ಬೆಳ್ಳುಳ್ಳಿ

 
ಒಂದೂರಲಿ ಒಬ್ ಉಡುಗ್ ಇದ್ದ. ಜನ ಅವ್ನಾ ಬೆಳ್ಳುಳ್ಳಿ ಅಂತ್ ಕರಿತಿದ್ರು. ಅವ ತಾಯಿಗೆ ಒಬ್ಬನೇ ಮಗ. ಅವನ್ಗೆ ಹೊಗೆಸೊಪ್ಪಿನ ವ್ಯಾಪಾರ. ಅವನ ಹೆಂಡ್ತಿ ಹೆಸರು ಸುಪಾಣಿ ಅಂತ. ಅವಳು ಮುದಿ ಅತ್ಗೆ  ಸರಿಯಾಗಿ ಊಟ ತಿಂಡಿ ಕೊಡ್ತಿರಲಿಲ್ಲ. ಬರೀ ಕಾಟ ಕೊಡವ್ಳು. ಆ ಮುದ್ಕಿಗೆ ನೂರು ವರ್ಷದ ಮ್ಯಾಲೆ ಆಗಿತ್ತು. ಮಗ, ನನ್ನ ತಾಯೀನ ಚನ್ನಾಗಿ ನೋಡ್ಕೊಳೆ ಅಂತ ಎಂದಿನ್ ತರ ಹೆಂಡ್ತಿಗೆ ಹೇಳ್ಬಿಟ್ಟು ಅವತ್ತು ಸಂತೆಗೆ ಹೊಂಟ. ಅತ್ತ ಕಡೆ ಗಂಡ ಸಂತೆಗೆ ಹೋಗೋದೇ ಕಾಯ್ಕಂಡಿದ್ದ ಸುಪಾಣಿ ಅತ್ತೆ ಹತ್ತಿರ ಬಂದು ’ಅತ್ತ್ಯಮ್ಮಾ, ಮಾವ ದುಶ್ಯಾಸನನ ಪಾತ್ರ ಮಾಡ್ತಿದ್ರಂತಲ್ಲಾ ನೀವು ನೋಡಿದ್ರಾ?’ ಅಂತ ಕೇಳಿದ್ಲು. ’ನೋಡಿದ್ದೆ ಕಣವ್ವಾ’ ಅಂದ್ಲು ಅತ್ತೆ. ’ಹಂಗಾದ್ರೆ ನೀವು ದುಶ್ಯಾಸನನ ಪಾತ್ರ ಕುಣಿದು ತೋರಿಸಿ...ಕುಣುದ್ರೆ ಊಟ ಕೊಡ್ತೀನಿ. ಇಲ್ಲದಿದ್ರೆ ನಾನು ಊಟ ಗೀಟ ಏನು ಕೊಡಕ್ಕಿಲ್ಲಾ’ ಅಂದುಬಿಟ್ಳು!
 
ನೂರು ವರ್ಷದ ಮುದುಕಿ ಹೊಟ್ಟೆ ಹಸಿಗೆ ಪರದಾಡಿ ’ಸರಿ ಕುಣೀತೀನಿ’ ಅಂತ ಒಪ್ಕಂಡ್ಲು. ’ಡಂಗ ಣಕ್ಕ ಡಂಗ ಣಕ್ಕಾ..’ ಅತ್ತೆ ಕುಣಿಯುತ್ತಾ ಅವಳೇ...ಸೊಸೆ ತಬಲ ಬಾರಿಸ್ತಾ ಅವಳೆ... ಅಷ್ಟರೊಳಗಾಗಿ ಮಗ ಸಂತೆಯಿಂದ ಬಂದೇಬುಟ್ಟ. ಇದೇನಪ್ಪಾ ಇದು! ಅಂತ ಕದೀನ ಸಂದೀಲಿ ನೋಡ್ದ! ಯಾರೋ ಕುಣೀತಾ ಅವ್ರೆ! ಬಾಕಲು ತಟ್ಬಿಟ್ಟು ’ಸುಪಾಣಿ, ಸುಪಾಣಿ..’ ಅಂತ ಹೆಂಡ್ತೀನ ಕೂಗ್ದ. ಆ ಗಳಿಗೇಲಿ ಮುದ್ಕೀನ ಮಂಚದ ಮೇಲೆ ಕೂರಿಸ್ಬಿಟ್ಟು ಇವಳು ಒಂದು ಬಿಂಕವಾಗಿ ಬಾಕಲು ತೆಗೆದ್ಲು. ಮಗ ಬಂದು ತಾಯೀನ ಕೇಳ್ದ ’ಯಾಕವ್ವಾ ಇಷ್ಟು ಸುಸ್ತಾಗಿದ್ದೀಯಾ?’ ಅಂತ. ’ಅಯ್ಯೋ...ನಂಗೆ ಉಷಾರಿಲ್ಲ ಕಣಪ್ಪಾ...’ ಅಂತ ಮುದುಕಿ ಏದುಸಿರು ಬಿಟ್ಕಂಡು ಹೇಳಿದ್ಲು. ಮಗನಿಗೆ ತುಂಬಾ ಬೇಜಾರಾಯ್ತು.
 
ತಡಿ ಮಾಡ್ತಿನಿ ಇವಳ್ಗೆ ಅಂತ ಹೆಂಡ್ತಿನ ಸಮಾ ಬಯ್ಕಂಡು ತಕ್ಷಣ ಪಕ್ಕದಲ್ಲಿದ್ ಅತ್ತೆ ಊರಿಗೆ ಹೊರಟ. ಅತ್ತೆ ಮನೆಗೋಗಿ ’ನಿಮ್ಮ ಮಗಳಿಗೆ ಏಳೂರು ಗಾಳಿ ಹಿಡ್ಕಂಡಿದೆ ಕಣತ್ತೇ’ ಅಂತ ತಿಳಿಸ್ದ. ’ಅದಕ್ಕೆ ಏನು ಮದ್ದು ಬೇಕಾಗಿತ್ತಪ್ಪಾ...’ ಅಂತ ಅತ್ತೆ ಕೇಳಿದ್ಲು . ’ಏಳು ಮನೆ ಪರಕೆ, ಏಳು ಮನೆ ಬೂದಿ ಆಗಬೇಕಿತ್ತು ಅತ್ತ್ಯಮ್ಮಾ...’ ಎಂದು ಅಳಿಯ ಹೇಳಿದ. ’ಅಷ್ಟೇ ಅಲ್ಲ...ನೀವು ನಿಮ್ಮ ಅರ್ಧ ತಲೆ ಬೋಳಿಸಿ, ಮೂರು ನಾಮ ಹಾಕ್ಕೊಂಡು ಬೇವಿನಸೊಪ್ಪು ಉಟ್ಕೊಂಡು, ಕತ್ತೆ ಮೇಲೆ ಕೂತ್ಕೋಂಡು ನಮ್ಮನೇಗೆ ಬಂದು, ಬಿಡ್ತು ಬಿಡ್ತು ಬಿಡ್ತು ಅಂತ ನಿಮ್ಮಗಳಿಗೆ ಪರಕೇಲಿ ಸರಿಯಾಗಿ ಹೊಡೆದು, ಬೂದೀನ ತಲೆಗೆ ಬಳಿಬೇಕು’ ಅಂತ ಅತ್ತೆಗೆ ಸರಿಯಾಗಿ ಹೇಳ್ಕೊಟ್ಟು ವಾಪಸ್ ತನ್ನೂರಿಗೆ ಬಂದ. ಬಂದವನೇ ಹೆಂಡ್ತಿಗೆ ’ನಿಮ್ಮ ತಾಯೀಗೆ ಮೂರೂರು ದೆವ್ವ ಹಿಡಿದಿದೆ ಗೊತ್ತಾಯ್ತೇನೆ...’ ಅಂತ ತಿಳಿಸ್ದ. ’ಅಯ್ಯೋ ಹೌದೇನ್ರೀ...ಅದ್ಕೆ ನಮ್ಮವ್ವನಿಗೆ ಶಾಂತಿ ಏನು ಮಾಡ್ಬೇಕು’ ಅಂತ ಸುಪಾಣಿ ಕೇಳಿದ್ಲು. ’ಏನಿಲ್ಲ ಕಣೆ...ಮೂರೂರು ಗುಡಿಸಿದ ಪರಕೇ ತಕಂಭಂದು ಅದ್ರಲಿ ನಿಮ್ಮಮ್ಮನಿಗೆ ಹೊಡೆದು, ಮೂರೂರು ಬೂದೀನ ನಿಮ್ಮ ತಾಯಿತಲೆಗೆ ಸುರಿದ್ರೆ ನಿಮ್ಮ ತಾಯಿಗೆ ಶಾಂತಿ ಕಣೆ’ ಅಂದ. ಹಿಂಗಾದ ಮೇಲೆ ಮದ್ದು ಮಾಡ್ದೇ ಇರಕಾಯ್ತದಾ? ತಾಯಿಗೆ ಮಗಳು ಹೊಡೆಯೋದು, ಮಗಳಿಗೆ ತಾಯಿ ಹೊಡೆಯೋದು ಬಿಡ್ತು, ಬಿಡ್ತು ಅನ್ನೋದು, ಬೂದಿ ಸುರಿಯೋದು ಮಾಡಿಕೊಂಡ್ರು. ಬೆಳ್ಳುಳ್ಳಿ ಅವನ ತಾಯಿ ಜೊತೆ ಇದ್ನ ಜುಮ್ ಅಂತ ನೋಡ್ತಾ ಇದ್ದ. ಯಾಕೋ ಇದ್ನ ನೋಡಿ ಅವ್ನ ಹೆಂಡ್ತಿಗೆ ಅನುಮಾನ ಬಂತು. ಅವಳಮ್ಮನ ಹತ್ರ ವಿಷ್ಯ ತಿಳಕೊಂಡ್ಳು. ’ಇವನು ನಮಗೆ ಇಷ್ಟು ಅವಮಾನ ಮಾಡ್ದ...ಅದ್ಕೇ ಅವರವ್ವನ್ನ ಹೊಳೆಗೆ ಹಾಕಿ ಬುದ್ದಿ ಕಲಿಸ್ಬೇಕು’ ಅಂತ ಏರ್ಪಾಡು ಮಾಡಿದ್ಲು.
 
ಸಾಯಂಕಾಲ ಆಯ್ತು. ಬೀಗ ಬೀಗರಿಗೆ ಮಲಗಕೆ ಒಂದೇ ತಾವು ಹಾಸಿಗೆ ಹಾಸಿದ್ಲು. ರಾತ್ರೆ ಅತ್ತೆ ಸರೀಗೆ ಗೊತ್ತಾಗಲಿ ಅಂತ ಅತ್ತೆ ಕಾಲಿಗೆ ಗುರ‍್ತಿಗಾಗಿ ಒಂದು ಕರಿ ದಾರ ಕಟ್ಟಿದ್ಲು. ಇದ್ನ ಬೆಳ್ಳುಳ್ಳಿ ನೋಡ್ಕಂಡಿದ್ದ. ಹನ್ನೆರಡು ಗಂಟೆ ಹೊತ್ನಲ್ಲಿ ತನ್ನ ತಾಯಿ ಕಾಲಲ್ಲಿದ್ದ ದಾರ ಬಿಚ್ಚಿ ಅತ್ತೆ ಕಾಲ್ಗೆ ಕಟ್ಟಿದ. ಮದ್ರಾತ್ರಿ ಸಮಯದಲ್ಲಿ ಮಗಳು ಅತ್ತೆ ಅಂತನ್ಕಂಡು ಅವರವ್ವನ್ನೇ ಹೊಳೆಗೆ ಎತ್ತಿ ಬಿಸಾಕಿ ಬಂದ್ಲು.
 
ಸುಪಾಣಿ ಬೆಳಗಿನ ಜಾವ ರಾಗಿ ಬೀಸಕ್ಕೆ ಅಂತ ಎದ್ಲು. ರಾಗಿ ಬೀಸ್ತಾ ಸಂತೋಷ್ವಾಗಿ ..’ಅತ್ತೆ ತೇಲ್ತಾ ಹೋಯ್ತಿದ್ದಿರೋ , ಮುಳ್ಗ್ತಾ ಹೋಯ್ತಿದಿರೋ...ಈಗ ಎಲ್ಲಿ ಹೋಯ್ತಿದಿರೋ...’ ಅಂತ ಪದ ಹೇಳ್ತಾ ಕೂತ್ಲು.
ಲೇ ಸುಪಾಣಿ, ರಾಗಿ ಬೀಸಿ ಮುಗೀತೇನೇ ಅಂತ ಅವಳ ಗಂಡ ಕೂಗಿದ. ’ಇನ್ನೂ ಅವೆ ಕಣ್ರೀ’ ಅಂದ್ಲು. ’ನಂಗೆ ಒಂದು ಹಾಡು ಬತ್ತದೆ, ನಾನೂ ಹೇಳ್ತೀನಿ ನೀನು ರಾಗಿ ಬೀಸು’ ಅಂತ ಹೆಂಡ್ತಿಗೆ ಹೇಳಿ...
’...ನಮ್ಮವ್ವ ಇದ್ದಳೋ ಬಡ್ಡೀ...ಅಲ್ಲಿ ನಿಮ್ಮವ್ವ ಇದ್ದಳೋ ಬಡ್ಡೀ...ಕಾಣಲಿಲ್ವಲ್ಲೇ ಬಡ್ಡೀ’ ಅಂತ ಹಾಡು ಹೇಳಿದ. ’ಅಯ್ಯಯ್ಯೊ ಇದೇನಪ್ಪಾ ಹಿಂಗೆ ಹಾಡ್ತನೆ?! ಇನ್ನೇನಪ್ಪಾ ಗತಿ...’ ಅನ್ಕತಾ ಸುಪಾಣಿ ಈಚೆಗೆ ಬಂದ್ಲು. ಅತ್ತೆ ಮಂಚದ ಮೇಲೆ ಕೂತುದ್ದುನ್ನ ನೋಡಿ, ತಮ್ಮವ್ವ ಇಲ್ಲದನ್ನ ನೋಡಿ ಭೋರಂತ ಅತ್ತು ಕರೆದು ಗಲಾಟೆ ಮಾಡಿದ್ಲು. ಅಕ್ಕಪಕ್ಕದವರೆಲ್ಲರೂ ಬಂದು ಸಮಾಧಾನ ಮಾಡಿದ್ರು.
 
(ಸಂಗ್ರಹ)