ಅಂಗಳ      ನೀನಾರಿಗಾದೆಯೊ ಎಲೆ ಮಾನವ
Print this pageAdd to Favorite
 

ಕಳ್ಳರ ಸಂತೆ ಕುಶಾಲು ಜನತೆ 

 
ಡಾ. ಹಿ. ಶಿ. ರಾ.
 
 
 
ಈ ಹೊತ್ತಿನ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಯವರಿಂದ ಒಂದು ಅಮೋಘ ಬದಲಾವಣೆಯಾಗಿದೆ. ಜೊತೆಗಾರರಾದ ರಾಜಕಾರಣಿಗಳಿಗೆ, ಅವರ ಗುಲಾಮಗಿರಿ ಮಾಡುವ ನೌಕರ ವರ್ಗಕ್ಕೆ, ಅಧಿಕಾರದ ಹಂಬಲದಿಂದ ಇವರ ಹಿಂದೆ ಬಿದ್ದವರಿಗೆ ಈ ಬದಲಾವಣೆ ಸುಲಭವಾಗಿ ಅರ್ಥವಾಗುವುದು ಕಷ್ಟ. ಮತ್ತರಾಗಲೆಂದೇ ಸಾರಾಸಗಟು ಮದ್ಯಪಾನ ಮಾಡುವವರಿಗೆ ಬಿಯರ್, ವಿಸ್ಕಿ, ರಮ್, ಜಿನ್ ಇತ್ಯಾದಿಗಳ ಮದ್ಯೆ ಬಹಳ ಅಂತರವಿದೆ ಎಂದು ತಿಳಿಯುವುದಿಲ್ಲ. ಕುಡಿಯುವುದಷ್ಟೆ ಅವರ ಗುರಿ. ಹಾಗೆಯೇ ಮೇಲೆ ಹೇಳಿದ ವರ್ಗದ ಜನರಿಗೆ ಪ್ರಾಮಾಣಿಕತೆ ಮತ್ತು ಮೋಸದ ನಡುವೆಯ ಅಂತರ ಗೊತ್ತಾಗುವುದಿಲ್ಲ. ಅವೆರಡೂ ಒಂದೇ ಎಂದು ಅವರು ತಿಳಿದುಕೊಂಡಿದ್ದರೂ ಆಶ್ಚರ್ಯವಿಲ್ಲ. ಈ ಜನರ ವೇದಿಕೆಯ ಮೇಲಿನ ಮಾತುಗಳಿಂದ ಇದು ಸ್ಪಷ್ಟವಾಗುತ್ತದೆ. ವೇದಿಕೆಯ ಮೇಲೆ ಎಷ್ಟು ಸುಂದರವಾಗಿ  ಕಾಣುತ್ತಾರೆ. ಎಷ್ಟು ಸೊಗಸಾಗಿ  ಮಾತನಾಡುತ್ತಾರೆ. ಸತ್ಯ ಹರಿಶ್ಚಂದ್ರನೆ ಪುನರ್ ಜನ್ಮವೆತ್ತಿ ಬಂದಂತೆ ಕಾಣುತ್ತಾರೆ. ಮತದಾರರಿಗೆ ಗೊತ್ತು ಬಿಡಿ; ಹೊಗಳಿಕೊಂಡೋ ಬೊಗಳಿಕೊಂಡೋ ಹೋಗಲಿ. ಅಧಿಕಾರ ಇರುವುದರಿಂದ ಎಲ್ಲ ನಡೆಯುತ್ತದೆ ಎಂದುಕೊಂಡು ಸುಮ್ಮನಾಗುತ್ತಾರೆ.
 
ಮುಖ್ಯಮಂತ್ರಿಗಳ ಈ ಅಮೋಘ ಸಾಧನೆ ಏನು ಗೊತ್ತಾ? ಕರ್ನಾಟಕದ ಜನರ ಸಾಮಾನ್ಯ ಪ್ರಜ್ಞೆ (ಕಾಮನ್ ಸೆನ್ಸ್) ಯನ್ನು ಸಂಪೂರ್ಣವೆನ್ನುವಂತೆ ಅಳಿಸಿ ಹಾಕಿರುವುದು. ವಸ್ತು-ವಸ್ತು, ವ್ಯಕ್ತಿ-ವ್ಯಕ್ತಿ, ಸಂದರ್ಭ-ಸಂದರ್ಭದ ಮದ್ಯದ ತುಲನಾತ್ಮಕ ತಿಳುವಳಿಕೆಯೆ ಸಾಮಾನ್ಯಜ್ಞಾನ. ದೄಢವಾಗಿ ಸಾಧಿಸಿ ತೋರಿಸಲಾಗದಿದ್ದರೂ ಕೆಟ್ಟವನು ಯಾರು, ಒಳ್ಳೆಯವನು ಯಾರು? ಎಂಬ ಸಾಮಾನ್ಯ ತಿಳುವಳಿಕೆ ಎಲ್ಲರಿಗೂ ಇರುತ್ತದೆ (ಇದು ಸಾಮಾನ್ಯವಾಗಿ ಎಲ್ಲರಿಗೂ ಇರುವ ತಿಳುವಳಿಕೆ). ಚಿಂತನಶೀಲ ವ್ಯಕ್ತಿ ಇನ್ನೂ ಆಳಕ್ಕೆ ಹೋಗಿ ತಮ್ಮ ತಮ್ಮ  ಸ್ವಭಾವಗಳನ್ನು ವಿಶ್ಲೇಷಣೆ ಮಾಡಿ ತಿಳಿದುಕೊಳ್ಳುತ್ತಾನೆ. ಸಾಮಾನ್ಯ ಮನುಷ್ಯ ಸಾಮಾನ್ಯ ಜ್ಞಾನಕ್ಕಿಂತ  ಹೆಚ್ಚಿನ ತಿಳುವಳಿಕೆಗೆ ಕೈ ಹಾಕುವುದಿಲ್ಲ. ಆ ಫಜೀತಿಯೆಲ್ಲಾ ನನಗೆ ಬೇಡ ಎಂದು ದೂರವೇ ಉಳಿಯುತ್ತಾನೆ. ಆದರೆ ಅಂತಹ ಸಾಮಾನ್ಯ ಜ್ಞಾನ ಎಲ್ಲರಿಗೂ ಬೇಕೇ ಬೇಕು. ನೋಡುವ ಗಾತ್ರದಲ್ಲಿ ಕರಿ ಇರುವೆ ಮತ್ತು ಕೆಂಪು  ಇರುವೆಗಳ ಮಧ್ಯದ ವ್ಯತ್ಯಾಸ ಗೊತ್ತಾಗದಿದ್ದರೆ ವಿಪರೀತ ತೊಂದರೆಯಾಗುತ್ತದೆ. ಅವುಗಳ ಗುಣಗಳನ್ನು ಪರಸ್ಪರ ಹೋಲಿಸಿ ತಿಳಿದುಕೊಂಡಿದ್ದ ನನ್ನ ಮಗ ಒಂದು ಕಾಲದಲ್ಲಿ ಕರಿ ಇರುವೆಗಳನ್ನು ಕರ್ನಾಟಕದ ಇರುವೆಗಳೆಂತಲೂ ಕೆಂಪು ಇರುವೆಗಳನ್ನು ಎಲ್ .ಟಿ.ಟಿ ಇರುವೆಗಳು ಎಂತಲೂ ಗುರುತಿಸಿಕೊಂಡಿದ್ದ. ಕರಿ ಇರುವೆಗಳು ಸಾಧು. ಅವುಗಳ ದಾರಿಗೆ ಕೈ ಹಾಕಿದರೆ ಚೆಲ್ಲಾಪಿಲ್ಲಿ ಯಾಗುತ್ತವೆ . ಕೆಂಪು ಇರುವೆಗಳು ಅಟ್ಟಿಸಿಕೊಂಡು ಬರುತ್ತವೆ. ಹಿಂದೆ ಬೊಮ್ಮಾಯಿ ಎಂಬುವವರೊಬ್ಬರು ಮುಖ್ಯಮಂತ್ರಿಯಾಗಿದ್ದಾಗ ಅವರ ಮೊದಲ ಭಾಗದ ಹೆಸರನ್ನು ಓದಿ ಅವರು ಲಿಂಗಾಯಿತರೆಂದೂ ಕೊನೆಯ ಭಾಗದ ಹೆಸರನ್ನು ನೋಡಿ ಅವರು ವಡ್ಡರಾಗಿರುವರೆಂದೂ ವಾದ ಹೂಡಿ ಜನ ಸೋಲು-ಗೆಲವು ಕಂಡಿದ್ದರು. ಹೀಗೆ ರಾಜಕಾರಣಿಗಳನ್ನು ತಿಳಿದುಕೊಳ್ಳಲು ಸಾಮಾನ್ಯ ಜನರು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ತುಂಬಾ ಸ್ಪಷ್ಟವಾಗಿ ಅಲ್ಲದಿದ್ದರೂ ಮೇಲು ನೋಟದಲ್ಲಿ ಅವರವರ ಒಳ-ಹೊರಗನ್ನು ಅರ್ಥ ಮಾಡಿಕೊಂಡಿರುತ್ತಾರೆ.
 
ಈ ಹೊತ್ತು ಈ ರಾಜಕಾರಣಿಗಳೇ ಎಲ್ಲ ತಿಳುವಳಿಕೆಯ ಕೇಂದ್ರ ರೆಫರೆನ್ಸ್ ಆಗಿದ್ದಾರೆ. ಎಲ್ಲವನ್ನೂ ರಾಜಕಾರಣದ ತಿಳಿವಿನಿಂದಲೆ ನೋಡುವುದು ಸಾಮಾನ್ಯವಾಗಿ ಬಿಟ್ಟಿದೆ. ಸತ್ಯ-ಧರ್ಮ, ನ್ಯಾಯ-ನಿಷ್ಟೆ, ಪ್ರಾಮಾಣಿಕತೆ-ಮೋಸ, ಓಳಿತು-ಕೆಡಕು ಎಲ್ಲವನ್ನೂ ರಾಜಕೀಯ ಭಾಷೆಯಲ್ಲಿಯೇ ಅರ್ಥೈಸಲಾಗುತ್ತಿದೆ.  ಬಹಳವಾದ ರಾಜಕೀಯ ಪುರಾಣಗಳೂ ಹುಟ್ಟಿಕೊಂಡಿವೆ. ಯಾರು ಯಾರು ಎಲ್ಲಿ ಹೇಗೆ ಹುಟ್ಟಿ ಹೇಗೆ ಬೆಳೆದರು? ಯಾವ ಘನಂಧಾರಿ ಕೆಲಸ ಮಾಡಿ ಜನಪ್ರತಿನಿಧಿಗಳಾದರು? ಈಗ ಅವರ ಒಳ ಹೊರಗಿನ ಬಿಸಿನೆಸ್ ಏನು? ಎಂಬುದಕ್ಕೆಲ್ಲ ಜನ ಅಳೆದು-ಸುರಿದು ನೋಡಿ ತಮ್ಮ ಜ್ಞಾನದ ಸಾಮರ್ಥ್ಯವನ್ನು ಮೆರೆಯುತ್ತಾರೆ. ಹಳಬರ ವಿಷಯ ಇರಲಿ, ಈ ಹೊಸ ಪೀಳಿಗೆಯ ಜನರಿಗೆ ಈಗ ಪುರಾಣ ಮರೆತು ಹೋಗಿದೆ. ಪುರಾಣ-ಗಿರಾಣ, ದೇವರು-ಗೀವರ ಹುಟ್ಟು-ಬೆಳವಣಿಗೆ ಇತ್ಯಾದಿ ಅನುತ್ಪಾದಕ ಸರಕುಗಳಾಗಿವೆ. ಅದನ್ನೆಲ್ಲ ಹರಿಕಥೆ ದಾಸರಿಗೆ ಬಿಟ್ಟಿದ್ದಾರೆ . 'ಮಸ್ತ್ ಮಜಾ ಮಾಡಿ. ಹಣ ಎಲ್ಲವನ್ನೂ ಕೊಡುತ್ತದೆ’. ಇದು ಅವರ ಧ್ಯೇಯ ವಾಕ್ಯ.
 
ಈ ನವ ಭಕ್ತರು ರಾಜಕಾರಣಿಗಳ ಮಾತು, ಅದರಲ್ಲೂ ತಮ್ಮ ನೆಚ್ಚಿನ ನಾಯಕನ ಮಾತು ಎಂದರೆ ಅದು ವೇದ-ಉಪನಿಷತ್ತಿಗಿಂತ ಆಚೆಗಿನ ಸತ್ಯ ಎಂದು ನಂಬಿ ಬುರುಡೆ ಹೊಡೆಯುತ್ತಿರುತ್ತಾರೆ. ಇಂಥ ತಮ್ಮ ನಾಯಕ ರಾಜ್ಯದ ಮಂತ್ರಿಯೋ, ಮುಖ್ಯ ಮಂತ್ರಿಯೋ ಆದರೆ ಮುಗಿಯಿತು ಬಿಡಿ. ದೇವೇಂದ್ರನೇ ಧರೆಗಿಳಿದು ಬಂದಂತೆ  ಆಡುತ್ತಾರೆ, ತಮ್ಮ ಹಿಂಬಾಲಕರನ್ನು  ಆಟ ಆಡಿಸುತ್ತಾರೆ. ತಮ್ಮ ನಾಯಕನ ವಿರೋಧಿಯ ಬಗ್ಗೆ ಬೇರೆಯದೇ ಪುರಾಣ ಹುಟ್ಟಿಸುತ್ತಾರೆ. ಇವರದ್ದು ಒಂದು ಕ್ಯಾಟೆಗರಿ. ಆದರೆ ಇಂಥವರಲ್ಲದೇ ಈ ಯಾವುದೇ ಪಕ್ಷ ಅಥವಾ ನಾಯಕನಿಗೆ ನಿಷ್ಟೆಯಿಲ್ಲದ ಜನರೂ ಇದ್ದಾರೆ. ಇವರು ಜಗತ್ ಸತ್ಯ ಮತ್ತು ಜಗತ್ ಮಿಥ್ಯೆಯ ಗೊಂದಲದಲ್ಲಿ ತೇಲುತ್ತಾರೆ. ಸ್ಥಳೀಯ ಸಮಸ್ಯೆಗಳು ಎದುರಾದರೆ ಎದೆಗೊಡದೆ ತಪ್ಪಿಸಿಕೊಳ್ಳುತ್ತಾರೆ. ಇವರ ಮೌಲ್ಯಮಾಪನ ಸಾಮಾನ್ಯ ಸತ್ಯಕ್ಕೆ ಹತ್ತಿರವಿರುತ್ತದೆ. ಒಂದು ರೀತಿಯಲ್ಲಿ ಇವರು ಸಮಾಜದ ಶಾಕ್ ಅಬ್ಸರ್ವರ್ಸ್.  ಬೆಳೆಯುತ್ತಿರುವ ಸಮಾಜದ ಬಗ್ಗೆಯಾಗಲೀ, ರಾಜಕಾರಣದ ಬಗ್ಗೆಯಾಗಲಿ ಇವರ ಸಾಮಾನ್ಯ ತಿಳುವಳಿಕೆ ಉಪಯೋಗಕ್ಕೆ ಬರುತ್ತದೆ. ಉನ್ಮಾದದ ಬೆನ್ನುಹತ್ತಿ ಓಡುವವರ ಮಧ್ಯೆ ಈ ಒಂದು ಜನವರ್ಗ ಸಾಮಾನ್ಯ ಜನರ ದ್ವಂದ್ವ, ದಿಗ್ಭ್ರಮೆ, ಆತಂಕ ಮತ್ತು ಅಸಹಾಯಕತೆಯನ್ನು ಪ್ರತಿನಿಧಿಸುತ್ತಾರೆ.
 
ಇತ್ತೀಚೆಗೆ ಕರ್ನಾಟಕದ ರಾಜ್ಯಪಾಲರು ಮುಖ್ಯಮಂತ್ರಿಗಳನ್ನು ರಾಜ್ಯದಲ್ಲಿ ಪ್ರಸ್ತಾಪವಾದ ಭೂ ಹಗರಣಗಳ ಬಗ್ಗೆ ಮತ್ತು ಗಣಿ ಹಗರಣಗಳ ಬಗ್ಗೆ ಸವಿವರ ಕೊಡುವಂತೆ ಕೇಳಿದ್ದರಂತೆ. ಮುಖ್ಯಮಂತ್ರಿಗಳು ರಾಜ್ಯಪಾಲರ ಪತ್ರಕ್ಕೆ ಎರಡು ಸಾಲಿನ ಉತ್ತರ ಕೊಟ್ಟು "ಅಂಥದ್ದೇನು ನಡೆದಿಲ್ಲ" ಎಂದಿದ್ದರಂತೆ. ವಿರೋಧ ಪಕ್ಷದವರು ಆಳುವ ಪಕ್ಷದವರ ಅನೇಕ ಭೂಹಗರಣಗಳನ್ನು ಮಾಧ್ಯಮಗಳ ಮೂಲಕ ಬಯಲಿಗೆಳೆದಿದ್ದಾರೆ. ಅವುಗಳಿಗೆಲ್ಲವೂ ಮುಖ್ಯಮಂತ್ರಿಗಳು ಒಂದೇ ಉತ್ತರವನ್ನು ಕೊಟ್ಟಿದ್ದಾರೆ- "ಅಂಥದ್ದೇನೂ ನಡೆದೇ ಇಲ್ಲ" ಎಂದು! ರಾಜ್ಯಪಾಲರು ಅಂತ ಅವರಿಗೋಸ್ಕರ ವಿಶೇಷ ಉತ್ತರವನ್ನು ಕೊಡಲು ಸಾಧ್ಯವೇ? ನಮ್ಮ ಮಾನ್ಯ ಮುಖ್ಯಮಂತ್ರಿಗಳು ಸಾಮಾನ್ಯರಿಗೆ ಏನು ಉತ್ತರ ಹೇಳುತ್ತಾ ಬಂದಿದ್ದಾರೋ ಅದನ್ನೇ ರಾಜ್ಯಪಾಲರಿಗೂ ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನ ತಾನೆ!
 
ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ವಿಷಯ ಒಂದು ಕಡೆ ಇರಲಿ. ಈಗ ಸಾಮಾನ್ಯ ಸಾಮಾಜಿಕ ಪ್ರಜ್ಞೆ ಇರುವ ಜನರೇ ದಿಕ್ಕುತಪ್ಪಿದ ಹುಚ್ಚರಂತೆ ಆಗಿದ್ದಾರೆ. ತಮಗೆ ಬಹಳ ಕಾಲದಿಂದ ಇದ್ದ ಸಾಮಾನ್ಯ ಜ್ಞಾನದ ತಿಳುವಳಿಕೆ ಕೈ ಕೊಟ್ಟಿದೆಯೆ? ನಾವು ಇದೇ ಕರ್ನಾಟಕದ, ಇದೇ ಜನರ ಮಧ್ಯೆ ಇದ್ದೇವೆಯೆ? ಇಲ್ಲಿ ನಡೆಯುತ್ತಿರುವುದು ನಮಗೆ ಅರ್ಥವಾಗಿದೆಯೆ ಅಥವ ಇಲ್ಲವೆ? ಎಂಬ ಗುಮಾನಿ ಅವರನ್ನು ಆತಂಕಕ್ಕೀಡು ಮಾಡಿದೆ. ವಿಚಾರವಂತ ಪ್ರಜೆ ಕೂಡ ಇದಕ್ಕಿಂತ ಭಿನ್ನವಾದ ಸ್ಥಿತಿಯಲ್ಲಿ ಇಲ್ಲ.
 
 
 
 
ನಮ್ಮ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು ಪ್ರಾಮಾಣಿಕತೆ ಯಾವುದು ಮತ್ತು ಭ್ರಷ್ಟಾಚಾರ ಯಾವುದು ಎಂಬುದರ ಮಧ್ಯೆಯ ಗೆರೆಯನ್ನು ಅಳಿಸಿ ಹಾಕಿಬಿಟ್ಟಿದ್ದಾರೆ...ಇರುವೆಗಳಂತೆ ಸತ್ಯದ ಸರದಿ ಸಾಲಿನಲ್ಲಿ ಹೋಗುತ್ತಿದ್ದ ಜನರಿಗೆ ದಾರಿ ಕಾಣದಂತೆ ಆಗಿದೆ. ಇದೇನು ಸಾಮಾನ್ಯ ಸಾಧನೆ ಅಲ್ಲ! ಎಷ್ಟೋ ಶತಮಾನಗಳಿಂದ ಬಂದ ಎರಡು ಮೌಲ್ಯಗಳ ಅಸ್ತಿತ್ವವನ್ನೇ ಕಲಸಿ ಹಾಕುವುದಾದರೆ ಅದು ಒಬ್ಬ ಜಗತ್ ಮಹಾನ್ ನಾಯಕನ ಸಾಧನೆಯಾಗುತ್ತದೆ. ಅದೂ ಕರ್ನಾಟಕದಲ್ಲಿ ಇಂಥದೊಂದು ಅಮೋಘ ಸಾಹಸ ನಡೆದಿದೆ ಎಂದರೆ ಅದು ಗಿನ್ನಿಸ್ ಅಲ್ಲ, ವಿಶ್ವದಾಖಲೆಯಾಗುತ್ತದೆ. ಇದನ್ನು ಮನ್ವಂತರದ ಕಥೆ ಎಂದು ಕರೆಯಬಹುದು. ಮೌಲ್ಯಗಳ ಅಸ್ತಿತ್ವ ಅಲ್ಲಾಡಿ, ಜನ ತಲ್ಲಣಗೊಂಡು ಹೊಸ ಮೌಲ್ಯ, ಅಸ್ತಿತ್ವ ಮತ್ತು ಮುಂದುವರಿಕೆಗಾಗಿ ಚಡಪಡಿಸುವ ಸಂದರ್ಭವನ್ನು ಸೃಷ್ಟಿಮಾಡಿ ಕೊಡುವುದಿದೆಯಲ್ಲ! ಇದೇನು ಸಾಮಾನ್ಯ ಕಥೆಯೇ? ಇದು ಬಿಜೆಪಿ ಯ ಉದ್ದೇಶವೋ ಇದ್ದಿರಬಹುದು. ತಲೆ ಕೆರೆದುಕೊಂಡರೂ, ತಲೆ ಹಿಂದಕ್ಕೆ ಬಡಿದುಕೊಂಡರೂ ,ತಲೆ ಕೆಡಿಸಿಕೊಂಡರೂ ದಿಕ್ಕು ಮಾತ್ರ ಕಾಣುತ್ತಿಲ್ಲ. ಹಿಂದಿನವರು ಹೀಗೆ ಮಾಡಿದರು ಎನ್ನುವುದು ಸಬೂಬು. ಈ ಹೊತ್ತಿನ ಸತ್ಯ ಏನು? ಭೂತಕಾಲಕ್ಕೆ ಉತ್ತರಕೊಡುವುದು ಸುಲಭವಲ್ಲ. ವರ್ತಮಾನವನ್ನು ನಿರ್ವಹಿಸುವುದು ಮುಖ್ಯ. 
 
ಈ ದರೋಡೆಯಲ್ಲಿ ಹಿಂದಿನ ರಾಜಕಾರಣಿಗಳು ಹಿಂದೆ ಬಿದ್ದಿಲ್ಲ ನಿಜ. ಅವರು (ಹಿಂದಿನವರು) 'ಗೌರವಸ್ತಕಳ್ಳರು' (ಹಾನರಬಲತೀವ್ಸ) ಎನ್ನಬೇಕಷ್ಟೇ. ಕರ್ನಾಟಕದಲ್ಲಿ ಈ ಗೌರವಕ್ಕೆ ಪಾತ್ರರಾಗಬಹುದಾದ ಅನೇಕ ಮಂದಿ ಇದ್ದಾರೆ. ಕೇಂದ್ರದ ಮಟ್ಟದಲ್ಲಿ ಇಂಥ ಸಾಧಕರಿಗೆ ಕೊರತೆಯೇ ಇಲ್ಲ. ಕಾರ್ಪೊರೇಟ್ ವಲಯದ ಶ್ರೀಮತಿ ರಾಡಿಯಾ ಅವರ ರಾಡಿ ಭಾರತಕ್ಕೆಲ್ಲಾ ಹಂಚುವಂತಿದೆ. ಹಣ ಎಲ್ಲವನ್ನು ಮಾಡುತ್ತಿದೆ ಎಂದಾಗ ಏನೂ ಸಿಗದಿದ್ದವನು ಎದುರಿಗೆ ಸಿಕ್ಕಿದವನ ತಲೆಯನ್ನಾದರೂ ಒಡೆಯುತ್ತಾನೆ. ಬೆಂಗಳೂರಿನಲ್ಲಿ ಪೋಲೀಸರ ಬೇಟೆಗೆ ಸಿಕ್ಕಿಬೀಳುತ್ತಿರುವ ಕಳ್ಳರಲ್ಲಿ ಈ ವರ್ಗಕ್ಕೆ ಸೇರಿದವರೇ ಬಹುಸಂಖ್ಯೆಯಲ್ಲಿ ಇದ್ದಾರೆ. ಇದು ದುಡಿಮೆಯ ಗೌರವವನ್ನು, ಶ್ರದ್ಧೆಯ ಔಚಿತ್ಯವನ್ನು ಪ್ರಶ್ನಿಸುವ ಸಾಮಾಜಿಕ ಚಲನೆಯಾಗಿದೆ. 
ಜನರೇ ಕರಪ್ಟ್ ಆಗಿರುವಾಗ ನಾಯಕನಾದವನು ಏನು ಮಾಡುತ್ತಾನೆ ಎಂಬ ಸರಳವಾದ ಈಗ ಎಲ್ಲ ಕಡೆ ಹಬ್ಬುತ್ತಿದೆ. ಹಾಗಿದ್ದಲ್ಲಿ ಈ ನಾಯಕನನ್ನು ಕಳ್ಳರ ಯಜಮಾನ ಎಂದು ಕರೆಯಬಹುದೆ? ಆತ ದರೋಡೆ ಮಾಡಿ ದೇಶವನ್ನು ಸಾಕಬಹುದೇ? ಖಾಸಗೀಕರಣ, ಕಾರ್ಪೊರೇಟ್ ಜಗತ್ತು ಮತ್ತು ಅದರ ದಲ್ಲಾಳಿಗಳಾದ ರಾಜಕಾರಣಿಗಳು ಇದೇ ದಂದೆಗೆ ಹೊರಟಿದ್ದಾರೆಯೆ?

ಹಾಗಿದ್ದಲ್ಲಿ ಸಮಾಜದಲ್ಲಿ ದರೋಡೆಕೋರ ಮತ್ತು ಅವನ ಬಳಗ ಮಾತ್ರ ಇರಲು ಸಾದ್ಯ. ನಾಯಕ ಮತ್ತು ಪ್ರಜೆಗಳೆಂಬುವವರು ಇರಲು ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ಅಭಿವೃದ್ದಿ ಎನ್ನುವುದಕ್ಕೆ ಅರ್ಥ ’ಹಣಮಾಡು’ ಎಂದಾಗುತ್ತದೆಯೇ ಹೊರತು ಸಮಾಜವನ್ನು ಮೇಲೆತ್ತು ಮತ್ತು ಮುಂದುವರೆಸು ಎಂದಾಗುವುದಿಲ್ಲ. ಸಮಾಜದಲ್ಲಿ ಮೌಲ್ಯ, ಚಿಂತನೆ ಮತ್ತು ಚಿಂತಕರೆಂಬುವವರು ಇರಲು ಸಾಧ್ಯವಿಲ್ಲ. ಇದು  ಗ್ರೇಡ್ ಲೆಸ್  ಸಮಾಜ. ಇದನ್ನೇ ಫ್ಲ್ಯಾಟ್ಟ್ ಸಮಾಜ ಎಂದು ಕರೆಯಬಹುದು. 
ಸಮಾಜ ಗ್ರೇಡ್ಲೆಸ್, ಫ್ಲ್ಯಾಟ್ ಆದರೂ ಭೂಮಿ ಗುಂಡಾಗಿದೆಯಲ್ಲ, ಅದು ನಿರ್ಜೀವ ಗಾಜಿನ ಗೋಲಿಯಂತೆ ಇಲ್ಲವಲ್ಲ! ಭೌಗೋಳಿಕ ವಾತಾವರಣ, ಬೆಳೆ, ವಸತಿ, ಜೀವನಕ್ರಮ ಇವೆಲ್ಲವೂ ಭಿನ್ನವಾಗಿದೆಯಲ್ಲ. ಹಾಗಿದ್ದಲ್ಲಿ ನಾವು ಪ್ರಕೃತಿಗೆ ವಿರುದ್ದವಾಗಿಯೇ ಹೋಗುತ್ತಿದ್ದೇವೆಯೇ!
 
 
 
 
 
 
Copyright © 2011 Neemgrove Media
All Rights Reserved