ಅಂಗಳ      ಪಂಚವಟಿ
Print this pageAdd to Favorite
 
 
 

(ಪುಟ )
(ಪುಟ ೧೦)
(ಪುಟ ೧೧)
 (ಪುಟ ೧)  
(ಪುಟ ೧೪)   
(ಪುಟ ೧೫) 
(ಪುಟ ೧೬) 
(ಪುಟ ೧) 
(ಪುಟ ೧)

 (ಪುಟ ೨೨) ಲಾಂಗ್ ಡಿಸ್ಟೆನ್ಸ್ ನಿಂದ ಬ್ರೇಕ್: ಉರಿಯುವ ಅಂಡಿಗೆ ನೀರು ಹಾಕೋದು ಬಿಟ್ಟು ಅಂಡು ಕಾಸು ಅಂತೀರಾ?!
ಬೇಲಾ ಮರವ೦ತೆ

ಈ ಬಾರಿ ಲಾಂಗ್ ಡಿಸ್ಟೆನ್ಸ್ ಗಳ ಉಸಾಬರಿಗೆ ಹೋಗುವುದಿಲ್ಲ. ಹೇಳುವುದು ಸಾಕಷ್ಟಿದೆ. ಇದು ಇಷ್ಟೇ ಎಂದು ನಿರ್ಧರಿಸುವ ಉದ್ದೇಶ ಇಲ್ಲ. ತೆರೆದುಕೊಳ್ಳುವ ಇಚ್ಚೆ ಅಷ್ಟೇ. ಅದರಿಂದ ಒಂದು ಬ್ರೇಕ್ ಇರಲಿ ಬಿಡಿ.

ಈ ಸ್ಪ್ರಿಂಗ್ ನಲ್ಲಿ ಕಿರಣ ಗ್ರಾಜುಯೇಟ್ ಆದರು. ಸ್ಯಾಂಡಿಯಾಗೋ ಯೂನಿವರ್ಸಿಟಿಯಿಂದ. ಆಗ ನಮ್ಮನೆಗೆ ಬಂದು ಎರಡು ವಾರ ತಂಗಿ ಉಳಿದು ತಮ್ಮ ಪೂರಾ ಪ್ರೀತಿ ಸುರಿಸಿ ಹೋದ ಚಂದ್ರಣ್ಣ ಅಂಕಲ್ ಬಗ್ಗೆ ಸ್ವಲ್ಪ ಹೇಳಬೇಕು. ಅವರು ಬಂದು ಹೋದಮೇಲಿನಿಂದ ಅತ್ತೆ ಮಾವ-ಅಪ್ಪ ಅಮ್ಮನನ್ನು ಇಲ್ಲಿಗೆ ಕರೆಸಿಕೊಳ್ಳಬೇಕೆಂಬ ಆಸೆ ಹೆಚ್ಚಾಗಿ ಹೋಗಿದೆ.
ಕಿರಣ ಯಾರಂತೀರಾ? ಆತ ಪ್ರಶಾಂತನ ಕ್ಲೋಸಾತಿ ಕ್ಲೋಸ್ ಫ್ರೆಂಡ್. ಪ್ರಶಾಂತನ ಚಡ್ಡಿ ದೋಸ್ತ್! ಇಲ್ಲಿಂದ ದುಡ್ಡು ಸುರಿದುಕೊಂಡು ನಮ್ಮ ಮದುವೆಗೂ ಬಂದಿದ್ದರು. ಆದಾಗ ಎರಡು ಮೂರು ತಿಂಗಳಿಗೊಮ್ಮೆ ಒಂದು ದಿನಕ್ಕೆ ನಮ್ಮನೆಗೆ ಬಂದು ಹೋಗುತ್ತಿದ್ದರು. ನಾವೂ ಒಂದೆರಡು ಬಾರಿ ಅವರಲ್ಲಿಗೆ ಹೋಗಿದ್ದೆವು. ಕಿರಣ ಸ್ಯಾಂಡಿಯಾಗೋ ಯೂನಿವರ್ಸಿಟಿಯ ಡಾರ್ಮ್ ನಲ್ಲಿ ಒಂದು ಸಣ್ಣ ಒನ್ ಬೆಡ್ರೂಂ ಥರದ ಮನೆಯಲ್ಲಿ ಇದ್ದರು. ಓದಿನ ಜೊತೆಯಲ್ಲೇ ಎರಡು ಸಣ್ಣ ಕೆಲಸ ಮಾಡುತ್ತಿದ್ದುದರಿಂದ ಯಾವಾಗಲೂ ಬಿಡುವಿಲ್ಲದ ವ್ಯಕ್ತಿ. ಬಹಳ ಪಾಪದ ಹುಡುಗ. ’ಇಲ್ಲಿ ಸುಮ್ಮನೆ ಕೂತ್ಕೊಂಡು ಯಾಕೆ ತಲೆ ಹಾಳು ಮಾಡಿಕೋತೀರಿ ಅತ್ತಿಗೇ...ಯಾವುದಾದರೂ ಕೋರ್ಸಿಗೆ ಸೇರ್ಕೊಳಿ’ ಎಂದು ಪ್ರೋತ್ಸಾಹಿಸಿದವರು.
 
ಕೆಲವು ತಿಂಗಳ ಹಿಂದೆ ಕಿರಣಂಗೆ ಪಿ ಎಚ್ ಡಿ ಪದವಿ ಸಿಕ್ಕಿತು. ಗ್ರಾಜುಯೇಶನ್ನಿಗೆ ಅಪ್ಪನನ್ನು ಕರೆಸಿಕೊಳ್ಳಲೇಬೇಕು ಎಂದು ಊರು ಬಿಡಲು ಸುತರಾಂ ಒಪ್ಪದ ಅಪ್ಪನನ್ನು ವೀಸಾ ಮಾಡಿಸಿಕೊಳ್ಳಲು ಜಗಳವಾಡಿ ಕಳಿಸಿಕೊಟ್ಟಿದ್ದರು. ಅಮ್ಮನನ್ನು ಕಳೆದುಕೊಂಡಿದ್ದರಿಂದ ತನ್ನ ಗ್ರಾಜುಯೇಷನ್ ನೋಡಲು ಅವರಾದರೂ ಇರಲೇಬೇಕು ಎಂದು ಕಿರಣ್ ಹಠ. ಕಿರಣ್ ರ ಅಪ್ಪ ನಗರವಾಸಿಯಾಗಿ ದಶಕಗಳೇ ಕಳೆದಿದ್ದರೂ ಇನ್ನೂ ಗ್ರಾಮಸ್ತನ ಮುಗ್ಧತೆಯಿರುವ ವ್ಯಕ್ತಿ. ಅವರಿಗೆ ಕಿರಣ್ ಒಬ್ಬನೇ ಮಗ.
 
ಸ್ನೇಹಿತನ ಗ್ರಾಜುಯೇಶನ್ನಿಗೆ ಹೋಗದಿದ್ರೆ ಅಗುತ್ತಾ? ನಾವೆಲ್ಲರೂ ಸಡಗರದಿಂದ ತಯಾರಾದೆವು. ಚಂದ್ರಣ್ಣ ಅಂಕಲ್ ಹಿಂದಿನ ದಿನ ನೇರವಾಗಿ ಸ್ಯಾಂಡಿಯಾಗೋ ಗೇ ಬಂದಿಳಿಯಲಿದ್ದರು. ಯಾವ ಟರ್ಮಿನಲ್ ನಲ್ಲಿ ಇಳಿದು ಎಲ್ಲಿ ಹತ್ತಬೇಕೆಂಬ ಕನ್ಫ್ಯೂಷನ್ ಆಗಬಾರದೆಂದು ಕಿರಣ್ ಏರ್ ಲೈನ್ಸ್ ನವರಿಂದ ಚಂದ್ರಣ್ಣ ಅಂಕಲ್ ಅವರಿಗೆ ವ್ಹೀಲ್ ಚೇರ್ ಸಹಾಯವನ್ನು ಕೇಳಿಕೊಂಡಿದ್ದರು. ಗ್ರಾಜುಯೇಶನ್ನಾದಮೇಲೆ ಮೂರು ದಿನ ಅಲ್ಲಿದ್ದು ನಂತರ ಎಲ್ಲರೂ ನಮ್ಮ ಮನೆಗೆ ಬರುವ ಪ್ಲಾನ್. ಅವರಿಗೆ ಅಮೆರಿಕಾ ತೊರಿಸುವ ಓಡಾಟದಲ್ಲಿ ನಮ್ಮನೆ ಸೆಂಟರ್ ಆಗಿತ್ತು. ಅಪರೂಪಕ್ಕೆ ನಮ್ಮನೆಗೆ ಬರಲಿದ್ದ ಅತಿಥಿಯನ್ನು ಸತ್ಕರಿಸಲು ನಾವು ಸಡಗರದಿಂದ ತಯಾರಾಗಿದ್ವಿ.
 
ಪ್ರಶಾಂತನಿಗೆ ಚಂದ್ರಣ್ಣ ಅಂಕಲ್ ಅಂದರೆ ತುಂಬಾ ಇಷ್ಟ. ಪ್ರಶಾಂತನ ಮನೆಯಲ್ಲಿ ಎಲ್ಲರೂ ಯಾವಗಲೂ ಒಂಥರಾ ಸೀರಿಯಸ್ಸಾಗೇ ಇರುತ್ತಿದ್ದರು. ನಕ್ಕರೂ ಆ ನಿಮಿಷಕ್ಕೆ ಮಾತ್ರ. ಅಣ್ಣ ತಮ್ಮಂದಿರೂ ಒಬ್ಬರನ್ನೊಬ್ಬರು ತಮಾಷಿ ಮಾಡಿಕೊಳ್ಳುವುದು ಅಪರೂಪ. ಒಂದು ವಾಕ್ಯ ಮಾತಾಡಿದ ಮೇಲೆ ’ಮತ್ತೆ, ಮತ್ತೆ, ಮತ್ತೆ’ ಅಂತಲೇ ಮತ್ತೆಗಳಲ್ಲೇ ಸ್ಟಕ್ ಆಗಿಬಿಡುತ್ತಿದ್ದರು. ಅದಕ್ಕೇ ಏನೋ ಪ್ರಶಾಂತ ’ನಾನು ಲೈಫ್ ನಲ್ಲಿ ನಗೋದನ್ನ ಕಲಿತದ್ದೇ ಚಂದ್ರಣ್ಣ ಅಂಕಲ್ ನೋಡಿ’ ಎನ್ನುತಿದ್ದ. ಕಿರಣನೂ ಅವರು ಬರುವ ಮುಂಚೆಯೇ ’ಪ್ಲೀಸ್ ಅವರು ಮಾತಾಡುವ ಸ್ಟೈಲ್ ಗೆ ಹೆದರಿಕೊಂಡು ಬಿಡಬೇಡಿ ಅತ್ತಿಗೇ...ಒರಟಾಗಿ ಕೇಳಿಸುತ್ತಾರೆ ಆದ್ರೆ ತುಂಬಾ ಸಾಫ್ಟ್...’ ಅಂತೆಲ್ಲಾ ಹೇಳಿದ್ದರು. ನಮ್ಮ ಮದುವೆ ಆದಾಗ ಅವರು ಊರಿಗೆ ಹೋಗಿದ್ದರಾದ್ದರಿಂದ ನಾನು ಅವರನ್ನು ನೋಡಿರಲಿಲ್ಲ. ಪ್ರಶಾಂತ್ ಹೇಳಿದ್ದು ಕಿರಣ ಹೇಳಿದ್ದು ಎಲ್ಲಾ ಕನ್ಫ್ಯೂಸ್ ಆಗಿ ನನಗೆ ಚಂದ್ರಣ್ಣ ಅಂಕಲ್ ರನ್ನು ಅರ್ಜೆಂಟಾಗಿ ನೋಡುವ ಕುತೂಹಲ.
 
ಚಂದ್ರಣ್ಣ ಅಂಕಲ್ ಅವತ್ತು ವಿಮಾನ ಇಳಿದವರೇ ’ಅದ್ಯಾವ ಸುಖಕ್ಕೆ ಇಲ್ಲಿಗೆ ಕರೆಸಿಕಂಡ್ಯಪ್ಪಾ ಮಗನೇ’ ಅಂತ ಬೇಜಾರು ಮಾಡಿಕೊಂಡೇ ಬಂದರು. ಅವರಿಗೆ ಅಷ್ಟು ಹೊತ್ತು ಕೂತುಕೊಂಡು ಬಂದದ್ದಲ್ಲದೇ ಏರ್ ಪೋರ್ಟು ಗಳಲ್ಲಿ ಆ ಕಡೆ ಈ ಕಡೆ ತಿರುಗಾಡಲೂ ಬಿಡದಂತೆ ವ್ಹೀಲ್ ಚೇರಿನಲ್ಲಿ ಕೂರಿಸೇ ಅಮೆರಿಕಾ ತಲುಪಿಸಲಾಗಿತ್ತು. ಅರವತ್ತೈದಾಗಿದ್ದರೂ ನಿಶ್ಯಕ್ತರೇನಲ್ಲದ ಅವರಿಗೆ ವ್ಹೀಲ್ ಚೇರ್ ಇರಿಸುಮುರಿಸು. ಬಂದವರೇ ’ ಓಹೋ ಎಲ್ಲಾ ಮರಿಗಳೂ ಇಲ್ಲೇ ಇದವಲ್ಲಪ್ಪಾ...’ ಅಂತ ಎಲ್ಲರನ್ನು ಆಲಂಗಿಸಿ ನೇವರಿಸಿದ್ದರು. ದಪ್ಪ ಅಲ್ಲದಿದ್ದರೂ ದೊಡ್ಡ ಆಳು. ವಯಸ್ಸು ಆವರಿಸುತ್ತಿದ್ದರೂ ಪ್ರಸನ್ನ ಮುಖ. ಊಟ ಮಾಡಿದ್ರಾ ಅಂಕಲ್ ಅಂದಿದ್ದಕ್ಕೆ..’ಅದೇನೇನೋ ಕೊಟ್ರು ಮಗಳೇ. ಯಾವ್ದಕ್ಕೆ ಯಾವ್ಧಾಕಿಕಂಡ್ರೆ ಸರಿ ಅಂತ ಗೊತ್ತಾಗ್ದೆ ಎಲ್ಲನೂ ತಿಂದೆ. ಹೊಟ್ಟೆ ಮಾತ್ರ ಕಲ್ಲಂಗಾಗಿದೆ’ ಎಂದಿದ್ದರು. ಕಿರಣನ ಡಾರ್ಮ್ನಲ್ಲಿ ರಾತ್ರಿ ಅವರಿಗೆ ಸರ್ ಪ್ರೈಸ್ ಪಾರ್ಟಿ ಇಟ್ಟುಕೊಂಡಿದ್ದರಿಂದ ಅವರನ್ನು ನಾವು ಉಳಿದುಕೊಂಡಿದ್ದ ಹೊಟೇಲಿಗೆ ಕರೆದುಕೊಂಡು ಹೋದೆವು.
 
ಬಂದವರೇ ಸ್ವಚ್ಚವಾಗಿ ತಮ್ಮ ಪಂಚೆ ಏರಿಸಿಕೊಂಡು ಪವಡಿಸಲು ತಯಾರಾಗಿದ್ದ ಅವರನ್ನು ಕಿರಣ ’ಹೊರಗಡೆ ಹೋಗಣ ಪ್ಯಾಂಟ್ ಹಾಕಿಕೊಳಪ್ಪ...ಇಲ್ಲದಿದ್ರೆ ಜೆಟ್ ಲ್ಯಾಗ್ ಆಗುತ್ತೆ' ಅಂತ ಪರಿಪರಿಯಾಗಿ ಗದರಿಸುತ್ತಿದ್ದರು. ಉಹೂಂ ಪಾರ್ಟಿ ಜಗ್ಗುವ ಹಾಗೆ ಕಾಣಲಿಲ್ಲ. ’ಇಲ್ಲ ಮಗನೇ ನಾನಂತೂ ಈಗ ಎಲ್ಲೂ ಬರಲ್ಲ...ನೀವು ಹೋಗಿಬನ್ನಿ...ನಾನು ಇವತ್ತು ನಿದ್ದೆ ಮಾಡಿ ನಾಳೆಗೆ ಫ್ರೆಶ್ ಆಗ್ತಿನಿ’ ಎಂದುಬಿಟ್ಟರು. ಚಿಕ್ಕವರಾದರೆ ಬೈದು ಹೇಳಬಹುದು ಆದರೆ ದೊಡ್ದವರು ಭಾಳಾ ಕಷ್ಟ. ಇನ್ನು ಅವರನ್ನು ಕರೆದು ಪ್ರಯೋಜನವಿಲ್ಲ ಎನಿಸಿ ’ರಾತ್ರಿ ಏನು ಊಟ ಮಾಡಬೇಕು ಅನಿಸಿದೆಯಪ್ಪಾ?’ ಅಂದರೆ ’ಏನೂ ಬೇಡ. ಸಿಂಪಲ್ಲಾಗಿ ಒಂದು ಉಪ್ಸಾರು, ಪಲ್ಯ ಮಾಡಿಬಿಡು’ ಎಂದಾಗ ನಾವು ಕಕ್ಕಾಬಿಕ್ಕಿ!
 
’ನಮ್ಮಪ್ಪ ಉಪ್ಸಾರು ಊಟ ಮಾಡುವುದು ಅಂದರೆ ಅದನ್ನು ಬಿಟ್ಟು ಏನನ್ನೂ ಮಾಡಲ್ಲ ಅತ್ತಿಗೇ ಈಗೇನು ಮಾಡೋದು’ ಅಂತ ಕಿರಣ ಬೇಜಾರು ಮಾಡಿಕೊಂಡಾಗ, ಅವರಿಗೆ ನಾಳೆಯ ದಿನಕ್ಕಿದ್ದ ತಯಾರಿ ಮಾಡಿಕೊಳ್ಳಲು ಕಳಿಸಿ ಪ್ರಶಾಂತ ನಾನು ಸ್ಯಾಂಡಿಯಾಗೋನಲ್ಲಿ ಸೊಪ್ಪು ಮತ್ತು ಉಪ್ಪುಸಾರು ಮಾಡಲು ಬೇಕಾಗುವ ಕಾಂಬಿನೇಶನ್ ಹುಡುಕಿಕೊಂಡು ಸುತ್ತಿದ್ದೆವು. ಕಡೆಗೂ ಏನೋ ಒಂದು ಬಗೆ ಬೇಯಿಸಿ, ಖಾರ ಮಾಡಿಟ್ಟು ಸಂಜೆ ಅವರನ್ನು ’ವೆಲ್ಕಂ’ ಅಂತ ಅಲಂಕರಿಸಿದ ಡಾರ್ಮ್ ಗೆ ಕರೆದುಕೊಂಡು ಬಂದಾಗ ’ಏನ್ರಿಲಾ ಇದು ನಿಮ್ದು ಆಟ...’ ಅಂತ ಭಾವುಕರಾಗಿದ್ದರು. ನಮಗಾಗಿ ಪೇಡ, ಲಾಡು, ಚಂಪಾಕಲಿ, ಚಕ್ಕುಲಿ-ಕೋಡುಬಳೆ, ಕಾಂಗ್ರೆಸ್ ಕಡಲೆಕಾಯಿ ಬೀಜ, ಸೀರೆ, ಜುಬ್ಬಾ ಇಡೀ ಮಾರ್ಕೆಟ್ ಹಿಡಿದುಕೊಂಡು ಬಂದಿದ್ದರು. ಗ್ರಾಜುಯೇಶನ್ ಗಿಫ್ಟಾಗಿ ಕಿರಣನಿಗೆ ತಮ್ಮ ವಿಲ್ ತಂದುಕೊಟ್ಟು ಅಪ್ಪ ಮಗ ಡಾರ್ಮ್ ನಲ್ಲಿ ಕೂತು ಒಬ್ಬರನ್ನೊಬ್ಬರು ಬೈದುಕೊಂಡು ಗೋಳಾಡಿದ್ದರು.
 
ಚಂದ್ರಣ್ಣ ಅಂಕಲ್ ಬಹಳ ಸ್ನೇಹಮಯಿ. ಅವರಿಗೆ ಒಳ್ಳೆಯ ಹಾಸ್ಯ ಪ್ರಜ್ನೆಯಿತ್ತು. ಅವರ ಗ್ರಾಮ್ಯ ಭಾಷೆಯಲ್ಲಿ ಅನ್ನಿಸಿದ್ದನ್ನು ಢಮಾರ್ ಅಂತ ಹೇಳಿಬಿಟ್ಟಾಗ ನಾವೆಲ್ಲರೂ ಢಂ ಅಂತ ಒಡೆದು ಹೋಗುವಷ್ಟು ನಗಾಡುತ್ತಿದ್ದೆವು. ಬಂದ ಮರುದಿನ ಗ್ರಾಜುಯೇಶನ್ ಹಾಲಿನಲ್ಲಿ ಕೂತಾಗ ’ಅವ್ಳು ಇವತ್ತು ಇಲ್ಲಿದ್ದಿದ್ರೇ ಮಗಳೇ’ ಅಂತ ಅತ್ತುಬಿಟ್ಟಿದ್ದರು. ಗ್ರಾಜುಯೇಶನ್ ಮುಗಿದ ಮೇಲೆ ಕಿರಣನ ಬಿಳಿ ಕ್ಲಾಸ್ಮೇಟೊಬ್ಬಳು ಅವನಿಗೆ ಹಗ್ ಕೊಟ್ಟು ಹೋದಾಗ ’ಇವಳೇನೇನಪ್ಪಾ ನನ್ನ ಸೊಸೆ?’ ಅಂತೆಲ್ಲಾ ರೇಗಿಸಿ ಅವರನ್ನು ಕೆಂಪು ಮಾಡಿದ್ದರು.
 
ಸ್ಯಾಂಡಿಯಾಗೋ ಸುತ್ತಿ, ಅವರಿಗೇ ಜ಼ೂ, ಬಾಲ್ಬೋವಾ, ಲೆಗೋ ಲ್ಯಾಂಡಿನಿಂದ ಇರುವುದೆಲ್ಲವನ್ನೂ ತೋರಿಸಿ ನಮ್ಮೂರಿಗೆ ಕರೆದುಕೊಂಡು ಹೊರಟಿದ್ದೆವು. ದಾರಿಯಲ್ಲಿ ಅವರಿಗೆ ಬಫೆಲೋ ವಿಂಗ್ಸ್ ಇಷ್ಟವಾಗಬಹುದೆಂದು ಕಿರಣ ಪ್ರಶಾಂತ ಎರಡು ಮೂರು ಫ್ಲೇವರಿನ ಬಫೆಲೋ ವಿಂಗ್ಸ್ ಕಟ್ಟಿಸಿಕೊಂಡು ಬಂದರು. ಒಂದು ರೆಸ್ಟ್ ಏರಿಯಾದಲ್ಲಿ ಕೂತು ವಿಂಗ್ಸಿನ ವರ್ಣನೆ ಮಾಡಿ, ಇದು ಎಮ್ಮೆಯದ್ದಲ್ಲ ಕೋಳಿಯದ್ದೇ...ಆದರೆ ಹೆಸರು ಮಾತ್ರ ಹಾಗೆ ಎಂದು ವಿವರಿಸಿ ಅವರಿಗೆ ಕೊಟ್ಟೆವು. ಬಾಯಿಗಿಟ್ಟು ನಮ್ಮ ಮುಖ ನೋಡಿದ ಮನುಷ್ಯ ಹೆಚ್ಚು ಮಾತಾಡದೆ ೨-೩ ವಿಂಗ್ಸ್ ತಿಂದರು. ’ಹೆಂಗಿದೆಯಪ್ಪಾ’ ಕಿರಣ ೨-೩ ಸಾರಿ ಕೇಳಿದ್ದರು. ’ಏ ಚನ್ನಾಗಿದೆ ಕಣ್ರಪ್ಪಾ..ಆದ್ರೆ ನನ್ಗೆ ಜಾಸ್ತಿ ಅರಗಿಸಿಕೊಳ್ಳಕಾಗಲ್ಲ...’ ಎಂದು ಸುಮ್ಮನಾಗಿದ್ದರು. ಎರಡು ಮೂರು ದಿನ ಸುತ್ತಾಡಿ ದಣಿವಾಗಿರಬಹುದೆಂದು ನಾವು ಹೆಚ್ಚು ಪೀಡಿಸಲಿಲ್ಲ.
 
ವಿಂಗ್ಸ್ ತಿಂದು ೧೫-೨೦ ನಿಮಿಷ ಆಗಿತ್ತು. ’ಇಲ್ಲೆಲ್ಲಾರೂ ರಸ್ತೆ ಬದಿ ಒಂಚೂರು ನಿಲ್ಲಿಸ್ರಪ್ಪಾ’ ಅಂಕಲ್ ತಡೆದರು. ’ತಡಿಯಪ್ಪಾ ಹಂಗೆಲ್ಲಾ ಏನೇನಕ್ಕೋ ಎಲ್ಲೆಲ್ಲೋ ನಿಲ್ಲಿಸಕೆ ಆಗಲ್ಲ...ಇನ್ನೊಂದು ಹತ್ತು ಮೈಲಿ ದೂರದಲ್ಲಿ ರೆಸ್ಟ್ ಏರಿಯಾ ಇದೆ ಅಲ್ಲಿ ನಿಲ್ಲಿಸ್ತೀನಿ, ಇರಪ್ಪಾ...’ ಕಿರಣ ಅಂದಿದ್ದಕ್ಕೆ ’ಜಾಸ್ತಿ ಟೈಮ್ ಬೇಡ ಕಣೋ ಒಂದೆರಡು ನಿಮಿಷ ನಿಲ್ಲಿಸು’ ಅಂತ ಒತ್ತಾಯ ಮಾಡಿದ್ದರು. ಅವರು ದೊಡ್ಡವರಾದ್ದರಿಂದ ಇಲ್ಲಿನ ನಿಯಮಗಳನ್ನು ತಿಳಿಸಬಹುದಿತ್ತೇ ಹೊರತು ಪಾಲಿಸುವಂತೆ ಒತ್ತಾಯ ಪಡಿಸುವಂತಿರಲಿಲ್ಲ. ಇದು ಅಂಕಲ್ ಕಥೆಯಲ್ಲ. ಎಲ್ಲ ಹಿರಿಯರ ಕಥೆ. ನಾವು ಎರಡು ಮೂರು ಸಾರಿ ಹೇಳಿದರೆ ಸೆಡ್ಡೇ ಹೊಡೆದುಬಿಡುತ್ತಾರೆ!
 
ಕಡೆಗೂ ರೆಸ್ಟ್ ಏರಿಯಾ ಹುಡುಕಿ ನಿಲ್ಲಿಸಿದಾಗ ಅಂಕಲ್ ತಿಂದಿದ್ದ ವಿಂಗ್ಸ್ ಎಲ್ಲವನ್ನೂ ಹೊರಗೆ ಹಾಕಿದ್ದರು. ’ಥೂ ಅದೇನು ಹಾಳುಮೂಳು ತಿಂತೀರೋ?! ಒಳಗೇ ಇಳಿಯಲ್ಲ ಅನ್ನುತ್ತೆ ಅದು. ಉಪ್ಪಿಲ್ಲ ಖಾರವಿಲ್ಲ...ನೀವೇನಾದ್ರೂ ಮಾಡಿ. ಆದ್ರೆ ತಿನ್ನುವುದನ್ನೆಲ್ಲಾ ಈ ಮುದುಕನ ಮೇಲೆ ಪ್ರಯೋಗ ಮಾಡಬೇಡ್ರಪ್ಪಾ...ನನಗೆ ಉಪ್ಸಾರು ಖಾರ, ಬಸ್ಸಾರು ಅಥವಾ ಒಂದು ಪಲ್ಯ ಇದ್ದರೆ ಸಾಕು..ನೀವೇನಾದ್ರೂ ತಿಂದ್ಕೊಳಿ’ ಎಂದುಬಿಟ್ಟಿದ್ದರು. ಈಗ ಉಪ್ಸಾರು ಬಸ್ಸಾರು ಕಟ್ಟಿಕೊಂಡು ಇವರನ್ನು ಹೇಗೆ ಅಮೆರಿಕಾ ಸುತ್ತಿಸುವುದಪ್ಪಾ ಅಂತ ನಮಗೆ ಯೋಚನೆ ಶುರುವಾಗಿತ್ತು. ಅವತ್ತಿಂದ ಅಂಕಲ್ ಕೂಡಾ ಅತ್ಯಂತ ನಿಯಮಿತ ಊಟಕ್ಕಿಳಿದುಬಿಟ್ಟಿದ್ದರು. ಹಣ್ಣು, ಹಸಿ ತರಕಾರಿ, ಹಾಲು, ಪಲ್ಯ, ಚಪಾತಿ-ಸಾರುಗಳನ್ನು ಬಿಟ್ಟರೆ ಬೇರೆ ಏನನ್ನೂ ತಿನ್ನುತ್ತಿರಲಿಲ್ಲ. ಸೀರಿಯಲ್ ತೋರಿಸಿದಾಗ ಅವರ ಮುಖ ನೋಡಬೇಕಿತ್ತು!
 
ಸೀರಿಯಲ್ ಗಳಲ್ಲಿ ಏನೇನೆಲ್ಲಾ ಇರುತ್ತೆ, ಅದನ್ನು ಯಾವುದರಿಂದ ಹೇಗೆ ಮಾಡಿರುತ್ತಾರೆ ಅಂತ ಕಿರಣ ವಿವರಣೆ ಕೊಟ್ಟಾಗ ’ಗೊತ್ತಾಯ್ತು ಬಿಡಪ್ಪ...ನೀವು ಖುಷಿಯಾಗಿ ತಿನ್ನಿ. ನನಗೆ ಮಾತ್ರ ಕೊಡಬೇಡಿ..ಈಗ ನಮ್ ಕಡೆ ಬೂಸಾ ಮಾಡಿದಂಗೆ ತಾನೇ?’ ಅಂತಂದು ನಮಗೂ ಸೀರಿಯಲ್ ನೋಡಿದಾಗ ಅದೇ ಅನುಮಾನ ಬರುವಂತೆ ಮಾಡಿದ್ದರು.
 
ಅವರನ್ನು ಊಟದ ಮಾಡಿಕೊಂಡೇ ವೆಸ್ಟ್ ಕೋಸ್ಟಿನ ಎಲ್ಲಾ ಪ್ರಮುಖ ಊರುಗಳನ್ನೂ ಸುತ್ತಿಸಿದ್ದೆವು. ಅವರು ಆರಾಮಕ್ಕೆ ಖುಷಿಯಿಂದ ಸುತ್ತಾಡಿದ್ದರು. ಇಲ್ಲಿನ ಶಿಸ್ತು ಪಾಲನೆ, ಜನರ ದುಡಿಮೆ ಬಗ್ಗೆ ಮೆಚ್ಚುಗೆ ಪಟ್ಟಿದ್ದರು. ಅಮೆರಿಕಾದ ಸೇತುವೆ, ಬೃಹತ್ ಕಟ್ಟಡ, ಮ್ಯೂಸಿಯಂ, ಲೈಬ್ರರಿಗಳನ್ನು ಬೆರಗಾಗಿ ನೋಡಿದ್ದರು. ನಮ್ಮಲ್ಲಿ ಎಷ್ಟೆಲ್ಲಾ ಇದ್ದರೂ ಅತಿಯಾದ ಜನರಿರುವುದರಿಂದ ನಮ್ಮಲ್ಲಿ ಅರಜಕತೆ ಜಾಸ್ತಿ...ನಮ್ಮವರಿಗೆ ಬುಧ್ಧಿಬರುವುದು ಕಷ್ಟ ಬಿಡ್ರೋ’ ಎಂನ್ನುತ್ತಿದ್ದರು. ನಮಗೆ ಒಂದೇ ಫಜೀತಿ ಅಂದರೆ ಅವರು ಹೊರಗೆ ಊಟ ಮಾಡುವುದನ್ನೇ ನಿಲ್ಲಿಸಿಬಿಟ್ಟಿದ್ದರು. ಅವರು ಬೇಜಾರಿಲ್ಲದೆ ’ನೀವು ತಿನ್ನಿ. ನಾನು ಆಮೇಲೇನಾದ್ರೂ ಹಣ್ಣು ತಿಂತೀನಿ’ ಎಂದು ಸುಮ್ಮನಾಗಿ ಬಿಡುತ್ತಿದ್ದರು.
 
ಅಂಕಲ್ ರನ್ನು ನೋಡಿದಾಗ ನನ್ನ ಅಪ್ಪ-ಅಮ್ಮ, ಅತ್ತೆ-ಮಾವ ಅಮೆರಿಕಾಗೆ ಬಂದಾಗ ಹೇಗೆ ಪ್ರತಿಕ್ರಿಯಿಸಬಹುದು ಎಂದು ಊಹಿಸಲು ಸಾಧ್ಯವಾಗಿತ್ತು. ಅವರಿಗೆ ಅಮೆರಿಕಾದ ಥಳುಕು ನಾಟುವಂತೆಯೂ ಇರಲಿಲ್ಲ. ಇಲ್ಲಿನ ರೀತಿ ರಿವಾಜುಗಳು ಅವರ ಫ್ರೀ ಸ್ಪಿರಿಟ್ ಅನ್ನು ಕಟ್ಟಿಹಾಕಿದಂತಿದ್ದವು. ಎಲ್ಲದಕ್ಕೂ ನಾವೇ ಅವರಿಗೆ ಹೀಗೆ ಮಾಡಬೇಡಿ, ಹೀಗೆ ಮಾಡಿ, ಹೀಗಾದರೆ ಹೀಗಾಗುತ್ತೆ ಅಂತೆಲ್ಲಾ ಹೇಳಿ ಭಯ ಹುಟ್ಟಿಸಿಬಿಟ್ಟಿದ್ದೆವನ್ನಿಸುತ್ತದೆ. ಏನು ಮಾಡುವ ಮುನ್ನವೂ ಒಮ್ಮೆ ಕೇಳುತ್ತಿದ್ದರು. ಮುದ್ದು ಮಕ್ಕಳನ್ನು ನೋಡಿ ಸಾಧಾರಣವಾಗಿ ನಕ್ಕು ಮಾತಾಡಿಸುವವರು ’ಹಾಗೆ ಮಾಡಬೇಡಿ..ಇಲ್ಲಿನ ಜನ ತಪ್ಪು ತಿಳೀತಾರೆ..’ ಅಂದಿದ್ದರಿಂದ ಸುಮ್ಮನಾಗಿಬಿಡುತ್ತಿದ್ದರು. ಅವರನ್ನು ನೋಡಿದಾಗ ಇವರು ನಮ್ಮ ಸಂತೋಷಕ್ಕಾಗಿ ಹೀಗೆಲ್ಲಾ ಸುತ್ತುತ್ತಿದ್ದಾರೆಯೇ ಹೊರತು ಅನುಭವಿಸುವ ಮನಸ್ಥಿತಿಯಲ್ಲಿಲ್ಲ ಎನ್ನಿಸುತ್ತಿತ್ತು. ಆ ವಯಸ್ಸಿನಲ್ಲಿ ಅಮೆರಿಕಾದಂತ ದೊಡ್ದ ದೇಶವೊಂದರಲ್ಲಿ ಧಾರಾಳವಾಗಿ ಅನುಭವಿಸಲು ಸಿಗುವ ಪರಕೀಯತೆ ಅವರನ್ನು ಹಣ್ಣು ಮಾಡಿಬಿಡುತ್ತದೆ ಎನಿಸಿತು.
 
ನಾವು ತಿನ್ನುವ ತಿಂಡಿ, ಬದುಕುವ ರೀತಿ ನೋಡಿದ್ದ ಅಂಕಲ್ ’ಇದಕ್ಕ್ಯಾಕ್ರೋ ಇಲ್ಲಿದ್ದು ದುಡೀತೀರಿ? ಅದರ ಬದಲು ಒಂದಷ್ಟು ದೇಶ ಸುತ್ತಿಕೊಂಡು ಮತ್ತೆ ನಿಮ್ಮೂರಿಗೆ ವಾಪಸ್ ಬಂದ್ಕಳಿ’ ಎಂದಿದ್ದರು. ’ಬೇಡ ಮಗಳೇ ನೀನೂ ಪ್ರಶಾಂತನಿಗೆ ಹೇಳು...ಈ ಜಾಗ ನಮ್ಮ ಮಕ್ಕಳಿಗೆ ಸರಿಯಿಲ್ಲ...ಮೂರುಹೊತ್ತಿನ ಊಟ, ಗಟ್ಟಿ ಸೂರು, ಒಂದಷ್ಟು ಜನ ನಮ್ಮವರು ಅಂತ ಇದ್ದರೆ ಅಲ್ಲೇ ನಿಮ್ಮ ಬದುಕು ಚನ್ನಾಗಿ ಬೆಳೆಯುತ್ತೆ...ಇಲ್ಯಾಕೆ ಜೈಲ್ನಲ್ಲಿದ್ದಂಗೆ ಇರಬೇಕು...ಈ ಥರ ದುಡಿದ ದುಡ್ಡು ನಿಮಗೆ ಯಾವ ಸುಖಾನೂ ಕೊಡಲ್ಲ...’ ಎಂದಿದ್ದರು. ಅವರಿದ್ದು ತುಂಬಿದ್ದ ಮನೆ ಇನ್ನು ಸ್ವಲ್ಪ ದಿನದಲ್ಲಿ ಖಾಲಿ ಎಂದು ಎಣಿಸಲೂ ಆಗದೆ ಅತ್ತಿದ್ದೆ.
 
ಅಂಕಲ್ ಹೊರಡುವ ದಿನ ಹತ್ತಿರ ಬಂದಿತ್ತು. ಅವರು ಹುರುಪಿನಲ್ಲಿದ್ದರು. ಅವರಿಗೆ ಇಷ್ಟವಾಗಬಹುದು ಎಂಬ ನಂಬಿಕೆಯಿಂದ ಅವರನ್ನು ನಮ್ಮೂರಿನ ಪ್ರಖ್ಯಾತ ಇಂಡಿಯನ್ ರೆಸ್ಟೊರಾಂಟ್ ಗೆ ಕರೆದುಕೊಂಡು ಹೋಗಿ ಒತ್ತಾಯ ಮಾಡಿ ಸ್ಪೈಸಿ ಬಿರಿಯಾನಿ ಕೊಡಿಸಿದ್ದೆವು. ಹೋಗುವ ಮುನ್ನ ಮಕ್ಕಳಿಗೆ ಬೇಜಾರು ಮಾಡಿಸುವುದು ಯಾಕೆ ಎಂದು ಅವರೂ ಸುಮ್ಮನೆ ತಿಂದರು. ಮನೆಗೆ ಬರುವಷ್ಟರಲ್ಲಿ ಅವರ ಹೊಟ್ಟೆ ಕೆಟ್ಟಿತ್ತು. ಒಂದೇ ಸಮನೆ ಬಾತ್ರೂಮಿಗೆ ಹೋಗಿ ಬರತೊಡಗಿದರು. ತಾಳ್ಮೆ ಕೆಟ್ಟಿತ್ತೋ ಏನೋ..’ಅದ್ಯಾವ ಸೀಮೆ ಅಂತ ಇಲ್ಲಿಗೆ ಬಂದ್ಲಾ? ನೀನೇನೋ ಬಂದೆ ನಿನ್ನಿಷ್ಟ, ನಿನ್ ಹಣೆಬರ. ನನಗೂ ಈ ಕಷ್ಟ ಕೊಡಬೇಕಿತ್ತಾ...ನಮ್ಮೂರಲ್ಲಿ ಅಂಡುರಿದರೆ ನೀರು ಹಾಕಂಡು ಸರಿ ಮಾಡ್ಕಂತಿವಿ...ಇಲ್ಲಿ ಅದು ಇನ್ನೂ ಹತ್ತಿ ಉರಿದುಬಿಡ್ಲಿ ಅಂತ ಕಾಗದ ಕೊಡ್ತಿರಾ...ಅದ್ಯಾವ ಸೀಮೆಯವನು ಹೇಳಿಕೊಟ್ಟಿದ್ದು ನಿಮಗೆ?? ಅಷ್ಟೊರ್ಷ ನಾವು ಒಳ್ಳೆದು ಕಲಿಸಿದ್ದು ಬಿಟ್ಟು ಬೇಡದೇ ಇರದೇ ಕಲ್ತಿದ್ದೀರ. ಕೊಳಕು ನನ್ ಮಕ್ಳ್ರಾ...ಸೀಟ್ಕೊತರಂತೆ!!’ ಅಂತ ಬಚ್ಚಲು ಮನೆಯಿಂದಲೇ ಬಯ್ಯತೊಡಗಿದ್ದರು!
 
ಅಂಕಲ್ ಗೆ ಅಂತಲೇ ಬಚ್ಚಲಲ್ಲಿ ಚೊಂಬು ಇಟ್ಟಿದ್ದರೂ ಹೊರಗೆ ಹೋದಾಗ ಅವರಿಗೆ ಕಷ್ಟ ಆಗುತ್ತಿತ್ತು. ಆದರೂ ಅವರು ಸುಮ್ಮನೆ ಸಹಿಸಿಕೊಂಡು ಟಾಯ್ಲೆಟ್ ಪೇಪರ್ ಬಳಸುತ್ತಿದ್ದರು. ಆದರೆ ಇವತ್ತು ಅವರ ಸಹನೆ ಒಡೆದಿತ್ತು. ನಾವು ಮೂವರೂ ಅವರು ಹೊರಗೆ ಬರುವುದನ್ನೇ ಕಾಯುತ್ತಿದ್ದೆವು. ಸ್ವಲ್ಪ ಹೊತ್ತಿನಲ್ಲಿ ಸ್ನಾನ ಮುಗಿಸಿ ಸುಧಾರಿಸಿದಂತೆ ಫ್ರೆಶ್ ಆಗಿ ಹೊರಗೆ ಬಂದ ಚಂದ್ರಣ್ಣ ಅಂಕಲ್ ನಾವು ಮೂವರೂ ಗಾಬರಿಯಿಂದ ಕಾಯುತ್ತಿದ್ದುದು ನೋಡಿ..’ದಡ್ ನನ್ ಮಕ್ಕಳ್ರಾ...ಎಲ್ಲ ಸರಿ ಹೋಯ್ತು ನಡಿರಿ. ಬೆಪ್ಪರ ಥರ ನಿಲ್ಲಬೇಡಿ...ನಾಲ್ಕಾಟ ಆಡಣ...’ ಅಂದಾಗ ನಾವೂ ಸಮಾಧಾನದ ಉಸಿರು ಬಿಟ್ಟಿದ್ದೆವು.
 
ಚಂದ್ರಣ್ಣ ಅಂಕಲ್ ನಮ್ಮನೆಯಲ್ಲಿದ್ದಾಗ ನಮ್ಮೆಲ್ಲರ ಅಪ್ಪ ಅಮ್ಮನ ಇರುವನ್ನು ಪ್ರತಿನಿಧಿಸಿದ್ದರು. ಹೊರಡುವ ಮುನ್ನ ಇಲ್ಲೇ ನೆಲೆನಿಂತು ಬಿಡಬೇಡಿ. ಇದು ಬಂಜರು ಭೂಮಿ ಎಂದಿದ್ದರು. ಭಾರವಾಗಿ ಅವರನ್ನು ಬೀಳ್ಕೊಟ್ಟಿದ್ದೆವು. ಅಂಕಲ್ ಊರಿಗೆ ಬಂದಾಗ ಮುಂದಿನ ಸಾರಿ ಒಂದು ವಾರವಿಡೀ ತೋಟದ ಮನೆಯಲ್ಲಿರೋಣ, ನಾನು ಪ್ಲಾನು ಮಾಡುತ್ತೇನೆ ಅಂತ ಪ್ರಾಮಿಸ್ ಮಾಡಿಸಿಕೊಂಡಿದ್ದರು. ಅವರು ಹೊರಟ ದಿನದಿಂದಲೇ ಸಡಗರ ಮಾಯವಾಗಿತ್ತು. ರಜ ಹಾಕಿ ಕೆಲಸದ ಬ್ಯಾಕ್ಲಾಗ್ ಇದ್ದಿದುರಿಂದ ಪ್ರಶಾಂತ ಅವನ ಲ್ಯಾಪ್ ಟಾಪ್ ಹಿಡಿದು ಕೂತ. ಕೆಲಸದ ಇಂಟರ್ವ್ಯೂ ಗಳಿದ್ದುದರಿಂದ ಕಿರಣ ವಾಪಸ್ಸು ಹೊರಟರು. ನಾನು ಬಚ್ಚಲು ಮನೆಯ ಚೊಂಬಿನ ಫೋಟೋ ತೆಗೆದುಕೊಂಡೆ. ಒಂದು ಬಟ್ಟಲಿಗೆ ಸೀರಿಯಲ್ ಹಾಕಿ ಅಮ್ಮನ ಮುಂದಿಟ್ಟಾಗ ಆಕೆ ಹೇಗೆ ಮುಖ ಮಾಡಬಹುದೆಂದು ಊಹಿಸಿಕೊಂಡೆ. ವಿಶಾಲಕ್ಕೆ ಕಂಡಿದ್ದ ನಮ್ಮ ಪ್ರಪಂಚ ಮತ್ತೆ ಕುಗ್ಗಿತ್ತು. ಗುಡುಗಿನ ಮಳೆ ಬರುವಾಗ ಕೊಡೆ ತಲೆ ಮೇಲಿಂದ ಹಾರಿ ಹೋಗುತ್ತದಲ್ಲಾ ಆ ಅನುಭವ...

ನಾನು ಮತ್ತೆ ನನ್ನ ಡೈರಿಯೊಳಗೆ ಜಾರಿಕೊಂಡೆ...

(ಮುಂದುವರಿಯುವುದು)  

 
 
 
 
 
 
Copyright © 2011 Neemgrove Media
All Rights Reserved