ಅಂಗಳ      ಇನಿತೆನೆ
Print this pageAdd to Favorite
 

 

 
 

ಮಾಯವಾದ ಮತ್ತೊಬ್ಬ ನಾಡೋಜ

ಜುಬ್ಬಾ, ಗಾಂಧಿ ಟೋಪಿ ಹಾಕಿ ಬೆತ್ತದ ಚೇರಿನ ಮೇಲೆ ಕೂತು ಪೇಪರ್ ಓದುತ್ತಿದ್ದ ಜಿ ನಾರಾಯಣ್ ರನ್ನು ಮೊದಲು ನೋಡಿದ್ದು ಸುಜಾ ಅಂಟಿಯವರ ಮನೆಯಲ್ಲಿ. ಮುಖ ನೋಡಿದಾಗ ತುಂಬಾ ಸೀರಿಯಸ್ ಎನಿಸಿದ್ದರು. ಕೂರಿಸಿಕೊಂಡು ಮಾತಾಡಿಸಿದ್ದರು. ಆಗ ಭಯ ಕಮ್ಮಿಯಾಗಿತ್ತು.
ಮತ್ತೆ ಅವರ ಜೊತೆ ತುಂಬ ಹೊತ್ತು ಮಾತಾಡಿದ್ದು ಬಿಎ ಫೈನಲ್ ಇಯರ್ ನಲ್ಲಿ. ಪತ್ರಿಕೋದ್ಯಮದ ಪ್ರಾಜೆಕ್ಟ್ ಒಂದಕ್ಕೆ ಸಾಧನೆ ಮಾಡಿದ ವ್ಯಕ್ತಿಯೊಬ್ಬರನ್ನು ಸಂದರ್ಶನ ಮಾಡಬೇಕಿತ್ತು. ಹಿರಿಯರಾದ ಜಿ ನಾರಾಯಣ್ ಅವರ ಜೊತೆ ಮಾತಾಡಲು ಸಾಧ್ಯವಾದರೆ ಎಷ್ಟು ಚಂದ ಎನಿಸಿತ್ತು. ಆದರೆ ಅಷ್ಟು ದೊಡ್ಡವರನ್ನು ಯಾವುದೋ ಲಡಾಸು ಪ್ರಾಜೆಕ್ಟ್ ಒಂದಕ್ಕೆಂದು ಹೇಗೆ ಕೇಳಲಿ? ಕಷ್ಟವಾಗಲೇ ಇಲ್ಲ. ಹೀಗಿದೆ ಅಂತ ಗೊತ್ತಾದ ತಕ್ಷಣ ’ಸರಿ ಬಾ. ನಿನಗೆ ಏನು ಕೇಳಬೇಕೋ ಎಲ್ಲವನ್ನೂ ಪ್ರಶ್ನೆ ಮಾಡಿಕೊಂಡು ಬಾ’ ಎಂದುಬಿಟ್ಟರು. ಏನಪ್ಪಾ ಕೇಳಲಿ ಎನ್ನುವ ಭಯದಲ್ಲೇ ಪುಟ್ಟದೊಂದು ಲಿಸ್ಟ್ ಮಾಡಿಕೊಂಡು ಹೋಗಿ ಕೂತಿದ್ದೆ. ನನ್ನ ಪ್ರಶ್ನೆಗಳನ್ನು ಕೇಳುತ್ತಾ ...ನನಗೆ ಪಾಯಿಂಟ್ಸ್ ಹಾಕಿಕೊಳ್ಳಲು ಟೈಮ್ ಕೊಡುತ್ತಾ ಕಥೆಯಂತೆ ಬಿಚ್ಚಿಟ್ಟಿದ್ದರು.
 
ಎದುರಿಗೆ ಪಿಳ್ಳೆಯೊಂದು ಕೂತು ನಿಮ್ಮನ್ನು ಸಂದರ್ಶನ ಮಾಡುತ್ತೇನೆ ಎನ್ನುತ್ತಿದೆ ಎಂದು ಹಗುರವಾಗಿರಲಿಲ್ಲ. ನನಗೆ ಪ್ರೊಫೆಶನಲ್ ಆಗಿರುವುದನ್ನು ಕಲಿಸಲೋ ಎಂಬಂತೆ ಗಾಂಭೀರ್ಯ, ಸಾತ್ವಿಕತೆಯ ಗತ್ತಿನಲ್ಲಿ ಮಾತಾಡಿದ್ದರು. ಅವರು ಮಾತಾಡುವಾಗ ಪ್ರಶ್ನೆ ಕೇಳುವುದನ್ನೂ ಮರೆತು ಕಥೆ ಕೇಳಿದ್ದೆ. ಗಾಂಧಿ ತಾತನ ಮಾತು ಕೇಳಿ ಇದ್ದ ಬದ್ದ ಎಲ್ಲವನ್ನೂ ಬಿಟ್ಟು ಕ್ವಿಟ್ ಇಂಡಿಯಾ ಕಾರ್ಯಕರ್ತನಾಗಿ ಸ್ವಾತಂತ್ರ ಹೋರಾಟಕ್ಕಿಳಿದಿದ್ದು, ಜನ ಸಾಕ್ಷರರಾಗುವಂತೆ, ಗಾಂಧಿ ತಾತನ ಖಾದಿಯನ್ನು ಮೈಗಪ್ಪಿಕೊಳ್ಳುವಂತೆ ಹೋರಾಟಕ್ಕಿಳಿದಿದ್ದು, ಅಸ್ಪ್ರ‍ಶ್ಯತೆ ವಿರುದ್ಧ ಹಳ್ಳಿಗಳಲ್ಲಿ ಓಡಾಡಿದ್ದು, ತಿಂಗಳುಗಳ ಗಟ್ಟಲೆ ಬಳ್ಳಾರಿ ಜೈಲಿನಲ್ಲಿ ಕಠಿಣ ಶಿಕ್ಷೆ ಅನುಭವಿಸಿದ್ದು...ಎಲ್ಲವನ್ನೂ ಕಥೆಯಾಗೇ ಹೇಳಿದ್ದರು.
 
 
ನನ್ನ ಕಾಲದ ರಾಜಕೀಯಕ್ಕೆ ಇನ್ನೂ ಸ್ವಾಂತಂತ್ರ ಹೋರಾಟದ ಛಾಪಿತ್ತು. ಸ್ವಾತಂತ್ರ್ಯಕ್ಕಾಗಿ ನಾವು ಪಟ್ಟ ಕಷ್ಟದ ಸಿಹಿ ನೆನಪಿತ್ತು. ಕಟ್ಟಬೇಕೆಂಬ ಆಸೆಯಿತ್ತು. ಎಲ್ಲರಿಗೂ ತಾನು ಜನರಿಗಾಗಿ ಏನಾದರೊಂದು ಒಳಿತನ್ನು ಮಾಡಲೇಬೇಕೆಂಬ ಗುರಿಯಿತ್ತು. ಆಗ ಅದು ರಾಜಕೀಯ ಸಾರ್ಥಕ್ಯ ಕೊಡುತ್ತಿತ್ತು. ಈಗ ರಾಜಕೀಯವನ್ನು ಅರ್ಥ ಮಾಡಿಕೊಳ್ಳುತ್ತಿರುವ ರೀತಿ ಬೇರೆಯಾಗಿದೆ ಎಂದಿದ್ದರು. ಈ ಮತುಕತೆಯಾಗಿದ್ದು ೧೯೯೮ರಲ್ಲಿ.

ಪತ್ರಿಕೋದ್ಯಮ ಓದುತ್ತಿದ್ದೀಯಾ...ಪತ್ರಿಕೋದ್ಯಮಿಗೆ ಅಥವಾ ಪತ್ರಕರ್ತನಿಗೆ ಸತ್ಯ ಮತ್ತು ತನ್ನ ಜನರ ಕುರಿತ ಬಧ್ಧತೆ ಇದ್ದರೆ ಮಾತ್ರ ಆತ ಸಮಾಜಕ್ಕೆ ಪೂರಕವಾಗಬಲ್ಲ. ಪತ್ರಿಕೋದ್ಯಮವೆಂದರೆ ಬರೀ ಸುದ್ದಿ ಬರೆಯುವುದಲ್ಲ ಎಂದು ಯಾವತ್ತೂ ನೆನಪಿಡು ಎಂದಿದ್ದರು. ತುಂಬಾ ಸೀರಿಯಸ್ಸಾಯಿತೇನೋ ಎನಿಸಿ ಒಂದೆರಡು ಜೋಕು ಹೇಳಿದ್ದರು. ಆದರೆ ನಕ್ಕಿರಲಿಲ್ಲ. ನಾನು ನಗುವಾಗ ಅದೇ ಶಾಂತಚಿತ್ತದಿಂದ ಮುಖ ಓದಿದ್ದರು. ’ಬರ್ತೀನಿ ತಾತ’ ಅಂದು ಮನೆಗೆ ಹೊರಟಾಗ ಕೈಗೊಂದು ’ವಿನೋದ’ ಕೊಟ್ಟಿದ್ದರು. ಸಂತೋಷವಾಗಿರುವುದು ನಗುತ್ತಿರುವುದು ತುಂಬಾ ಮುಖ್ಯ ಎಂದಿದ್ದರು.
ಬೆಂಗಳೂರಿನ ಮೇಯರ್ ಆಗಿದ್ದಾಗ ಬೆಂಗಳೂರಿನ ಜನತೆಗೆ ಕಾವೇರಿ ನೀರನ್ನು ಕುಡಿಯಲು ಹರಿಸಿಕೊಟ್ಟ ೮೮ ವರ್ಷದ ದೇಶಹಳ್ಳಿ ನಾರಾಯಣ್ ಎಂಬ ಹಿರಿತಲೆ ಮೊನ್ನೆ ನವೆಂಬರ್ ೨೦ ರಂದು ತಮ್ಮ ದೀರ್ಘ, ಸತ್ವಯುತ ಬದುಕಿಗೆ ವಿರಾಮ ಹಾಕಿದ್ದಾರೆ. ಅವರ ಸಂದೇಶ, ಸತ್ವ, ಪ್ರೀತಿ, ನೆನಪು, ಅವರ ಕುರಿತ ಗೌರವ ಸದಾ ನಮ್ಮೊಡನೆ ಇರಲಿ...
 
 
 
 
 
 

 ಮೀಡಿಯಾ ಮೇನಿಯಾ

ಇವತ್ತು ಗಾಂಜಾ ಗಿರಾಕಿ, ನಾಳೆ ವರ್ಲ್ಡ್ ಫೇಮಸ್ ಮಹಾತ್ಮ- ಇಲ್ಲಿ ಹೀಗೂ ಉಂಟು!
(ಮುಂದುವರೆದ ಭಾಗ )

 
 
 
ಹಾಗೆ ಹೋತನಗಡ್ಡದ ಸಾಬಣ್ಣನಿಗೆ ಹೊಸಬಟ್ಟೆ ಕೊಂಡುಕೊಳ್ಳಲು ಹಣ ಕೊಟ್ಟ ಕಾರ್ಯಕ್ರಮದ ಏಜೆಂಟ್ ನಿರ್ಮಾಪಕನನ್ನು ಕಾಣಲು ಸೀದಾ ಬೆಂಗಳೂರ ಬಸ್ ಹತ್ತಿದ. ಅವನಿಂದ ಹಣ ಪಡೆದಿದ್ದ ಸಾಬಣ್ಣ ಅದೇ ಹಣದಲ್ಲಿ ಒಂದಷ್ಟು ಹೆಂಡ ಕುಡಿದವ ಪಾಂಡವಪುರಕ್ಕೆ ಬಸ್ ಹತ್ತಿದ್ದ.
 
ಬಸ್ಸಿನಲ್ಲಿ ಕೂತಿದ್ದ ಏಜೆಂಟನ ತಲೆಯಲ್ಲಿ ಈಗ ಪ್ಲಾನ್ ನಡೆಯುತ್ತಿತ್ತು. ಆ ಸಾಬಣ್ಣ ಯಾವ ರೀತಿಯ ಪವಾಡವನ್ನು ಮಾಡುತ್ತಾನೆಂಬುದರ ಬಗ್ಗೆ ಕಾರ್ಯಕ್ರಮದ ನಿರ್ಮಾಪಕನಿಗೆ ಇಂಪ್ರೆಸಿವ್ ಆಗಿ ತಿಳಿಸಲು ತಾನೇ ಯೋಚಿಸಿ ಕೆಲವು ನೋಟ್ಸ್ ಮಾಡಿಕೊಂಡ. ಈ ಕಾರ್ಯಕ್ರಮಕ್ಕೆ ತಾನು ಹೂಡಬೇಕಾಗಿರುವ ಬಂಡವಾಳ ಎಷ್ಟಾಗಬಹುದೆಂಬುದರ ಒಂದು ಅಂದಾಜು ಪಟ್ಟಿಯನ್ನು ತಯಾರಿಸಿಕೊಂಡ. ತಾನು ಈ ಕಾರ್ಯಕ್ರಮಕ್ಕೆ ಬಂಡವಾಳ ಹೂಡಿದ ನಂತರ ಅದನ್ನು ಹಿಂದಕ್ಕೆ ಪಡೆಯುವ ಮಾರ್ಗವನ್ನೇ ಯೋಚಿಸುತ್ತಲೇ ಸ್ಟುಡಿಯೋ ತಲುಪಿದ ಏಜೆಂಟನನ್ನು ಬಾಗಿಲಲ್ಲೇ ಸ್ವಾಗತಿಸಿದ್ದು ಕಾರ್ಯಕ್ರಮದ ನಿರ್ಮಾಪಕ.
 
’ಬಾರಯ್ಯಾ, ನಿನ್ನನ್ನೇ ಕಾಯುತ್ತಿದ್ದೆ, ನಾನು ಬೇರೆ ಒಂದು ಕಾರ್ಯಕ್ರಮಕ್ಕೆ ಒಪ್ಪಿಕೊಂಡು ಬಿಟ್ಟಿದ್ದೆ. ನೀನು ಫೋನ್ ಮಾಡಿದ್ದರಿಂದ ಅದನ್ನು ರದ್ದು ಮಾಡಿದೆ’ ಅಂದ. ಈತನೇ ಪದೇ ಪದೇ ಫೋನ್ ಮಾಡಿ ನನ್ನ ’ಹೀಗೂ ಉಂಟು’ ಕಾರ್ಯಕ್ರಮಕ್ಕೆ ಯಾವುದಾದರೂ ಮಿಕವನ್ನು ಹಿಡಿಯುವಂತೆ ಒತ್ತಾಯಿಸುತ್ತಿದ್ದವನು ಈಗ ಪ್ಲೇಟ್ ಬದಲಿಸುತ್ತಿದ್ದಾನಲ್ಲಾ! ಇದೆಲ್ಲಾ ಹೆಚ್ಚು ಹಣ ವಸೂಲಿಗಾಗಿಯೇ ಎಂಬುದನ್ನು ಊಹಿಸಿದ ಏಜೆಂಟ್ ’ಏನ್ಸಾರ್, ನೀವೇ ಒತ್ತಾಯ ಮಾಡಿ ಈಗ ಬೇರೆ ಕಾರ್ಯಕ್ರಮವನ್ನು ಮಾಡಲು ಹೊರಟಿದ್ದೆ ಅನ್ನುತ್ತಿದ್ದೀರಲ್ಲಾ, ಇದು ಸರೀನಾ’ ಎಂದು ಗೊಣಗಾಡಿದ.
 
ಅವನು ಅಪ್ಸೆಟ್ ಆಗಿ ವಾಪಸ್ ಹೊರಟರೆ ತನಗೇ ನಷ್ಟವೆಂದು ಗಲಿಬಿಲಿಗೊಂಡ ನಿರ್ಮಾಪಕ ’ಏ ಬಾ ಗುರುವೇ, ನಾನು ನಿನ್ನನ್ನು ಬಿಡಕ್ಕಾಗುತ್ತಾ, ನನಗೆ ನೀನು ಮುಖ್ಯ, ಬೇರೆಯವರಲ್ಲ’, ಎಂದು ಏಜೆಂಟ್ ನನ್ನು ಸಮಾಧಾನಪಡಿಸಿ, ’ಯಾವಾಗ ಶೂಟಿಂಗ್ ಶುರು ಮಾಡೋಣ? ನಮ್ಮ ಖರ್ಚು ವೆಚ್ಚದ ಬಗ್ಗೆ ಎಲ್ಲಾ ವ್ಯವಸ್ಥೆ ಮಾಡಿದ್ದೀಯಾ? ನಿನ್ನ ಕಾರ್ಯಕ್ರಮವನ್ನ ಅದ್ಭುತವಾಗಿ ಮಾಡಿಕೊಡುತ್ತೇನೆ, ನಿನಗೂ ಲಾಸಾಗುವುದಿಲ್ಲ ಬಿಡು, ಎಷ್ಟಾದರೂ ನೀನು ನನಗೆ ತುಂಬಾ ಬೇಕಾದವನಲ್ಲವೇ?’ ಎಂದು ಏಜೆಂಟನ ಹೆಗಲ ಮೇಲೆ ಕೈ ಹಾಕಿದ.
 
ಮುಂದೆ ಮೂವತ್ತು ನಿಮಿಷಗಳ ಕಾಲ ಅವರಿಬ್ಬರ ನಡುವೆ ನಡೆದ ಮಾತುಕತೆಯೆಲ್ಲಾ ಕೊಡು-ಕೊಳ್ಳುವಿಕೆಗೆ ಸಂಬಂಧಿಸಿದ್ದೇ ಆಗಿತ್ತು. ಅಂತೂ ವ್ಯವಹಾರ ಒಂದು ಹಂತಕ್ಕೆ ಬಂದ ನಂತರ ಇಬ್ಬರೂ ಪರಸ್ಪರ ಹೆಗಲ ಮೇಲೆ ಕೈಹಾಕಿಕೊಂಡು ಸ್ಟುಡಿಯೋನಿಂದ ಹೊರಗೆ ಬಂದರು. ’ನೋಡು ನಾಳೆಯೇ, ಒಂದಷ್ಟು ಬಿಟ್ಸ್ ಅನ್ನು ಶೂಟ್ ಮಾಡಿಬಿಡೋಣ, ನೀನು ಅದಕ್ಕೆ ಬೇಕಾದ ವ್ಯವಸ್ಥೆಯನ್ನೆಲ್ಲಾ ಮಾಡಿಬಿಡು, ನಾನು ಹೇಳಿದಂತೆಯೇ ಎಲ್ಲಾ ವ್ಯವಸ್ಥೆಯಾಗಬೇಕು, ಮುಂದಿನ ವಾರವೇ ಕಾರ್ಯಕ್ರಮವನ್ನು ಪ್ರಸಾರ ಮಾಡಿಬಿಡುತ್ತೇನೆ, ನೀನು ಬಂಡವಾಳ ಹೂಡಿದ್ದು ಬೇಗನೇ ವಾಪಸಾಗಿಬಿಡುತ್ತೆ’, ಅಂದ ನಿರ್ಮಾಪಕ ಅಡ್ವಾನ್ಸ್ ಆಗಿ ಕೊಂಚ ಹಣವನ್ನು ಪೀಕಿಕೊಂಡು ಸುತ್ತಮುತ್ತ ಯಾರಾದರೂ ನೋಡುತ್ತಿದ್ದಾರಾ ಎಂದು ಗಮನಿಸಿ ಅದನ್ನು ಜೇಬಿಗಿಳಿಸಿಕೊಂಡ. ಅವನಿಗೆ ಹಣಕೊಟ್ಟ ನಂತರ ಏಜೆಂಟ್ ’ನೊಡೀ ಗುರುವೇ, ಕಾರ್ಯಕ್ರಮ ತುಂಬಾ ಚೆನ್ನಾಗಿ ಬರಬೇಕು, ನಾನು ಸಾಲಮಾಡಿ ಹಣ ಹಾಕ್ತಿದ್ದೀನಣ್ಣಾ, ಬೇಗನೇ ಟೆಲಿಕಾಸ್ಟ್ ಮಾಡಿಬಿಡಣ್ಣಾ’, ಅಂದ. ಏಜೆಂಟ್ ಕಿರಿಕ್ಕು ಮಾಡದೇ ಅಡ್ವಾನ್ಸ್ ಹಣ ಕೊಟ್ಟಿದ್ದರಿಂದ ಖುಶಿಯಾಗಿದ್ದ ನಿರ್ಮಾಪಕ ’ಹೇ, ಡೋಂಟ್ ವರಿ, ನೀನು ನನಗೆ ಮುಖ್ಯ, ನಮ್ಮ ವ್ಯವಹಾರ ಇಷ್ಟಕ್ಕೇ ಮುಗಿಯುವುದು ಬೇಡ, ಇನ್ನೂ ಈ ತರದ ಕಾರ್ಯಕ್ರಮವನ್ನು ಮಾಡುತ್ತಿರೋಣ’ ಎಂದು ನಾಳೆ ಬರುವುದಾಗಿ ಹೇಳಿ ಏಜೆಂಟ್ ನನ್ನು ಅಲ್ಲಿಂದ ಸಾಗಹಾಕಿದ.
 
ನಿರ್ಮಾಪಕನ ಕೈ ಬೆಚ್ಚಗೆ ಮಾಡಿ ಅಲ್ಲಿಂದ ಪಾಂಡವಪುರಕ್ಕೆ ಹೊರಟ ಏಜೆಂಟ್ ಊರು ತಲುಪಿ ಹೋತನ ಗಡ್ಡದ ಸಾಬಣ್ಣನನ್ನು ನೋಡಲು ಹೋದ. ಸಾಬಣ್ಣನಿದ್ದ ಗುಡಿಸಲಿಗೆ ಹೋಗಿ ನೋಡಿದರ ಅಲ್ಲಿ ಫ಼ಕೀರನಿರಲಿಲ್ಲ. ಏಜೆಂಟನ ಎದೆ ಧಸಕ್ಕೆಂದಿತು. ಈ ಸಾಬಣ್ಣನನ್ನು ನಂಬಿಕೊಂಡು ಅವನಾಗಲೇ ಸಾವಿರಾರು ರೂಗಳನ್ನು ಖರ್ಚು ಮಾಡಿದ್ದ. ಸುತ್ತಮುತ್ತ ಎಲ್ಲಿಯೂ ಆ ಫ಼ಕೀರ ಕಣ್ಣಿಗೆ ಬೀಳಲಿಲ್ಲ. ಹತ್ತಿರದಲ್ಲಿದ್ದ ಹೆಂಡದಂಗಡಿಯಲ್ಲೂ ಕಾಣಲಿಲ್ಲ. ಅಲ್ಲಿದ್ದ ಜನ ನಿನ್ನೆಯಿಂದ ಆತನನ್ನು ನಾವು ನೋಡಲಿಲ್ಲವೆಂದೂ, ನಿನ್ನೆ ಮಧ್ಯಾಹ್ನ ಪಾಂಡವಪುರಕ್ಕೆ ಹೋಗಿಬರುವುದಾಗಿ ಹೇಳಿ ಹೋದವ ಬಂದೇ ಇಲ್ಲವೆಂದರು. ಅವನಿಗೆ ಹೊಸ ಬಟ್ಟೆ ಕೊಳ್ಳಲು ಹಣ ನೀಡಿದ್ದೇ ತಪ್ಪಾಯಿತೆಂದುಕೊಂಡ ಏಜೆಂಟ್ ಹೇಗಾದರೂ ಮಾಡಿ ಆ ಫ಼ಕೀರನನ್ನು ಹುಡುಕಿಕೊಂಡು ಬರಬೇಕೆಂದು ಹಟತೊಟ್ಟು ಪಾಂಡವಪುರದತ್ತ ಹೊರಟ.
 
ಇತ್ತ, ಏಜೆಂಟ್ ನಿಂದ ಹಣ ಪಡೆದ ಹೋತನಗಡ್ಡದ ಸಾಬಣ್ಣ ಅಲ್ಲೆಲ್ಲೋ ಹಳೆ ಬಟ್ಟೆಗಳನ್ನು ಗುಡ್ಡೆ ಹಾಕಿಕೊಂಡವನ ಬಳಿಗೋಗಿ ಒಂದು ಜುಬ್ಬಾ ಪೈಜಾಮವನ್ನು ಕೊಂಡು ಕೈಯಲ್ಲಿ ಇನ್ನೂ ಸಾಕಷ್ಟು ಹಣ ಉಳಿದಿದ್ದರಿಂದ ಅಲ್ಲೇ ಇದ್ದ ಹೆಂಡದಂಗಡಿಗೆ ಹೋಗಿ ಒಂದೆರಡು ಬಾಟಲ್ ಏರಿಸಿ ಯಾವುದೋ ಪುರಾತನ ಹಿಂದಿ ಸಿನಿಮಾ ಹಾಕಿದ್ದ ಪಕ್ಕದ ಟೆಂಟಿಗೆ ಹೋಗಿ ಸಿನಿಮಾ ನೋಡುತ್ತಾ ಅಲ್ಲೇ ರಾತ್ರಿಯಾಗಿದ್ದರಿಂದ ಬಸ್ ಸ್ಟಾಂಡಿನಲ್ಲಿ ಜಾಗ ಹುಡುಕಿಕೊಂಡು ಪವಡಿಸಿಬಿಟ್ಟಿದ್ದ. ಬೆಳಿಗ್ಗೆ ಎದ್ದವ ಇನ್ನೂ ಸ್ವಲ್ಪ ಹಣ ಉಳಿದಿದ್ದರಿಂದ ಮತ್ತೆ ನಶೆ ಏರಿಸಿಕೊಂಡು ಹತ್ತಿರದ ಬಿಸ್ಮಿಲ್ಲಾ ಹೋಟೆಲಿಗೆ ಹೋಗಿ ಬಿರಿಯಾನಿ ತಿಂದು ರೈಲ್ವೇ ಸ್ಟೇಷನ್ನಿಗೆ ಹೋಗಿ ಮಲಗಿದ್ದ. ಅವನನ್ನು ಹುಡುಕಿಕೊಂಡು ಹೋದ ಏಜೆಂಟ್ ಪಾಂಡವಪುರದಲ್ಲೆಲ್ಲಾ ಅಲೆದಾಡಿ ಒಳ್ಳೇ ಸಾಬಿಯ ಸಹವಾಸವಾಯಿತಲ್ಲಾ, ಇವನನ್ನು ನಂಬಿಕೊಂಡು ತಾನು ಆ ನಿರ್ಮಾಪಕನಿಗೆ ಹಣ ನೀಡಿದ್ದೇ ತಪ್ಪಾಯಿತೆಂದುಕೊಂಡು
ಬೈದುಕೊಳ್ಳುತ್ತಾ ಕೊನೆಯ ಪ್ರಯತ್ನವೆಂಬಂತೆ ರೈಲ್ವೇ ಸ್ಟೇಷನ್ನಿನಲ್ಲೂ ನೋಡೋಣವೆಂದು ಅತ್ತ ಹೋದ.
 
ಅಲ್ಲಿನ ಕಲ್ಲು ಬೆಂಚಿನ ಮೇಲೆ ಸಾಬಣ್ಣ ಆರಾಮಾಗಿ ನಿದ್ರಿಸುತ್ತಿದ್ದುದನ್ನು ಕಂಡ ಏಜೆಂಟನಿಗೆ ಮತ್ತೆ ನಿಧಿ ಸಿಕ್ಕಂತಾಯಿತು. ಅವನನ್ನು ಏಳಿಸಿ ’ಏನಯ್ಯಾ ನಿನ್ನನ್ನು ಬೆಳಿಗ್ಗೆಯಿಂದ ಹುಡುಕಿ ಹುಡುಕಿ ಸಾಕಾಗಿ ಹೋಯ್ತು, ನೀನು ನೋಡಿದ್ರೆ ಇಲ್ಲಿ ಅರಾಮಾಗಿ ನಿದ್ರೆ ಮಾಡುತ್ತಿದ್ದೀಯಾ’ ಎಂದು ಗೊಣಗಾಡಿದ. ಪಿಳಿಪಿಳಿ ಕಣ್ಣು ಬಿಟ್ಟ ಸಾಬಣ್ಣ ಹೆಂಡದ ನಶೆ ಇನ್ನೂ ಇಳ್ಳಿಯದಿದ್ದರಿಂದ ’ಯಾಕ್ರೀ, ನನ್ನನ್ನು ಏಳಿಸಿದ್ದು’, ಎಂದು ಏಜೆಂಟ್ ನನ್ನು ಗುರಾಯಿಸಿದವ ಇವನೇ ನನಗೆ ಹಣಕೊಟ್ಟವನೆಂಬುದು ನೆನಪಾದ ಕೂಡಲೇ ’ಸಾಬ್ ಬಟ್ಟೆ ತಗಾಳಕ್ಕೆ ಅಂತಾ ಬಂದೆ, ರಾತ್ರಿ ಲೇಟಾಯ್ತು...ಬಸ್ ಸಿಗಲಿಲ್ಲ ಅದಕ್ಕೇ ಇಲ್ಲೇ ಮಲಗಿಬಿಟ್ಟೆ ಸಾಬ್’ ಅಂದ. ಅಂತೂ ಆ ಸಾಬಣ್ಣ ಸಿಕ್ಕಿದ್ದರಿಂದ ಖುಶಿಯಾದ ಏಜೆಂಟ್ ಅವನನ್ನು ಏಳಿಸಿಕೊಂಡು ಪಾಂಡವಪುರದ ಬಸ್ ಹತ್ತಿದ.
 
’ನಾಳೆ ನಿನ್ನ ಶೂಟಿಂಗ್ ಇದೆ ಕಣಯ್ಯಾ, ನಾನು ಹೇಳಿಕೊಟ್ಟಂತೆ ನೀನು ಹೇಳಬೇಕು ತಿಳೀತಾ, ಬೆಂಗಳೂರಿನಿಂದ ನಮ್ಮ ಟಿವಿಯವರೆಲ್ಲಾ ಬರ್ತಾರೆ, ನೀನು ಸ್ನಾನ ಮಾಡಿ ರೆಡಿಯಾಗಬೇಕು ಗೊತ್ತಾಯ್ತಾ’ ಎಂದವ ಅವನಿನ್ನೆಲ್ಲಿ ಮತ್ತೆ ಸಿಕ್ಕಾಪಟ್ಟೆ ಹೆಂಡ ಕುಡಿದು ಇಲ್ಲಿಂದ ಮಾಯವಾಗುತ್ತಾನೋ ಎಂಬ ಆತಂಕದಿಂದ ’ನೀನು ನಮ್ಮ ಶೂಟಿಂಗ್ ಮುಗಿಯುವವರೆಗೂ ಹೆಂಡ ಕುಡಿಯಬಾರದು, ನಮ್ಮ ಕಾರ್ಯಕ್ರಮ ಮುಗಿದ ನಂತರ ನೀನು ಏನು ಬೇಕಾದರೂ ಮಾಡಿಕೋ’ ಅಂದ. ಪರಿಸ್ಥಿತಿಯ ಗಂಭೀರತೆ ಅರಿತಂತೆ ಆ ಫಕೀರ ಸಾಬಣ್ಣ ’ಇಲ್ಲಾ ಸ್ವಾಮೀ, ನಾನು ಕುಡಿಯಾಕಿಲ್ಲ, ನೀವು ಹೇಳಿದಂಗೇ ಕೇಳ್ತೀನಿ’ ಅಂತ ಸೀರಿಯಸ್ಸಾಗಿ ಅಂದ. ಅವನ ಉತ್ತರದಿಂದ ಏಜೆಂಟ್ ಸಮಾಧಾನಗೊಂಡರೂ ಈ ಹೆಂಡಕುಡುಕ ಫ಼ಕೀರನನ್ನು ನಂಬಿ ತಾನು ಈಗಾಗಲೇ ಸಾಕಷ್ಟು ಹಣ ವ್ಯಯಿಸಿರುವುದರಿಂದ ಈತ ಎಲ್ಲಾದರೂ ಹೋಗಿಬಿಟ್ಟರೆ ತನಗೇ ನಷ್ಟವೆಂದು ಯೋಚಿಸಿ ಕೂಡಲೇ ತನ್ನ ನಿರುದ್ಯೋಗಿ ಶಿಷ್ಯನೊಬ್ಬನಿಗೆ ಫೋನ್ ಮಾಡಿ ಕರೆಸಿಕೊಂಡ. ಶಿಷ್ಯನಿಗೆ ಸ್ವಲ್ಪ ಹಣಕೊಟ್ಟು ನಾನು ಹೇಳುವವರೆಗೂ ನೀನು ಈ ಸಾಬಣ್ಣನಿಗೆ ಕಾವಲಿರಬೇಕೆಂದು ಆತನನ್ನು ಫ಼ಕೀರ ಸಾಬಣ್ಣನಿಗೆ ಸೆಕ್ಯುರಿಟಿಯನ್ನಾಗಿ ನೇಮಿಸಿ ನಿಟ್ಟುಸಿರು ಬಿಟ್ಟ.
 
ಅಂದು ರಾತ್ರಿ ಏಜೆಂಟ್ ನ ಕನಸುಗಳಿಗೆ ಕೊನೆಯಿರಲಿಲ್ಲ. ಈ ಕಾರ್ಯಕ್ರಮದ ನಂತರ ಆ ಫ಼ಕೀರನನ್ನು ಮುಂದಿಟ್ಟುಕೊಂಡು ತಾನು ಇನ್ನು ಕೆಲವು ವರ್ಷಗಳಲ್ಲಿ ಹೇಗೆಲ್ಲಾ ಸಂಪಾದನೆ ಮಾಡಬಹುದೆಂದು ಲೆಕ್ಕ ಹಾಕುತ್ತಾ ಆಕಾಶದಲ್ಲೇ ತೇಲಾಡಿದ್ದ. ಅದೇ ರಾತ್ರಿ ಇತ್ತ ಏಜೆಂಟನ ಶಿಷ್ಯ ಫ಼ಕೀರನನ್ನು ಬೆನ್ನು ಬಿಡದೇ ಹಿಂಬಾಲಿಸತೊಡಗಿದ್ದ. ಹೆಂಡದಂಗಡಿಗೆ ನುಗ್ಗಿದ್ದ ಫ಼ಕೀರ ಒಂದೆರಡು ಬಾಟಲ್ ತಗಂಡು ಕೋಳಿ ಮಾಂಸವನ್ನು ಸವಿಯತೊಡಗಿದ. ಅದನ್ನು ಕಂಡ ಏಜೆಂಟನ ಶಿಷ್ಯನಿಗೆ ತಾನೂ ಒಂದು ಗುಟುಕು ಹೆಂಡವನ್ನು ಏರಿಸಬೇಕೆಂಬ ಬಯಕೆಯಾಗಿ ಫ಼ಕೀರನೊಟ್ಟಿಗೇ ಹೆಂಡ ಕುಡಿಯತೊಡಗಿದ್ದ. ಒಂದೆರಡು ಬಾಟಲ್ ಹೆಂಡ ಒಳಗೆ ಹೋದ ಕೂಡಲೇ ಏಜೆಂಟನ ಶಿಷ್ಯನಿಗೆ ಅಮಲೇರಿ ನನ್ನ ಗುರು ಎಲ್ಲವನ್ನೂ ಬಿಟ್ಟು ಈ ಚಿಂದಿ ಬಟ್ಟೆಯ ಫ಼ಕೀರನನ್ನು ನೋಡಿಕೊಳ್ಳುವಂತೆ ತನ್ನನ್ನು ನಿಯೋಜಿಸಿದ್ದರ ಬಗ್ಗೆ ಸಿಟ್ಟು ಬಂದಿತ್ತು. ಆ ಶಿಷ್ಯನಿಗೆ ತನ್ನ ಗುರು ಯಾವ ಕಾರಣಕ್ಕಾಗಿ ಈ ಫ಼ಕೀರನನ್ನು ನೊಡಿಕೊಳ್ಳಲು ಹೇಳಿದ್ದನೆಂದು ಎಷ್ಟು ಯೋಚಿಸಿದರೂ ಅರ್ಥವಾಗಿರಲಿಲ್ಲ. ಅಂತೂ ಹೊಟ್ಟೆ ತುಂಬಾ ಹೆಂಡ ಕುಡಿದ ನಂತರ ಕುತೂಹಲ ತಡಿಯಲಾಗದೇ ಫ಼ಕೀರನನನ್ನೇ ಕೇಳುವುದು ಸರಿಯೆಂದು ನಿರ್ಧರಿಸಿ ’ಸಾಬಣ್ಣಾ, ನೀನೇನಾದರೂ ನನ್ನ ಗುರುವಿಗೆ ದುಡ್ಡು ಕೊಡಬೇಕಾಗಿದೆಯೇನಪ್ಪಾ? ಅವರ್ಯಾಕೆ ನಿನ್ನ ಹಿಂದೆ ಬಿದ್ದೌರೆ, ಏನ್ ಸಮಾಚಾರ ನಿಂದು?’ ಎಂದ.
 
ಕಂಠಪೂರ್ತಿ ಹೆಂಡ ಕುಡಿದು ತನ್ನಲ್ಲಿದ್ದ ಗಾಂಜಾವನ್ನು ಒಂದೆರಡು ದಂ ಎಳೆದಿದ್ದ ಸಾಬಣ್ಣ ಅಮಲಿನಲ್ಲಿ ತೇಲಾಡತೊಡಗಿದ್ದವ ’ಅರೇ ಸಾಬ್ ನಂದೂ ಹತ್ರ ಅದೇನೋ ಸಕ್ತಿ ಐತೆ ಅಂತಾ ನಿಮ್ಮ ಗುರುಗಳು ಹೇಳೌರೆ, ನನ್ನನ್ನು ಅವರು ಟಿವಿಯಲ್ಲಿ ತೋರುಸ್ತಾರಂತೆ, ನನಗೆ ಅವರು ತುಂಬಾ ಕಾಸ್ ಕೊಡ್ತೀವಂತ ಹೇಳೌರೆ, ನನಗೆ ಹೊಸ ಬಟ್ಟೆ ತಗೋ ಅಂತ ಅವ್ರೇ ಕಾಸು ಕೊಟ್ರು, ನೋಡಿ ಇಲ್ಲಿ ನಾನು ಹೊಸಾ ಬಟ್ಟೆ ತಗಂಡಿದ್ದೀನಿ’, ಅಂತ ಹಳೆ ಬಟ್ಟೆ ಮಾರುವವನಿಂದ ತಾನು ತಗಂಡು ಬಂದಿದ್ದ ಜುಬ್ಬ ಪೈಜಾಮವನ್ನು ತೋರಿಸಿದ. ಏಜೆಂಟನ ಶಿಷ್ಯನಿಗೆ ತನ್ನ ಗುರು ಈ ಕುರುಚಲು ಗಡ್ಡದ ಸಾಬಿಯಲ್ಲಿ ಏನು ಶಕ್ತಿ ಕಂಡ? ಇವನನ್ನು ಹಿಡಿದು ಯಾವ ರೀತಿ ದುಡ್ಡು ಸಂಪಾದಿಸುತ್ತಾನೆಂದು ಎಷ್ಟು ಯೋಚಿಸಿದರೂ ಗೊತ್ತಾಗಲಿಲ್ಲ. ಅವನಿಗೂ ಅಮಲೇರಿದ್ದರಿಂದ ಸಾಬಣ್ಣನ ಜತೆಗೇ ರಾತ್ರಿ ಮಲಗಿದ್ದ.
 
ಮಾರನೆಯ ದಿನವೇ ಬರುವುದಾಗಿ ಹೇಳಿದ್ದ ’ಹೀಗೂ ಉಂಟು’ ನಿರ್ಮಾಪಕ ಮೂರು ದಿನ ಕಳೆದರೂ ಬಾರದ್ದರಿಂದ ಗೊಂದಲಕ್ಕೊಳಗಾದ ಏಜೆಂಟ್ ಅವನಿಗೆ ಫೋನ್ ಮಾಡಿ ಯಾಕೆ ತಡ ಮಾಡುತ್ತಿದ್ದೀರೆಂದು ಅಸಮಾಧಾನ ಪಟ್ಟಿದ್ದರಿಂದ ನಿರ್ಮಾಪಕ ಮಾರನೆಯ ದಿನವೇ ತನ್ನ ಕ್ಯಾಮರ ಜತೆಗೆ ಒಂದಿಬ್ಬರು ಸಹಾಯಕರನ್ನು ಕರಕಂಡು ಪಾಂಡವಪುರಕ್ಕೆ ದೌಡಾಯಿಸಿದ್ದ. ಅಷ್ಟರಲ್ಲಾಗಲೇ ಆ ಸಾಬಣ್ಣನ ಜತೆಗೆ ಹೆಂಡ ಕುಡಿಯುವುದನ್ನೂ, ಗಾಂಜಾ ಸೇವಿಸಿ ಮತ್ತಲೋಕದಲ್ಲಿ ಪರ್ಯಟನೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಏಜೆಂಟನ ನಿರುಗ್ಯೋಗಿ ಶಿಷ್ಯ ಸಾಬಣ್ಣನ ಫುಲ್ ಟೈಮ್ ಶಿಷ್ಯನಾಗಿ ಪರಿವರ್ತಿತನಾಗಿದ್ದ. ಪಾಂಡವಪುರದ, ಸಧ್ಯದಲ್ಲೇ ಕರ್ನಾಟಕದ ಮನೆಮನೆಯಲ್ಲೂ ಫೇಮಸ್ ಆಗಲಿದ್ದ ಆ ಪುಟ್ಟ ಬೆಟ್ಟದ ಸುತ್ತಲಿದ್ದ ವಾತಾವರಣವನ್ನು ನೋಡಿ ಸ್ಟಡಿ ಮಾಡಿದ ನಿರ್ಮಾಪಕ ಅದಕ್ಕೆ ತಕ್ಕಂತೆ ತಾನು ಯಾವ ರೀತಿ ಬಿಟ್ಸ್ ರೆಡಿ ಮಾಡಬೇಕೆಂದು ಮನದಲ್ಲೇ ಲೆಕ್ಕಾಚಾರ ಹಾಕಿ ತನ್ನ ಏಜೆಂಟನಿಗೆ ಆ ಫ಼ಕೀರನನ್ನು ಕರಕಂಡು ಬರುವಂತೆ ಹೇಳಿ ಬೆಟ್ಟದ ತಪ್ಪಲಿನಲ್ಲಿ ಯಾವ ರೀತಿಯಲ್ಲಿ ಕ್ಯಾಮರಾವನ್ನು ಓಡಾಡಿಸಬೇಕೆಂದು ಛಾಯಾಗ್ರಾಹಕನಿಗೆ ಹೇಳತೊಡಗಿದ್ದ. ಫ಼ಕೀರನನ್ನು ಕರೆತರಲು ಅವನ ಗುಡಿಸಲಿಗೆ ಹೋದ ಏಜೆಂಟ್ ಗೆ ಅಲ್ಲಿ ಫ಼ಕೀರನಿದ್ದ ಸ್ಥಿತಿ ಕಂಡು ಗಾಬರಿಯಾಗಿತ್ತು. ಫ಼ಕೀರ ಮತ್ತು ಏಜೆಂಟನ ಶಿಷ್ಯ ಇಬ್ಬರೂ ಮತ್ತರಾಗಿ ಎಚ್ಚರ ತಪ್ಪಿದವರಂತೆ ಬೇಕಾಬಿಟ್ಟಿ ಬಿದ್ದಿದ್ದರು. ಅವರನ್ನು ಎಬ್ಬಿಸಿಕೊಂಡು ಫ಼ಕೀರ ಸಾಬಿಗೆ ಅವನು ತಂದಿದ್ದ ಬಟ್ಟೆ ಹಾಕಿಸಿಕೊಂಡು ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಕರಕಂಡು ಬರುವಷ್ಟರಲ್ಲಿ ಏಜೆಂಟನಿಗೆ ಸಾಕಾಗಿತ್ತು. ಆ ಬಟ್ಟೆ ಫ಼ಕೀರನಿಗೆ ಸಿಕ್ಕಾ ಪಟ್ಟೇ ದೊಡ್ಡದಾಗಿದ್ದರಿಂದ ಜುಬ್ಬಾ ಪೈಜಾಮ ಎರಡನ್ನೂ ಅರ್ಧರ್ಧ ಮಡಿಸಬೇಕಾಗಿ ಬಂದಿತ್ತು. ಫ಼ಕೀರನನ್ನು ಆ ಅರೆಮತ್ತಿನ ಅವತಾರದಲ್ಲಿ ನೋಡಿದ ನಿರ್ಮಾಪಕ ಇವನನ್ನು ಯಾವ ರೀತಿಯಲ್ಲಿ ಪವಾಡ ಪುರುಷನೆಂದು ಬಿಂಬಿಸಬೇಕೆಂಬುದರ ಬಗ್ಗೆ ಐಡಿಯಾ ಹುಡುಕತೊಡಗಿದ್ದ. ತನ್ನ ಕಾರ್ಯಕ್ರಮದಲ್ಲಿ ಎಂಥೆಂಥವರಿಗೋ ಮಹಾನ್ ಪವಾಡ ಪುರುಷರ ವೇಷಹಾಕಿ ಅವರನ್ನು ಆ ಪಟ್ಟಕ್ಕೆ ಏರಿಸಿದ್ದ ನಿರ್ಮಾಪಕ ಕಂ ನಿರೂಪಕನಿಗೆ ಈ ಒಣಕಲು ಶರೀರದ ಗಂಟುಕೂದಲಿನ ಅಬ್ಬೆಪಾರಿ ಫ಼ಕೀರ ಸಮಸ್ಯೆ ಎನಿಸಲಿಲ್ಲ.

ತಡಮಾಡದೆ ಒಂದೆರಡು ಬಿಟ್ಸ್ ಶೂಟ್ ಮಾಡಲು ಎಲ್ಲರೂ ರೆಡಿಯಾದಾಗಲೇ ನಿಜವಾದ ಸಮಸ್ಯೆ ಶುರುವಾದದ್ದು. ಫ಼ಕೀರನನ್ನು ಒಂದೆಡೆ ಕೂರಿಸಿ ಅವನಿಂದ ಎರಡು ವಾಕ್ಯ ಮಾತಾಡಿಸಲು ಎಷ್ಟೇ ಪ್ರಯತ್ನಿಸಿದರೂ ಯಾರಿಗೂ ಸಾದ್ಯವಾಗಲೇ ಇಲ್ಲ. ಅತಿಯಾದ ಗಾಂಜಾ-ಹೆಂಡದ ಪರಿಣಾಮವಿನ್ನೂ ಇಳಿಯದಿದ್ದರಿಂದ ಸಾಬಣ್ಣ ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಏಜೆಂಟನ ಶಿಷ್ಯನೂ ಹೆಚ್ಚು ಕಡಿಮೆ ಅದೇ ಸ್ಥಿತಿಯಲ್ಲಿದ್ದ. ಹೇಗೋ ಇಬ್ಬರನ್ನೂ ಅಲ್ಲಿದ್ದ ಮರವೊಂದಕ್ಕೆ ಒರಗಿಸಿ ಕೂರಿಸಿ ಕ್ಯಾಮರಾದಲ್ಲಿ ಅವರ ಅಮಲೇರಿದ್ದ ಮುಖವನ್ನು ಚಿತ್ರವಿಚಿತ್ರ ಆಂಗಲ್ ಗಳಲ್ಲಿ ಚಿತ್ರಿಸಿಕೊಂಡ ನಿರೂಪಕ ಕಂ ನಿರ್ಮಾಪಕ ತಾನೇ ಕ್ಯಾಮರಾದಲ್ಲಿ ಹೀಗೆ ಮಾತಾಡತೊಡಗಿದ...’ಪ್ರಿಯ ವೀಕ್ಷಕರೇ, ಇವತ್ತು ಕರ್ನಾಟಕದ ಜನರಿಗೆ ಮತ್ತೊಂದು ವಿಶೇಷ ದಿನ. ನಮ್ಮ ನಡುವೆಯೇ ಇದ್ದು ನಮ್ಮೆಲ್ಲರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಮಹಾನ್ ಪವಾಡ ಪುರುಷರೊಬ್ಬರ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ. ಈ ಮಹಾನ್ ಪುರುಷರು ಇದೀಗ ಮಹಾನ್ ಮೌನಾಚರಣೆಯಲ್ಲಿದ್ದಾರೆ...ನಮ್ಮೆಲ್ಲರ ಕಷ್ಟಗಳನ್ನೂ ತಮ್ಮ ದೇಹದೊಳಕ್ಕೆ ಹೀರಿಕೊಳ್ಳುತ್ತಿದ್ದಾರೆ...ಅವರು ಮಾತಾಡುವುದೂ, ಕಣ್ಣು ಬಿಡುವುದೂ ತುಂಬಾ ಅಪರೂಪಕ್ಕೆ, ಅವರ ಕಣ್ಣಿಗೆ ಕಲ್ಲನ್ನೂ ಕರಗಿಸುವಂಥಾ ಶಕ್ತಿಯಿದೆ. ಈಗ ನೀವು ನೋಡುತ್ತಿರುವ ಮಹಾನ್ ಪವಾಡ ಪುರುಷರ ಬಗೆಗಿನ ಅಭೂತಪೂರ್ವ ಆಶ್ಚರ್ಯದ ಪವಾಡ ಸದೃಶ ವಿವರಗಳನ್ನು ನಮ್ಮ ಮುಂದಿನ ಹೀಗೂ ಉಂಟು ಕಾರ್ಯಕ್ರಮದಲ್ಲಿ ತಪ್ಪದೇ...ಮರೆಯದೇ...ವೀಕ್ಷಿಸಿ’ ಎಂದು ತನ್ನ ವಿಶೇಷವಾದ ಭಯ ಹುಟ್ಟಿಸುವ ಧ್ವನಿಯಲ್ಲಿ ಮೊಳಗುವಂತೆ ಹೇಳಿ ಅಂದಿನ ಶೂಟಿಂಗ್ ಮುಗಿಸಿದ.
 
ಆ ಫ಼ಕೀರನನ್ನು ಹೀಗೂ ಉಂಟು ಕಾರ್ಯಕ್ರಮದ ನಿರ್ಮಾಪಕ ಯಾವ ರೀತಿ ಬಿಂಬಿಸಿದ, ಟಿವಿಯಲ್ಲಿ ಆ ಕಾರ್ಯಕ್ರಮವನ್ನು ನೋಡಿದವರಿಂದ ಫ಼ಕೀರ ಅನುಭವಿಸಿದ ಬವಣೆಗಳು, ಫ಼ಕೀರನ ಜತೆಗೆ ಸೇರಿಕೊಂಡಿದ್ದ ಏಜೆಂಟನೂ, ಅವನ ಶಿಷ್ಯನೂ ಪಟ್ಟ ಫಜೀತಿಯನ್ನು ಮುಂದಿನ ಸಂಚಿಕೆಯಲ್ಲಿ ನಿಮ್ಮ ಮುಂದಿಡಲಿದ್ದೇವೆ ಅಲ್ಲಿವರೆಗೂ ಯಾವುದೇ ಪವಾಡದ ಬಗ್ಗೆ ತಲೆಕೆಡಿಸಿಕೊಳ್ಳದೇ ನಿಮ್ಮ ನಿಮ್ಮ ಮನೆಗಳಲ್ಲಿ ನಿಮ್ಮ ಫ್ಯಾಮಿಲಿಯೊಂದಿಗೆ ಆರಾಮಾಗಿರೆಂದು ಹೇಳುತ್ತಾ...
 
 
(ಮುಂದುವರೆಯುವುದು) 
 
 

ದೇಶಕ್ಕೇ ಮಾದರಿಯಾಗಿದ್ದ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಅವನತಿಯತ್ತ?

ಬಲವಾದ ಲೋಕಪಾಲ ಮಸೂದೆ ಜಾರಿಯಾಗಬೇಕೆಂದು ನಿರಂತರವಾದ ನಿರಶನ ದೇಶದಲ್ಲೆಡೆ ಈಗಲೂ ನಡೆಯುತ್ತಲಿದೆ, ಆದರೆ ಮಾಧ್ಯಮಗಳಿಗೆ ಅದೀಗ ಹಳಸಲು ಸುದ್ದಿ. ಅದಿರಲಿ. ಇಂತಹ ಹೊತ್ತಿನಲ್ಲೇ ದೇಶಕ್ಕೇ ಮಾದರಿಯೆನಿಸುವಂತೆ ದಿಟ್ಟ ಕೆಲಸ ಮಾಡಿದ್ದ ಕರ್ನಾಟಕದ ಲೋಕಾಯುಕ್ತ ಸಂಸ್ಥೆಯನ್ನು ನಿರ್ಜೀವಗೊಳಿಸುವ ಸಂಚು ಸದ್ದಿಲ್ಲದೇ ನಡೆಯುತ್ತಿರುವುದು ವಿಪರ್ಯಾಸವೇ ಸರಿ. ಕೇಂದ್ರದಲ್ಲಿ ಲೋಕಪಾಲ ಮಸೂದೆಯನ್ನು ಬೆಂಬಲಿಸುತ್ತಿರುವ ಭಾರತೀಯ ಜನತಾ ಪಕ್ಷದ ನಾಯಕರು ತಮ್ಮದೇ ಪಕ್ಷದ ಆಡಳಿತವಿರುವ ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವಂತೆಯೇ ತೆಪ್ಪಗಿರುವುದು ಅವರ ಇಬ್ಬಂದಿತನವನ್ನು ತೋರುತ್ತದೆ. ರಾಜ್ಯ ಸರ್ಕಾರ ಕಳೆದ ಕೆಲವು ತಿಂಗಳಿಂದಲೂ ಲೋಕಾಯುಕ್ತರನ್ನು ನೇಮಿಸದೇ ಕಾಲಹರಣ ಮಾಡುತ್ತಿದೆ. ಪ್ರತಿಪಕ್ಷಗಳೂ ಈ ಬಗ್ಗೆ ಚಕಾರವೆತ್ತದಿರುವುದು ರಾಜಕಾರಣಿಗಳೆಲ್ಲರೂ ಭ್ರಷ್ಟಾಚಾರವನ್ನು ಪೋಷಿಸುವ ವಿಷಯದಲ್ಲಿ ಸಮಾನ ಮನಸ್ಕರಾಗಿರುವುದನ್ನು ತೋರುತ್ತದೆ. ದುರಂತವೆಂದರೆ ಲೋಕಾಯುಕ್ತ ಸಂಸ್ಥೆಯಲ್ಲಿಯೂ ಎಲ್ಲವೂ ಸರಿಯಾಗಿಲ್ಲವೆಂಬುದನ್ನು ಇತ್ತೀಚಿನ ವಿದ್ಯಮಾನಗಳು ಜಗಜ್ಜಾಹೀರು ಮಾಡಿವೆ. ಇದನ್ನೇ ನೆಪವನ್ನಾಗಿ ಮಾಡಿಕೊಂಡು ರಾಜಕಾರಣಿಗಳು ಲೋಕಾಯುಕ್ತರನ್ನು ಟೀಕಿಸುತ್ತಿರುವುದು ರಾಜಕೀಯ ಕಾರಣಗಳಿಗಾಗಿಯೇ ಎಂಬುದಂತೂ ದಿಟ.

ಕೆಲವು ವರ್ಷಗಳಿಂದ ಲೋಕಾಯುಕ್ತ ಸಂಸ್ಥೆಯಲ್ಲಿ ಕಟ್ಟುನಿಟ್ಟಿನ ಕೆಲಸ ಮಾಡಿದ್ದ ಅಧಿಕಾರಿಯೊಬ್ಬರು ಲೋಕಾಯುಕ್ತ ಸಂಸ್ಥೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಸುಳಿವು ಕೊಟ್ಟಿರುವುದು ಸಾಮಾನ್ಯ ಜನತೆ ಆ ಸಂಸ್ಥೆಯನ್ನು ಸಂಶಯದಿಂದ ನೋಡುವಂತಾಗಿದೆ. ಇನ್ನೂ ದುರಂತವೆಂದರೆ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗಡೆಯವರು ತಮ್ಮ ಸಂಸ್ಥೆಯಲ್ಲಿರುವಂತಹ ಭ್ರಷ್ಟಾಚಾರದ ವಾತಾವರಣವನ್ನು ಪ್ರಾಂಜ್ವಲ ಮನಸ್ಸಿನಿಂದ ಒಪ್ಪಿಕೊಳ್ಳುವುದನ್ನು ಬಿಟ್ಟು ಅಕಾರಣಗಳನ್ನು ನೀಡುವ ಮೂಲಕ ಕರ್ನಾಟಕದ ಜನತೆ ಅವರನ್ನು ಅನುಮಾನದಿಂದ ನೋಡುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿಕೊಂಡಿದ್ದಾರೆ. ಕರ್ನಾಟಕದ ದಕ್ಷ ಅಧಿಕಾರಿಗಳನ್ನು ಒಟ್ಟು ಹಾಕಿ ಲೋಕಾಯುಕ್ತದ ಸನ್ನದ್ಧ ಪಡೆ ಕಟ್ಟಿ, ಅವರಿಂದ ದಿಟ್ಟ ಕೆಲಸಗಳನ್ನು ಮಾಡಿಸಿದ್ದ ಸಂತೋಷ್ ಹೆಗಡೆಯವರು ಎಲ್ಲರಿಂದಲೂ ಭೇಷ್ ಎನಿಸಿಕೊಂಡಿದ್ದವರು. ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ಬೇಕೆಂದು ಹೇಳುತ್ತಿದ್ದ ಹೆಗಡೆಯವರು ತಮ್ಮ ಪಿತೃ ಸಮಾನರೂ, ಭಾರತೀಯ ಜನತಾ ಪಕ್ಷದ ಸರ್ವೋಚ್ಚ ನಾಯಕರೂ ಆದ ಅದ್ವಾನಿಯವರ ಮೇಲೆ ಒತ್ತಡ ತಂದು ಅವರದೇ ಪಕ್ಷದ ಸರ್ಕಾರದ ಮೇಲೆ ಪ್ರಭಾವ ಬೀರಿಸಿ ತಮ್ಮ ಸಂಸ್ಥೆಗೆ ಹೆಚ್ಚಿನ ಅಧಿಕಾರಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಾಕೋ ವಿಫಲರಾಗಿದ್ದರೂ ಜನ ಅವರನ್ನು ಪ್ರಶ್ನಿಸದೆ ಬೆಂಬಲಿಸಿದ್ದರು. ಪ್ರಚಾರದ ಸುರಿಮಳೆಯಲ್ಲಿ ತೋಯುತ್ತಿದ್ದ ಹೆಗಡೆಯವರಿಗೆ ತಮ್ಮದೇ ಸಂಸ್ಥೆಯಲ್ಲಿದ್ದ ಅಧಿಕಾರಿಯ ಪ್ರಾಮಾಣಿಕ ಅಭಿಪ್ರಾಯವನ್ನು ಜೀರ್ಣಿಸಿಕೊಳ್ಳಲಾಗದಿರುವುದು ಅವರ ದೌರ್ಬಲ್ಯವನ್ನು ತೋರುತ್ತದೆ. ಅದೇನೇ ಇರಲಿ, ಇಂದು ಹೆಚ್ಚು ಕಡಿಮೆ ನಮ್ಮ ಲೋಕಾಯುಕ್ತ ಸಂಸ್ಥೆ ತಬ್ಬಲಿಯಾದಂತಿದೆ. ನಿಷ್ಟಾವಂತ ಅಧಿಕಾರಿಗಳ ಕಾರ್ಯಾಚರಣೆಯಿಂದಾಗಿಯೇ ಇಂದು ಹಲವಾರು ರಾಜಕಾರಣಿಗಳು ಪರಪ್ಪನ ಅಗ್ರಹಾರದ ಅತಿಥಿಗಳಾಗಿದ್ದಾರೆ. ಈ ಸಂಸ್ಥೆಯನ್ನು ಸಾಧ್ಯವಾದಷ್ಟೂ ಬಲಹೀನವನ್ನಾಗಿ ಮಾಡುವ, ಜಾತಿ ರಾಜಕೀಯಕ್ಕೆ ಬಳಸಿಕೊಳ್ಳುವ ಹೀನಕೃತ್ಯಗಳು ನಡೆದಿರುವುದು ಜನಸಾಮಾನ್ಯರಲ್ಲಿ ಅಸಹ್ಯ ಹುಟ್ಟಿಸಿದೆ.

 

 
  

ಸಹನಾ ಅಪ್ಡೇಟ್  

ಕರ್ನಾಟಕ ರಾಜಕಾರಣದ ಹೊಸ ಟ್ವಿಸ್ಟ್: ಇನ್ನೇನು ಕುಮಾರಣ್ಣ-ರೆಡ್ಡಿ ಬ್ರದರ್ಸ್ ಭಾಯಿ ಭಾಯಿ!!


ಕರ್ನಾಟಕದಲ್ಲಿ ರಾಜಕಾರಣ ಮತ್ತಷ್ಟು ಕಲರಫುಲ್ ಆಗಿದೆ. ಮಿತ್ರರೆಲ್ಲ ಶತ್ರುಗಳಾಗುವ ಕಾಲ ಹತ್ತಿರ ಬಂದಿದೆ. ನೆನ್ನೆ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿದ್ದವರು ಇಂದು ಒಬ್ಬರನೊಬ್ಬರು ಮುದ್ದಿಸತೊಡಗಿದ್ದಾರೆ. ಇದೆಲ್ಲ ಈಗ ಕರ್ನಾಟಕದ ರಾಜಕೀಯದಲ್ಲಿ ಮಾತ್ರ ನೋಡಬಹುದಾದ ಫ್ರೆಶ್ ಚಿತ್ರಣ.

ಯಡಿಯೂರಪ್ಪ ಜೈಲಿನಿಂದ ಹೊರಬಂದು ಸುಧಾರಿಸಿಕೊಳ್ಳುವ ಮುನ್ನವೇ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಉಪಚುನಾವಣೆ ಅವರನ್ನು ಮತ್ತೆ ರಸ್ತೆಗಿಳಿಯುವಂತೆ ಮಾಡಿ, ಆತ ಒಲ್ಲದ ಮನಸ್ಸಿನಿಂದಲೇ ಬಿಜೆಪಿ ಪರ ಪ್ರಚಾರ ಮಾಡಬೇಕಾಯ್ತು. ಆ ಮೂಲಕ ನಾನು ಪಕ್ಷಕ್ಕೆ ಅನಿವಾರ್ಯ ಅನ್ನೋದನ್ನ ಅವರು ಮತ್ತೊಮ್ಮೆ ನಿರೂಪಿಸಿದ್ದಾರೆ. ಅಷ್ಟರ ಮಟ್ಟಿಗೆ ಯಡ್ಡಿ ತಮ್ಮ ಹಿಡಿತವನ್ನು ಇಟ್ಟುಕೊಂಡಿದ್ದಾರೆ. ಈಗ ಬಿಜೆಪಿ ಪಾಲಿಗೆ ಬಳ್ಳಾರಿಯಲ್ಲಿನ ರೆಡ್ಡಿ ಬ್ರದರ್ಸ್ ಸಮಾಜ ಘಾತುಕರಾಗಿ ಕಾಣತೊಡಗಿದ್ದಾರೆಂಬುದು ಲೇಟೆಸ್ಟ್ ಡೆವೆಲಪ್ಮೆಂಟ್! ಮೂರ್ನಾಕು ತಿಂಗಳ ಹಿಂದೆ ರಾಜ್ಯ ಬಿಜೆಪಿಯನ್ನು ತಮ್ಮ ಕೈಬೆರಳಲ್ಲಿ ಆಡಿಸುತ್ತಿದ್ದ ಜನಾರ್ಧನ ರೆಡ್ಡಿ ಜೈಲ್ ಸೇರುತ್ತಿದಂತೆ ಅವರ ಬೆಂಬಲಿಗರು ಅನಾಥರಾಗಿದ್ದಾರೆ. ಹೈದರಾಬಾದ್ ಕರ್ನಾಟಕವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ರೆಡ್ಡಿ ಸಹೋದರರ ಲೆಫ್ಟಿನೆಂಟ್ ರಾಮುಲು ಈಗ ಒಬ್ಬಂಟಿ. ಆತನ ಬೆನ್ನಹಿಂದೆ ಬೆರಳೆಣಿಕೆ ಶಾಸಕರು ಮಾತ್ರ ಜೊತೆಗಿದ್ದಾರೆ. ಚುನಾವಣಾ ಕಣದಲ್ಲಿರುವ ರಾಮುಲು ಸೋಲು-ಗೆಲುವು ಇಲ್ಲಿ ಯಾರಿಗೂ ಮುಖ್ಯ ಅಲ್ಲ. ರಾಜ್ಯದ ರಾಜಕೀಯ ಪಕ್ಷಗಳ ಲೆಕ್ಕಾಚಾರ, ಅವುಗಳ ದ್ವಂದ್ವ ನಿಲುವು ಹೇಗೆ ಅನಾವರಣಗೊಳ್ಳುತ್ತದೆ ಎನ್ನುವುದನ್ನು ನಾವಿಲ್ಲಿ ನೋಡಬೇಕಿದೆ.

ಈ ಚುನಾವಣೆಯಿಂದ ರಾಜ್ಯದಲ್ಲಿನ ಜೆಡಿಎಸ್ ಪಕ್ಷದ ಬಂಡವಾಳ ಬಟಾ ಬಯಲಾಗಿದೆ. ದೇವೇಗೌಡರ ರಾಜಕೀಯದ ಹಿನ್ನೆಲೆಯನ್ನು ಕಂಡವರಿಗೆ ಈಗ ಅವರ ಮಗ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಅಷ್ಟೇನೂ ವಿಶೇಷ ಅನ್ನಿಸಲಿಕ್ಕಿಲ್ಲ. ಯಾರನ್ನು ಯಾವಾಗ ಬೇಕಾದರೂ ಅಪ್ಪಿಕೊಳ್ಳುವ, ಬೇಡವೆಂದಾಗ ಅಷ್ಟೇ ನಯಾ-ನಾಜೂಕಿನಿಂದ ಒದೆಯುವ ಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡಿರುವ ದೇವೇಗೌಡರ ಯೌವ್ವನದ ದಿನಗಳ ರಾಜಕೀಯದಸ್ತ್ರಗಳನ್ನು ಈಗ ಅವರ ಪುತ್ರ ಕುಮಾರಸ್ವಾಮಿ ಯಶಸ್ವಿಯಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. ದೆವೇಗೌಡರ ಜಾಣ ಮೌನ ಕುಮಾರಸ್ವಾಮಿಯವರ ಎಲ್ಲಾ ಆಟಕ್ಕೂ ಕುಮ್ಮಕ್ಕು ನೀಡುತ್ತಿದೆ. ಕುಮಾರಸ್ವಾಮಿ ತೆಗೆದುಕೊಳ್ಳುವ ನಿಲುವನ್ನು ದೇವೇಗೌಡರು ವಿರೋಧಿಸಲು ಸಾಧ್ಯವಾಗುತ್ತಿವಾದ್ದರಿಂದ ರಾಜ್ಯ ರಾಜಕಾರಣದಲ್ಲೀಗ ದೇವೇಗೌಡ ಬರೀ ಉತ್ಸವಮೂರ್ತಿ ಆಗಿದ್ದಾರೆ. ಬಳ್ಳಾರಿಯ ಇತ್ತೀಚಿನ ಉಪಚುನಾವಣೆ ಅದಕ್ಕೆ ಸಾಕ್ಷಿ.

ಒಮ್ಮೆ ಅಧಿಕಾರದ ರುಚಿ ನೋಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೆಡ್ಡಿ ಸಹೋದರರ ಜೊತೆ ಕೈ ಜೋಡಿಸಲು ಸಜ್ಜಾಗಿರುವುದು ಅವರ ರಾಜಕೀಯ ದಿವಾಳಿತನ ಎನ್ನದೆ ಬೇರೇನೂ ಹೇಳಲು ಸಾಧ್ಯವಿಲ್ಲ. ತಮ್ಮ ವಿರುದ್ದ ೧೫೦ ಕೋಟಿ ಗಣಿ ಲಂಚದ ಆರೋಪ ಮಾಡಿ ರಾಜ್ಯದಲ್ಲಿನ ಇವತ್ತಿನ ಸ್ಥಿತಿಗೆ ಕಾರಣರಾದ ಬಳ್ಳಾರಿ ಗಣಿ ಮಾಫಿಯಾ ಜೊತೆ ಈಗ ಜೊತೆಯಾಗಲು ಮುಂದಾಗುವ ಮೂಲಕ ತಮ್ಮ ರಾಜಕಾರಣ ಭವಿಷ್ಯವನ್ನು ಅಲ್ಪಾವಧಿಯಲ್ಲೇ ಮುಗಿಸಿಕೊಳ್ಳುವ ಆತುರದಲ್ಲಿರುವಂತೆ ಕಾಣುತ್ತಿದೆ. ಜೈಲಿನಲ್ಲಿರುವ ಜನಾರ್ಧನ ರೆಡ್ಡಿ ಒಮ್ಮೆ ಬಿಡುಗಡೆಯಾಗಿ ಹೊರಬಂದರೆ ರೆಡ್ಡಿ-ಕುಮಾರಣ್ಣ ಭಾಯಿಭಾಯಿಯಾಗುವುದು ದೂರದ ಮಾತೇನಲ್ಲ. ಕುಮಾರಸ್ವಾಮಿಯವರಿಗೀಗ ಉತ್ತರ ಕರ್ನಾಟಕದಲ್ಲಿ ನೆಲೆ ಕಂಡುಕೊಳ್ಳಲು ಆಸರೆ ಬೇಕಾಗಿದೆ. ಅಲ್ಲಿನ ೫-೬ ಜಿಲ್ಲೆಗಳಲ್ಲಿ ನಾಯಕ ಸಮುದಾಯವಿದ್ದು ಅದರ ನಾಯಕತ್ವವನ್ನು ರಾಮುಲು ವಹಿಸುವುದರ ಜೊತೆಗೆ ಹಣದ ಜವಾಬ್ದಾರಿಯನ್ನು ಕೂಡಾ ರೆಡ್ಡಿ ಬಣ ನೋಡಿಕೊಳ್ಳುವುದರಿಂದ ಅಲ್ಲಿ ತಾವು ಹೊಸ ಹೆಜ್ಜೆ ಇಡಬಹುದು ಎನ್ನುವುದು ಕುಮಾರಸ್ವಾಮಿಯವರ ಲೆಕ್ಕಾಚಾರ.

ರಾಜ್ಯದಲ್ಲಿ ಮುಂದಿನ ವರ್ಷ ಯಾವುದೇ ಸಂದರ್ಭದಲ್ಲಿ ಚುನಾವಣೆ ಬರುವ ಸಾಧ್ಯತೆ ನಿಚ್ಚಳವಾಗಿರುವುದರಿಂದ ಈಗಿನಿಂದಲೇ ಕುಮಾರಸ್ವಾಮಿ ಬಲೆ ಹೆಣೆಯಲು ಶುರುಹಚ್ಚಿಕೊಂಡಿದ್ದಾರೆ. ತಾವು ಹಿನಾಮಾನವಾಗಿ ಜರಿದು ರಂಪಾಟ ಮಾಡಿಕೊಂಡಿದ್ದ ಬಳ್ಳಾರಿ ಗಣಿ ಮಾಫಿಯಾ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಬಿಜಿಪಿಯ ಶಕ್ತಿಯನ್ನು ಕುಂದಿಸುವ ಲೆಕ್ಕಾಚಾರದಲ್ಲಿ ಕುಮಾರಸ್ವಾಮಿ ಮತ್ತವರ ತಂಡ ಎಲ್ಲಾ ಭೂತಗಳನ್ನೂ ಮರೆತು ಹೊಸ ಭವಿಷ್ಯದ ಕನಸು ಕಟ್ಟುತ್ತಿದ್ದಾರೆ. ವಯಸ್ಸಾಗುತ್ತಿರುವ ದೇವೇಗೌಡರು ಇದೆಲ್ಲವನ್ನು ಸಹಿಸಿಕೊಂಡಂತೆ ಮೇಲುನೋಟಕ್ಕೆ ಕಂಡರೂ ಕೈಲಾಗದೆ ಕುಳಿತಿಲ್ಲ ಎನ್ನುವುದು ಅವರ ಆಪ್ತರ ಅಭಿಪ್ರಾಯ. ರಾಜಕೀಯದಲ್ಲಿ ಈಗ ಗೌಡರಿಗೆ ಮೊದಲಿನಷ್ಟು ಶಕ್ತಿ ಇಲ್ಲದ್ದಿದ್ದರು ರಾಜಕೀಯ ಲೆಕ್ಕಾಚ್ಚರದಲ್ಲಿ ಆತ ಬಹಳ ನಿಸ್ಸೀಮರು. ಗೌಡರಿಗೆ ಅವರ ಮತ್ತೊಬ್ಬ ಪುತ್ರ ರೇವಣ್ಣನನ್ನು ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡಲೇಬೇಕೆಂಬ ಬಹುದಿನದ ಕನಸು. ಅದಕ್ಕಾಗಿ ಅವರು ಸೂಕ್ತ ಸಮಯ ಕಾಯುತ್ತಿದ್ದರೂ ಅಚ್ಚರಿ ಪಡಬೇಕಿಲ್ಲ. ಗೌಡರ ಹಳೇ ಸ್ನೇಹಿತರು ಕುಮಾರಸ್ವಾಮಿಗಿಂತಲೂ ಗೌಡರ ಗುಣಾಕಾರವನ್ನೇ ಈಗ ಹೆಚ್ಚು ಅವಲಂಬಿಸತೊಡಗಿದ್ದಾರೆ. ಆದರೆ ಕುಮಾರಸ್ವಾಮಿ ಮಾತ್ರ ಗೌಡರ ವಿಚಾರವಾಗಿ ತಲೆ ಕೆಡಿಸಿಕೊಳ್ಳದೆ ತಮ್ಮದೇ ಪಟಾಲಂ ಕಟ್ಟಿಕೊಳ್ಳುತ್ತ ಮತ್ತೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತ ಅಡ್ದರಸ್ತೆಯಲ್ಲಿ ದಾಪುಗಾಲು ಹಾಕತೊಡಗಿರುವುದು ವಿಪರ್ಯಾಸ!

ಮುಂದಿನ ದಿನಗಳಲ್ಲಿ ರಾಜ್ಯದ ರಾಜಕಾರಣ ಮತ್ತೊಮ್ಮೆ ಕಲಸುಮೇಲೋಗರ ಆಗುವುದರ ಸೂಚನೆ ಗಟ್ಟಿಯಾಗಿದೆ. ಸಧ್ಯದ ಪರಿಸ್ಥಿಯಲ್ಲಿ ಬಿಜೆಪಿಯ ಯಡ್ಡಿ ಬಣಕ್ಕೆ ಸದಾನಂದಗೌಡ ಗಟ್ಟಿಯಾಗಿ ನೆಲೆಯೂರುವುದು ಬೇಕಾಗಿಲ್ಲ, ಹಾಗೆ ಯಡ್ಯೂರಪ್ಪನವರ ವಿರೋಧಿ ಬಣಕ್ಕೂ ಸದಾನಂದ ಗೌಡರು ಯಡ್ಡಿ ತಾಳಕ್ಕೆ ಕುಣಿಯುವುದು ಬೇಕಾಗಿಲ್ಲ . ಕುಮಾರಸ್ವಾಮಿ ಅವರಿಗಂತೂ ನಾಳೆಯೇ ಸರ್ಕಾರ ಬೀಳಬೇಕು ಎನ್ನುವ ಅವಸರ. ಆದರೆ ಕಾಂಗ್ರೆಸ್ ಮಾತ್ರ ಸೂಕ್ತ ಸಂದರ್ಭದಲ್ಲಿ ರಾಜ್ಯಪಾಲರ ಮೂಲಕವೇ ತನ್ನ ದಾಳ ಪ್ರಯೋಗಿಸಲು ಸಜ್ಜಾಗಿರುವ ಲಕ್ಷಣಗಳು ಸ್ಪಷ್ಟವಾಗಿದೆ. 
  
 
 
 
 
 
 
Copyright © 2011 Neemgrove Media
All Rights Reserved