ಅಂಗಳ      ಖುರಪುಟ
Print this pageAdd to Favorite


 
ಭಾರತಕ್ಕೆ ಬೇಕಾ ವಾಲ್ಮಾರ್ಟ್ ದೈತ್ಯ?

 
ಡಿಸೆಂಬರ್ ೫ ರ ಪ್ರಜಾವಾಣಿಯ ಸಂಗತ ವಿಭಾಗದಲ್ಲಿ ಪ್ರಕಟವಾಗಿದ್ದ ಲೇಖನ ಮತ್ತಷ್ಟು ಮಾಹಿತಿಯೊಂದಿಗೆ.
ಕೃಪೆ ಪ್ರಜಾವಾಣಿ

 
ಒಂದೊಮ್ಮೆ ಉತ್ಪಾದಕರ ಹಸಿರು ನೆಲವಾಗಿದ್ದ ಭಾರತವೀಗ ವಿಶ್ವದಲ್ಲೇ ನಾಲ್ಕನೆಯ ದೊಡ್ಡ ಕೊಳ್ಳುಗರ ಎಕಾನಮಿ! ಜನ ತಮ್ಮ ಕೊಳ್ಳುವ ಸಾಮರ್ಥ್ಯದಿಂದಲೇ ಭಾರತದ ಎಕಾನಮಿಯನ್ನೂ ಬೆಳೆಸುತ್ತಾರೆ ಮುಂದುವರಿಸುತ್ತಾರೆ ಎಂಬ ಭರವಸೆ ಹುಟ್ಟಿಸಿದ್ದಾರೆ. ಅಂತರ್ರಾಷ್ಟ್ರ‍ೀಯ ವ್ಯಾಪಾರಿಗಳಿಗೆ ನಮ್ಮ ನೆಲವೀಗ ಚಿನ್ನದ ಗಣಿ. ಎಲ್ಲರೂ ನಮ್ಮ ಕೊಳ್ಳುಗ ಹಸಿವನ್ನು ಬಗೆಬಗೆಯಾಗಿ ತಣಿಸಲು ತುದಿಗಾಲಲ್ಲಿ ನಿಂತಿದ್ದಾರೆ.
 
ಬಹುರಾಷ್ಟ್ರ‍ೀಯ ರೀಟೈಲ್ ಮಾರುಕಟ್ಟೆಗಳು ಭಾರತಕ್ಕೆ ಬಂದಲ್ಲಿ ಮಾರಾಟಗಾರರ ಮಧ್ಯೆ ಸ್ಪರ್ಧೆಯುಂಟಾಗಿ ಜನರಿಗೆ ಕಡಿಮೆ ಬೆಲೆಯಲ್ಲಿ ಸಾಮಾನುಗಳು ಸಿಗುತ್ತವೆ ಎಂಬ ಬಗ್ಗೆ ನಮ್ಮಲ್ಲಿ ಈಗ ಬಿಸಿ ಚರ್ಚೆ. ಹಾಗಾದಲ್ಲಿ ಅದು ತಾತ್ಕಾಲಿಕ ಪರಿಹಾರವಾಗಬಲ್ಲದ್ದಾದರೂ ಬಹುರಾಷ್ಟ್ರೀಯ ರೀಟೈಲ್ ಕಂಪನಿಗಳು ಮುಂದಿನ ದಶಕಗಳಲ್ಲಿ ಭಾರತೀಯ ಕೊಳ್ಳುಗರ ಹವ್ಯಾಸಗಳನ್ನು ಕೆಡಿಸಿ ಭಾರತದ ಮಾರುಕಟ್ಟೆಯನ್ನು ಎಷ್ಟರ ಮಟ್ಟಿಗೆ ಘಾಸಿ ಮಾಡಬಲ್ಲದು ಎಂಬುದನ್ನು ಯೋಚನೆ ಮಾಡುವುದು ಸೂಕ್ತ.
 
ಈಗಾಗಲೇ ಅಮೆರಿಕಾದಲ್ಲಿರುವ ಭಾರತೀಯರಿಗೆ ವಾಲ್ಮಾರ್ಟ್ ಚಿರಪರಿಚಿತ. ನನ್ನ ಉತ್ತರ ಭಾರತೀಯ ಮಿತ್ರರೊಬ್ಬರು ಕರೆಯುವಂತೆ ಅದು ’ಬಡವರ ದೇಗುಲ, ಸಾಮಾನುಗಳನ್ನು ಖರೀದಿ ಮಾಡಿ ಅದನ್ನು ಬಳಸಿಯೂ ಬೇಡವೆನಿಸಿದರೆ ಹಿಂತಿರುಗಿಸಲು ಅನುಕೂಲ ಮಾಡಿಕೊಡುವ ಅತ್ಯಂತ ಗ್ರಾಹಕ ಸ್ನೇಹೀ ಸೂಪರ್ ಮಾರ್ಟ್’. ಆಯಿತು. ಗ್ರಾಹಕರಿಗೆ ವಾಲ್ಮಾರ್ಟ್ ವರವೆಂದಿಟ್ಟುಕೊಳ್ಳೀ. ಆದರೆ ನೀವೇ ವಾಲ್ಮಾರ್ಟಿಗೆ ಉತ್ಪಾದಕರೋ ಸರಬರಾಜುದಾರರೋ ಆದರೆ?
 
ವಾಲ್ಮಾರ್ಟ್ ಸಾಮ್ರಾಜ್ಯ
 
ವಾಲ್ಮಾರ್ಟ್ ಎಂಬ ವಿಶ್ವದ ಅತಿ ದೊಡ್ಡ ರೀಟೈಲ್ ದೈತ್ಯ ಉತ್ತರ ಅಮೆರಿಕಾ ಸೇರಿದಂತೆ ಈಗಾಗಲೇ ವಿಶ್ವದ ಹಲವಾರು ದೇಶಗಳಲ್ಲಿ ತನ್ನ ಲಾಭದಾಯಕ ವಹಿವಾಟು ನಡೆಸುತ್ತಿದೆ. ದೊಡ್ಡದೊಂದು ಮಳಿಗೆಯನ್ನು ಒದಗಿಸಿ ಸ್ಥಳೀಯ ಉದ್ಯಮಗಳಿಗೆ, ಉತ್ಪನ್ನಗಳಿಗೆ, ರೈತರಿಗೆ ಮಾರುಕಟ್ಟೆಯನ್ನು ನಿರ್ಮಿಸಿಕೊಡುತ್ತೇನೆ, ಜನರಿಗೆ ಬೇಕಾಗುವ ಎಲ್ಲ ಸರಕನ್ನೂ ಒಂದೇ ಸೂರಿನಡಿ ಮಾರುತ್ತೇನೆನ್ನುವ ಸರಳ ತತ್ವದ ಮೇಲೆ ಕೆಲಸ ಮಾಡುವ ವಾಲ್ಮಾರ್ಟ್ ಒಂದು ಜಾಣ ಸಾಮ್ರಾಜ್ಯ.
 
ವಾಲ್ಮಾರ್ಟ್ ಎಲ್ಲವನ್ನೂ ಅತ್ಯಂತ ಕಡಿಮೆ ಬೆಲೆಗೆ ಮಾರುವ ಪ್ರಾಮಿಸ್ ಮಾಡುತ್ತದೆ ಹೊರತು ಗುಣಮಟ್ಟಕ್ಕೆ ಒತ್ತು ಕೊಡುವುದಿಲ್ಲ. ತಾನು ಸಾಮಾನನ್ನು ಕೊಳ್ಳುವ ಉದ್ಯಮಗಳಿಂದ ಎಲ್ಲವನ್ನೂ ಅತ್ಯಂತ ಕಡಿಮೆ ಬೆಲೆಗೆ, ಬೃಹತ್ ಪ್ರಮಾಣಗಳಲ್ಲಿ ಕೊಳ್ಳುತ್ತದೆ. ಆಕರ್ಷಕ ಪ್ಯಾಕೇಜಿಂಗಿಗೆ ಹೆಚ್ಚು ಹಣ ಖರ್ಚು ಮಾಡುವ ಬದಲು ಸರಳವಾಗಿ ಪ್ಯಾಕ್ ಮಾಡಿ ಸರಕುಗಳ ಬೆಲೆ ಇಳಿಸಿ ಎಂದು ತಾಕೀತು ಮಾಡುತ್ತದೆ. ತನಗೆ ಸರಬರಾಜು ಮಾಡುವ ಕಂಪನಿಗಳು ಎಷ್ಟರ ಮಟ್ಟಿಗಿನ ಲಾಭ ನಿರೀಕ್ಷೆ ಮಾಡಬೇಕು, ಉತ್ಪಾದನೆಗೆ ಎಷ್ಟು ಖರ್ಚು ಮಾಡಬೇಕು ಎನ್ನುವುದನ್ನೂ ವಾಲ್ಮಾರ್ಟೇ ನಿರ್ಧರಿಸುತ್ತದೆ. ಹಾಗಾಗಿ, ವಾಲ್ಮಾರ್ಟಿನಲ್ಲಿ ಸರಕುಗಳು ಬೇರೆಲ್ಲ ಕಡೆಗಿಂತಲೂ ಅಗ್ಗಕ್ಕೆ ಸಿಗುತ್ತವೆ.
 
ಗ್ರಾಹಕರು ಇಷ್ಟಪಡದೆ ಹಿಂದಿರುಗಿಸುವ, ಡ್ಯಾಮೇಜಾಗುವ ಸರಕುಗಳ ಜವಾಬ್ದಾರಿ ನಷ್ಟದ ಹೊಣೆಯೆಲ್ಲಾ ಉತ್ಪಾದಕರದ್ದೆ ಹೊರತು ವಾಲ್ಮಾರ್ಟಿನದ್ದಲ್ಲ. ಸರಕು ಹೆಚ್ಚಾಗಿ ಉಳಿದರೆ ಅದಕ್ಕೆ ಸ್ಪರ್ಧಾತ್ಮಕ ಬೆಲೆ ಹಾಕಿ ಜನಗಳಿಗೆ ಸಾಗಹಾಕುವ ಜವಾಬ್ದಾರಿಯೂ ಉತ್ಪಾದಕರದ್ದೇ. ವಾಲ್ಮಾರ್ಟ್ ಯಾವುದರ ಗೋಜಿಗೂ ಹೋಗುವುದಿಲ್ಲ.
 
ಹಾಗಾಗಿ, ಬೆಲೆಯನ್ನು ಕಡಿಮೆ ಮಾಡಿಯೂ ಗುಣಮಟ್ಟ ಉಳಿಸಿಕೊಳ್ಳುವ ಗೋಜು ಆಯಾ ಸರಕುಗಳ ತಯಾರಕರದ್ದೇ ಹೊರತು ವಾಲ್ಮಾರ್ಟಿನದ್ದಲ್ಲ. ಅದಕ್ಕೇ ವಾಲ್ಮಾರ್ಟಿಗಾಗಿ ಸರಕು ಒದಗಿಸುವ ಉದ್ಯಮಗಳು ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಕಷ್ಟಪಡುತ್ತವೆ, ಕಾರ್ಮಿಕರಿಗೆ ಉತ್ತಮ ಕೂಲಿ ಅಥವಾ ಸೌಲಭ್ಯಗಳನ್ನು ಕೊಡುವಲ್ಲಿ ಹಣ ಉಳಿಸುತ್ತವೆ. ಇಲ್ಲವೇ ತಮ್ಮ ಉದ್ಯಮಗಳನ್ನು ಕಡಿಮೆ ಕೂಲಿಗೆ ದುಡಿಮೆಗಾರರು ಸಿಗುವಲ್ಲಿಗೆ ಸ್ಥಳಾಂತರಿಸುತ್ತವೆ. ಇದೇ ಕಾರಣಕ್ಕೆ ವಾಲ್ಮಾರ್ಟಿಗೆ ಸರಕು ಸರಬರಾಜು ಮಾಡುತ್ತಿರುವ ಬಹುತೇಕ ಕಂಪನಿಗಳು ಈಗ ಚೈನಾದಲ್ಲಿ ತಮ್ಮ ಕಾರ್ಖಾನೆಗಳನ್ನು ಹೊಂದಿವೆ.
 
ತಾವು ಮಾರುವ ಸ್ಥಳೀಯ ಸರಕುಗಳ ಜೊತೆಯಲ್ಲೇ ಅದೇ ಸರಕುಗಳ ತಲೆಗೆ ಹೊಡೆದಂತೆ ವಾಲ್ಮಾರ್ಟ್ ಅಥವಾ ಇನ್ನಾವುದೇ ರೀಟೈಲ್ ಮಾರುಕಟ್ಟೆಗಳು ಜನ ಕೊಳ್ಳುವ ಅತ್ಯಗತ್ಯ ವಸ್ತುಗಳ ತಮ್ಮದೇ ಒಂದು ಬ್ರಾಂಡ್ ಅನ್ನು ಸೃಷ್ಟಿಸುತ್ತವೆ. ಅತ್ಯಂತ ಕಡಿಮೆ ಬೆಲೆಗೆ ಬೇರಾವುದಾದರೂ ದೇಶದಿಂದ ಕಚ್ಚಾ ವಸ್ತುಗಳನ್ನು ಕೊಂಡು, ಅತ್ಯಂತ ಕಡಿಮೆ ಬೆಲೆಗೆ ಅದನ್ನು ಸಿದ್ಧ ವಸ್ತುಗಳನ್ನಾಗಿಸುವ ದೇಶಗಳ ಜೊತೆ ಡೀಲ್ ಮಾಡುತ್ತವೆ. ಮಿಕ್ಕೆಲ್ಲಾ ಬ್ರಾಂಡ್ಗಳಿಗಿಂತ ತಮ್ಮ ಬ್ರಾಂಡ್ ನ ಸಾಮಾನು ಕಮ್ಮಿ ಬೆಲೆಯಲ್ಲಿರುವಂತೆ ನೋಡಿಕೊಂಡು ಶೆಲ್ಫುಳಲ್ಲಿ ಇತರೆ ಸರಕುಗಳ ಜೊತೆಯಲ್ಲಿ ಅವನ್ನೂ ಮಾರಾಟಕ್ಕಿಡುತ್ತವೆ. ಜನ ಸಾಧಾರಣವಾಗಿಯೇ ಅಂತಹ ಸಾಮಾನುಗಳ ಮೊರೆ ಹೋಗುತ್ತಾರೆ. ಕಾಲಾನುಕಾಲದಲ್ಲಿ ವಾಲ್ಮಾರ್ಟ್ ಬೇರೆಲ್ಲ ಸ್ಥಳೀಯ ಬ್ರಾಂಡ್ ಗಳನ್ನೂ ಸದ್ದಿಲ್ಲದೇ ಮುಗಿಸಿರುತ್ತದೆ. ವಾಲ್ಮಾರ್ಟಿನ ಈಕ್ವೇಟ್, ಗ್ರೇಟ್ ವಾಲ್ಯೂ ಇವುಗಳ ಉದಾಹರಣೆಗಳು.
 
ವಾಲ್ಮಾರ್ಟ್ ಗೆ ಸೋಲುಂಟೇ?ಉತ್ತರ ಅಮೆರಿಕಾ, ಬ್ರಜಿಲ್, ಚೈನಾ, ಯುಕೆಗಳಲ್ಲಿ ಜಯಭೇರಿ ಹೊಡೆಯುತ್ತಿರುವ ವಾಲ್ಮಾರ್ಟ್ ಜರ್ಮನಿಯಲ್ಲಿ ನೆಲೆನಿಲ್ಲಲಾಗಲಿಲ್ಲ. ಜರ್ಮನಿಯ ಕುಶಲ ಇಂಜಿನಿಯರಿಂಗ್ ಸರಕುಗಳ ಉತ್ಪಾದಕರು, ರೈತರು, ಸರಬರಾಜು ಮಾಡುವವರು ಕಡೆಗೆ ಗ್ರಾಹಕರು ವಾಲ್ಮಾರ್ಟಿನ ಬೆದರಿಕೆ ಗೂಂಡಾಗಿರಿಗೆ ಸೊಪ್ಪು ಹಾಕಲಿಲ್ಲವಾದ್ದರಿಂದ ಅಲ್ಲಿಂದ ವಾಲ್ಮಾರ್ಟ್ ಸದ್ದಿಲ್ಲದೇ ಕಾಲುಕಿತ್ತಿತ್ತು.

ಭಾರತಕ್ಕೆ ಏನು ಬೆದರಿಕೆ?
 
ಹಲವಾರು ದೇಶಗಳೊಂದಿಗೆ ನಿರಂತರ ವಹಿವಾಟು ನಡೆಸುವ ಇಂತಹ ಕಂಪನಿಗಳು ರೀಟೈಲ್ ಮಾರಾಟದ ಹೆಸರಿನಲ್ಲಿ ಇತರೆ ದೇಶಗಳ ಸರಕುಗಳು ಭಾರತದ ಮಾರುಕಟ್ಟೆಯೊಳಗೆ ನುಸುಳಲು ಸರಾಗ ಮಾಡಿಕೊಡುತ್ತವೆ. ಹಾಗೆ ಮಾರುಕಟ್ಟೆಗೆ ಬರುವ ಸಾಮಾನು ಅನನ್ಯವಾದದ್ದಾದರೆ ಕೊಳ್ಳುಗರಿಗೆ ಸಂತೋಷವೇ. ಆದರೆ ಆ ಎಲ್ಲ ಸಾಮಾನುಗಳು ಹೊಸತು ಅಥವಾ ಅಪರೂಪದ್ದಾಗಿರುವುದಿಲ್ಲ. ದೇಶೀ ಉದ್ಯಮಗಳ ಸರಕುಗಳೊಂದಿಗೇ ಇತರೆ ದೇಶಗಳ ಅಗ್ಗದ ಸಾಮಾನುಗಳಾಗಿರುತ್ತವೆ. ಆಗ ಏಟು ಬೀಳುವುದು ದೇಶೀ ಸರಕುಗಳಿಗೆ.
ಭಾರತದ ಪಕ್ಕದಲ್ಲೇ ತನ್ನ ನೆರಳಿನಿಂದ ಭಾರತವನ್ನು ಒಂದಿಲ್ಲೊಂದು ಬಗೆಯಲ್ಲಿ ಆವರಿಸಿಕೊಳ್ಳಲು ಹದ್ದಿನ ಕಣ್ಣಿಟ್ಟಿರುವ ಚೈನಾ ತನ್ನನ್ನು ತಾನು ಕೊಳ್ಳುಗರ/ಗ್ರಾಹಕರ ಎಕನಮಿಯನ್ನಾಗಿ ಮಾತ್ರ ಇಟ್ಟುಕೊಳ್ಳದೆ ವಿಶ್ವದ ಬಲಶಾಲಿ ಉತ್ಪಾದಕನ ಸ್ಥಾನವನ್ನು ಕಾಯ್ದಿಟ್ಟುಕೊಳ್ಳುತ್ತಿದೆ. ಅದಕ್ಕೆ ಭಾರತದ ಗ್ರಾಹಕರನ್ನು ನೇರವಾಗಿಯಾದರೂ, ಯಾರ ಮೂಲಕವಾಗಿಯಾದರೂ ತನ್ನ ಸಾಮಾನುಗಳ ಗ್ರಾಹಕನನ್ನಾಗಿ ಮಾಡಿಕೊಳ್ಳುವ ಕಾತರ. ಏಕೆಂದರೆ ನಮ್ಮ ಜನಸಂಖ್ಯೆ ಚೈನಾಗೆ ತೀರ ಹತ್ತಿರದ್ದು. ಪ್ರತಿಯೊಬ್ಬ ವ್ಯಕ್ತಿ ಚೈನಾದಿಂದ ತಯಾರಾದ ಒಂದು ಹಲ್ಲುಜ್ಜುವ ಬ್ರಶ್, ಒಂದು ಟಿ ಶರ್ಟ್, ಒಂದು ಶೂ ಕೊಂಡರೂ ಸಾಕು.
 
ಅಮೆರಿಕಾ ಕೆನಡಾಗಳ ವಾಲ್ಮಾರ್ಟ್ಗಳಲ್ಲಿ ಮಾರಾಟವಾಗುವ ಸಾಮಾನುಗಳಲ್ಲಿ ಬಹುಪಾಲು ಸಿದ್ಧವಸ್ತುಗಳು ಚೈನಾದಿಂದ ತಯಾರಾಗಿ ಬಂದವು. ಇವತ್ತು ಅಮೆರಿಕನ್ ಜನತೆ ತಮ್ಮನ್ನಾವರಿಸಿರುವ ’ಮೇಡ್ ಇನ್ ಚೈನಾ’ ಸಾಮಾನುಗಳ ಬಲೆಯನ್ನು ಬೈದುಕೊಳ್ಳುತ್ತಿದ್ದಾರೆಯೇ ಹೊರತು ಅದರಿಂದ ಹೊರಬರಲಾಗದೆ ಪರದಾಡುತ್ತಿದ್ದಾರೆ. ಏಕೆಂದರೆ ಕಡಿಮೆ ದರದ ಹಾವಳಿಗೆ ಬಿದ್ದು ದಶಕಗಳಿಂದ ಈ ಎಲ್ಲಾ ಉದ್ಯಮಗಳನ್ನೂ ಚೈನಾಗೆ ಸ್ಥಳಾಂತರಿಸಲಾಗಿದೆ. ಇದನ್ನು ಮತ್ತೆ ಅಮೆರಿಕಾಗೆ ತರಬೇಕಾದರೆ ಮತ್ತೊಂದು ಬಗೆಯ ಯುದ್ಧವೇ ಆಗಬೇಕೇನೋ! ಭಾರತಕ್ಕೂ ಇದೇ ಪರಿಸ್ತಿತಿ ಬರಲಾರದು ಎಂದು ಹೇಗೆ ಹೇಳಲು ಸಾಧ್ಯ?
 
ವಾಲ್ಮಾರ್ಟ್ನಂತಹ ಬಹುರಾಷ್ಟ್ರೀಯ ರೀಟೈಲ್ ಕಂಪನಿಗಳು ತಯಾರಿಸುವ ಸಿದ್ಧ ವಸ್ತುಗಳ ಕಚ್ಚಾವಸ್ತು ಭಾರತದ್ದೇ ಆಗಿರಬೇಕು, ಕಾರ್ಮಿಕರೂ ಭಾರತದವರೇ ಆಗಿರಬೇಕೆಂದು ಭಾರತದ ಸರ್ಕಾರ ನಿರ್ಧಾರ ಮಾಡಲು ಸಾಧ್ಯವಾಗುವುದಿಲ್ಲವಾದ್ದರಿಂದ ಹೈನು ಪದಾರ್ಥ, ತರಕಾರಿ ದವಸಗಳಂತಹ ಉತ್ಪನ್ನಗಳಿಗೆ ಈ ಮುಖಾಂತರ ನೇರವಾದ ಮಾರುಕಟ್ಟೆ ಸಿಕ್ಕರೂ ಕ್ರಮೇಣ ಇತರೆ ರಾಷ್ಟ್ರಗಳಿಂದ ತಯಾರಾದ ಸರಕು ಅಥವಾ ಇನ್ನೆಲ್ಲಿಂದಲೋ ತಿರಸ್ಕೃತವಾದ ಸಾಮಾನುಗಳು ಭಾರತದ ಮಾರುಕಟ್ಟೆಯನ್ನು ತುಂಬುವುದರಲ್ಲಿ ಅನುಮಾನವಿಲ್ಲ.

ತನ್ನದೇ ನರ್ಸರಿ, ಫಾರ್ಮಸಿ, ಗ್ಯಾರೇಜು, ಸರ್ವಿಸ್ ಸ್ಟೇಷನ್, ಪೆಟ್ರೋಲ್ ಬಂಕ್ ಗಳ ಸಮಸ್ತ ಸೇನೆಯೊಂದಿಗೆ ಬರುವ ಈ ಖಾಸಗೀ ರೀಟೈಲ್ ಮಾರುಕಟ್ಟೆಗಳು ಬಂದ ಹೊಸತರಲ್ಲಿ ಸಾಕಷ್ಟು ಸಣ್ಣಸಣ್ಣ ಉದ್ಯೋಗ ಕಲ್ಪಿಸಬಹುದು. ಆದರೆ ಇವು ಜನರಿಗೆ ಖಾಯಂ ಉದ್ಯೋಗದ ಭರವಸೆ ನೀಡಲಾರವು. ತಮ್ಮ ವ್ಯಾಪಾರದಲ್ಲಿ ನಷ್ಟದ ಸೂಚನೆ ಸಿಕ್ಕ ತಕ್ಷಣ ಈ ಕಂಪನಿಗಳು ಮೊದಲು ಕತ್ತರಿ ಹಾಕುವುದು ತಮ್ಮ ಕೆಲಸಗಾರರ ಬುಡಕ್ಕೆ. ಬಳೆ ಅಂಗಡಿಗಳು, ವಿಡಿಯೋ ಕ್ಯಾಸೆಟ್ ಬಾಡಿಗೆ ಅಂಗಡಿಗಳು, ಅಗರಬತ್ತಿ-ಒಬ್ಬಟ್ಟು-ಚಿಕ್ಕಿ-ಹಪ್ಪಳಗಳ ಪುಟ್ಟ ಉದ್ಯಮಿಗಳು, ಕಾರು ಸ್ಕೂಟರು ರಿಪೇರಿ ಮಾಡುವ ಗ್ಯಾರೇಜಿನವರು, ಗಿಡಗಳ ನರ್ಸರಿ ಇಟ್ಟುಕೊಂಡು ಸ್ವಾವಲಂಬಿ ಉದ್ಯಮಿಗಳಾಗಿದ್ದವರು ಅದೆಲ್ಲವನ್ನೂ ಕಳೆದುಕೊಂಡು ಇಂತಹ ಬೃಹತ್ ರೀಟೈಲ್ ಮಾರುಕಟ್ಟೆಗಳಲ್ಲಿ ಕೆಲಸಗಾರರಾಗಿಬಿಡುತ್ತಾರೆ. ಕಾರ್ಪೋರೇಷನ್ಗಳ ಲಾಭ ನಷ್ಟದ ಆಧಾರದ ಮೇಲೆ ಇವರ ಬದುಕು ಅವಲಂಬಿತವಾಗುವ ಸ್ಥಿತಿ ನಿರ್ಮಾಣವಾಗುತ್ತದೆ.
 
ಚೈನಾದಲ್ಲಿ ಅಗ್ಗಕ್ಕೆ ಸಿಗುವ ಕಾರ್ಮಿಕರ ದುಡಿಮೆ, ಅಗ್ಗದ ಸರಕಿನ ದೆಸೆಯಿಂದ ತಮ್ಮನ್ನು ನಿರ್ನಾಮ ಮಾಡಿ ಭಾರೀ ಸಾಮ್ರಾಜ್ಯ ಕಟ್ಟಿಕೊಂಡಿರುವ ವಾಲ್ಮಾರ್ಟಿಗೆ ಅಮೆರಿಕಾದ ಅಸಂಖ್ಯಾತ ಸಣ್ಣ ಉದ್ಯಮದವರು ಹಿಡಿಶಾಪ ಹಾಕುತ್ತಾ ನಿತ್ಯ ರೋದಿಸುತ್ತಿದ್ದರೆ, ಇದೇ ವಾಲ್ಮಾರ್ಟಿನಂತಹ ಬಹುರಾಷ್ಟ್ರ‍ೀಯ ರೀಟೈಲ್ ಕಂಪನಿಗಳಿಗೆ ಭಾರತ ಬಾಗಿಲು ತೆರೆಯುವ ಯೋಚನೆ ಮಾಡುತ್ತಿದೆ. ಮಧ್ಯವರ್ತಿಗಳ ಆಟಾಟೋಪವಿಲ್ಲದೆ ರೈತರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ, ಮಾರುಕಟ್ಟೆ ಸಿಗಲು ಇಂತಹ ಬಹುರಾಷ್ಟ್ರ‍ೀಯ ರೀಟೈಲ್ ಕಂಪನಿಗಳ ಅಗತ್ಯವಿದೆಯೆಂಬಂತೆ ಪ್ರಸ್ತುತ ಸರ್ಕಾರ ಮಾತನಾಡುತ್ತಿದೆ. ಆದರೆ ಇದೇ ಬಹುರಾಷ್ಟ್ರ‍ೀಯ ಕಂಪನಿಗಳು ಕ್ರಮೇಣ ಭಾರತೀಯ ಉದ್ಯಮಗಳಿಂದ ತಯಾರಾಗುವ ಸರಕುಗಳನ್ನು ನಕಲು ಮಾಡಿ ಅಗ್ಗಕ್ಕೆ ಆ ಸರಕುಗಳನ್ನು ಬೇರಾವ ದೇಶದಲ್ಲಿಯೋ ತಯಾರಿಸಿ ಮಾರುಕಟ್ಟೆಗೆ ತಂದು ನಮ್ಮ ಉದ್ಯಮಶೀಲತೆಯನ್ನು, ಸರಕು ಮಾರುಕಟ್ಟೆಯನ್ನು ನುಂಗಿಹಾಕುವ ಸಾಧ್ಯತೆಯನ್ನು ಸರ್ಕಾರ ಸೀರಿಯಸ್ಸಾಗಿ ತೆಗೆದುಕೊಂಡರೆ ಒಳಿತು.
 
ದಲ್ಲಾಳಿಗಳ ಉಪಟಳವನ್ನು ಕಡಿಮೆ ಮಾಡಲು, ಹಣದುಬ್ಬರ-ಸರಕುಗಳ ಬೆಲೆ ಇಳಿಸಿ ಜನರಿಗೆ ಸ್ಪರ್ಧಾತ್ಮಕ ದರದಲ್ಲಿ ಮೂಲಭೂತ ಅಗತ್ಯದ ಪದಾರ್ಥಗಳನ್ನು ತಲುಪಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗದೆ ಖಾಸಗೀ ಬಹುರಾಷ್ಟ್ರ‍ೀಯ ಕಂಪನಿಗಳಿಗೆ ಮಣೆ ಹಾಕುವುದು ಸಧ್ಯಕ್ಕೆ ಅತ್ಯಾಕರ್ಷಕ ಕ್ರಮವೆನಿಸಿದರೂ ವಾಲ್ಮಾರ್ಟಿನಂತಹ ದೈತ್ಯನನ್ನು ದೇಶೀ ಮಾರುಕಟ್ಟೆಯೊಳಗೆ ಬಿಟ್ಟುಕೊಂಡರೆ ಹಳ್ಳಿ ಹಳ್ಳಿಗಳ ಪೆಟ್ಟಿಗೆ ಅಂಗಡಿಗಳು, ಪುಸ್ತಕ-ಜವಳಿ ಅಂಗಡಿಗಳಿಂದ ಈಗಿರುವ ರಿಲಯನ್ಸ್, ಬಿರ್ಲಾ, ಟಾಟಾ ಇತ್ಯಾದಿಯವರ ಮೋರ್, ಸ್ಪಾರ್, ವೆಸ್ಟ್ ಸೈಡ್ ಇತರೆ ಅಸಂಖ್ಯಾತ ದೇಶೀ ಸರಕಿನಂಗಡಿಗಳು ನೆಲ ಕಚ್ಚಲು ಸಮಯ ಬೇಕಾಗುವುದಿಲ್ಲ.  


 
ಡಿಸೆಂಬರ್ ೯ ಕ್ಕೆ ಯೂರೋಜ಼ೋನ್ ಭವಿಷ್ಯ

ಡಿಸೆಂಬರ್ ೯ಕ್ಕೆ ಯೂರೋಜ಼ೋನ್ ಸಭೆ ಸೇರಿ ನಿರ್ಣಾಯಕ ಮಾತುಕತೆ ನಡೆಸಲಿದೆ. ಬ್ರಿಟನ್, ಸ್ವಿಟ್ಜ಼ರ್ಲ್ಯಾಂಡ್, ಜರ್ಮನಿ ಇತ್ಯಾದಿ ಆರ್ಥಿಕ ಸುಭದ್ರ ದೇಶಗಳ ಪಾತ್ರ ಈಗ ಯೂರೋಜ಼ೋನ್ ನಲ್ಲಿ ಬಹುಮುಖ್ಯ. ಬ್ರಿಟನ್ ಯೂರೋ ಜೊತೆಗೇ ತನ್ನದೇ ಆದ ಪೌಂಡ್ ಅನ್ನೂ ಬಲವಾದ ಸ್ಥಾನದಲ್ಲಿಟ್ಟುಕೊಂಡು ತಾನು ಸೇಫ್ ಎಂಬಂತಿದೆ. ಬ್ರಿಟನ್ ಇಬ್ಬಗೆ-ಬಹುಬಗೆಯ ರೀತಿಗಳನ್ನಿಟ್ಟುಕೊಂಡು ಪ್ರಪಂಚವನ್ನು ಮೊಳಗಳಾಗಿ ಒಡೆದು ಆಳಿರುವ ರೀತಿ ನಮಗೆ ಹೊಸತೇನಲ್ಲ. ಈಗ ಅದರ ಬಗ್ಗೆ ಯೂರೋಪಿನ ಇತರ ಯೂರೋ ಪಾಲಕ ದೇಶಗಳಿಗೆ ಸಿಕ್ಕಾಪಟ್ಟೆ ಅಸಮಾಧಾನ. ಈಗಾಗಲೇ ಬ್ರಿಟನ್ ಯೂರೋಜ಼ೋನ್ ಕುಸಿದು ಬೀಳಲಿರುವ ಸಾಧ್ಯತೆಯನ್ನು ಪರಿಗಣಿಸಿ ತುರ್ತು ಪರಿಸ್ಥಿತಿಗೆಂಬಂತೆ ಸಿದ್ಧವಾಗತೊಡಗಿದೆ.
ನಾಳಿದ್ದು ೯ನೇ ತಾರೀಕಿನಂದು ಕೇವಲ ಮೇಲುನೋಟದ ಬೇಲ್ ಔಟ್ ಪ್ರಸ್ತಾಪಗಳನ್ನು ಮಾಡದೆ ಯೂರೋಜ಼ೋನ್ ರಾಷ್ಟ್ರಗಳು ಏನಾದರೂ ಸ್ಪಷ್ಟ ಪರಿಹಾರ ಕಂಡುಹಿಡಿದುಕೊಳ್ಳದಿದ್ದರೆ ಯೂರೋ ಜ಼ೋನ್ ಕುಸಿದು ಬೀಳುವುದರಲ್ಲಿ ಅನುಮಾನವಿರುವುದಿಲ್ಲ. ಆಗ ಉಂಟಾಗುವ ಜಾಗತಿಕ ಆರ್ಥಿಕ ಏರುಪೇರು ಹಿಂಸಾತ್ಮಕ ರೂಪಕ್ಕೂ ತಿರುಗಲಿದೆ ಎಂದು ಯೂರೋಪಿನ ಚಟುವಟಿಕೆಯನ್ನು ಅಭ್ಯಸಿಸುತ್ತಿರುವ ಮಂದಿ ಅಭಿಪ್ರಾಯ ಪಡುತ್ತಿದ್ದಾರೆ.
 
ಇತ್ತ ಪೋಲ್ಯಾಂಡ್ ನ ವಿದೇಶ ಮಂತ್ರಿ ಯೂರೋಪ್ ಎದುರಿಸುತ್ತಿರುವ ಆರ್ಥಿಕ ತೊಂದರೆಯನ್ನು ’ಪ್ರಳಯಾಂತಕ ಪ್ರಮಾಣದ ಬಿಕ್ಕಟ್ಟು’ ಎಂದಿದ್ದಾರೆ. ಈಗ ಯೂರೋಪಿನ ಕೆಲವು ದೇಶಗಳು ಗ್ರೀಸ್, ಇಟಲಿ, ಸ್ಪೇನ್ ನಂತಹ ಅತಿಯಾದ ತೊಂದರೆಯಲ್ಲಿರುವ ದೇಶಗಳಿಗೆ ಒದಗಿಸಲು ಮುಂದಾಗಿರುವ ಹಣಕಾಸಿನ ನೆರವಿನ ’ಬೇಲ್ ಔಟ್’ ಅನ್ನು, ಸಮಸ್ಯೆಯನ್ನು ಸರಿಯಾಗಿ ಎದುರಿಸದೇ ಅದನ್ನು ಇನ್ನೂ ಘನೀಕರಿಸಿ ಮುಂದಕ್ಕೆ ತಳ್ಳುತ್ತಿರುವ ಬೇಜವಾಬ್ದಾರಿಯ ಕ್ರಮವೆಂದು ಟೀಕಿಸಿದ್ದಾರೆ.
ಚಾಣಕ್ಯನಂತವರು ಮತ್ತೆ ಜನ್ಮ ಪಡೆದು ಬಂದರೂ ಸುಧಾರಿಸಲಾಗದ ಬಿಡಿಸಲಾಗದ ಆರ್ಥಿಕ ಗೋಜಲಿನಲ್ಲಿ ಯೂರೋಜ಼ೋನ್ ನ ಎಲ್ಲಾ ದೇಶಗಳು ಸಿಕ್ಕಿಹಾಕಿಕೊಂಡಿವೆ. ತಮ್ಮ ತಮ್ಮ ದೇಶಗಳ ಕರೆನ್ಸಿಯನ್ನು ಅನಾಮತ್ತಾಗಿ ತೊರೆದು ಯೂರೋವನ್ನೇ ತಮ್ಮ ಅಧಿಕೃತ ಚಲಾವಣೆಯ ಹಣವನ್ನಾಗಿ ಮಾಡಿಕೊಂಡಿದ್ದ ದೇಶಗಳಿಗೀಗ ಪದೇ ಪದೇ ಮರ್ಮಾಘಾತ. ಹಿಂದೆಯೇ ಹೊರಬೀಳಬೇಕಿದ್ದ ಬಿಕ್ಕಟ್ಟನ್ನು ಇಲ್ಲಿಯವರೆಗೂ ಜಾಣತನದಿಂದ ತಡೆಯಲಾಗಿದ್ದರೂ ಈಗ ಅದು ಯಾರ ಹಿಡಿತಕ್ಕೂ ಸಿಗದಂತಾಗಿದೆ.
ರಾಷ್ಟ್ರವೊಂದರ ಹಣಕಾಸಿನ ಚಟುವಟಿಕೆಗಳ ಸಾರ್ವಭೌಮತ್ವವನ್ನು ಆಯಾ ರಾಷ್ಟ್ರದಿಂದ ಬೇರಾವುದೋ ಖಾಸಗೀ ಬ್ಯಾಂಕು-ಕಾರ್ಪೊರೇಷನ್ ಅಥವಾ ಹೊರಗಿನ ಸಂಸ್ಥೆಗಳಿಗೆ ಒಪ್ಪಿಸಿದಾಗ ಈ ರೀತಿಯ ಬಿಕ್ಕಟ್ಟೀನ ಪರಿಸ್ಥಿತಿಗಳು ಉಂಟಾಗುತ್ತವೆಂದು ಇತ್ತೀಚಿನ ಹಲವಾರು ಅಮೆರಿಕನ್ ಉದಾಹರಣೆಗಳು ವಿಶದ ಪಡಿಸಿವೆ. ಈಗ ಯೂರೋಜ಼ೋನ್ ಏನಾಗಲಿದೆಯೋ ನೋಡಬೇಕಿದೆ.
 
 

 ನಮ್ಮ ದೇಹದ ಜೀನ್(ವಂಶವಾಹಿ)ಗಳೂ ಖಾಸಗಿಯವರ ಪೇಟೆಂಟ್! ಇದೂ ಅಮೆರಿಕಾ!!

 
ಅಮೆರಿಕಾದ ಜಿಲ್ಲಾ ನ್ಯಾಯಾಲಯವೊಂದು ಮನುಷ್ಯರ ಜೀನ್ (ವಂಶವಾಹಿ) ಗಳನ್ನು ಪೇಟೆಂಟ್ ಮಾಡಿಕೊಳ್ಳುವ ಖಾಸಗಿ ಕಂಪನಿಯೊಂದರ ಕ್ರಮವನ್ನು ತಳ್ಳಿ ಹಾಕಿತ್ತು. ಮನುಷ್ಯರ ಜೀನ್ ಗಳು ಯಾವುದೇ ಕಂಪನಿ ಅಥವಾ ಖಾಸಗಿಯವರ ಸ್ವತ್ತಲ್ಲ ಎಂದು ಸ್ವಸ್ಥವಾದ ತೀರ್ಮಾನ ಕೊಟ್ಟಿತ್ತು. ಆದರೆ ಯು ಎಸ್ ಕೋರ್ಟ್ ಫಾರ್ ದ ಫ಼ೆಡೆರಲ್ ಸರ್ಕಿಟ್ US Court of Appeals for the Federal Circuit ಎಂಬ ಘನತೆವೆತ್ತ ಮಹಾನ್ ಕೋರ್ಟೊಂದು ಕೆಲವು ಸ್ವಾಭಾವಿಕವಲ್ಲದಿರುವ ಮ್ಯೂಟೇಟೆಡ್ ಅಥವಾ ಪರಿವರ್ತಿತ ಜೀನ್ ಗಳನ್ನು ಖಾಸಗಿಯವರು, ಫಾರ್ಮಾಸುಟಿಕಲ್ ಕಂಪನಿಗಳು ತಮ್ಮದೆಂದು ಪೇಟೆಂಟ್ ಮಾಡಿಕೊಳ್ಳಬಹುದೆಂದು ಅದೇಶ ಹೊರಡಿಸಿದೆ. 
 
ಮೈರಾಯಿಡ್ ಜೆನೆಟಿಕ್ಸ್ ಅಂಡ್ ಲ್ಯಾಬೊರೇಟರಿಸ್ ಎಂಬ ಸಾಲ್ಟ್ ಲೇಕ್ ಸಿಟಿಯ ಕಂಪನಿಯೊಂದು ಮಾನವ ವಂಶವಾಹಿಗಳನ್ನು (ಜೀನ್) ತೆಗೆದುಕೊಂಡು ಅದನ್ನು ಬಿಆರ್ಸಿಎ-೧ ಮತ್ತು ಬಿಆರ್ಸಿಎ-೨ ಎನ್ನುವ ಎರಡು ಜೀನ್ ಗಳಾಗಿ ತಾನು ಜೆನೆಟಿಕಲಿ ಸ್ವಲ್ಪ ಬದಲಾಯಿಸಿದ್ದರಿಂದ ಅವುಗಳ ಮೇಲೆ ತನ್ನ ಸಾಮ್ಯವಿರಬೇಕೆಂದು ಪೇಟೆಂಟ್ ಕೇಳಿತ್ತು. ಈ ಎರಡೂ ಜೀನ್ಗಳೂ ಸ್ತನದ ಕ್ಯಾನ್ಸರ್ ನಿಂದಾಗುವ ಅನಾಹುತಗಳನ್ನು ಪತ್ತೆ ಹಚ್ಚುವಲ್ಲಿ ಬಹಳ ಸಹಾಯ ಮಾಡುತ್ತವೆ ಎಂದು ನಂಬಲಾಗಿದೆ. ಈ ಪೇಟೆಂಟ್ ಕ್ರಮವನ್ನು ವಿರೋಧಿಸಿ ಅಮೆರಿಕಾದ ಪೌರ ಸ್ವಾತಂತ್ರ ಸಂಘವೊಂದು ಪ್ರತಿ ಸವಾಲನ್ನು ಹಾಕಿತ್ತು. ಸಾಕಷ್ಟು ವೈದ್ಯಕೀಯ ಸಂಘಟನೆಗಳೂ ಆಕ್ಷೆಪಿಸಿದ್ದವು. ಆದರೂ ಈಗ ಮೈರಾಯಿಡ್ ಗೆದ್ದಿದೆ!!
 
ಈಗ ಬಿಆರ್ಸಿಎ-೧ ಮತ್ತು ಬಿಆರ್ಸಿಎ-೨ ಜೀನ್ ಗಳ ಸ್ವಾಮ್ಯತೆಯ ಪೇಟೆಂಟ್ ಮೈರಾಯಿಡ್ ಎನ್ನುವ ಲ್ಯಾಬೊರೇಟರಿಯ ಕೈಯ್ಯಲ್ಲಿರುವುದರಿಂದ ಯಾವುದೇ ಡಾಕ್ಟರ್ ಅಥವಾ ವಿಜ್ನಾನಿ ಈ ಎರಡು ಜೀನ್ ಗಳನ್ನೊಳಗೊಂಡ ಅಧ್ಯಯನವನ್ನು ಮಾಡಬೇಕಾದರೆ ಮೈರಾಯಿಡ್ ನ ಅನುಮತಿ ಪಡೆಯಬೇಕು! ರಾಯಲ್ಟಿಯಾಗಿ ಮೈರಾಯಿಡ್ ಗೆ ಸಾಕಷ್ಟು ಹಣ ಕೊಡಬೇಕು!!
ಅಸಂಖ್ಹ್ಯಾತವಾಗಿರುವ ಮನುಷ್ಯನ ಜೀನುಗಳನ್ನು ಯಾರು ಕಂಡುಹಿಡಿದು ವೈಜ್ನಾನಿಕ ಜಗತ್ತಿಗೆ ಕೊಡುತ್ತಾರೋ ಅವರೇ ಆ ಜೀನಿನ ಸ್ವಾಯತ್ವ ಹೊಂದುವಲ್ಲಿ ಅರ್ಹರಾಗುತ್ತಾರೆ. ಹೀಗೆ ಮಾಡುವುದರಿಂದ ಲ್ಯಾಬೊರೇಟರಿಗಳು ಸ್ಪರ್ಧಾತ್ಮಕವಾಗಿ ಹೊಸ ಹೊಸ ವಂಶವಾಹಿಗಳನ್ನು ಕಂಡುಹಿಡಿಯುತ್ತವೆ, ಸೃಷ್ಟಿ ಮಾಡುತ್ತವೆ ಎಂಬ ಹೇಳಿಕೆಯನ್ನು ಮೈರಾಯಿಡ್ ನ ವಕೀಲರ ತಂದ ಹೇಳಿಕೆ ಕೊಟ್ಟಿದೆ.
 
ಇನ್ನು ಮುಂದೆ ಈ ಎರಡು ಜೀನ್ ಗಳನ್ನು ಉಪಯೋಗಿಸಿ ಸ್ತನ ಕ್ಯಾನ್ಸರಿಗೆ ಔಷಧವನ್ನಾಗಲೀ, ಕಾರಣವನ್ನಾಗಲೀ ಕಂಡುಹಿಡಿಯಲು ಸಾಕಷ್ಟು ಹಣವಿರುವ ಕಂಪನಿಗಳೇ ಮುಂದೆ ಬರಬೇಕು ಇಲ್ಲವೇ ಅದರ ಹೊಣೆಯನ್ನು ಮೈರಾಯಿಡ್ ಗೇ ಬಿಡಬೇಕು.
ಅಮೆರಿಕದಲ್ಲಿ ಈಗಾಗಲೇ ಸ್ಥನ ಕ್ಯಾನ್ಸರ್ ನೆಗಡಿಯಂತೆ ಹರಡುತ್ತಿದೆ. ಅದಕ್ಕೆ ಕ್ಷಿಪ್ರ ಪರಿಹಾರ ಹುಡುಕಲು ಅನುವು ಮಾಡಿಕೊಡುವ ಬದಲು ಜೀನ್ ಗಳನ್ನೇ ಮಾರಾಟಕ್ಕೆ ಇಟ್ಟರೆ?? ಇಲ್ಲಿನ ಮಹಿಳೆಯರ ಪಾಡು ಯಾಕೋ ಸರಿಯಿಲ್ಲ!!!
 
 

 ಜೈಲಿಗೆ ನೂಕಲ್ಪಡುತ್ತಿರುವ ಆಕ್ಯುಪೈ ಚಳುವಳಿಗಾರರು...

 
 ಜ಼ುಕೋಟಿ ಪಾರ್ಕ್, ಲಾಸ್ ಆಂಜಲೀಸ್, ಓಕ್ ಲ್ಯಾಂಡ್ ಇತ್ಯಾದಿ ಹಲವಾರು ಕಡೆಯ ಆಕ್ಯುಪೈ  ವಾಲ್ ಸ್ಟ್ರೀಟ್ ಚಳುವಳಿಗಾರರನ್ನು ಪೋಲಿಸರು ಒಂದಿಲ್ಲೊಂದು ಕಾರಣಗಳನ್ನು ಒಡ್ಡಿ ಜೈಲು ತುಂಬುತ್ತಿದ್ದಾರೆ. ಈ ಚಳುವಾಳಿಗಾರರು ಒಂದೆಡೆ ಕಲೆತಿರುವುದರಿಂದ ಆ ನಗರಗಳಲ್ಲಿ ಕಳ್ಳತನ ಸುಲಿಗೆಗಳು ಹೆಚ್ಚಾಗುತ್ತಿವೆ ಎಂದು ಒಂದು ಕಾರಣ ಕೊಟ್ಟರೆ, ಚಳಿಯಲ್ಲಿ ಚಳುವಳಿಕಾರರನ್ನು ಹೀಗೆ ಹೊರಗೆ ಬಿಟ್ಟರೆ ಅವರ ಜೀವಕ್ಕೆ ಅಪಾಯವಾದಲ್ಲಿ ಸರ್ಕಾರ ಅದರ ಹೊಣೆಗಾರನಾಗುತ್ತದೆ, ಆಗ ಅರಾಜಕತೆಯಾಗುತ್ತದೆ ಎಂಬುದೂ ಕಾರಣಗಳಲ್ಲೊಂದು. ಆದರೂ ಚಳುವಳಿಗಾರರು ಎದೆಗುಂದುತ್ತಿಲ್ಲ. ಅಮೆರಿಕಾದ ಉತ್ತರ ರಾಜ್ಯಗಳಲ್ಲಿ ಈಗಾಗಲೇ ಹಿಮಪಾತವಾಗಿ ಹವಾಮಾನ ಬಹಳ ಪ್ರತೀಕೂಲದ್ದಾಗಿದ್ದರೂ ಚಳುವಳಿಕಾರರು ಒಂದಿಲ್ಲೊಂದು ರೀತಿಯಲ್ಲಿ ಸಭೆ, ಸತ್ಯಾಗ್ರಹ ಮಾಡುತ್ತಿದ್ದಾರೆ. ಈಗ ಎಲ್ಲೆಡೆ ಮಹಾತ್ಮಾ ಗಾಂಧಿಯವರ ’ಸತ್ಯಾಗ್ರಹ’ ಪದ ಮೊಳಗುತ್ತಿದೆ.

ಪೋಲೀಸರ ದೌರ್ಜನ್ಯ, ನೂಕುನುಗ್ಗಾಟ, ಏಟುಗಳು ಹಲವಾರು ಕಡೆಗಲಲ್ಲಿ ಕಂಡುಬಂದಿದ್ದರೂ ’ಪೋಲೀಸರೇ...ನೀವು ನಮ್ಮಂತೆ ೯೯% ಗೆ ಸೇರಿದವರು, ಬಡವರು. ನಮ್ಮೊಡನೆ ಸೇರಿ’ ಎಂದೇ ಚಳುವಳಿಗಾರರು ತಮ್ಮ ಕೆಲಸ ಮುಂದುವರಿಸಿದ್ದಾರೆ.
 

 
 


  
 
 
 
 
Copyright © 2011 Neemgrove Media
All Rights Reserved