ತಿಂಗಳ ಮಾಮನ ಬೆಳಕು ಹಾಲಾದರೆ

 
 
(ಸಂಗ್ರಹ)
 
 
ಒಂದೂರಲ್ಲೊಬ್ ಗೌಡಿದ್ದ. ದೊಡ್ಡ ಗೌಡ. ಒಳ್ಳೇನು. ಆದ್ರೆ ಭಾರೀ ಮುಂಗೋಪಿ. ಅವ್ನಿಗೆ ಐದು ಜನ ಗಂಡ್ ಮಕ್ಕಳು. ಎಲ್ಲರಿಗೂ ಒಳ್ಳೆ ಕಡೆ ಸಂಬಂಧ ಮಾಡಿಸಿ ಮದಿ ಮಾಡಿಸಿದ್ದ. ಎಲ್ಲಾ ಸೊಸೆರು ಅತ್ತೆ ಮಾವಯ್ಗೆ ಮರ್ಯಾದೆ ಮಾಡರು. ಒಳ್ಳೆ ಗೇಮೆ ಮಾಡರು.
ಒಂದು ರಾತ್ರಿ ಗೌಡ, ಅವನ ಹೆಂಡ್ತಿ, ಮಕ್ಕಳು, ಸೊಸೇರು ಎಲ್ಲರೂ ಹಟ್ಟಿಲಿ ಕೂತಿದ್ರು. ಸೊಸೇರು ತಡಣಿ ಕಾಳು ಬಿಡಿಸ್ತಿದ್ರು. ಗಂಡ್ ಮಕ್ಕಳು ಅವರವರ ಕೆಲಸ ಮಾಡ್ತಿದ್ರು. ಆ ದಿನ ತಿಂಗಳ ಮಾಮನ ಬೆಳಕು ಹಟ್ಟಿಲೆಲ್ಲಾ ಬಿದ್ದು ಹಾಲಂಗೆ ಚೆಲ್ಲಾಡ್ತಿತ್ತು. ಸೊಸೇರು ಕಾಳು ಬಿಡಿಸ್ತಾ ಇನ್ನೇನಾರಾ ಕೆಲಸ ಇದ್ದಿದ್ರೆ ಈ ಹಾಲಿನಂತಾ ತಿಂಗಳ ಬೆಳಕಿನಲ್ಲೇ ಎಲ್ಲಾ ಮಾಡಿ ಮುಗಿಸಿಬಿಡಬಹುದಿತ್ತು ಅಂತ ಮಾತಾಡಿಕೊಂಡರು. ಕಿರಿ ಸೊಸೆ ಅಕ್ಕಂದಿರು ಹೇಳಿದ್ದು ಕೇಳಿ ಸುಮ್ಮನೆ ಕೂತಿದ್ದವಳು ’ಹಂಗೇನಾರು ಈ ತಿಂಗಳ ಬೆಳಕು ಹಾಲಾಗಿದ್ರೆ ಹಾಲಲ್ಲೇ ಉಣ್ಣಬೋದಿತ್ತು, ಹಾಲಲ್ಲೇ ಕೈ ಕಾಲು ತೊಳೆದುಕೊಂಡು ಹಾಲಲ್ಲೇ ನೀರಾಕೋಬೋದಿತ್ತು ಬಿಡ್ರವ್ವಾ’ ಎಂದಳು.
 
ಅಲ್ಲೇ ಎಲೆ ಅಡಿಕೆ ಹಾಕೊತಾ ಕೂತಿದ್ದ ಗೌಡ ಸೊಸೆಯಂದಿರ ಮಾತು ಕೇಳುತ್ತಿತ್ತು. ’ಎಲಾ ಇವಳಾ! ನನ್ನ ನಾಕು ಸೊಸೇರೂ ಇನ್ನೂ ಹೆಚ್ಚು ಗೇಯುವ ಯೋಚನೆ ಮಾಡಿದರೆ ಇವಳು ಉಂಡುಕೊಂಡು ಮೀಯುವ ಯೋಚನೆ ಮಾಡುತ್ತಾಳಲ್ಲಾ’ ಅಂತ ಅವನಿಗೆ ಕಿರಿ ಸೊಸೆ ಮೇಲೆ ಸರ್ರನೆ ಕೋಪ ಬಂತು. ಇಂತವರಿದ್ರೆ ಎಷ್ಟು ಗೇದ್ರೂ ಸಾಲಲ್ಲ ಎಲ್ಲಾ ತಿಂದು ಉಟ್ಟೇ ಮುಗಿಸಿಬಿಡ್ತಾರೆ ಅಂತ ಕಿರಿಸೊಸೆಯನ್ನು ಕರೆದು ಅವಳಿಗೆ ನಾಕು ಬಡಿದ. ಗೌಡನ ಹೆಂಡ್ತಿ ಅವನನ್ನು ತಡೆಯಲು ಬಂದಳು. ಗೌಡ ಅವಳಿಗೂ ನಾಕು ಬಿಗಿದ. ’ನಾ ಏನು ಮಾಡಿದೆ ಮಾವಯ್ಯಾ’ ಅಂತ ಕಿರಿ ಸೊಸೆ ಅತ್ತಳು. ’ಇನ್ನೂ ಗೊತ್ತಾಗಿಲ್ಲವಾ ನಿನಗೆ’ ಅಂತ ಆ ಗೌಡ ಕಿರಿಸೊಸೆಯನ್ನು ಮನೆಯಿಂದ ಆಚೆ ಒದ್ದೋಡಿಸಿದ.
 
ಹೆಂಡತಿಯನ್ನು ಒದ್ದು ಮನೆಯಾಚೆ ಹಾಕಿದಾಗ ಅವಳ ಗಂಡ ಅವಳ ಹಿಂದೆ ಬಂದುಬಿಟ್ಟ. ’ಬೇಡ ಕನ್ರೀ...ನೀವು ಬರಬ್ಯಾಡಿ. ನಿಮ್ಮಪ್ಪನ ಜೊತೆ ಇದ್ದು ಒಳ್ಳೆ ಮಗ ಅನ್ನಿಸ್ಕಳಿ. ನಾನು ಯಾವುದಾದರೂ ಕಾಡಿಗೆ ಸೇರ್ಕತೀನಿ’ ಎಂದು ಅವನನ್ನು ಅತ್ತೂ ಕರೆದು ಒಪ್ಪಿಸಿ ಹಿಂದಕ್ಕೆ ಕಳಿಸಿದಳು.
ಹೊರಗೆ ಹಾಲಿನಂತಾ ತಿಂಗಳ ಬೆಳಕಿತ್ತು. ಕಿರಿ ಸೊಸೆ ಅಳುತ್ತಾಲೇ ನಡೆದೂ ನಡೆದೂ ದೊಡ್ದ ಅಡವಿ ಸೇರಿದಳು. ಅಲ್ಲೊಂದು ದೊಡ್ಡ ಅರಳಿ ಮರವಿತ್ತು. ಈಗೇನು ಮಾಡದು ಅಂತ ಗೊತ್ತಾಗದೆ ಅಲ್ಲೇ ಅಳುತ್ತಾ ಕೂತಳು.
 
ಅವತ್ತು ಪಾರ್ವತಿ ಪರಮೇಶ್ವರ ನಂದಿ ಮೇಲೆ ಕೂತು ಭೂಮಿ ಸುತ್ತಕೆ ಬರ್ತಿದ್ದರು. ಇಬ್ಬರೂ ಮಾತಾಡಿಕೋತಾ ಬರುತ್ತಿರುವಾಗ ಏನೋ ಸದ್ದು ಕೇಳಿದಂಗಾಗಿ ಪಾರ್ವತಿ ’ತಡೀರಿ. ಅದೇನೋ ಸದ್ದು ಕೇಳ್ತಾದೆ’ ಎಂದಳು. ಇಬ್ಬರೂ ಆಲಿಸಿದರು. ಅವರಿಗೆ ಕಿರಿ ಸೊಸೆ ಅಳುವುದು ಕೇಳಿಸಿತು. ನಂದಿನ ಅಲ್ಲೇ ನಿಲ್ಲಿಸಿ ಸುಮ್ಮನೆ ನರಮನುಷ್ಯರಂಗೆ ವೇಷ ಬದಲಿಸಿಕೊಂಡು ಅವಳಲ್ಲಿಗೆ ಬಂದು ’ಯಾಕವ್ವಾ ಇಷ್ಟೊತ್ತಲ್ಲಿ ಇಲ್ಲಿ ಕೂಗ್ತಿದ್ದೀಯಾ’ ಎಂದರು.
’ಏನು ಏಳಲವ್ವಾ...ಇವತ್ತು ತಿಂಗಳ ಬೆಳಕು ಹಾಲಂಗೆ ನಮ್ಮಟ್ಟೀಲಿ ಚೆಲ್ಲಿತ್ತಾ...ನಮ್ಮಕ್ಕಂದೀರು ಹಿಂಗಂದ್ರಾ...ನಾನು ಹಿಂಗಂದ್ನಾ...’ ಅಂತ ಕಿರಿ ಸೊಸೆ ತನ್ನ ಕತೆನೆಲ್ಲಾ ಹೇಳಿಕೊಂಡು ಗೋಳಾಡಿದಳು. ’ಮತ್ತೆ ಅಪ್ಪನತಕೆ ಯಾಕವ್ವಾ ಓಗ್ಲಿ ನಾನು? ನನಗ್ಯಾರವರೇ ಈಗ’ ಅಂತ ಸಂಕಟ ಪಟ್ಟಳು.
ಪಾರ್ವತಿ ಅಮ್ಮ ತಾನೇ. ಮಗಳ ಸಂಕಟ ನೋಡಿ ಕರುಳು ಹಿಂಡಿದಂಗಾಯ್ತು. ’ಅದ್ಯಾಕೆ ಹಂಗಂತಿಯಾ...ತಡಿಯವ್ವಾ. ಏನಾರ ಮಾಡನ’ ಅಂದು ಶಿವನಲ್ಲಿಗೆ ಹೋದಳು. ಶಿವ ಪಾರ್ವತಿ ಮಾತಾಡಿಕೊಂಡು ತಮ್ಮ ಶಕ್ತಿಯಿಂದ ಅಲ್ಲೇ ದೂರದಲ್ಲಿ ಒಂದು ದೊಡ್ಡ ಮನೆ ಕಟ್ಟಿದರು. ಆ ಮನೆಯೊಳಗೆ ಒಂದು ಬಾವಿ ತೋಡಿದರು. ಆ ಬಾವಿಯಲ್ಲಿ ಬರೀ ಹಾಲು! ಆಮೇಲೆ ಆ ಹುಡುಗಿಯನ್ನು ಅಲ್ಲಿಗೆ ಕರೆದುಕೊಂಡು ಬಂದರು.
 
’ನೋಡವ್ವಾ ನೀನು ನಮ್ಮ ಮಗಳಂತೆ. ಇದು ನಮ್ಮ ಮನೆ. ಇಲ್ಲಿ ನೀನು ವಾಸ ಮಾಡ್ಕಂಡಿರು. ಇಲ್ಲೀದು ಒಂದು ನೇಮ ಇದೆ. ಇಲ್ಲಿ ಎಲ್ಲಾ ಕೆಲಸಾನೂ ಹಾಲಲ್ಲೇ ಆಗಬೇಕು. ಅಡಿಗೆ ಮಾಡುವುದು, ಸ್ನಾನ ಮಾಡುವುದು, ಬಟ್ಟೆ ಒಗೆಯುವುದು, ಗಿಡಕ್ಕೆ ನೀರು ಎಲ್ಲದಕ್ಕೂ ಹಾಲನ್ನೇ ಹಾಕಬೇಕು. ಹಂಗೇ ಈ ಕಾಡಲ್ಲಿ ಓಡಾಡಕೆ ಬರೋ ಎಲ್ಲರ್ಗೂ ಬಾಯಾಸರೆಗೆ ಕುಡಿಯಲು ನೀನು ಹಾಲು ಕೊಡಬೇಕು’ ಅಂತ ಹೇಳಿ ಪಾರ್ವತಿ ಆ ಹುಡುಗೀನ ಮನೆಗೆ ಬಿಟ್ಟಳು.
ಕಿರಿ ಸೊಸೆ ಹೇಳಿದ ಎಲ್ಲಾ ಕೆಲಸ ಮಾಡಿಕಂಡು ಅಲ್ಲೇ ಇದ್ದಳು. ಅರಳೀ ಕಟ್ಟೆ ಹತ್ರ ಕೂತ್ಕಂಡಿದ್ದು ಕಾಡಿಗೆ ಸೌದೆ ಕಡಿಯಲು ಬರೋರಿಗೆ ಬಾಯಾರಿಕೆಗೆ ಹಾಲು ಕೊಡೋಳು.
 
ಹಿಂಗಿರುವಾಗ ಆ ಗೌಡನ ಮನೆಗೆ ದರಿದ್ರ ಬಂತು. ಭೂಮಿ ರಾಸೆಲ್ಲಾ ನಾಶವಾಗಿ ಊಟಕ್ಕೂ ತೊಂದ್ರೆಯಾಗಿಬಿಡ್ತು. ಆಗ ಗೌಡನ ಮನೇರೆಲ್ಲಾ ಕಾಡಿಗೆ ಹೋಗಿ ಸೌದೆ ಕಡಿದು ತಂದು ಮಾರಲು ಶುರು ಮಾಡಿದರು. ಒಂದಿನ ಅವಳ ಹಿರಿಯಕ್ಕಂದಿರು ಸೌದೆ ಆರಿಸಲು ಬಂದಿದ್ದವರು ಬಾಯಾರಿ ಅರಳೀಕಟ್ಟೆ ಹತ್ರ ಬಂದು ’ಆಸರೆ ಕೊಡವ್ವಾ’ ಅಂದ್ರು. ಅವಳು ಅವರೆಲ್ಲರಿಗೂ ಹೊಟ್ಟೆ ತುಂಬುವಷ್ಟು ಹಾಲು ಕೊಟ್ಟಳು. ಅವರಿಗೆ ಇವಳು ನಮ್ಮ ತಂಗಿ ಅಂತ ಗೊತ್ತಾಗಲೇ ಇಲ್ಲ.
ಮರುದಿನ ಮತ್ತೆ ಅವರು ಅಲ್ಲಿಗೇ ಆಸರಿಗೆ ಬಂದ್ರು. ಇವಳು ಅವರಿಗೆ ಹಾಲು ಕೊಟ್ಟು ಅವರ ಕಥೆ ಕೇಳಿದಳು. ಅವರು ’ಸೌದೆ ಆರಿಸಿ ಜೀವನ ಮಾಡ್ತಿದೀವಿ ಕಣವ್ವಾ...ನಮ್ಮತ್ತೆ ಮಾವನಿಗೆ ವಯಸ್ಸಾಗಿದೆ, ಕಿರಿ ಮೈದ ಹುಚ್ಚು ಹಿಡಿದಂಗಾಗಿ ಮನೇಲೇ ಅವ್ನೆ...ನಮ್ಮ ಗಂಡಸರೂ ಸೌದೆಗೆ ಹೋಗ್ತರೆ’ ಅಂದ್ರು. ’ನಮ್ಮನೇಲಿ ತುಂಬಾ ಕೆಲ್ಸ... ಗೇಯೋರು ಯಾರೂ ಇಲ್ಲ. ನಿಮ್ಮ ಕಿರಿ ಮೈದನ್ನ ಇಲ್ಲಿಗೆ ಗೇಯಕೆ ಕಳಿಸಿಕೊಡಿ’ ಅಂತ ಕಿರಿ ಸೊಸೆ ಕೇಳಿದಳು.
 
ಮಾರನೇ ದಿನ ಅವರು ಕಿರಿ ಮೈದ್ನನನ್ನು ಕರೆದುಕೊಂಡು ಬಂದರು. ಕಿರಿ ಸೊಸೆ ಅವನಿಗೆ ನಮ್ಮನೇಳಿ ಕೆಲ್ಸ ಮಾಡಿಕೊಂಡಿರಿ ಅಂತ ಉಳಿಸಿಕೊಂಡಳು. ಅದರ ಬದಲಿಗೆ ಅಕ್ಕಂದಿರಿಗೆ ಮೂಟೆ ತುಂಬಾ ರಾಗಿ, ಮೆಣಸಿನಕಾಯಿ, ಉಪ್ಪು ಎಲ್ಲಾ ಕೊಟ್ಟು ಕಳಿಸಿದಳು.
 
ಮತ್ತೊಂದು ದಿನ ಅವರು ಅಲ್ಲಿಗೆ ಆಸರಿಗೆ ಬಂದಾಗ ’ನಿಮ್ಮತ್ತೆ ಏನು ಮಾಡ್ತರೆ? ನಮ್ಮನೇಲಿ ತುಂಬಾ ಕೆಲಸ... ಅವ್ರನ್ನೂ ಕರೆದುಕೊಂಡು ಬನ್ನಿ’ ಅಂದಳು. ಅವರು ಹಂಗೇ ಮಾಡಿದರು. ಇವಳು ಅತ್ತೆಯನ್ನೂ ತನ್ನ ಮನೆಗೆ ಸೇರಿಸಿಕೊಂಡು ಅಕ್ಕಂದಿರಿಗೆ ಇನ್ನೂ ದವಸ, ಅರಿವೆ ಕೊಟ್ಟು ಕಳಿಸಿದಳು.

ಮನೇಲಿ ತನ್ನ ಅತ್ತೆ ಗಂಡನನ್ನು ಕೂರಿಸಿಕೊಂಡು ’ನಾನೇ ನಿಮ್ಮ ಕಿರಿ ಸೊಸೆ. ನನಗೆ ಯಾರೋ ಪುಣ್ಯಾತ್ಮರು ಈ ಮನೆ ನೋಡ್ಕಂಡಿರುವ ಕೆಲಸ ಕೊಟ್ಟಿದ್ದಾರೆ’ ಅಂತ ಹೇಳಿಕಂಡ್ಳು. ಅವಳ ಗಂಡ ಅತ್ತೆ ನಮ್ಮ ಹುಡುಗಿ ಸಿಕ್ಳು ಅಂತ ಸಂತೋಶ ಪಟ್ಟರು. ಜೊತೆಯಲ್ಲೇ ಇದ್ದರು.

ಗೌಡ, ಅವನ ಮಕ್ಕಳು, ಹಿರಿ ಸೊಸೇರು ಬರೀ ಗೇದುಕೊಂಡು ಆಗಾಗ ಇವರತ್ರ ಆಸರೆ ಕೇಳಿಕೊಂಡು ಬದುಕಿದ್ರು.
  
 
 
 
 
 
 
Copyright © 2011 Neemgrove Media
All Rights Reserved