ಅಂಗಳ      ಧರೆ ಹತ್ತಿ ಉರಿದೊಡೆ
Print this pageAdd to Favorite
 

ಕುಲಾಂತರಿ-ಅಮೆರಿಕಾದ ಕೃಷಿಕರ ಮೇಲೆ ಮತ್ತೊಮ್ಮೆ ಮೋನ್ಸಾಂಟೋ ಅಟ್ಟಹಾಸ!

 
ಭಾಗ-
 
ಇದು ಜನವರಿ ೨೦೧೧ ರ ಬಿಸಿಬಿಸಿ ಕುಲಾಂತರಿ ಸುದ್ದಿ. ಅಮೆರಿಕಾದ ೨೫,೦೦೦ ಎಕರೆಗಳಷ್ಟು ಸಾವಯವ (organic) ಭೂಮಿ, ಲಕ್ಷಾಂತರ ಸಾವಯವ ಕೃಷಿ ಉತ್ಪನ್ನಗಳ ಬಳಕೆದಾರರ ಕತ್ತಿಗೆ ಬಿದ್ದಿರುವ ಕೊಡಲಿ ಏಟು! 
ಅಮೆರಿಕಾ ನೆಲದಲ್ಲಿ ಸಾವಯವ ಕೃಷಿ ಮಾಡುವ ಎಲ್ಲ ರೈತರ, ಭೂಮಿಯ, ಮಾರಾಟಗಾರರ ಪರವಾಗಿ ಆರ್ಗ್ಯಾನಿಕ್ ವ್ಯಾಲಿ, ಹೋಲ್ ಫುಡ್ಸ್ ಮಾರ್ಕೆಟ್ ಮತ್ತು ಸ್ಟೋನಿ ಫೀಲ್ಡ್ ಫಾರ್ಮ್ ಎಂಬ ಸಾವಯವ ಉತ್ಪನ್ನ ತಯಾರಿಕಾ ಕಂಪನಿಗಳು/ಫಾರ್ಮ್ ಗಳು, ಸಾವಯವ ಕೃಷಿ ಉತ್ಪನ್ನಗಳಿಗೆ ಸುಲಭ ಮಾರುಕಟ್ಟೆ ದೊರೆಯುವಂತೆ ಮಾಡಲು, ಸಾವಯವ ಉತ್ಪನ್ನಗಳಿಗೆ ಹೆಚ್ಚು ಗ್ರಾಹಕರು ಮತ್ತು ಇರುವ ಗ್ರಾಹಕರಿಗೆ ಸುಲಭವಾಗಿ ಸಾವಯವ ಉತ್ಪನ್ನಗಳು ಸಿಗುವಂತೆ ಮಾಡಲು, ಅಮೆರಿಕಾ ಸರ್ಕಾರಕ್ಕೆ ಸಾವಯವ ಕೃಷಿಯ ಕುರಿತಾಗಿ ಲಾಬಿ ಮಾಡಲು ಅನುಕೂಲವಾಗುವಂತೆ ’ಆರ್ಗ್ಯಾನಿಕ್ ಎಲೀಟ್’ ಎಂಬ ಒಕ್ಕೂಟ ಮಾಡಿಕೊಂಡು ಸುಮಾರು ಹನ್ನೆರಡು ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದವು. ಮೋನ್ಸಾಂಟೋ ಕಂಪನಿ ಹೊಸದಾಗಿ ಜೆನೆಟಿಕಲಿ ಮಾಡಿಫೈಡ್ ಮಾಡಿರುವ ಇನ್ನು ಕೆಲವು ತಳಿಗಳು ಅಮೆರಿಕಾದ ಸಾವಯವ ಕೃಷಿ ಭೂಮಿಯನ್ನು ಅತಿಕ್ರಮಿಸಿಕೊಳ್ಳದಿರುವಂತೆ ಹೋರಾಡಿದ್ದವು.
ಆದರೆ ಮೊನ್ನೆ ಜನವರಿ ೨೧ ರಂದು ಈ ಆರ್ಗ್ಯಾನಿಕ್ ಎಲೀಟ್, ಮೋನ್ಸಾಂಟೋ ನ ಅಟ್ಟಹಾಸಕ್ಕೆ ಮಣಿದು ಇನ್ನು ಮುಂದೆ ಯಾವತ್ತೂ ಜೆನೆಟಿಕಲಿ ಮಾಡಿಫೈಡ್, ಜೆನೆಟಿಕಲಿ ಇಂಜಿನೀಯರ್ಡ್ ತಳಿಗಳ ಸಾರಾ ಸಗಟು ವ್ಯವಸಾಯವನ್ನು ವಿರೋಧಿಸುವುದಿಲ್ಲ ಎಂದು ಹೇಳಿಕೆ ಕೊಟ್ಟು ತಾವು ಇಷ್ಟೂ ದಿನ ಹೊತ್ತಿದ್ದ ಸಾಮಾಜಿಕ ಜವಾಬ್ದಾರಿಯಿಂದ ಕೈ ಕೊಡಹಿಕೊಂಡಿವೆ.
ಮೋನ್ಸಾಂಟೋ ಈಗ ಆಲ್ಫಾಲ್ಫಾದ (ಹಸು ಕರುಗಳಿಗೆ ಹಾಕುವ ಮೇವು. ನೇರಳೇ ಬಣ್ಣದ ಹೂ ಬಿಡುವ ಈ ಗಿಡ ಬಟಾಣಿ ಕಾಳುಗಳಂತಹ ಧಾನ್ಯವನ್ನು ಕೊಡುತ್ತದೆ. ಇದು ಹಸುಗಳಿಗೆ ಉತ್ತಮ ಮೇವು. ಈ ಕಾಳುಗಳನ್ನು ಮೊಳಕೆ ಬರಿಸಿ ಆ ಮೊಳಕೆಯನ್ನು ತಿನ್ನಲೂ ಉಪಯೋಗಿಸುತ್ತಾರೆ) ಹೊಸ ಕುಲಾಂತರಿ ತಳಿಯೊಂದನ್ನು ಮಾಡಿ ಅದನ್ನು ಮಾರುಕಟ್ಟೆಗೆ ಬಿಡಲು ರೆಡಿಯಾಗಿ ಕೂತಿದೆ. ಈ ತಳಿ ರೌಂಡ್ ಅಪ್ ನಂತಹ ಅತ್ಯಂತ ವಿಷಮಯ ಕೀಟನಾಶಕವನ್ನೂ ಉಂಡು ಸಲೀಸಾಗಿ ಬೆಳೆಯುವ ಶಕ್ತಿ ಹೊಂದಿದೆ. ಈ ತಳಿಯೇನಾದರೂ ಅಮೆರಿಕಾದ ಭೂಮಿಗೆ ಬಂದರೆ ಈ ತಳಿಯ ಮ್ಯೂಟೆಂಟ್ ಜೀನ್ ಗಳನ್ನು ಬೇರೆಲ್ಲಾ ನಾಟಿ ತಳಿಗಳಿಗೂ ತಳುಕುಹಾಕಿ ಅವುಗಳ ರೂಪವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ.
 
ಈ ಹೊಸ ಕುಲಾಂತರಿ ತಳಿ ಈಗಾಗಲೇ ಭೂಮಿಗೆ ಮತ್ತು ಕೃಷಿ ಉತ್ಪನ್ನಗಳಿಗೆ ಮಾರಕ ಎಂದು ಸಿದ್ಧವಾಗಿರುವ ರೌಂಡ್ ಅಪ್ ಕೀಟನಾಶಕಕ್ಕೂ ಬಗ್ಗದೆ ಬೆಳೆಯುವ ಸಾಮರ್ಥ್ಯ ಹೊಡಿರುವುದರಿಂದ ಈ ತಳಿಯ ಸಾಕಣೆಗಾಗಿ ಮೋನ್ಸಾಂಟೋ ಇನ್ನಷ್ಟು ಶಕ್ತಿಯುತ ಕೀಟನಾಶಕಗಳನ್ನು ಮಾರುಕಟ್ಟೆಗೆ ಬಿಡಲಿದೆ. ಈಗಾಗಲೇ ರೌಂಡ್ ಅಪ್ ಬಗ್ಗೆ ಸಂಶೋಧನೆ ನಡೆದು, ಈ ಕೀಟನಾಶಕದ ನಿಯಮಿತ ಬಳಕೆಯಿಂದ ಅವನ್ನು ಬಳಸುವ ರೈತರಿಗೆ, ಅವರ ಕುಟುಂಬದವರಿಗೆ, ಹೊಲ ಜಮೀನುಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ಸಿದ್ಧಪಡಿಸಲಾಗಿತ್ತು. ಹಾಗೇ ರೌಂಡ್ ಅಪ್ ನ ಬಳಕೆಯಿಂದ ಭೂಮಿ ಬೆಳೆಯಿಂದ ಬೆಳೆಗೆ ಸುಧಾರಿಕೊಳ್ಳಲು ಸಹಾಯ ಮಾಡುವ, ಮಣ್ಣ ಕಣಗಳಲ್ಲಿರುವ  ನೈಸರ್ಗಿಕ ಮೈಕ್ರೋ ಆರ್ಗಾನಿಸಮ್ ಗಳು ಸುಧಾರಿಸಿಕೊಳ್ಳಲಾಗದ ರೀತಿಯಲ್ಲಿ ನಾಶ ಹೊಂದುತ್ತವೆ ಎಂದೂ ಸಾಬೀತು ಮಾಡಲಾಗಿತ್ತು. ಆದರೆ ಮೋನ್ಸಾಂಟೋ ನ ಹಣ, ಅಧಿಕಾರ, ಹಿಡಿತದ ಮುಂದೆ ಇವತ್ತು ಎಲ್ಲವೂ ಮತ್ತೆ ಮುಗ್ಗರಿಸಿವೆ. ಇನ್ನು ಭೂಮಿ, ಬೀಜ, ತಳಿ, ತರಕಾರಿಗಳ ಗತಿ?!  ಅವನ್ನು ಹಿಂದೆ ಮುಂದೆ ಯೋಚಿಸದೆ ತಿನ್ನುವ ದೇಹಗಳ ಗತಿ?! 
 
 
(ಮುಂದುವರಿಯುವುದು) 
 

 
 

ತಿಂಗಳುಗಳ ಹಿಂದೆ ಪಾಕಿಸ್ತಾನ, ಮೊನ್ನೆ ಆಸ್ಟ್ರೇಲಿಯಾ...


 
ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್-ಬ್ರಿಸ್ಬೇನ್ ಪ್ರಾಂತ್ಯದಲ್ಲಿ ತೀವ್ರ ಮಾನ್ಸೂನ್ ಮತ್ತು ಅತೀವ ಪ್ರವಾಹದಿಂದಾಗಿ ಬಿಲಿಯನ್ ಗಟ್ಟಲೆ ಆಸ್ತಿ ಹಾನಿ ಮತ್ತು ಪ್ರಾಣಹಾನಿಯೂ ಸಂಭವಿಸಿತ್ತು. ಮೊನ್ನಿನ ಪ್ರವಾಹದಿಂದ ಮನೆ ಕಳೆದುಕೊಂಡಿರುವವರು ಇನ್ನೂ ಸರ್ಕಾರದ ಶೆಲ್ಟರ್ ಗಳಲ್ಲಿ ಇದ್ದಾರೆ. ಪ್ರವಾಹದಿಂದಾಗಿ ಅಲ್ಲಿನ ಸ್ವಾಂಪ್ (ಜೌಗು ಪ್ರದೇಶ) ಗಳಿಂದ ರಸ್ತೆಗೆ, ಜನವಸತಿಯ ಜಾಗಗಳಿಗೆ ಕೊಚ್ಚಿಕೊಂಡು ಬಂದಿದ್ದ ಮೊಸಳೆ ಇನ್ನಿತರ ಜಲಚರಗಳಿಗೆ ಇನ್ನೂ ನೆಲೆಯಾಗಿಲ್ಲ. ಈಗ ಅದೇ ಪ್ರಾಂತ್ಯಕ್ಕೆ ಚಂಡಮಾರುತದ ಹೊದೆತ ಆಗುವ ಸಾಧ್ಯತೆ ಇದೆಯೆಂದು ಹವಾಮಾನ ವಿಜ್ನಾನಿಗಳು ಮುನ್ಸೂಚನೆ ನೀಡಿದ್ದಾರೆ. ಆಸ್ಟ್ರ‍ೇಲಿಯಾದ ಮಾನ್ಸೂನ್ ಕಾಲ ಈಗಷ್ಟೇ ಆರಂಭವಾಗಿದೆ. ಶುರುವಿಗೇ ಹೀಗಾದರೆ ಇನ್ನು ಇಡೀ ಮಾನ್ಸೂನ್ ಹೇಗಿರಬಹುದೆಂಬ ಆತಂಕ ಶುರುವಾಗಿದೆ ಅಲ್ಲಿನ ಜನರಿಗೆ.
ಈ ಅತಿ ವೃಷ್ಟಿ ಅನಾವೃಷ್ಟಿ ಗೆ ಗ್ಲೋಬಲ್ ವಾರ್ಮಿಂಗ್ , ವಾತಾವರಣದಲ್ಲಾಗುತ್ತಿರುವ ಬದಲಾವಣೆಗಳೇ ಸಂಪೂರ್ಣ ಕಾರಣವೆಂದು ವಿಜ್ನಾನಿಗಳು ಅಭಿಪ್ರಾಯಪಡುತ್ತಿದ್ದಾರೆ.
 
 
 
 
 
 
 
 
 
 
 
 
 
Copyright © 2011 Neemgrove Media
All Rights Reserved