವಿತ್ರಾ ನಮ್ಮೆಲ್ಲರನ್ನೂ ಕೂರಿಸಿಕೊಂಡು ಅನಾಮತ್ತಾಗಿ ಏನೋ ವಿಷಯ ತೆಗೆದುಕೊಂಡು ಸಾಫ್ಟ್ ವೇರ್ ಉದ್ಯಮಗಳನ್ನು ಬೈಯ್ಯುಲು ಶುರು ಮಾಡಿದರು. ಈ ಸಂಭಾಷಣೆ ಎಲ್ಲಿಂದ ಶುರ್ವಾಯಿತು ಎಂದು ನಮಗೂ ಅರ್ಥವಾಗಲಿಲ್ಲ. ಅವರು ಅಸಂಬದ್ಧ ಅದೇನೊ ’ಇಂಟಲೆಕ್ಚುಅಲ್’ ಮಾತುಗಳನ್ನು ಆಡುವಾಗ ಆತ ಬಹಳ ಇರುಸುಮುರುಸಿನಲ್ಲಿದ್ದಂತೆ ಕಾಣುತ್ತಿದ್ದರು. ತನ್ನ ಅಭಿಪ್ರಾಯ ಹೇಳುವ ಸಮಯ ಬಂದಾಗ ’ನನಗೆ ಹಾಗೆ ಅನ್ನಿಸುವುದಿಲ್ಲ. ನೀನು ಹೇಳುವುದು ಯಾವುದರಲ್ಲಿಯೂ ಹುರುಳಿಲ್ಲ’ ಎಂದು ಸಮಾಧಾನವಾಗಿ ತಮಗನ್ನಿಸಿದ್ದು ತಿಳಿಸಿ ಕೂತರು. ಅಷ್ಟೇ. ಆ ನಂತರ ನಡೆದಿದ್ದು ನನಗೂ ಇನ್ನೂ ಅರ್ಥ ಆಗಿಲ್ಲ. ನಮ್ಮೆದುರಿಗೆ ಅವರ ಗಂಡ ಅವರನ್ನು ಟೀಕೆ ಮಾಡಿದ್ದಕ್ಕೋ, ಅದೇನಾಯಿತೋ...ಪವಿತ್ರಾ ಸಡನ್ನಾಗಿ ರೂಮಿಗೆ ಹೊಕ್ಕು ಧಡಾರ್ ಎಂದು ಬಾಗಿಲು ಹಾಕಿಕೊಂಡು ಬಿಟ್ಟರು. ಆಗಷ್ಟೇ ಬಂದು ಪರಿಚಯ ಮಾಡಿಕೊಂಡು ನಾಲ್ಕು ಮಾತಾಡಿ ಅಲ್ಲಿ ಕುಳಿತಿದ್ದ ನಮಗೆ ಏನೂ ಅರ್ಥವಾಗಲಿಲ್ಲ. ಅವರ ಗಂಡನಿಗೆ ಮುಜುಗರ. ಆತನೂ ಎದ್ದು ಹೋಗಿ ರೂಮಿನ ಬಾಗಿಲು ಹಾಕಿಕೊಂಡರು. ಇಬ್ಬರೂ ಸುಮಾರು ಹೊತ್ತು ಹೊರಬರಲಿಲ್ಲ. ಇದೇನಪ್ಪಾ ಈ ಥರ ಆಯ್ತು ಅಂತ ನಾನು ನನ್ನ ಗೆಳತಿ ಮುಖ ಮುಖ ನೋಡಿಕೊಂಡರೆ ನಮ್ಮ ಗಂಡದಿರಿಗೆ ಇದ್ಯಾವ ನಾಟಕಕ್ಕೆ ಬಂದ್ವಿ ಎಂಬ ಇರಿಟೇಷನ್. ಎಲ್ಲರೂ ಎದುರಿಗೆ ಕಂಡ ಮ್ಯಾಗಜೀನುಗಳನ್ನು ಮುಖಕ್ಕೆ ಹಿಡಿದು ಕುಳಿತುಕೊಂಡೆವು.
 
ಸ್ವಲ್ಪ ಹೊತ್ತಿನಲ್ಲಿ ಹೊರ ಬಂದ ಪವಿತ್ರಾ ’ಸಾರಿ ಗೈಸ್ ನನಗೆ ಸಡನ್ ಆಗಿ ತಲೆ ನೋವು ಶುರು ಆಗಿಬಿಟ್ಟಿತ್ತು...ನಿಮಗೆ ಇಲ್ಲಿ ಕೂತು ಬೋರ್ ಆಗಲಿಲ್ಲ ಅನ್ನಿಸುತ್ತೆ’ ಅಂದರು. ಆಕೆಯ ಕಣ್ಣೆಲ್ಲಾ ಕೆಂಪಾಗಿತ್ತು. ಅವರ ಗಂಡ ಬರಲೋ ಬೇಡವೋ ಎಂದು ಮುಖ ಚಿಕ್ಕದು ಮಾಡಿಕೊಂಡು ಹೊರಗೆ ಬಂದರು. ಆಕೆ ತಂದು ಬಡಪಾಯಿ ಟೀ ಅನ್ನು ನಾವು ಒಂದೇ ಗುಟುಕಿಗೆ ಕುಡಿದು ’ವಾಪಸ್ ಹೋಗ್ತಾ ಸ್ವಲ್ಪ ಮನೆಗೆ ಹಾಲು ತರಕಾರಿ ಕೊಳ್ಳೋದಿದೆ’ ಎಂದು ಬಾಯಿಗೆ ಬಂದ ಸುಳ್ಳು ಹೇಳಿ ಅಲ್ಲಿಂದ ಹೊರಟೆವು. ನಮ್ಮಿಂದ ಗಂಡ ಹೆಂಡತಿ ಮನಸ್ತಾಪ ಮಾಡಿಕೊಂಡರಲ್ಲಪ್ಪಾ ಅಂತ ನಾನು ನನ್ನ ಗೆಳತಿ ಬೇಜಾರು ಮಾಡಿಕೊಂಡು ಕಾರಿನಲ್ಲಿ ಸಪ್ಪಗೆ ಕುಳಿತಿದ್ದರೆ ನಮ್ಮ ಗಂಡಂದಿರು ಯಾವುದೋ ಕಾಮಿಡಿ ಶೋ ನೋಡಿ ಬಂದಂತೆ..’ವಾಟ್ ಅ ಕ್ರೇಜಿ ವುಮನ್!’ ಅಂತ ನಗಾಡಿಕೊಳ್ಳುತ್ತಿದ್ದರು.
 
ಮರುದಿನ ನಾನು ವಾಕ್ ಮಾಡಲು ಹೊರಟಾಗ ನನ್ನ ಗೆಳತಿ ಅವಳ ಮನೆ ಮುಂದೆ ಕಾಯುತ್ತಿದ್ದಳು. ನಾನು ಕಂಡ ತಕ್ಷಣ ’ನಿನಗೊಂದು ವಿಷಯ ಹೇಳಬೇಕು’ ಇದು ಏನೋ ಬಹಳ ವಿಶೇಷ ಸುದ್ದಿ ಎಂದು ಅವಳ ಕಣ್ಣುಗಳನ್ನು ನೋಡಿಯೇ ಊಹಿಸಬಹುದಿತ್ತು. ’ಪವಿತ್ರಾ ಫೋನ್ ಮಾಡಿದ್ದರು ಕಣೇ. ಎಲ್ಲಾ ಚನ್ನಾಗಿ ನಡೆಯುತ್ತಿತ್ತಂತೆ. ನಾನು ಮತ್ತು ನೀನು ನೆನ್ನೆ ಅವರ ಗಂಡನಿಗೆ ಕಣ್ಣು ಹಾಕಿದ್ದೆವಂತೆ...ವೆ ಆರ್ ಜೆಲಸ್ ಅಂತೆ. ಅವರಿಗೆ ತುಂಬಾ ನೋವಾಗಿದೆಯಂತೆ. ದೂರ ಇದ್ದೇ ಫ್ರೆಂಡ್ಸ್ ಆಗಿರೋಣ..ಲೆಟ್ಸ್ ನಾಟ್ ಮೀಟ್’ ಅಂದಿದ್ದಾರೆ ಎಂದಳು. ನನಗೆ ಎಲ್ಲಿತ್ತೋ ತಡೆಯಲಾಗಲಿಲ್ಲ. ಇಬ್ಬರೂ ಅಕ್ಕಪಕ್ಕದ ಬಿಲ್ಡಿಂಗ್ಗಳಿಗೆ ಕೇಳಿಸುವಷ್ಟು, ಕಣ್ಣಲ್ಲಿ ನೀರು ಬಂದು, ಪಕ್ಕೆ ನೋವಾಗುವವರೆಗೂ ನಕ್ಕೆವು. ’ವಾಕ್ ಬೇಡ ಕಣೇ ಈ ಎಕ್ಸರ್ಸೈಸೇ ಸಾಕು’ ಅಂತ ಸುಧಾರಿಸಿಕೊಂಡು ಮನೆಗೆ ಬಂದೆವು.
 
 
ರಾತ್ರಿಯೆಲ್ಲಾ ಪವಿತ್ರಾರದ್ದೇ ಯೋಚನೆ. ಮನೆಯಲ್ಲಿ ಕೂತು ಗಂಡಂದಿರಿಗೆ ಬೇಸಿ ಹಾಕುವ ’ಗೂಷ್ಲುಗಳಾದ’ ನಾವು ರಾಡಿಕಲ್ ಫೆಮಿನಿಸ್ಟ್ ಪವಿತ್ರಾರಿಗೆ ಎಲ್ಲಿಲ್ಲದ ಇನ್ಸೆಕ್ಯುರಿಟಿ ಹುಟ್ಟಿಸಿದ್ದೆವು. ಸಿಕ್ಕ ೨೦ ನಿಮಿಷದಲ್ಲಿ ಅವರ ಗಂಡನಿಗೇ ಕಣ್ಣೂ ಹಾಕಿದ್ದೆವು! ಅವರ ಅತ್ತಿಗೆಯಂದಿರು, ಬಂಧು ಮಿತ್ರರೆಲ್ಲಾ ಯಾಕೆ ಪವಿತ್ರಾರ ಬಾಯಲ್ಲಿ ’ಬಿಚಸ್’ ಆಗಿದ್ದರು ಅರ್ಥವಾಯಿತು. ಎಂಥ ಮ್ಯಾನಿಪ್ಯುಲೇಟಿವ್ ಹುಡುಗಿ ಎನ್ನಿಸಿದರು. ಅವರಿಂದ ಇವರಿಗೆ, ಇವರಿಂದ ಅವರಿಗೆ ತಂದಿಟ್ಟು, ಆ ಭಿನ್ನಾಭಿಪ್ರಾಯ ಅಥವಾ ಅಪಾರ್ಥಗಳ ಹೊಗೆಯಲ್ಲಿ ತಾನು ಒಳ್ಳೆಯವಳಾಗಿ ಹಿತೈಷಿಯಂತಾಗಿ ತನ್ನ ಬೇಳೆ ಬೇಯಿಸಿಕೊಂಡು ಸಾಮ್ರಾಜ್ಯ ಮಾಡುವ ಇಂಥ ಗಂಡಸರು/ಹೆಂಗಸರು ತುಂಬಾ ಅಪಾಯಕಾರಿ. ಇಂಥವರೊಬ್ಬರು ನಮ್ಮ ಹತ್ತಿರದ ಬಂಧು ಮಿತ್ರರಲ್ಲಿ ಇದ್ದುಬಿಟ್ಟರೆ ಇಡೀ ಬದುಕು ನಮ್ಮನ್ನು ನಾವು ’ತಪ್ಪು ಮಾಡಿಲ್ಲ, ಹಾಗೆ ಹೇಳಿಲ್ಲ’ ಎಂದು ಪ್ರೂವ್ ಮಾಡಿಕೊಳ್ಳುವುದರಲ್ಲೇ ಕಳೆದುಹೋಗಬಹುದೇನೋ...
 
 
ಪವಿತ್ರಾರ ರೀತಿಯದ್ದು ಸಾವಿರದಲ್ಲಿ ಒಂದು ಲಾಂಗ್ ಡಿಸ್ಟನ್ಸ್ ಕೇಸ್ ಆಗಿರಬಹುದು. ಆದರೂ ಇಂಥ ಅಸ್ಥಿರತೆ, ಸ್ವಾರ್ಥ, ಭಯ, ಅನುಮಾನ, ಆತಂಕಗಳನ್ನಿಟ್ಟುಕೊಂಡು, ಎಲ್ಲರನ್ನೂ ಎಲ್ಲವನ್ನೂ ಕೆಟ್ಟವರನ್ನಾಗಿ ಮಾಡಿ ದೂರ ಮಾಡಿಕೊಂಡು, ಪ್ರೀತಿ ಇದೆಯೋ ಇಲ್ಲವೋ ಎಂಬುದನ್ನೂ ಪ್ರಶ್ನಿಸಿಕೊಳ್ಳದೆ, ಪ್ರೀತಿ ಅಂದರೆ ಏನು? ಕನ್ವೀನಿಯನ್ಸಾ ಅಥವಾ ಒಬ್ಬರು ಇನ್ನೊಬ್ಬರನ್ನು ಸುಲಿಗೆ ಮಾಡುವುದಾ ಎಂದೂ ಯೋಚಿಸದೆ, ಸಾವಿರಾರು ಮೈಲುಗಳಂತರದ ಸಂಬಂಧವನ್ನು ಅಥವಾ ಸಂಬಂಧವೆನ್ನುವ ಪರಸ್ಪರ ಬಂಧನವನ್ನು ಮುಂದುವರಿಸುವ ಮನಸ್ಸುಗಳನ್ನು ಹೇಗೆ ಅರ್ಥ ಮಾಡಿಕೊಳ್ಳಬಹುದು?  

(ಮುಂದುವರಿಯುವುದು)  

 
 
 
 
 
 
Copyright © 2011 Neemgrove Media
All Rights Reserved