
ಹಾಸನದ ಹಳ್ಳಿಯೊಂದರಲ್ಲಿ ರೈತರ ಫಸಲಿನ ಮೇಲೆ ಆನೆಗಳ ದಾಂಧಲೆ ಜಾಸ್ತಿಯಾಗಿ, ಯಾರೋ ಮತಿಕೆಟ್ಟ ಮುಠ್ಠಾಳ ರೈತ ಜಮೀನಿನ ಬದಿಯಲ್ಲಿ ವಿಷಪೂರಿತ ಆಹಾರ ಇಟ್ಟಿದ್ದನ್ನು ತಿಂದು ಪುಟಾಣಿ ಆನೆಮರಿಯೊಂದು ಸತ್ತಿತ್ತು. ಅದು ಆ ಮರಿಯ ಅಮ್ಮನಿಗೆ ಅವರ ಹಿಂಡಿಗೆ ಗೊತ್ತಾಗಿತ್ತು. ಮರಿ ಹೊರಳಾಡದೆ, ತನ್ನ ಹಿಂದೆ ಬೀಳದೆ, ಕಾಡಿಗೆ ಬರದೆ ತಟಸ್ಥವಾಗಿ ನೆಲದ ಮೇಲೆ ಬಿದ್ದದ್ದನ್ನು ಸಹಿಸದ ಅಮ್ಮ ಅದನ್ನು ದುಃಖದಿಂದ ಎದ್ದೇಳೋ, ಎದ್ದೇಳೋ ಎಂದು ಜಗ್ಗಾಡುತ್ತಿತ್ತು, ಎಳೆದಾಡುತ್ತಿತ್ತು. ತನ್ನ ಮರಿ ಸತ್ತಿದೆ ಎಂದು ಬುದ್ಧಿಗೆ ಗೊತ್ತಾದರೂ ಮನಸ್ಸು ಒಪ್ಪಬೇಕಲ್ಲಾ? ಅದು ಅಮ್ಮ. ಒಟ್ಟು ಹೇಗಾದರೂ ನೀನು ಎದ್ದು ನಡಿ ಮಗನೆ ಎಂದು ಹುಚ್ಚು ಹತ್ತಿದಂತೆ ಸುತ್ತ ಮುತ್ತೆಲ್ಲಾ ನುಗ್ಗಾಡುತ್ತಿತ್ತು. ಆಕ್ರೋಶದಿಂದ ತೊನೆಯುತ್ತಿತ್ತು. ಬಾಲ ಕಿವಿಗಳನ್ನೆಲ್ಲಾ ನಿಮಿರಿಸಿಕೊಂಡು ಯಾರದರೂ ನನ್ನ ಕೂಸಿನ ಹತ್ತಿರ ಬಂದರೆ ಕಲೆಸಿ ಬಿಟ್ಟೇನು ಎಂಬಂತೆ ಹೆದರಿಸುತ್ತಿತ್ತು.
ಈ ದೃಶ್ಯಗಳನ್ನು ಕರ್ನಾಟಕದ ಟಿವಿ ಚಾನೆಲ್ ಗಳು ಸೆರೆ ಹಿಡಿದುಕೊಂಡು ವರದಿ ಮಾಡುತ್ತಿದ್ದರು.
ಮರುದಿನ ಆ ಸತ್ತ ಆನೆ ಮರಿಯನ್ನು ಎತ್ತಲು ಜೆವಿಸಿಯೊಂದನ್ನು ಆ ಸ್ಥಳಕ್ಕೆ ಕಳಿಸಲಾಗಿತ್ತು. ಕಳೆದುಕೊಂಡ ಮರಿಯ ಹೊರತು ಮನೆಗೆ ಹೋಗೆನು ಎಂದು ವೇದನೆ-ಕೋಪದಲ್ಲಿದ್ದ ಅಮ್ಮ ಅದನ್ನೂ ನೂಕಿಬಿಟ್ಟಿತು. ಅವಳ ದುಃಖಕ್ಕೆ ಬೆನ್ನಾದ ಆ ತಂಡದ ಇನ್ನಷ್ಟು ಆನೆಗಳೂ ಗಲಾಟೆ ಮಾಡಿದ್ದವು. ಅದನ್ನೂ ಟಿವಿ ಚಾನೆಲ್ ಗಳು ವರದಿ ಮಾಡಿ ಸಂಜೆಯ ಬ್ರೇಕಿಂಗ್ ನ್ಯೂಸ್ ಸೆಷನ್ ಅನ್ನು ಭೇಷ್ ಆಗಿ ನಿರ್ವಹಿಸಿದ್ದವು. ಜನ ನೋಡಿ ಮರುಕ ಪಡುತ್ತಿದ್ದರು.
ಅವತ್ತು ರಾತ್ರಿ ಟಿವಿ ಚಾನೆಲ್ ಒಂದರಲ್ಲಿ ಒಬ್ಬ ಮನುಷ್ಯ ಒಬ್ಬ ಕಾರ್ಯಕ್ರಮ ನಡೆಸಿಕೊಡುವಾಕೆ ಆನೆಗಳ ಸಾವಿನ ಕುರಿತು ಸ್ಪೆಷಲ್ ಕಾರ್ಯಕ್ರಮವೊಂದನ್ನು ರೂಪಿಸಿದ್ದರು. ಆತ ನೋಡುಗರನ್ನು ಎಷ್ಟು ಭಾವುಕರನ್ನಾಗಿ, ಸೆಂಟಿಮೆಂಟಲ್ ಆಗಿ ಮಾಡಬಹುದೋ ಅಷ್ಟೂ ನಿಮಿಷ ಆ ಅಮ್ಮ ಮತ್ತು ಸತ್ತ ಮರಿಯ ಫುಟೇಜ್ ಗಳನ್ನು ತೋರಿಸುತ್ತಾ ’ನೋಡಿ..ನೋಡಿ..ಪ್ರಾಣಿಗಳಿಗೆ ಮನಸ್ಸಿಲ್ಲಾ ಅಂತ ನಾವು ಅಂದುಕೊಂಡಿರ್ತೀವಿ...ಅವು ಯಾವ ರೀತಿ ತಮ್ಮ ಮರಿಗಳ ಸಲುವಾಗಿ ಪ್ರೀತಿ ಇಟ್ಟುಕೊಂಡಿರುತ್ತವೆ ನೋಡಿ...’ ಅಂತ ನೋಡುಗರಿಗೆ ತನ್ನ ಕಾಮೆಂಟರಿ ಕೊಡುತ್ತಿದ್ದ. ಹೌದಾ ನಿಜಕ್ಕೂ ಪ್ರಾಣಿಗಳಿಗೆ ಮನಸಿರುತ್ತೇನಪ್ಪಾ?! ಓಹೋ...ಹೊಸ ವಿಚಾರ ಬಿಡು! ಅಂತ ಅವನು ಕಂಡುಕೊಂಡಿದ್ದ ಹೊಸ ಸತ್ಯವನ್ನು ನಾವೂ ಕೇಳಿಕೊಳ್ಳುತ್ತಿದ್ದೆವು. ಆಗ ಆ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಅರ್ಥಾತ್ ಪ್ರಳಯಾಂತಕ ಪ್ರಶ್ನೆ ಕೇಳಿಕೊಂಡು ಕೋಟು ಹಾಕಿಕೊಂಡು ಕೂತಿದ್ದ ಆ ಮಹಾನ್ ಮಹಿಳಾಮಣಿ..."ಅಭಿವೃದ್ಧಿನೂ ಬೇಕು..ಆನೇನೂ ಬೇಕು ಅಂದ್ರೆ ಹೇಗೆ ಇವರೆ?!" ಅಂತ ಜಾಣೆ ಥರ ಪ್ರಶ್ನೆ ಎಸೆದಳು. ಎದೆ ಧಸಕ್ಕೆಂದಿತು. ನಿಜವಾಗಲೂ ಈ ಪ್ರಶ್ನೆ ಕೇಳೇಬಿಟ್ಟಳಾ?! ಅದೇನು ದಡ್ಡತನದ ಪರಮಾವಧಿಯಿಂದ ಕೇಳಿದಳೋ ಅಥವಾ ಎಲ್ಲವನ್ನೂ ತಿಳಿದೂ ಇಡೀ ಮನುಷ್ಯ ಸಂಕುಲವನ್ನು ಇಂಡೈರೆಕ್ಟ್ ಆಗಿ ಹಿಯಾಳಿಸಲು ಕೇಳಿದಳೋ ಅರ್ಥವಾಗಲಿಲ್ಲ.
ಆಶ್ಚರ್ಯದಿಂದ ಅವಳ ಉಳಿದ ಪ್ರಶ್ನೆಗಳನ್ನು ಕೇಳಿಸಿಕೊಂಡೆ. ಆಕೆ ಆ ಪ್ರಶ್ನೆಯನ್ನು ಒಬ್ಬ ಯಕಶ್ಚಿತ್ ಬೆಂಗಳೂರು ಮಹಾನಗರ ನಿವಾಸಿಯಾಗಿ ಮ್ಯಾಟರ್ ಆಫ್ ಫ್ಯಾಕ್ಟ್ ಆಗಿ ಕೇಳುತ್ತಿದ್ದಳು ಅಂತ ಅರ್ಥವಾಯಿತು. ಅವಳ ಬುದ್ಧಿಗೆ ಅವಳು ಬದುಕುತ್ತಿರುವ ಬದುಕಿಗೆ ಆನೆಗಳು ಯಾಕೆ ಬೇಕು ಹೇಳಿ? ಜ಼ೂ ನಲ್ಲಿ ಒಂದೆರಡು ಇದ್ದರಾಯ್ತು. ದಸರ-ಕರಗ ಅಥವಾ ಯಾವುದಾದರೂ ಉತ್ಸವದ ಟೈಮಿಗೆ ಇನ್ನೆರಡು ಬಂದು ಮುಖ ತೋರಿಸಿದರಾಯ್ತು. ಆಕೆ ತನ್ನ ಫ್ಯಾಮಿಲಿ ಟ್ರಿಪ್ ಗೆ ಬಂಡೀಪುರ ಅಥವಾ ನಾಗರ ಹೊಳೆಗೆ ಹೋದಾಗ ಅಲ್ಲಿ ಒಂದೆರಡು ಸೇಫಾದ ಡಿಸ್ಟೆನ್ಸ್ ನಲ್ಲಿ ಕಂಡರಾಯ್ತು. ಅಷ್ಟೇ! ಮುಗಿದು ಹೊಯ್ತು! ಇನ್ನ್ಯಾಕೆ ಬೇಕು ಆನೆಗಳು?! ಅವಳ ಬ್ರಹ್ಮಾಂಡ ತಲೆಗೆ ಈ ಆನೆ ಮರಿ ಸತ್ತಿರುವ ವಿಷಯ, ಅದರಮ್ಮನ ಗೋಳಾಟ, ಈ ಪಾಟಿ ಮೀಡಿಯಾ ಕವರೇಜ್-ಇವೆಲ್ಲವೂ ಟೂ ಮಚ್ ಅನ್ನಿಸಿತ್ತೋ ಏನೋ...ಅದರ ಬದಲು ಯಾರಾದರೂ ಮಂತ್ರಿ ಮಹೋದಯರನ್ನು ಕರೆಸಿ, ನಿಮಗೆ ಬರುವ ಕನ್ನಡದಲ್ಲಿ ಅವರನ್ನು ಚಕ್ರವ್ಯೂಹದಂತೆ ಪ್ರಶ್ನೆಯಲ್ಲಿ ಸಿಕ್ಕಿಸಿ ಅನ್ನುವ ಅಸೈನ್ಮೆಂಟ್ ಕೊಟ್ಟಿದ್ದರೆ ಎಷ್ಟು ಚನ್ನಾಗಿರುತ್ತಿತ್ತು. ಆತ ಪರಿಚಯವಾದರೂ ಆಗುತ್ತಿದ್ದ. ತನಗೂ ಆತನ ಇಂಟರ್ವ್ಯೂ ಮಾಡಿದ ವರ್ಚಸ್ಸು ಬರುತ್ತಿತ್ತು...ಛೇ! ಹೋಗಿ ಹೋಗಿ ಈ ಆನೆಗಳ ಗೋಳಾಟ ತೋರಿಸುವ ಅಸೈನ್ಮೆಂಟ್ ಕೊಟ್ಟಿದ್ದಾರಲ್ಲಾ...’ ಇದು ಅವಳ ಗ್ರೇಟ್ ತಲೆಯಲ್ಲಿ ಓಡುತ್ತಿದ್ದಿರಬೇಕು.
ಆ ಕಡೆ ಕರ್ನಾಟಕದ ಹಲವು ಕಡೆಗಳಲ್ಲಿ ಆನೆಮರಿಗಳ ಮಾರಣ ಹೋಮ-ಅಮ್ಮಂದಿರ ಗೋಳು, ಈ ಕಡೆ ಈ ಮಹಾತಾಯಿಯ ಪ್ರಶ್ನೆ ಕೇಳಿ ತಲೆ ಸುತ್ತಿ ಬೀಳುವಂತಾಯಿತು. ಅವಳಿಗೂ ಒಂದು ಕೂಸಿದ್ದು, ಆ ಕೂಸು ಉಸಿರಾಡದೆ ಕದಲದೇ ನಿಶ್ಚಲವಾಗಿರುವುದನ್ನು ಅವಳೂ ಒಂದು ಕ್ಷಣಕ್ಕೆ ಕಲ್ಪಿಸಿಕೊಳ್ಳುವಂತಾಗಿದ್ದರೆ...ಆ ಪುಣ್ಯಾತ್ಗಿತ್ತಿಯಂಥವರ ಬಗ್ಗೆ ಇಷ್ಟು ಯೋಚನೆ ಮಾಡುವ ಅಗತ್ಯ ಬೀಳುತ್ತಿರಲಿಲ್ಲ. ದುರಾದೃಷ್ಟಕ್ಕೆ ನಮ್ಮ ಮೀಡಿಯಾದಲ್ಲಿ ಇರುವವರು ಬಹುಪಾಲು ಇಂಥ ಮಂದಿ.
ಹಾಕಿದ ಬೆಳೆಯನ್ನು ತಿಂದು ಹೋಗುತ್ತಿದೆ, ಬೆಳೆಯಿಲ್ಲದೆ ಬದುಕು ಹೇಗೆ? ಬೆಳೆಯಿಲ್ಲದೆ ಸಾಲ ತೀರಿಸುವುದು ಹೇಗೆ? ಎಂದು ರೈತರು ತಲೆಕೆಟ್ಟಂತಾಗಿ ಆನೆಗಳಿಗೆ ವಿಷವಿಡುವ ಹಂತಕ್ಕೆ ಹೋಗಿದ್ದಾರೆ. ಇರುವ ಕಾಡಿನಲ್ಲಿ ಸರಿಯಾಗಿ ಮಳೆಯಿಲ್ಲದೆ, ತಿನ್ನಲು ಬೇಕಾದ ಪೌಷ್ಟಿಕ-ರುಚಿಕರ ಮೇವಿಲ್ಲದೆ ಆನೆಗಳು ತಮ್ಮ ಅರಣ್ಯವನ್ನು ನುಂಗಿ ನಿಂತಿರುವ ಜಮೀನಿನ ಫಸಲುಗಳಿಗೆ ಬಾಯಿ ಹಾಕುತ್ತಿವೆ. ಅವು ಒಮ್ಮೆ ಬಾಯಿ ಹಾಕಿದರೂ ಒಂದು ಕುಂಟೆ ಖಾಲಿಯಾದಂತೆ. ಅದು ಆನೆಗಳ ತಪ್ಪಾ?
ಇರುವ ಪುಟ್ಟ ಭೂಮಿಯಲ್ಲಿ ಮನುಷ್ಯನ ವಾಸ್ತವ್ಯ, ಊಟ ಅನುಕೂಲಗಳ ಅಗತ್ಯಕ್ಕೇ ನೆಲದ ಬಳಕೆಯಾಗುತ್ತಿರುವುದರಿಂದ ಮತ್ತು ಮನುಷ್ಯನ ಅಗತ್ಯಗಳ ಪಟ್ಟಿ ನಿಲ್ಲುವ ಯಾವ ಸೂಚನೆಯೂ ಕಾಣುತ್ತಿಲ್ಲವಾದ್ದರಿಂದ ಮನುಷ್ಯ ಮತ್ತು ಕಾಡು ಪ್ರಾಣಿಗಳ ಮುಖಾಮುಖಿಯನ್ನು ಸಂಪೂರ್ಣ ತಪ್ಪಿಸಲು ಇನ್ನು ಮುಂದೆ ಆಗದ ಮಾತು. ಅದೂ ಭಾರತದಂತಹ ಪುಟ್ಟ ನೆಲದಲ್ಲಿ ಜನರೇ ತುಂಬಿ ತುಳುಕಾಡುತ್ತಿರುವಾಗ ನಮ್ಮ ಜಾಗ-ಊಟವನ್ನು ನಮಗೆ ಬಿಟ್ಟುಕೊಡಿ ಎಂದು ಪ್ರಾಣಿಗಳು ಕೇಳುವುದು ಸಹಜವೇ. ಇನ್ನೇನಿದ್ದರೂ ಇಬ್ಬರಿಗೂ ಅಪಾಯವಾಗದ ಹಾಗೆ ಮುಖಾಮುಖಿಯನ್ನು ನಿಯಂತ್ರಿಸಲು ಸನ್ನದ್ಧ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕಷ್ಟೇ.
ಆನೆಗಳಿರುವ-ಕಾಡಿನಂಚಿನಲ್ಲಿರುವ ಕೃಷಿ ಭೂಮಿಯ ಕೃಷಿಕರಿಗೆ ಆನೆಗಳ ಅಥವಾ ಇನ್ಯಾವುದೇ ಅರಣ್ಯವಾಸಿಗಳ ಹಿಂಡನ್ನು ದೂರ ಇಡಲು ಮಾರಣಾಂತಿಕವಲ್ಲದ ವೈಜ್ನಾನಿಕ ವಿಧಾನಗಳನ್ನು ತಿಳಿಸಿಕೊಡಬೇಕಾದದ್ದು ಮತ್ತು ಅದರ ವ್ಯವಸ್ಥೆ ಮಾಡಿಕೊಡಬೇಕಾದದ್ದು ಸರ್ಕಾರದ ಅದರ ಅಂಗ ಸಂಸ್ಥೆಗಳ ಜವಾಬ್ದಾರಿ. ಅಕಸ್ಮಾತ್ ಹಾಗೆ ಆನೆಗಳೋ, ಜಿಂಕೆಗಳೋ ಫಸಲನ್ನು ತಿಂದು ಹೋಗಿದ್ದರೂ ಆ ಫಸಲಿನ ಮಾರ್ಕೆಟ್ ಬೆಲೆಯನ್ನು ಆಯಾ ರೈತರಿಗೆ ಸಿಗುವಂತೆ ಮಾಡಿ ಅವರ ಹಿತಾಸಕ್ತಿ ಕಾಪಾಡಬೇಕಾದ್ದೂ ಸರ್ಕಾರದ ಜವಾಬ್ದಾರಿ. ತನ್ನ ವ್ಯಾಪ್ತಿಯಲ್ಲಿ ಬರುವ ಯಾವುದೇ ಕಾಡಿನ, ಕಾಡು ಜೀವಿಗಳ ರಕ್ಷಣೆ ಮತ್ತು ಅವುಗಳ ಹಿತರಕ್ಷಣೆಯೂ ಸರ್ಕಾರದ್ದೇ ಜವಾಬ್ದಾರಿ.
ಗಣಪತಿ ಹಬ್ಬ, ಅದರ ಪ್ರಯುಕ್ತ ಎತ್ತುವ ಕೋಟಿಗಟ್ಟಲೆ ಚಂದಾ, ಗಲ್ಲಿ ಗಲ್ಲಿಗಳಲ್ಲೂ ಹಾಕುವ ಪೆಂಡಾಲ್, ಆರ್ಭಟಕ್ಕೆ-ಅಲಂಕಾರಕ್ಕೆ ಮಾಡುವ ಖರ್ಚು ಇವೆಲ್ಲವನ್ನೂ ಕಡ್ಡಾಯವಾಗಿ ನಿಷೇಧಿಸಿ ಭಕ್ತರೇನಿದ್ದರೂ ತಮ್ಮ ಬಹಿರಂಗ ಭಕ್ತಿಯನ್ನು ನಾಡಿನ ಆನೆಗಳಿಗೆ ಸಹಾಯ ಮಾಡಿ ವ್ಯಕ್ತಪಡಿಸಬೇಕೆಂದು ನಿಯಮ ಮಾಡಿ, "ಪ್ರಾಜೆಕ್ಟ್ ಗಣಪತಿ" ಯೊಂದನ್ನು ರಚಿಸಿ, ಜನರು ಕೊಡಬಹುದಾದ ಹಣವನ್ನು ಆನೆಗಳ, ಅವುಗಳ ಪುಟ್ಟ ಅರಣ್ಯಗಳ ರಕ್ಷಣೆಗಾಗಿ ಬಳಸಿಕೊಳ್ಳುವ ಎದೆಗಾರಿಕೆ, ಕ್ರಿಯಾಶೀಲತೆ, ಸ್ವಸ್ಥ ಮನಸ್ಸಿರುವ ನಾಯಕತ್ವವೊಂದು ಕರ್ನಾಟಕಕ್ಕೆ ಸಿಕ್ಕಿಬಿಟ್ಟರೇ...
|