ಅಂಗಳ      ಹಾಡು ಹಕ್ಕಿ
Print this pageAdd to Favorite

ಐ ಹೇಟ್ ತೆನಾಲಿ ರಾಮ....!!!


 
ನವಮಿ
 
ಸ್ವರ, ಚೋಟು, ಅನೀಶ್ ಮತ್ತು ಮೇಘಾ ಫ಼್ಯಾಮಿಲಿ ರೂಮ್ ನಲ್ಲಿ ಆಟ ಆಡುತ್ತಿದ್ದರು. ಮೇಘಾ ತನ್ನ ಬಾರ್ಬಿ ಯನ್ನು ವಾಕ್ ಗೆ ಕರೆದೊಯ್ಯಲು ಅವಳ ಬಟ್ಟೆ ಬದಲಿಸುತ್ತಿದ್ದಳು. ಸ್ವರ ಅಲ್ಲಿ ರಾಶಿ ಬಿದ್ದಿದ್ದ ಸಾಫ್ಟ್ ಟಾಯ್ ಗಳ ರೂಪದ ಎಲ್ಲಾ ಪ್ರಾಣಿಗಳನ್ನೂ ಆರಿಸಿಕೊಂಡು ಅವಕ್ಕೆ ಸ್ನಾನ ಮಾಡಿಸಿಕೊಂಡು ಮುದ್ದು ಮಾಡುತ್ತಿದ್ದಳು. ಚೋಟು ಒಂದಷ್ಟು ಲೆಗೋ ಬ್ಲಾಕ್ಸ್ ಹಿಡಿದು ಅವುಗಳಲ್ಲಿ ಒಂದು ಕಾರ್ ಕಟ್ಟಲು ಪ್ರಯತ್ನಿಸುತ್ತಿದ್ದ. ಅನೀಶ್ ಪುಟಾಣಿ ಸೈಕಲ್ ತುಳಿದುಕೊಂಡು ಮನೆಯನ್ನೇ ರೇಸ್ ಗ್ರೌಂಡ್ ಮಾಡಿಕೊಂಡಿದ್ದ. ಮಕ್ಕಳು ಒಬ್ಬರ ಜೊತೆ ಒಬ್ಬರು ಅಂಟಿಕೊಂಡು ಆಡದಿದ್ದರೂ ತಮ್ಮ ತಮ್ಮ ಟೆರಿಟರಿಗಳನ್ನು ಮಾಡಿಕೊಂಡು ಎಲ್ಲರ ಇರುವಿಕೆಯ ಖುಷಿಯಲ್ಲೇ ಆಟದಲ್ಲಿ ಮಗ್ನರಾಗಿದ್ದರು.
 
ನಾವು ನಾಲ್ವರು ಅಮ್ಮಂದಿರು ಅಡುಗೆಮನೆ ಸೇರಿ ಕೋಡುಬಳೆ ಮಾಡುವ ಕಾರ್ಯಕ್ರಮ ಹಾಕಿಕೊಂಡಿದ್ದೆವು. ನಮ್ಮ ನಾಲ್ವರಿಗೂ ಒಬ್ಬೊಬ್ಬರೇ ಮಕ್ಕಳಾದ್ದರಿಂದ ಅವುಗಳಿಗೆ ಮನೆಗಳಲ್ಲಿ ಬೋರಾಗದಿರಲಿ, ಅವು ಒಂಟಿಯಾಗೇ ಬೆಳೆಯುವುದನ್ನು ರೂಢಿ ಮಾಡಿಕೊಳ್ಳದಿರಲಿ, ಹಂಚಿಕೊಳ್ಳುವುದನ್ನು ಕಿತ್ತಾಡುವುದು-ಜಗಳಮಾಡುವುದನ್ನು ಕಲಿಯಲಿ ಎಂದು ಮಾತಾಡಿಕೊಂಡು ಹೀಗೆ ಆಗಾಗ ಪ್ಲೇ ಡೇಟ್ ಮಾಡುತ್ತಿದ್ದೆವು. ಮಕ್ಕಳು ಆಟ ಆಡಿಕೊಂಡು ಡೇಟ್ ಮಾಡಿಕೊಂಡರೆ ನಾವು ಮೂವಿ ನೋಡುತ್ತಾ, ಹೊಸರುಚಿ ಮಾಡಿಕೊಳ್ಳುತ್ತಾ ಅಥವಾ ಒಬ್ಬರಿಗೊಬ್ಬರು ಪೆಡಿಕ್ಯೂರ್ ಮಾಡುತ್ತಾ ಡೇಟ್ ಮಾಡಿಕೊಳ್ಳುತ್ತಿದ್ದೆವು. ಸಧ್ಯಕ್ಕೆ ನಾವು ನಾಲ್ವರೂ ಎಲ್ಲ ರೀತಿಯ ವಿದ್ಯಾಭ್ಯಾಸ, ಡಿಗ್ರಿ ಇದ್ದೂ ’ಹೋಮ್ ಮೇಕರ್’ಗಳು. ಮನೆಯಲ್ಲೇ ಇದ್ದು ಮನೆ ಸಂಭಾಳಿಸುವವರು. ಮಕ್ಕಳನ್ನು ಸ್ಕೂಲುಗಳಿಗೆ ಶಾಫರ್ ಮಾಡುವವರು. ಅವರ ಹೋಮ್ ಪ್ರಾಜೆಕ್ಟ್ ಗಳನ್ನು ಮಾಡಿಸುವವರು. ಅಡುಗೆ ಮಾಡುವವರು, ಹಾಲು-ತರಕಾರಿ-ಅಗತ್ಯ ಪದಾರ್ಥಗಳ ಶಾಪಿಂಗ್ ಮಾಡುವವರು...ನಾವು ಪಕ್ಕಾ ಸಾಂಪ್ರದಾಯಿಕ ಅಮ್ಮಂದಿರು. ಇನ್ ಫ್ಯಾಕ್ಟ್ ಈಗ ಒಂದು ಥರದಲ್ಲಿ ಮೈನಾರಿಟಿ ಆಗುತ್ತಿರುವ ಪೈಕಿ.
 
ಅವತ್ತು ನಾವು ವಿಭಾಳ ಮನೆಯಲ್ಲಿ ಸೇರಿದ್ದೆವು. ವಿಭಾ ತಿನ್ನುವುದರಲ್ಲಿ ಅಲ್ಲದಿದ್ದರೂ ಅಡುಗೆ ಮಾಡುವ ವಿಷಯದಲ್ಲಿ ಪಕ್ಕಾ ವೆಜಿಟೇರಿಯನ್ ಆದ್ದರಿಂದ ಅವಳ ಮನೆಯಲ್ಲಿ ಎಂದಿನಂತೆ ಚಿಕನ್ ಪಕನ್, ಫಿಶ್ ಮಾಡದೆ ಕೋಡುಬಳೆ ಮಾಡಲು ಹಿಟ್ಟು ಕಲಸುತ್ತಿದ್ದೆವು. ನಾಲ್ಕು ಮಂದಿ ಇದ್ದದ್ದರಿಂದ ಎಣ್ಣೆ ಕಾದಿತ್ತು, ಒತ್ತಿಯೂ ಆಯಿತು, ಕೋಡುಬಳೆ ಆಗೇ ಹೋಯಿತು. ಅದರ ಬಣ್ಣ ರುಚಿ ಆಕಾರಗಳ ಗುಣಗಾನ ಮಾಡಿಕೊಳ್ಳುತ್ತಾ, ಒಂದರ ಹಿಂದೊಂದನ್ನು ಹೊಟ್ಟೆಗೆ ಕಳಿಸುತ್ತಾ ಜೊತೆಯಲ್ಲೇ ಚಾ ಕುಡಿಯುತ್ತಾ ಕೂತೆವು. ಆ ಪ್ಲೇ ಡೇಟ್ ದಿನ ಮಕ್ಕಳಿಗೆ ಕಥೆ ಹೇಳುವ ಸರದಿ ನನ್ನದಿತ್ತು. ನಾವು ನಾಲ್ವರೂ ಪಾಳಿಯಂತೆ ನಮ್ಮ ನಮ್ಮ ಆಸಕ್ತಿ, ಶಕ್ತಿಗೆ ತಕ್ಕ ಚಟುವಟಿಕೆಗಳನ್ನು ಮಕ್ಕಳಿಗೆ ಮಾಡಿಸುತ್ತಿದ್ದೆವು. ವಿಭಾ ರಾಮಾಯಣ ಮಹಾಭಾರತದ ನಮಗೇ ಸುಸ್ತಾಗುವ ಭಾಗಗಳನ್ನು ಭಯ ಭಕ್ತಿ ಬರಲೆಂದು ಮಕ್ಕಳಿಗೆ ಹೇಳಿಕೊಡುತ್ತಿದ್ದಳು. ಬೇಡ ಕಣೇ ಮಾರಾಯ್ತಿ...ರಾಮಾಯಣದಲ್ಲೇ ಬೇರೆ ಏನಾದ್ರೂ ಪಾರ್ಟ್ ಆರಿಸಿಕೊಳ್ಳೇ ಎಂದರೂ ಆಕೆ ಕೇಳುತ್ತಿರಲಿಲ್ಲ. ’ಧರ್ಮ ಕರ್ಮಗಳ ವಿಷಯ ಮಕ್ಕಳ ಕಿವಿಗೆ ಬೀಳುತ್ತಿರಬೇಕು ಕಣ್ರೇ’ ಅಂತ ಗಣಪತಿ ವ್ಯಾಸರ ಮಾತುಕತೆಯನ್ನೋ, ಕೃಷ್ಣ ಭಗವದ್ಗೀತೆ ಬೋಧಿಸಿದ್ದನ್ನೋ ಇತ್ಯಾದಿ ಬೋರಿಂಗಾತಿ ಬೋರಿಂಗ್ ಕಥೆಗಳನ್ನು ಒಂದು ಭಯಂಕರ ಸ್ಟೈಲಿನಲ್ಲಿ ಹೇಳುತ್ತಿದ್ದಳು. ಮೊದಲೇ ಪ್ರಖ್ಯಾತ ಹರಿಕಥೆ ದಾಸರ ಮುಮ್ಮಗಳು! ಇನ್ನು ಕೇಳಬೇಕಾ...ಆ ಪ್ರವಚನಕ್ಕೋ, ಅವಳ ಸ್ಟೈಲಿಗೋ ಅಥವಾ ನಿಜಕ್ಕೂ ಆ ಧರ್ಮ ಕರ್ಮಗಳ ದೆಸೆಯಿಂದಲೋ, ಅವಳ ಸರತಿಯ ದಿನ ಮಕ್ಕಳು ಎಂದಿಗಿಂತ ಜಾಸ್ತಿ, ಬೇಸ್ತು ಹೊಡೆದಂತೆ ನಿದ್ದೆ ಮಾಡುತ್ತಿದ್ದವು. ಆ ದಿನ ನಾವು ನಿಶ್ಚಿಂತೆಯಿಂದ ಮೂವಿ ನೋಡಿಕೊಳ್ಳುತ್ತಿದ್ದೆವು.
 
ಅನೀಶ್ ನ ಅಮ್ಮ ಅಕ್ಷರಿ ಹಾಡು ಕಥೆಗಳ ಗೊಡವೆಗೆ ಹೋಗದೆ ತನ್ನ ಸರತಿ ಬಂದಾಗ ಮಕ್ಕಳಿಗೆ ಹಳೆಯದೊಂದು ಬಟ್ಟೆ ಹಾಕಿಸಿ ಐದಾರು ಬಣ್ಣ ಕಲೆಸಿ ಏನಾದರೊಂದು ಪೇಂಟಿಂಗ್ ಮಾಡಿಸಿಬಿಡುತ್ತಿದ್ದಳು. ಅವಳ ಟರ್ನ್ ಬಂದಾಗ ನಮಗೆಲ್ಲರಿಗೂ ಕೆಲಸ ಜಾಸ್ತಿ. ಮಕ್ಕಳು ಕಲೆಸಿದ ಬಣ್ಣವನ್ನು ಪೇಪರ್ ಬಿಟ್ಟು ಗೋಡೆಯೋ, ಕಾರ್ಪೆಟ್ಟೋ ಅಥವಾ ಬೇರೆಲ್ಲಿಗೋ ಹಚ್ಚದಂತೆ ಸದಾ ಗಮನ ಕೊಡಬೇಕು, ಒದ್ದೆ ಪೇಂಟಿಂಗ್ ಗಳನ್ನು ಒಣಗಿ ಹಾಕಿ ಗರಿಗರಿಯಾಗಿ ಮಾಡಿಕೊಡಬೇಕು, ಪೇಂಟಿಂಗ್ ನೆಪದಲ್ಲಿ ಮೈ ಕೈ ಹೊಟ್ಟೆ ಪಟ್ಟೆಗಳಿಗೆಲ್ಲಾ ಬಳಿದುಕೊಂಡಿರುವ ಬಣ್ಣವನ್ನು ಹೋಗಿಸಲು ಒಮ್ಮೆ ಸ್ನಾನ ಮಾಡಿಸಬೇಕು...ನಾವು ಅಮ್ಮಂದಿರಿಗಂತೂ ಆ ದಿನ ಕಳೆಯುತ್ತಿದ್ದುದೇ ಗೊತ್ತಾಗುತ್ತಿರಲಿಲ್ಲ.
 
ಲತಾ ಕೂಡಾ ಅಕ್ಷರಿಯಂತೆಯೇ ಮಕ್ಕಳಿಗೆ ದೋಣಿ, ಗಾಳಿಪಟ, ಪಕ್ಷಿ, ಮುಖವಾಡ ಇತ್ಯಾದಿ ಕರಕುಶಲ ಕಲೆಗಳನ್ನು ಮಾಡಿಸುತ್ತಿದ್ದಳು. ಅವಳು ತನ್ನ ದನಿಯಲ್ಲೇ ಮಕ್ಕಳನ್ನು ಚನ್ನಾಗಿ ಹೆದರಿಸಿಟ್ಟುಕೊಂಡು ಚೊಕ್ಕವಾಗಿ ಎಲ್ಲಾ ಕೆಲಸ ಮಾಡಿಸಿ, ಅವರಿಂದಲೇ ಕ್ಲೀನ್ ಕೂಡಾ ಮಾಡಿಸುತ್ತಿದ್ದಳು. ಅವಳಿದ್ದರೆ ಅವಳ ಕೂಸೊಂದನ್ನು ಬಿಟ್ಟು ಉಳಿದವರೆಲ್ಲರೂ ಕಮಕ್ ಕಿಮಕ್ ಅನ್ನದೆ ಇರುತ್ತಿದ್ದರು.
 
ನಾನು ಪ್ರತೀ ಬಾರಿಯೂ ಸರಳವಾದ, ಇಂಗ್ಲಿಷ್ ಗೆ ಅನುವಾದ ಮಾಡಲು ಕಷ್ಟವಾಗದ, ಪ್ರಾಣಿ ಪಕ್ಷಿಗಳಿರುವ, ಮಕ್ಕಳಿಗೆ ಅರ್ಥವಾಗುವ ಕಥೆಗಳನ್ನು ಆಯ್ಕೆ ಮಾಡಿಕೊಂಡು ನನ್ನ ಸ್ಟೋರಿ ಟೈಮ್ ಶುರು ಮಾಡುತ್ತಿದ್ದೆ. ಹಾವಭಾವ, ಬೇರೆ ಬೇರೆ ದನಿ ಮಾಡಿಕೊಂಡು ಕಥೆಗಳನ್ನು ಹೇಳಿಕೊಡುತ್ತಿದ್ದೆ. ಕೆಲವೊಮ್ಮೆ ಸುಳ್ಳುಸುಳ್ಳೇ ಹುಟ್ಟಿಸಿಕೊಂಡು ಹೇಳುತ್ತಿದ್ದೆ. ಆ ಮುದ್ದುಗಳು ನಾನು ಹೇಳಿದ್ದನ್ನೆಲ್ಲಾ ಕಣ್ ಕಣ್ ಬಿಟ್ಟುಕೊಂಡು ಕೇಳುತ್ತಾ ಕೂರುವುದನ್ನು ನಾನು ಕಣ್ ಮನ ತುಂಬಿಸಿಕೊಳ್ಳುತ್ತಿದ್ದೆ. ನನ್ನ ಸ್ಟೋರಿ ಡೇ ದಿನ ಮಕ್ಕಳು ಕಡ್ಡಾಯವಾಗಿ ಪ್ರಶ್ನೆಗಳನ್ನು ಕೇಳಬೇಕಾಗುತ್ತಿತ್ತು. ಪ್ರಶ್ನೆಗಳನ್ನು ಕೇಳದಿದ್ದರೆ ಆ ಮಗು ತಾನೇ ಒಂದು ಕಥೆ ಹೇಳಬೇಕಾಗುತ್ತಿತ್ತು. ಇದು ನನ್ನ ನಿಯಮ. ಈ ನಿಯಮದಿಂದಾಗಿ ನನ್ನ ಸರದಿಯ ದಿನ ಮೂರು ನಾಲ್ಕು ಕಥೆಗಳು ಕೇಳಲು ಸಿಗುತ್ತಿದ್ದವು.
 
ಅವತ್ತು ನಾನು ತೆನಾಲಿರಾಮ ಬೆಕ್ಕಿಗೆ ಬಿಸಿ ಹಾಲಿಟ್ಟು ಬುದ್ಧಿ ಕಲಿಸಿದ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೆ. ಕಥೆಯಲ್ಲಿ ಪ್ರಾಣಿ-ಪಕ್ಷಿಗಳಿದ್ದರೆ ಅವುಗಳ ಸದ್ದು ಮಾಡಿಕೊಂಡು ಎಲ್ಲರೂ ಖುಷಿಪಡುತ್ತಿದ್ದೆವಾದ್ದರಿಂದ ಅವತ್ತೂ ಉತ್ಸಾಹದಿಂದ ಕಥೆ ಶುರು ಮಾಡಿದೆ. ಕಥೆ ಎಂದಿನಂತೆ ಚನ್ನಾಗಿ ಸಾಗಿತ್ತು. ಮಕ್ಕಳು ಮಗ್ನರಾಗಿ ಕೇಳುತ್ತಿದ್ದರು. ಆ ಕಥೆಯಲ್ಲಿ ಬರುವ ಒಂದು ಬೆಕ್ಕಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ತೆನಾಲಿರಾಮ ಬಿಸಿ ಬಿಸಿ ಹಾಲನ್ನು ಕೊಡುತ್ತಾನೆ, ಆ ಬಿಸಿ ಹಾಲಿಗೆ ಬಾಯಿ ಹಾಕುವ ಬೆಕ್ಕಿನ ಮೂತಿ ಸುಟ್ಟು ಹೋಗಿ ಅದು ಕಯ್ಯಾ ಪಯ್ಯಾ ಅಂತ ಕಿರುಚಿಕೊಂಡು ಓಡಿ ಬಿಡುತ್ತೆ...ಇಲ್ಲಿವರೆಗೂ ಹೇಳಿ ನಿಲ್ಲಿಸಿದ್ದೆ. ’ನೋ!!!!!’ ತಕ್ಷಣ ಪಕ್ಕದಲ್ಲೇ ಬಾಂಬು ಬಿದ್ದ ಹಾಗೆ ಸ್ವರ ಕಿರುಚಿಕೊಂಡಳು. ಎಲ್ಲರು ಬೆಚ್ಚಿ ಬಿದ್ದೆವು. 'ಐ ಹೇಟ್ ತೆನಾಲಿರಾಮಾ...ಐ ಹೇಟ್ ತೆನಾಲಿರಾಮಾ...ಸ್ಟಾಪ್ ದಿಸ್ ಸ್ಟೋರಿ ಪ್ಲೀಸ್...' ಅವಳು ಇದ್ದಕ್ಕಿದ್ದಂತೆ ಗೋಳಾಡತೊಡಗಿದಳು. ನನಗೆ ಗಾಬರಿ. ’ಏನಾಯಿತಪ್ಪಾ ಸ್ವರಾ? ಎನಿಥಿಂಗ್ ರಾಂಗ್?’ ಅಂತ ಕೇಳಿದೆ. ’ಈ ಕಥೆ ಚನ್ನಾಗಿಲ್ಲ. ಹಿ ಈಸ್ ಮೀನ್, ಹಿ ಈಸ್ ಅ ಬ್ಯಾಡ್ ಮ್ಯಾನ್...ಈ ಕಥೆ ಬೇಡ ಆಂಟೀ’ ಸ್ವರಳ ಕೋಪ ನನಗೆ ತಕ್ಷಣಕ್ಕೆ ಅರ್ಥ ಆಗಲಿಲ್ಲ. ಅವಳಿಗೆ ಸೀರಿಯಸ್ ಆಗಿ ದುಃಖ ಸಿಟ್ಟು ಎಲ್ಲಾ ಬಂದಿತ್ತು. ಸ್ವರ ಪ್ರಾಣಿ ಪಕ್ಷಿಗಳ ಕಥೆಯನ್ನು ಎಲ್ಲರಿಗಿಂತ ಹೆಚ್ಚು ಎಂಜಾಯ್ ಮಾಡುತ್ತಿದ್ದ ಕೂಸು. ಅವಳ ಪ್ರಪಂಚದಲ್ಲಿ ಪ್ರಾಣಿಗಳೇ ಕಥಾನಾಯಕರು, ಅವರೇ ದೇವರು! ಅವಳು ಹಾಗೆ ಎಮೋಷನಲ್ ಆಗಿ ಕೂಗಿದ್ದನ್ನು ಕಂಡು ’ಯಾಕೆ ಸ್ವರಾ?’ ಅವಳ ಅಮ್ಮನೂ ಆಶ್ಚರ್ಯದಿಂದ ಮಗಳನ್ನು ಕರೆದುಕೊಂಡು ಕೇಳಿದಳು. ಆಕೆ ಅಳುತ್ತಲೇ 'ಮಾಮಿ ಅವನು, ದಟ್ ಮ್ಯಾನ್, ಆ ಕಿಟ್ಟಿಗೆ ಬಿಸಿ ಬಿಸಿ ಹಾಲು ಕೊಟ್ಟು ಅದರ ಫೇಸ್ ನ, ಮೌತ್ ನ ಬರ್ನ್ ಮಾಡಿದ. ಅವನಿಗೆ ಶೇರಿಂಗ್ ಬುದ್ಧಿನೇ ಇಲ್ಲ. ಅವನು ಅನಿಮಲ್ ಗಳಿಗೆ ತುಂಬಾ ಕಷ್ಟ ಕೊಡ್ತನೆ...ಅವನು ತುಂಬಾ ಬ್ಯಾಡ್...ಅವನನ್ನು ಅನಿಮಲ್ ಪೊಲಿಸ್ ಗೆ ಕೊಡಬೇಕು...' ಐದುವರೆ ವರ್ಷದ ಆ ಮುದ್ದು ಕೂಸು ಒಂದೇ ಸಮ ಬಡಬಡಿಸಿತು. ಅವಳು ಅಳಲು ಶುರು ಮಾಡಿದ್ದನ್ನು ಒಂದು ದೊಡ್ಡ ಘಟನೆ ಎಂಬಂತೆ ಕಣ್ಣು ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದ ಅನೀಶ್, ಚೋಟು, ಮೇಘಾ ಅವಳ ಗದ್ದಲಕ್ಕೆ ಕಾಂಟ್ರಿಬ್ಯೂಟ್ ಮಾಡಲು ತಾವು ಮುಂದೆ ಏನು ಮಾಡಬಹುದು ಎಂದು ಯೋಚಿಸುತ್ತಿರುವ ಹಾಗೆ ಕಂಡರು. ಸ್ವರ ಹಾಗೆ ಹೇಳಿದ್ದನ್ನು ಕೇಳಿಸಿಕೊಂಡು ಕನ್ವಿನ್ಸ್ ಆದ ಆ ಪಿಳ್ಳೆಗಳು ತಮಗೂ ಅವನು ಇಷ್ಟ ಇಲ್ಲ, ಅವನ ಕಥೆ ಬೇಡ, ಅವನನ್ನು ಕಿಕ್ ಮಾಡಿ ಓಡಿಸಿ ಎಂದು ಗಲಾಟೆ ಮಾಡಿಬಿಟ್ಟವು.
 
ನನಗೆ ಆಶ್ಚರ್ಯ, ಸಿಕ್ಕಾಪಟ್ಟೆ ಸಂತೋಷ ಎಲ್ಲಾ ಒಟ್ಟಿಗೇ ಆಯಿತು. ಸ್ವರಳಂತಹ ಪುಟಾಣಿಗೆ ತೆನಾಲಿರಾಮನ ಜಾಣತನ-ಕುತಂತ್ರ, ಸ್ವಾರ್ಥ-ಕೆಟ್ಟ ಬುದ್ಧಿ ಎನ್ನಿಸಿತ್ತು. ಎಷ್ಟೋ ದಶಕಗಳಿಂದಲೂ ಕೇಳುಗರನ್ನು ರಂಜಿಸುತ್ತಾ, ಹೀರೋ ಆಗಿ ಮೆರೆದಿದ್ದ ತೆನಾಲಿರಾಮ ಅವಳ ಕಣ್ಣಿನಲ್ಲಿ ದುಷ್ಟಾತಿ ದುಷ್ಟನಾಗಿ ಹೋಗಿದ್ದ. ಒಂದು ಪುಟ್ಟ ಬೆಕ್ಕಿನ ಮರಿಗೆ ಹಾಲು ಹಂಚಿಕೊಳ್ಳದ ಕುತಂತ್ರಿಯನ್ನು ಸ್ವರ ಮತ್ತವಳ ಮಿತ್ರರು ಎತ್ತಿ ಬಿಸಾಡಿದ್ದರು. ಒಂದು ಕಾಲದ, ಸಮೂಹದ ಜನರಿಗೆ ಸರ್ವೈವಲ್ ಸ್ಕಿಲ್ ಗಳನ್ನು ಕಲಿಸಿಕೊಡುವವನಾಗಿ, ತಂತ್ರಗಾರಿಕೆಯನ್ನೇ ಜೀವನದ ಯಶಸ್ಸಿನ ಅಸ್ತ್ರವೆನ್ನುವಂತೆ ಮಾಡಿದ ತೆನಾಲಿರಾಮನ ಚಾಣಾಕ್ಷ್ಯತನವನ್ನು ಆ ಪುಟಾಣಿಗಳು ತಿರಸ್ಕರಿಸಿದ್ದರು. ಕುತಂತ್ರ, ಚಾಲಾಕಿತನವನ್ನೇ ಜಾಣ್ಮೆ-ಬುದ್ಧಿವಂತಿಕೆ ಎಂದು ಕಲಿಸುವವರ ಪಾಲಿಗೆ ಸೇರಿದ್ದವಳಲ್ಲವಾದ್ದರಿಂದ ಮತ್ತು ಈಗ ತುರ್ತಾಗಿ ಬೇಕಾಗಿರುವ, ಜೀವಿಗಳ ಮೇಲೆ ಅಪರಿಮಿತ-ಅನನ್ಯ ಪ್ರೀತಿ ಇಟ್ಟುಕೊಂಡು ಆಶಾದಾಯಕವಾಗಿ ಚಿಗುರುತ್ತಿರುವ ನನ್ನೆದುರಿಗಿನ ಈ ಮುದ್ದು ಹೊಸ ತಲೆಮಾರಿಗೆ ಸ್ವಲ್ಪವಾದರೂ ಸಮಾಧಾನವಾಗುವ ಹಾಗೆ ಅರ್ಜೆಂಟಾಗಿ ಮಾಡಬೇಕಿತ್ತಾದ್ದರಿಂದ ’ಕಥೆ ಇನ್ನೂ ಇದೆ ಕಣ್ರೋ...ಅದು ಈಗಷ್ಟೇ ಶುರು ಆಗಿದೆ...ನೀವು ಮುಂದೆ ಅವನಿಗೆ ಏನಾಗುತ್ತೆ ಅಂತ ಕೇಳಿ..’ ನಾನು ಶುರು ಹಚ್ಚಿಕೊಂಡೆ. ಮುಂದೆ ಇನ್ನೂ ಕುತೂಹಲಕಾರಿ ತಿರುವುಗಳು ಬರುತ್ತವೆ ಅನ್ನುವ ನಿರೀಕ್ಷೆಯಲ್ಲಿ ಸ್ವರ ಮತ್ತು ಉಳಿದ ಪುಟಾಣಿಗಳು ಸ್ವಲ್ಪ ಸುಮ್ಮನಾದರು.
 
ಅಲ್ಲಿಂದ ಶುರು ಆಯಿತು ನೋಡಿ ತೆನಾಲಿರಾಮನಿಗೆ ವಕ್ರ ದೆಸೆ. 'ಬೆಕ್ಕಿಗೆ ಹಿಂಸೆ ಕೊಟ್ಟ ತೆನಾಲಿರಾಮನಿಗೆ ಕೃಷ್ಣದೇವರಾಯ ಭಯಂಕರ ಶಿಕ್ಷೆ ಕೊಡುತ್ತಾನೆ...ಅವನಿಗೆ ಕತ್ತೆ ಕೈಲಿ ಒದೆಸಿ, ಅವನ ತಲೆ ಕೂದಲು ಬೋಳಿಸಿ, ಅವನ ಬಮ್ ಗೆ ಬರೆ ಹಾಕಿಸಿ, ರಾಜ ಅವನನ್ನು ಊರಿಂದ ಓಡಿಸಿಬಿಡುತ್ತಾನೆ. ಆಗ ತೆನಾಲಿರಾಮ ಮನೆ ಇಲ್ಲದೆ ಕಾಡಿನಲ್ಲಿ ಕೂತಿರುತ್ತಾನೆ...ಅವನಿಗೆ ಊಟ ಸಿಕ್ಕದೆ ಹೊಟ್ಟೆ ತುಂಬಾ ಹಸಿದು ಸುಸ್ತಾಗಿರುತ್ತಾನೆ...ಹಾಗಿರುವಾಗ ಅಲ್ಲಿಗೆ ಒಂದು ಗಿಳಿ ಬಂದು ಅವನಿಗೆ ತನ್ನ ಹತ್ತಿರ ಇದ್ದ ಒಂದು ಹಣ್ಣನ್ನು ಕೊಡುತ್ತೆ...ಅದನ್ನು ರಾಮ ಹಣ್ಣನ್ನು ತಿಂದು ಆ ಗಿಳಿಗೆ ಥ್ಯಾಂಕ್ಸ್ ಹೇಳುತ್ತಾನೆ. ಅವನಿಗೆ ತಾನು ಪುಟಾಣಿ ಬೆಕ್ಕಿಗೆ ಹಿಂಸೆ ಕೊಟ್ಟಿದ್ದು ನೆನಪಾಗಿ ಬೇಜಾರಾಗುತ್ತೆ. ನಾನು ಪ್ರಾಣಿಗಳಿಗೆ ಕೆಟ್ಟದು ಮಾಡಿದರೂ ಅವು ನನಗೆ ಊಟ ಶೇರ್ ಮಾಡಿಕೊಂಡವು ಅಂತ ಸಂತೋಷ ಪಡುತ್ತಾನೆ. ಅಷ್ಟರಲ್ಲಿ ತೆನಾಲಿರಾಮನಿಗೆ ಬುದ್ಧಿ ಬಂದು ಅವನು ತುಂಬಾ ಬೇಜಾರು ಮಾಡಿಕೊಂಡು, ಊರಿಗೆ ಬಂದು ರಾಜನಲ್ಲಿ, ಆ ಬೆಕ್ಕಿನಲ್ಲಿ ತುಂಬಾ ಸಾರಿ ಕೇಳುತ್ತಾನೆ. ಆ ಬೆಕ್ಕು ಅವನನ್ನು ಕ್ಷಮಿಸುತ್ತದೆ. ರಾಜನೂ ಸುಮ್ಮನಾಗುತ್ತಾನೆ. ಆಗ ತೆನಾಲಿರಾಮ ಅವನ ಮನೆ ಪಕ್ಕದಲ್ಲೇ ಇನ್ನೊಂದು ದೊಡ್ಡ ಮನೆ ಕಟ್ಟಿಸಿ ಹತ್ತು ಬೆಕ್ಕು, ಹತ್ತು ನಾಯಿ, ಹತ್ತು ಹಸು, ಹತ್ತಿಪ್ಪತ್ತು ಪಕ್ಷಿಗಳನ್ನು ಸಾಕಿಕೊಂಡು ಅವುಗಳನ್ನು ಪ್ರೀತಿಯಿಂದ ನೋಡಿಕೊಂಡು ಅವುಗಳ ಬೆಸ್ಟ್ ಫ್ರೆಂಡ್ ಆಗುತ್ತಾನೆ...' ಕಥೆ ನಿಲ್ಲಿಸಿ ಸ್ವರಳ ಕಡೆಗೆ ನೋಡಿದೆ. ಅವಳ ಕಣ್ ರೆಪ್ಪೆಗಳಿಂದ ಇನ್ನೂ ಪಸೆ ಆರಿರಲಿಲ್ಲ. ಅವಳು ತೆನಾಲಿರಾಮನನ್ನು ಕ್ಷಮಿಸಿದಂತಿತ್ತು. ಮೇಘಾ, ಚೋಟು, ಅನೀಶ್ ಕೂಡಾ ಕಥೆಯ ಅಂತ್ಯದಿಂದ ಸಮ್ಮತರಾದಂತಿದ್ದರು.
 
ಪರಿಸ್ಥಿತಿ ಶಾಂತವಾಗಿದೆ. ತೆನಾಲಿರಾಮನ ಇಲ್ಲದ ಮರ್ಯಾದೆಯನ್ನು ಉಳಿಸಲು ನಾನು ಇಷ್ಟು ಹೊತ್ತು ರೀಲು ಬಿಟ್ಟಿದ್ದು ಸಾಕು ಎಂದು ಮನಗಂಡು...’ಆಮೇಲೆ ಎಲ್ಲರೂ ಖುಷಿಯಾಗಿ ಕಾಲ ಕಳೆದರು...' ಕಥೆಯನ್ನು ಮುಗಿಸಿ ಉಸಿರು ಬಿಟ್ಟೆ.
 
ನನ್ನ ರೀಲನ್ನು ತಾಳ್ಮೆಯಿಂದ, ಒಂದು ಚೂರೂ ಕಿಸಕ್ ಪಸಕ್ ಅಂತ ನಗದೆ ಕೇಳಿಸಿಕೊಂಡು ಕೂತಿದ್ದ ನನ್ನ ಗೆಳತಿಯರು ’ಅಮ್ಮ ತಾಯೀ...ಯಾವಾಗಲೂ ಕಾಂಟ್ರವರ್ಸಿ ಕಣೆ ನಿನ್ನ ಸೆಷನ್ ದು...’ ಅಂತ ಗದರಿದರು. ನನ್ನ ಸುತ್ತ ಒಂದಿಷ್ಟು ಕಥೆಗಾಗಿ ಮೈ ಚೆಲ್ಲಿ ಕುಳಿತಿದ್ದ ಆ ಪುಟಾಣಿ ಮೂರುತಿಗಳ ಒಳಗೆ ಪ್ರಾಣಿ-ಪಕ್ಷಿಗಳ ಸಲುವಾಗಿ ಅಷ್ಟು ಪ್ರೀತಿ, ಭಾವನಾತ್ಮಕವಾದ ನಂಟು ಬೆಳೆಯುತ್ತಿದೆ ಅಂತ ತಿಳಿದು ಮುದ್ದು ಉಕ್ಕಿ ಬಂತು. ’ಕಥೆ ಚನ್ನಾಗಿತ್ತೇನ್ರೋ?’ ಕೇಳಿದೆ. ಸಧ್ಯ! ’ಹೂಂ’ ಅಂದವು.
 
 
 
 
 
 
Copyright © 2011 Neemgrove Media
All Rights Reserved