ಕರುಣೆ ಕಣ್ಣ ತೆರೆಯೇ ಬರೆಯಲು ಬಹಳ ಕಸಿವಿಸಿಯಾಗುವ ಕಾಲಂ. ಸುತ್ತಮುತ್ತಲೂ ದಿನನಿತ್ಯ ಆಗುತ್ತಿರುವುದನ್ನು ಒಳಗೆಳೆದುಕೊಂಡಾಗ ಕರುಣೆ ಕಣ್ಣ ತೆರೆಯೇ ಎಂದು ನಮ್ಮೊಳಗಿನ ಕರುಣೆಯನ್ನು ಪ್ರಾರ್ಥಿಸಿ ನಾವು ಕಂಡ, ತಿಳಿದ ವಿಷಯಗಳ ಪರಿಹಾರಕ್ಕೆ ಅಥವಾ ತೀವ್ರತೆಯನ್ನು ತಗ್ಗಿಸುವುದಕ್ಕೆ ನಮಗಾದ ಸಹಾಯ ಮಾಡಬೇಕು ಅಥವಾ ಪುಟ್ಟ ಹೆಜ್ಜೆ ಇಡಬೇಕೆ ಹೊರತು ’ಇದು ಹೀಗಾಯಿತು’ ಎಂದು ವರದಿಯಂತೆ ಮುಂದಿಡುವುದು ನಿಜಕ್ಕೂ ಮನಸ್ಸಿಗೆ ಕಷ್ಟದ ಕೆಲಸ.

ಎಣೆಯಿಲ್ಲದೆ ಸುತ್ತಮುತ್ತ ಚೆಲ್ಲಿರುವ ಸವಾಲುಗಳನ್ನು ಹೆಕ್ಕುವಾಗ, ಯಾವುದನ್ನು ಬಿಡುವುದು ಯಾವುದನ್ನು ಮುಖ್ಯವೆಂದು ಆರಿಸುವುದು? ನನ್ನದೇ ಭೂಮಿಯ ಮತ್ತೊಂದು ಭಾಗದಲ್ಲಿ ಜನರ ಜೀವ ಚಂಡಾಡುತ್ತಿರುವ ಬರ ಮುಖ್ಯವಾಗಬೇಕೋ? ಪ್ರವಾಹದಿಂದ ಕೃಷಿ ಭೂಮಿಯೆಲ್ಲವೂ ಮುಳುಗಿ ಮುಂದಿನ ವರ್ಷ ವಿಶ್ವದ ಹಸಿವನ್ನು ತಣಿಸಲು ಬೇಕಾಗುವ ಲಕ್ಷಾಂತರ ಟನ್ ಆಹಾರವನ್ನು ಪೂರೈಸಲಾಗದ ಸ್ಥಿತಿ ಯುಂಟಾಗಿರುವ ತುರ್ತುಪರಿಸ್ಥಿತಿ ಮುಖ್ಯವಾಗಬೇಕೋ? ಅಥವಾ ನನ್ನದೇ ನಾಡಿನಲ್ಲಿ ಮೇಲ್ಜಾತಿಯವರ ಎಂಜಲಿನ ಮೇಲೆ ಹೊರಳಾಡಿ ತಮ್ಮ ಪಾಪಗಳನ್ನು ಕಳೆದುಕೊಳ್ಳುವ ಅಥವಾ ಹರಕೆಗಳನ್ನು ತೀರಿಸಿಕೊಳ್ಳುವ ಹುಚ್ಚಾಟಕ್ಕೆ ಇಳಿಯುವ ಮುಠ್ಠಾಳರು ಮುಖ್ಯವಾಗಬೇಕೋ?
’ಕರುಣೆ’ ಜನಪರವಾಗಿರಬೇಕು ಅದರಲ್ಲಿ ಹ್ಯೂಮನ್ ಇಂಟರೆಸ್ಟ್ ವಿಷಯಗಳು ಇರಬೇಕು ಎಂದು ಮಿತ್ರರು ಪ್ರೀತಿಯಿಂದ ಸಲಹೆ ಕೊಟ್ಟಿದ್ದಾರೆ. ಹೇಗೆ ಸಾಧ್ಯ? ಈ ದ್ವಂದ್ವ. ೪-೫ ದಶಕಗಳ ಹಿಂದೆ ’ಮಾನವೀಯ’ವಾಗಿರುವುದು ಪವಿತ್ರವಾಗಿತ್ತು, ಅತ್ಯಂತ ಮುಖ್ಯವೆನಿಸಿತ್ತು. ಈಗ ಬರೀ ’ಮಾನವೀಯತೆ’ ಕೂಡಾ ಅತ್ಯಂತ ಕ್ರೂರ! ಎಷ್ಟೆಂದು ಮಾನವ ಕೇಂದ್ರೀಕೃತರಾಗಬೇಕು? ಯಾವ ಘನಕಾರ್ಯಕ್ಕೆ? ಉಸಿರಾಡುವ ಗಾಳಿ, ಕುಡಿವ ನೀರು, ಸಲಹುವ ನೆಲ, ಜೊತೆಯಲ್ಲಿ ತಮ್ಮಷ್ಟಕ್ಕೆ ಬಾಳುತ್ತಿದ್ದ ಜೀವಸಂಕುಲವನ್ನೆಲ್ಲಾ ಕೆಡಿಸಿ ಗಬ್ಬೆಬ್ಬಿಸಿ ನುಂಗಿ, ಇರುವುದೆಲ್ಲಾ ನನಗೇ ಎಂಬಂತೆ, ಸರ್ವ ಸಮತೋಲನವನ್ನೂ ಕೆಡಿಸಿಕೊಂಡು ತನ್ನನ್ನೂ ಸೇರಿದಂತೆ ಸಮಸ್ತವನ್ನೂ ಒಳಗಿನಿಂದಲೇ ಕವರಿಕೊಂಡು ತಿನ್ನುತ್ತಿರುವ ಮನುಷ್ಯನಿಗೆ ಮಾತ್ರ ಕರುಣೆ ಬೇಕೇ? ಈಗ ನಮಗೆ ಬೇಕಿರುವುದು ಜೀವೀಯತೆ ಮತ್ತು ಜೀವ ಸೌಹಾರ್ದತೆಯಲ್ಲವೇ?
ಹಾಗಂತ ಸಾಯುವವರು ಸಾಯಲಿ ಬಿಡು ಎಂದು ಬಿಟ್ಟು ಬಿಡಲಾಗುತ್ತದೆಯೇ? ನಾವು ಇವತ್ತು ಈ ಸ್ಥಿತಿಗಿಳಿದಿರುವುದರ ಕಾರಣವನ್ನು ಹುಡುಕಿಕೊಳ್ಳುತ್ತಾ ಹೊರಟು, ಎಲ್ಲೋ ಒಂದು ಚೂರು ಅರಿವಾಗಿ, ನಮ್ಮ ಬದುಕುಗಳಲ್ಲಿ ಪುಟ್ಟ ಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರೆ ನಮ್ಮ ಕೂಸುಗಳು ಸ್ವಲ್ಪ ನೆಮ್ಮದಿಯ ಬದುಕು ಬದುಕಬಹುದಲ್ಲವೇ?
ಕರುಣೆಯನ್ನು ಕಂಡುಕೊಳ್ಳುತ್ತಾ ಹೋಗುವಾಗ ಇದೊಂದು ಸಲಹೆ ಸಿಕ್ಕಿದೆ. ರಾಂಡಮ್ ಆಕ್ಟ್ ಆಫ್ ಕೈಂಡ್ನೆಸ್ಸ್! ನಮಗೆ ಗುರುತು ಪರಿಚಯವಿಲ್ಲದ ಯಾರೋ ಒಬ್ಬ ಅರ್ಹರಿಗೆ ಅಥವಾ ಯಾವುದೋ ಒಂದು ಜೀವಿಗೆ ಒಂದು ಕೈಂಡ್ ಅಥವಾ ಪ್ರೀತಿಯ ಪುಟ್ಟ ಸಹಾಯ ಮಾಡುವುದು. ವಾರಕ್ಕೊಂದರಂತೆ ಶುರು ಮಾಡುವುದು. ನಂತರ ಸ್ವಲ್ಪ ಹೆಚ್ಚಿಸಿಕೊಳ್ಳುವುದು...ರೂಢಿಸಿಕೊಳ್ಳುತ್ತಿದ್ದೇವೆ. ಬರೆಯುವುದಕ್ಕಿಂತ ಹಿತವೆನಿಸುತ್ತಿದೆ. ಪ್ರೀತಿ ಬೆಳೆಯುತ್ತಿದೆ ಎನ್ನಿಸುತ್ತಿದೆ. ಬಹುಷಃ ನಮ್ಮೊಳಗೆ ಸದಾ ಇದ್ದುಕೊಂಡು ನಮ್ಮ ಬದುಕುವ ಧಾವಂತದಲ್ಲಿ ಇತ್ತೀಚೆಗೆ ಮೂಲೆಗೆಲ್ಲೋ ಸೇರಿರುವ ಕರುಣೆಯನ್ನು ನಿಧಾನಕ್ಕಾದರೂ ಕಣ್ಣು ತೆರೆಸುವ ಸರಳ ಬಗೆ ಇದೇ ಏನೋ...