ಅಂಗಳ      ಮುಗುಳು ಮುಕ್ಕಳಿಸಿ
Print this pageAdd to Favorite
 
 
 

ಗಂಟು

 
 
ಲತಾ ರಾಬಿನ್ಸನ್

(ಇದು ಗೆಳತಿ ಲತಾರ ಮೊದಲ ಕವಿತೆ! ಕಟ್ಟಿಟ್ಟು ಕಟ್ಟಿಟ್ಟು ಸಾಕಾಗಿದೆ ಕಣ್ರೀ ಎನ್ನುತ್ತಾ ಹನಿ ತುಳುಕಿಸುವ ಪ್ರಯತ್ನ ಮಾಡುತ್ತಿರುವ ಲತಾರಿಗೆ ಬದುಕಿನಲ್ಲಿ ಈಗ ಅಚಾನಕ್ ಮಾಯವಾಗಿರುವ ಉತ್ಸಾಹವನ್ನು ಬರೆದು ಬರೆದು ತುಂಬಿಕೊಳ್ಳುವ ತವಕವಂತೆ)

 

ಕಷ್ಟವಾಗುತ್ತಿದೆ.

ಉಳಿವುದೋ ಇಲ್ಲವೋ ಹೇಳಲಾಗದು

ಈ ಗಂಟು.

ಉಳಿವುದು ಬೇಕಿಲ್ಲ.

ಇಲ್ಲಿ ಪ್ರೀತಿನೂ ಬಂಧಿ:

ಯಾವುದೂ ಪರಸ್ಪರವಲ್ಲ, ಸರಿಯಲ್ಲ, ಸಮವಿಲ್ಲ.

ಹೊತ್ತಿರುವ ಎತ್ತುಗಳು ಬೇರೆ ಜಾತಿಯವು. ಬೇರ್ಬೇರೆ ಜಾಗದವು.

ಇಲ್ಲೀತನ್ಕ ಸಹನೆಯ ಹೆಸರಲ್ಲಿ ಬೆಳಕು ಹರಿಯುತ್ತಿತ್ತು, ರಾತ್ರಿ ಕರಗುತ್ತಿತ್ತು.

ಇನ್ನು ಬುನಾದಿಯಿಲ್ಲ. ಬೆಲೆಯಿಲ್ಲ. ಹಾಗಾದರೆ ಬದುಕೆಲ್ಲಿ?

ಹಸು ಆಡುಗಳು ಗೆಳೆಯರಾಗಿರಬಲ್ಲವು. ಗಂಡಹೆಂಡಿರಲ್ಲ.

ಏರಿಗೆ ನೀರಿಗೆ ಎಳೆಯುವ ಜಗ್ಗಾಟದಲ್ಲೇ ಜೀವ ನಲುಗಲೇಕೆ?

ಪಾಪದ ಹಸು. ಪಾಪದ ಆಡು.

ಅವೆರಡರ ಕೂಸುಗಳು? ಎರಡೂ ಕಡೆ ಸಲ್ಲ! ಅದೆಂತಹಾ ಪಾಪ!

ಅಯ್ಯೋ...ಒಂದೆರಡು ತಪ್ಪಿನಿಂದ ಎಷ್ಟೆಲ್ಲಾ ಜೀವಗಳು ಪಾಪ.

ಎರಡು ಶಾಪಗಳು ಸೇರಿ ಒಂದು ವರವಾಗುವುದಿಲ್ಲ.

ಅದೆಲ್ಲಾ ಗಣಿತದ ವಾದ. ಜೀವನದ್ದಲ್ಲ!

ಸತ್ಯ ತಿಳಿಯಲು ಈ ಪಾಟಿ ಸಮಯ ಬೇಕಿತ್ತೇ?

ಪಾಪದ ಕೂಪ ಇಷ್ಟು ತುಂಬಬೇಕಿತ್ತೇ?

ಅವರಂತೂ ಕೈ ದಾಟಿಸಿ ತೊಳೆದುಕೊಂಡರು.

ಇನ್ನ್ಯಾರಿಗೂ ಪಾಪದ ಹೊರೆಯಾಗಲು ಸಲ್ಲ.

ಬದುಕಲ್ಲದಿದ್ದರೆ ಮತ್ತೇನಾದರೂ ಸರಿ.

ಪ್ರೀತಿಸಿದವರಿಗೆ ನಮಸ್ಕಾರ

ಪ್ರೀತಿ ತೋರಿಸಲು ಆಗದವರಿಗೆ ಅಳಿದುಳಿದ ಪ್ರೀತಿ

ಒಡಲ ಮೊಗ್ಗುಗಳಿಗೆ ಸರ್ವಸ್ವ...ಸದಾ.

ಸೀತೇ...ಅಮ್ಮಾ...

ಭೂಮಿ ಬಾಯಿಬಿಟ್ಟು ಒಳಗೆಳೆದು ಬಾಚಿತಬ್ಬುವ ಗುಟ್ಟು ಹೇಳಿಕೊಡೇ...

 
 
 
 
 

 ನೆನಪಿನಂಗಳದಿಂದ... ಕಳ್ಳಕೋವಿ ಪುರಾಣ

ಡಾ. ರಾಜೇಗೌಡ ಹೊಸಹಳ್ಳಿ
(ಅಲ್ಲಲ್ಲಿ ಅಷ್ಟಷ್ಟನ್ನು ಹೆಕ್ಕುತ್ತಾ ಪೋಣಿಸುತ್ತಿರುವ ಮಾಲೆ)

ಆಗುಂಬೆ, ಹುಲಿಕಲ್ಲು ಮಹಾಕಾಡಿನಲ್ಲಿ ಯಾಸೆ ಎಂಬ ಗ್ರಾಮ. ಈಗ ವರಾಹಿ ಅಣೆಕಟ್ಟಿನೊಳಗೆ ಮುಳುಗಿ ಹೋಗಿದೆ. ಅಲ್ಲೊಬ್ಬ ತಮ್ಮೇಗೌಡ ಎಂಬುವವನಿದ್ದು, ಬೇಟೆ ಇಲ್ಲದೆ ಬದುಕಿದವನೇ ಅಲ್ಲ. ಊರು ಮುಳುಗಿತು. ಅವನಿಗೂ ಮುಪ್ಪಾಯಿತು. ಅವನಿಗೊಬ್ಬ ಮಗ. ಅವನ ಹೆಸರು ರವಿ. ಬೇಟೆ ಮಾಡುವುದರಲ್ಲಿ ಅಪ್ಪನಿಗಿಂತಲೂ ಕಡಿಮೆಯೇನಲ್ಲ. ಎಷ್ಟಾದರೂ ಅಪ್ಪನಿಗುಟ್ಟಿದ ರಕ್ತದವನಲ್ಲವೆ! (ಊರು ಮುಳುಗಿದ ಪರಿಹಾರದಿಂದ ಈಗ ಅವನು ವರಾಹಿ ವಿದ್ಯುತ್ ಘಟಕದಲ್ಲಿ ಕೆಲಸದಲ್ಲಿದ್ದಾನೆ.) ಮಾಡಿದ ಮಾಡಿದ ನಿಲ್ಲದೆ ಬೇಟೆ ಮಾಡಿದ. ಮಾಡುತ್ತಲೇ ತಿಂದ, ತಿಂದ, ತಿನ್ನಿಸಿದ. ಲೆಕ್ಕ ಹಾಕಿದರೆ ಅದೆಷ್ಟು ಟನ್ ಆದೀತೋ! ತೋಟದ ಕೋವಿಯಲ್ಲಿ ಈ ಯಕಶ್ಚಿತ ಕಾಡು ಪ್ರಾಣಿಗಳ ಹೊಡೆದರೆ ಖರ್ಚು ಜಾಸ್ತಿಯಲ್ಲವೇ...ಕೇಪಿನ ಕಳ್ಳಕೋವಿ ಮಾಡೋ ಆಚಾರಿ ಬಳಿ ಹೋಗಿ ತನಗೂ ಒಂದು ಕೋವಿ ಬೇಕೆಂದು ಹೇಳಿದ್ದ. ಆ ಆಚಾರಿಯೋ ಪುರುಸೋತ್ತಿಲ್ಲದೆ ರೈತಾಪಿ ಹತಾರ ಮಾಡುವ ನೆವದಲ್ಲಿ ಕಳ್ಳಕೋವಿ ಮಾಡಿ ಕೊಡುತ್ತಿದ್ದವನು. ಒಬ್ಬರಿಗೆ ಮಾಡಿದ ಕೋವಿಯನ್ನು ಆತುರಕ್ಕೆ ಇನ್ನಾರಿಗೋ ಕೊಟ್ಟು ಬಿಡುತ್ತಿದ್ದ. ತನ್ನ ಕೋವಿಗಾಗಿ ರವಿ ಕೇಳಿ ಕೇಳಿ ಸಾಕಾದ. 'ಇದನ್ನೇ ತೆಗೆದುಕೊಂಡು ಹೋಗಿರಿ' ಎಂದು ಯಾವುದೋ ಒಂದನ್ನು ಕೊಟ್ಟು ಬಿಟ್ಟ ಆಚಾರಿ. ಕಾಡಿನಂಚಿನ ಹೊಸಂಗಡಿ ಎಂಬ ಪಟ್ಟಣದಲ್ಲಿ ರಾತ್ರಿ ರವಿಗೆ ನಿದ್ರೆ ಬರೋದುಂಟೆ, ಅದೂ ಪ್ರಾಣಿಗಳು ಮೇಯೋ ಕದ್ದಿಂಗಳ ರಾತ್ರಿಯಲಿ! ಹೊಡೆದು ತಂದ, ತಿಂದ, ಕೊಟ್ಟ ತಿಂದ. ಏನಪ್ಪಾ ರವಿ ನೀನು ಶೂರ ಕಣಯ್ಯ ಎಂದು ಆಚೀಚೆಯವರು ನೆಂಟರು ಹೆತ್ತವರೆಲ್ಲಾ ಹೊಗಳುತ್ತಿದ್ದರು.

ಬೆಳಿಗ್ಗೆ ಹೊರಗೆ ಚುಮುಚುಮು ಬಿಸಿಲು, ಮಂಜಿನೊಳಗಿನ ಮುಸುಕು. ಬಾಗಿಲು ತಟ್ಟಿದ ಶಬ್ದ. ಬಚ್ಚಲು ಮನೆಲಿ ರವಿ ತಲೆಗೆ ಸೋಪು ಹಾಕಿದ್ದಾನೆ. ಸಿನಿಮಾ ಹಾಡು ಹೇಳುತ್ತಿದ್ದಾನೆ. ಸೋಪಿನ ನೊರೆಯ ಕಣ್ಣುರಿಯಲ್ಲಿ ಸ್ವಲ್ಪ ಕಣ್ಣು ಅಗಲಿಸಿ ಕಿಟಿಕಿಲ್ಲಿ ಬಗ್ಗಿ ನೋಡುತ್ತಾನೆ! ಪೋಲೀಸಪ್ಪ ಅದೇ ಆಚಾರಿಯನ್ನು ಹಿಡಿದು ನಿಂತಿದ್ದಾನೆ. ಅಯ್ಯೋಯ್ಯೋ ಕೆಟ್ಟೆ! ಎಂದು ಹಿಂದಿನ ಬಾಗಿಲಿನಿಂದ ಕಾಡಿಗೆ ಓಡಿದ. ನಿಲ್ಲದೆ ಓಡಿದ. ಕಳ್ಳಕೋವಿಗಳನ್ನು ನಕ್ಸಲೈಟ್ಗಳಿಗೆ ಮಾರುತ್ತಿದನೆಂದು ಗುಮಾನಿ ಮೇಲೆ ಆಚಾರಿಯನ್ನು ಪೋಲಿಸಿನವರು ಹಿಡಿದಿದ್ದರು. ಯಾರ್ಯಾರಿಗೆ ಕೊಟ್ಟಿದ್ದೀಯಾ ಎಂದು 'ಹೈದರಾಬಾದು ಗೋಲಿ' ಮಾಡಿದಾಗ ಆಚಾರಿ ಈ ರವಿಯ ಹೆಸರನ್ನು ಹೇಳಿಬಿಟ್ಟಿದ್ದ. ಅಯ್ಯಯ್ಯಪ್ಪ ಈ ಕಳ್ಳಕೋವಿ ಸಹವಾಸ ಬ್ಯಾಡಪ್ಪಾ ಅನ್ನುತ್ತಾನೆ; ಈಗಿನ ವರಾಹಿ ವಿದ್ಯುತ್ ನೌಕರ ರವಿ.
 
***
ಯಾಸೆ ರವಿ, ಅವನು ಬಿಡಿ, ಕಾಡಿನ ಪ್ರವೀಣ. ಹುಲಿಕಲ್ಲು ಅಡವಿಯ ಯಾವ ಯಾವ ಮರ ಎಲ್ಲೆಲ್ಲಿವೆ, ಯಾವ ಯಾವ ಬಗೆಯವು, ಯಾವ ಪೊಟರೆಲಿ ಎಂತೆಂಥಾ ಪ್ರಾಣಿಗಳಿರುತ್ತವೆ. ಯಾವ ಯಾವ ಪ್ರಾಣಿಗಳು ಎಂತೆಂಥಾ ಹಣ್ಣು ಹಂಪಲು, ಗೆಡ್ಡೆ ಗೆಣಸು ತಿನ್ನುತ್ತವೆ. ಯಾವ ಪ್ರಾಣಿ ಯಾವಕ್ಕೆ ಹೆದರುತ್ತವೆ, ಹೆದರಿಸುತ್ತವೆ, ಯಾವುದರ ಚರ್ಮ, ಮಾಂಸ ಯಾವ ಬಗೆಯವು, ಎಷ್ಟೊತ್ತು ಬೇಯಿಸಿದರೆ ಹೇಗೆ ಹದವಾಗುತ್ತದೆ, ಯಾವ ಯಾವ ಪ್ರಾಣಿ ಪಕ್ಷಿಗಳು ಏನೇನು ಔಷಧಿಗೆ ಬರುತ್ತವೆ ಎಂದೆಲ್ಲಾ ದಿನಗಟ್ಟಲೆ ಹೇಳುವಷ್ಟು ಕಾಡು ಪ್ರವೀಣ. ಇದಿರಲಿ, ಕಾಡು ಇವನಿಗೆ ಇರುಳಿನ ತಾಣ. ಅದೆಷ್ಟು ಪ್ರಾಣಿ ಪಕ್ಷಿಗಳು ಇವನಿಂದ ಪ್ರೇಮಿಗಳನ್ನು ಕಳೆದುಕೊಂಡು ವಿರಹದ ಶಾಪ ಹಾಕಿದ್ದವೋ, ಯಾವ ಯಾವ ಪ್ರಾಣಿ ಪಕ್ಷಿಗಳ ಅಪ್ಪ ಅಮ್ಮಂದಿರು, ಅಪ್ಪ ಅಮ್ಮನ ಕಳೆದುಕೊಂಡಿದ್ದ ಮಕ್ಕಳು ಶಾಪಹಾಕಿದ್ದವೋ...ಸೂರ್ಯದೇವ ಪ್ರಪಂಚದ ಮೇಲೆ ನಸುಗೆಂಪು ಓಕಳಿ ಚೆಲ್ಲುತ್ತಿರುವ ಹೊತ್ತಿನಲ್ಲಿ, ಬೇಟೆಗಾರ ರವಿ, ಬಗಲಲ್ಲಿ ಕೋವಿ ಹಿಡಿದು, ಹೆಗಲಮೇಲೆ ಕಾಡುಕುರಿ ಹೊತ್ತು ಹೆಜ್ಜೆ ಇಡುತ್ತಿದ್ದಾನೆ! ಅಷ್ಟರಲ್ಲಿ ಮಾರಗಲ ಮನೆಯಂತಹ ಬೂರುಗದ ಮರದ ಪೊಟರೆಯಯೊಳಗಿಂದ ಅಡ್ಡಬಂದು ನಿಂತರು, ಇಬ್ಬರು. ತಾನು ಹಿಂದೆ ನೋಡಿದ್ದೋರು ಅವರು. ಇನ್ನೊಂದು ಸಾರಿ ಈ ಕಡೆ ಬರುವುದಿಲ್ಲ ಎಂದು ಈ ನಕ್ಸಲರಿಗೆ ರವಿ ಮಾತು ಕೊಟ್ಟದ್ದ. ಅವರನ್ನು ನೋಡಿ ರವಿ ಒಂದೇ ಸಾರಿ ತಬ್ಬಿಬ್ಬಾದ. ಓಡಿದ. ಕಾಡುಕುರಿ ಎಸೆದು ಓಡಿ ಮಟ್ಟಿನೊಳಗೆ ಕಳ್ಳಕೋವಿ ಎಸೆದು ನಿಂತುಬಿಟ್ಟ. ಬಾರೊ ಇಲ್ಲಿ ಎಂದರು. ನಮ್ಮ ಗಡಿಗೆ ಬರಬೇಡ ಎಂದು ಎಷ್ಟು ಸಾರಿ ಹೇಳಿಲ್ಲ ನಿನಗೆ, ಆ ಕಡೆ ತಿರುಗು ಎಂದವರೇ ತಮ್ಮ ಹೆಗಲಿಂದ ಕೋವಿ ತೆಗೆದರು. ದಬಾರನೆ ಬಿದ್ದು ಕೈಕಾಲು ಹಿಡಿದ ರವಿ. ಗೋಳಾಡಿದ, ದಮ್ಮಯ್ಯ ಗುಡ್ಡೆ ಹಾಕಿದ. ಇನ್ನು ಈ ಕಡೆ ಕಾಲಿಟ್ಟರೆ ಎಕ್ಕಡದಲ್ಲಿ ಹೊಡಿರಿ ಅಂದ. ಅವರೂ ಮನುಷ್ಯರಲ್ಲವೆ! ಹೂ ಆಯ್ತು ಏಳು, ಹೋಗು ಆ ಕುರಿ ಇಲ್ಲಿ ತಾ! ಇಲ್ಲೆ ಸುಲಿದು ಕೊಡು ಎಂದರು. ಸುಲಿದಾಯ್ತು, ಅದೆಷ್ಟಿದ್ದೀತು! ’ಹೋಗು. ಹೊಸಂಗಡಿಲಿ ಹೋಗಿ ಇಪ್ಪತ್ತು ಕೆ.ಜಿ. ಹಂದಿ ಮಾಂಸ ಕೊಂಡ್ಕೊಂಡು ಬಾ. ಇಲ್ಲೆ ಇದೇ ಜಾಗದಲ್ಲಿ ಈ ಮರದ ಮೇಲೆ ಗಂಟುಕಟ್ಟಿ ತಂದಿಟ್ಟರು. ಏನಾದರೂ ಬಾಲ ಬಿಚ್ಚಿದಿಯೋ ಗೊತ್ತಲ್ಲ!’ ಅಂದರು. ಶಿರಾಸಾವಹಿಸಿ ಅಡವಿ ನಾಯಕರು ವಹಿಸಿದ ಕೆಲಸವನ್ನು ಮಾಡಿದ. ಈಗ ಕೇಳಿದರೆ ’ಈಗ ನಾನು ಬೇಟೆ ಬಿಟ್ಟು ಬಿಟ್ಟೀದ್ದೀನಪ್ಪಾ, ಯಾಕೆ ಬೇಕು, ಅವೂ ಬದುಕಲಿ, ಪಾಪ ಅವನ್ನು ಹೊಡೆಯೋಕೆ ಹೊಟ್ಟೆ ಉರಿತದಲ್ಲವೆ’ ಹೇಳುತ್ತಾನೆ.
***

ಯಾಸೆ ರವಿಗೆ ರಾತ್ರಿ ಸರಿಯಾಗಿ ನಿದ್ದೆ ಬರೋದುಂಟೆ! ಬೆಳಗಿನ ಜಾವಕ್ಕೆ ಕಣ್ಣು ಬಿಟ್ಟವನು ಆಚೆಗೆ ಹೋಗಿ ಬಂದ. ಮತ್ತೆ ಕುಳಿತು ’ಏಳೋ; ಹಂಗೇ ಕೋಟೆ ಗುಡ್ಡಕ್ಕೆ ಹೋಗಿ ಬರೋಣ, ಇಷ್ಟೋತ್ತಲ್ಲೆ ಕಣೋ ಇಬ್ಬನಿ ಹುಲ್ಲು ತಿನ್ನೊಕೆ ಕಾಡು ಕುರಿ, ಕಡವೆ ಬರ್ತಾವೋ’ ಎಂದವನೇ ಮೂಲೆಲಿದ್ದ ತೋಟಕೋವಿಗೆ ಕೈ ಹಾಕಿದ. ’ತೋಟು ಮುಗಿದು ಹೋಗಿದವೋ ಕಣೋ ಮಲಗೋ’ ಎಂದೆ. ಎಲ್ಲಿ ಮಲಗ್ತಾನೆ, ನಡ್ಯೋ ತೋಟದ ಮಟ್ಟಲಿ ನನ್ನ ಕೋವಿ ಇದೆ ಅಂದ. ’ಅದೇ ಕಳ್ಳಕೋವಿ, ಯಾರ್ನಾರು ಜೈಲಿಗೆ ಕಳುಸ್ತೀಯಾ ನಾನು ಬರಲ್ಲಪ್ಪ’ ಎಂದೆ. ನಿದ್ದೆ ಎಳೆಯುತ್ತಿತ್ತು. ಅವನು ಸುಮ್ಮನಿರಬೇಕಲ್ಲಾ ಎದ್ದೇ ಬಿಟ್ಟ, ನನ್ನನ್ನು ಎಳ್ಕೊಂಡು ಹೋದ. ಕೋವಿ ತಂದ, ಬಾರು ಮಾಡಿದ. ಮೋಟು ಮರದ ಮೇಲೆ ಕುತ್ಕೊಂಡು ಕಣ್ಣು ಕೊಡ್ತಾ ಇದ್ದ. ಪರಾಪರಾ ಎಂದು ಪ್ರಾಣಿ ಮೇಯೋದನ್ನು ಆಲಿಸಿದ. ಕಾಡಿನ ಮೌನದೊಳು ಪ್ರಾಣಿ ಮೇಯುವ ಶಬ್ದ, ತುಸು ನಿಂತ ಶಬ್ದ, ಮತ್ತೆ ಮೇಯುವ ಶಬ್ದ, ಈ ಶಬ್ದ ಅರಿಯದ ಕಿವಿಗಳು ಅವನವಲ್ಲ. ತುಸು ಕಾಣುವ ಪ್ರಾಣಿಗೆ ಗುರಿಯಿಟ್ಟು ಹೊಡೆದ. ಕೋವಿ ಡಂ ಅಂತು. ಪ್ರಾಣಿ ನೆಗೆಯಿತು. ಎರಡೂ ಸದ್ದುಗಳು ಗುಡ್ಡದ ಅಂಚಿನಲ್ಲಿರುವ ಬರ್ಮನಾಯಕನಿಗೆ ಕೇಳಿತು. ನಾಯಕ ಈಚೆಗೆ ಬಂದು ಬಗ್ಗಿ ನೋಡಿದ್ದನ್ನು ಮಟ್ಟಿನಲ್ಲಿ ಕುಳಿತು ನೋಡಿದೆವು. ಯಾರು ಹೊಡೆದರು ಎಂದು ನೋಡುತ್ತಿರುವವನು ನಮ್ಮ ವಿರೋಧಿಯಾಗಿದ್ದ ನಾಯಕನಾಗಿದ್ದ. ನಾಯಕ ಯಾವ ಸೂಳೆಮಕ್ಕಳಿರಬಹುದೆಂದು ಅತ್ತ ಇತ್ತ ನೋಡಿ ಮನೆವೊಳಗೆ ಹೋದ. ನೋಡಿದರೆ ನಾವು ಹೊಡೆದದು ಕಡವೆಯಾಗಿರಲಿಲ್ಲ. ಅದು ಕಾಡುಕೋಣ. ಬೇಲಿ ಹಾರಿ ಉಣಿಗೋಲು ಮೇಲೆ ಕಾಲಿಟ್ಟು ಅಡ್ಡಬಡಿಗೆ ಹತ್ತಿರ ಸತ್ತೆ ಇಲ್ಲ ಎಂಬಂತೆ ಬೇಲಿಯಾಚೆ ಎರಡು ಕಾಲು ಹಾಕಿ, ಎರಡು ಕಾಲು ಈಚೆಲಿಟ್ಟು ದಪ್ಪದಪ್ಪ ಕಣ್ಣು ಬಿಟ್ಟು ನಿಂತಂತೇ ನಿಂತಿದೆ! ಹೆದರುತ್ತಾ ಹತ್ತಿರ ಹತ್ತಿರ ಹೋದರೆ, ಸತ್ತಿದೆಯೋ ಸಾಯುತ್ತಿದೆಯೋ ಯಾವುದು ಗೊತ್ತಾಗ್ತಾ ಇಲ್ಲ. ಕಡೆಗೂ ಕೋಣ ಬಿತ್ತು.

ಯಾಸೆ ರವಿಗೆ ವರಾಹಿ ಸಾಬರು ಯಾವಾಗಲೂ ಬೇಡಿಕೆ ಇಡುತ್ತಿದ್ದ ಕಾಡುಕೋಣ ಇಂದು ಕೈ ತಪ್ಪಿನಿಂದ ತನ್ನ ಬೇಟೆಯಾಗಿದೆ. ಕೋವಿ ಈಡಿಗಾದರೂ ನಾಲ್ಕು ಕಾಸಾದೀತು ಎಂದು ಸಾಬರಮನೆ ಹತ್ತಿರ ಹೋಗಿ, ನಿಧಾನಕ್ಕೆ 'ಇಮಾಂಸಸಾಬರೇ' ಎಂದು ಕರೆದ. 'ಏನು ಕೊಡ್ತಿರಿ ಕೊಡಿ' ಎಂದು ಕರೆದುಕೊಂಡು ಬಂದು ತೋರಿಸಿದ. ಸಾಬರು ಹತ್ತಿರ ಹೋಗಿ ನೋಡುತ್ತಾರೆ. 'ಕ್ಯಾರೆವೋ ಅಲ್ಲಾ' ಸತ್ತಕೋಣ ತಿಂದೋರುಂಟೆ! ವಾಪಸ್ಸು ಹೊರಟೇಬಿಟ್ಟರು. ಈಗ ಏನು ಮಾಡೋದು?! ಅತ್ತ ದರಿ ಇತ್ತ ಹುಲಿ. ಫಾರೆಸ್ಟ್ ನವರಿಗೆ ಕೋಣ ಹೊಡೆದಿರುವುದನ್ನು ಬರ್ಮನಾಯಕ ಹೇಳಿದರೆ?! ಇಲ್ಲಿ ಈ ಸಾಬರೂ ಬೇಡಾಂತಾವರಲ್ಲೋ! ರವಿ ಜಾಗ ಬಿಟ್ಟು ಮನೆ ಕಡೆ ಹೊರಟ. ಮನಸ್ಸು ತಡೆಯಬೇಕೆ ಪುನಃ ಹೋಗಿ ನೋಡುತ್ತಾನೆ! ಏನು ನೋಡೋದು? ಕೇರಿಯ ಸಾಬರಲ್ಲಾ ಕುಯ್ದು ಪಾಲು ಹಾಕಿಕೊಳ್ಳುತ್ತಿದ್ದಾರೆ! ’ಅರೇ ಏನ್ರಿ ಸಾಬ್ರೆ ಕೋಣಕ್ಕೆ ಜೀವನೇ ಇಲ್ಲಾ ಅಂದಿರಿ ಈಗ ನೋಡಿದರೆ ಪಾಲು ಹಾಕ್ತಾ ಇದ್ದೀರಿ’?’ ಅಂದ ’ಅರರೇ ಅಣ್ಣ! ನಾನು ಹೋದನಾ...ನನ್ನ ಮಾತು ಕೇಳ್ದೆನೆ ನಮ್ಮ ಪ್ಯಾರು ಮತ್ತೆ ಕರ್ಕೊಂಡು ಬಂದನಾ...ಬಂದು ನೋಡ್ತಿವಿ...ಕಿವಿ ಅಲ್ಲಾಡ್ತಾ ಇದೆ! ಅಯ್ಯಯ್ಯೋ ಅಲ್ಲಾ! ಎಲ್ಲಾ ಅಲ್ಲಾನ ಮಹಿಮೆ ಅಣ್ಣಾ ! 'ಮಿಸ್ಕುಲಾ' ಮಾಡಿದಿವಿ! ಎಂದನುತ್ತಲೇ ಸಾಬು ತನ್ನ ಕಾರ್ಯದಲ್ಲಿ ನಿರತವಾದ.
 
 
(ಮುಂದುವರಿಯುವುದು)
 
 
 
 
 
 
 
Copyright © 2011 Neemgrove Media
All Rights Reserved