ಅಂಗಳ      ನೀನಾರಿಗಾದೆಯೊ ಎಲೆ ಮಾನವ
Print this pageAdd to Favorite
 

ಜಾನಪದವೆಂಬ ಗೀತೆ!
ಭಾಗ೨

ಡಾ. ಹಿ. ಶಿ. ರಾ.
 
 
 
 
ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಸಂದರ್ಭದಲ್ಲಿ ನಮ್ಮನ್ನು ಅರ್ಥ ಮಾಡಿಕೊಳ್ಳಲು ನಮ್ಮ ನಂಬಿಕೆ, ನಡೆ-ನುಡಿ, ವಿಚಾರ-ಆಚಾರ, ಸಂಪ್ರದಾಯ, ಉತ್ಸವ, ಜಾತ್ರೆ, ಆಚರಣೆ, ಕಾನೂನು, ಕಲೆ, ಸಾಹಿತ್ಯ...ಈ ಎಲ್ಲವನ್ನೂ ಸಂಗ್ರಹಿಸಿ ಅಧ್ಯಯನ ಮಾಡಲು ತೊಡಗಿದರು. ಇದು ನಮ್ಮನ್ನು ಉದ್ಧಾರ ಮಾಡುವ ಉದ್ದೇಶವಾಗಿರಲಿಲ್ಲ, ನಮ್ಮ ಜನರ ಮನವನ್ನು ಅರ್ಥ ಮಾಡಿಕೊಂಡು ಅದರೊಳಗೆ ನುಸುಳಿ ತಮ್ಮದೆ ನಂಬಿಕೆ ಎಂಬ ಇಂಜಕ್ಷನ್ ಕೊಡುವುದು ಅವರ ಪರಮ ಉದ್ದೇಶವಾಗಿತ್ತು. ಅದು ಬಹಳ ಕಾಲ ನಡೆಯಲಿಲ್ಲ. ಅವರಿಗೆ ಬದಲಾಗಿ ನಮ್ಮ ಸ್ಥಳೀಯರೇ ಪರಕೀಯರ ದಬ್ಬಾಳಿಕೆಯಿಂದ ಬಿಡುಗಡೆಗೊಳ್ಳಲು ನಮ್ಮ ಜಾನಪದವನ್ನು ಸಂಗ್ರಹಿಸಿ ವಿವರಿಸತೊಡಗಿದರು. ಬ್ರ‍ಿಟಿಷರ ತಾತನ ಕಾಲದ ಜ್ನಾನ ನಮ್ಮಲ್ಲೇ ಇದೆ, ನಾವು ಅವರ ವಿಜ್ನಾನವನ್ನು ಕಲಿಸುವುದು ಸರಿ, ಅಜ್ನಾನವನ್ನಲ್ಲ ಎಂಬುದನ್ನು ಸುಲಭವಾಗಿ ಅರ್ಥ ಮಾಡಿಕೊಂಡರು. ಹೀಗೆ ಭಾರತದ ಎಲ್ಲ ಭಾಗಗಳಲ್ಲಿ ತಮ್ಮದೇ ಸಂಸ್ಕೃತಿ-ಜಾನಪದವನ್ನು ಸಂಗ್ರಹಿಸಿ ಅಧ್ಯಯನ ಮಾಡುವ ಶಖೆ ಶುರುವಾಯಿತು.
 
ಜಾನಪದ ಎಂದರೆ ಮತ್ತೇನೋ ತಿಳಿಯಬೇಕಿಲ್ಲ. ಅದು ಎಲ್ಲರಲ್ಲೂ ಇರುವ ಅಖಂಡ, ಸಾಮಾನ್ಯ ಹಾಗೂ ಸರ್ವಕಾಲೀಕ ಸಂಸ್ಕೃತಿ. ವರ್ಗ, ವರ್ಣ, ಜಾತಿ, ಪಂಥ, ಪಂಗಡಗಳೆಂಬ ಗುಂಪುಗಳ ಸಂಸ್ಕೃತಿ ಬೇರೆ ಬೇರೆ ಚಾರಿತ್ರಿಕ-ಧಾರ್ಮಿಕ ಕಾರಣಕ್ಕೆ ಭಿನ್ನವಾಗಿರುತ್ತದೆ. ಆ ಭಿನ್ನ ಸಂಸ್ಕೃತಿಯ ಭಾಗಗಳು ತೀರಾ ಕಡಿಮೆ. ಎಲ್ಲರಲ್ಲೂ ಹೆಚ್ಚಾಗಿಯೆ ಇರುವುದು ಸಾಮಾನ್ಯ-ಸಾರ್ವತ್ರ‍ಿಕ ಸಂಸ್ಕೃತಿ: ಅದು ನಮ್ಮ ದಿನನಿತ್ಯದ ಆಹಾರ ಪದ್ಧತಿಯಂತೆ.
ಪಾಶ್ಚಾತ್ಯರು ಕರ್ನಾಟಕ ಜಾನಪದವನ್ನು ಸಂಗ್ರಹಿಸಿ ವಿವರಿಸಿದರು. ಅದರಲ್ಲಿ ವಿಶಿಷ್ಟ ಅಂಶಗಳನ್ನು ಎತ್ತಿ ಹೇಳಿದ್ದರು. ಅವರ ದೃಷ್ಟಿಯಲ್ಲಿ ನಮ್ಮ ಜನಪದ ಸಂಸ್ಕೃತಿ ಮತ್ತು ನಾವು ವಿಶಿಷ್ಟತೆಗಿಂತಲೂ ವಿಚಿತ್ರವಾಗಿ ಕಂಡಿದ್ದೆವು. ನಾವು ಮಾಟಮಂತ್ರದಿಂದಲೇ ಬದುಕುವ ಜನ ಎಂಬುದು ಅವರಲ್ಲಿಯ ಕೆಲವರ ಅಭಿಪ್ರಾಯವಾಗಿತ್ತು. ದೇಶೀಯ ವಿದ್ವಾಂಸರು ಬಂದು ನಮ್ಮ ಜಾನಪದವನ್ನು ಸಂಗ್ರಹಿಸಿ ಅದರ ಒಳತಿರುಳನ್ನು ತಿಳಿಸಿಕೊಡತೊಡಗಿದಾಗ ಪಾಶ್ಚಾತ್ಯರ ವಿವರಗಳು ಕೇವಲ ಸಾಂದರ್ಭಿಕ ಶೋಧಗಳಾಗಿ ಕಾಣತೊಡಗಿದವು. ಈ ರೀತಿಯಲ್ಲಿ ಕರ್ನಾಟಕ ಜಾನಪದವನ್ನು ಅಧ್ಯಯನ ಮಾಡಿದ ಮುಖ್ಯರೆಂದರೆ:
ರಾವ್ ಬಹದ್ದೂರ್ ಸಿ. ಹಣಮಂತೇಗೌಡ, ನಡಿಕೇರಿಯಂಡ ಚಿಣ್ಣಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪ್ರಹ್ಲಾದ್ ನರೇಗಲ್ಲ, ಬೆಟಗೇರಿ ಕೃಷ್ಣಶರ್ಮ, ಹಲಸಂಗಿ ಗೆಳೆಯರು, ಸಿಂಪಿ ಲಿಂಗಣ್ಣ, ಬಿಎಂಶ್ರೀ, ದ.ರಾ.ಬೇಂದ್ರೆ, ಅರ್ಚಕ ಬಿ. ರಂಗಸ್ವಾಮಿಭಟ್ಟ, ವಿಡೋಬ ವೆಂಕನಾಯಕ ತೊರ್ಕೆ, ಬೇಕಲ ರಾಮನಾಯಕ, ದೇವುಡು, ಪಿ ಧೂಲಾ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಸ್. ಕೆ. ಕರೀಂ ಖಾನ್, ಮಟಿಘಟ್ಟ ಕೃಷ್ಣಮೂರ್ತಿ, ಎಲ್ ಗುಂಡಪ್ಪ, ಕೆ ಆರ್ ಲಿಂಗಪ್ಪ, ಬಿ ಎಸ್ ಗದ್ದಗಿ ಮಠ ಇತ್ಯಾದಿ.
 
ನಂತರದಲ್ಲಿ ಈಶ್ವರಚಂದ್ರ ಚಿಂತಾಮಣಿ, ಎಚ್ ಎಲ್ ನಾಗೇಗೌಡ, ಗೊರು ಚನ್ನಬಸಪ್ಪ, ಎ.ಕೆ ರಾಮಾನುಜನ್, ಕರಾಕೃ, ಜೀಶಂ ಪರಮಶಿವಯ್ಯ, ಪಿ ಆರ್ ತಿಪ್ಪೇಸ್ವಾಮಿ, ಅಮೃತ ಸೋಮೇಶ್ವರ, ಟಿ ವಿ ವೆಂಕಟರಮಣಯ್ಯ, ಚಂದ್ರಶೇಖರ ಕಂಬಾರ, ಎಲ್ ಆರ್ ಹೆಗಡೆ, ಹಾಮಾನಾ, ಎಂ ಎಸ್ ಸುಂಕಾಪುರ, ದೇಜಗೌ, ಡಿ ಲಿಂಗಯ್ಯ, ಸಿ ಪಿ ಕೃಷ್ಣಕುಮಾರ್, ಎಂ ಎ ಜಯಚಂದ್ರ, ಎಂ ಟಿ ಧೂಪದ, ಮುದೇನೂರ ಸಂಗಣ್ಣ, ಎಚ್ ಜೆ ಲಕ್ಕಪ್ಪ ಗೌಡ, ದೇವೇಂದ್ರಕುಮಾರ್ ಹಕಾರಿ, ಎನ್ ಆರ್ ನಾಯಕ್, ಶಾಂತಿ ನಾಯಕ್, ಪ್ರೊ ಸುಧಾಕರ, ರಾಗೌ, ಎಂ ಎಸ್ ಲಠ್ಠೆ, ಬಿ ಬಿ ಹೆಂಡ, ಡಿ ಕೆ ರಾಜೇಂದ್ರ, ಸೋಮಶೇಖರ ಇಮ್ರಾಪುರ, ಎಂ ಎಂ ಕಲಬುರ್ಗಿ, ಎಂ ಬಿ ನೇಗಿನ ಹಾಳ, ಮಿಲ್ಯಂ ಮಾಡ್ತ, ಕುಶಿ ಹರಿದಾಸ ಭಟ್ಟ, ಎಂ ಎಸ್ ವೃಷಭೇಂದ್ರ ಸ್ವಾಮಿ, ಎಂ ಜಿ ಬಿರಾದಾರ, ಜ್ಯೋತಿ ಹೊಸೂರ, ನಂ ತಪಸ್ವೀ ಕುಮಾರ್, ಸಿದ್ದಲಿಂಗಯ್ಯ, ಜಿವಿ ದಾಸೇಗೌಡ, ಶ್ರೀರಾಮ ಇಟ್ಟಣ್ಣವರ, ಬಸವರಾಜ ಶೆಟ್ಟಿ, ನಿಂಗಣ್ಣ ಸಣ್ಣಕ್ಕಿ, ಕೃಷ್ಣಮೂರ್ತಿ ಹನೂರು, ಟಿ ಎಂ ರಾಜಪ್ಪ, ಕ್ಯಾತನಹಳ್ಳಿ ರಾಮಣ್ಣ, ಹಿ ಶಿ ರಾಮಚಂದ್ರೇಗೌಡ, ಅಂಬಳಿಕೆ ಹಿರಿಯಣ್ಣ, ಬಿ ಎಸ್ ಸ್ವಾಮಿ, ಶ್ರೀಕಂಠ ಕೂಡಿಗೆ, ಪಿಕೆ ಖಂಡೋಬ, ವೀರಣ್ಣ ದಂಡೆ, ಆರ್ ವಿ ಎಸ್ ಸುಂದರಂ, ಪಿ ಕೆ ರಾಜಶೇಖರ, ಪುರುಷೋತ್ತಮ ಬಿಳಿಮಲೆ, ಎಚ್ ಎಮ್ ಮಹೇಶ್ವರಯ್ಯ, ಕೆ ಚಿನ್ನಪ್ಪಗೌಡ, ರಾಜೇಗೌಡ ಹೊಸಹಳ್ಳಿ, ಅಭಯ್ ಕುಮಾರ್, ಶಿವರಾಮಶೆಟ್ಟಿ, ಎಂ ಭೈರೇಗೌಡ, ಹಿಚಿ ಬೋರಲಿಂಗಯ್ಯ, ಕಾಳೆಗೌಡ ನಾಗವಾರ, ಮೀರಾಸಾಬಳ್ಳಿ ಶಿವಣ್ಣ, ಬಸವರಾಜ ನೆಲ್ಲೀಸರ, ಸಿ ಕೆ ನಾವಲಗಿ, ಮಂಜುನಾಥ ಬೇವಿನಕಟ್ಟಿ, ವೆಂಕಟೇಶ್ ಇಂದುವಾಡಿ, ಕೆ ಆರ್ ಸಂಧ್ಯಾರೆಡ್ಡಿ, ಟಿ ಗೋವಿಂದರಾಜು, ಜಿ ಆರ್ ತಿಪ್ಪೇಸ್ವಾಮಿ, ರಂಗಾರೆಡ್ಡಿ ಕೋಡಿರಾಂಪುರ, ಬಿ ಎಸ್ ತಲ್ವಾಡಿ, ಚಕ್ಕೆರೆ ಶಿವಶಂಕರ್, ವೈಸಿ ಭಾನುಮತಿ, ಎಸ್ ಪಿ ಪದ್ಮಪ್ರಸಾದ್, ವ ನಂ ಶಿವರಾಮು, ಹಂಪನಹಳ್ಳೀ ತಿಮ್ಮೇಗೌಡ, ಎಂ
ಎಸ್ ಶೇಖರ್, ಜಯಲಕ್ಷ್ಮಿ ಸೀತಾಪುರ, ಶಾಲಿನಿ ರಘುನಾಥ್, ಕುರುವ ಬಸವರಾಜು ಇತ್ಯಾದಿ.
 
ಈಗ ಹೊರಗಿನಿಂದ ಬಹಳ ಆಕರ್ಷಕ ಸಾಮಗ್ರಿಗಳು ಬರುತ್ತಿದ್ದು ಜಾನಪದ ಸಾಮಗ್ರಿ ಅಷ್ಟು ರೋಚಕ ಸುಖವನ್ನು ಕೊಡುವುದಿಲ್ಲವಾದ ಕಾರಣ ವಿದ್ಯಾವಂತರು ಜಾನಪದದಂಥ ಸಾಂಸ್ಕೃತಿಕ ಸುಖಗಳನ್ನು ಅತ್ತ ತಳ್ಳಿ ತಾತ್ಕಾಲಿಕ ಮಜ ನೀಡುವ ವಸ್ತುಗಳ ಕಡೆಗೆ ಓಡಿ ಹೋಗುತ್ತಿದ್ದಾರೆ. ನಡೆಯುವವರನ್ನು ನಿಲ್ಲಿಸಿ ಮಾತನಾಡಿಸಬಹುದು, ಓಡುವವರ ಬೆನ್ನು ಹತ್ತಲು ಸಾಧ್ಯವೇ? ಓಡುವುದು ತಾತ್ಕಾಲಿಕ ನಡೆಯುವುದು ಸಹಜ. ಅಲ್ಲಿಗೆ ನಾವು ಬರಲೇ ಬೇಕು. ಜಾನಪದ ಕೂಡ ಈಗ ಅಂಥ ಕಾಯುವ ತಪಸ್ಸಿಗೆ ಒಳಗಾಗಿದೆ. ತಪಸ್ಸು ಎಂದೂ ಯಾರನ್ನೂ ಕೆಡಿಸುವುದಿಲ್ಲ. ಆ ದಿನ ಬರಲಿ!
 
ನಾವು ಒಡೆದುಕೊಳ್ಳುವುದಕ್ಕೆ ಮೊದಲು ಇದ್ದ ಸಮಗ್ರ ಸಾಮಾಜಿಕ ಜ್ನಾನವೇ ಜಾನಪದ. ಆರೋಗ್ಯ, ಆಹಾರ, ಅರ್ಥಶಾಸ್ತ್ರ, ಆಡಳಿತ ಜ್ನಾನ, ಕಾನೂನು ಕಟ್ಟಳೆ, ವಿಚಾರ-ಆಚಾರ ಇವೆಲ್ಲ ಒಟ್ಟು ಸಮಾಜದ ಒಟ್ಟು ಜ್ನಾನ ಮಾದರಿಗಳಾಗಿದ್ದವು. ಪಾಶ್ಚಾತ್ಯ ಪ್ರಭಾವದಿಂದ ಇಂಥ ಒಂದೊಂದು ಮಾದರಿಗೆ ಒಂದೊಂದು ವಿಭಾಗ (ಡಿಪಾರ್ಟ್ಮೆಂಟ್) ಎಂದು ಮಾಡಿ ಸಮಾಜ ಶಾಸ್ತ್ರ, ಆರೋಗ್ಯ ಶಾಸ್ತ್ರ, ರಾಜ್ಯ ಶಾಸ್ತ್ರ, ಅರ್ಥ ಶಾಸ್ತ್ರ ಎಂದು ಮಾಡಲಾಯಿತು. ಇದರಿಂದ ವಿಶೇಷ ಅಧ್ಯಯನಕ್ಕೆ ಅನುಕೂಲವಾಯಿತು ಎನ್ನುವುದು ನಿಜ. ಆದರೆ ಹಿತಾಸಕ್ತರು ಆ ವಿಭಾಗಗಳನ್ನು ತಮಗಾಗಿ ಎಂದು ಹಂಚಿಕೊಂಡಾಗ ಮನುಷ್ಯನ ಸಮಗ್ರ ತಿಳುವಳಿಕೆಗೆ ಕುಂದುಂಟಾಯಿತು. ಇಂಥಾ ಪರಿಮಿತಿಯನ್ನು ಜಾನಪದ ಅಧ್ಯಯನದಿಂದ ಗೆಲ್ಲಬಹುದು ಹಾಗೂ ಅಖಂಡ ಮನುಷ್ಯನನ್ನು ದರ್ಶಿಸಬಹುದಾಗಿದೆ.
ಈ ಮೊದಲು ನಾನು ಹೆಸರಿಸಿದ ಜಾನಪದ ಚಿಂತಕರಲ್ಲಿ ಹೀಗೆ ಜಾನಪದವನ್ನು ಕೂಡಿಸುವ ಜ್ನಾನ ಪದ್ಧತಿಯಾಗಿ ತಿಳಿದವರಿದ್ದಾರೆ. ಈ ಮೇಲಿನ ಬಹಳ ಸಂಖ್ಯೆಯ ಜಾನಪದ ವಿದ್ವಾಂಸರಲ್ಲಿ ಸಂಗ್ರಾಹಕರು, ಸಂಪಾದಕರು, ವಿವರಣಕಾರರು, ಅಧ್ಯಯನಕಾರರು, ಆನ್ವಯಿಕ ಚಿಂತಕರು, ದೇಸೀ ಚಿಂತಕರು, ಸಂಘಟಕರು, ಸಂವರ್ಧಕರು ಮತ್ತು ಪ್ರೇರಕರು ಎಂಬ ಹಲವು ಬಗೆಯ ತಜ್ನರಿದ್ದಾರೆ. ಇಂಥವರಲ್ಲಿ ಪ್ರೇರಕರು ಹಾಗೂ ಸಂಘಟಕರ ಪಾತ್ರ ದೊಡ್ದದು. ಜಾನಪದ ಒಂದು ಜ್ನಾನ ಶಾಖೆಯಾಗಿ ಅಧ್ಯಯನಕ್ಕೆ ಒಳಪಟ್ಟು ವಿಶ್ವವಿದ್ಯಾಲಯ ಹಾಗೂ ತಿಳಿದವರ ಮಧ್ಯೆ ಬೆಳಕಿಗೆ ಬರಲು ಪ್ರೇರಕರು ಮತ್ತು ಸಂಘಟಕರು ಸರ್ವತ್ರ ಸಹಕಾರಿಯಾಗಿದ್ದಾರೆ.
 
ಅಂಥ ಪ್ರೇರಕರ ಶಕ್ತಿಗಳನ್ನು ನಾವಿಲ್ಲಿ ಜ್ನಾಪಿಸಿಕೊಳ್ಳೋಣ. ಅವರೆಂದರೆ ಬಿ ಎಂ ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಆಯ್ಯಂಗಾರ್, ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಅರ್ಚಕ ರಂಗಸ್ವಾಮಿ ಭಟ್ಟ, ದೇವುಡು, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಬಿ ಎಸ್ ಗದ್ದಗಿ ಮಠ, ಎಸ್ ಕೆ ಕರೀಂ ಖಾನ್, ಕೆ ಆರ್ ಲಿಂಗಪ್ಪ-ಇಂಥಾ ಹಿರಿಯರು ಜನಪದ ಸಾಹಿತ್ಯ ಸಂಗ್ರಹ ಮತ್ತು ಆ ಮೂಲಕ ಜನಪದ ಸಂಸ್ಕೃತಿಯ ಪುನರುಜ್ಜೀವನಕ್ಕೆ ನಾಡಿನ ಜನತೆಗೆ ಕರೆ ಕೊಟ್ಟವರು. ’ಜನವಾಣಿ ಬೇರು; ಕವಿವಾಣಿ ಹೂವು’ ಎಂದ ಬಿಎಂ ಶ್ರೀಯವರ ಮಾತು ಒಂದು ಯುಗವಾಣಿ, ಅದು ಉಂಟುಮಾಡಿದ ಜಾನಪದ ಚಾಲನೆ ದೂರಗಾಮಿಯಾದದ್ದು. ಹೆಣ್ಣು ಮಕ್ಕಳೇ ನಾಡಿನ ಸಾಹಿತ್ಯವನ್ನು ಇಂಗಗೊಡಬೇಡಿ ಎಂದು ದ ರಾ ಬೇಂದ್ರೆಯವರು ಅಂದ ಮಾತು ಕೇವಲ ಮಾತಾಗಿ ಉಳಿಯದೆ ಮಂತ್ರದಂತೆಯೇ ಆಯಿತು. ಮಾಸ್ತಿಯವರು ಜನಪದ ಸಾಹಿತ್ಯದ ಮೌಲಿಕತೆ ಮತ್ತು ಅದರ ಪ್ರತ್ಯೇಕತೆಯನ್ನು ಕುರಿತು ಚರ್ಚಿಸಿದ ಬರಹ ಈ ಹೊತ್ತಿನ ತಜ್ನನ ಚಿಂತನೆಗೂ ದಾರಿದೀಪವಾಗಿದೆ. ಜನಪದ ಸಂಸ್ಕೃತಿಯ ಬಗ್ಗೆ ದೇವುದು ನರಸಿಂಹಶಾಸ್ತ್ರಿಯವರ ಬರಹವನು ಎಂದೆಂಡಿಗೂ ಮನನ ಮಾಡುವಂಥದು. ಬೆಟಗೇರಿ ಕೃಷ್ಣಶರ್ಮರ ಜನಪದ ಜೀವನ ಕುರಿತ ಕಳಕಳಿ ಪ್ರಮೇಯಕ್ಕೆ ಮೀರಿದ್ದು. ಕರ್ನಾಟಕ ಸಂಸ್ಕೃತಿ, ಸರಪತ್ತು ಮತ್ತು ಜನರನ್ನು ಒಟ್ಟಾಗಿ ನೋಡ ಹೊರಟ ಈ ಹಿರಿಯರ ಮನಸ್ಸು ಆ ಕಾಲದ ದೇಶಪ್ರೇಮಿಗಳ ಉನ್ನತ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.
 
ಸಂಸ್ಕೃತಿ ಸೃಷ್ಟಿ ಮಾಡುತ್ತೇವೆ ಎಂದರೆ ಅದು ಬಹಳ ದೊಡ್ಡ ಮಾತಾಗಿಬಿಡುತ್ತದೆ. ಸಾಧಕರು ಮತ್ತು ಸಾಧನಾ ನಿರತ ಸಮಾಜ ಆ ಕೆಲಸವನ್ನು ಮಾಡುತ್ತದೆ. ಉಳಿದವರು ಅದರಲ್ಲಿ ಭಾಗಿಗಳಾಗುತ್ತಾರೆ, ಜಾಣರು ಫಲಾನುಭವಿಗಆಳಾಗುತ್ತಾರೆ, ಅವಕಾಶವಾದಿಗಳು ಅದನ್ನು ಮಾರಾಟ ಮಾಡುತ್ತಾರೆ, ತ್ಯಾಗಿಗಳು ಅದರ ಭದ್ರತೆಗಾಗಿ ಅಹರ್ನಿಶಿ ದುಡಿಯುತ್ತಾರೆ. ಈ ಮಧ್ಯೆ ಭವಿಷ್ಯವಾದಿ ಚಿಂತಕರು ಹಾಗೂ ಸಂಸ್ಕೃತಿ ಪ್ರೇಮಿಗಳು ಸಂಸ್ಕೃತಿಯ ಸಂವರ್ಧನೆಗಾಗಿ ಜಾಗರೂಕರಾಗುತ್ತಾರೆ.

ಎಚ್ಚರಿರುವವರು ಭವಿಷ್ಯವನ್ನು ನಿರೀಕ್ಷಿಸುತ್ತಾರೆ. ಹೊಟ್ಟೆ ತುಂಬಿಸಿಕೊಳ್ಳಲು ಇರುವವನು ಬದುಕಿ ಸತ್ತಿರುತ್ತಾನೆ. ವರ್ತಮಾನವನ್ನೇ ಅಪ್ಪಿಕೊಂಡವನು ಸಂಪಾದನೆಯಲ್ಲಿ ಮಾತ್ರ ತೊಡಗಿರುತ್ತಾನೆ. ಕೇವಲ ವ್ಯಕ್ತಿಯಾದವನು ಸೇವಕನೋ ಕೇವಲ ಮತದಾರನೋ ಆಗಿರುತ್ತಾನೆ. ವರ್ತಮಾನ ಎಂಬುದು ಒಂದು ಕ್ಷಣ ಮಾತ್ರ. ಅದು ಸ್ವಲ್ಪ ಹಿಂದಕ್ಕೆ ಜರುಕಿದರೆ ಭೂತಕಾಲ, ತುಸುಮುಂದಕ್ಕೆ ನಡೆದರೆ ಭವಿಷ್ಯ. ಭವಿಷ್ಯವೆಂಬುದೇ ನಿಜವಾದ ಜೀವನ. ಅಂಥ ಭವಿಷ್ಯಕ್ಕಾಗಿ ದುಡಿಯುವ ವ್ಯಕ್ತಿ ಮತ್ತು ಸಮೂಹ ಒಂದು ನಾಡಿನ, ಸಮೂಹದ ಜೀವಸತ್ವ.
 
ಕೊಟ್ಟ ಕೆಲಸವನ್ನು ಮಾತ್ರ ಮಾಡುವವನು ಕೂಲಿ; ಆ ಕೆಲಸ ಎಂಥದೇ ಇರಲಿ. ಇರುವುದನ್ನು ನೋಡಿಕೊಳ್ಳುವವನು ಕಾವಲುಗಾರ; ಆ ಕೆಲಸ ಎಂಥದ್ದೇ ಇರಲಿ. ಕಟ್ಟುವವನು ಇದ್ದಾನಲ್ಲಾ, ಅವನು ಕವಿ, ಕಲೆಗಾರ, ಸಂಗೀತ ವಿಜ್ನಾನಿ, ವಿಚಾರವಂತ, ಸಾಧಕ, ಜನಪದ...ಅವನಲ್ಲಿ ಭಗವಂತನಿದ್ದಾನೆ. ಅಂಥ ಸೃಜನಶೀಲತೆ ಮಾತ್ರವೇ ಭಗವದ್ಗೀತೆ; ಬೇರೆಲ್ಲ ಸಂತೆ.
  
 
 
 
 
 
Copyright © 2011 Neemgrove Media
All Rights Reserved