ಅಂಗಳ      ಗಾಳಿ ಅಂಗಿ ಚುಂಗು ಹಿಡಿದು
Print this pageAdd to Favorite
 

 ಗಾಳಿ ಅಂಗಿ ಚುಂಗು ಹಿಡಿದು
ಕಾಲಿಗಷ್ಟು ಚಕ್ರ ಕಟ್ಟಿ
ಮೆಲ್ಲ ಮೆಲ್ಲ ಸಿಲ್ಲಿ ಗಲ್ಲಿ
ಕೋಟೆ ಕೊತ್ತಲ ಊರು ಸುತ್ತಿ
ಕಣ್ಣು ಕಂಡ ಪಟಗಳನ್ನು
ಮನದ ಪದಕೆ ತಳಿಕೆ ಹಾಕಿ
ಹಿಗ್ಗು ಸುಗ್ಗಿ ಎಲ್ಲ ಸುರಿದು
ಪುಟದ ಮೇಲೆ ತಟಪಟಾ...

 
 
ಫ್ರೆಂಚ್ ಮಹಾಕ್ರಾಂತಿ ನೆನಪಿನ ಗುಸ್ತಾವೆ ಐಫಲ್ ಗೋಪುರ

ಟೋನಿ

ಬೆಳಿಗ್ಗೆ ಬೇಗನೇ ಎದ್ದು ರೆಡಿಯಾಗಿ ಲಗೇಜು ಸಮೇತ ರೂಮಿನಿಂದ ಹೊರಗಡೆ ಬಂದ ನಾನು, ತಿಂಡಿ ತಿಂದು ಸ್ವಲ್ಪ ಸುತ್ತಾಡಿ ಬರೋಣವೆಂದು ಹೊರಟರೆ ಮಳೆ ಶುರುವಾಗಿತ್ತು. ಹೋಟೆಲಿನ ರೆಸೆಪ್ಷನಲ್ಲಿದ್ದ ಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತಿದ್ದೆ. ನನ್ನ ರೂಮ್ ಮೇಟ್ ಇನ್ನೂ ಕೆಳಗಿಳಿಯದಿದ್ದುದರಿಂದ ಹಾಗೇ ನನಗೆ ಮೂತ್ರ ವಿಸರ್ಜನೆಗೆ ಅವಸರವಾಗಿದ್ದರಿಂದ ಅವರನ್ನು ಕರೆಯಲು ರೂಮಿಗೆ ಹೋದೆ. ಅಷ್ಟರಲ್ಲಿ ಸ್ನಾನ ಮಾಡಿ ಬಂದಿದ್ದ ನನ್ನ ರೂಮ್ ಮೇಟ್ ಏನೋ ಯಡವಟ್ಟು ಮಾಡಿಕೊಂಡವರಂತೆ ಗಡಿಬಿಡಿಯಲ್ಲಿದ್ದರು. ಅವರ ಗಡಿಬಿಡಿ ಕಂಡು ಗಾಬರಿಯಾದ ನಾನು ಏನಾಯ್ತೆಂದು ಕೇಳಿದ್ದಕ್ಕೆ ಬಾಯಿಗೆ ಬೆರಳಿಟ್ಟು ಮೆಲ್ಲಗೆ ಮಾತಾಡುವಂತೆ ಹೇಳಿ ಅವಸರವಸರವಾಗಿ ಏನನ್ನೋ ಹುಡುಕಾಡತೊಡಗಿದ್ದರು.

ಇವರದ್ದೊಳ್ಳೇ ಕಥೆಯಾಯ್ತಲ್ಲ, ಎಲ್ಲ ರೆಡಿಯಾಗಿ ಹೊರಗಡೆ ನಿಂತಿರುವಾಗ ಇವರು ಏನೆಂದು ವಿಷಯವನ್ನೂ ಹೇಳದೆ ಒದ್ದಾಡುತ್ತಿದ್ದಾರಲ್ಲಾ...ಅಂತ ರೂಮಿನ ಬಾಗಿಲು ಮುಚ್ಚಿ ’ಏನಾಯ್ತು ಏನನ್ನಾದರೂ ಕಳೆದುಕೊಂಡಿದ್ದೀರಾ’? ಎಂದು ಪಿಸುದನಿಯಲ್ಲಿ ಕೇಳಿದೆ. ರೂಮಿನ ಬಾಗಿಲು ಮುಚ್ಚಿರುವುದನ್ನು ಖಚಿತ ಪಡಿಸಿಕೊಂಡ ಅವರು ಒರೆಸಲು ಬಟ್ಟೆ ಬೇಕಿರುವುದರಿಂದ ಅದನ್ನು ಹುಡುಕುತ್ತಿರುವುದಾಗಿ ಹೇಳಿದರು. ನನಗೆ ತಲೆಬುಡ ಅರ್ಥವಾಗಲಿಲ್ಲ. ಒರೆಸುವ ಬಟ್ಟೆಗಾಗಿ ಅವರು ಇಷ್ಟು ಒದ್ದಾಡುತ್ತಾ ಗಲಿಬಿಲಿಗೊಂಡವರಂತೆ ವರ್ತಿಸುತ್ತಾ, ಅದೊಂದು ಮಹಾನ್ ರಹಸ್ಯವೆಂಬಂತೆ ಮೆಲುದನಿಯಲ್ಲಿ ಯಾರಿಗೂ ಗೊತ್ತಾಗದಂತೆ ಬಾಗಿಲು ಮುಚ್ಚಿ ಹೇಳುತ್ತಿದ್ದಾರಲ್ಲಾ ಎಂದು ನನಗೆ ಆಶ್ಚರ್ಯವಾಗಿ ’ಅದಕ್ಯಾಕೆ ಗಾಬರಿಯಾಗಿದ್ದೀರಿ, ನಾವೀಗ ರೂಮು ಖಾಲಿ ಮಾಡಬೇಕಾಗಿದೆ. ಏನನ್ನು ಒರೆಸಲು ಹೊರಟಿದ್ದೀರಿ’? ಎಂದು ರೂಮಿನಲ್ಲಿ ಏನಾದರೂ ಮಾಡಿದ್ದಾರಾ ಎಂಬ ಅನುಮಾನದಿಂದ ರೂಮೆಲ್ಲಾ ಒಮ್ಮೆ ಗಮನಿಸಿದೆ. ಒರೆಸುವಂಥಾದ್ದೇನೂ ಆಗಿರಲಿಲ್ಲ. ’ಎಲ್ಲಾ ನೀಟಾಗಿದೆಯಲ್ಲಾ’ ಎಂದೆ ಅದಕ್ಕವರು ಮತ್ತೆ ಪಿಸುದನಿಯಲ್ಲೇ’ ’ಬಾತ್ ರೂಮಿನಲ್ಲಿ ನೀರು ತುಂಬಿಕೊಂಡುಬಿಟ್ಟಿದೆ’ ಎಂದರು. ’ಅಯ್ಯೋ ಅದಕ್ಯಾಕೆ ತಲೆ ಕಡಿಸಿಕೊಂಡಿದ್ದೀರಿ, ಬನ್ನಿ ಹೋಗೋಣ’ ವೆಂದದ್ದಕ್ಕೆ ಅವರು’ ’ನಿಮಗೆ ಗೊತ್ತಿಲ್ವಾ ಸಿಕ್ಕಾ ಪಟ್ಟೆ ಫೈನ್ ಹಾಕ್ತಾರಂತೆ!’ ಆಂದಾಗಲೇ ನನಗೆ ಅವರ ಗಾಬರಿಗೆ ಕಾರಣ ಗೊತ್ತಾದದ್ದು.

ಮೊನ್ನೆ ಲಂಡನ್ನಿನಿಂದ ಪ್ಯಾರಿಸ್ಸಿಗೆ ಬರುವಾಗ ಜ್ಯೂಜರ್ ನಮಗೆ ಬಸ್ಸಿನಲ್ಲಿದ್ದ ಮೈಕಿನಲ್ಲಿ ನಿನ್ನೆ ರಾತ್ರಿ ಯಾರದೋ ರೂಮಿನ ಬಾತ್ ರೂಮಿನಲ್ಲಿ ನೀರು ತುಂಬಿಕೊಂಡು ಅದರಿಂದ ರೂಮಿನೊಳಕ್ಕೆ ನೀರು ಬಂದು ಅಲ್ಲಿದ್ದ ಕಾರ್ಪೆಟ್ ನೆನೆದು ಹೋಟೆಲಿನವರು ಅವರಿಗೆ ದಂಡ ಹಾಕಿದ್ದಾರೆಂದಿದ್ದ. ಅವರು ನಮ್ಮ ಜೊತೆಯಲ್ಲಿ ಬಂದವರಾಗದೆ ಬೇರೆಯವರಾಗಿದ್ದರಿಂದ ನಾವು ಅದಕ್ಕೆ ತಲೆಕೆಡಿಸಿಕೊಂಡಿರಲಿಲ್ಲ. ಮುಂದುವರೆದ ಜ್ಯೂಜರ್ ಯೂರೋಪಿನಲ್ಲಿ ಹಾಗೆ ನೀರು ಬಿದ್ದು ನೆಲಕ್ಕೆ ಹಾಕಿರುವ ಕಾರ್ಪೆಟ್ ನೆನೆದು ಹಾಳಾದರೆ ಅದಕ್ಕೆ ಒಂದೂವರೆ ಸಾವಿರ ದಂಡ ವಿಧಿಸುತ್ತಾರೆಂದದ್ದು ಕಿವಿಗೆ ಬಿದ್ದ ಕೂಡಲೇ ನಮ್ಮೊಡನಿದ್ದ ಉತ್ತರ ಭಾರತೀಯರು ಕಿತ್ನಾ, ಕಿತ್ನಾ? ದೇಡ್ ಹಜಾರ್ ರುಪಾಯ್ ಕ್ಯಾ? ಅಂದದ್ದಕ್ಕೆ ಆತ ದೇಡ್ ಹಜಾರ್ ಯೂರೋ ಅಂದಿದ್ದ. ಅದಕ್ಕೆ ಕೆಲವರು ಗಾಬರಿಯಾಗಿ ’ಕ್ಯಾ ಉತ್ನಾ ಮೆಹಂಗಾ ಓ ಚೋಟಾ ಕಾರ್ಪೆಟ್! ಎಂದು ಉದ್ಘರಿಸಿ ತಾವು ಅದನ್ನು ಒದ್ದೆ ಮಾಡಿ, ಹಾಳು ಮಾಡಿ, ಇನ್ನೇನು ದಂಡ ನೀಡಬೇಕಾಗಿರುವವರಂತೆ ಅದರ ಬೆಲೆಯ ಬಗ್ಗೆ ವಾದಕ್ಕಿಳಿದಿದ್ದರು. ಆಗ ಜ್ಯೂಜರ್ ನಮಗೆಲ್ಲಾ ನೀರು ಬಾತ್ ಟಬ್ಬಿನಿಂದ ಕೆಳಗೆ ಬೀಳದಂತೆ ಎಚ್ಚರ ವಹಿಸಬೇಕೆಂದೂ ಪಾಲಿಥೀನ್ ಸ್ಕ್ರೀನನ್ನು ಹಾಕಿಕೊಂಡು ಸ್ನಾನ ಮಾಡಬೇಕೆಂದೂ, ಹಾಗೆ ಮಾಡುವುದರಿಂದ ದಂಡ ಕಟ್ಟುವ ಪ್ರಮೇಯ ಬರುವುದಿಲ್ಲವೆಂದು ಎಚ್ಚರಿಸಿದ್ದ. ಒಂದೂವರೆ ಸಾವಿರ ಯೂರೋಗಳೆಂದರೆ ಸುಮಾರು ೯೦ ಸಾವಿರ ರೂಪಾಯಿಗಳಾಗುತ್ತಿದ್ದುದರಿಂದ ಕೆಲವರು ಲೊಚಗುಟ್ಟಿ ಎಚ್ಚರಿಕೆಯಿಂದ ಸ್ನಾನ ಮಾಡುವುದೊಳ್ಳೆಯದೆಂದು ತಮ್ಮ ತಮ್ಮಲ್ಲೇ ಮಾತಾಡಿಕೊಂಡಿದ್ದರು.

ಬಹುಶಃ ಜ್ಯೂಜರ್ ಹೇಳಿದ್ದ ಮಾತು ನೆನಪಾಗಿಯೇನೋ ನೀರು ಸೋರಿದ್ದರಿಂದ ಇನ್ನೆಲ್ಲಿ ತಾವೂ ದಂಡ ತೆರಬೇಕಾಗುತ್ತದೋ ನನ್ನ ರೂಮ್ ಮೇಟ್ ಗಾಬರಿಯಾಗಿದ್ದುದು ಸಹಜವಾಗಿತ್ತು. ಅದಕ್ಕೇ ಅವರು ನೀರು ಬಿದ್ದಿರುವ ಜಾಗವನ್ನು ಒರೆಸಿಬಿಡುವ ರಹಸ್ಯ ಕಾರ್ಯಾಚರಣೆ ನಡೆಸಿದ್ದರು. ಬಾಗಿಲು ಮುಚ್ಚಿಕೊಂಡು ಪಿಸುಮಾತಿನಲ್ಲೇ ಎಂಥಾ ಯಡವಟ್ಟಾಗಿಹೋಯ್ತೆಂದು ಗೊಣಗಾಡತೊಡಗಿದ್ದರು. ಬಾತ್ ರೂಮಿನಲ್ಲಿ ನೋಡಿದಾಗ ಅಲ್ಲಿ ನೀರು ತುಂಬಿಕೊಂಡಿತ್ತು. ಬಾತ್ ಟಬ್ಬಿನಿಂದ ಹೊರಗಡೆ ನೀರುಬಿದ್ದಲ್ಲಿ ಅದು ಆಚೆಗೆ ಹೋಗುವ ವ್ಯವಸ್ಥೆ ಇಲ್ಲದಿದ್ದುದರಿಂದ ಹಾಗೆ ಚೆಲ್ಲಿದ ನೀರೆಲ್ಲಾ ಅಲ್ಲೇ ಶೇಖರಗೊಂಡು ಜಾಸ್ತಿಯಾದ ನಂತರ ಬಾತ್ ರೂಮಿನಿಂದ ಹೊರಗೆ ಹರಿಯುತ್ತಿದ್ದುದರಿಂದ ರೂಮಿನಲ್ಲಿದ್ದ ಕಾರ್ಪೆಟ್ ಒದ್ದೆಯಾಗುತ್ತಿತ್ತು. ನೀವು ಸ್ಕ್ರೀನ್ ಹಾಕಿಕೊಂಡು ಸ್ನಾನ ಮಾಡಲಿಲ್ಲವಾ ಎಂದದ್ದಕ್ಕೆ ಅವರು ಸ್ಕ್ರೀನನ್ನು ಹೊರಗಡೆ ಬಿಟ್ಟುಕೊಂಡಿದ್ದಾಗಿಯೂ ಆದರೂ ನೀರು ಹೇಗೆ ಚೆಲ್ಲಿತೆಂಬುದೇ ಅರ್ಥವಾಗುತ್ತಿಲ್ಲವೆಂದರು. ನೀವು ಸ್ಕ್ರೀನನ್ನು ಟಬ್ಬಿನೊಳಗಡೆ ಬಿಟ್ಟುಕೊಂಡಿದ್ದಲ್ಲಿ ಹೀಗಾಗುತ್ತಿರಲಿಲ್ಲವೆಂದು ಹೇಳಿದ್ದಕ್ಕೆ ಹೌದು ಎಂದವರೇ ನೀರನ್ನು ಹಿಂಡಿ ಹಾಕಲು ಮತ್ತೆ ಬಟ್ಟೆಗಾಗಿ ಹುಡುಕಾಡಿ ಕೊನೆಗೆ ತಮ್ಮ ಬನಿಯನ್ ಅನ್ನೇ ಕೈಗೆತ್ತಿಕೊಂಡರು. ಅವರು ಕ್ಲೀನಿಂಗ್ ಕಾರ್ಯಾಚರಣೆಗೆ ಇಳಿದಿದ್ದು ಕಂಡು ಗಾಬರಿಯಾಗುವ ಸರದಿ ನನ್ನದಾಗಿತ್ತು. ಏಕೆಂದರೆ ಕೆಳಗಡೆ ಎಲ್ಲರೂ ತಮ್ಮ ಲಗೇಜುಗಳ ಸಮೇತ ಇಳಿದು ರೆಡಿಯಾಗಿದ್ದರು.

ಇವರು ಆ ನೀರನ್ನೆಲ್ಲಾ ಹಿಂಡಿ ಹಾಕಬೇಕೆಂದರೆ ಕನಿಷ್ಟ ಒಂದು ಗಂಟೆಯಾದರೂ ಬೇಕಾಗುತ್ತಿತ್ತು. ನಿನ್ನೆ ರಾತ್ರಿಯೇ ಲಿಡೋ ಶೋ ಗೆ ಹೋಗುವಾಗ ನಾವಿಬ್ಬರೂ ತಡಮಾಡಿದ್ದಕ್ಕೆ ಎಲ್ಲ ಗೊಣಗಾಡಿದ್ದರು . ಇಂದು ನಾವು ಐಫಲ್ ಟವರ್ ನೋಡಿಕೊಂಡು ನಂತರ ಬೆಲ್ಜಿಯಮ್ ದೇಶದ ಬ್ರುಸೇಲ್ಸ್ ಗೆ ಪ್ರಯಾಣಿಸಬೇಕಿದ್ದರಿಂದ ಬೆಳಿಗ್ಗೆ ಬೇಗನೇ ಎದ್ದು ನಮ್ಮ ಲಗೇಜುಗಳನ್ನು ರೆಡಿಮಾಡಿಕೊಂಡು ಹೊರಗಡೆ ಬರಬೇಕೆಂದು ಜ್ಯೂಜರ್ ನಿನ್ನೆ ಎರಡೆರಡು ಬಾರಿ ಎಚ್ಚರಿಸಿದ್ದನಲ್ಲದೆ ಇಂದು ಬೆಳಿಗ್ಗೆ ಆರು ಗಂಟೆಗೇ ರೂಮಿಗೆ ಫೋನಾಯಿಸಿ ಬೇಗನೇ ಬನ್ನಿ ತಿಂಡಿ ತಿಂದು ಹೊರಡುವ ಸಮಯವಾಯಿತೆಂದು ಹೇಳಿದ್ದ. ಇಲ್ಲಿ ನೋಡಿದರೆ ಇವರು ಬಚ್ಚಲಿನಲ್ಲಿ ನೀರು ಚೆಲ್ಲಿಕೊಂಡು ಗಲಿಬಿಲಿಯಿಂದ ಅದನ್ನು ಬಾತ್ ಟಬ್ಬಿನೊಳಗೆ ಹಿಂಡಿ ಹಾಕುವ ಕಾರ್ಯಾಚರಣೆಗೆ ಮುಂದಾಗಿದ್ದರು. ಇನ್ನು ಈ ನೀರನ್ನೆಲ್ಲಾ ಹಿಂಡುತ್ತಾ ಕೂತರೆ ನಮ್ಮನ್ನು ಎಲ್ಲರೂ ಬಿಟ್ಟು ಹೋಗುವುದು ಖಾತರಿಯೆಂದು ಅವರಿಗೆ ಹೇಳಿ, ಹೇಗಿದ್ದರೂ ನಾವು ರೂಮನ್ನು ಖಾಲಿ ಮಾಡುತ್ತಿರುವುದರಿಂದ, ರೂಮಿನ ಕಾರ್ಪೆಟ್ ನೆನೆಯದಿದ್ದುದರಿಂದ, ಅಲ್ಲದೆ ಇನ್ನೊಂದು ಗಂಟೆಯಲ್ಲಿ ನಾವು ಈ ದೇಶವನ್ನೇ ಬಿಟ್ಟು ಹೋಗುತ್ತಿರುವುದರಿಂದ, ಹೋಟೆಲಿನವರಿಗೆ ಗೊತ್ತಾಗುವಷ್ಟರಲ್ಲಿ ನಾವು ಬೇರೆ ದೇಶದಲ್ಲಿರುತ್ತೇವೆಂದೂ ಆದ್ದರಿಂದ ತಲೆ ಕೆಡಿಸಿಕೊಳ್ಳಬೇಕಾದ ಅವಶ್ಯಕತೆಯಿಲ್ಲವೆಂದು ಅವರಿಗೆ ಮನವರಿಕೆ ಮಾಡಿಕೊಟ್ಟು ಅವರನ್ನು ಹೊರಡಿಸುವಷ್ಟರಲ್ಲಿ ನನಗೆ ಸಾಕಾಗಿತ್ತು. ತಿಂಡಿ ತಿಂದು ಇವರು ಬಾರದ್ದರಿಂದ ಇವರನ್ನು ಕರೆಯಲು ಹಾಗೂ ಮೂತ್ರ ವಿಸರ್ಜನೆಗಾಗಿ ನಾನು ರೂಮಿಗೆ ಬಂದಿದ್ದೆ. ಆದರೆ ಅಲ್ಲಿ ನಾನೇನಾದರೂ ಬಾತ್ ರೂಮಿಗೆ ಕಾಲಿಟ್ಟಿದ್ದಲ್ಲಿ ತುಂಬಿದ್ದ ನೀರು ಹೊರಗೆ ಹರಿದು ಕಾರ್ಪೆಟ್ ಸಿಕ್ಕಾಪಟ್ಟೆ ಒದ್ದೆಯಾಗುವ ಸಂಧರ್ಭವಿತ್ತು. ಹಾಗೇನಾದರೂ ಆಗಿದ್ದಲ್ಲಿ ಅದಕ್ಕೆ ನಾನೇ ಹೊಣೆಯಾಗಿ ದಂಡ ಕಟ್ಟುವ ಸರದಿ ನನಗೆ ವರ್ಗಾವಣೆಯಾಗುವ ಸಾಧ್ಯತೆಯಿದ್ದುದರಿಂದ ಆ ತಲೆನೋವೇ ಬೇಡವೆಂದು ನನ್ನ ಕೆಲಸವನ್ನು ಖಾಲಿಯಾಗಿದ್ದ ಪಕ್ಕದ ರೂಮಿನಲ್ಲಿ ಮುಗಿಸಿದೆ.

ಐಫಲ್ ಟವರಿನ ಬಳಿ ಹೋದಾಗ ತುಂತುರು ಮಳೆ ಶುರುವಾಗಿತ್ತು. ಬೆಚ್ಚನೆಯ ಉಡುಪು ಧರಿಸಿದ್ದರೂ ಬೆಳಿಗ್ಗೆಯ ಚಳಿಯಿಂದ, ಥಂಡಿ ಗಾಳಿಯಿಂದಾಗಿ ಮೈ ನಡುಗಿಸುತ್ತಿತ್ತು. ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಿ ನಾವೆಲ್ಲಾ ನಡೆದುಕೊಂಡೇ ಐಫಲ್ ಟವರಿನ ಬಳಿಗೋದೆವು. ದಾರಿಯುದ್ದಕ್ಕೂ ಆಫ್ರಿಕಾದ ಕಪ್ಪು ಅಲೆಮಾರಿಗಳು ನಮ್ಮನ್ನು ಮುತ್ತಿ ತಮ್ಮಲ್ಲಿದ್ದ ಸಾಮಾನುಗಳನ್ನು ಕೊಂಡುಕೊಳ್ಳುವಂತೆ ಒತ್ತಾಯ ಮಾಡತೊಡಗಿದ್ದರು. ನಿನ್ನೆ ರಾತ್ರಿ ನಾವು ಸಿಯಾನ್ ನದಿಯಲ್ಲಿ ಕ್ರೂಜ್ ನಲ್ಲಿ ಸುತ್ತಿ ಬಂದಾಗ ನಾನು ಒಂದಿಬ್ಬರ ಬಳಿ ಸಣ್ಣ ಪುಟ್ಟ ಕೀಚೈನ್ ಗಳನ್ನು ಖರೀದಿಸಿದ್ದರಿಂದ ಅವರೆಲ್ಲಾ ಗುರುತು ಹಿಡಿದು ಮತ್ತೆ ನನಗೇ ಬೇರೆ ಬೇರೆ ವಸ್ತುಗಳನ್ನು ತೋರುತ್ತಾ ಅಮರಿಕೊಂಡರು. ಜ್ಯೂಜರ್ ಐಫಲ್ ಟವರ್ ಮೇಲೆ ಹೋಗಲು ಉದ್ದನೆಯ ಕ್ಯೂ ಇರುವುದರಿಂದ ಅದನ್ನು ನೋಡಿ ಬಂದ ನಂತರ ಶಾಪಿಂಗ್ ಗೆ ಸ್ವಲ್ಪ ಸಮಯ ನೀಡುವುದಾಗಿ ಹೇಳಿದ್ದರಿಂದ ಅವರಿಗೆಲ್ಲಾ ಹಿಂದಿರುಗುವಾಗ ನಿಮ್ಮಲ್ಲಿಯೇ ವ್ಯಾಪಾರ ಮಾಡುವುದಾಗಿ ಹೇಳಿದ ನಂತರವೇ ಅವರು ನಮ್ಮನ್ನು ಬಿಟ್ಟು ಹೋದದ್ದು.

ಜ್ಯೂಜರ್ ಬೇಗ ಬೇಗ ನಡೆಯುತ್ತಿದ್ದ, ಅವನು ನಡೆಯುತ್ತಿದ್ದುದು ಹೆಚ್ಚು ಕಡಿಮೆ ಓಡಿದಂತೆಯೇ ಕಾಣುತ್ತಿತ್ತು. ಪ್ಯಾಕೇಜು ಪ್ರವಾಸದಲ್ಲಿ ಸಮಯವನ್ನು ಸರಿದೂಗಿಸಲು ಹಾಗೆ ವೇಗವಾಗಿಯೇ ಓಡಾಡುವುದು ಅವನಿಗೆ ಅಭ್ಯಾಸವಾಗಿಬಿಟ್ಟಿತ್ತು. ಪ್ಯಾರಿಸ್ಸಿನ ಬೆಳ್ಳಂಬೆಳಿಗ್ಗೆಯ ಚಳಿಯಲ್ಲಿ ನಡೆಯುವುದು ಖುಶಿ ಕೊಡುತ್ತಿತ್ತು. ನಿನ್ನೆ ಪ್ಯಾರಿಸ್ಸಿನ ಸಂಜೆ ನಮಗೆ ಮುದನೀಡಿದಂತೆಯೇ ಇಂದು ಬೆಳಿಗ್ಗೆಯ ವಾತಾವರಣವೂ ಸಣ್ಣ ಸಣ್ಣ ತುಂತುರು ಮಳೆ ಹನಿಯ ಸಿಂಚನ, ಮಂಜಿನಿಂದ ಮಬ್ಬುಗಟ್ಟಿದ್ದರಿಂದ ಚಳಿಯಿದ್ದರೂ ಸುಂದರವಾಗಿತ್ತು.

ಐಫಲ್ ಟವರ್ ಬಳಿ ಹೋಗಿ ನೋಡಿದರೆ ಅಲ್ಲಿ ಜನಜಾತ್ರೆಯೇ ಸೇರಿತ್ತು. ಉದ್ದನೆಯ ಕ್ಯೂ ನಲ್ಲಿ ನಮ್ಮನ್ನು ನಿಲ್ಲಿಸಿದ ಜ್ಯೂಜ಼ರ್ ಟಿಕೆಟ್ ತರುವುದಾಗಿ ಹೇಳಿ ಹೋದ. ಮುನ್ನೂರು ಮೀಟರ್ ಎತ್ತರದ ಆ ಗೋಪುರವನ್ನು ಫ಼್ರೆಂಚರು ೧೮೮೭ ರಿಂದ ೧೮೮೯ ರವರೆಗೆ ನಡೆದಿದ್ದ ಮಹಾಕ್ರಾಂತಿಯ ನೂರು ವರ್ಷದ ನೆನಪಿಗಾಗಿ ೧೭೮೯ ರಂದು ನಿರ್ಮಿಸಿದ್ದರು. ಗುಸ್ತಾವೆ ಐಫ಼ಲ್ ಎಂಬ ಮಹಾನ್ ತಂತ್ರಜ್ನ ಇದರ ರೂವಾರಿಯಾದ್ದರಿಂದ ಆತನ ಹೆಸರನ್ನೇ ಈ ಗೋಪುರಕ್ಕೆ ಇಡಲಾಗಿತ್ತು. ೯೮೪ ಅಡಿ ಎತ್ತರವಿರುವ ಈ ಗೋಪುರವನ್ನು ಅದರ ಬುಡದಿಂದ ನಿಂತು ನೋಡಿದಾಗ ತುದಿಯು ಆಕಾಶ ಮುಟ್ಟಿದಂತೆ ಕಾಣಿಸುತ್ತಿತ್ತು. ಈ ಗೋಪುರದ ವಿಶೇಷವೆಂದರೆ ಅದನ್ನು ಸಂಪೂರ್ಣವಾಗಿ ಕಬ್ಬಿಣದಲ್ಲೇ ನಿರ್ಮಿಸಲಾಗಿತ್ತು, ಅದಕ್ಕಾಗಿ ಹತ್ತು ಸಾವಿರದ ನೂರು ಟನ್ ಕಬ್ಬಿಣವನ್ನು ಬಳಸಲಾಗಿತ್ತು. ಈ ಗೋಪುರದ ಮೂರನೇ ಸ್ಟೇಜಿಗೆ ಹತ್ತಲು ೧೬೫೨ ಮೆಟ್ಟಿಲುಗಳನ್ನು ಹಾಕಲಾಗಿತ್ತು. ಈ ಬೃಹತ್ ಟವರ್ ಅನ್ನು ಹತ್ತಿ ಬರಲು ಫ಼ರ್ಲಾಂಗು ಉದ್ದದ ಕ್ಯೂನಲ್ಲಿ ನಾವು ನಿಲ್ಲುವುದು ಅನಿವಾರ್ಯವಾಗಿತ್ತು.

ನಾವು ಕ್ಯೂ ನಿಂತಲ್ಲಿಗೇ ಕೆಲವು ಕಪ್ಪು ವ್ಯಾಪಾರಿಗಳು ತಮ್ಮ ವಸ್ತುಗಳನ್ನು ತಂದು ಮಾರಲು ಯತ್ನಿಸುತ್ತಿದ್ದುದು, ಹಾಗೆ ಬಂದ ಅವರನ್ನು ಗೋಪುರ ಕಾಯಲು ಸ್ಟೆನ್ ಗನ್ ಹಿಡಿದು ನಿಂತಿದ್ದ ಸೈನಿಕರು ಓಡಿಸುತ್ತಿದ್ದುದ್ದು ಸಾಮಾನ್ಯವಾಗಿತ್ತು. ಭಯೋತ್ಪಾದಕರ ಹಿಟ್ ಲಿಸ್ಟಿನಲ್ಲಿ ಈ ಐಫ಼ಲ್ ಟವರೂ ಇದ್ದುದರಿಂದ ಅದಕ್ಕೆ ಫ಼್ರೆಂಚ್ ಸರ್ಕಾರ ಬಿಗಿ ಭದ್ರತೆಯನ್ನು ಒದಗಿಸಿತ್ತು. ಅದರ ಸುತ್ತಲೂ ಮೆಶೀನ್ ಗನ್ನುಗಳನ್ನು ಹಿಡಿದ ಸೈನಿಕರು ಓಡಾಡುತ್ತಿದ್ದರು. ಅವರಲ್ಲಿ ಬಹುತೇಕರು ಆಫ್ರಿಕಾ ಮೂಲದ ಸೈನಿಕರೇ ಇದ್ದರು. ಒಂದೆಡೆ ಕಪ್ಪು ಸೈನಿಕರು ಈ ದೇಶದ ಸ್ವತ್ತುಗಳನ್ನು ಕಾಯುತ್ತಿದ್ದರೆ, ಇನ್ನೊಂದೆಡೆ ನಿರ್ಗತಿಕರಂತಿದ್ದ ಕಪ್ಪು ವ್ಯಾಪಾರಿಗಳನ್ನು ಈ ದೇಶದಲ್ಲಿ ಅಪರಾಧಿಗಳೆಂಬಂತೆ ಕಾಣುತ್ತಿದ್ದುದು ವಿಪರ್ಯಾಸವೆನಿಸಿತ್ತು.

ಭಯೋತ್ಪಾದಕರು ಈ ಕಬ್ಬಿಣದ ಗೋಪುರವನ್ನು ಯಾಕೆ ತಮ್ಮ ಟಾರ್ಗೆಟ್ ಆಗಿಸಿಕೊಂಡರೋ, ಈ ಗೋಪುರವನ್ನುರುಳಿಸಿ ಅವರು ಸಾಧಿಸುವಂಥದ್ದೇನೋ ನನಗರ್ಥವಾಗಲಿಲ್ಲ. ದಿನದ ಇಪ್ಪತ್ತನಾಲ್ಕು ಗಂಟೆಯೂ ಈ ಗೋಪುರವನ್ನು ಸೈನಿಕರು ಬಿಗಿ ಭದ್ರತೆಯಲ್ಲಿ ಕಾಯುತ್ತಿದ್ದರು. ನಮ್ಮನ್ನು ಕ್ಯೂನಲ್ಲಿ ನಿಲ್ಲಿಸಿ ಹೋಗಿದ್ದ ಜ್ಯೂಜ಼ರ್ ನಮಗ್ಯಾರಿಗೂ ಕ್ಯೂ ಬಿಟ್ಟು ಅಲ್ಲಾಡದಂತೆ ಎಚ್ಚರಿಸಿದ್ದ. ಸೈನಿಕರಿಗೆ ಯಾರಾದರೂ ಅಡ್ಡಾದಿಡ್ಡಿಯಾಗಿ ಅಲೆದಾಡುವುದು ಕಂಡುಬಂದರೆ ಅವರನ್ನು ಅನುಮಾನಿಸಿ ಕರೆದುಕೊಂಡು ವಿಚಾರಣೆ ಮಾಡುತ್ತಾರೆಂದೂ, ಹಾಗೆ ಹೋದವರು ಐಫ಼ಲ್ ಟವರ್ ನೋಡುವುದು ಸಾಧ್ಯವಿಲ್ಲವೆಂದೂ ಆತ ಹೇಳಿದ್ದರಿಂದ ನಾವೆಲ್ಲಾ ಶಿಸ್ತಿನ ಸಿಪಾಯಿಗಳಂತೆ ಸರತಿಯಲ್ಲಿ ನಿಂತಿದ್ದೆವು. ತುಂತುರು ಮಳೆ ಬೀಳುತ್ತಿದ್ದರಿಂದ ಎಲ್ಲರೂ ಕೊಡೆಗಳನ್ನು ಹಿಡಿದುಕೊಂಡಿದ್ದರು. ನಾವೊಂದಿಬ್ಬರು ಕೊಡೆಗಳನ್ನು ಬಸ್ಸಿನಲ್ಲಿಯೇ ಮರೆತು ಬಂದಿದ್ದೆವು. ಬಸ್ಸಿನ ಬಳಿಗೆ ಹೋಗಿ ಕೊಡೆ ತರಲು ಹೊರಡುವಷ್ಟರಲ್ಲೇ ಜ್ಯೂಜ಼ರ್ ಕ್ಯೂ ಬಿಟ್ಟು ಕದಲಕೂಡದೆಂದು ಹೇಳಿದ್ದರಿಂದ, ಅಲ್ಲದೆ ನಾವು ಅಲೆದಾಡುವುದನ್ನು ಕಂಡು ಆ ಬಂದೂಕು ಹಿಡಿದು ನಿಂತಿರುವ ಸೈನಿಕರು ನಮ್ಮನ್ನು ಕರೆದು ವಿಚಾರಣೆ ಮಾಡಲು ಆರಂಭಿಸಿದಲ್ಲಿ ಜ್ಯೂಜ಼ರ್ ಹೇಳಿದಂತೆ ನಾವು ಐಫ಼ಲ್ ಟವರ್ ನೋಡಲು ಸಾಧ್ಯವಾಗದೇ ಇರಬಹುದಾದ್ದರಿಂದ ಕೊಡೆಗಳನ್ನು ತರುವ ಗೋಜಿಗೇ ಹೋಗದೇ ಕೊಡೆಗಳನ್ನು ಹಿಡಿದಿದ್ದವರಲ್ಲಿಯೇ ಆಶ್ರಯ ಪಡೆದೆವು. ಆ ಕ್ಯೂನಲ್ಲಿ ನಿಂತಿದ್ದ ವಿಶ್ವದೆಲ್ಲೆಡೆಯಿಂದ ಬಂದಿದ್ದ ಪ್ರವಾಸಿಗರು ಅವರವರದೇ ಭಾಷೆಯ ಸಂಭಾಷಣೆಯಲ್ಲಿ ನಿರತರಾಗಿದ್ದರು. ಪ್ಯಾರಿಸ್ಸಿನ ಪ್ರಭಾವದಿಂದಲೋ, ಅಥವಾ ಕೊರೆಯುವ ಆ ಚಳಿಯಿಂದಲೋ, ಈ ವಿದೇಶೀ ಪ್ರವಾಸಿಗರೂ ಪರಸ್ಪರ ಚುಂಬನದಲ್ಲಿ ನಿರತರಾಗಿದ್ದು ಕಂಡುಬಂತು. ಅಷ್ಟರಲ್ಲಾಗಲೇ ಪ್ಯಾರಿಸ್ಸಿನಲ್ಲಿ ಈ ಚುಂಬನ ನಿರತ ದೃಶ್ಯಗಳು ನಮಗೆ ಮಾಮೂಲಿಯಾಗಿದ್ದರಿಂದ ಮೊದಲ ದಿನದಂತೆ ನಮ್ಮಲ್ಲಿ ಅದರ ಬಗ್ಗೆ ಕುತೂಹಲವಿರಲಿಲ್ಲ.

ಟಿಕೆಟ್ ತರುವುದಾಗಿ ಹೇಳಿ ಹೋಗಿದ್ದ ಜ್ಯೂಜ಼ರ್ ನಾವು ಒಳಹೊಕ್ಕುವ ಪ್ರವೇಶ ದ್ವಾರದ ಸಮೀಪ ಹೋಗುವವರೆಗೂ ಬರಲಿಲ್ಲ. ಇಲ್ಲಿಯ ಟಿಕೆಟ್ ಹಣವನ್ನು ನಾವು ಕೊಡಬೇಕಾಗಿರಲಿಲ್ಲ, ಅದು ಪ್ರವಾಸಿ ಕಂಪನಿಯದೇ ಆಗಿತ್ತು. ಜ್ಯೂಜ಼ರ್ ಇನ್ನೂ ಬಾರದಿದ್ದರಿಂದ ಕೋಪಗೊಂಡಿದ್ದ ಉತ್ತರ ಭಾರತೀಯರು ಕೆಲವರು ’ಅರೇ, ಕಹಾ ಗಯಾ ಏ ಜ್ಯೂಜ಼ರ್? ಅಭೀತಕ್ ಆಯಾನಹೀ, ಆಪ್ನೆ ದೇಖಾ ಕ್ಯಾ?’ ಎಂದು ನನ್ನನ್ನು ಕೇಳಿದರು. ನಾನೂ ಅವರಂತೆಯೇ ಕ್ಯೂ ನಲ್ಲಿಯೇ ನಿಂತಿದ್ದರಿಂದ ನಹೀ ಮಾಲುಮ್ ಎಂದೆ. ಪ್ರವೇಶ ದ್ವಾರದ ಬಳಿ ಬಂದರೂ ಜ್ಯೂಜ಼ರ್ ಕಾಣಿಸದಿದ್ದರಿಂದ ನಾವು ಲಂಡನ್ನಿನಲ್ಲಿಳಿದಾಗ ಮಾತಾಡಿದಂತೆಯೇ ಜನ ತಲೆಗೊಬ್ಬರಂತೆ ಮಾತಾಡತೊಡಗಿದ್ದರು. ಟಿಕೆಟ್ ಕೌಂಟರಿನ ಹತ್ತಿರ ಹೋಗುತ್ತಿದ್ದಂತೆಯೇ ರಕ್ತದೊತ್ತಡವಿದ್ದ ಕೆಲವು ಉತ್ತರ ಭಾರತೀಯರು ಜ್ಯೂಜ಼ರ್ ನಿಗೆ ಶಾಪ ಹಾಕತೊಡಗಿದ್ದರು. ಕೌಂಟರ್ ಬಳಿ ಬಂದ ಕೂಡಲೇ ಇನ್ನೆಲ್ಲಿ ನಾವು ಟಿಕೆಟ್ ತೆಗೆದುಕೊಳ್ಳಬೇಕಾಗುತ್ತದೆಂದು ಮುಂದಿದ್ದ ಉತ್ತರ ಭಾರತೀಯರು ತಮ್ಮ ಹಿಂದಿನವರಿಗೆ ಮುಂದೆ ಹೋಗಲು ದಾರಿ ಬಿಟ್ಟು ಪಕ್ಕಕ್ಕೆ ನಿಲ್ಲತೊಡಗಿದರು. ಅವರು ಹಾಗೆ ಪಕ್ಕಕ್ಕೆ ನಿಂತಿದ್ದನ್ನು ಕಂಡ ಬೇರೆ ಪ್ರವಾಸಿಗರು ವಿಚಿತ್ರವಾಗಿ ನೋಡತೊಡಗಿದ್ದರು. ’ಕಿತ್ನಾ ಪರೇಷಾನ್ ಕರ್ತಾ ಹೆ ಏ ಜ್ಯೂಜ಼ರ್’ ಎಂದು ಗೊಣಗಾಡಲು ಶುರುಮಾಡಿಕೊಂಡ ಕೂಡಲೇ ಪ್ರವೇಶ ದ್ವಾರದೊಳಗಿಂದ ಜ್ಯೂಜ಼ರ್ ನಮ್ಮನ್ನು ಕೈಬೀಸಿ ಕರೆಯತೊಡಗಿದ್ದ. ಮುಂಚೆಯೇ ಬಂದು ಟಿಕೆಟ್ ಪಡೆದಿದ್ದ ಜ್ಯೂಜ಼ರ್ ಗಂಟೆಗಟ್ಟಲೇ ಕ್ಯೂನಲ್ಲಿ ನಿಲ್ಲುವ ಉಸಾಬರಿ ತನಗ್ಯಾಕೆಂದು ನಾವು ಬರುವವರೆಗೂ ಕಾಯುತ್ತಾ ಒಳಗಡೆ ಕೂತಿದ್ದ. ಆತನ ಮುಖ ಕಂಡಕೂಡಲೇ ಉತ್ತರ ಭಾರತೀಯರ ಮುಖ ಅರಳಿದ ತಾವರೆಯಂತಾಗಿತ್ತು.

ಕ್ಯೂನಲ್ಲಿ ಸಾಗುವಾಗ ರಾಜೇಗೌಡ್ರಿಗೆ ನಡೆದುಕೊಂಡು ಈ ಗೋಪುರವನ್ನು ಹತ್ತುವುದು ಸಕತ್ ಆಗಿರುತ್ತದಲ್ವಾ ಗೌಡ್ರೇ ಅಂದದ್ದಕ್ಕೆ ಅವರು ಬೆಚ್ಚಿ ’ಇದನ್ನು ನಡೆದುಕೊಂಡು ಹತ್ತಬೇಕಾ’ ಎಂದು ಗಾಬರಿಯಾಗಿ ಪಕ್ಕದಲ್ಲಿದ್ದ ಪ್ರೊಫ಼ೆಸರರ ಮುಖ ನೋಡಿದರು. ಅವರು ಇವರಿಗಿಂತಲೂ ಗಾಬರಿಯಾದಂತೆ ಕಂಡು ಬಂತು. ಇವರಿನ್ನೆಲ್ಲಿ ಈ ಗೋಪುರವನ್ನು ನಡೆದು ಹತ್ತಬೇಕಾಗುತ್ತೋ ಎಂಬ ಸಂಕಟದಿಂದ ನಿನ್ನೆ ಡಿಸ್ನಿ ಲ್ಯಾಂಡಿನಲ್ಲಿ ಆದಂತೆ ಕ್ಯೂ ಬಿಟ್ಟು ಗಾಯಬ್ ಆಗುವ ಸಂಭವವಿದ್ದುದರಿಂದ ’ಹಾಗೇನಿಲ್ಲ, ಲಿಫ಼್ಟ್ ವ್ಯವಸ್ಥೆ ಇದೆ’ಯೆಂದು ಅವರಿಗೆ ಹೇಳಿದ ನಂತರವೇ ಅವರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದು.

ಐಫ಼ಲ್ ಟವರ್ ಮೇಲಿಂದ ಪ್ಯಾರಿಸ್ ನಗರವನ್ನು ನೋಡುವುದೇ ಚೆಂದ. ಅಷ್ಟು ಎತ್ತರದಿಂದ ಕೆಳಗೆ ನೋಡಿದ ಕೆಲವರು ತಲೆ ಸುತ್ತುವಂತೆ ಭಾಸವಾಗುತ್ತದೆಂದರು. ಅಲ್ಲಿಂದ ಸಿಯಾನ್ ನದಿಯ ಇಕ್ಕೆಲಗಳಲ್ಲೂ ಹರಡಿಕೊಂಡಿದ್ದ ಇಡೀ ಪ್ಯಾರಿಸ್ ನಗರವನ್ನು ನೋಡಬಹುದಿತ್ತು. ಎತ್ತರದಿಂದ ನೋಡಿದಾಗ ಸಿಯಾನ್ ನದಿ ಬಹುದೂರದವರೆಗೆ ಕಾಣಿಸುತ್ತಿತ್ತು. ಐಫ಼ಲ್ ಟವರಿನೆ ಮೇಲೆ ಗಾಳಿ ಬಹಳ ಜೋರಾಗಿತ್ತು. ತುಂತುರು ಮಳೆಯೂ ಬೀಳುತ್ತಿದ್ದರಿಂದ ಮೈ ನಡುಗಿಸುವ ಚಳಿಯಾಗತೊಡಗಿತ್ತು. ಗೋಪುರದ ಸುತ್ತಲೂ ಓಡಾಡುತ್ತಾ ನಾವೆಲ್ಲಾ ಗೋಪುರದ ಎಲ್ಲಾ ಆಂಗಲ್ಲುಗಳಲ್ಲೂ ಫೋಟೋ ತೆಗೆದದ್ದೇ ತೆಗೆದದ್ದು. ನೂರಿಪ್ಪತ್ತೊಂದು ವರ್ಷವಾಗಿದ್ದ ಗೋಪುರವನ್ನು ಏಳು ವರ್ಷಕ್ಕೊಮ್ಮೆ ಬಣ್ಣ ಬಳಿಯುವ ಮೂಲಕ ನೀಟಾಗಿಟ್ಟಿದ್ದರು. ಫ್ರಾನ್ಸ್ ಮಹಾಕ್ರಾಂತಿಯ ಶತಮಾನದ ನೆನಪಿಗಾಗಿ ನಿರ್ಮಿಸಲ್ಪಟ್ಟ ಈ ಐಫ಼ಲ್ ಟವರನ್ನು ನಿರ್ಮಿಸಿದ ಒಂದೆರಡು ವರ್ಷದ ನಂತರ ನೆಲಸಮ ಮಾಡಲು ಯೋಚಿಸಿದ್ದರಂತೆ. ಆದರೆ ದಿನೇ ದಿನೇ ಅದರ ಜನಪ್ರಿಯತೆ ಹೆಚ್ಚಿದಂತೆಲ್ಲಾ ಅಲ್ಲಿಗೆ ಭೇಟಿ ನೀಡುತ್ತಿದ್ದ ಪ್ರವಾಸಿಗರ ಸಂಖ್ಯೆಯೂ ಹೆಚ್ಚತೊಡಗಿದ್ದರಿಂದ ಅದನ್ನು ಸ್ಮಾರಕವಾಗಿ ಉಳಿಸಿಕೊಳ್ಳಲಾಯಿಯಂತೆ. ಪದವಿಯಲ್ಲಿ ಯೂರೋಪ್ ಇತಿಹಾಸದ ವಿಧ್ಯಾರ್ಥಿಯಾಗಿದ್ದ ನನಗೆ ಫ಼್ರಾನ್ಸ್ ಮಹಾಕ್ರಾಂತಿಯ ವಿಷಯವೂ ಒಂದು ಅಧ್ಯಾಯವಾಗಿತ್ತು. ಫ಼್ರಾನ್ಸ್ ಮಹಾಕ್ರಾಂತಿಯಾದ ಇನ್ನೂರಿಪ್ಪತ್ತೆರಡು ವರ್ಷದ ನಂತರ ಆ ದೇಶದಲ್ಲಿಯೇ ಅದರ ಶತಮಾನದ ನೆನಪಿಗಾಗಿ ನಿರ್ಮಿತವಾಗಿದ್ದ ಐಫ಼ಲ್ ಟವರ್ ಮೇಲೆ ನಾನು ನಿಂತಿದ್ದೆ. ವಿದ್ಯಾರ್ಥಿಯಾಗಿದ್ದಾಗ ಇದನ್ನು ಊಹಿಸಿಕೊಳ್ಳಲೂ ಆಗದಿದ್ದ ನಾನು ಇದೀಗ ಪುಳಕಿತನಾಗಿ ಮಹಾಕ್ರಾಂತಿಯ ಘಟನೆಗಳನ್ನು ನೆನೆದುಕೊಳ್ಳುತ್ತಾ ಆ ಮಹಾನ್ ಕ್ರಾಂತಿಕಾರರಿಗೆ ಮನದಲ್ಲಿಯೇ ವಂದಿಸಿದ್ದೆ.

ಎಲ್ಲರೂ ಫೋಟೋಗಳನ್ನು ತೆಗೆದು ಮುಗಿಸುವ ಹೊತ್ತಿಗೆ ಸರಿಯಾಗಿ ಜ್ಯೂಜ಼ರ್ ಎಲ್ಲರನ್ನೂ ಹೊತ್ತಾಯಿತೆಂದು ಹೊರಡಿಸಿದ. ಕೆಳಗಿಳಿದ ನಂತರ ಅಲ್ಲಿಯ ಕಾನ್ಕಾರ್ಡೆ ಸರ್ಕಲ್ಲಿನಲ್ಲಿ ಸುತ್ತಾಡಿ ಹದಿನೈದನೇ ಲೂಯಿ ಹಾಗೂ ಲಿಬರ್ಟಿ ಪ್ರತಿಮೆಗಳನ್ನು ನೋಡಿದೆವು. ಅಲ್ಲಿ ನಾವೆಲ್ಲರೂ ಗ್ರೂಪ್ ಫೋಟೊಗಳನ್ನು ತೆಗೆಸಿಕೊಂಡೆವು. ಅಲ್ಲಿ ಜ್ಯೂಜ಼ರ್ ಫೋಟೋಗ್ರಾಫರ್ ಆಗಿ ಎಲ್ಲರ ಕ್ಯಾಮರಾಗಳಿಂದ ಫೋಟೋ ತೆಗೆದ. ಸ್ವಲ್ಪ ಹೊತ್ತು ಶಾಪಿಂಗ್ ಗಾಗಿ ಬಿಡುವು ಕೊಟ್ಟದ್ದರಿಂದ ಅಲ್ಲಲ್ಲಿ ಸುತ್ತಾಡಿ ಶಾಪಿಂಗ್ ಪ್ರಿಯರು ವಸ್ತುಗಳನ್ನು ಖರೀದಿಸತೊಡಗಿದ್ದರು. ವಿಪರೀತ ಚಳಿಯಾಗತೊಡಗಿದ್ದರಿಂದ ನಾನು ಶಾಪಿಂಗ್ ಬಗ್ಗೆ ತಲೆಕೆಡಿಸಿಕೊಳ್ಳದೇ ನಮ್ಮ ಜತೆಯಿದ್ದ ಬೆಳಗಾವಿಯ ಕಪ್ಪದ್ ರ ಕಂಪನಿಯಲ್ಲಿ ಬಾರೊಂದರ ಒಳಹೊಕ್ಕೆ. ಅಲ್ಲಿದ್ದ ಬಾರ್ ಗರ್ಲ್ ನಮ್ಮನ್ನು ಕಂಡಕೂಡಲೇ ಮುಗುಳು ನಗುತ್ತಾ ಸ್ವಾಗತಿಸಿದಳು. ಅವಳಿಗೆ ವಿಸ್ಕಿ ಬೇಕೆಂದೆವು. ಆ ಮಹರಾಯ್ತಿಗೆ ಇಂಗ್ಲಿಷ್ ಗಂಧ ಗಾಳಿಯೂ ಗೊತ್ತಿರಲಿಲ್ಲ. ಆಕೆ ಅದೇನೋ ಫ಼್ರೆಂಚ್ ಭಾಷೆಯಲ್ಲೇ ಹೇಳಿದ್ದು ನಮಗರ್ಥವಾಗದೇ ಕೊನೆಗೆ ಅಲ್ಲಿದ್ದ ಮೆನು ಕಾರ್ಡನ್ನು ಕೈಗೆತ್ತಿಕೊಂಡು ಅದರಲ್ಲಿದ್ದ ವಿಸ್ಕಿ ಹೆಸರನ್ನು ತೋರಿಸಿದ ಕೂಡಲೇ ಆ ಬಾಟಲನ್ನು ನಗುನಗುತ್ತಾ ಕೈಗೆತ್ತಿಕೊಂಡು ಇಂಡಿಯಾನಾ? ಎಂದು ಫ಼್ರೆಂಚಿನಲ್ಲೇ ಕೇಳಿದವಳಿಗೆ ಕನ್ನಡದಲ್ಲಿಯೇ ಹೌದೆಂದು ಹೇಳಿದೆವು. ಅವಳು ಏನೇನೋ ಪ್ರಶ್ನೆಗಳನ್ನು ಫ಼್ರೆಂಚ್ ಭಾಷೆಯಲ್ಲಿಯೇ ಕೇಳಿದ್ದಕ್ಕೆ ನಮಗರ್ಥವಾಗದಿದ್ದರೂ ಕನ್ನಡದಲ್ಲಿಯೇ ಉತ್ತರಿಸಿದ್ದಕ್ಕೆ ಅವಳು ಅರ್ಥವಾದವಳಂತೆ ನಗುತ್ತಿದ್ದಳು. ಅಲ್ಲಿ ಬಹಳ ಸಮಯ ನಾವು ಕಳೆಯುವಂತಿರಲಿಲ್ಲ ಶಾಪಿಂಗ್ ಹೋಗಿದ್ದವವರು ಹಿಂದಿರುಗುವಷ್ಟರಲ್ಲಿ ನಾವು ಇಲ್ಲಿಂದ ಹೋಗಬೇಕಿತ್ತು. ಅಲ್ಲಿ ಕೊಂಚ ಗಂಟಲು ಬೆಚ್ಚಗೆ ಮಾಡಿಕೊಂಡು ನಾವು ಬಸ್ ಬಳಿ ಹೋಗುವಷ್ಟರಲ್ಲಿ ಎಲ್ಲರೂ ಹಿಂದಿರುಗಿದ್ದರು. ಇವತ್ತಿಗೆ ನಮ್ಮ ಪ್ಯಾರಿಸ್ ಪ್ರವಾಸ ಕೊನೆಗೊಳ್ಳಲಿತ್ತು.

(ಮುಂದುವರಿಯುವುದು)

 
 

ಕಾರವಾರದ ದೇವಕಾರ ದ್ವೀಪ ಜಲಪಾತ

ಆಶಯ ಮೈಸೂರು
ಅಮೋಘ ವರ್ಷ ಬಿ
 
ಕಾರವಾರ ನೋಡಿದ್ದೀರಲ್ಲಾ? ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ದವಾಗಿರುವ ಕಾರವಾರದಲ್ಲಿ ಹಲವಾರು ಕಣ್ಮನ ಸೆಳೆಯುವ ಜಲಪಾತಗಳಿವೆ. ಉಂಚುಳ್ಳಿ, ಗಣೇಶಪಾಲ, ಮಗೂಡು, ಸಿರಸಿ, ಸಿದ್ದಾಪುರ ಹೀಗೆ ಮಾರ್ಗದಲ್ಲಿ ನೀರಿಳಿಯುವ ಎಲ್ಲೆಲ್ಲೂ ಜಲಪಾತಗಳು, ಹಸಿರು, ನೀರ್ಬಂಡೆಗಳು!
 
ಬೆಂಗಳೂರು, ಮೈಸೂರಿನ ದೀಪಾವಳಿ ಗಲಾಟೆಯ ಸವಾಸವೇ ಬೇಡ ಎಂದು ನಾವು ನಾಲ್ಕು ಜನ ಕಸಿನ್ಸ್ ಹಬ್ಬದ ರಜ ಮತ್ತು ವೀಕೆಂಡುಗಳನ್ನು ಸೇರಿಸಿಕೊಂಡು ಏಳೆಂಟು ವಾರಗಳ ಹಿಂದೆ ದೇವಕಾರ ಜಲಪಾತ ನೋಡಲೆಂದು ಕಾರವಾರಕ್ಕೆ ಹೊರಟೆವು. ಕಾರವಾರ ತಲುಪಿ ಅಲ್ಲಿಂದ ಇಪ್ಪತ್ತು ಕಿಲೋಮೀಟರ್ ಹೋದರೆ ಸಿಗುವುದೇ ಕಾಳಿ ನದಿ ಜಲವಿದ್ಯುತ್ ಯೋಜನೆಯ ಕದ್ರಾ ಎಂಬ ಊರು. ನಾವು ಕದ್ರಾ ತಲುಪುವ ಹೊತ್ತಿಗೆ ಕತ್ತಲಾವರಿಸಿದ್ದರಿಂದ ಅಂದು ರಾತ್ರಿ ಅಲ್ಲೇ ತಂಗುವುದೆಂದು ತೀರ್ಮಾನಿಸಿದೆವು.
 
ದಿನ ಪೂರ್ತಿ ಪ್ರಯಾಣ ಮಾಡಿ ದಣಿದಿದ್ದರಿಂದ ಯಾವುದಾದರೊಂದು ಸೂರಿನಡಿ ವಿಶ್ರಮಿಸಲು ಕಾತರರಾಗಿದ್ದರೂ ನಾವು ಹೊತ್ತೊಯ್ದಿದ್ದ ಟೆಂಟನ್ನು ಉಪಯೋಗಿಸಲೇಬೇಕೆಂಬ ಸಲುವಾಗಿ ಸ್ಥಳ ಹುಡುಕಲು ಪ್ರಾರಂಬಿಸಿದೆವು. ಅದು ನಿಷೇಧಿತ ಸ್ಥಳವಾದ್ದರಿಂದ ಅಲ್ಲಿ ಎಲ್ಲೆಂದರಲ್ಲಿ ಟೆಂಟ್ ಹಾಕುವಹಾಗಿಲ್ಲ, ಹಾಗೂ ಏನಾದರು ಹಾಕಲೇ ಬೇಕೆಂದರೆ ಅಲ್ಲಿನ ಪೊಲೀಸರಿಂದ permission ಪಡೆಯಬೇಕೆಂಬ ವಿಷಯ ಸ್ಥಳೀಯರಿಂದ ತಿಳಿಯಿತು. ಪೊಲೀಸರಿಗೆ ನಮ್ಮ ಕಥೆಯನ್ನೆಲ್ಲಾ ಹೇಳಿ ಅವರಿಂದ ಅಪ್ಪಣೆ ಪಡೆದು ಸ್ಥಳ ಹುಡುಕಿ ಟೆಂಟ್ ಹಾಕುವ ಹೊತ್ತಿಗೆ ರಾತ್ರಿ ೩ ಗಂಟೆ ಕಳೆದಿತ್ತು! ಇದೆಲ್ಲ ಮುಗಿಯುವ ಹೊತ್ತಿಗೆ ಊರಲ್ಲಿದ್ದ ಒಂದೇ ಹೋಟೆಲ್ ಬಾಗಿಲು ಮುಚ್ಚಿದ್ದರಿಂದ ಅಲ್ಲೇ ಒಂದು ಪೆಟ್ಟಿ ಅಂಗಡಿಯಲ್ಲಿ ಬಿಸ್ಕೆಟ್ ಪ್ಯಾಕೆಟ್ಗಳನ್ನು ಕೊಂಡು ಸೇವಿಸಿ ನಾವೇ ಸಿದ್ದಪಡಿಸಿದ್ದ ಗೂಡಿನಲ್ಲಿ ಸುಖ ನಿದ್ರೆಗೆ ಜಾರಿದೆವು. ರಾತ್ರಿ ಪೂರಾ ಎಡೆಬಿಡದೆ ಹೊಯ್ದ ಮಳೆಯ ಕಾರಣ ನಾವು ಬೆಳಗ್ಗೆ ಅಂದುಕೊಂಡಿದ್ದ ಸಮಯಕ್ಕೆ ಹೊರಡಲಾಗದಿದ್ದರೂ ಹೆಚ್ಚು ತಡ ಮಾಡದೆ ನಮ್ಮ ಪ್ರಯಾಣ ಮುಂದುವರೆಸಿದೆವು.
 
ಕದ್ರಾ ಬಡಾವಣೆಯಿಂದ ಕಾಳಿ ನದಿಗೆ ಇನ್ನೊಂದು ಕಡೆ ಅಣೆಕಟ್ಟು ಕಟ್ಟಿರುವ ಕೊಡಸಳ್ಳಿ ಮಾರ್ಗವಾಗಿ ಇಪ್ಪತ್ತು ಕಿ.ಮೀ ಕ್ರಮಿಸಿದರೆ ದಾರಿ ಮಧ್ಯದಲ್ಲಿ ಧಿಡೀರನೆ ನಮಗೆ ಇದಿರಾಗುವುದು 'ದೇವಕಾರ' ಎಂದು ತೋರಿಸುವ ಬೊರ್ಡ್. ದೇವಕಾರ ಎಂಬ ಬೋರ್ಡನ ಸುತ್ತಲೂ ದಟ್ಟ ಕಾಡೇ ಹೊರತು ಜನರಂತೂ ಯಾರೂ ನೋಡ ಸಿಗುವುದಿಲ್ಲ! ನಾವು ದೇವಕಾರಕ್ಕೆ ಹೋಗುವ ಮೊದಲೇ ಕದ್ರಾ ನಿವಾಸಿಗಳಿಂದ ದೇವಕಾರ ತಲುಪಲು ಮಾಡಿಕೊಳ್ಳಬೇಕಾದ ತಯಾರಿಗಳನ್ನೆಲ್ಲಾ ತಿಳಿದುಕೊಂಡಿದ್ದೆವಾದ್ದರಿಂದ ಈ ಕಾಡಿನ ಬೋರ್ಡು ನೋಡಿ ಗಾಬರಿಯಾಗಲಿಲ್ಲ. ಈ ಸ್ಥಳ ತಲುಪಲು ಕದ್ರಾ ಬಡಾವಣೆಯಿಂದ ಇಲ್ಲಿಗೆ ಬಸ್ಸಿನ ಸೌಲಭ್ಯವಿದೆ. ಆದರೆ ಇದು ದಿನಕ್ಕೆ ಒಂದೇ ಬಾರಿ! ಅದೂ ಬೆಳಗ್ಗೆ ೭ ಗಂಟೆಗೆ ಮಾತ್ರ! ಮಿಕ್ಕೆಲ್ಲಾ ಸಮಯದಲ್ಲಿ ಒಂದು ನರಪಿಳ್ಳೆಯೂ ಓಡಾಡದಂತ ಹಾದಿ ಇದು! ಈ ಬೋರ್ಡಿರುವ ಜಾಗದಿಂದ ಕಾಡಿನಲ್ಲಿ ಸುಮಾರು ಒಂದು ಕಿಮೀ ನಡೆದರೆ ಕಾಳಿ ನದಿ ಹಿನ್ನೀರು ಸಿಗುತ್ತದೆ. ಹೀಗೆ ನಡೆದು ಆ ಹಿನ್ನೀರಿನಿಂದ ಆಚೆಗೆ ನೋಡಿದರೆ ಕಾಣುವುದೇ ದೇವಕಾರ ಎಂಬ ಪುಟ್ಟ ದ್ವೀಪ. ಇಲ್ಲಿ ಸುಮಾರು ಮುನ್ನೂರು ಜನರಿದ್ದಾರೆ, ಒಂದು ಚಿಕ್ಕ ಸರಕಾರಿ ಶಾಲೆಯೂ ಇದೆ!
 
ಇನ್ನು ಈ ದಡದಿಂದ ದೇವಕಾರ ದ್ವೀಪಕ್ಕೆ ಹೋಗುವುದೇ ಒಂದು ಮಜ. ದಡದಲ್ಲಿ ನಿಂತುಕೊಂಡು ಜೋರಾಗಿ ಒಂದು ಕೂಗು ಹಾಕಿದರೆ ದೋಣಿ ಹಾಯಿಸುವವನು ಆ ದಡದಿಂದ ಈ ದಡಕ್ಕೆ ಬರುತ್ತಾನೆ ಎಂದು ಸ್ನೇಹಿತರಿಂದ ಕೇಳಿದ್ದೆವು. ಹಾಗೆಯೇ ದಡದಲ್ಲಿ ನಿಂತು ಕೂಗು ಹಾಕಿದೆವು, ಹಾಕಿದೆವು, ಸುಮಾರು ಒಂದು ಗಂಟೆ ಕೂಗು ಹಾಕುತ್ತಲೇ ಇದ್ದೆವು! ಆಸಾಮಿ ಪತ್ತೇನೇ ಇಲ್ಲ! ಇನ್ನೇನು ತಾಳ್ಮೆ ಕಳೆದುಕೊಂಡು ವಾಪಸ್ಸಾಗುವ ಹೊತ್ತಿಗೆ ಬಂದನಪ್ಪ, ದೋಣಿಯವ! ಎಂದೂ, ಯಾರೂ ಓಡಾಡದ ಈ ಮಾರ್ಗದಲ್ಲಿ ಯಾರೋ ಅನಾಮಿಕರು ಕೂಗು ಹಾಕುತ್ತಿದ್ದರೆ ಅವನಿಗೆ ತಾನೆ ಹೇಗೆ ಮನವರಿಕೆಯಾದೀತು ಇವರು ಮನುಷ್ಯರೆಂದು?! ಹೀಗೆ, ನಾವು ನಾಲ್ಕು ಜನರೂ ಸೇರಿ ದೋಣಿಯವನನ್ನು ಕರೆದು, ದೋಣಿಯಲ್ಲಿ ಕುಳಿತುಕೊಂಡು ಕಾಳಿನದಿಯ ಸುತ್ತಲಿನ ಪ್ರಕೃತಿಯ ಸೊಬಗನ್ನು ಸವಿಯುತ್ತಾ ಹಾಯುತ್ತಿದ್ದಾಗ ಕಂಡ ರುದ್ರರಮಣೀಯ ದೃಶ್ಯಗಳು ನಯನ ಮನೋಹರ. ಕಾಳಿ ನದಿಯೆಂದರೆ ನಮ್ಮ ಕಲ್ಪನೆಗೆ ಬರುವುದು ರಭಸದಿ ಹರಿಯುವ, ರಾಫ್ಟಿಂಗ್ ಹಾಗು ಇತ್ಯಾದಿ ಜಲ ಕ್ರೀಡೆಗಳನ್ನು ಆಡಲು ಯೋಗ್ಯವಾದ ನೀರಿನ ದೃಶ್ಯ, ಆದರೆ ಇಲ್ಲಿ ನಮಗೆ ಕಾಣಿಸಿದ್ದೇ ಬೇರೆ! ಅತ್ಯಂತ ಪ್ರಶಾಂತವಾದ ವಿಶಾಲ ನದಿ ಅದು. ಆ ವಿಶಾಲವಾದ ನದಿಯ ಮದ್ಯೆ ೩-೪ ದಶಕಗಳ ಹಿಂದೆ ಉಪಯೋಗಿಸುತ್ತಿದ್ದ, ಒಂದೇ ಮರದ ದಿನ್ನೆಯಿಂದ ಮಾಡಿದ, ಕೇವಲ ೬ ಜನ ಕೂರಬಹುದಾದಂತಹ ದೋಣಿಯಲ್ಲಿ ಕುಳಿತು ಸಾಗುತ್ತಿದ್ದರೆ ಬಣ್ಣಿಸಲಾಗದಂತಹ ಒಂದು ಅನುಭವ!
 
ಹದಿನೈದು ನಿಮಿಷದ ನಂತರ ದಡ ಸೇರಿದ ಮೇಲೆ ಅಷ್ಟರಲ್ಲಿ ನಮಗೆ ಪರಿಚಿತನಾಗಿದ್ದ ಆ ದೋಣಿಯವನು ತನ್ನ ಮಗನನ್ನೇ 'ದೇವಕಾರ ಜಲಪಾತ' ತೋರಿಸಲು ನಮ್ಮೊಂದಿಗೆ ಕಳುಹಿಸಿಕೊಟ್ಟನು. ನಾವು ಅವನೊಂದಿಗೆ ಚಾರಣ ಶುರು ಮಾಡುವ ಹೊತ್ತಿಗೆ ಸೂರ್ಯ ನೆತ್ತಿಯ ಮೇಲಿದ್ದರೂ, ಮೋಡಗಳ ಮದ್ಯೆ ಮರೆಯಾಗಿದ್ದ. ಜಿನುಗು ಮಳೆ ಜಿನಿಯುತ್ತಲೇ ಇತ್ತು. ಇಂದು ಮಳೆ ನಿಲ್ಲುವ ಹಾಗೆ ಕಾಣುತ್ತಿಲ್ಲ, ನಾಳೆ ಪ್ರಯತ್ನಿಸೋಣ ಎಂದು ದೋಣಿಯವನ ಮಗ ಹೇಳಿದರೂ, ನಮ್ಮ 'adventurous' ಬುದ್ದಿ ಅದನ್ನೆಲ್ಲ ಕೇಳಲು ತಯಾರಿರಲಿಲ್ಲ.
 
ದೇವಕಾರ ದ್ವೀಪಕ್ಕೆ ಕಾಲಿಟ್ಟ ನಮಗೆ ಮೊದಲು ಹೆಲೋ ಹೇಳಿದ್ದು ಹಚ್ಚ ಹಸುರಿನ ಗದ್ದೆಗಳು. ಅದನ್ನು ನೋಡುತ್ತಲೇ ನಾವು ಕಾಡಿನಕಡೆಗೆ ಚಾರಣ ಶುರು ಮಾಡಿದೆವು. ದಟ್ಟವಾದ ಕಾಡು, ಯಾವುದೇ ಸಿದ್ದ ದಾರಿಯಿಲ್ಲ, ಅವನು ಕರೆದುಕೊಂಡು ಹೋದದ್ದೇ ದಾರಿ! ಕೈಯಲ್ಲಿ ಒಂದು ಕೊಡಲಿ ಹಿಡಿದು, ಎದುರು ಸಿಗುವ ಗಿಡ, ಬಳ್ಳಿಗಳನ್ನು ಕತ್ತರಿಸುತ್ತಾ ಮುಂದೆ ಸಾಗುತ್ತಿದ್ದರೆ, ಅವನ ಹಿಂದೆ ಪೂರ್ಣ ಏಕಾಗ್ರತೆಯಿಂದ ಹೆಜ್ಜೆ ಹಾಕುತ್ತ ನಾವುಗಳು ಸಾಗುತ್ತಿದ್ದೆವು. ಕಾಡಿನಲ್ಲಿ ಸುಮಾರು ಐದು ಕಿಮಿ ಹೀಗೇ ಕ್ರಮಿಸಿದ ಮೇಲೆ ನೀರಿನ ಭೋರ್ರ್ಗರೆವ ಸದ್ದು ಕೇಳಿ ನಾವು ಇನ್ನೇನು ಜಲಪಾತದ ಹತ್ತಿರದಲ್ಲೇ ಇದ್ದೇವೆಂದು ಸಂತೋಷಪಟ್ಟಿದ್ದೆವು. ಆಗ ನಮ್ಮ ಗೈಡ್ ಅಲ್ಲಿ ಹರಿಯುತ್ತಿದ್ದ ನದಿಯನ್ನು ತೋರಿಸಿ ’ನೋಡಿ, ಇನ್ನು ಸ್ವಲ್ಪ ಮುಂದೆ ಬಂಡೆಗಳನ್ನೆಲ್ಲಾ ಏರಿದರೆ ಸಿಗುವುದೇ ಜಲಪಾತ’ ಎಂದ. ನಮ್ಮ ಗೈಡ್ ಸಲಹೆ ಮೇರೆಗೆ, ನಮ್ಮ ಶೂ ಗಳನ್ನು ಅಲ್ಲಿಯೇ ಒಂದು ಬಂಡೆಯ ಮೇಲೆ ಬಿಚ್ಚಿಟ್ಟು ಮುಂದುವರೆದೆವು. ಅತೀ ಉತ್ಸಾಹದಿಂದ ಬಂಡೆಗಳನ್ನೆಲ್ಲಾ ಏರಲು ಹೊರಟ ನಮಗೆ ಒದ್ದೆಯಾಗಿ ಪಾಚಿಕಟ್ಟಿ ಜಾರುವ ಬಂಡೆಗಳನ್ನು ಹತ್ತಿ ಹೋಗುವಾಗ ಆದ ಪ್ರಯಾಸ ಅಷ್ಟಿಷ್ಟಲ್ಲ. ನಾವು ನಾಲ್ಕೂ ಜನ ಒಂದಲ್ಲಾ ಒಂದು ಕಡೆ ಜಾರಿ ಬೀಳಬೇಕಾಗಿ ಬಂತು. ಕಡೆಗೆ ಜಲಪಾತದ ಹತ್ತಿರ ಬಂದಾಗ ನೀರಿನ ರಭಸ, ಎತ್ತರ ಎಷ್ಟು ಉಲ್ಲಾಸದಾಯಕವಾಗಿತ್ತೆಂದರೆ ಬಿದ್ದು ಬಂದದ್ದಕ್ಕೂ ತೃಪ್ತಿ.
 
ಈ ದೇವಕಾರ ಜಲಪಾತ ಎರಡು ಭಾಗವಾಗಿ ಹರಿಯುತ್ತದೆ. ಮೊದಲನೆಯದು ಅತೀ ಎತ್ತರದಿಂದ ದುಮ್ಮಿಕ್ಕುತ್ತಿದ್ದರೆ, ಎರಡನೆಯದು ಸ್ವಲ್ಪ ಕಡಿಮೆ ಎತ್ತರದಿಂದ. ಮೈದುಂಬಿ ಹರಿಯುತ್ತಿದ್ದ ಈ ಜಲಪಾತವನ್ನು ನೋಡುತ್ತಿದ್ದಾಗ ನಾವು ಪಟ್ಟ ಪ್ರಯಾಸವೆಲ್ಲಾ ಹಳೇ ನೆನಪೋ ಎಂಬಂತೆ ಮರೆತೇ ಹೋಗಿತ್ತು!  'ಇಷ್ಟೇ ಅಲ್ಲ, ಜಲಪಾತದ ತುದಿಯವರೆಗೂ ಬೇಕಾದರೂ ನಾನು ನಿಮ್ಮನ್ನು ಕರೆದುಕೊಂಡು ಹೋಗಬಲ್ಲೆ' ಎಂದು ನಮ್ಮ ಗೈಡ್ ಹೇಳಿದಾಗ, ಒಂದು ಕ್ಷಣ ಹೋಗಿಯೇ ಬಿಡೋಣ ಎಂದು ಯೋಚಿಸಿದರೂ, ಸಮಯದ ಅಭಾವ ಹಾಗು ಕತ್ತಲು ಕವಿಯುತ್ತಿದ್ದ ಕಾರಣ ಮುಂದುವರಿಯಲಾಗಲಿಲ್ಲ.
 
ಜಲಪಾತವನ್ನು ವೀಕ್ಷಿಸಿ ನೀರಲ್ಲಿ ಆಡಿ ವಾಪಸ್ಸು ದೇವಕಾರದಲ್ಲಿದ್ದ ನಮ್ಮ ಗೈಡ್ನ ಮನೆಗೆ ಬಂದಾಗ ರಾತ್ರಿ ಏಳು ಗಂಟೆ ಆಗಿತ್ತು. ಅಲ್ಲಿಯೇ ಊಟ ಮಾಡುತ್ತಿದ್ದಾಗ ಜಿಟಿ ಜಿಟಿ ಸುರಿಯಲು ಹತ್ತಿದ ಮಳೆಯ ಅರಿವಾಯಿತು. ಗಾಬರಿಯಿಂದ ನಾವು ನಾಲ್ಕು ಜನರು ಆದಷ್ಟು ಬೇಗ ಆ ಕಡೆಯ ದಡ ಸೇರಲು ತೀರ್ಮಾನಿಸಿಕೊಂಡು ಗೈಡ್ ನನ್ನು ಕೇಳಿದೆವು. ಅವನು ಅದಕ್ಕೆ ಒಪ್ಪಿ ಆತನ ತಂದೆ (ದೋಣಿ ಹಾಯುವವರು) ಜೊತೆ ನಾವು ನಾಲ್ಕು ಜನರನ್ನು ದೋಣಿಯಲ್ಲಿ ಕೂರಿಸಿಕೊಂಡು ಆ ಕಡೆ ತೀರಕ್ಕೆ ಕರೆದುಕೊಂಡು ಹೊರಟ.
 
ಹೋಗುವಾಗ ಆದ ಭಯಾನಕ ಅನುಭವ ಅಷ್ಟಿಷ್ಟಲ್ಲ. ಅಷ್ಟರಲ್ಲಿ ಮಳೆ ಜೋರಾಗಿತ್ತು. ಸುತ್ತಲೂ ಗಾಢ ಕತ್ತಲು. ಒಂದು ಕಿಡಿಯಷ್ಟು ಬೆಳಕೂ ಇಲ್ಲ! ಕತ್ತಲಿನಲ್ಲಿ ಅಭ್ಯಾಸದ ಬಲದಿಂದ ಅಪ್ಪ ಮಗ ಇಬ್ಬರೂ ದೋಣಿ ಹಾಯಿಸುತ್ತಿದ್ದರು. ನಮಗೆ ಏನೂ ಕಾಣಿಸುತ್ತಿರಲಿಲ್ಲ. ಆ ಕಡೆ ಈ ಕಡೆ ಅಲುಗಾಡಲೂ ಭಯ. ಆಳವಾದ ಕಾಳಿ ನದಿಯಲ್ಲಿ ಗುಳುಂ ಅಂದರೆ! ಜಿಟಿ ಜಿಟಿ ಸುರಿಯುವ ಮಳೆಯಿಂದ ದೋಣಿ ಯಾವ ಕಲ್ಲಿಗಾದರೂ ಗುದ್ದಿ ಏನಾದರೂ ದುರಂತ ಸಂಭವಿಸಿದರೆ? ನಮ್ಮ ಆತಂಕ ನಮಗೆ. ದೋಣಿ ಹಾಯಿಸುತ್ತಿದ್ದವರು ಮಾತ್ರ ಯಾವ ಯೋಚನೆಯೂ ಇಲ್ಲದೆ ಆರಾಮಕ್ಕೆ ಹುಟ್ಟು ಹಾಕುತ್ತಿದ್ದರು. ಅದೇನು ನಕ್ಷತ್ರಗಳನ್ನು ನೋಡಿಕೊಂಡು ದಾರಿ ಕಂಡುಕೊಳ್ಳುತ್ತಿದ್ದರೋ ಅವರಿಗೇ ಗೊತ್ತು! ನಾವಂತೂ ಸೇಫ್ ಆಗಿ ದಡ ಸೇರುವವರೆಗೂ ಜೀವ ಕೈಯಲ್ಲಿ ಹಿಡಿದುಕೊಂಡೇ ಕೂತಿದ್ದೆವು. ಅವರಿಬ್ಬರಿಗೆ ಧನ್ಯವಾದ ಹೇಳಿ ಅಲ್ಲಿಂದ ನಮ್ಮ ಕಾರಿನಲ್ಲಿ ಕದ್ರಾಗೆ ಪ್ರಯಾಣ ಬೆಳೆಸಿದ ನಾವು ಅಂದೇ ಊರಿಗೆ ವಾಪಸ್ಸಾದೆವು.


 

 
 
 
 
 
 
 
 
 
Copyright © 2011 Neemgrove Media
All Rights Reserved