ಅಂಗಳ      ++
Print this pageAdd to Favorite
 
 

’ಕಾವೇರಿ’ದ ಚಳುವಳಿಯಿಂದ ಅಕ್ಷರಶಃ ಹತ್ತುರಿದ ಬೆಂಗಳೂರು-ಮೈಸೂರು-ಮಂಡ್ಯ-ಜಿಲ್ಲೆಗಳು

 
ಜಾಣಗೆರೆ ವೆಂಕಟರಾಮಯ್ಯ, ಬಿ ಎಸ್ ಶಿವಪ್ರಕಾಶ್
(ಜನ ಕಾನೂನಿನ ವಿರುದ್ಧ ತಿರುಗಿ ಆಕ್ರೋಶಗೊಂಡು ಜನ-ಜೀವನ ಹಾನಿ ಮಾಡುವುದನ್ನು ಸರಿ ಎಂದು ನಾವು ಕಾವೇರಿ ಚಳುವಳಿಯ ವಿವರಗಳನ್ನು ಇಲ್ಲಿ ಬರೆಯುತ್ತಿಲ್ಲ. ಕರ್ನಾಟಕದ ಜನ ತಮ್ಮ ನಾಡಿಗಾಗಿ, ರೈತರಿಗಾಗಿ, ನೀರಿಗಾಗಿ, ತಮ್ಮ ಹಿತಾಸಕ್ತಿಗೆಂದು ಒಗ್ಗಟ್ಟಾಗಿ ಒಕ್ಕೊರಲಿನಲ್ಲಿ ಪ್ರತಿಭಟಿಸಿದ ಚಳುವಳಿ ಇದೊಂದೇ. ಕಾವೇರಿಗಾಗಿ ನಡೆದ ಚಳುವಳಿಯ ನಂತರ ಬೇರೆಲ್ಲೂ ಕರ್ನಾಟಕದ ಜನ ಈ ಪರಿ ಒಗ್ಗಟ್ಟಿನಿಂದ ವರ್ತಿಸಿರಲಿಲ್ಲ. ಈಗ ಬಿಡಿ. ಬಂದ್ ಗಳು, ಚಳುವಳಿಗಳು ಕೇವಲ ಒಂದೋ ಎರಡೋ ರಾಜಕೀಯ ಪಕ್ಷಗಳ, ನಾಯಕರ ಅನುಕೂಲಗಳಿಗೆ ಮಾತ್ರ ನಡೆಯುತ್ತವೆ. ಚಳುವಳಿ ಎಂಬ ಸಂಚಲನವೇ ಅರ್ಥ ಕಳೆದುಕೊಂಡಿದೆ. ಅದೂ ಒಂದು ರೋಲ್ ಕಾಲ್ ಆಗಿದೆ. ಎಷ್ಟು ಲಕ್ಷ ಅಥವಾ ಕೋಟಿ ಸುರಿದು ಎಷ್ಟು ಜನರನ್ನು ಒಟ್ಟು ಮಾಡಿ ದೊಂಬಿ ಮಾಡಬಹುದು ಎನ್ನುವುದು ಇವತ್ತಿನ ಹೋರಾಟಗಳ ಹೊಟ್ಟೆಪಾಡು. ಹಣ ಮುಖ್ಯವಾಗುತ್ತಾ ಹೋದಂತೆ, ಹೊರಗಿನ ಹಣ ದಾಹೀ ಅಥವಾ ಹಣ ಹೂಡುವ ಶಕ್ತಿಗಳು ನಾಡೊಂದಕ್ಕೆ ನುಗ್ಗಿ ಅಲ್ಲಿನ ಜನರನ್ನು ತಮ್ಮ ನಾಡಿನ ಕುರಿತಾದ ಭಾವನೆಗಳ ನಂಟಿಂದ ದೂರ ಮಾಡಿ ಜನ-ಜೀವನ ಎರಡರ ಮಧ್ಯೆ ಅರ್ಥಮಾಡಿಕೊಳ್ಳಲಾಗದ ಕಂದಕವೊಂದನ್ನು ಸೃಷ್ಟಿಸಿಬಿಡುತ್ತವೆ. ಈಗ ಹೋರಾಟ ಮಾಡುವವರು ಎಂದರೆ ಗೂಂಡಾಗಳು ಎಂದೇ ವ್ಯಾಖ್ಯಾನ. ಅದಕ್ಕೆ ಅದರದ್ದೇ ಕಾರಣಗಳೂ ಇವೆ ಬಿಡಿ.)
 
ವಿರೋಧ ಪಕ್ಷಗಳೂ ಆಡಳಿತ ಪಕ್ಷದೊಂದಿಗೆ ಕೈಗೂಡಿಸಿದ್ದರಿಂದ ೧೯೯೧ ರ ಡಿಸಂಬರ್ ೧೨ ರಂದು ಒಕ್ಕೊರಲಿನಿಂದ ಕರಕೊಟ್ಟಿದ್ದ ರಾಜ್ಯ ಬಂದ್ ಗೆ ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇಡೀ ಕರ್ನಾಟಕ ಸ್ತಬ್ದಗೊಂಡಿತ್ತು. ಎಲ್ಲೆಡೆ ಸಂಪೂರ್ಣ ಬಂದ್ ಆಚರಿಸಿ ತಮ್ಮ ಪ್ರತಿಭಟನೆ ವ್ಯಕ್ತ ಪಡಿಸಲು ಜನತೆ ಮುಂದಾಗಿದ್ದರು. ಎಲ್ಲಾ ರಾಜಕೀಯ ಪಕ್ಷಗಳೂ, ಸಂಘ-ಸಂಸ್ಥೆಗಳೂ ಬೆಂಬಲ ಘೋಷಿಸಿದ್ದರಿಂದ ಭರ್ಜರಿಯಾಗಿ ಯಶಸ್ವಿಯಾಗತೊಡಗಿತ್ತು.
 
ಬೆಳಿಗ್ಗೆ ೯ ಗಂಟೆ ಹೊತ್ತಿಗೆಲ್ಲಾ ಎಲ್ಲೆಡೆಯಿಂದ ಬಂದ್ ಯಶಸ್ಸಿನ ಬಗ್ಗೆ ಮಾಹಿತಿಗಳು ಬರುತ್ತಿದ್ದರೆ ರಾಜಧಾನಿ ಬೆಂಗಳೂರು ನಗರ ಇದ್ದಕ್ಕಿದ್ದಂತೆ ಬೇರೆಯದೇ ಅವತಾರಕ್ಕೆ ತಿರುಗಿಬಿಟ್ಟಿತ್ತು. ೧೦ ಗಂಟೆಗೆಲ್ಲಾ ರಾಜಾಜಿನಗರಕ್ಕೆ ಸೇರಿದ ಮಂಜುನಾಥನಗರದ ಸುತ್ತಮುತ್ತ ಬೆಂಕಿಯ ಕಿಡಿಗಳು ಹೊತ್ತಿಕೊಂಡಿದ್ದವು. ತಮಿಳು ಚಿತ್ರವನ್ನು ಪ್ರದರ್ಶಿಸುತ್ತಿದ್ದ ಚಿತ್ರಮಂದಿರಕ್ಕೆ ಬೆಂಕಿ ಬಿದ್ದಿತ್ತು. ಅದರ ದಟ್ಟ ಹೊಗೆ ಸುತ್ತಮುತ್ತ ಪ್ರದೇಶಗಳಿಗೆಲ್ಲಾ ರಾಚಿದಂತೆ ಕಾಣಿಸುತಿತ್ತು. ರಾಜಾಜಿನಗರದ ದೊಡ್ಡದಾದ ಟೆಕ್ಸ್ ಟೈಲ್ಸ್ ಮಳಿಗೆಗೆ ಬೆಂಕಿ ಹಾಕಲಾಗಿತ್ತು. ತಮಿಳು ದಿನ ಪತ್ರಿಕೆಯೊಂದರ ಕಚೇರಿಗೂ ಬೆಂಕಿ ತಗುಲಿತ್ತು. ರಸ್ತೆಗಳಲ್ಲಿಯೂ ನೂರಾರು ಜನರು ಹಿಂಡು ನಿಂತು ಟೈರು, ಟ್ಯೂಬು, ಸೌದೆ, ಹುಲ್ಲು, ಕಸವನ್ನು ತುಂಬಿ ಬೆಂಕಿಯಿಟ್ಟು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದರು. ರಾಜಾಜಿನಗರದ ಪ್ರಖ್ಯಾತ ಸ್ಕೂಲೊಂದರ ಮೇಲೆ ಧಾಳಿ ನಡೆದಿತ್ತು. ಮಹಾಕವಿ ಕುವೆಂಪು ರಸ್ತೆಯಲ್ಲಿಯೂ ಕೆಲವಾರು ಅಂಗಡಿ ಮುಂಗಟ್ಟುಗಳಿಗೆ ಬೆಂಕಿಯಿಡಲಾಗಿತ್ತು. ಬಿಸಿಲೇರುತ್ತಿದ್ದಂತೆಯೇ ರಾಜಾಜಿನಗರದ ಸುತ್ತಮುತ್ತಲಿದ್ದ ಪ್ರಕಾಶನಗರ, ಗಾಯಿತ್ರಿನಗರ, ಸುಬ್ರಮಣ್ಯನಗರ, ಮಂಜುನಾಥನಗರ, ಮಾಗಡಿರಸ್ತೆ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಕಮಲಾನಗರ, ಪೀಣ್ಯ, ಲಗ್ಗೆರೆ, ಮಹಾಲಕ್ಷ್ಮಿಪುರಂ ಮುಂತಾದ ಪ್ರದೇಶಗಳು ಅಕ್ಷರಶಃ ಬೆಂಕಿಯುಂಡೆಯಂತಾಗಿದ್ದವು. ಬಸವೇಶ್ವರನಗರ, ರಾಜಾಜಿನಗರ ಅಂಚೆ ಕಚೇರಿಗಳಿಗೆ ಬೆಂಕಿ ತಗುಲಿಸುವ ಪ್ರಯತ್ನಗಳು ನಡೆದಿದ್ದವು.  
 
ಮಧ್ಯಾಹ್ನದ ನಂತರ ಆಗಿನ ೮೦ ಅಡಿ ರಸ್ತೆಯಲ್ಲಿದ್ದ (ಈಗಿನ ಡಾ. ರಾಜಕುಮಾರ್ ರಸ್ತೆ) ’ಅಭಿಮಾನಿ" ಪತ್ರಿಕಾ ಸಂಸ್ಥೆಗೆ ಪ್ರಕಾಶ ನಗರದ ಕೆಲವು ತಮಿಳು ಕಿಡಿಗೇಡಿಗಳು ನುಗ್ಗಿ ಕಚೇರಿಯನ್ನು ಧ್ವಂಸ ಮಾಡಿದ್ದರು. ಕಾವೇರಿ ನ್ಯಾಯ ಮಂಡಳಿ ಅನ್ಯಾಯವನ್ನು ಪ್ರತಿಭಟಿಸಿ ನಿನ್ನೆಯಿಂದ ಪ್ರತಿಭಟನೆಗೆ ಜನರನ್ನು ಹುರಿದುಂಬಿಸಲು ಮುಂದಾಗಿದ್ದ ಆ ಪತ್ರಿಕೆ ಮೇಲೆ ಹೀಗೆ ಸೇಡು ತೀರಿಸಿಕೊಳ್ಳಲಾಗಿತ್ತು. ಲಕ್ಶ್ಮೀನಾರಾಯಣಪುರದಲ್ಲಿದ್ದ ಜಾಣಗೆರೆ ಮುದ್ರಣ ಸಂಸ್ಥೆಯ ಮೇಲೂ ದಾಳಿ ಮಾಡಬಹುದೆಂಬ ಊಹಾಪೋಹಗಳು ಹರಡಿದ್ದವು. ಆದರೆ ಸುತ್ತಲೂ ಅಚ್ಚ ಕನ್ನಡಿಗರು ತುಂಬಿದ್ದರಿಂದ ಅದು ಸಾಧ್ಯವಿರಲಿಲ್ಲ. ಸಂಜೆ ಹೊತ್ತಿಗೆ ಬೆಂಗಳೂರಿನ ಬಹುತೇಕ ಪಶ್ಚಿಮ ಭಾಗ ಬೆಂಕಿಯುಂಡೆಯಂತಾಗಿತ್ತು. ಬೆಂಗಳೂರು ದಕ್ಷಿಣ ಮತ್ತು ಉತ್ತರದ ಕೆಲ ಭಾಗಗಳೂ ಅದರ ಪ್ರಭಾವಕ್ಕೆ ತುತ್ತಾಗತೊಡಗಿದ್ದವು. ತಮಿಳರನ್ನು ಆ ಧಾಳಿಯಲ್ಲಿ ಗುರಿಯಿಡಲಾಗುತ್ತಿದ್ದುದು ವ್ಯಕ್ತವಾಗುತ್ತಿತ್ತು. ಇದಕ್ಕೆ ಎಷ್ಟೇ ಪೋಲೀಸ್ ದಂಡು ಕರೆಸಿದರೂ ನಿಯಂತ್ರಣ ಸಾಧ್ಯವಿಲ್ಲವೇನೋ ಎಂಬಂತೆ ವಾತಾವರಣ ಪ್ರಕ್ಷುಬ್ದಗೊಂಡಿತ್ತು.
 
ವಾಸ್ತವವಾಗಿ ಅಂದಿನ ಆ ಬಗೆಯ ಪ್ರಕ್ಷುಬ್ದತೆಗೆ ಕನ್ನಡಪರ ಚಳವಳಿ ಮಾಡಿಕೊಂಡು ಬಂದಿದ್ದ ಸಂಘಟನೆಗಳವರು ಯಾವ ರೀತಿಯಲ್ಲೂ ಕಾರಣವಾಗಿರಲಿಲ್ಲ. ಅವರಿಗೆ ಅಂತಹ ಉದ್ದೇಶವೂ ಇರಲಿಲ್ಲ. ಆದರೆ ಜನರೇ ಸ್ವಯಂ ಸ್ಪೂರ್ತಿಗೊಂಡವರಂತೆ ಬೀದಿಗಿಳಿದು ಇಂತಹ ಕ್ರತ್ಯಗಳಲ್ಲಿ ತೊಡಗಿದ್ದರು. ಇದಕ್ಕೆ ಅಬಾಲವ್ರದ್ದರಾದಿಯಾಗಿ ಎಲ್ಲಾ ವಯೋಮಾನದವರೂ ಕೈ ಜೋಡಿಸಿದ್ದುದು ಕಂಡು ಬರುತ್ತಿತ್ತು. ಕನ್ನಡಿಗರು ಸದಾ ಮಲಗಿದ್ದಂತೆಯೇ ಇರುತ್ತಾರೆ. ತಮಗಾಗುತ್ತಿರುವ ಅನ್ಯಾಯವನ್ನು ವಿರೋಧಿಸಲು ದಶಕಕ್ಕೊಮ್ಮೆಯೋ, ಶತಮಾನಕ್ಕೊಮ್ಮೆಯೋ ಹೀಗೆ ನಿದ್ದೆಯ ಮಂಪರಿನಿಂದ ಬಿಡಿಸಿಕೊಂಡು ಎಚ್ಚೆದ್ದು, ರೊಚ್ಚಿಗೆದ್ದು ನಿಲ್ಲುತ್ತಾರೆ-ಅನ್ನುವ ಮಾತಿಗೆ ಸಾಕ್ಷಿಯಂತಿತ್ತು ಅಂದಿನ ಘಟನಾವಳಿ.
 
ಮಾರನೇ ದಿನದ ಪತ್ರಿಕೆಗಳಲ್ಲಿ ಅದು ಭಾರೀ ಸುದ್ದಿಯಾಗಿತ್ತು. ರಾಜ್ಯ ಬಂದ್ ಯಶಸ್ವಿಗೊಂಡಿತ್ತು. ಆದರೆ ಬೆಂಗಳೂರಿನ ಮೂರನೇ ಒಂದು ಭಾಗದ ಪ್ರದೇಶ ಹತ್ತುರಿದಿತ್ತು. ಈ ಭಾಗದಲ್ಲಿದ್ದ ತಮಿಳರು ಬೆಂಗಳೂರನ್ನು ಬಿಟ್ಟು ತಮಿಳುನಾಡಿನತ್ತ ಹೋಗುತ್ತಿದ್ದಾರೆಂಬ ಸಂಗತಿಗಳೂ ಪ್ರಕಟವಾಗಿದ್ದವು. ಅಂದು ಪೂರ್ತಿಯಾಗಿ ಪೋಲೀಸರು ಅತ್ಯಂತ ಸಹನೆಯಿಂದಲೇ ವರ್ತಿಸಿದ್ದು ಕೂಡಾ ವರದಿಯಾಗಿತ್ತು. ಆ ಗಲಭೆಗಳನ್ನು ನಿಯಂತ್ರಿಸಲು ಪೋಲೀಸರು ಕಠಿಣ ಕ್ರಮಗಳಿಗೆ ಮುಂದಾಗಿದ್ದರೆ ಭಾರೀ ಸಾವು-ನೋವುಗಳುಂಟಾಗುತ್ತಿದ್ದವು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು.
 
ಆ ದಿನ ಪಾರ್ಲಿಮೆಂಟಿನಲ್ಲಿ ತಮಿಳುನಾಡಿನ ಸಂಸದರು ಕರ್ನಾಟಕದಲ್ಲಿ ತಮಿಳರ ಮೇಲಾಗುತ್ತಿದ್ದ ದಾಳಿಯನ್ನು ಖಂಡಿಸಿ ಬೊಬ್ಬಿರಿಯತೊಡಗಿದ್ದರು. ಲಕ್ಷಾಂತರ ತಮಿಳರು ಬೆಂಗಳೂರು ಬಿಟ್ಟು ಓಡಿ ಬರುತ್ತಿದ್ದಾರೆ. ಕೇಂದ್ರ ಸರ್ಕಾರ ಈ ಕೂಡಲೇ ಮಿಲಿಟರಿಯನ್ನು ಕಳಿಸಿ ತಮಿಳರನ್ನು ರಕ್ಷಣೆಯನ್ನು ಮಾಡಬೇಕು ಎಂದು ಕೂಗಾಡಿದ್ದರು. ಆದರೆ ಅದಕ್ಕೆ ಪ್ರತಿಯಾಗಿ ಕರ್ನಾಟಕದ ಸಂಸದರು ಅಷ್ಟೇ ಬಿರುಸಿನಿಂದ ಪ್ರತಿಕ್ರಿಯಿಸುವ ಎದೆಗಾರಿಕೆ ತೋರಿರಲಿಲ್ಲ.
 
ಅಚ್ಚರಿಯೆಂದರೆ, ಎರಡನೇ ದಿನವೂ ಬೆಂಗಳೂರಿನಲ್ಲಿ ಗಲಭೆ ಮುಂದುವರಿದಿತ್ತು. ಅದು ಇತರ ಪ್ರದೇಶಗಳಿಗೂ ವಿಸ್ತರಣೆಗೊಂಡಿತ್ತು. ಮೊದಲ ದಿನ ಬಿಗುವಿನಿಂದ ಕೂಡಿ ಯಾವ ಗಲಭೆಗೂ ಒಲಿಯದಿದ್ದ ಶ್ರೀರಾಮಪುರವು ಎರಡನೇ ದಿನದಂದು ಪ್ರತೀಕಾರಕ್ಕೆ ಮುಂದಾದಂತಿತ್ತು. ಅಲ್ಪಸಂಖ್ಯಾತರಾಗಿದ್ದ ಕನ್ನಡಿಗರ ಮನೆಗಳನ್ನು ಹುಡುಕಿ ಧಾಳಿ, ಧ್ವಂಸ ಕಾರ್ಯಗಳಲ್ಲಿ ಕೆಲವು ತಮಿಳರು ಮುಂದಾಗಿದ್ದರು. ಸ್ವತಂತ್ರಪಾಳ್ಯ, ದಯಾನಂದನಗರ, ರಾಮಚಂದ್ರಪುರ, ಪ್ರಕಾಶನಗರ, ಮಾಗಡಿ ರಸ್ತೆ ಮುಂತಾದೆಡೆ ಈ ಕೃತ್ಯಗಳು ನಡೆಯಲು ಆರಂಭವಾಗಿ ಕನ್ನಡಿಗರೇ ತತ್ತರಗುಡುವಂತಾಗಿತ್ತು. ಶ್ರೀರಾಮಪುರ ಪ್ರದೇಶದ ಒಂದಿಬ್ಬರು ತಮಿಳು ಉದ್ಯಮಿಗಳು ತಮಿಳರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ, ಅವರ ಮನೆಗಳಿಗೆ ತಮ್ಮ ಕಾರ್ಖಾನೆಯಲ್ಲಿ ಆಯುಧಗಳನ್ನು ತಯಾರಿಸಿ ಪೂರೈಕೆ ಮಾಡುತ್ತಿದ್ದಾರೆ, ತಮಿಳರು ತಂತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಲು ಅಣಿಯಾಗಬೇಕೆಂದು ಪ್ರಚೋದಿಸುತ್ತಿದ್ದಾರೆ ಎಂಬ ಸುದ್ದಿಗಳು ಹರಡಿಕೊಂಡಿದ್ದವು. ಆಗ ಬೆಂಗಳೂರಿನ ಪೋಲೀಸ್ ವ್ಯವಸ್ಥೆ ಪೂರ್ವ, ಪಶ್ಚಿಮ ಎಂಬ ಇಬ್ಬರು ಡಿಸಿಪಿ ಗಳ ಹತೋಟಿಯಲ್ಲಿ ಮಾತ್ರವೇ ಇತ್ತು. ಶ್ರೀರಾಮಪುರದಂತಹ ತಮಿಳರೇ ಅಧಿಕವಾಗಿರುವ ಪ್ರದೇಶದಲ್ಲಿ ಅಲ್ಪಸಂಖ್ಯಾತ ಕನ್ನಡಿಗರ ರಕ್ಷಣೆ ಮಾಡಿ ಎಂದು ಕನ್ನಡಪರ ಚಳವಳಿಗಾರರು ಒತ್ತಾಯಿಸಿದಾಗ ಅದಕ್ಕೆ ಕ್ರಮ ಕೈಗೊಂಡಿದ್ದರು. ಆದರೆ ಎರಡನೇ ದಿನವೂ ಗಲಭೆ ವ್ಯಾಪಕವಾಗಿ ನಡೆಯತೊಡಗಿದ್ದರಿಂದ ಬೆಂಗಳೂರಿನ ಗಲಭೆಪೀಡಿತ ಪ್ರದೇಶಗಳಲ್ಲಿ ಕರ್ಫ಼್ಯೂ ವಿಧಿಸಲಾಯಿತು. ಕಂಡಲ್ಲಿ ಗುಂಡು ಎಂಬ ಎಚ್ಚರಿಕೆ ನೀಡಲಾಯಿತು.
ಇದು ಬೆಂಗಳೂರಿನ ಕತೆಯಾದರೆ, ಕಾವೇರಿ ನ್ಯಾಯ ಮಂಡಳಿಯ ಮಧ್ಯಂತರ ತೀರ್ಪು ವಿರೋಧಿಸಿ ನಡೆಯುತ್ತಿದ್ದ ಪ್ರತಿರೋಧವು ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡತೊಡಗಿತು. ಮೈಸೂರು ನಗರ ಮತ್ತು ಜಿಲ್ಲೆಯ ನಂಜನಗೂಡು, ಗುಂಡ್ಲುಪೇಟೆ, ಹುಣಸೂರು, ಕೊಳ್ಳೇಗಾಲ ತಾಲ್ಲೂಕುಗಳು ಪ್ರಕ್ಷುಬ್ದಗೊಂಡಿದ್ದವು. ಅದರಲ್ಲೂ ಮೈಸೂರಿನಿಂದ ಗುಂಡ್ಲುಪೇಟೆವರೆಗೆ ಊಟಿ ರಸ್ತೆಯಲ್ಲಿ ಅಕ್ಷರಶಃ ಬೆಂಕಿಯುಂಡೆಗಳು ಉರುಳಾಡುವಂತಾಗಿತ್ತು. ದವಸ ಧಾನ್ಯ, ನ್ಯೂಸ್ ಪ್ರಿಂಟ್, ತರಕಾರಿ, ಬೇಳೆ, ಕಡಲೆ, ಜೋಳ ಮುಂತಾದವನ್ನು ತುಂಬಿದ್ದ ಲಾರಿಗಳು ಬೆಂಕಿಗಾಹುತಿಯಾಗಿದ್ದವು. ಅವು ಅರೆಬರೆ ಬೆಂದ ಸ್ಥಿತಿಯಲ್ಲಿ ನಿಂತಲ್ಲೇ ನಿಂತು ತಮ್ಮ ಕಥೆ ಸಾರುತ್ತಿದ್ದವು. ಮೈಸೂರು ನಗರದ ಕೆಲವಾರು ಪ್ರದೇಶಗಳು ಬೆಂಗಳೂರಿನ ಸ್ಥಿತಿಯನ್ನೇ ಅನುಭವಿಸುತ್ತಿದ್ದವು. ಅಲ್ಲಿಯೂ ಕರ್ಫ್ಯೂ ಹೇರಲಾಗಿತ್ತು.
ಇತ್ತ ಮಂಡ್ಯ ಜಿಲ್ಲೆಯೂ ಗಲಭೆಗ್ರಸ್ತ ಪ್ರದೇಶವಾಗಿತ್ತು. ಮಂಡ್ಯ ನಗರ ಪ್ರಕ್ಷುಬ್ದಗೊಂಡಿತ್ತು. ಶ್ರೀರಂಗ ಪಟ್ಟಣ, ಪಾಂಡವಪುರ, ಮದ್ದೂರು, ಮಳವಳ್ಳಿ ತಾಲ್ಲೂಕುಗಳಲ್ಲಿ ವ್ಯಾಪಕ ಗಲಾಟೆ ನಡೆದಿದ್ದವು. ಆದರೆ ಬೆಂಗಳೂರು, ಮೈಸೂರುಗಳಂತೆ ಭೀಕರವೆನ್ನಿಸುವ ಪ್ರಕರಣಗಳು ಈ ಜಿಲ್ಲೆಯಲ್ಲಿ ನಡೆದಿರಲಿಲ್ಲ.
 
ಆದರೆ ಬೆಂಗಳೂರು ನಗರ ಮತ್ತು ಮಂಡ್ಯ, ಮೈಸೂರು ಜಿಲ್ಲೆಗಳಿಂದ ತಮಿಳರು ಸಾಕಷ್ಟು ಸಂಖ್ಯೆಯಲ್ಲಿ ತಮಿಳುನಾಡಿನತ್ತ ಹೊರಟಿದ್ದರು. ಅವರನ್ನು ಯಾರೂ ಓಡಿಸುವ ಕೆಲಸಕ್ಕೆ ಮುಂದಾಗಿರಲಿಲ್ಲ. ಕನ್ನಡಿಗರಂತೂ ತಮಿಳರನ್ನು ಹುಡುಕಿ ಹಲ್ಲೆ ಮಾಡುವ, ಬೆದರಿಸುವ, ಓಡಿಸುವ ಕಾರ್ಯಕ್ಕೆ ಮುಂದಾಗಿರಲಿಲ್ಲ. ಆದರೆ ಕನ್ನಡಕ್ಕೆ ಅಪಮಾನವೆಸಗಿದ್ದ, ಕನ್ನಡಿಗರಿಗೆ ಅನ್ಯಾಯವೆಸಗಿದ್ದ ಕೆಲವು ಸಂಸ್ಥೆಗಳನ್ನು, ವ್ಯಕ್ತಿಗಳನ್ನು, ಉದ್ಯಮದವರನ್ನು ಆ ಸಂಧರ್ಭದಲ್ಲಿ ಹಳೆಯ ನೋವು ಮತ್ತು ಆಕ್ರೋಶದಿಂದ ವಿಚಾರಿಸಿಕೊಂಡಿದ್ದುಂಟು. ರಾಜಾಜಿನಗರದ ವಿದ್ಯಾಸಂಸ್ಥೆಯೊಂದರ ಮೇಲೆ ಕನ್ನಡಿಗರು ಮೊದಲ ದಿನವೇ ಧಾಳಿ ಮಾಡಿದ್ದರು. ಅದಕ್ಕೆ ಕಾರಣವೂ ಇತ್ತು. ಆ ಸಂಸ್ಥೆಯ ಸಂಸ್ಥಾಪಕರು ಶಾಲೆಯಲ್ಲಿ ಕನ್ನಡ ಮಾತಾಡುವವರಿಗೆ ದಂಡ ಹಾಕುವ ಪ್ರವೃತ್ತಿಯನ್ನು ರೂಡಿಗೆ ತಂದಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಕನ್ನಡಿಗರು ಆ ಸಂಧರ್ಭವನ್ನು ಬಳಸಿಕೊಂಡು ಬುದ್ದಿ ಕಲಿಸಿದ್ದರು. ಇನ್ನೊಂದು ಬೃಹತ್ ಟೆಕ್ಸ್ ಟೈಲ್ಸ್ ಸಂಸ್ಥೆಯು ಕನ್ನಡಿಗರಿಗೆ ಕೆಲಸ ಕೊಡಲು ನಿರಾಕರಿಸಿ ಬರೀ ತಮಿಳರನ್ನೇ ನೇಮಿಸಿಕೊಂಡಿತ್ತು ಎಂಬ ಸಿಟ್ಟನ್ನು ಆಕ್ರೋಶವಾಗಿ ಪರಿವರ್ತಿಸಿ ಅದಕ್ಕೆ ಆಗ ಬೆಂಕಿ ಸ್ಪರ್ಶ ಮಾಡಿಬಿಟ್ಟಿದ್ದರು.
ಶ್ರೀರಾಮಪುರದಲ್ಲಿ ಕನ್ನಡಿಗರನ್ನು ಹುಡುಕಿ ಹುಡುಕಿ ಧಾಳಿ ಮಾಡಿ ಸೇಡು ತೀರಿಸಿಕೊಳ್ಳುತ್ತಿದ್ದ ಕೆಲವು ಕಿಡಿಗೇಡಿಗಳನ್ನು ಪೋಲೀಸರು ಬಂಧಿಸಿ ಠಾಣೆಯಲ್ಲಿ ಕೂಡಿ ಹಾಕಿದ್ದರೆ ಅವರನ್ನು ಬಿಡಬೇಕೆಂದು ನೂರಾರು ತಮಿಳರು ಠಾಣೆ ಮುಂದೆಯೇ ಸೇರಿ ಗಲಾಟೆ ಮಾಡಿದ್ದರು. ಆ ಕಿಡಿಗೇಡಿಗಳನ್ನು ಹಿಡಿದು ಒಯ್ದಿದ್ದ ಪೋಲೀಸ್ ಪೇದೆಗಳನ್ನು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚುವುದಾಗಿ ಕೆಲವರು ಕೂಗಾಡಿದ್ದರು. ಅವರ ಆರ್ಭಟವನ್ನು ಕಂಡು ತೀರಾ ಸೂಕ್ಷ್ಮ ಪ್ರದೇಶವಾದ ಇಲ್ಲಿ ಇಂಥವು ಇನ್ನೇನೆಲ್ಲಾ ಅನಾಹುತಗಳನ್ನು ಸ್ರಷ್ಟಿಸುತ್ತದೋ ಎಂಬ ಅಂಜಿಕೆಯಿಂದ ಪೋಲೀಸರು ಅವರನ್ನು ಬಿಡುಗಡೆ ಮಾಡಿ ಕಳಿಸಿಯೂ ಇದ್ದರು.
 
ಈ ಸಂಗತಿ ಅದೇ ಪ್ರದೇಶದ ಕನ್ನಡ ಸಂಘಟನೆಗಳ ಮುಖಂಡರಿಗೆ ಗೊತ್ತಾಗಿ ಅವರೂ ನೂರಾರು ಜನರೊಡನೆ ಠಾಣೆ ಮುಂದೆ ಜಮಾಯಿಸಿ ಪೋಲೀಸರಿಗೆ ನೈತಿಕ ಬೆಂಬಲ ಘೋಷಿದ್ದರು. ಪೋಲೀಸ್ ಪೇದೆಗಳನ್ನೇ ಸುಟ್ಟುಹಾಕುವುದಾಗಿ ಬೆದರಿಸಿದ್ದ ಕಿಡಿಗೇಡಿಗಳನ್ನು ಬಂಧಿಸುವಂತೆ, ಕನ್ನಡಿಗರ ಮನೆಗಳ ಮೇಲೆ ಧಾಳಿ ಮಾಡುತ್ತಿದ್ದ ತಮಿಳರನ್ನು ಮತ್ತೆ ಬಂಧಿಸಿ ಜೈಲಿಗೆ ಕಳಿಸಬೇಕೆಂದು ಆಗ್ರಹಿಸಿದ್ದರು. ಪೋಲೀಸರ ಬೆಂಬಲಕ್ಕೆ ನಾವಿರುವುದಾಗಿಯೂ ಘೋಷಿಸಿದ್ದರು.
ಈ ಬಗೆಯಲ್ಲಿ ಘಟನಾವಳಿಗಳು ಬೆಂಗಳೂರು ನಗರದ ಕೆಲವಾರು ಕಡೆ ನಡೆಯತೊಡಗಿದ್ದವು. ಆದರಲ್ಲೂ ಕನ್ನಡಿಗರ ಮೇಲೆ ತಮಿಳರಿಂದ ಹಲ್ಲೆಗಳು ನಡೆಯುತ್ತಿವೆ, ಕನ್ನಡಿಗರ ಮನೆಗಳನ್ನು ಧ್ವಂಸ ಮಾಡಲಾಗುತ್ತಿದೆ ಎಂಬ ಸಂಗತಿಗಳು ರೆಕ್ಕೆಪುಕ್ಕದೊಡನೆ ಹರಡಿಕೊಳ್ಳತೊಡಗಿದ್ದಾಗ ಕನ್ನಡಿಗರು ಮತ್ತೆ ಮತ್ತೆ ಬೀದಿಗಿಳಿಯುವ ಕಾರ್ಯ ಮಾಡುತ್ತಿದ್ದರು. ಅದು ಮತ್ತಷ್ಟು ಗಲಭೆಗೆ ಕಾರಣವಾಗುತ್ತಿತ್ತು. ಆಗ ಗಲಭೆ ನಿಯಂತ್ರಿಸಲು ಪೋಲೀಸರು ಗೋಲೀಬಾರ್ ನಡೆಸಿದ್ದರು. ಅಂತಹ ವಿವಿಧ ಕಡೆಯ ಗೋಲೀಬಾರ್ ಗೆ ಸುಮಾರು ೧೧೮ ಮಂದಿ ಬಲಿಯಾಗಿದ್ದರು. ಅವರಲ್ಲಿ ಬಹುತೇಕರು ಕನ್ನಡಿಗರೇ ಆಗಿದ್ದರು. 
 

                                                                                      ಮರಳಿ
 
 
 
 
 
 
Copyright © 2011 Neemgrove Media
All Rights Reserved