ಅಂಗಳ      ಮುಗುಳು ಮುಕ್ಕಳಿಸಿ
Print this pageAdd to Favorite

 


ಒಂದು ಹಕ್ಕಿ ಕುಟುಂಬದೊಂದಿಗೆ

ಕಡಿದಾಳು ಶಾಮಣ್ಣ

ಚಿತ್ರ: ಜಾಯ್ ಬೆಲ್ಲೆ, ಇಲಿನಾಯ್

 
ಒಂದು ಪತ್ರಿಕೆಗೆ ಕೆಲ್ಸ ಮಾಡ್ತ ಹೋದ ಹಾಗೆಲ್ಲ ಆ ಪತ್ರಿಕೆಯ ಇತಿ-ಮಿತಿ, ಬೇಕು ಬೇಡಗಳೆಲ್ಲ ಅರ್ಥವಾಗ್ತಾ ಹೋಗುತ್ತದೆ. ಪತ್ರಿಕೆಯ ಓದುಗರ ಆಭಿಪ್ರಾಯ ಹತ್ತಿರದಿಂದ ತಿಳಿದಾಗ ಅದಕ್ಕೆ ಸ್ಪಂದಿಸುವುದೂ ಅನಿವಾರ್ಯವಾಗುತ್ತದೆ. ನಾನೊಂದು ದಿನ ಊರಿಗೆ ಹೋಗಲೆಂದು ಶಿವಮೊಗ್ಗ ಬಸ್ ಸ್ಟಾಂಡ್ ಬಸ್ ಹತ್ತಿ ಕುಳಿತೆ. ನನ್ನ ಪಕ್ಕದಲ್ಲಿ ಕುಳಿತ ಹಳ್ಳಿಯವರೊಬ್ಬರು ಬಸ್ಸಿಳಿದು ಹೋಗಿ ಲಂಕೇಶ್ ಪತ್ರಿಕೆ ಕೊಂಡು ತಂದರು. ಬಸ್ಸು ಹೊರಟ ನಂತರ ಪುಟ ತಿರುಗಿಸಲು ಪ್ರಾರಂಭಿಸಿದರು. ಅವರ ಪಕ್ಕದಲ್ಲಿದ್ದವರೂ ತಲೆಹಾಕಿದರು.
 
Credit: Joy Belleಆ ಸಂಚಿಕೆಯಲ್ಲಿ ಶ್ರೀ ತೇಜಸ್ವಿಯವರ ಹಕ್ಕಿ ಚಿತ್ರಗಳು ಲೇಖನದೊಂದಿಗೆ ಪ್ರಕಟವಾಗಿತ್ತು. ಆ ಚಿತ್ರ ಕಂಡೊಡನೆ ಇಬ್ಬರೂ ಒಂದೇ ಸಾರಿಗೆ ’ಅಹ ಎಷ್ಟು ಚೆನ್ನಾಗಿದೆ’ ಎಂದು ಮುಖ ಅರಳಿಸಿದರು. ನಂತರ ಯಾರು ತೆಗೆದದ್ದೆಂದು ನೋಡಿದರು. ತೇಜಸ್ವಿ ಅಂತ ಹೆಸರಿತ್ತು. ಇಬ್ಬರು ಮೆಚ್ಚುಗೆ ವ್ಯಕ್ತಪಡಿಸುತ್ತ ಲೇಖನ ನಿಧಾನಕ್ಕೆ ಓದಿದರಾಯ್ತೆಂದು ಮುಂದಿನ ಪುಟ ತಿರುಗಿಸಿದರು.
 
ಇದನ್ನೆಲ್ಲ ನೋಡಿದ, ಕೇಳಿದ ನನ್ನಗನ್ನಿಸಿತು. ನಾನು ಕ್ಯಾಮರಾ ಹೊತ್ತು ತಿರುಗಾಡುತ್ತೀನಿ. ಕೇವಲ ಮನುಷ್ಯರ ಮುಖಮುಸುಡಿ ತೆಗೆಯೋದರಲ್ಲೇ ಕಾಲ ಹಾಕಿದ್ದೇನೇ ಹೊರತು ಒಂದು ಸುಂದರವಾದ ಹಕ್ಕಿಯ ಅಥವಾ ಪ್ರಾಣಿಯ ಚಿತ್ರ ತೆಗೆದಿಲ್ಲವಲ್ಲ ಎಂದು. ಶ್ರೀ ತೇಜಸ್ವಿವರು ಹಕ್ಕಿ ಚಿತ್ರ ಸೆರೆಹಿಡಿಯುವಾಗ ಪಡುತ್ತಿದ್ದ ಶ್ರಮತಂತ್ರ ನೋಡಿದ್ದೇನೆ. ಅದರಂತೆ ಶ್ರಮಪಡಲು ನಾನೂ ಸಿದ್ದ. ಅದ್ರೆ ಅದಕ್ಕೆ ಬೇಕಾಗುವ ಟೆಲಿಲೆನ್ಸ ಮುಂತಾದ ಅನಿಷ್ಟ ಸಲಕರಣೆಗಳಿಲ್ಲದಿದ್ದುದರಿಂದ ಆ ದಿಕ್ಕಿನಲ್ಲಿ ಪ್ರಯತ್ನಿಸುತ್ತಿರಲಿಲ್ಲ.
 
ಈ ನನ್ನ ೧೦ ರಿಂದ ೫೫ ಎಂ.ಎಂ ಮಿನೋಲ್ಟಾ ಕ್ಯಾಮಾರಾಕ್ಕೆ ೧೦೫ ಟೆಲಿಲೆನ್ಸ ಮತ್ತು ಒಂದು ಸಾದಾ ಕನ್ವರ್ಟರ್ ಹಾಗೆ ಹೇಗೋ ಹೊಂದಿಸಿಕೊಂಡೆ. ನಮ್ಮ ಮನೆಯ ಹತ್ತಿರದಲ್ಲೇ ಹಮ್ಮಿಂಗ್ ಬರ್ಡ್ ಎಂಬ ಸಣ್ಣ ಹಕ್ಕಿಯೊಂದು ಗೂಡು ಮಾಡಿತ್ತು. ಉದ್ದ ಕೊಕ್ಕಿನ ಸುಮಾರು ಎರಡಂಗುಲದ ಉದ್ದದ ಪುಟ್ಟ ಹಕ್ಕಿ ಇದು. ಹಳದಿ ಮಿಶ್ರಿತ ಕಂದು ಬಿಳಿ ಮೈಬಣ್ಣವಾದರೆ, ವೆಲ್ವೆಟ್ ತರಹ ತಲೆ ಮತ್ತು ಕೊಕ್ಕಿನ ಬಣ್ಣ. ಗಂಡು ಹಕ್ಕಿಗಿಂತ ಹೆಣ್ಣುಹಕ್ಕಿ ಹೆಚ್ಚು ಆಕರ್ಷಕವಾಗಿರುತ್ತದೆ. ನನ್ನ ಮಗಳು ಲಾಜವಂತಿ ಈ ಗೂಡು ಪತ್ತೆ ಮಾಡಿದಳು.
 
ಮುಂಗಾರು ಪ್ರಾರಂಭವಾಗುವುದಕ್ಕೆ ಮೊದಲೇ ಗೂಡುಕಟ್ಟಿ ಮೊಟ್ಟೆ ಇಟ್ಟು ಕಾವು ಕೂತಿತ್ತು. ಲಾಜವಂತಿ ನನಗೆ ತೋರಿಸಿದಾಗ ಮೂರು ಮೊಟ್ಟೆಗಳ ಪೈಕಿ ಒಂದು ಕೆಂಬೂತನ ಬಾಯಿಗೆ ಹೋಗಿ ಎರಡು ಉಳಿದಿದ್ದವು. ಎರಡು ಮೊಟ್ಟೆಗಳು ಮರಿಯಾದವು. ಆದ್ರೆ ಕೆಲವು ದಿನಗಳಲ್ಲಿ ಒಂದು ಮರಿ ಸತ್ತು ಹೋಯ್ತು. ಉಳಿದೊಂದೇ ಮರಿಯನ್ನು ತಂದೆ ತಾಯಿಗಳೆರಡೂ ಬಲು ಜೋಪಾನವಾಗಿ ಸಾಕುತ್ತಿದ್ದವು.
ಸಾಮಾನ್ಯ ಟೆಲಿಲೆನ್ಸ ಬಂದಿದ್ದರೂ ಹಕ್ಕಿ ಗೂಡಿಗೆ ಹತ್ತು ಅಡಿ ದೂರದವರೆಗೂ ಹೋಗಲೇಬೇಕಿತ್ತು. ಒಂದು ಸ್ಟಾಂಡು ತಂದು ಜೋಡಿಸಿ ಅದಕ್ಕೊಂದು ಉದ್ದನೆಯ ಕೇಬಲ್ ರಿಲೀಜರ್ ಹಾಕಿ ಸ್ವಲ್ಪ ದೂರದಿಂದ ಕ್ಲಿಕ್ ಮಾಡುವಂತೆ ಏರ್ಪಾಡು ಮಾಡಿಕೊಂಡೆ. ಗೂಡಿಂದ ಸುಮಾರು ೧೦ ಅಡಿ ದೂರದಲ್ಲೊಂದು ಸೊಪ್ಪಿನ ಮರೆಮಾಡಿಕೊಂಡು ಅದರೊಳಗೆ ಕ್ಯಾಮರ ಸಹಿತ ಸೇರಿಕೊಂಡೆ. ಹಕ್ಕಿ ಇದೆಲ್ಲಾ ಅವಾಂತರವನ್ನು ಸುಮಾರು ಮೂರು ದಿನಗಳಿಂದ ನೋಡಿ ನೋಡಿ ರೂಢಿಯಾಗಿತ್ತು. ಹಕ್ಕಿಗೆ ಹೆದರಿಕೆ ಕಮ್ಮಿಯಾದಂತೆ ತೋರಿತು. ಇರುವ ಸಲಕರಣೆಗಳಿಂದಲೇ ಹಕ್ಕಿಯ ಚಿತ್ರ ತೆಗೆಯಬೇಕಾಗಿದ್ದುದರಿಂದ ಸಿದ್ದತೆ ಸಮಯ ಹಾಳಾಗುತ್ತಿತ್ತು.
 
ನಾನು ಮೊದಲ ಫ್ರೇಂ ತೆಗೆದದ್ದು ಬಹಳ ಮಜವಾಗಿತ್ತು. ಕ್ಯಾಮೆರಾ ವ್ಯೂ ಫೈಂಡರ್ ಮೂಲಕ ಗೂಡನ್ನೇ ನೋಡುತ್ತಿದ್ದೆ. ಹಕ್ಕಿ ಮರಿ ಗೂಡಿಂದ ಮೂತಿ ಹೊರಹಾಕಿ ತಾಯಿಯ ಗುಟುಕಿಗಾಗಿ ಕಾಯುತ್ತಿತ್ತು. ತಾಯಿ ಬಂತೆಂದು ಶಬ್ದದಿಂದ ತಿಳಿದ ಮರಿ ಗೂಡಿಂದ ಮೂತಿ ಹೊರಚಾಚಿ ಪೀ ಪೀ ಎಂದು ಕೂಗತೊಡಗಿತು. ತಾಯಿಹಕ್ಕಿ ಯಮ ಧೈರ್ಯ ಮಾಡಿ ಗೂಡಿಗೆ ಬಂದು ಮರಿಗೆ ಗುಟುಕು ಕೊಟ್ಟು ಪರಾರಿಯಾಯ್ತು.
 
ಗುಟುಕು ಕೊಡುತ್ತಿರುವಾಗಲೇ ನಾನೂ ಕ್ಯಾಮರಾ ಕ್ಲಿಕ್ ಮಾಡಿದೆ. ಆ ಸಂದರ್ಭ ನನಗಾದ ಸಂತೋಷ ಹೇಳತೀರದು. ಫೋಟೋ ತೆಗೆಯುವಾಗ ನಾನು ದಡ ಬಡ ಅಂತ ಶಬ್ದ ಮಾಡಿದ್ದರಿಂದ ಸುಮಾರು ಒಂದು ಗಂಟೆ ಹೊತ್ತು ತಂದೆ ತಾಯಿ ಗೂಡಿನ ಹತ್ತಿರ ಬರಲಿಲ್ಲ. ದೂರದಲ್ಲಿ ಕುಂತು ಕೂಗುತ್ತಿದ್ದವು. ಸರಿ, ಮಧ್ಯಾನ್ಹ ೪ ಗಂಟೆ ನಂತರ ಫೋಟೋ ತೆಗೆಯಲು ಶುರುಮಾಡಿದರಾಯ್ತೆಂದು ಸುಮ್ಮನಾದೆ. ಈಗ ತೆಗೆದದ್ದು ಹೇಗೆ ಬಂದಿರಬಹುದೆಂದು ನೋಡುವ ಕುತೂಹಲ ಇದ್ದದರಿಂದ ಕ್ಯಾಮರಾ ಒಳಗಿನ ಫಿಲಂ ಕತ್ತರಿಸಿ ಡೆವಲಪ್ ಮಾಡಿ ನೋಡಿದರೆ ನೆಗೆಟಿವ್ ಮೇಲೆ ಹಕ್ಕಿ ಇರಲಿ, ಗೂಡಿನ ಚಿತ್ರವೂ ಬಿದ್ದಿರಲಿಲ್ಲ. ಕಾರಣವೇನೆಂದ್ರೆ, ಮೊದಲೇ ಹಕ್ಕಿಯ ಗೂಡು ಗಾಳಿಗೆ ಅಲ್ಲಾಡುತ್ತಿತ್ತು. ಜೊತೆಗೆ ಮರಿಹಕ್ಕಿ ತಾಯಿ ಹತ್ತಿರ ಗುಟುಕು ಪಡೆಯಲು ಒದ್ದಾಡಿದ್ದಾಗ ಗೂಡು ಅಲ್ಲಾಡಿ, ಚಿತ್ರ ಬಂದಿರಲಿಲ್ಲ. ಅಂತೂ ಅವತ್ತಿಗೆ ಕ್ಯಾಮಾರಾ ಕೆಲಸ ನಿಲ್ಲಿಸಿದೆ. ಗೂಡಿಗೆ ಬಿಸಿಲು ಬೀಳುವುದಿಲ್ಲವಾದ್ದರಿಂದ ಕನ್ನಡಿಯನ್ನು ಬಿಸಿಲಿಗೆ ಹಿಡಿದು ಅದರ ಬೆಳಕನ್ನು ಗೂಡಿಗೆ ಬೀಳುವಂತೆ ಕನ್ನಡಿ ಹಿಡಿಯಲು ನನ್ನ ಮಿತ್ರರ ಮಗಳಾದ ಯಶೋಧಳಿಗೆ ತರಬೇತಿ ಕೊಟ್ಟೆ.
 
ಮರುದಿನ ಬೆಳಿಗ್ಗೆಯೇ ಹಕ್ಕಿ ಚಿತ್ರ ತೆಗೆಯಲು ಶುರು ಮಾಡಿದೆವು. ಕನ್ನಡಿ ಬೆಳಕು ಗೂಡಿಗೆ ಬೀಳುತ್ತಿದ್ದರಿಂದ ತಾಯಿ ಸ್ವಲ್ಪ ಗುಮಾನಿಯಿಂದ ನೋಡತೊಡಗಿತು. ತಂದೆ ಹಕ್ಕಿ ಗೂಡಿನ ಹತ್ತಿರವೂ ಸುಳಿಯಲಿಲ್ಲ. ಹೆಣ್ಣು ಹಕ್ಕಿ ಮಾತ್ರ ಯಮಧೈರ್ಯ ಮಾಡಿ ಮರಿಯ ಹತ್ತಿರ ಬರುತ್ತಿತ್ತು. ಹಾಗೂ ಹೀಗೂ ಎರಡು ಮೂರು ಫ್ರೇಮ್ ತೆಗೆದೆ. ಈ ಮರಿಗಳು ಸರಿಯಾಗಿ ಹಾರಾಡುವಂತಾಗುವವರೆಗೂ ಶತ್ರುಬಾಧೆ ತಪ್ಪಿದ್ದಲ್ಲ. ನಾನು ಲೆನ್ಸ್ ಮುಖಾಂತರ ನೋಡುತ್ತಿರಬೇಕಾದರೆ ಮರಿ ಪೀ ಪೀ ಅಂತ ಕೂಗುತ್ತಾ ಗೂಡೊಳಗೆ ಒದ್ದಾಡುತ್ತಿತ್ತು.
 
ಮೊದಲು ನಾ ತಿಳಿದದ್ದು ಹಕ್ಕಿಮರಿ ಹಾರಲು ಏರ್ಪಾಡು ನಡೆಸಿದೆ ಎಂದು. ಆದ್ರೆ ಅಲ್ಲಿ ಸಣ್ಣನೆಯ ಕೆಂಪಿರುವೆಗಳು ಗೂಡಲ್ಲಿ ಸೇರಿಕೊಂಡು ಮರಿಯನ್ನು ಆವರಿಸಿಕೊಂಡು ಬಿಟ್ಟಿದ್ದವು. ಮನುಷ್ಯರು ಮುಟ್ಟಿದ್ದರೆ ಹಕ್ಕಿ ಸೇರಿಸುವುದಿಲ್ಲ ಎಂದು ಎಲ್ಲರೂ ಹೇಳಿದ್ದು ಕೆಳಿದ್ದೆ. ಅದಕ್ಕೆ ನಾನೂ ಹಿಂದೆ ಸರಿದೆ. ಆದ್ರೆ ಅನಿವಾರ್ಯ ಸಂದರ್ಭವಾದ್ದರಿಂದ ಮರಿಯನ್ನು ಕೈಯಿಂದ ಮುಟ್ಟಿ ಗೂಡಿಂದ ಹೊರತೆಗೆದೆ. ಇರುವೆಗಳನ್ನೆಲ್ಲಾ ಕೊಡವಿದೆ. ಈ ಹೊತ್ತಿಗಾಗಲೇ ಇರುವೆಗಳು ಸಾಕಷ್ಟು ತೊಂದ್ರೆ ಮಾಡಿದ್ದವು. ಹಕ್ಕಿ ಮರಿ ಕೈಯಿಂದ ಹಿಡಿದದ್ದರಿಂದ ತಾಯಿ ತಂದೆ ಕೂಗುತ್ತ ದೂರದಲ್ಲಿ ಹಾರಾಡಿದವು. ಇರುವೆಗಳು ಬರುತ್ತಲಿದ್ದ ರೆಂಬೆಗೆಲ್ಲಾ ಸೀಮೆಎಣ್ಣೆ ಹಚ್ಚಿ ಸರಿಮಾಡಿದ್ದಾಯ್ತು. ಸುಮಾರು ೨೫ ನಿಮಿಷ ದೂರವಿದ್ದ ತಾಯಿ, ಮರಿ ಹತ್ರ ಬಂದಾಗ ಸರಿಯಾಗಿ ಗೂಡನ್ನೆಲ್ಲಾ ಪರೀಕ್ಷಿಸಿ ಉಳಿದ ಇರುವೆಗಳನ್ನು ಕೊಕ್ಕಿನಿಂದ ತೆಗೆದು ಚೊಕ್ಕಟ ಮಾಡಿತು. ಜೊತೆಗೆ ಮರಿ ಮಾಡಿದ್ದ ಗಲೀಜನ್ನೂ ಗೂಡೆಲ್ಲಾ ಹುಡುಕಿ ಕೊಕ್ಕಿನಿಂದ ಕಚ್ಚಿಕೊಂಡು ಗೂಡಿಂದ ಹೊರಗೆ ಹೋಗುತ್ತದೆ. ಹಕ್ಕಿಗಳೂ ತಮ್ಮ ಮರಿಗಾಗಿ ಮಾಡಿದ ಗೂಡನ್ನು ಚೊಕ್ಕಟವಾಗಿಟ್ಟುಕೊಳ್ಳುವುದು ನೋಡಿ ಆಶ್ಚರ್ಯವಾಯ್ತು. ಹತ್ತು ದಿನಗಳಾದ ಮರಿ ಗೂಡಿಂದ ಹೊರಗೆ ಹಿಂಭಾಗವನ್ನು ಚಾಚಿ ಕಕ್ಕಸ್ ಮಾಡುವುದನ್ನು ಲೆನ್ಸ್ ಮುಖಾಂತರ ನೋಡಿ ಮಹದಾಶ್ಚರ್ಯವಾಯಿತು. ಮನುಷ್ಯರು ಮುಟ್ಟಿದ್ದರಿಂದ ಹಕ್ಕಿ ಮರಿಯನ್ನು ಹತ್ತಿರ ಸೇರಿಸ್ತದೋ ಇಲ್ಲವೋ ಎಂದು ಹೆದರಿದ್ದೆ. ಆದ್ರೆ ಮೊದಲಿನಂತೆ ಕಾರ್ಯಕ್ರಮ ಪ್ರಾರಂಭವಾಯಿತು.
 
ನನಗಾಗ ಮಹಾ ಸಮಾಧಾನವಾಯ್ತು. ಮರುದಿನ ಬೆಳಿಗ್ಗೆ ಕ್ಯಾಮರಾ ಗೂಡಿನ ಹತ್ತಿರ ಜೋಡಿಸುತ್ತಿರಬೇಕಾದ್ರೆ ಕೆಳಗೆಲ್ಲೋ ಮರಿ ಕೂಗಿದಂತಾಯ್ತು. ಹುಡುಕಿ ನೋಡಿದರೆ ಗೂಡಿನಿಂದ ಕೆಳಗೆ ಬಿದ್ದ ಮರಿಯನ್ನು ಕೋಳಿಯೊಂದು ಕುಟುಕಲು ಪ್ರಾರಂಭಿಸಿತ್ತು. ಕೋಳಿ ಬಾಯಿಂದ ತಪ್ಪಿಸಿ ಪುನಃ ಗೂಡೊಳಗೆ ಬಿಟ್ಟೆ. ಎರಡನೆಯ ಸಾರಿಗೆ ಯಮನ ದವಡೆಯಿಂದ ತಪ್ಪಿಸಿದಂತಾಯಿತು. ಒಂದು ಸಾರಿ ಗಾಳಿ ಬೆಳಕನ್ನು ಕಂಡ ಮರಿ ಸ್ವಾತಂತ್ರದ ರುಚಿ ಕಂಡುಕೊಂಡಿತ್ತು ಮತ್ತು ತನ್ನ ಸಾಮರ್ಥ್ಯವನ್ನೂ ಕಂಡುಕೊಂಡ ಮೇಲೆ ಏನು ಮಾಡಿದರೂ ಗೂಡೊಳಗೆ ಕೂರಲು ಒಪ್ಪದ ಮರಿ ಹಾರಿ ಹತ್ತಿರದ ದಾಸವಾಳದ ಹೆರೆಯ ಮೇಲೆ ಕುಳಿತಿತ್ತು. ಕಾಲೂರಿ ಕೂರಲಿಕ್ಕೆ ಬಾರದ ಮರಿ ಹೇಗೆ ಹೇಗೋ ಕೂತಿತ್ತು. ಅದನ್ನೂ ಎರಡು ಚಿತ್ರ ತೆಗೆದುಕೊಂಡೆ.
 
ಮನೆಮಕ್ಕಳಂತೆ ಹಚ್ಚಿಕೊಂಡಿದ್ದ ಬಣ್ಣ ಬಣ್ಣದ ಹಕ್ಕಿ ಮರಿ ನಮ್ಮ ಕೈ ತಪ್ಪಿ ದೂರ ಹಾರಿಹೋಗುವುದಲ್ಲ ಎಂದು ಬೇಸರವಾಯ್ತು. ನೋಡುತ್ತಿದ್ದಂತೆಯೇ ತಂದೆತಾಯಿಗಳೆರಡೂ ಹತ್ತಿರ ಬರುವುದು, ಕೂಗುವುದೂ, ಮತ್ತೆ ದೂರ ಹಾರುವುದು ಮಾಡತೊಡಗಿದವು. ಆ ಕಡೆ ನೋಡಿ ಒಂದು ಸಾರಿ ಧೈರ್ಯ ಮಾಡಿ ಆ ಮರಿ ತಂದೆ ತಾಯಿಗಳಿದ್ದ ಹಬ್ಬಲಸಿನ ಮರಕ್ಕೆ ಪುರ್ ಎಂದು ಹಾರೇ ಹೋಯ್ತು.
 
ಹೂ ರಸ ಕುಡಿದು ಬದುಕುವ ಈ ಹಮ್ಮಿಂಗ್ ಹಕ್ಕಿಯ ಟಚ್ಗಿಲ್, ಟಚ್ಗಿಲ್, ಟಚ್ಗಿಲ್ ಎಂದು ಕೂಗುವ ಶಬ್ದ ಎರಡು ವಾರದಿಂದ ಕೇಳಿದ್ದರಿಂದ ಆ ಶಬ್ದ ಬಂದಾಗಲೆಲ್ಲ ನಮ್ಮ ಹಕ್ಕಿಮರಿ ಬಂದಿದೆ ಎಂದು ಹೊರ ಬಂದು ನೋಡುವುದು ಅಭ್ಯಾಸವಾಗಿದೆ. ಅಂತೂ ಫಿಲ್ಮ ಡೆವಲಪ್ ಮಾಡಿದಾಗ ನಾಲ್ಕಾರು ಸುಮಾರಾದ ಹಕ್ಕಿಮರಿಯ ಚಿತ್ರಗಳು ಬಂದಿದ್ದವು.
 
 
 
(ಕರ್ನಾಟಕದ ಮಹಿಳಾ ಪರ ಹೋರಾಟಗಾರರಿಗೆ ಅದರಲ್ಲೂ ಮೈಸೂರಿನವರಿಗೆ ಮೀರಕ್ಕ ಚಿರಪರಿಚಿತರು. ಈಕೆ ಸತತ ಸಂಘಟನಾಗಾರ್ತಿ. ಸಮಾನ ಮನಸ್ಕರ ಪುಟ್ಟದೊಂದು ಸಂಘ ಮಾಡಿಕೊಂಡು ಮಹಿಳೆಯರಿಗೆ ಅನ್ಯಾಯವಾದರೆ ಎಲ್ಲಿಗೂ ಹೋಗಿ ಹೋರಾಟ ಮಾಡಲೂ ಸೈ ಎಂದವರು. ತಾವು ಕಲಿಸುತ್ತಿದ್ದ ಪ್ರೌಢ ಶಾಲೆಯ ಮಕ್ಕಳಿಗೆ, ಅದರಲ್ಲೂ ಹೆಣ್ಣು ಮಕ್ಕಳಿಗೆ ವೈಟ್ ಟೈಗ್ರೆಸ್ ಆಗೇ ಸ್ಪೂರ್ತಿಯಾದವರು. ಕಲಿಸಿದ ಗುರು, ಪ್ರೀತಿಸಿ ಹರಸಿದ ಮನಸ್ಸು, ಸಹಾಯಕ್ಕೆ ನಿಂತ ಸೆಲೆ. ಮೀರಕ್ಕ ತಮ್ಮ ಉಪಾಧ್ಯಾಯಿನಿಯ, ಹೋರಾಟಗಾರ್ತಿಯ ಅತ್ಯಂತ ಚಟುವಟಿಕೆಯ ದಿನಗಳಲ್ಲಿ ದಾಖಲಿಸಿಟ್ಟ ಕೆಲವು ಅನಿಸಿಕೆಗಳನ್ನು, ಅನುಭವಗಳನ್ನು, ಅಂಕಿ ಅಂಶಗಳನ್ನು ಆಯಾಮದೊಟ್ಟಿಗೆ ನಿಯಮಿತವಾಗಿ ಹಂಚಿಕೊಳ್ಳುತ್ತಿದ್ದಾರೆ.)

ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆ

ಶ್ರೀಮತಿ ಮೀರಾ ನಾಯಕ್ 
 
ಇಂದಿನ ಜಗತ್ತು ತುಂಬ ವೇಗದಲ್ಲಿ ಬದಲಾಗುತ್ತಿದೆ. ಬದಲಾವಣೆಯ ಹಂಬಲ ನಿರಂತರವಾಗಿ ಎಲ್ಲೆಲ್ಲೂ ಕಾಣುತ್ತಿದೆ. ಬದಲಾವಣೆಯ ಹಂಬಲಕ್ಕೆ ಕಾರಣ ಹೊಸ ಬದುಕಿನ ಅಪೇಕ್ಷೆ; ಗುರಿ. ಆ ಅಪೇಕ್ಷೆ ಅಥವಾ ಗುರಿಯ ಕಡೆ ಸಾಗಬೇಕಾದರೆ ಆಸೆ ಸಾರ್ವತ್ರಿಕವಾಗುತ್ತಿದ್ದಂತೆ ಸ್ಪರ್ಧೆ ಆರಂಭವಾಗುತ್ತದೆ. ಇಂದಿನ ಜಗತ್ತಿನಲ್ಲಿ ಸಾಮಾಜಿಕ ಸ್ಥಾನಮಾನ, ಆರ್ಥಿಕ ಅನುಕೂಲ ಇವುಗಳಿಗೆ ಸಂಬಂಧಿಸಿದ ಸ್ಪರ್ಧೆ ಪ್ರಮುಖವಾಗಿ ಕಾಣಿಸುತ್ತಿದೆ. ಇವು ಪರಸ್ಪರ ತೀರಾ ಭಿನ್ನವೇನಲ್ಲ, ಹೆಚ್ಚು ಕಡಿಮೆ ಒಂದಕ್ಕೊಂದು ಹೊಂದಿಕೊಂಡು ಇರುವಂಥವೇ ಆಗಿವೆ.

ಸ್ಥಿರ ಸಮಾಜದಲ್ಲಿ ಚಲನೆ, ಬದಲಾವಣೆ ಇರುವುದಿಲ್ಲ. ಸಾಮಾಜಿಕ ಸ್ಥಾನಮಾನ, ಆರ್ಥಿಕ ಅನುಕೂಲ ಇವು ಬಹುಮಟ್ಟಿಗೆ ಪೂರ್ವ ನಿರ್ಧರಿತವಾಗಿ ಇರುತ್ತಿದ್ದವು. ಧಾರ್ಮಿಕತೆ ಪ್ರಧಾನವಾಗಿ ಇದ್ದ ಸಮಾಜದಲ್ಲಿ ಧಾರ್ಮಿಕ ಸಾಧನೆ ಸಿದ್ಧಿಗಳ ಮಾನದಂಡದಿಂದ ಸಾಮಾಜಿಕವಾಗಿ ಗೌರವ ದೊರೆಯುತ್ತಿತ್ತೆಂಬುದು ನಿಜವಾದರೂ ಧಾರ್ಮಿಕ ಅಧಿಕಾರ, ಸಾಮಾಜಿಕ ಸ್ಥಾನಮಾನಗಳು, ಹುಟ್ಟಿದ ಜಾತಿ, ಜಾತಿಯೊಳಗೂ ನಿರ್ದಿಷ್ಟ ಪಂಗಡ ಇವುಗಳಿಗೆ ಸೀಮಿತವಾಗಿರುತ್ತಿತ್ತು. ದೊರೆತನದ ಜೊತೆಗೆ ಆರ್ಥಿಕ ಅನುಕೂಲವೂ ಇರುತ್ತಿತ್ತಾದ್ದರೂ ದೊರೆತನ ವಂಶಪಾರಂಪರ್ಯದಿಂದ ಬಹುಪಾಲು ನಿಗದಿಯಾಗುತ್ತಿತ್ತಾದ್ದರಿಂದ ಹುಟ್ಟಿದ ವರ್ಣ, ಜಾತಿ, ಮನೆತನಗಳೂ ಅದಕ್ಕೆ ಕಾರಣವಾಗುತ್ತಿದ್ದವು.
 
ಇಂದಿನ ಜಗತ್ತಿನಲ್ಲಿಯೂ ಧಾರ್ಮಿಕ ಅಧಿಕಾರ ಸಂಬಂಧವಾದ ಸ್ಥಾನಮಾನ ದೊರೆತನಕ್ಕೆ ಆ ಮೂಲಕ ಆರ್ಥಿಕ ಅನುಕೂಲತೆಗೆ ಸಂಬಂಧಿಸಿದ ಸ್ಥಾನಮಾನಗಳು ನಿಗದಿಯಾಗುವಂಥ ಸಮಾಜ. ರಾಷ್ಟ್ರಗಳು ಕೆಲವು ಇವೆಯಾದರೂ ಮುಖ್ಯವಾಗಿ ಇಂದಿನ ಜಗತ್ತು ಧರ್ಮಾಧಿಕಾರ, ರಾಜ ಪ್ರಭುತ್ವ ಇವುಗಳಿಂದ ದಿನೇ ದಿನೇ ದೂರ ಸರಿಯುತ್ತಲಿದೆ. ಆದ್ದರಿಂದ ಇಂದು ಪ್ರಜಾಸತ್ತಾತ್ಮಕ ಭಾರತದಂಥ ರಾಷ್ಟ್ರಗಳಲ್ಲಿಯಾಗಲಿ ಸಮತಾವಾದೀ ರಾಷ್ಟ್ರಗಳಲ್ಲಿಯಾಗಲಿ ಧರ್ಮಾಧಿಕಾರ, ರಾಜಪ್ರಭುತ್ವಗಳು ಇಲ್ಲ; ಇದ್ದರೂ ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ ಅನುಕೂಲಗಳನ್ನು ಅವು ಪ್ರತಿನಿಧಿಸುವ ಸ್ಥಿತಿಯಲ್ಲಿ ಇಲ್ಲ.
 
ಭಾರತ ಪ್ರಜಾಸತ್ತಾತ್ಮಕ ರಾಷ್ಟ್ರ. ಇಲ್ಲಿ ಸಾಮಾಜಿಕ ಸ್ಥಾನಮಾನ, ಆರ್ಥಿಕ ಅನುಕೂಲಗಳನ್ನು ನಿರ್ಧರಿಸುವ ಮಾನದಂಡಗಳು ಬದಲಾಗುತ್ತಿವೆ. ಬದಲಾಗುವುದು ಅನಿವಾರ್ಯ. ದೊರೆತನಗಳ ಕಾಲ ಮುಗಿದಿದೆ, ಧರ್ಮಾಧಿಕಾರದ ಕಾಲವೂ ಮುಗಿಯುತ್ತಲಿದೆ, ಮುಗಿಯ ಬೇಕಾದದ್ದೂ ಅಗತ್ಯ, ಅನಿವಾರ್ಯ. ಆದ್ದರಿಂದ ಸಾಮಾಜಿಕ ಸ್ಥಾನಮಾನ, ಆರ್ಥಿಕ ಅನುಕೂಲಗಳನ್ನು ನಿರ್ಧರಿಸುವ ಸಂಗತಿಗಳು, ವಿಷಯಗಳು ಬದಲಾಗುತ್ತಿವೆ. ಸಾಂಪ್ರದಾಯಿಕವಾಗಿ ಧಾರ್ಮಿಕ ದೃಷ್ಟಿಯಿಂದ ಕೀಳೆಂದು ಪರಿಗಣಿತವಾದ ಲಿಂಗ, ಜಾತಿ, ಮತ, ಜನಾಂಗಗಳಿಂದಲೂ ಇಂದು ವ್ಯಕ್ತಿ ಸಾಮಾಜಿಕವಾಗಿ ಉನ್ನತವಾದ ಸ್ಥಾನಮಾನವನ್ನೂ, ಆರ್ಥಿಕ ಅನುಕೂಲವನ್ನೂ ಪಡೆಯಬಹುದಾದ ಸ್ಥಿತಿ ನಿರ್ಮಾಣವಾಗಿದೆ, ಆಗುತ್ತಲಿದೆ. ದೊರೆತನದ ಕಾಲ ಮುಗಿದೇ ಹೋಗಿರುವುದರಿಂದ ರಾಜಕೀಯ ಕ್ಷೇತ್ರದಲ್ಲಿ ವ್ಯಕ್ತಿಯ ಲಿಂಗ, ಜಾತಿ, ಮತ, ಜನಾಂಗ ಬೇಧವಿಲ್ಲದೆ ಅಧಿಕಾರ ಸ್ಥಾನ, ಆರ್ಥಿಕ ಅನುಕೂಲತೆ ಪಡೆಯಬಹುದಾದ ಸ್ಥಿತಿ ನಿರ್ಮಾಣವಾಗಿದೆ, ಆಗುತ್ತಲಿದೆ. ಜೊತೆಗೆ ಯಂತ್ರ ನಾಗರಿಕತೆ ನಿರ್ಮಾಣವಾಗಿರುವುದರಿಂದ ಮತ್ತು ಅದು ಮುಂದುವರಿಯುತ್ತಲೇ ಇರುವುದರಿಂದ ಸ್ಪರ್ಧಾತ್ಮಕ ಸಾಹಸಗಳಿಗೂ ಮುಕ್ತ ಅವಕಾಶ ಇರುವಂತಾಗಿದೆ. ಇಂಥ ಲಿಂಗ, ಜಾತಿ, ಮತ, ಜನಾಂಗಕ್ಕೆ ಸೇರಿದ ವ್ಯಕ್ತಿಗೆ ಇಂಥದೇ ಉದ್ಯೋಗ ಕಡ್ಡಾಯ, ಕುಲ ಧರ್ಮ ಎಂಬಂಥ ಸ್ಥಿತಿಯೂ ಈಗ ಇಲ್ಲವಾಗಿದೆ, ಇಲ್ಲವಾಗುತ್ತಿದೆ.
 
(ಮುಂದುವರೆಯುವುದು)
 
 
 
 
ಅಮೃತ ಘಳಿಗೆ
ಪ್ರಿಯದರ್ಶಿನಿ ಭಟ್, ಬೆಂಗಳೂರು

ಯುವ ’ಟೆಕ್ಕಿ’ಗಳ ಕೈಯ್ಯಲ್ಲಿ ಭಾಷೆ-ಭಾವನೆ-ಸಾಹಿತ್ಯ ಹೇಗಿರುತ್ತದೆ ಎಂಬ ಕುತೂಹಲದಿಂದಿದ್ದ ನಮಗೆ ಸಿಕ್ಕಿದ್ದು ಈ ಉತ್ತರಗಳು. ಪ್ರಿಯದರ್ಶಿನಿ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದಾರೆ. ಕನ್ನಡವೆಂದರೆ ನನಗೆ ತುಂಬಾ ಇಷ್ಟವೆನ್ನುವ ಇವರು ತಮ್ಮ ಕನ್ನಡ ಪ್ರೀತಿಯನ್ನು ಈ ಪದ್ಯಕ್ಕಿಳಿಸಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ತಿಳಿನೀಲಿ ಆಗಸದಲಿ
ಕಪ್ಪು ಛಾಯೆಯ ನರ್ತನ
ನಿಶೆಯಲಿ ಮುಳುಗುತಿದೆ
ಇಳೆಯ ತನುಮನ
 
ತಳಮಳದಿ ಹಬ್ಬುವ
ಭೀತಿಯ ಕಾರ್ಮೋಡ
ಅಂಧಕಾರದಲಿ ಕೇಳುತಿದೆ
ಹಕ್ಕಿಗಳ ವಿರಹ ಹಾಡ
 
ಆ ಕ್ಷಣದಲಿ ಕಲಕಿತು
ರಂಗಿನ ಓಕುಳಿ
ಎಲ್ಲಾ ಬಣ್ಣ ಸೇರಿದಾಗಲೇ
ಹಾಲ್ಬೆಳಕಿನ ಬೆಳ್ಳಿ
 
ಬೆಳಕಿನ ರಂಗೋಲಿಯ
ಮೂಡಿಸುತ್ತಾ ನಲಿದಿದೆ ಬಾಂದಳ
ಕತ್ತಲಿನ ಪರದೆಯನು
ಸರಿಸುತ್ತಾ ಮೂಡಿದೆ ಚಂದಿರ
 
ಮುರಳಿಯ ನಿನಾದದ ತೆರದಿ
ಪಕ್ಷಿಗಳ ಚಿಲಿಪಿಲಿ
ದೂರ ತೀರದಲಿ ಕೇಳುತಿದೆ
ಮಧುರ ಸಂಗೀತ ಲಹರಿ
 
ಹಾಲ್ಬೆಳಕಿನೀ ಆಟದಲಿ
ಪರಿಸರದ ಈ ಗಾನದಲಿ
ಮನುಕುಲವೂ ಸಾಗಿದೆ ತೇಲಿ ತೇಲಿ
ಕ್ಷಣವಾಯಿತು ಅಮೃತ ಘಳಿಗೆ
ಈ ದಿವ್ಯ ದರ್ಶನದಲಿ

 
 
 
 
 
 
Copyright © 2011 Neemgrove Media
All Rights Reserved