ಜಾನಪದವೆಂಬ ಗೀತೆ!

ಡಾ. ಹಿ. ಶಿ. ರಾ.
 
 
 
 
ಈ ಹೊತ್ತು ಜಾನಪದ ಪ್ರಚುರ-ಪ್ರಚಾರದಲ್ಲಿ ಇರುವ ವಿಷಯ. ಕಣ್ಣಿಗೆ ರಾಚುವಂತೆ ಕಾಣುವ ಜನಪದ ಕಲೆಗಳ ಪ್ರದರ್ಶನವೆ ಇದಕ್ಕೆ ಕಾರಣ. ಮದುವೆ ಮನೆಗೆ ಶೃಂಗಾರ ಮಾಡಿಕೊಂಡು ಹೋಗುವ ಹೆಣ್ಣು ಮಕ್ಕಳೆಲ್ಲ ಪರಮ ಸುಂದರಿಯರಂತೆಯೆ ಕಾಣುತ್ತಾರಂತೆ! ಈ ಹೊತ್ತಿನ ’ಪ್ರಚಾರದಲ್ಲಿ ಇರುವುದು ಉಳಿಯುತ್ತದೆ, ಪ್ರಚಾರಕ್ಕೆ ಬಾರದೆ ಇರುವುದು ಸಾಯುತ್ತದೆ’ ಎಂಬ ತತ್ವದಂತೆ ಎಲ್ಲರಿಗೂ ಪ್ರಚಾರದ ರೋಗ ಹಿಡಿದಿದೆ. ಒಬ ಕಳಪೆ ರಾಜಕಾರಣಿ ಕೂಡ ತನ್ನ ಕುಕೃತ್ಯದಿಂದಾಗಿಯೆ ಮತ್ತೆ ಮತ್ತೆ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಹಾಗೆ ಕಾಣಿಸಿಕೊಳ್ಳುವುದೇ ಬದುಕುವುದು ಎಂದು ತಿಳಿಯುತ್ತಾನೆ. ಇದು ಕಳಪೆ ಮಾಲುಗಳನ್ನು ಬಿಕರಿ ಮಾಡುವ ಜಾಹೀರಾತು ಜಗತ್ತಿನ ಜೀವನ ತತ್ವ.
 
ನಮ್ಮ ಜನಪದ ಕಲೆಗಳೂ ತುಂಬ ಪ್ರಚಾರದಲ್ಲಿವೆ. ಜಾತ್ರೆ, ಉತ್ಸವ, ಹಬ್ಬಗಳಲ್ಲಿ ಅವು ಜೀವಸತ್ವದೊಂದಿಗೆ ಮೆರೆಯುತ್ತವೆ. ಅದೇ ಕಲೆಗಳನ್ನು ಮುಖವಿಲ್ಲದವರ ಮುಂದೆ, ಮತಿಗೇಡಿಗಳ ಮುಂದೆ ಹಾಗೂ ಗತಿಗೇಡಿಗಳ ಮುಂದೆ ಕೂಡಾ ಮೆರವಣಿಗೆ ಮಾಡಲಾಗುತ್ತದೆ. ಬಡವರಾದ ಜನಪದ ಕಲಾವಿದರು ಕಾಸು ನೀಡಿದಲ್ಲಿಗೆ ಹೋಗಿ ಪ್ರದರ್ಶನ ನೀಡುತ್ತಾರೆ. ಅದೇ ಕರಾವಳಿಯ ಯಕ್ಷಗಾನವನ್ನು ನೋಡಿ: ಅಲ್ಲಿ ಅದನ್ನು ಗೌರವಯುತ ಕಲೆ ಮತ್ತು ಅದೊಂದು ಸಂಸ್ಕೃತಿ ಪ್ರದರ್ಶನವೆ ಹೊರತು ಕೇವಲ ಮನರಂಜನೆಯಲ್ಲ ಎನ್ನುತ್ತಾರೆ. ತಿಳಿದವರು ಕಾಸು-ಕೊಸರಿಗೆಲ್ಲ ಪ್ರದರ್ಶನ ನೀಡುವುದಿಲ್ಲ. ಅವರಲ್ಲಿ ಬಡವರಿದ್ದಾರೆ ನಿಜ; ಅದು ಆರ್ಥಿಕ ಬಡತನ, ಸಾಂಸ್ಕೃತಿಕ ಬಡತನ ಅವರಿಗಿಲ್ಲ. ಕಲಾವಿದನೊಬ್ಬ ನಾನು ಗರೀಬ ಎಂದು ಅರಚಿಕೊಂಡರೆ ಅವನಿ ನಿಜದ ಕಲಾವಿದನೆ ಅಲ್ಲ. ಅವನಲ್ಲಿ ಅಂತ ನಿಜವಾದ ಕಲೆ ಇರುವುದಿಲ್ಲ. ಕಲೆಯೂ ಬಡತನವೂ ಜೊತೆ ಜೊತೆಗೇ ಇರುತ್ತವೆ. ಆದರೆ ಎಂದೂ ಬಡವ ಅಲ್ಲ ಎಂಬುದನ್ನು ಕಲಾವಿದರು ತಿಳಿದಿರಬೇಕು ಎಂದು ದಿವಂಗತರೂ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರೂ, ಮಹಾನ್ ಯಕ್ಷಗಾನ ಕಲಾವಿದರೂ ಆಗಿದ್ದ ಕೆರೆಮನೆ ಶಂಭು ಹೆಗಡೆಯವರ ಮಾತನ್ನು ನಾನಿಲ್ಲಿ ಸ್ಮರಿಸುತ್ತೇನೆ. 
 
ಕಲಾವಿದ ಕೇವಲ ಶ್ರೀಮಂತನಾದರೆ ಅವನು ನಿಜದ ಕಲಾವಿದ ಆಗಲಾರ. ಕಲಾಶ್ರೀಮಂತಿಕೆ ಮತ್ತು ಸಾಮಗ್ರಿ ಶ್ರೀಮಂತಿಕೆ ಎರಡೂ ಬೇರೆ ಬೇರೆ. ನಿಜವಾದ ಶ್ರೀಮಂತ ಕಲಾಶ್ರೀಮಂತನೆ. ಯಾಕೆಂದರೆ ಕಲೆ ಕೇವಲ ಶ್ರಮದಿಂದ ಬಂದಿರುವುದಿಲ್ಲ, ಅದು ನೈಪುಣ್ಯದ ಉತ್ಪನ್ನ, ಸಂಸ್ಕ್ರ‍ಿತಿಯ ತವನಿಧಿ. ಅಂಥ ಶ್ರೀಮಂತ ಕಲೆ ಸದಾ ನಮ್ಮ ಮುಂದೆ ಬರುತ್ತಿರಬೇಕು. ಅದು ನಮ್ಮನ್ನು ಹಾಗೂ ನಮ್ಮ ಸಂಸ್ಕೃತಿಯನ್ನಿ ಪುನರುಜ್ಜೀವಿಸಿಕೊಳ್ಳುವ ಕೆಲಸ. ಹಾಗೆ ಆಗದಿದ್ದರೆ ನಾವು ಮಾರಾಟವಾಗಿದ್ದೇವೆ ಎಂದು ಅರ್ಥ. ತನ್ನ ಸಂಸ್ಕೃತಿಯನ್ನು ಕಲೆ, ಸಾಹಿತ್ಯ, ಚಿತ್ರಕಲೆ, ಸಂಗೀತಕಲೆ ಇವುಗಳ ಮೂಲಕ ಪುನರ್ ಸೃಷ್ಟಿಸಿಕೊಳ್ಳುವುದು ನಮ್ಮನ್ನೆ, ನಮ್ಮ ಸಮಾಜವನ್ನೆ ಪುನರ್ ಸೃಷ್ಟಿಸಿಕೊಂಡಂತೆ. 
 
ಶಾಲೆಯಲ್ಲಿ ಪಾಠವಿದೆ, ನಿಜ. ಅದು ನಾವು ನಮ್ಮ ಉದ್ಯೋಗ ಹಾಗೂ ಹೊಸ ತಿಳುವಳಿಕೆಗಾಗಿ ಈಗ ರೂಪಿಸಿಕೊಂಡಿರುವುದು. ಆದರೆ ಅನೇಕ ಶತಮಾನಗಳಲ್ಲಿ ನಮ್ಮ ಹಿರಿಯರು ರೂಪಿಸಿದ ಪರಂಪರೆ ಎಂಬ ಒಂದು ಶಿಕ್ಷಣ-ವಿದ್ಯೆ-ಅರಿವು-ಜ್ನಾನ ಇದೆಯಲ್ಲ ಅದು ನಮ್ಮ ಮನೆಪಾಠ, ಮನದ ಪಾಠ ಮತ್ತು ಮಾನ-ಮರ್ಯಾದೆಯ ಪಾಠ. ಅಂಥ ಪಾಠ ನಮ್ಮ ಜನಪದ ಕಲೆ, ಸಾಹಿತ್ಯ, ಸಂಗೀತ, ಆಹಾರ, ಆರೋಗ್ಯ ಮತ್ತು ನಿತ್ಯ ಜೀವನ. 
ಇಂಥ ಅಮರ ಜ್ನಾನವೆ ಜಾನಪದ. ಅದನ್ನು ಉಳಿಸಿ ಬೆಳೆಸಬೇಕೆಂಬುದು ಈ ಹೊತ್ತಿನ ತವಕ. ಪರಂಪರೆ ಅಪರಾಧವಲ್ಲ, ಪರಂಪರೆಯ ಹೆಸರಿನಲ್ಲಿ ಇರುವ ಮೂಢನಂಬಿಕೆ ಮಾತ್ರ ಅಪರಾಧ. ಈ ಪರಂಪರಾ ಜ್ನಾನವನ್ನು ವಿವೇಕಯುತವಾದ ವಿಜ್ನಾನದೊಂದಿಗೆ ಬೆರಸಿಕೊಂಡು, ಕರಗಿಸಿಕೊಂಡು ಬದುಕಬೇಕಾದುದೆ ಸಮಕಾಲೀನತೆ. ಅಂಥ ಆರೋಗ್ಯಕರ ಸಮಕಾಲೀನತೆಗೆ ಹಂಬಲಿಸುವವರೆಲ್ಲ ಜಾನಪದವನ್ನು ಬಯಸುತಿದ್ದಾರೆ. ಹಾಗಾಗಿ ಜಾನಪದವೆಂದರೆ:
 
೧) ಸಮಜೀವನ
೨) ಸಮರಸ ಜೀವನ
೩) ಸ್ವಂತಿಕೆಯ ಜೀವನ
೪) ಸತ್ವಯುತ ಜೀವನ
೫) ಸರಸ-ಸಲಾಪಯುತ ಜೀವನ
 
ಇದು ಎಲ್ಲರಲ್ಲೂ, ಎಲ್ಲ ವರ್ಗಗಳಲ್ಲೂ, ಎಲ್ಲ ಕಾಲಗಳಲ್ಲೂ ಇರುತ್ತದೆ. ಶಿಷ್ಟ ಎನ್ನುವುದು ಒಂದು ಸಂದರ್ಭ. ಜಾನಪದ ಎನ್ನುವುದು ಸರ್ವಕಾಲೀಕ. ಸರ್ವಕಾಲೀಕದಿಂದ ಶಿಷ್ಟ ಬೆಳೆಯುತದೆ. ಅದೇ ಶಿಷ್ಟ ಸಾರ್ವಕಾಲೀಕ ಜೀವನವನ್ನು ಬೆಳೆಸಿ ಪೋಷಿಸುತ್ತದೆ. ಈ ಎರಡೂ ಪರಿಕಲ್ಪನೆಗಳೂ ದೂರ ದೂರ ಅಲ್ಲ; ಅವಳಿಜವಳಿಗಳು. ಆದ್ದರಿಂದ ಜಾನಪದವೆಂಬುದು ಶಿಷ್ಟ, ಶ್ರೀಮಂತ, ಆಧುನಿಕ...ಇಂಥ ಎಲ್ಲರಲ್ಲೂ ಸವೇಸಾಮಾನ್ಯವಾಗಿ ಇರುತ್ತದೆ. ನಾವು ಸ್ವಲ್ಪ ಕಾಲ ಹೊರಗೆ ನಿಂತಾಗ, ಹೊರಗೆ ಹೋದಾಗ ಶಿಷ್ಟ ಅಷ್ಟೆ. ಮನೆಯ ಒಳಕ್ಕೆ ಬಂದ ತಕ್ಷಣ ನಾವೆಲ್ಲ ಜನಪದರು. ಕೈಲಾಸಕ್ಕೇ ಹೋಗಿ...ಕೊನೆಗೆ ’ಮನೆಗೆ ಹೋದರೆ ಸಾಕಪ್ಪ, ಅಲ್ಲಿ ನೆಮ್ಮದಿ’ ಎನ್ನುತ್ತೇವೆ. ಇದೇ ಜನಪದ ಜೀವನ. ಇದನ್ನೇ ನಾವು ಜಾನಪದ, ಅಂದರೆ ಜನಪದರ ಒಟ್ಟು ಬದುಕು ಎನ್ನುವುದು. 
 
(ಮುಂದುವರೆಯುವುದು) 
 
 
 
 
 
Copyright © 2011 Neemgrove Media
All Rights Reserved