ಅಂಗಳ      ಧರೆ ಹತ್ತಿ ಉರಿದೊಡೆ
Print this pageAdd to Favorite
 
 
 
  

ಸೀಡ್ಸ್ ಆಫ್ ಡಿಸೆಪ್ಷನ್: ಎಕ್ಸ್ಪೋಸಿಂಗ್ ಇಂಡಸ್ಟ್ರಿ ಅಂಡ್ ಗವರ್ನಮೆಂಟ್ ಲೈಸ್ ಅಬೌಟ್ ಸೇಫ್ಟಿ ಆಫ್ ದ ಜೆನೆಟಿಕಲಿ ಎಂಜಿನಿಯರ್ಡ್

 

 

ಜೆಫ್ರಿ ಸ್ಮಿತ್ ರ ಈ ಪುಸ್ತಕವನ್ನೊಮ್ಮೆ ಮರೆಯದೇ ಬಿಡುವು ಮಾಡಿಕೊಂಡು ಓದಿ. ಹೊಸವರ್ಷಕ್ಕೆ ಮುನ್ನವೇ ಒಮ್ಮೆ ಓದಿದರೆ ೨೦೧೨ರಿಂದ ನಿಮ್ಮ ಬದುಕಿನ ದೃಷಿಕೋನವೊಂದು ಬದಲಾಗಬಹುದು. ಮುಂದಿನ ವರ್ಷದಿಂದ ನಿಮ್ಮ ಮಕ್ಕಳು ಪ್ರತೀ ಋತುವಿಗೂ ಅಲರ್ಜಿಯಿಂದ ನರಳುವುದು ತಪ್ಪಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಪುಟ್ಟ ದೇಹವೆಂಬ ದೇಗುಲ ನಿಮಗೆ ಒಳಗಿನಿಂದಲೇ ಧನ್ಯವಾದ ತಿಳಿಸಬಹುದು!

ಕುಲಾಂತರಿ ಅಥವಾ ಜೆನೆಟಿಕಲಿ ಮಾಡಿಫೈಡ್/ಇಂಜಿನಿಯರ್ಡ್ ಆಹಾರ ಉತ್ಪನ್ನಗಳು ಮನುಷ್ಯ ಅಥವಾ ಪ್ರಾಣಿಗಳ ದೇಹಕ್ಕೆ ಹೊಕ್ಕರೆ ಎಷ್ಟರ ಮಟ್ಟಿಗೆ ಅಪಾಯಕಾರಿ, ಅವು ದೇಹ, ಮನಸ್ಸು ಹಾಗೂ ಜೀವಿಗಳ (ಮನುಷ್ಯನೂ ಸೇರಿದಂತೆ) ಪುನರುತ್ಪತ್ತಿಯನ್ನು ಹೇಗೆ ಮೊಟಕುಗೊಳಿಸಲಿದೆ? ಅಮೆರಿಕಾ ಅಥವಾ ಕುಲಾಂತರಿ ಉತ್ಪನ್ನಗಳನ್ನು ತನ್ನ ಜನರಿಗೆ ಧಾರಾಳವಾಗಿ ಒದಗಿಸಲು ಅನುವು ಮಾಡಿಕೊಡುತ್ತಿರುವ ಸರ್ಕಾರಗಳು ತಮ್ಮ ಪ್ರಜೆಗಳಿಗೆ ಯಾವ ಮಟ್ಟದವರೆಗಿನ ದ್ರೋಹ ಮಾಡಬಲ್ಲವು ಎಂದು ಸ್ಮಿತ್ ಈ ಪುಸ್ತಕದಲ್ಲಿ ಅತ್ಯಂತ ನಾಟುವಂತೆ ಬರೆಯುತ್ತಾರೆ.

ಅಮೆರಿಕಾದ ಜನ ಇಂದು ತಿನ್ನುತ್ತಿರುವ ಆಲೂಗಡ್ಡೆಗಳಲ್ಲಿ ಅತೀವವಾಗಿರುವ ಸ್ಟಾರ್ಚಿನ ಅಂಶ ದೇಹಗಳ ಮೇಲೆ ಯಾವ ರೀತಿಯ ಮಾರಕ ಪರಿಣಾಮ ಬಿರುತ್ತಿದೆ ಎಂಬುದನ್ನು ಉದಾಹರಣೆ ಸಹಿತ ವೈಜ್ನಾನಿಕವಾಗಿ ವಿವರಿಸುವ ಸ್ಮಿತ್ ಕುಲಾಂತರಿ ತಳಿಯ ಹಂದಿಗಳು ಜನನಾಂಗವೇ ಇಲ್ಲದೆ ಹುಟ್ಟುತ್ತವೆ, ಕುಲಾಂತರೀ ಜೀವಿಗಳು ಪ್ರಯೋಗ ಶಾಲೆಯಲ್ಲಿ ತಯಾರಾಗಬೇಕೇ ಹೊರತು ತಾವಾಗಿಯೇ ಸಂತಾನಭಿವೃದ್ಧಿ ಮಾಡಲು ಅಂಗಗಳನ್ನೇ ಹೊಂದಿರುವುದಿಲ್ಲ ಎಂಬ ಶಾಕಿಂಗ್ ಅಂಶಗಳನ್ನು ಬಯಲು ಮಾಡುತ್ತಾರೆ!

ಸ್ಮಿತ್ ವರದಿಯನ್ನು ಕಥೆಯಂತೆ ಹೇಳುವುದೇ ಅಲ್ಲದೆ ಎಫ್ ಡಿ ಎ ಗೆ ಕೆಲಸ ಮಾಡುವ ವಿಜ್ನಾನಿಗಳು ಪರಸ್ಪರ ಸಂಸ್ಥೆಯೊಳಗೆ ಕಳಿಸಿಕೊಳ್ಳುವ ಎಚ್ಚರಿಕೆಯ ಮೆಮೋಗಳು, ಈ ಆಹಾರಗಳು ತರಬಹುದಾದ ಹೊಸ ಹೊಸ ರೋಗಗಳ ಪಟ್ಟಿಗಳು, ಅಲರ್ಜಿಗಳ ಪಟ್ಟಿಗಳ ಸಾಕ್ಷಿಯನ್ನೂ ಒದಗಿಸುತ್ತಾ ಹೋಗುತ್ತಾರೆ. ಕೆಲಕಾಲದ ಹಿಂದೆ ಮಾರುಕಟ್ಟೆಗೆ ಬಂದಿದ್ದ ಜೆನೆಟಿಕಲಿ ಇಂಜಿನಿಯರ್ಡ್ ಔಷಧವೊಂದು ನೂರಾರು ಜನರನ್ನು ಕೊಂದು ಮತ್ತಷ್ಟು ಜನರನ್ನು ನರಳಿಸಿದರೂ ಎಫ್ ಡಿ ಎ ಅದರ ರಹಸ್ಯವನ್ನು ಹೊರಗೆ ಬರದಂತೆ ಕಾಪಾಡಿದ ಬಗ್ಗೆ ಸ್ಮಿತ್ ಬರೆಯುವಾಗ ಜನರಿಗೆ ವಿಷಪ್ರಾಶನ ಮಾಡಿಸುತ್ತಿರುವಲ್ಲಿ ಎಫ್ ಡಿ ಎ ಅ ಮಹತ್ತರ ಪಾತ್ರವೂ ತಿಳಿಯುತ್ತದೆ.

ತನಿಖಾತ್ಮಕವಾಗಿರುವ ’ಸೀಡ್ಸ್ ಆಫ್ ಡಿಸೆಪ್ಷನ್’ ಓದುತ್ತಾ ಹೋದಾಗ ಬಹಳ ಆತಂಕವಾಗುತ್ತದೆ. ನಮಗೆ ಕಾರ್ಪೋರೇಟ್ಗಳು ಮಾಡುತ್ತಿರುವ ಕಾರ್ಪೊರೇಟ್ ದ್ರೋಹಕ್ಕೆ ರಕ್ತ ಬಿಸಿಯಾಗುತ್ತದೆ...ಕಡೆಗೆ ಅರಿವು ಬೆಳಗುತ್ತದೆ.

ಸೀಡ್ಸ್ ಆಫ್ ಡಿಸೆಪ್ಷನ್ ಪ್ರತಿಯೊಬ್ಬ ತಂದೆ ತಾಯಿಯೂ ಓದಲೇ ಬೇಕಾದ ಪುಸ್ತಕ. ಅರಿವಿಗಾಗಿ ಮೊರೆ ಹೋಗುವವರೆಗೆ ಈಗ ಮಾರುಕಟ್ಟೆಯಲ್ಲಿ ಕುಲಾಂತರಿ ತಳಿಗಳ ಭಯಾನಕ ಪರಿಣಾಮವನ್ನು ಸರಳವಾಗಿ, ವೈಜ್ನಾನಿಕವಾಗಿ ವಿವರಿಸುವ ಅನೇಕ ಪುಸ್ತಕಗಳು ಡಾಕ್ಯುಮೆಂಟರಿಗಳಿವೆ. ನಾವು ಈ ಕುರಿತು ಬರೆಯುವುದಿದ್ದೇ ಇದೆ. ಇದು ನಮ್ಮ ಬಧ್ಧತೆ. ಆದರೂ ಒಮ್ಮೆ ನೀವೇ ಇವುಗಳನ್ನು ಓದಿದರೆ ನಿಮ್ಮ ಬದುಕಿನಲ್ಲೂ ಆಹಾರ ಪದ್ಧತಿಗಳಲ್ಲೂ ಒಳ್ಳೆಯ ಆರೋಗ್ಯಪೂರ್ಣ ಬದಲಾವಣೆಗಳು ಆಗೇ ಆಗುತ್ತವೆ ಎಂಬ ಬಲವಾದ ನಂಬಿಕೆ ನಮ್ಮದು. ಪುಸ್ತಕವನ್ನು ಓದಿ ಒಮ್ಮೆ ನಿಮ್ಮ ಮಡಿಲಲ್ಲಿ ಕುಳಿತು ಆಡುವ ನಿಮ್ಮ ಕಂದಮ್ಮಗಳನ್ನು ನೋಡಿ...

 
 
 
 
 
 
 
Copyright © 2011 Neemgrove Media
All Rights Reserved