ಗಾಳಿ ಅಂಗಿ ಚುಂಗು ಹಿಡಿದು
ಕಾಲಿಗಷ್ಟು ಚಕ್ರ ಕಟ್ಟಿ
ಮೆಲ್ಲ ಮೆಲ್ಲ ಸಿಲ್ಲಿ ಗಲ್ಲಿ
ಕೋಟೆ ಕೊತ್ತಲ ಊರು ಸುತ್ತಿ
ಕಣ್ಣು ಕಂಡ ಪಟಗಳನ್ನು
ಮನದ ಪದಕೆ ತಳಿಕೆ ಹಾಕಿ
ಹಿಗ್ಗು ಸುಗ್ಗಿ ಎಲ್ಲ ಸುರಿದು
ಪುಟದ ಮೇಲೆ ತಟಪಟಾ...

 
 

ವಿದೇಶಗಳಲ್ಲಿ ಭಾರತದ ಪ್ರವಾಸಿಗಳ ತಕರಾರು-ನಖರಾಗಳು  

ಟೋನಿ
 

ಕೆಲವೊಮ್ಮೆ ನಮ್ಮ ಜನಗಳೇ ನಮಗೆ ಆಶ್ಚರ್ಯ ಹುಟ್ಟಿಸಿಬಿಡುತ್ತಾರೆ. ’ನಮ್ಮ ಭಾರತದವರು ಒಡ್ಡರು ಅಂತ ಇಲ್ಲಿ ನಮ್ಮನ್ನೆಲ್ಲಾ ಒಂಥರಾ ನೋಡ್ತರೆ ಅಣ್ಣಾ’ ಅಂತ ಹಿಂದೆ ಪ್ರವಾಸ ಹೋಗಿದ್ದ ಫ್ರೆಂಡೊಬ್ಬ ಹೇಳಿದ್ದ. ಅರೆ! ನಾವು ಸುಮ್ಮಸುಮ್ಮನೇ ಯಾಕೆ ವಡ್ಡರಾಗುತ್ತೀವಿ! ನಮಗೇನು ಮಾಡಲು ಕೆಲಸ ಇಲ್ಲವಾ? ಇದೆಲ್ಲಾ ಆ ಬಿಳಿಯರ ಕುತಂತ್ರ ಎಂದುಕೊಂಡು ಸುಮ್ಮನಾಗಿದ್ದೆ. ಅದೊಂದು ದಿನ ನಾನೇ ಅದನ್ನು ಕಣ್ಣಾರೆ ಕಂಡು ಅನುಭವಿಸುವ ದಿನ ಬಂತು.

ರಾತ್ರಿ ಎನ್ ಹೆಚ್ ಹೋಟೆಲಿನ ಒಳಹೊಕ್ಕು ನಮ್ಮ ನಮ್ಮ ರೂಮಿನ ಕೀಗಳನ್ನು ಜ್ಯೂಜ಼ರನಿಂದ ಪಡೆದು ಲಿಫ಼್ಟ್ ಬಳಿ ಹೋದೆವು. ಒಂದಷ್ಟು ಜನರನ್ನು ಲಿಫ಼್ಟ್ ಹತ್ತಿಸಿ ನಂತರ ನಮ್ಮೆಲ್ಲರ ಲಗೇಜುಗಳೆಲ್ಲವನ್ನೂ ಲಿಫ಼್ಟ್ ನಲ್ಲಿ ತುಂಬಿ ಮೇಲಕ್ಕೆ ಕಳಿಸಿದೆವು. ಇನ್ನೂ ನಾಲ್ಕಾರು ಮಂದಿ ಲಿಫ಼್ಟ್ ಇಳಿಯುವುದನ್ನೇ ಕಾಯುತ್ತಾ ನಿಂತಿದ್ದಾಗ ಅದೆಲ್ಲಿದ್ದರೋ ಒಂದಷ್ಟು ಮಂದಿ ಧಡೂತಿ ಜನ ನಾವು ಕ್ಯೂನಲ್ಲಿ ನಿಂತಿದ್ದರೂ ಅದನ್ನು ಲೆಕ್ಕಿಸದೇ ಲಿಫ಼್ಟಿನ ಮುಂದಿನ ಭಾಗಕ್ಕೆ ಬಂದು ತೆಲುಗಿನಲ್ಲಿ ಜೋರಾಗಿ ಕಿರುಚುತ್ತಾ ಮಾತಾಡತೊಡಗಿದರು. ಧಡೂತಿ ಹೊಟ್ಟೆ, ನಾಯಿ ಚೈನು ಗಾತ್ರದ ಚಿನ್ನದ ಸರಗಳು, ಅವರ ಆತುರ ನೋಡಿದ ಕೂಡಲೇ ಅವರು ಭಾರತದ ಆಂಧ್ರಪ್ರದೇಶದವರೆಂದು ಅದರಲ್ಲೂ ಪಕ್ಕಾ ವ್ಯಾಪಾರಸ್ತರೆಂದು ನಮಗೆ ಗೊತ್ತಾಗಿತ್ತು. ’ರಾವಯ್ಯಾ, ರಾವಯ್ಯ, ಅರ್ಜೆಂಟ್ ಆತಾವುಂದೀ’, ಎಂದು ಹತ್ತಾರು ಮಂದಿ ಒಟ್ಟೊಟ್ಟಿಗೇ ನಮ್ಮ ಲಗೇಜುಗಳನ್ನೂ ಕಾಲಿನಲ್ಲಿಯೇ ಪಕ್ಕಕ್ಕೆ ತಳ್ಳುತ್ತಾ ಲಿಫ಼್ಟಿನ ಮುಂಭಾಗಕ್ಕೆ ಧಾವಿಸಿದ್ದು ಕಂಡು ನಮಗೆಲ್ಲಾ ಸಿಟ್ಟು ತರಿಸಿತ್ತು.

ನನಗೆ ಮೊದಲೇ ಕೋಪ ಜಾಸ್ತಿ, ಅದರಲ್ಲೂ ನಮ್ಮನ್ನೇ ದಬ್ಬಾಳಿಕೆ ಮಾಡುತ್ತಾರೆಂದರೆ ಅದು ಏನು, ಯಾರು, ಎಲ್ಲಿ ಅಂತ ನಾನು ಮೀನ ಮೇಷ ಎಣಿಸುವ ಪಾರ್ಟಿ ಅಲ್ಲ. ನಾವು ಇನ್ನೂ ಒಂದಷ್ಟು ಲಗೇಜುಗಳನ್ನು ಲಿಫ಼್ಟಿನ ಬಾಗಿನಲ್ಲಿರಿಸಿದ್ದೆವು. ಅವನ್ನೆಲ್ಲಾ ಪಕ್ಕಕ್ಕೆ ತಳ್ಳಿ ಆ ದಢೂತಿ ಜನ ಲಿಫ಼್ಟಿನೊಳಕ್ಕೆ ನುಗ್ಗಲು ಮುಂದಾಗಿದ್ದರಿಂದ ನಾನು ಮುಂಭಾಗಕ್ಕೆ ಹೋಗಿ ಅವರನ್ನು ತಡೆದು ನಮ್ಮ ಲಗೇಜುಗಳನ್ನು ಲಿಫ಼್ಟಿನೊಳಕ್ಕೆ ತುಂಬಿ ಉಳಿದಿದ್ದ ಹೆಂಗಸರನ್ನೆಲ್ಲಾ ಹತ್ತಿಸಿ ಕಳಿಸಿದೆ. ನಾವು ಇನ್ನೂ ಮೂರ್ನಾಲ್ಕು ಮಂದಿ ಮತ್ತೆ ಕ್ಯೂನಲ್ಲಿ ನಿಂತಿದ್ದರೂ ನಮ್ಮನ್ನು ಹಿಂದಕ್ಕೆ ತಳ್ಳಿ ಲಿಫ಼್ಟಿನ ಮುಂದಕ್ಕೆ ನುಗ್ಗಿ ತೆಲುಗಿನಲ್ಲಿ ’ಪದಂಡಿ, ಪದಂಡಿ’ ಎಂದು ಜೋರಾಗಿ ಕೂಗಾಡತೊಡಗಿದ್ದನ್ನು ಕಂಡು ನನಗಂತೂ ರೇಗಿತ್ತು. ಲಿಫ಼್ಟ್ ಬಾಗಿಲು ತೆರೆದ ಕೂಡಲೇ ಮುಂಭಾಗದಲ್ಲಿದ್ದ ಒಂದಿಬ್ಬರನ್ನು ಎಳೆದು ಹಿಂದಕ್ಕೆ ತಳ್ಳಿ ಲಿಫ್ಟ್ ಒಳ ಪ್ರವೇಶಿಸುತ್ತಾ ಕಮ್ಮಿ ದನಿಯಲ್ಲೇ ಒರಟಾಗಿ ’---- ಮುಸ್ಕೊಂಡ್ ಲೈನ್ಗ ರಾವಯ್ಯಾ’ ಎಂದೆ. ಆ ಶಬ್ದವನ್ನು ಕೇಳಿದ್ದೇ ತಡ ಅಲ್ಲಿದ್ದವರೆಲ್ಲಾ ಗಪ್ ಚುಪ್ ಆಗಿ ಹಿಂದಕ್ಕೆ ಸರಿದಿದ್ದರು. ಉಳಿದಿದ್ದ ನಮ್ಮ ಟೀಮಿನವರೆಲ್ಲಾ ಒಳಹೊಕ್ಕೆವು. ಇನ್ನೂ ಮೂರ್ನಾಲ್ಕು ಜನ ಒಳಗೆ ಬರಬಹುದಿತ್ತಾದರೂ ಒಳಗೆ ಬರಲು ನುಗ್ಗಾಡುತ್ತಿದ್ದ ಆಂಧ್ರದ ಟೀಂ ತೆಪ್ಪಗೆ ನಿಂತಿದ್ದರು. ನಾವು ಲಿಫ಼್ಟಿನಲ್ಲಿ ಹೋಗುವಾಗ ಕಪ್ಪದ್ ’ಅವರಿಗೆ ಅದೇನು ಹೇಳಿದ್ರಿ, ಎಲ್ಲಾ ತಣ್ಣಗಾಗಿ ಬಿಟ್ರಲ್ಲಾ’ ಅಂದರು. ಅವರ ಕಿವಿಯಲ್ಲಿ ಅದರ ಅನುವಾದವನ್ನು ಹೇಳಿದೆ. ಅವರು ಜೋರಾಗಿ ನಕ್ಕವರೇ ’ಚಲೋ ಹೇಳಿದ್ದೀರಿ ಬಿಡ್ರೀ ಅವರಿಗೇ ಅಲ್ಲೇ ಅರ್ಜೆಂಟ್ ಆಗಿದ್ದು’ ಎಂದು ಅದನ್ನು ಲಿಫ಼್ಟಿನೊಳಗಿದ್ದ ನಮ್ಮ ತಂದದವರಿಗೆಲ್ಲಾ ಜೋರಾಗಿ ಹೇಳಿದ್ದರಿಂದ ಎಲ್ಲರೂ ಜೋರಾಗಿ ನಗತೊಡಗಿದ್ದರು.

ರೂಮಿಗೆ ಹೋಗಿ ಲಗೇಜುಗಳನ್ನಿಟ್ಟು ಹೊರಗಡೆ ಬಂದಾಗ ಆಂಧ್ರದ ಟೀಂನ ಕೆಲವರು ಹೊಟ್ಟೆಯನ್ನು ಬಿಗಿಯಾಗಿ ಹಿಡಿದುಕೊಂಡು ತಮ್ಮ ರೂಮುಗಳನ್ನು ಅರ್ಜೆಂಟಾಗಿ ಹುಡುಕತೊಡಗಿದ್ದರು. ನಮ್ಮ ಟೀಮಿನಲ್ಲಿದ್ದ ತಮಿಳು ಹುಡುಗನೊಬ್ಬ ಮೂಗು ಮುಚ್ಚಿಕೊಂಡು ಲಿಫ಼್ಟಿನಿಂದ ಹೊರಬರುತ್ತಿದ್ದ. ಅದೇಕೆ ಮೂಗು ಮುಚ್ಚಿಕೊಂಡಿದ್ದೀಯೆಂದು ಅವನನ್ನು ಕೇಳಿದ್ದಕ್ಕೆ ಆತ ಲಿಫ಼್ಟಿನಲ್ಲಿ ಬಂದೆನೆಂದೂ, ಟೀಂ ಆಂಧ್ರ ಒಟ್ಟಿಗೇ ಬಿಟ್ಟಿದ್ದ ಗ್ಯಾಸಿನಿಂದಾಗಿ ಊಟ ಮಾಡಿದ್ದೆಲ್ಲಾ ಕಕ್ಕುವಂತಾಗಿದೆಯೆಂದಿದ್ದ. ಭೋಜನಪ್ರಿಯರೂ, ಕುರುಕು ತಿಂಡಿಯನ್ನು ಅತಿಯಾಗಿ ಸೇವಿಸುವವರೂ ಆಗಿದ್ದ ಆಂಧ್ರ ಶೆಟ್ಟರುಗಳು ಪೂರ್ಣ ಭೋಜನದ ಪರಿಣಾಮವಾಗಿ ಜೀರ್ಣವಾಗದೇ ಹೊಟ್ಟೆ ಹಿಡಿದುಕೊಂಡು ಅರ್ಜೆಂಟ್ ಟಾಯ್ಲೆಟ್ ಗೆ ಹೋಗಬೇಕಾಗಿದ್ದುರಿಂದಲೇ ಹಾಗೆ ಲಿಫ್ಟಿಗಾಗಿ ನುಗ್ಗಾಡುತ್ತಿದ್ದರೆಂದು ಖಚಿತವಾಯಿತು. ಸಧ್ಯ! ನಾವು ಲಿಫ಼್ಟಿನೊಳಗೆ ಹೋದಾಗ ಇನ್ನೂ ಸ್ವಲ್ಪ ಜಾಗವಿದ್ದರೂ ನಾನು ರೇಗಿದ್ದರಿಂದ ಅವರು ಒಳಗೆ ಬರದಿದ್ದುದು ನಮ್ಮನ್ನು ಆ ಗ್ಯಾಸ್ ಹಾವಳಿಯಿಂದ ತಪ್ಪಿಸಿತ್ತು. ಅದೇಕೋ ವಿದೇಶೀಯರುಗಳು ಭಾರತದ ಹೆಸರನ್ನು ಹೇಳಿ ನಮ್ಮ ನಗರಗಳ ಬಗ್ಗೆ ಕುತೂಹಲದಿಂದ ಕೇಳಿದಾಗಲೆಲ್ಲಾ ನಾವುಗಳು ಹೆಮ್ಮೆಯಿಂದ ಪ್ರತಿಕ್ರಿಯಿಸುತ್ತಿದ್ದೆವು. ಆದರೆ ನಮ್ಮ ಯೂರೋಪಿನ ಪ್ರವಾಸದಲ್ಲಿ ಕೆಲವು ಭಾರತೀಯರ ವರ್ತನೆ ನಮಗೇ ಬೇಸರ ತರಿಸಿತ್ತು. ಪ್ಯಾರಿಸ್ಸಿನಲ್ಲಿ ಕೆಲವು ಗುಜರಾತಿಗಳು ಎರ್ರಾಬಿರ್ರಿ ಕುಡಿದು ಚಿತ್ತಾಗಿ ಟಾಯ್ಲೆಟ್ ನಲ್ಲಿ ಬಿದ್ದು ಹೊರಳಾಡುವುದನ್ನು ನೋಡಿದ್ದೆ. ಅಲ್ಲಿನ ಬಾರ್ ನಲ್ಲಿ ಹಲವಾರು ಭಾರತೀಯ ಹುಡುಗ ಹುಡುಗಿಯರೆಲ್ಲರೂ ಮೈಮೇಲೆ ಪರಿವೆಯಿಲ್ಲದವರಂತೆ ನರ್ತಿಸುತ್ತಿದ್ದರು. ಅಲ್ಲಿ ಯಾವ ಯೂರೋಪಿಯನ್ನನೂ ಕುಡಿದು ಬಿದ್ದಿದ್ದು ನನ್ನ ಕಣ್ಣಿಗೆ ಬೀಳಲಿಲ್ಲ. ಯೂರೋಪಿನಲ್ಲಿ ನಾನು ರಾತ್ರಿಗಳಲ್ಲಿ ಸುತ್ತಾಡಿದಾಗ ಅಲ್ಲಿ ಡ್ರಗ್ ಅಡಿಕ್ಟ್ ಆಗಿದ್ದವರು ಕತ್ತಲು ತುಂಬಿದ ಖಾಲಿ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದನ್ನು ನೊಡಿದ್ದು ಬಿಟ್ಟರೆ ನಾವುಗಳು ನೋಡಿದ ಪ್ರವಾಸಿ ಕೇಂದ್ರಗಳಲ್ಲಿ ಅವರುಗಳ ಶಿಸ್ತು ಅನುಕರಣೀಯವಾಗಿತ್ತು.

ಬೆಳಗಿನ ತಿಂಡಿ, ರಾತ್ರಿ ಊಟದ ಸಮಯದಲ್ಲೂ ಪ್ರತೀ ಟೀಮಿನವರಿಗೂ ಒಂದು ಸಮಯ ನಿಗದಿಯಾಗಿರುತ್ತಿತ್ತು. ಒಂದು ಟೀಮಿನವರು ತಿನ್ನುವುದಕ್ಕೆ ಅರ್ಧ ಗಂಟೆ ಸಮಯವಿರುತ್ತಿತ್ತು. ಕೆಲವೊಮ್ಮೆ ಬೇರೆ ಟೀಮಿನಲ್ಲಿದ್ದ ಕೆಲವರು ನಾವು ತಿಂಡಿಗೋ ಊಟಕ್ಕೋ ಕೂತಿದ್ದಾಗಲೇ ನುಗ್ಗಿ ಬಂದು ಗೊಂದಲ ಸೄಷ್ಟಿ ಮಾಡಿಬಿಡುತ್ತಿದ್ದರು. ತಮಗೆ ಸಿಗಲಿಕ್ಕೆ ಇನ್ನೇನೂ ಸಿಗುವುದೇ ಇಲ್ಲವೆಂಬಂತೆ ಬೇರೆ ಟೀಮಿನಲ್ಲಿದ್ದವರು ಲಗ್ಗೆಯಿಡುತ್ತಿದ್ದರು. ಪ್ಯಾರಿಸ್ಸಿನ ಬಾರೊಂದರಲ್ಲಿ ಪ್ರವಾಸ ಬಂದಿದ್ದ ಭಾರತೀಯನೊಬ್ಬ ಕುಡಿದ ಮತ್ತಿನಲ್ಲಿ ಭಾರತೀಯರನ್ನೇ ನಿಂದಿಸಿ ಮಾತಾಡತೊಡಗಿದ್ದ. ಅಲ್ಲಿದ್ದ ಇತರೆ ದೇಶಗಳ ಪ್ರವಾಸಿಗರು ಅವನ ಮಾತುಗಳನ್ನು ಕುತೂಹಲದಿಂದ ಕೇಳುತ್ತಿದ್ದರು. ಹೀಗೆ ತನ್ನ ದೇಶದ ಜನತೆಯನ್ನೇ ಈತ ಹಂಗಿಸುತ್ತಿದ್ದುದು ಅವರಲ್ಲಿ ಆಶ್ಚರ್ಯವುಂಟುಮಾಡಿತ್ತು. ಆತ ಯಾವ ಪರಿ ಕುಡಿದು ಮೈ ಮರೆತಿದ್ದನೆಂದರೆ ಟಾಯ್ಲೆಟ್ ಗೆ ಹೋಗಿಬಂದವ ಪ್ಯಾಂಟಿನ ಜಿಪ್ಪನ್ನೂ ಮೇಲೆಳೆಯದೇ ತಟ್ಟಾಡಿ ಕೆಳಗೆ ಬಿದ್ದು ಅಲ್ಲಿದ್ದವರಲ್ಲಾ ಅಸಹ್ಯದಿಂದ ಅವನತ್ತ ನೋಡುವಂತೆ ಮಾಡಿಕೊಂಡು ಕೆಟ್ಟ ಭಾರತೀಯ ಪ್ರಜೆ ಹೇಗಿರುತ್ತಾರೆಂಬುದಕ್ಕೆ ತಾನೇ ಉದಾಹರಣೆಯಾಗಿದ್ದ. ಭಾರತೀಯರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದ ಈ ಭಾರತೀಯನ ಪರಿಸ್ಥಿತಿಯನ್ನು ನೋಡಿದ ಹಲವರಿಗೆ ಆ ಸಮಯದಲ್ಲಿ ಆತ ಹೇಳಿದ್ದು ನಿಜವೆಂದೆನಿಸಿತ್ತು. ಯಾಕೆಂದರೆ ಆತನೇ ತನ್ನ ವರ್ತನೆಯಿಂದ ಅಲ್ಲಿದ್ದವರಲ್ಲಿ ಬೇಸರ ತರಿಸಿದ್ದ. ಹಲವಾರು ಕಡೆ ಭಾರತೀಯರಿರುವುದನ್ನು ಸುಲಭವಾಗಿ ಗುರುತಿಸಬಹುದಿತ್ತು. ಕೆಲವರು ಗುಂಪಿನಲ್ಲಿ ನಮ್ಮ ಕಣ್ಣಿಗೆ ಕಾಣದಿದ್ದರೂ ಅವರ ಜೋರಾದ ಮಾತಿನಿಂದಾಗಿಯೇ ಭಾರತೀಯರ ಉಪಸ್ಥಿತಿಯನ್ನು ತೋರುತ್ತಿತ್ತು. ಅದರಲ್ಲಿಯೂ ಉತ್ತರ ಭಾರತೀಯರು, ಬಂಗಾಲಿಗಳು ಹಾಗೂ ದಕ್ಷಿಣದ ತಮಿಳರು ಜೋರಾಗಿ ತಮ್ಮ ಮಾತುಗಳು ಸುತ್ತಮುತ್ತಲಿನ ಹತ್ತಾರು ಜನರೂ ಕೇಳಿಸಿಕೊಳ್ಳುವಂತೆ ಮಾತಾಡುವುದರಲ್ಲಿ ನಿಸ್ಸೀಮರಾಗಿದ್ದರು. ನಾವು ಕನ್ನಡಿಗರು ನಮ್ಮ ಪಕ್ಕದವರಿಗಷ್ಟೇ ಕೇಳುವಂತೆ ಮಾತಾಡಿಕೊಂಡು ಸಭ್ಯತೆಯನ್ನು ಉಳಿಸಿಕೊಂಡಿದ್ದೆವು.

ಬೆಲ್ಜಿಯಂನಲ್ಲಿ ಕಳ್ಳರ ಘಟನೆಯಾದ ನಂತರ ಎಲ್ಲರೂ ಶಾಪಿಂಗ್ ಗಾಗಿ ತೆರಳಿದ್ದಾಗ ನಾನು ಒಬ್ಬನೇ ಸಣ್ಣ ಸಣ್ಣ ಗಲ್ಲಿಗಳಲ್ಲಿ ಸುತ್ತಾಡುತ್ತಿದ್ದಾಗ ಇಬ್ಬರು ಪ್ರವಾಸೀ ಭಾರತೀಯರು ವ್ಯಾಪಾರಿಯೊಬ್ಬನ ಬಳಿ ಗಲಾಟೆಗಿಳಿದಿದ್ದರು. ಆ ವ್ಯಾಪಾರಿ ಆಫ಼್ರಿಕಾದವನಾಗಿದ್ದ. ಇವರು ಅವನಲ್ಲಿದ್ದ ಜರ್ಕಿನ್ ಒಂದನ್ನು ಕಸಿದುಕೊಂಡು ಇದು ತಾನು ಮೊದಲು ವ್ಯಾಪಾರ ಮಾಡಿದ್ದು ತನಗೇ ಬೇಕೆಂದು ಒಬ್ಬ, ಇಲ್ಲ ಇದನ್ನು ಮೊದಲು ಕೈಗೆತ್ತಿಕೊಂಡಿದ್ದು ತಾನೆಂದು ಮತ್ತೊಬ್ಬ. ಇಬ್ಬರೂ ಜೋರುದನಿಯಲ್ಲಿ ಪರಸ್ಪರ ತಮ್ಮಲ್ಲೇ ಕಿತ್ತಾಡತೊಡಗಿದ್ದರು. ಅವರು ಹಿಂದೀ ಭಾಷೆಯಲ್ಲಿ ಜಗಳ ಮಾಡುತ್ತಿದ್ದರಿಂದ ಭಾಷೆ ಅರ್ಥವಾಗದ ಆಫ಼್ರಿಕಾದ ವ್ಯಾಪಾರಿ ಸುಮ್ಮನೇ ಅವರ ಜಗಳವನ್ನು ನೋಡುತ್ತಾ ನಿಂತಿದ್ದ. ಅವರಿಬ್ಬರೂ ಜರ್ಕಿನ್ ಹಿಡಿದುಕೊಂಡು ಹೇಗೆ ಎಳೆದಾಡುತ್ತಿದ್ದರೆಂದರೆ ಸದ್ಯ ಅದು ಹೊಲಿಗೆ ಕಿತ್ತು ಹರಿಯದಿದ್ದುದೇ ವ್ಯಾಪಾರಿಯ ಪುಣ್ಯ. ಅವರ ಮಾತಿನ ತಲೆಬುಡ ಅರ್ಥವಾಗದ ಆ ವ್ಯಾಪಾರಿ ಇವರಿನ್ನೆಲ್ಲಿ ತನ್ನ ವಸ್ತುವನ್ನು ಎಳೆದಾಡಿ ಚಿಂದಿ ಮಾಡುತ್ತಾರೋ ಎಂಬ ಭಯದಿಂದ ತಾನೂ ಒಂದು ಕೈ ಸೇರಿಸಿ ಅದನ್ನು ಅವರಿಬ್ಬರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಆ ಪ್ರವಾಸಿ ಭಾರತೀಯರಿಬ್ಬರ ಜಗಳ ತಾರಕಕ್ಕೇರಿದ್ದರಿಂದ ಕುತೂಹಲದ ಜನ ಅವರತ್ತ ನೆರೆಯತೊಡಗಿದ್ದರು. ಆ ಒಂದು ಜರ್ಕಿನ್ ಗಾಗಿ ಸುಮಾರು ಇಪ್ಪತ್ತು ನಿಮಿಷ ಕಾಲ ಅವರ ಗಲಾಟೆ ಮುಂದುವರೆದಿತ್ತು. ಇವರ ಗಲಾಟೆಯಿಂದಾಗಿ ಆ ಕಪ್ಪು ಅಲೆಮಾರಿ ವ್ಯಾಪಾರಿ ಇತರೆ ಗಿರಾಕಿಗಳಿಗೂ ವ್ಯಾಪಾರ ಮಾಡಲಾಗದ ಸ್ಥಿತಿಯಲ್ಲಿದ್ದ. ಕೊನೆಗೆ ಆ ಗಲಾಟೆಯನ್ನು ನೋಡುವವರ ಬಳಿಯೇ ಅವರಿಬ್ಬರು ಆ ಜರ್ಕಿನ್ ಹಿಡಿದುಕೊಂಡೇ ನ್ಯಾಯ ಒಪ್ಪಿಸತೊಡಗಿದ್ದರು. ನನಗೂ ಆ ರೀತಿ ಒಪ್ಪಿಸಲು ಬಂದಾಗ ನನ್ನ ಸುತ್ತಾಡುವ ಸಮಯವೆಲ್ಲಾ ಅವರ ಗಲಾಟೆ ಬಗೆಹರಿಸುವುದರಲ್ಲಿಯೇ ಕಳೆದುಹೋದೀತೆಂದು, ಅದರ ಉಸಾಬರಿಯೇ ಬೇಡವೆಂದು ನಾನು ಹಿಂದೆ ಸರಿದಿದ್ದೆ. ಅಷ್ಟರಲ್ಲಾಗಲೇ ಆ ಗಲಾಟೆಯನ್ನು ನೋಡಲು ಒಂದು ಸಣ್ಣ ಗುಂಪೇ ಅಲ್ಲಿ ಸೇರಿದ್ದರಿಂದ ಪೋಲಿಸರಿಬ್ಬರು ಆಗಮಿಸಿ ವಿಚಾರಿಸತೊಡಗಿದವರೇ ಭಾರತೀಯರ ಭಾಷೆ ಅರ್ಥವಾಗದೆ ಆ ಕಪ್ಪು ಅಲೆಮಾರಿಯದೇ ಏನೋ ಕಿತಾಪತಿಯಿರಬಹುದೆಂದು ಅವನನ್ನು ವಿಚಾರಿಸಿಕೊಳ್ಳತೊಡಗಿದರು. ಪೋಲಿಸರು ಬಂದದ್ದರಿಂದ ಆ ಜರ್ಕಿನ್ ಅನ್ನು ಈ ಇಬ್ಬರು ಭಾರತೀಯರು ವ್ಯಾಪಾರಿಯ ಕೈಗೆ ಒಪ್ಪಿಸಿದ್ದರಿಂದ ಆ ಅನಧಿಕೃತ ಅಲೆಮಾರಿ ವ್ಯಾಪಾರಿ ಇನ್ನೆಲ್ಲಿ ಪೋಲೀಸರು ತನ್ನನ್ನು ಎಳೆದೊಯ್ಯುತ್ತಾರೋ ಎಂಬ ಭಯದಿಂದ ದಿಕ್ಕಾಪಾಲಾಗಿ ಓಡಿಹೋದ. ಇವರಿಬ್ಬರೂ ತಮ್ಮ ಸಿಟ್ಟನ್ನೆಲ್ಲಾ ವ್ಯಾಪಾರಿಯ ಮೇಲೆ ಹಾಕಿ ಅವನನ್ನು ಬೈಯುತ್ತಾ ಅಲ್ಲಿಂದ ಹೊರಟಿದ್ದರು. ತನ್ನದಲ್ಲದ ತಪ್ಪಿಗೆ ಆ ಬಡಪಾಯಿ ವ್ಯಾಪಾರಿ ತನ್ನ ಸಮಯವನ್ನು ವ್ಯರ್ಥಮಾಡಿಕೊಂಡು, ವ್ಯಾಪಾರವನ್ನೂ ಮಾಡಲಾಗದೆ, ಪೋಲಿಸರಿಂದ ಓಡಿಕೊಂಡು ಕೊನೆಗೆ ಇವೆಲ್ಲವುಗಳಿಗೂ ಕಾರಣರಾದವರಿಂದಲೇ ತಾನೂ ಬೈಗುಳ ಕೇಳಬೇಕಾಗಿತ್ತು.

ಯೂರೋಪಿನ ಪ್ರವಾಸದುದ್ದಕ್ಕೂ ಕೆಲವು ಭಾರತೀಯರ ದುರ್ವರ್ತನೆಯನ್ನು ನಾನು ನೋಡಿದ್ದೆ. ಕೆಲವರು ಆಯಾ ದೇಶದಲ್ಲಿ ಯಾವ ರೀತಿಯ ಕಾನೂನುಗಳಿರುತ್ತವೆಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಾವು ತಮ್ಮದೇ ರಾಜ್ಯದಲ್ಲಿ ಸುತ್ತಾಡುತ್ತಿರುವಂತೆ ವರ್ತಿಸುತ್ತಿದ್ದರು. ಪ್ಯಾರಿಸ್ಸಿನ ನೈಟ್ ಕ್ಲಬ್ ಒಂದರಲ್ಲಿ ಮುಂಬಯಿಯಿಂದ ಬಂದಿದ್ದ ಇಬ್ಬರು ಹುಡುಗರು ತಾವು ಮುಂಬೈನಲ್ಲೇ ಇರುವಂತೆ ಭಾವಿಸಿಕೊಂಡು ಕಂಠಮಟ್ಟ ಕುಡಿದು ಹುಡುಗಿಯರಿಬ್ಬರನ್ನು ತಮ್ಮ ಮೇಲೆ ಕೂರಿಸಿಕೊಂಡಿದ್ದರು. ಆ ಹುಡುಗಿಯರು ಎದ್ದು ಹೋದ ನಂತರ ವೇಟರ್ ಬಿಲ್ ತಂದಿಟ್ಟು ಅವರ ಕೈಗಿತ್ತಾಗಲೇ ಅವರು ವಾಸ್ತವ ಜಗತ್ತಿಗೆ ಮರಳಿದ್ದು. ಆ ಬಿಲ್ ನೋಡಿದವರೇ ಅವರು ಅವಕ್ಕಾಗಿ ತಮ್ಮ ಜೇಬಿನಲ್ಲಿದ್ದುದನ್ನೆಲ್ಲಾ ತಡಕಾಡತೊಡಗಿದ್ದರು. ಅವರಿಬ್ಬರ ಬಳಿಯಿದ್ದುದೆಲ್ಲವನ್ನೂ ಲೆಕ್ಕ ಹಾಕಿದರೂ ಬಿಲ್ಲಿನ ಅರ್ಧ ಮೊತ್ತವೂ ಆಗಿರಲಿಲ್ಲ. ಕೊನೆಗೆ ಅವರು ತಾವು ಅಷ್ಟು ಮೊತ್ತದ ಡ್ರಿಂಕ್ಸ್ ತಗಂಡಿಲ್ಲವೆಂದು ವೈಟರ್ ನೊಂದಿಗೆ ಜಗಳ ಮಾಡತೊಡಗಿದ್ದರು. ಅವನು ಅವರ ಜತೆ ಕೂತಿದ್ದ ಹುಡುಗಿಯರು ಅಷ್ಟು ಬಿಲ್ ಮಾಡಿಹೋದರೆಂದು ಅವರಿಗೆ ದಬಾಯಿಸಿದ. ಸುಮಾರು ಆರುನೂರು ಯೂರೋಗಳಷ್ಟು ಬಿಲ್ ಅನ್ನು ಅವರು ಕಟ್ಟಬೇಕಾಗಿತ್ತು! ಅಷ್ಟರಲ್ಲಿ ಒಂದಿಬ್ಬರು ದಡಿಯರು ಬಂದು ಅವರನ್ನು ಎಳೆದುಕೊಂಡು ಹೋದರು. ಅ ಹುಡುಗರಿಬ್ಬರೂ ಜೋರಾಗಿ ಅಳುತ್ತಾ ತಮ್ಮನ್ನು ಬಿಟ್ಟು ಬಿಡುವಂತೆ ಗೋಗರೆಯತೊಡಗಿದ್ದರು.

ಇಂತಹಾ ನೈಟ್ ಕ್ಲಬ್ಬುಗಳಲ್ಲಿ ಪ್ರವಾಸಿಗರಿಗೆ ಮೋಸ ಮಾಡುವ ವ್ಯವಸ್ತಿತವಾದ ಜಾಲವೊಂದು ನಿರತವಾಗಿರುತ್ತದೆ ಎಂದು ತಿಳಿದಿದ್ದೆ. ಅವರೇ ಪ್ರವಾಸಿಗರ ಬಳಿಗೆ ಹುಡುಗಿಯರನ್ನು ಕಳಿಸಿ ಅವರಿಂದ ಹೆಚ್ಚು ವ್ಯಾಪಾರ ಮಾಡುವಂತೆ ಪ್ರೇರೇಪಿಸುತ್ತಿದ್ದರು. ಹುಡುಗಿಯರು ಆರ್ಡರ್ ಮಾಡುವಂತಹ ಡ್ರಿಂಕ್ಸ್ ಎಲ್ಲಾ ಗಿರಾಕಿಗಳಿಗೆ ಗೊತ್ತಾಗದಂತೆ ಮತ್ತೆ ಮರಳಿ ವೈಟರ್ ತೆಗೆದುಕೊಂಡು ಹೋಗುತ್ತಿದ್ದ. ಆದರೆ ಬಿಲ್ ಮಾತ್ರ ಗಿರಾಕಿಗಳು ಕಟ್ಟಬೇಕಾಗಿತ್ತು. ಹಾಗೆ ಗಿರಾಕಿಗಳಿಗೆ ಮೋಸಮಾಡಿದ ಹಣದಲ್ಲಿ ಆ ಹುಡುಗಿಯರಿಗೂ ಪಾಲು ಹೋಗುತ್ತಿತ್ತು. ಇದಾವುದರ ಪರಿವೆಯಿಲ್ಲದೆ ಸಿಕ್ಕಿದ ಟೈಮ್ ನಲ್ಲಿ ಮೈಮರೆತು ಆಟಕ್ಕಿಳಿದಿದ್ದ ಮುಂಬೈ ಹುಡುಗರು ಆ ಜಾಲದಲ್ಲಿ ಸಿಲುಕಿದ್ದರು. ಕೊನೆಗೆ ನೈಟ್ ಕ್ಲಬ್ಬಿನವರು ಆ ಹುಡುಗರು ಉಳಿದುಕೊಂಡಿದ್ದ ಹೋಟೆಲಿಗೆ ಫೋನ್ ಮಾಡಿ ಅಲ್ಲಿದ್ದ ಅವರ ಕಡೆಯವರನ್ನು ಕರೆಸಿ ಹಣ ವಸೂಲಿ ಮಾಡಿದ್ದರು.

ಹೀಗೆ ಪ್ರವಾಸಿ ಸ್ಥಳಗಳಲ್ಲಿ ಅಲ್ಲಿಯ ರೀತಿ ರಿವಾಜುಗಳ ಅರಿವಿಲ್ಲದೆ ಕೆಲವು ಭಾರತೀಯರು ಪೀಕಲಾಟಕ್ಕೆ ಸಿಲುಕಿದ ಹಲವಾರು ಘಟನೆಯನ್ನು ನಾನೇ ಕಂಡಿದ್ದೆ. ನಾವು ಕೊಚ್ಚಿಕೊಳ್ಳುವ ಸಭ್ಯತೆ, ಸಕಲ ಒಳ್ಳೆ ಗುಣಗಳು ಇಂಥ ಸಮಯದಲ್ಲಿ ಎಲ್ಲಿ ಕೊಚ್ಚಿಹೋಗಿರುತ್ತವೆ ಎಂದು ಆಶ್ಚರ್ಯವಾಗುತ್ತಿತ್ತು.

 

(ಮುಂದುವರೆಯುವುದು)

 
 

 
 
 
 
 
Copyright © 2011 Neemgrove Media
All Rights Reserved