ಅಂಗಳ      ಹಾಡು ಹಕ್ಕಿ
Print this pageAdd to Favorite


ಸಿಯೆರಾ ನೆವಾಡಾ: ಯಾನಿ ಎಂಬ ಹಿಚ್ ಹೈಕರ್

 

ಶಶಾಂಕ್ ಶೆಟ್ಟಿ

ಸೂರ್ಯ ಆಗಲೇ ಬೃಹತ್ ಕಾನ್ಯನ್ ಗಳನ್ನು ನಿಧಾನಕ್ಕೆ ಇಳಿಯುತ್ತಿದ್ದ. ಹಿಗ್ಗಾಮಗ್ಗಾ ಸುತ್ತು ಹೊಡೆಸಿಕೊಂಡು ನಮ್ಮನ್ನು ಕಣಿವೆಯಿಂದ ಹೊರಗೆ ಕರೆದುಕೊಂಡು ಬರುವ ರಸ್ತೆಗಳು ನಮಗೀಗ ಪರಿಚಿತವಾಗಿದ್ದವು. ಕ್ಯಾಲಿಫೋರ್ನಿಯಾದ ದಕ್ಷಿಣ ’ಸಿಯೆರಾ ನೆವಾಡಾ’ ದಲ್ಲಿ ಬೃಹತ್ ಗ್ರಾನೈಟ್ ಬಂಡೆಗಳಿಂದ ಆವೃತವಾದ ಕಿಂಗ್ಸ್ ಕಾನ್ಯನ್ ಗುಡ್ಡ ಪ್ರದೇಶದಲ್ಲಿ ಇದು ನಮ್ಮ ಮೂರನೇ ದಿನ. ನನ್ನ ಹೆಂಡತಿ ಮತ್ತು ಮಗ ಇಡೀ ದಿನದ ಹೈಕಿಂಗ್, ಜಾರಾಟ, ನೀರಾಟ, ಹುಡುಕಾಟಗಳಿಂದ ದಣಿದು ಹೋಗಿದ್ದರು. ಕಣ್ಣೆವೆ ಮುಚ್ಚಲು ಯಾವ ಕ್ಷಣವೂ ತಯಾರಾಗಿದ್ದರು. ಇವತ್ತಿನ ದಿನ ಮುಗಿಸೋಣ ಎಂದು ನಾವೂ ಕಾರಿನ ಕಡೆ ಹೊರಟಿದ್ದೆವು. ಮಬ್ಬಿನ ಸಂಜೆಯಲ್ಲಿ ಕಡಿದಾದ ಸುರುಳಿ ರೋಡುಗಳು ಮುಂದೆ ಡ್ರೈವಿಂಗ್ ಗೆ ಕಷ್ಟ ಕೊಡುವುದನ್ನು ಬಿಟ್ಟರೆ ಸಧ್ಯಕ್ಕೆ ಯಾವ ವಿಶೇಷತೆಯೂ ಇರಲಿಲ್ಲ. ನೋಡಿದಷ್ಟೂ ಕಣ್ಣನ್ನು ತುಂಬುತ್ತಿದ್ದ ಸಿಯೆರಾ ನೆವಾಡಾದ ಪ್ರಕೃತಿಯನ್ನು ನೋಡೀ ನೋಡೀ ಕಣ್ಣುಗಳೂ ಅಮಲಿನಲ್ಲಿದ್ದವು.

ಬೃಹತ್ ಬೆಟ್ಟದ ಮೇಲಿನ ಸಣ್ಣ ಪಾರ್ಕಿಂಗ್ ಲಾಟ್ ನಿಂದ ಕಾರನ್ನು ತೆಗೆದು ಎದುರಿಗಿದ್ದ ಚಿಕ್ಕ ರಸ್ತೆಯಲ್ಲಿ ನಿಧಾನಕ್ಕೆ ಡ್ರೈವ್ ಮಾಡುತ್ತಾ ಬೆಟ್ಟ ಇಳಿಯಲು ಶುರು ಮಾಡಿದಾಗ ಹಾಗೇ ರಸ್ತೆಬದಿಯಲ್ಲಿ ಬ್ಯಾಗ್ ಹೊತ್ತು ಇಳಿಯುತ್ತಿದ್ದ ಹೈಕರ್ ಒಬ್ಬನನ್ನು ಗಮನಿಸಿದೆ. ಇಂತಹ ಸುಂದರ ಪ್ರಕೃತಿ ಪ್ರದೇಶದಲ್ಲಿ ಹೈಕರ್ ಗಳು, ಬ್ಯಾಕ್ ಪ್ಯಾಕರ್ ಗಳು ಅಪರೂಪವೇನಲ್ಲ. ಅಲ್ಲೇ ಹತ್ತಿರದಲ್ಲೀ ಪಾರ್ಕ್ ಮಾಡಿದ್ದ ಕಾರ್ ಹತ್ತಿರ ಹೋಗುತ್ತಿರಬೇಕೆಂದುಕೊಂಡೆ. ನಮ್ಮ ಕಾರಿನ ಹೆಡ್ ಲೈಟ್ ಗಳು ಆ ಪುಟ್ಟ ಆಕೃತಿಯ ಮೇಲೆ ಬಿದ್ದಾಗ ಅವನ ಬೆನ್ನ ಮೇಲಿದ್ದ ಭಾರವಾದ ಬ್ಯಾಕ್ ಪ್ಯಾಕ್ ಕಂಡಿತ್ತು. ಈತ ಖಂಡಿತವಾಗಿಯೂ ಒಂದು ದಿನಕ್ಕೆ ಇಷ್ಟೊಂದನ್ನು ಪ್ಯಾಕ್ ಮಾಡಿಕೊಂಡು ಬಂದಿಲ್ಲ ಎಂದುಕೊಂಡೆ. ನಮ್ಮ ಕಾರ್ ನಿಧಾನಕ್ಕೆ ಆತನ ಹತ್ತಿರ ಹೋಗುತ್ತಿದ್ದಂತೇ ಆತ ನಮ್ಮ ಕಾರಿನತ್ತ ತಿರುಗಿ ತನ್ನ ಕೈಯ್ಯನ್ನು ಕೆಳಗಡೆ ತಾನೂ ಕೆಳಗಡೆ ಹೋಗುತ್ತಿದ್ದೇನೆಂಬಂತೆ ತೋರಿಸಿದ. ಒಂದು ಕ್ಷಣ ಚಕಿತನಾದೆ. ಹಿಚ್ ಹೈಕರ್ ಮೂವಿಯ ದೃಶ್ಯ ನೆನಪಿಗೆ ಬಂತು!! ನನಗೆ ಹಿಂದೆಯೂ ಸಾಕಷ್ಟು ಮಂದಿ ಹಿಚ್ ಹೈಕ್ ಮಾಡಿದ್ದಾರೆ. ನೀನು ಹೋಗುತ್ತಿರುವ ದಿಕ್ಕಿನಲ್ಲೇ ನಮಗೆ ಲಿಫ್ಟ್ ಕೊಡು ಎಂದು ಸನ್ನೆ ಮಾಡಿದ್ದಾರೆ. ಆದರೆ ಎಲ್ಲರಿಗೂ ನಾನು ಲಿಫ್ಟ್ ಕೊಟ್ಟಿಲ್ಲ. ಅಮೆರಿಕಾದ ನಿರ್ಜನ ಪ್ರದೇಶಗಳಲ್ಲಿ ಲಿಫ್ಟ್ ಕೊಡಲು ಯಾರನ್ನಾದರೂ ಕಾರಿಗೆ ಹತ್ತಿಸಿಕೊಳ್ಳುವುದು ಎಂದರೆ ಅಪಾಯವನ್ನು ಪಕ್ಕಕ್ಕೆ ಕೂರಿಸಿಕೊಳ್ಳುವುದು ಎಂದರ್ಥ. ಬಂದವ ಬಂದೂಕು ತೋರಿಸಿ ಇದ್ದದ್ದನ್ನೆಲ್ಲಾ ತೆಗೆದುಕೊಂಡು ಹೋದರೆ ಅಡ್ಡಿಯಿಲ್ಲ. ಆದರೆ ಕೊಂದೋ, ಜೊತೆಯಲ್ಲಿರುವವರಿಗೆ ಘಾಸಿ ಮಾಡಿಯೋ ಹೋದರೆ?! ಅದಲ್ಲದೇ ಕಾನ್ಯನ್ ನ ಪ್ರತೀ ಪಾರ್ಕಿಂಗ್ ಜಾಗದಲ್ಲಿಯೂ ಗುರುತು ಪರಿಚಯ ಇಲ್ಲದವರಿಗೆ ಲಿಫ್ಟ್ ಕೊಡಬೇಡಿ ಎಂಬ ಸೂಚನಾ ಫಲಕಗಳೂ ಇದ್ದವು. ಆದರೂ...ಆಶ್ಚರ್ಯಕರ ರೀತಿಯಲ್ಲಿ ನನಗೂ ಗೊತ್ತಾಗದೆ ಕಾರ್ ಸ್ಲೋ ಮಾಡಿದೆ.

ಹಾಗೇ ಒಮ್ಮೆ ಉಸ್ಸಪ್ಪಾ ಎಂದು ಕೂತಿದ್ದ ನನ್ನ ಹೆಂಡತಿಯ ಕಡೆ ನೋಡಿದೆ. ಇನ್ನೂ ಆಶ್ಚರ್ಯವೆಂಬಂತೆ ’ಪಾಪ ಕಣೋ ತುಂಬಾ ಸುಸ್ತಾಗಿರೋ ಥರ ಕಾಣಿಸ್ತಾನೆ. ಇನ್ನೊಂದು ಗಂಟೆಗೆ ಪೂರ್ತಿ ಕತ್ತಲಾಗುತ್ತೆ. ಆಮೇಲೆ ಈ ರಾತ್ರಿ-ಚಳಿಯಲ್ಲಿ ಹೆಂಗೋ ಅವನು ಬೆಟ್ಟ ಇಳಿಯಕಾಗುತ್ತೆ?’ ಎಂದಳು. ನನಗಷ್ಟೇ ಸಾಕಿತ್ತು. ಅಲ್ಲೇ ಸಿಕ್ಕ ಸಣ್ಣ ಸಂದಿಯಲ್ಲಿ ಕಾರ್ ನಿಲ್ಲಿಸಿದೆ. ಅಷ್ಟರಲ್ಲಿ ಆ ಹೈಕರ್ ನಿಂದ ೨೦೦ ಅಡಿಯಷ್ಟು ದೂರ ಬಂದಿದ್ದೆವು. ಕಾರ್ ನಿಂತದ್ದು ಕಂಡ ತಕ್ಷಣ ಆತ ಕಷ್ಟಪಟ್ಟು ವೇಗವಾಗಿ ನಡೆದುಕೊಂಡು ಬಂದ. ನಿಜಕ್ಕೂ ಬಹಳ ದಣಿದಂತಿದ್ದ. ಆತ ಕಾರ್ ತಲುಪಲು ಹಲವಾರು ನಿಮಿಷಗಳೇ ಆದವು. ಮನಸ್ಸಿನ ಒಳಗೆಲ್ಲೋ ಆಕ್ಸಿಲರೇಟರ್ ಒತ್ತಿ ಬಿಡಲಾ ಎನಿಸಿತು. ಹಿಚ್ ಹೈಕರ್ ಮೂವಿಯಲ್ಲಾದ ಗತಿಯೇ ಇಲ್ಲೂ ಆದರೆ? ನನ್ನ ಕುಟುಂಬಕ್ಕೆ ಯಾಕಾದರೂ ನಾನು ಅಪಾಯ ತರಿಸಲಿ? ಸ್ವಲ್ಪ ಕಂಪನ. ಇಂತದ್ದರ ಬಗ್ಗೆಯೆಲ್ಲಾ ಯಾವಾಗಲೂ ತನ್ನ ಗಟ್ ಫೀಲ್ ಅನ್ನು ಬಲವಾಗಿ ನಂಬುವ ನನ್ನ ಹೆಂಡತಿ ಆರಾಮಾಗಿ ಕುಳಿತಿದ್ದಳು. ಇವಳು ಹಿಚ್ ಹೈಕರ್ ಮೂವಿ ನೋಡಿಲ್ಲ ಎನ್ನಿಸುತ್ತೆ ಎಂದುಕೊಂಡೆ. ಆತ ಇನ್ನೇನು ಕಾರ್ ನ ಟ್ರಂಕ್ ಹತ್ತಿರ ಬಂದಿದ್ದ. ಕೂತಲ್ಲಿಂದಲೇ ಟ್ರಂಕ್ ಓಪನ್ ಮಾಡಿ ರೇರ್ ವ್ಯೂ ಕನ್ನಡಿಯಲ್ಲಿ ಅವನ ಮುಖ ನೋಡಲು ಪ್ರಯತ್ನಿಸಿದೆ. ಆತ ನಿಧಾನಕ್ಕೆ ತನ್ನ ಬೆನ್ನಿನ ಮೇಲೆ ಧುಪ್ಪೆಂದು ಬಿದ್ದುಕೊಂಡಿದ್ದ ಆ ಬ್ಯಾಗ್ ಅನ್ನು ಬಿಡಿಸಿಕೊಂಡು ಅದನ್ನು ಟ್ರಂಕ್ ಒಳಗೆ ಹಾಕಿದ. ಬ್ಯಾಗ್ ನಿಂದ ಮುಕ್ತನಾದ ಮೇಲೆ ಆತನ ಆರಡಿಯ ನಿಜ ಎತ್ತರ ಗೊತ್ತಾಯಿತು!

ಆತ ಹಿಂದಿನ ಸೀಟಿನಲ್ಲಿ ಕೂತು ನಿದ್ದೆಗೆ ಜಾರಿದ್ದ ನನ್ನ ಪುಟ್ಟ ಮಗನ ಪಕ್ಕ ಕೂತ. ನನಗೆ ಇನ್ನೂ ನಂಬಿಕೆಯಿಲ್ಲ. ಕುರುಚಲು ಗಡ್ಡ, ಸೊರಗಿ ಒಡೆದಂತಿರುವ ಮುಖ, ಇಪ್ಪತೈದು ಇಪ್ಪತೆಂಟರ ಆಸುಪಾಸಿನಲ್ಲಿರುವ ಸಣಕಲು ಹುಡುಗ. ಅವನು ಕೂತು ಸುಧಾರಿಸಿಕೊಳ್ಳುವ ಮೊದಲೇ ನಾವು ಸಂಭಾಷಣೆಗಿಳಿದಿದ್ದೆವು! ಎಲ್ಲಿಗೆ ಹೊರಟಿದ್ದಾನೆ ಆತ ಎಂದು ತಿಳಿದುಕೊಳ್ಳುವ ಕುತೂಹಲದಿಂದ ಮಾತು ಶುರು ಮಾಡಿದೆವು. ಆತ ಆ ಇಡೀ ವಾರವನ್ನು ಕಿಂಗ್ಸ್ ಕ್ಯಾನ್ಯನ್ ಸುತ್ತಿಕೊಂಡು ಕಳೆದಿದ್ದ! ಇವತ್ತು ರಾತ್ರಿ ಕ್ಯಾನ್ಯನ್ ತಪ್ಪಲಿನ ಯಾವುದಾದರೂ ಪುಟ್ಟ ಊರು ತಲುಪಿ ನಿದ್ದೆ ಮಾಡಿ, ಮರುದಿನದ ಬೆಳಿಗ್ಗೆಯ ಬಸ್ ಹಿಡಿದು ಪ್ರಯಾಣ ಮುಂದುವರಿಸುವವನಿದ್ದ. ಅವನ ಆಕ್ಸೆಂಟ್ ಆತ ಈ ದೇಶದವನಲ್ಲ ಎಂದು ಸಾರಿ ಹೇಳುತ್ತಿತ್ತು. ನಾಲಿಗೆಯೆಲ್ಲಾ ಒಣಗಿ ಮಾತನಾಡಲೂ ತಡವರಿಸುತ್ತಿದ್ದ. ಕುಡಿಯಲು ನೀರಿನ ಬಾಟಲ್ ಕೊಟ್ಟು ಅವನು ಸುಧಾರಿಸಿಕೊಂಡಾಗ ಮತ್ತೆ ಮಾತಿಗೆಳೆದೆವು.

ಯಾನಿ ಸ್ವೀಡನ್ ದೇಶದ ಪ್ರಮುಖ ಇಂಜಿನಿಯರಿಂಗ್ ಕಂಪನಿಯೊಂದರಲ್ಲಿ ಕೆಲಸಗಾರನಾಗಿದ್ದ. ಅವನು ಎರಡು ತಿಂಗಳ ಸಮ್ಮರ್ ಬ್ರೇಕು ತೆಗೆದುಕೊಂಡು ಅಮೆರಿಕಾದ ಗುಡ್ಡಗಾಡು ಪ್ರದೇಶಗಳನ್ನು ಸುತ್ತಾಡಿಹೋಗಲು ಬಂದಿದ್ದ.

ಈ ರೀತಿಯ ಬ್ಯಾಕ್ ಪ್ಯಾಕರ್ಸ್ ಕುರಿತು ನಾವು ಯಾವಾಗಲೂ ಕುತೂಹಲಿಗಳಾಗಿದ್ದೆವು. ದಿನಗಟ್ಟಲೆ ಒಂದು ಮೂಟೆ ಹೊತ್ತುಕೊಂಡು ಕಾಡು ಮೇಡು ಅಲೆಯುವ ಇವರು ಏನು ತಿನ್ನುತ್ತಾರೆ? ಎಲ್ಲಿ ಹೇಗೆ ಮಲಗುತ್ತಾರೆ ಎಂದು ಯೋಚಿಸಿಕೊಳ್ಳುತ್ತಿದ್ದೆವು. ಯಾನಿ ತನ್ನ ಅನುಭವದಿಂದ ನಿಜಕ್ಕೂ ಸಾಹಸಿ ಹುಡುಗ ಎನಿಸಿದ. ಆತ ಈ ಎರಡು ತಿಂಗಳು ಮಾತ್ರ ಸಂಪೂರ್ಣ ನಿಸರ್ಗದ ಮಧ್ಯೆಯೇ ಕಳೆಯಲಿದ್ದ. ಅದು ಬಿಟ್ಟರೆ ಆತ ಯಾವತ್ತೂ ನಗರ ಜೀವನದಿಂದ ದೂರ ಇದ್ದವನಲ್ಲ. ನಗರ ಜೀವನ ಬಿಟ್ಟರೆ ಬೇರೊಂದು ಜೀವನ ಇದೆ ಎಂಬುದನ್ನು ಗಣಿಸಲೂ ಆಗದ ಆತ ತಾನು ಬೆಟ್ಟ-ಗುಡ್ಡ-ಕಾಡುಗಳಲ್ಲಿ ನಿಜಕ್ಕೂ ಬದುಕುಳಿಯಲಿದ್ದೇನೆ ಎಂಬುದನ್ನು ಊಹಿಸಿಕೊಳ್ಳಲೂ ತಯಾರಿರಲಿಲ್ಲವಂತೆ. ಅಂತದ್ದರಲ್ಲಿ ಅಮೆರಿಕಾದ ಕಾಡುಗಳಲ್ಲಿ ಆತ ಕಳೆದಿದ್ದ ದಿನಗಳು ನಿಜಕ್ಕೂ ಅವಿಸ್ಮರಣೀಯ ಎಂದಿದ್ದ. ’ನಿನಗೆ ರಾತ್ರಿ ಹೊತ್ತು ಚಳಿ ಆಗುವುದಿಲ್ಲವಾ, ಹೇಗೆ ಮಲಗುತ್ತೀಯ ’ ಎಂದಿದ್ದಕ್ಕೆ ’ಇಲ್ಲ. ಹಾಗೇನಾದರೂ ಆದರೆ ಬ್ಯಾಕ್ ಪ್ಯಾಕಿನಲ್ಲಿರುವ ಎಲ್ಲಾ ಬಟ್ಟೆಗಳನ್ನೂ ಒಂದರಮೇಲೊಂದು ಹಾಕಿಕೊಂಡು ಮಲಗುತ್ತೇನೆ. ಸಣ್ಣದೊಂದು ಗಾಳಿ ಊದಿ ತುಂಬಿಕೊಳ್ಳುವ ಪ್ಯಾಡ್ ಇದೆ. ನೆಲ ಸಮ ಇಲ್ಲದಿದ್ದರೆ ಅದನ್ನು ಹಾಕಿಕೊಳ್ಳುತ್ತೇನೆಎಂದಿದ್ದ.

ನಮ್ಮ ತಣಿಯದ ಕುತೂಹಲ ಅವನಿಗೆ ಸುಸ್ತು, ಬೇಜಾರಾಗಿರಲಿಲ್ಲ. ಸುಮಾರು ದಿನಗಳ ನಂತರ ಮಾತಾಡಲು ಜೊತೆ ಸಿಕ್ಕಿದ್ದೀರ ಎಂದು ಖುಷಿಯಾಗಿ ಮಾತಾಡಿದ.ಕಾಡು ಪ್ರಾಣಿಗಳ ಭಯವಿರುವುದಿಲ್ಲವಾ ಕೇಳಿದ್ದಕ್ಕೆ ಬೆಂಕಿ ಹಚ್ಚಲು ಅನುಮತಿ ಇರುವ ಜಾಗಗಳಲ್ಲಿ ಸಣ್ಣದೊಂದು ಬೆಂಕಿ ಹತ್ತಿಸಿಕೊಂಡು ಮಲಗುತ್ತೇನೆ. ಆಹಾರನ ಜೊತೆಲಿಟ್ಟುಕೊಳ್ಳುವುದಿಲ್ಲ. ಹತ್ತಿರದಲ್ಲೇ ಯಾವುದಾದರೂ ಮರಕ್ಕೆ ನೇತು ಹಾಕಿ ಬಿಡ್ತೀನಿ ಹಾಗಾಗಿ ಕಾಡು ಪ್ರಾಣಿಗಳೇನೂ ಹತ್ತಿರಕ್ಕೆ ಬರಲ್ಲ ಎಂದಿದ್ದ. ಯಾನಿ ಬಾದಾಮಿ, ಪಿಸ್ತಾ ಥರದ ಹೆಚ್ಚಿನ ಕಾಲರಿಯ ಊಟಗಳನ್ನು ಇಟ್ಟುಕೊಂಡಿದ್ದ. ಹಾಗೇ ಸಂಸ್ಕರಿಸಿ ಕ್ಯಾನ್ ಮಾಡಿರುವ ಟ್ಯೂನಾ ಮೀನು, ಮಾಂಸ, ಒಣಗಿಸಿದ ಹಣ್ಣುಗಳ ಸಹಾಯದಿಂದ ಬೆಟ್ತ ಗುಡ್ಡಗಳಲ್ಲಿ ದಿನ ರಾತ್ರಿ ಕಳೆಯುತ್ತಿದ್ದ.

ಯಾನಿ ಒಬ್ಬ ಸಾಹಸಪ್ರಿಯ ಸಾಧಾರಣ ಯುವಕನಂತೆ ಕಂಡಿದ್ದ. ’ಅದ್ಯಾವ ಧೈರ್ಯದ ಮೇಲೆ ಹೀಗೆ ಯಾವುದೋ ದೇಶವೊಂದಕ್ಕೆ ಬಂದು ಕಾಡು ಮೇಡು ಸುತ್ತುತ್ತಾ ಹಿಚ್ ಹೈಕ್ ಮಾಡುತ್ತೀಯಾ?’ ಎಂದು ಕೇಳಿದ್ದೆವು. ’ನನ್ನ ಒಳಗಿರುವ ವ್ಯಕ್ತಿಯ ಜೊತೆ ಕನೆಕ್ಟ್ ಆಗಲು ನನಗೆ ಸಿಗುವುದು ಇದೊಂದೇ ಸಮಯ. ನಾನು ವರ್ಷವಿಡೀ ಕಷ್ಟಪಟ್ಟು ದುಡಿಯುತ್ತೇನೆ, ನನಗೆ ಈ ಎರಡು ತಿಂಗಳ ರಜ ಬಿಟ್ಟರೆ ಬೇರೆ ರಜ ಇಲ್ಲ. ವರ್ಷದಲ್ಲಿ ಮಾಡುವ ಇಂಥಾ ಒಂದು ಟ್ರಿಪ್ಪ್ ಗೆ ಎಂದೇ ಉಳಿತಾಯ ಮಾಡುತ್ತೇನೆ. ಇದು ಸಾಹಸಕ್ಕೆ ಅಷ್ಟೇ ಅಲ್ಲ. ಈ ಥರದ ಸುತ್ತಾಟ ನನಗೆ ಜೀವನ, ಪರಿಸರವನ್ನು ಪ್ರೀತಿಸುವುದನ್ನು ಹೇಳಿಕೊಡುತ್ತದೆ...ಸುಮಾರು ಪ್ರಯತ್ನ ಮಾಡಿದರೆ ಮಾತ್ರ ಜನ ಲಿಫ್ಟ್ ಕೊಡುತ್ತಾರೆ. ಕೆಲವೊಮ್ಮೆ ನಡೆದೇ ಬಸ್ ಸ್ಟೇಷನ್ ತಲುಪಬೇಕಾಗುತ್ತದೆ..ಆದರೂ ಪರವಾಗಿಲ್ಲ. ನಿಮ್ಮಂತವರು ಇದ್ದೇ ಇರುತ್ತಾರೆ’ ಎಂದಿದ್ದ. ಸ್ವೀಡನ್ ನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಬರಲು ಆತ ಕಳೆದ ಎರಡು ವರ್ಷಗಳಿಂದಲೂ ಹಣ ಉಳಿಸಿದ್ದ.

ಈಗ ಎಲ್ಲಿಗೆ ಹೋಗುತ್ತಿದ್ದೀಯ ಎಂದು ಕೇಳಿದ್ದಾಗ ’ಸ್ಯಾನ್ಫ್ರಾನ್ಸಿಸ್ಕೋ ಕಡೆಗೆ ಹೊರಟಿದ್ದೀನಿ. ನೀವು ದಾರಿಯಲ್ಲಿ ಎಲ್ಲಿ ಬಸ್ ಸ್ಟೇಷನ್ ಕಂಡರೂ ನನ್ನನ್ನು ಇಳಿಸಿ...ನಾನು ಹೋಗುತ್ತೇನ" ಎಂದಿದ್ದ. ಇದು ಯಾನಿಯ ಎರಡನೇ ಅಮೆರಿಕಾ ಸುತ್ತಾಟವಂತೆ. ಮೊದಲ ಸಾರಿ ಬಂದಾಗ ಆತ ಪೂರ್ವ ತೀರವನ್ನು ಸುತ್ತಿ ಹೋಗಿದ್ದ. ಈಗ ಪಶ್ಚಿಮದ ಪರ್ವತಗಳು, ಮೆಕ್ಸಿಕೋದ ಸಮುದ್ರ ತೀರಗಳನ್ನು ಸುತ್ತಾಡುವ ಸರದಿ.

ನಾವು ಬೆಟ್ಟದ ಬುಡದವರೆಗೂ ಹೋಗುತ್ತಿದ್ದೇವೆ ಆತನಿಗೆ ಎಲ್ಲಿ ಬೇಕಾದಲ್ಲಿ ಬಿಟ್ಟು ಕೊಡುತ್ತೇವೆ ಎಂದೆವು. ನಾವು ತಂಗಿದ್ದ ಹೋಟೆಲಿನಿಂದ ಹಲವಾರು ಮೈಲಿ ದೂರ ಡ್ರೈವ್ ಮಾಡಿದ್ದೆವು. ಯಾನಿ ಕಿಟಕಿ ಹೊರಗೆ ತಲೆ ಹಾಕಿ ಯೋಗ್ಯ ಜಾಗವೊಂದನ್ನು ಹುಡುಕುತ್ತಿದ್ದ. ಅಲ್ಲಿ ನದಿಯೊಂದಕ್ಕೆ ಸಣ್ಣ ಅಣೆಕಟ್ಟೆಯೊಂದನ್ನು ಕಟ್ಟಿ ಸುತ್ತಲೂ ಒಂದು ಪಾರ್ಕ್ ಮಾಡಿದ್ದರು. ನಾನು ಇಲ್ಲೇ ನದಿ ದಡದಲ್ಲಿ ಇವತ್ತು ರಾತ್ರಿ ಉಳಿದುಕೊಳ್ಳುತ್ತೇನೆ ಎಂದ. ಇಷ್ಟು ಹೊತ್ತು ಅವನ ಜೊತೆ ಮಾತಾಡಿ ಪರಿಚಿತರಾಗಿದ್ದ ನಮಗೆ ಈಗ ಅವನನ್ನು ಒಬ್ಬನೇ ಬಿಡಲು ಭಯ! ನಾವು ಯಾವ ದೇಶದವರು ನಮ್ಮ ಬದುಕು, ಪ್ರಯಾಣ ಎಲ್ಲಾದರ ಬಗ್ಗೆ ಆತನಿಗೂ ಕುತೂಹಲವಾಗಿತ್ತು. ’ಲೈಫ್ ಎಷ್ಟು ಆಶ್ಚರ್ಯ ಅಲ್ಲವಾ?! ಎಲ್ಲಿಂದಲೋ ಎಲ್ಲಿಗೋ ತೆಗೆದುಕೊಂಡು ಹೋಗುತ್ತ" ಎಂದ. ನಮ್ಮ ಬದುಕುಗಳ ಬಗ್ಗೆ ನಮಗೆ ತೋಚಿದ್ದನ್ನು ಮಾತಾಡಿಕೊಳ್ಳುತ್ತಾ ಹೋಗುತ್ತಿದ್ದೆವು.

ಹಾಗೇ ನದೀ ಪಕ್ಕದಲ್ಲೇ ಡ್ರೈವ್ ಮಾಡುತ್ತಿದ್ದಾಗ ರಸ್ತೆಬದಿಯ ಸಣ್ಣ ಪಾರ್ಕಿಂಗ್ ಜಾಗವೊಂದರಲ್ಲಿ ಟ್ರೈಲರ್ ಒಂದನ್ನು ನಿಲ್ಲಿಸಲಾಗಿತ್ತು. ಟ್ರೈಲರ್ ನ ಹಿಂದಿನ ಬಾಗಿಲು ತೆರೆದಿದ್ದು ಅಲ್ಲಿಂದ ಬಣ್ಣ ಬಣ್ಣಗಳ ಬೆಳಕು ಬರುತ್ತಿತ್ತು. ನಮಗೆ ಕುತೂಹಲ. ಯಾನಿಯೂ ’ನನ್ನನ್ನು ಅಲ್ಲಿಗೆ ಬಿಡುತ್ತೀರಾ’ ಎಂದ. ಸರಿ ಬಾರಪ್ಪಾ ಎಂದುಕೊಂಡು ಟ್ರೈಲರ್ ಹತ್ತಿರ ಬಂದೆವು. ಅದರ ಹತ್ತಿರ ಬರುತ್ತಿದ್ದಂತೆ ಭಾರೀ ಡ್ರಮ್ ಸದ್ದು ಕೇಳಿಸಿತು. ಮತ್ತಷ್ಟು ಹತ್ತಿರ ಬಂದಾಗ ನಾವು ನೋಡುತ್ತಿದ್ದುದನ್ನು ನಮಗೂ ನಂಬಲು ಸಾಧ್ಯವಿರಲಿಲ್ಲ! ಅಲ್ಲಿ ಒಬ್ಬ ಮಧ್ಯ ವಯಸ್ಕ ಟ್ರೈಲರಿನ ಮಧ್ಯ ಕುಳಿತು ತನ್ನ ಡ್ರಮ್ ಸೆಟ್ ಅನ್ನು ನುಡಿಸುತ್ತಿದ್ದ. ಇಡೀ ಟ್ರೈಲರಿಗೆ ಡಿಸ್ಕೋ ಎಫೆಕ್ಟ್ ಬರುವಂತೆ ಬಣ್ಣದ ಲೈಟು ಹಾಕಿಕೊಂಡಿದ್ದ. ಧಿಡೀರನೆ ಬಂದ ಅಪರಿಚಿತರನ್ನು ಕಂಡು ಆತ ಸ್ವಲ್ಪ ವಿಚಲಿತನಾದ. ಆತನ ಹತ್ತಿರ ಹೋಗಿ ನಮ್ಮನ್ನು ಪರಿಚಯಿಸಿಕೊಂಡೆವು. ಆತ ಯಾವುದೋ ಸಂಗೀತದ ಬ್ಯಾಂಡ್ ಒಂದರ ಡ್ರಮ್ಮರ್. ನಿರ್ಜನವಾದ ಪ್ರದೇಶದಲ್ಲಿ ಯಾರಿಗೂ ತೊಂದರೆಯಾಗದಂತೆ ರಾತ್ರಿಯಿಡೀ ತನ್ನ ಡ್ರಮ್ ಪ್ರಾಕ್ಟೀಸ್ ಮಾಡುತ್ತಿದ್ದ! ಅದಲ್ಲದೆ ಬೆಟ್ಟ ಗುಡ್ಡಗಳ ನಡುವೆ ನದೀ ತೀರದಲ್ಲಿ ಹಾಗೆ ಪ್ರಾಕ್ಟೀಸ್ ಮಾಡುವುದು ಅವನ ಮನಸ್ಸಿಗೆ ಬಹಳ ಶಾಂತಿಯನ್ನು ಕೊಡುತ್ತದೆಂದು ವಿವರಿಸಿದ.
 

ಯಾನಿ ’ನಾನು ಇಲ್ಲಿ ಸ್ವಲ್ಪ ಹೊತ್ತು ನಿನ್ನ ಡ್ರಮ್ ಕೇಳಲಾ’ ಎಂದು ಕೇಳಿದ್ದಕ್ಕೆ ’ಬೇಕಾದರೆ ನಾನು ನಿನ್ನನ್ನು ನಾಳೆ ಬೆಳಿಗ್ಗೆ ನೀನು ಹೋಗಬೇಕಿರುವ ತಾಣಕ್ಕೆ ಕರೆದುಕೊಂಡು ಹೋಗುತ್ತೇನೆ’ ಅಂತ ಆತ ಯಾನಿಗೆ ಆಫರ್ ಮಾಡಿದ. ಯಾನಿಗೆ ತುಂಬಾ ಖುಷಿ! ಮಾತಾಡಿಕೊಂಡು ಬೆಟ್ಟವಿಳಿಯಲು ನೀವು ಸಿಕ್ಕಿದ್ದು ಮತ್ತು ಸಂಗೀತ ಕೇಳುತ್ತಾ ಡ್ರಮ್ಮರ್ ಜೊತೆ ರಾತ್ರಿ ಕಳೆಯುವ ಅವಕಾಶ ಸಿಕ್ಕಿದ್ದು ನನ್ನ ಲಕ್ ಎಂಕೊಂಡ. ಓ ನನಗೆ ಇವತ್ತು ನನ್ನ ಮ್ಯೂಸಿಕ್ ಕೇಳಿಸಲು ಒಬ್ಬ ಕೇಳುಗ ಸಿಕ್ಕ ಎಂದು ಆ ಡ್ರಮ್ಮರ್ ಕೂಡಾ ತಮಾಷೆ ಮಾಡಿದ. ಸಿಯೆರಾ ನೆವಾಡಾದ ಸುಂದರ ಪರ್ವತಗಳ ಮಧ್ಯೆ ನಾಲ್ಕು ಜನ ಸಂಪೂರ್ಣ ಅಪರಿಚಿತರು!

ಯಾನಿ ನಮ್ಮ ಇಮೇಲ್ ವಿಳಾಸ ತೆಗೆದುಕೊಂಡ. ನಾನು ಊರು ತಲುಪಿ ಬರೆಯುತ್ತೇನೆಂದ. ಅವನಿಗೆ ಸುರಕ್ಷಿತವಾದ ಪ್ರಯಾಣ ಹಾರೈಸಿ ನಾವೂ ಹೊರಟೆವು. ಹಿಚ್ ಹೈಕರ್ ಮೂವಿಯ ಕೆಟ್ಟ ನೆನಪನ್ನು ನನ್ನ ಈ ಕ್ಯಾಲಿಫೋರ್ನಿಯಾದ ಹಿಚ್ ಹೈಕರ್ ಅನುಭವ ಅಳಿಸಿಹಾಕಿತ್ತು. ಅಬ್ಬಾ! ನಿರಾಳವಾಯಿತು. ನನ್ನ ಪುಟ್ಟ ಮಗ ತನಗೆ ಪ್ರಪಂಚದ ಯಾವ ಗೊಡವೆಯೂ ಬೇಡ ಎಂಬಂತೆ ಕನಸಿನಲ್ಲಿ ನಗಾಡಿಕೊಂಡು ನಿದ್ದೆ ಮಾಡುತ್ತಿದ್ದ.

 

(ಅನುವಾದ: ಆಯಾಮ)  

 


 
 
 
 
 
Copyright © 2011 Neemgrove Media
All Rights Reserved