ಗೊರುಗೊರುಕು ಗೊರುಕನಾ: ಮೋಡಿ ಮಾಡುವ ಗೊರವರ ಕುಣಿತ
ಡಾ. ಚಕ್ಕೆರೆ ಶಿವಶಂಕರ್

ಕರ್ನಾಟಕದ ಉತ್ಕೃಷ್ಟ ವೃತ್ತಿಗಾಯಕ ಪರಂಪರೆಗೆ ಸೇರಿದ ಗೊರವರು ತಮ್ಮ ಶೈವ ಸಂಬಂಧಿ ಸಾಂಪ್ರದಾಯಿಕ ಕುಣಿತದಲ್ಲಿ ಆಕರ್ಷಕ ಕಲಾತ್ಮಕ ಸ್ವರೂಪವನ್ನು, ಮನುಷ್ಯನ ಮೃಗೀಯ ಪ್ರವೃತ್ತಿಯನ್ನು ಏಕಕಾಲದಲ್ಲಿ ಅಭಿವ್ಯಕ್ತಿಸುತ್ತಾರೆ. ಗೊರವರು ಮೈಲಾರಲಿಂಗನ ಗುಡ್ಡರು ಅಂದರೆ ಭಕ್ತರು. ಗೊರವರನ್ನು ಕರ್ನಾಟಕದ ದಕ್ಷಿಣ ಭಾಗದಲ್ಲಿ ಗೊರವ, ಗೊಗ್ಗಯ್ಯ, ಗಡಬಡ್ಡಯ್ಯ ಎಂದೂ ಉತ್ತರ ಭಾಗದಲ್ಲಿ ಗ್ವಾರಪ್ಪ, ವಗ್ಗ, ವಾಘ್ಯಾ ಎಂದೂ ಕರೆಯುತ್ತಾರೆ.
 
ತಲೆಯ ಮೇಲೆ ಕರಡಿ ಕೂದಲಿನ ಕುಲಾವಿ, ಕರಿಯ ಕಂಬಳಿಯ ನಿಲುವಂಗಿ, ಎದೆಗೆ ಅಡ್ಡಲಾಗಿ ಕವಡೆ ಸರಗಳ ಪಟ್ಟಿ, ಹೆಗಲಲ್ಲಿ ಜೋಳಿಗೆ, ದೋಣಿ, ಭಂಡಾರ ಚೀಲ, ಒಕ್ಕಳ ಗಂಟೆ, ತ್ರಿಶೂಲ, ನಾಗಬೆತ್ತ, ಬಲಗೈಯಲ್ಲಿ ಡಮರುಗ, ಎಡಗೈಯಲ್ಲಿ ಪಿಳ್ಳಂಗೋವಿ ಅಥವಾ ಕೊಳಲು, ಹಣೆಯಲ್ಲಿ ಢಾಳಾಗಿ ಬಳಿದ ವಿಭೂತಿ ಮತ್ತು ಕುಂಕುಮ, ಕಣ್ಣಿನ ಸುತ್ತ ವಿಭೂತಿಯ ಲೇಪ ಇವಿಷ್ಟು ಗೊರವರ ವೇಷಭೂಷಣಗಳು.
 
ಸುಮಾರು ಹತ್ತರಿಂದ ಹನ್ನೆರಡು ಮಂದಿ ಗೊರವರು ತಮ್ಮ ಸಾಂಪ್ರದಾಯಿಕ ವೇಷಭೂಷಣ ಧರಿಸಿ ಸಮತಟ್ಟಾದ ಬಯಲಿನಲ್ಲಿ ಇಲ್ಲವೆ ಎತ್ತರದ ಕಟ್ಟೆಯ ಮೇಲೆ ಸಾಲಾಗಿ ನಿಂತರೆಂದರೆ ರುದ್ರ ರಮಣೀಯ ನೋಟವೇ ತೆರೆದುಕೊಳ್ಳುತ್ತದೆ. ಹಿರಿಯ ಗೊರವ ಕಲಾವಿದ ಕೊಳಲು ಊದಿ ತನ್ನ ಡಮರುಗವನ್ನು ಢಗ ಢಗ ಢಗ ಢಗ ಎಂದು ಸದ್ದು ಮಾಡುತ್ತಿದ್ದಂತೆಯೇ ಉಳಿದ ಎಲ್ಲಾ ಕಲಾವಿದರು ಒಟ್ಟಾಗಿ ತಮ್ಮ ಡಮರುಗಗಳನ್ನು ಬಾರಿಸಲು ಆರಂಭಿಸುತ್ತಾರೆ. ಆ ಡಮರುಗಳ ಸದ್ದಿಗೆ ತಕ್ಕಂತೆ ಮುಂದ್ಹೆಜ್ಜೆ, ಹಿಂದ್ಹೆಜ್ಜೆ ಹಾಕುತ್ತಾ ಕುಣಿಯಲಾರಂಭಿಸುತ್ತಾರೆ. ಮಧ್ಯೆ ಮಧ್ಯೆ ತಮ್ಮ ತಲೆಗೆ ಧರಿಸಿದ ಕರಡಿ ಕೂದಲಿನ ಕುಲಾವಿಯನ್ನು ತೆಗೆದು ಮುಂದೆ ಚಾಚಿದಂತೆ ಮಾಡಿ ಮತ್ತೆ ತಲೆಗೆ ಧರಿಸುತ್ತಾರೆ. ಹಿಂದೆ ಮುಂದೆ ತಿರುಗಿ ಗಿರಕಿ ಹೊಡೆಯುವುದು, ಮಂಡಲಾಕಾರದಲ್ಲಿ ಸುತ್ತುವುದು, ತಲೆಯ ಕರಡಿ ಟೊಪ್ಪಿಗೆಗಳನ್ನು ತೆಗೆದು ಮಧ್ಯದಲ್ಲಿರಿಸಿ ಅದರ ಸುತ್ತಲೂ ಕುಣಿಯುತ್ತಾರೆ.
 
ಗೊರವರ ಕುಣಿತಕ್ಕೆ ಕೊಳಲು, ಡಮರುಗಗಳನ್ನು ಬಿಟ್ಟರೆ ಮತ್ತಾವ ಹಿಮ್ಮೇಳದ ವಾದ್ಯಗಳಿಲ್ಲ. ಡಮರುಗದ ವಿಶಿಷ್ಟವಾದ ತಾಳಲಯಗಳೊಂದಿಗೆ ಕೊಳಲಿನ ನಾದವು ಬೆರೆತು ಅದರ ಗತಿಗೆ ಅನುಗುಣವಾಗಿ ವಿವಿಧ ಭಾವಭಂಗಿಗಳಲ್ಲಿ ಕುಣಿಯುತ್ತಾರೆ. ಕುಣಿತವು ತೀವ್ರತೆಯನ್ನು ಪಡೆದುಕೊಂಡಾಗ ಅವರ ಉಡಿಗೆ ತೊಡಿಗೆಯ ರೌದ್ರತೆಯೊಂದಿಗೆ ಕುಣಿತವೂ ಸ್ಪರ್ಧಿಸುತ್ತಿದೆಯೇನೋ ಎಂಬಂತೆ ನೋಡುವವರಿಗೆ ಭಾಸವಾಗುತ್ತದೆ. ಗೊರವರ ಕುಣಿತವು ಸಾಂಪ್ರದಾಯಿಕ ಸಮಾರಂಭಗಳಲ್ಲಿ ಮತ್ತು ಹಬ್ಬ ಜಾತ್ರೆ ಉತ್ಸವಗಳಂತಹ ಸಾರ್ವಜನಿಕ ಸಮಾರಂಭಗಳಲ್ಲಿಯೂ ಪ್ರದರ್ಶಿತವಾಗುತ್ತದೆ. ಮೈಲಾರಲಿಂಗನ ಒಕ್ಕಲು ಮನೆಗಳವರು ವಿಶೇಷ ಸಂದರ್ಭಗಳಲ್ಲಿ ಮಣೇವು ಸೇವೆಯನ್ನು ಆಚರಿಸುತ್ತಾರೆ. ಈ ಮಣೇವು ಸೇವೆಗೆ ಗೊರವರನ್ನು ಆಹ್ವಾನಿಸುತ್ತಾರೆ.
 
ಶುಭ್ರವಾದ ಕರಿಯ ಕಂಬಳಿಯ ಮೇಲೆ ದೋಣಿಗಳನ್ನಿಟ್ಟು ಅದರಲ್ಲಿ ಬೆಲ್ಲ, ಕಾಯಿಚೂರು, ಕೊಬ್ಬರಿ, ಬಾಳೆಹಣ್ಣು , ಕಜ್ಜಾಯದ ಚೂರು, ಪುರಿ, ಹಲಸಿನ ತೊಳೆ ಇವೆಲ್ಲವನ್ನು ಬೆರೆಸಿ ರಸಾಯನವನ್ನು ತಯಾರಿಸಿ ಡೋಣಿಗಳಲ್ಲಿ ತುಂಬಿಡುತ್ತಾರೆ. ಗೊರವರು ತಮ್ಮ ಸಾಂಪ್ರದಾಯಿಕ ವೇಷ ಭೂಷಣಗಳೊಂದಿಗೆ ಕೊಳಲು, ಡಮರುಗ ಹಿಡಿದು ಕರಿಯ ಕಂಬಳಿಯ ಸುತ್ತ ಲಯಬದ್ದವಾಗಿ ಕುಣಿಯುತ್ತಾರೆ. ಕಾಲಿನ ಗೆಜ್ಜೆಯ ನಿಯತವಾದ ಸದ್ದಿಗೂ, ಕೈಯಲ್ಲಿನ ಡಮರುಗದ ಗಂಭೀರ ನಾದಕ್ಕೂ ಕೊಳಲಿನ ಸುಮಧುರನಾದಕ್ಕೂ ಬಾಗುತ್ತಾ, ಬಳಕುತ್ತ, ಕುಪ್ಪಳಿಸುತ್ತ, ಏಳುತ್ತ ಕಂಬಳಿಯ ಮೇಲಿರಿಸಿದ ಡೋಣಿಗಳಲ್ಲಿನ ಹಾಗೂ ರಸಾಯನವನ್ನು ತಿನ್ನುವ ಭಂಗಿಯನ್ನು ಪ್ರದರ್ಶಿಸಿರುತ್ತಾರೆ. ಇದನ್ನು ಮಣೇವು ಕುಣಿತ ಎಂದು ಕರೆಯುತ್ತಾರೆ.
 
ಗೊರವ ಕಲಾವಿದರು ಕರ್ನಾಟಕದ ಅತ್ಯಂತ ಉತ್ಕೃಷ್ಟ ವೃತ್ತಿಗಾಯಕರು. ಹತ್ತಾರು ಖಂಡ ಕಾವ್ಯಗಳನ್ನು ಹಾಡುತ್ತಾರೆ. ಮೈಲಾರಲಿಂಗನ ಮಹಿಮೆ, ಪವಾಡ, ಪ್ರಣಯ ಪ್ರಸಂಗಗಳನ್ನು ಒಳಗೊಂಡ ಮೈಲಾರಲಿಂಗನ ಕಾವ್ಯ ಗೊರವರ ಬಳುವಳಿ. ಬೀದರ್, ಧಾರವಾಡ, ಗುಲರ್ಗಾ, ಬಳ್ಳಾರಿ, ಬೆಳಗಾವಿ, ಶಿವಮೊಗ್ಗ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಾಮರಾಜನಗರ ಇಲ್ಲೆಲ್ಲಾ ಮೈಲಾರಲಿಂಗನ ಕ್ಷೇತ್ರಗಳಿವೆ; ಗೊರವರೂ ಇದ್ದಾರೆ. 
 
 
 

ಕರ್ನಾಟಕದ ಮೀಡಿಯಾ ಮೇನಿಯಾ-ಭಾಗ ೧

 
ಇದೊಂದು ಸುಮ್ಮನೆ ಓದಿಕೊಂಡು ನಕ್ಕು ಮರೆತುಬಿಡುವಂತಹ ಹಾಸ್ಯ ಪ್ರಸಂಗಗಳ ಬರಹ. ಇದನ್ನು ಗಂಭೀರವಾಗಿ ಪರಿಗಣಿಸಿ ತಲೆನೋವು ತಂದುಕೊಂಡರೆ ಅದಕ್ಕೆ ನಾವು ಹೊಣೆಗಾರರಲ್ಲ ಎಂದು ಹೇಳುತ್ತಾ......
ನಾವಿಂದು ನೂರಾರು ಟಿವಿ ಚಾನಲ್ಲುಗಳನ್ನು  ನೋಡಬಹುದಾಗಿದೆ. ಇತ್ತೀಚೆಗೆ ಅದರಲ್ಲಿ ಇತರೆ ಮನೋರಂಜನೆಯ ಚಾನಲ್ಲುಗಳಿಗಿಂತಲೂ ಜನರಿಗೆ ಅತ್ಯಂತ ಹೆಚ್ಚಿನ ಮನೋರಂಜನೆ ನೀಡುತ್ತಿರುವುದು ನ್ಯೂಸ್ ಚಾನಲ್ಲುಗಳು. ಇತರೆ ಭಾಷೆಗಳಲ್ಲಿರುವಂತೆಯೇ ಕನ್ನಡದಲ್ಲಿಯೂ ಸುದ್ದಿಗೆಂದೇ ಹಲವಾರು ಚಾನಲ್ಲುಗಳಿವೆ. ನಮ್ಮ ಕನ್ನಡದಲ್ಲಿರುವ ಒಂದಷ್ಟು ನ್ಯೂಸ್ ಚಾನಲ್ಲುಗಳಲ್ಲಿನ ಕಾರ್ಯ ವೈಖರಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಇದನ್ನು ನಂಬುವುದು ಬಿಡುವುದು ಅವರವರಿಗೆ ಬಿಟ್ಟದ್ದು.
 
ಟಿವಿ ೬೯, ಕರ್ಣ ಕಠೋರ ಟಿವಿ, ಊದುವ ಟಿವಿ, ಗಂಟೆ ಟಿವಿ, ಆ ಟಿವಿ-ಗಳು ಸದ್ಯಕ್ಕೆ ಕರ್ನಾಟಕದಲ್ಲಿ ಚಾಲ್ತಿಯಲ್ಲಿವೆ. ಇನ್ನೂ ಹಲವಾರು ನ್ಯೂಸ್ ಚಾನಲ್ಲುಗಳು ಮನೋರಂಜನೆಯ ಮಹಾಪೂರದಿಂದ ಕನ್ನಡಿಗರ ಮನತಣಿಸಲು ಸಧ್ಯದಲ್ಲೇ ಪ್ರಾರಂಭಗೊಳ್ಳುವ ಸೂಚನೆಗಳು ದಟ್ಟವಾಗಿದೆ. ಈ ಟಿ ವಿ ಚಾನಲ್ಲುಗಳು ಭಾರೀ ಪೈಪೋಟಿಯಿಂದ ಬ್ರೇಕಿಂಗ್ ನ್ಯೂಸ್, ಎಕ್ಸ್ ಕ್ಲೂಸಿವ್ ಗಳನ್ನು ನೀಡತೊಡಗಿವೆ. ಅವುಗಳಲ್ಲಿ ಬಿತ್ತರವಾಗುವ ಗಂಭೀರ ಸುದ್ದಿಗಳು, ರಾಜಕೀಯ ಚಕಮಕಿ, ಬ್ರೇಕಿಂಗ್ ಸುದ್ದಿಗಳು, ಪ್ರಾಯೋಜಿತ ಪಾನಲ್ ಡಿಸ್ಕಷನ್ ಗಳು ಹೇಗಿರುತ್ತವೆಂಬುದರ ಬಗೆಗಿನ ವಿಡಂಬನಾತ್ಮಕ ಬರಹವಿದು.
 
ಟಿವಿ ೬೯ ಸಧ್ಯಕ್ಕೆ ಹೆಚ್ಚು ಚಾಲ್ತಿಯಲ್ಲಿರುವ ನ್ಯೂಸ್ ಚಾನಲ್ ಎಂದು ತನ್ನನ್ನು ಕರೆದುಕೊಳ್ಳುತ್ತಿದೆ. ಇದರಲ್ಲಿ ಬೆಳಿಗ್ಗೆ ವಿಲನ್ ನಂತೆ ಕಾಣಿಸಿಕೊಳ್ಳುವ ವ್ಯಕ್ಯಿ ಸಂಜೆ ಹೊತ್ತಿಗೆ ನಾಯಕನಂತೆ ಕಂಗೊಳಿಸುತ್ತಾನೆ. ಈ ಟಿವಿ ೬೯ ಯಾವಾಗ ಆರು ಅಗಿರುತ್ತದೆ ಯಾವಾಗ ಒಂಭತ್ತು ಆಗಿರುತ್ತದೆ ಹೇಳಲಾಗುವುದಿಲ್ಲ! ಸಣ್ಣದಿರಲಿ, ದೊಡ್ಡದಿರಲಿ ಬೇಗನೇ ಜನರಿಗೆ ಮುಟ್ಟಿಸಬೇಕೆಂಬ ಆತುರದಲ್ಲಿಯೇ ಈ ಟಿವಿ ಬ್ರೇಕಿಂಗ್ ನ್ಯೂಸ್ ಗಳನ್ನು ನೀಡುವ ಪರಿ ಹೇಗಿರುತ್ತದೆಂದರೆ...
ಸುದ್ದಿ ನಿರೂಪಕಿ :(ವಾರ್ತೆಯನ್ನು ಓದುತ್ತಾ) "ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದಾಗಿ ಮನೆ ಮಠವನ್ನೆಲ್ಲಾ ಕಳೆದುಕೊಂಡು ಬೀದಿ ಪಾಲಾಗಿರುವ ರೈತರ ಬವಣೆಯನ್ನು ಈ ವಿಶೇಷ ಕಾರ್ಯಕ್ರಮದ ಮೂಲಕ ನಾವೀಗ ನಿಮ್ಮ ಮುಂದಿಡುತ್ತಿದ್ದೇವೆ, ನಮ್ಮ ವರದಿಗಾರ ಪ್ರವಾಹ ಪೀಡಿತ ರೈತರೊಂದಿಗೆ ನಡೆಸುವ ನೇರ ಸಂದರ್ಶನ ಇದೋ ನಿಮಗಾಗಿ ಟಿ ವಿ ಸಿಕ್ಸ್ಟಿ ನೈನ್ ನಲ್ಲಿ ಮಾತ್ರ"...
 
ರೈತನೊಬ್ಬ ದುಃಖತಪ್ತನಾಗಿ ಪ್ರವಾಹ ಪೀಡಿತನಾದ ತನ್ನ ನೆರವಿಗೆ ಸರ್ಕಾರ ಬಾರದಿದ್ದರಿಂದ ತನ್ನಿಬ್ಬರು ಎಳೇ ವಯಸ್ಸಿನ ಮಕ್ಕಳು ಚಳಿ ಮಳೆಯನ್ನು ತಾಳಲಾರದೇ ಸತ್ತ ಹೃದಯ ವಿದ್ರಾವಕ ಘಟನೆಯ ಬಗ್ಗೆ ಮಾತನಾಡಲು ಆರಂಭಿಸತೊಡಗುತ್ತಾನೆ. ಆ  ಹೊತ್ತಿನಲ್ಲೇ ಟಿವಿ ಪರದೆಯ ಮೇಲೆ ಬ್ರೇಕಿಂಗ್ ನ್ಯೂಸ್ ಒಂದು ಕಾಣಿಸಿಕೊಳ್ಳುತ್ತದೆ. ರೈತನ ಮುಖ ಮರೆಯಾಗಿ -ಹುಚ್ಚು ನಾಯಿಯನ್ನು ಅಟ್ಟಾಡಿಸಿಕೊಂಡು ಕೊಂದ ಜನರು- ಎಂಬ ಸುದ್ದಿ ಪ್ರತ್ಯಕ್ಷವಾಗುತ್ತದೆ. ಕೂಡಲೇ ವಾರ್ತಾ ನಿರೂಪಕಿ ಮಧ್ಯೆ ಪ್ರವೇಶಿಸಿ "ಈಗ ಬಂದ ಸುದ್ದಿಯೆಂದರೆ ಬೆಂಗಳೂರಿನಲ್ಲಿ ಜನರನ್ನು ಕಚ್ಚಲು ಹೋಗುತ್ತಿದ್ದ ಹುಚ್ಚು ನಾಯಿಯೊಂದನ್ನು ಜನರೇ ಅಟ್ಟಾಡಿಸಿಕೊಂಡು ಕೊಂದ ಘಟನೆ ನಡೆದಿದೆ. ಅದು ನಿಜವಾಗಲೂ ಹುಚ್ಚು ನಾಯಿಯಾಗಿತ್ತೋ, ಅಥವಾ ತಲೆಕೆಟ್ಟ ಜನರು ಅದನ್ನು ಕೊಂದು ಹಾಕಿದರೋ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಾವೀಗ ನಾಯಿಯನ್ನು ಕೊಂದು ಹಾಕಿರುವ ಸ್ಥಳದಲ್ಲಿಯೇ ಇರುವ ನಮ್ಮ ಪ್ರತಿನಿಧಿಯನ್ನು ನೇರವಾಗಿ ಸಂಪರ್ಕಿಸಲಿದ್ದೇವೆ"...ಎಂದು ಶುರು ಮಾಡುತ್ತಾಳೆ.
 
ಪ್ರವಾಹದಿಂದಾಗಿ ಸಾವಿರಾರು ರೈತರು ಅನುಭವಿಸುತ್ತಿರುವ ಕಷ್ಟವನ್ನು ಹೇಳಿಕೊಳ್ಳಲು ಸಿದ್ದನಾಗಿದ್ದ ರೈತನ ಸಂದರ್ಶನ ಹುಚ್ಚು ನಾಯಿ ಸತ್ತ ಬ್ರೇಕಿಂಗ್ ಸುದ್ದಿಯಿಂದಾಗಿ ಅಲ್ಲಿಗೇ ಕಟ್ ಆಗುತ್ತದೆ. 
ಹುಚ್ಚು ನಾಯಿ ಸತ್ತ ಸ್ಥಳದಲ್ಲಿದ್ದ ವರದಿಗಾರ ಸತ್ತ ನಾಯಿಯ ಶವವನ್ನು ತೋರಿಸುತ್ತಾ ಅದರ ಬಗ್ಗೆ ವಿವರಣೆ ನೀಡಲಾರಂಭಿಸುತ್ತಾನೆ.
ವರದಿಗಾರ: "ನೋಡಿ ಮೇಡಂ, ಈಗ ತಾನೇ ಈ ನಾಯಿ ಸತ್ತು ಬಿದ್ದಿದೆ. ನಾಯಿಯನ್ನು ಜನರು ಅಟ್ಟಾಡಿಸಿಕೊಂಡು  ಹೊಡೆಯುವ ಸುದ್ದಿ ನಮ್ಮ ಕಿವಿಗೆ ಬಿದ್ದ ತಕ್ಷಣ ನಾವು ಸ್ಥಳಕ್ಕೆ ಧಾವಿಸಿದೆವು. ಅಷ್ಟರಲ್ಲಿ ಜನ ಈ ನಾಯಿಯನ್ನು ಕೊಂದು ಹಾಕಿದ್ದರಿಂದ ನಮಗೆ ಅದರ ನೇರ ದೃಶ್ಯವನ್ನು ನಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಲಿಲ್ಲ, ಅದಕ್ಕಾಗಿ ನಾವು ನಮ್ಮ ವೀಕ್ಷಕರ ಕ್ಷಮೆ ಯಾಚಿಸುತ್ತೇವೆ, ನಮಗೆ ಮಾಹಿತಿ ನೀಡಿದ ವ್ಯಕ್ತಿ ನಮಗೆ ಸರಿಯಾಗಿ ವಿಳಾಸ ತಿಳಿಸುವಲ್ಲಿ ವಿಫಲನಾದುದರಿಂದ ನಾವು ಸರಿಯಾದ ಸಮಯಕ್ಕೆ ಈ ಜಾಗವನ್ನು ತಲುಪಲಾಗಲಿಲ್ಲ... ಇಲ್ಲಿ ನಮಗಿರುವ ಅನುಮಾನವೆಂದರೆ ಈ ನಾಯಿಗೆ ನಿಜವಾಯೂ ಹುಚ್ಚು ಹಿಡಿದಿತ್ತೇ ಎಂಬುದು, ನಾವು ಅದರ ಬಗ್ಗೆ ಇಲ್ಲಿಯ ಜನರನ್ನು ವಿಚಾರಿಸಿದಾಗ ಅವರು ಭಿನ್ನವಾದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಾರೆ...."
 
ಆತನ ಮಾತನ್ನು ಅರ್ಧದಲ್ಲಿಯೇ ತುಂಡರಿಸಿದ ನಿರೂಪಕಿ: "ಅಲ್ಲ ಇವರೇ, ನಾಯಿಗೆ ನಿಜವಾದ ಹುಚ್ಚು ಹಿಡಿದಿತ್ತೋ ಅಥವಾ ಆ ನಾಯಿಯ ಬಗ್ಗೆ ಯಾರಿಗಾದರೂ ದ್ವೇಷವಿತ್ತೋ ಅಂತ ನನ್ನ ಪ್ರಶ್ನೆ. ಯಾಕೆಂದರೆ ಅಲ್ಲಿನ ಜನರು ಭಿನ್ನವಾದ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ ಎಂದು ಹೇಳುತ್ತಿದ್ದೀರಿ...ಯಾತಕ್ಕಾಗಿ ಈ ಭಿನ್ನ ಅಭಿಪ್ರಾಯ ಎಂಬುದೇನಾದರೂ ನಿಮ್ಮ ಗಮನಕ್ಕೆ ಬಂದಿದೆಯಾ? ಆ ನಾಯಿ ಯಾವ ಜಾತಿಯದ್ದು? ಯಾವ ಬಣ್ಣದ್ದು? ಅದು ಸಾಕಿದ ನಾಯೋ ಅಥವಾ ಬೀದಿ ನಾಯಿಯೋ? ಅದರ ಬಗ್ಗೆ ಸಂಫೂರ್ಣ ಮಾಹಿತಿ ನೀಡ್ತೀರಾ?" ಎಂದು ಕೇಳಿದೊಡನೇ...
 
ಆ ವರದಿಗಾರ: "ಮೇಡಂ, ನಾವು ಈ ನಾಯಿಯ ಬಗೆಗಿನ ಪೂರ್ವಾಪರಗಳನ್ನು ತಿಳಿದುಕೊಳ್ಳಲು ಇಲ್ಲಿನ ಜನರನ್ನು ಕೇಳಿದಾಗ ಅವರು ’ಹೋಗ್ರೀ ಹುಚ್ಚು ನಾಯಿ ಬಗ್ಗೆ ಕೇಳ್ತೀರಲ್ರೀ’ ಎಂಬ ಉಡಾಫ಼ೆಯಿಂದ ಮಾತನಾಡುತ್ತಿದ್ದಾರೆ, ಇದರ ಬಗ್ಗೆ ತಲೆಕೆಡಿಸಿಕೊಂಡ ನಾವು ಮಾನವ ಹಕ್ಕು ಆಯೋಗದ ಗಮನಕ್ಕೆ ತಂದಾಗ ಅಲ್ಲಿದ್ದವರು ’ನೋಡ್ರೀ ಮನುಷ್ಯರ ಮೇಲೆ ದೌರ್ಜನ್ಯ ನಡೆದಲ್ಲಿ ಸ್ಪಂದಿಸುವುದು ನಮ್ಮ ಕೆಲಸ. ನಾಯಿ ನರಿಗಳ ಮೇಲೆ ನಡೆದ ಹಲ್ಲೆಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಪ್ರಾಣಿ ದಯಾ ಸಂಘದವರಿದ್ದಾರಲ್ಲಾ ಅವರಿಗೆ ಹೇಳಿ’ ಅಂದುಬಿಟ್ಟರು ಮೇಡಂ. ಈ ಬಗ್ಗೆ ನಾವು ಪ್ರಾಣಿ ದಯಾ ಸಂಘದವರನ್ನೂ ಸಂಪರ್ಕಿಸಿದೆವು ಮೇಡಂ...’ಬದುಕಿರುವ ಪ್ರಾಣಿಗಳ ಬಗ್ಗೆಯಷ್ಟೇ ನಮ್ಮ ಗಮನ. ಸತ್ತಿದ್ದರೆ ಕಾರ್ಪೋರೇಷನ್ನಿನವರಿಗೆ ಹೇಳಿ. ಅವರು ಎತ್ತಿ ಹಾಕ್ತರೆ ಅಂತ ಅವ್ರೂ ಉಡಾಫ಼ೆಯಿಂದ ಮಾತನಾಡಿ ಬಿಟ್ರು ಮೇಡಂ, ನಮಗೆ ಮುಂದೇನು ಮಾಡಬೇಕೆಂದು ದಿಕ್ಕು ತೋಚದೇ ಸತ್ತ ನಾಯಿಯ ಶವದ ಮುಂದೆ ನಿಂತಿದ್ದೇವೆ ಮೇಡಮ್"...
 
ಕೂಡಲೇ ಸುದ್ದಿ ನಿರೂಪಕಿ: "ನೊಡೀ ಇವರೇ, ನೀವು ಅಲ್ಲೇ ಇರಿ. ಜಾಗ ಬಿಟ್ಟು ಕದಲಬೇಡಿ, ನಾವೀಗ ಇದರ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡುವ ಸಲುವಾಗಿ ನಮ್ಮ ಸ್ಟುಡಿಯೋದಲ್ಲಿರುವ ಮುಖ್ಯ ವರದಿಗಾರರನ್ನು ಸಂಪರ್ಕಿಸಲಿದ್ದೇವೆ" ಅಂತ ಅಲ್ಲಿ ಕುಳಿತಿದ್ದ ಗಡ್ಡಧಾರಿಯೊಬ್ಬರನ್ನು ಪ್ರಶ್ನೆ ಕೇಳುತ್ತಾಳೆ. "ನೋಡೀ ಇವ್ರೇ, ಒಂದು ನಾಯಿಯನ್ನು ಜನ ಅಟ್ಟಾಡಿಸಿ ಕೊಂದರೂ ಸಾರ್ವಜನಿಕರೂ ಸೇರಿದಂತೆ ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ, ಮಾನವ ಹಕ್ಕು ಆಯೋಗದವರು ನಾಯಿ ನರಿಗಳು ನಮಗೆ ಸಂಬಂದಿಸಿಲ್ಲ ಅಂತಾರಂತೆ ಇನ್ನು ಪ್ರಾಣಿ ದಯಾ ಸಂಘದವರು ಸತ್ತ ಪ್ರಾಣಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಅಂತಾರಂತೆ, ಇನ್ನು ಕಾರ್ಪೋರೇಷನ್ನಿನವರಂತೂ ಬಿಡ್ರೀ ದಿನಕ್ಕೆ ನೂರಾರೂ ಹುಚ್ಚು ನಾಯಿಗಳು ಸಾಯ್ತವೆ ಅಂತಾರಂತೆ. ಇದರ ಹೊಣೆ ಯಾರು ಹೊರಬೇಕು ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?"
 
ಅದಕ್ಕೆ ಸ್ಟುಡಿಯೊದಲ್ಲಿರುವ ಆ ವರದಿಗಾರ: "ಮೇಡಂ, ಇದು ಬಗೆಹರಿಯದ ಪ್ರಶ್ನೆಯಾಗಿದೆ, ಆ ನಾಯಿ ಹಲವಾರು ಜನರನ್ನು ಕಚ್ಚಿತ್ತು ಎಂಬ ಮಾಹಿತಿ ನಮಗೀಗ ಲಭ್ಯವಾಗಿದೆ. ಜನರನ್ನು ಕಚ್ಚಿದ ಮಾತ್ರಕ್ಕೆ ಅದನ್ನು ಹಾಗೆ ದಾರುಣವಾಗಿ ಚಚ್ಚಿ  ಹಾಕಬೇಕೆಂದು ಕಾನೂನಿಲ್ಲ, ಆ ರೀತಿ ಅದನ್ನು ಕೊಂದು ಹಾಕಿರುವುದು ನನ್ನ ದೃಷ್ಟಿಯಲ್ಲಿ ಆಕ್ಷಮ್ಯ ಅಪರಾಧ ಮೇಡಂ"...
 
ಅಲ್ಲಿ ದೂರದ ಉತ್ತರ ಕರ್ನಾಟಕದಲ್ಲಿ ತನ್ನ ಕರುಣಾಜನಕ ಕಥೆಯನ್ನು ಟಿ ವಿ ಯವರ ಮುಂದೆ ಹೇಳಿಕೊಳ್ಳಲು ನಿಂತಿದ್ದ ರೈತ "ಇದ್ಯಾಕ್ ಸ್ವಾಮೀ, ಸುಮ್ಮನೆ ನಿಂತ್ರೀ? ಮಾತಾಡ್ಲೋ, ಬೇಡ್ವೋ, ಅಂತ ಅಲ್ಲಿದ್ದ ವರದಿಗಾರನಿಗೆ ಕೇಳಿದ.
ಕೂಡಲೇ ಆ ವರದಿಗಾರ: "ಸುಮ್ನಿರಯ್ಯಾ! ಈಗ ಬ್ರೇಕಿಂಗ್ ನ್ಯೂಸ್ ಹೋಗ್ತಾಯಿದೆ! ನಮ್ಮ ಚಾನೆಲ್ ದೇ ಫಸ್ಟ್ ನ್ಯೂಸು. ಬೆಂಗಳೂರಲ್ಲಿ ಜನ ಹುಚ್ಚು ನಾಯಿಯನ್ನು ಕೊಂದು ಹಾಕಿದ್ದಾರೆ, ಅದರ ಬಗ್ಗೆ ನಮ್ಮ ಚಾನಲ್ ನವರೆಲ್ಲಾ ಬ್ಯುಸಿಯಾಗಿದ್ದಾರೆ, ಮೊದಲು ಅದು ಮುಗೀಲಿ ಆಮೇಲೆ ನಿನ್ನ ಕಥೆ..." ಅನ್ನುತ್ತಾನೆ. ಅದಕ್ಕೆ ಆ ರೈತ "ಅಲ್ಲಾ ಸ್ವಾಮಿ ಹುಚ್ಚು ನಾಯಿ ಸಾಯದೂ ಒಂದು ಸುದ್ದಿಯಾ?? ಹೊಟ್ಟೆಗ್ ಹಿಟ್ಟಿಲ್ದೆ, ಚಳಿ ತಾಳ್ದೆ, ಕಾಯಿಲೆ ಬಿದ್ದು ನನ್ನ ಎರಡೂ ಮಕ್ಳೂ ತೀರ್ಕಂಡವೆ. ನನ್ ಕಥೆ ಕೇಳ್ದೆ ನೀವು ಹುಚ್ಚು ನಾಯಿ ಕಥೆ ಕೇಳ್ಕಂಡಿದ್ದಿರಲ್ಲಾ"... ಎಂದು ಗೋಳಾಡುತ್ತಾ ಎದ್ದು ಹೋದ.
 
ಛಲ ಬಿಡದ ತ್ರಿವಿಕ್ರಮಿಯಂತೆ ಸುದ್ದಿ ನಿರೂಪಕಿ: "ನಾವೀಗ ನಾಯಿ ಸತ್ತ ಜಾಗದಲ್ಲಿರುವ ನಮ್ಮ ವರದಿಗಾರರನ್ನು ಭೇಟಿಯಾಗೋಣ, ನೋಡೀ ಇವರೇ, ನೀವು ಎಷ್ಟು ಹೊತ್ತಿನಿಂದ ಆ ಜಾಗದಲ್ಲಿಯೇ ಇದ್ದೀರಿ, ಸತ್ತ ನಾಯಿಯ ವಾರಸುದಾರರು ಯಾರಾದರೂ ಅಲ್ಲಿಗೆ ಬಂದರಾ, ಆ ನಾಯಿಯ ಯಾವ ಯಾವ ಜಾಗಕ್ಕೆ ಏಟು ಬಿದ್ದಿದೆ, ಅದರ ಪೋಸ್ಟ್ ಮಾರ್ಟಮ್ ಅನ್ನು ಮಾಡುತ್ತಾರೆಯೋ ಹೇಗೆ?"
 
ನಾಯಿ ಸತ್ತ ಜಾಗದಲ್ಲಿದ್ದ ವರದಿಗಾರ: "ಮೇಡಂ ಇಲ್ಲಿ ಯಾರೂ ಸ್ಥಳದಲ್ಲಿಲ್ಲ, ನಾನು ಮತ್ತು ನಮ್ಮ ಕ್ಯಾಮರಾ ಮೆನ್ ಇಬ್ಬರೇ ಇರುವುದು, ಈ ನಾಯಿ ನನ್ನದೆಂದು ಹೇಳಿಕೊಳ್ಳಲು ಯಾರೂ ಇಲ್ಲಿಗೆ ಬಂದಿಲ್ಲ, ಈ ಹುಚ್ಚು ನಾಯಿಯು ಹಲವಾರು ಜನರಿಗೆ ಕಚ್ಚಿರುವುದರಿಂದ ಈ ನಾಯಿಯನ್ನು ತನ್ನದೆಂದು ಹೇಳಿಕೊಂಡಲ್ಲಿ ಈ ನಾಯಿಗಾದ ಗತಿಯೇ ಅವರಿಗೂ ಆಗುವ ಸಂಭವವಿರುವುದರಿಂದ ಯಾರೂ ಬಂದಿಲ್ಲ. ಇನ್ನು ಈ ನಾಯಿಯನ್ನು ಪೋಸ್ಟ್ ಮಾರ್ಟಮ್ ಮಾಡುವ ಬಗ್ಗೆ ಕೇಳಿದ್ದೀರಿ, ಅದರ ಬಗ್ಗೆ ನಾವೇನಾದರೂ ಜನರಿಗೆ ಒತ್ತಾಯಿಸಿದಲ್ಲಿ ನಾಯಿಗೆ ಬಿದ್ದಂತೆ ನಮಗೆಲ್ಲಿ ಏಟು ಬೀಳುವುದೋ ಎಂಬ ಆತಂಕದಿಂದ ನಾವದರ ಬಗ್ಗೆ ಯಾರನ್ನೂ ಕೇಳಲಿಲ್ಲ. ಇನ್ನು ಸ್ವಲ್ಪ ಹೊತ್ತು ನಾವಿಲ್ಲಿಯೇ ಇದ್ದು ಈ ನಾಯಿಯ ಬಗ್ಗೆಯೇ ವರದಿ ಮಾಡುತ್ತಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತದೋ ನಮಗೇ ಗೊತ್ತಾಗುತ್ತಿಲ್ಲ ಮೇಡಂ..."
 
ಕೂಡಲೇ ನಿರೂಪಕಿ: "ನೋಡಿ ಇವರೇ, ಕೂಡಲೇ ನೀವು ಆ ಜಾಗ ಖಾಲಿ ಮಾಡಿ, ನಾಯಿ ಕಥೆ ಹಾಳಾಗಲಿ, ಅಲ್ಲಿ ನಮ್ಮ ಬೆಲೆ ಬಾಳುವ ಕ್ಯಾಮರಾಗಳು, ನೇರ ಪ್ರಸಾರದ ಸಲಕರಣೆಗಳಿರುವುದರಿಂದ ನೀವು ಅವುಗಳಿಗೆ ಯಾವುದೇ ಜಖಂ ಆಗದಂತೆ ಹುಶಾರಾಗಿ ಬಂದು ಬಿಡಿ" ಎಂದು ಹೇಳಿ ವೀಕ್ಷಕರತ್ತ ತಿರುಗಿ "ಪ್ರಿಯ ವೀಕ್ಷಕರೇ... ಸಮಯ ಮುಗಿಯುತ್ತಾ ಬಂದಿದೆ... ನಮ್ಮ ಇಂದಿನ ವಿಶೇಷ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ರೈತರ ಬವಣೆಯನ್ನು ನೇರ ಪ್ರಸಾರದ ಮೂಲಕ ಅಲ್ಲಿನ ರೈತರೇ ನಿಮ್ಮ ಮುಂದಿಟ್ಟಿದ್ದಾರೆ, ಕಾರ್ಯಕ್ರಮ ವೀಕ್ಷಿಸಿದ್ದಕ್ಕೆ ತಮಗೆ ಧನ್ಯವಾದಗಳು, ಕ್ಷಣ ಕ್ಷಣದ ಸುದ್ದಿಗಾಗಿ ನೋಡ್ತಾಯಿರಿ ಟಿ ವಿ ಸಿಕ್ಸ್ಟಿ ನೈನ್"
 
ಹುಚ್ಚು ನಾಯಿ ಸತ್ತ ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ತಮ್ಮ ಬವಣೆಯನ್ನು ಹೇಳಿಕೊಳ್ಳಲಾಗದೇ ನಿರ್ಗಮಿಸಿದ ಬಡ ರೈತರ ವಿಶೇಷ ಕಾರ್ಯಕ್ರಮ ಈ ರೀತಿಯಾಗಿ ಮುಗಿದಿತ್ತೆಂಬುದನ್ನು ಹೇಳುತ್ತಾ....
ಮುಂದಿನ ಸಂಚಿಕೆಯಲ್ಲಿ ಇತರೆ ನ್ಯೂಸ್ ಚಾನಲ್ಲುಗಳ ಮತ್ತಷ್ಟು ಬಹುಗುಣ ವಿಶೇಷತೆಗಳನ್ನು ನಿಮ್ಮ ಮುಂದಿಡಲಿದ್ದೇವೆ... ಅಲ್ಲಿವರೆಗೂ ಬ್ರೇಕಿಂಗ್ ನ್ಯೂಸ್ ಗಳ ತಾಪತ್ರಯವಿಲ್ಲದೇ ಸಮಾಧಾನವಾಗಿ ಬಾಳಿ ಎಂದು ಹಾರೈಸುತ್ತಾ... 
 
 
 
 

’ಕಾವೇರಿ’ದ ಚಳುವಳಿಯಿಂದ ಅಕ್ಷರಶಃ ಹತ್ತುರಿದ ಬೆಂಗಳೂರು-ಮೈಸೂರು-ಮಂಡ್ಯ-ಜಿಲ್ಲೆಗಳು

ಬಿ ಎಸ್ ಶಿವಪ್ರಕಾಶ್
(ಜನ ಕಾನೂನಿನ ವಿರುದ್ಧ ತಿರುಗಿ ಆಕ್ರೋಶಗೊಂಡು ಜನ-ಜೀವನ ಹಾನಿ ಮಾಡುವುದನ್ನು ಸರಿ ಎಂದು ನಾವು ಕಾವೇರಿ ಚಳುವಳಿಯ ವಿವರಗಳನ್ನು ಇಲ್ಲಿ ಬರೆಯುತ್ತಿಲ್ಲ. ಕರ್ನಾಟಕದ ಜನ ತಮ್ಮ ನಾಡಿಗಾಗಿ, ರೈತರಿಗಾಗಿ, ನೀರಿಗಾಗಿ, ತಮ್ಮ ಹಿತಾಸಕ್ತಿಗೆಂದು ಒಗ್ಗಟ್ಟಾಗಿ ಒಕ್ಕೊರಲಿನಲ್ಲಿ ಪ್ರತಿಭಟಿಸಿದ ಚಳುವಳಿ ಇದೊಂದೇ. ಕಾವೇರಿಗಾಗಿ ನಡೆದ ಚಳುವಳಿಯ ನಂತರ ಬೇರೆಲ್ಲೂ ಕರ್ನಾಟಕದ ಜನ ಈ ಪರಿ ಒಗ್ಗಟ್ಟಿನಿಂದ ವರ್ತಿಸಿರಲಿಲ್ಲ. ಈಗ ಬಿಡಿ. ಬಂದ್ ಗಳು, ಚಳುವಳಿಗಳು ಕೇವಲ ಒಂದೋ ಎರಡೋ ರಾಜಕೀಯ ಪಕ್ಷಗಳ, ನಾಯಕರ ಅನುಕೂಲಗಳಿಗೆ ಮಾತ್ರ ನಡೆಯುತ್ತವೆ. ಚಳುವಳಿ ಎಂಬ ಸಂಚಲನವೇ ಅರ್ಥ ಕಳೆದುಕೊಂಡಿದೆ. ಅದೂ ಒಂದು ರೋಲ್ ಕಾಲ್ ಆಗಿದೆ. ಎಷ್ಟು ಲಕ್ಷ ಅಥವಾ ಕೋಟಿ ಸುರಿದು ಎಷ್ಟು ಜನರನ್ನು ಒಟ್ಟು ಮಾಡಿ ದೊಂಬಿ ಮಾಡಬಹುದು ಎನ್ನುವುದು ಇವತ್ತಿನ ಹೋರಾಟಗಳ ಹೊಟ್ಟೆಪಾಡು. ಹಣ ಮುಖ್ಯವಾಗುತ್ತಾ ಹೋದಂತೆ, ಹೊರಗಿನ ಹಣ ದಾಹೀ ಅಥವಾ ಹಣ ಹೂಡುವ ಶಕ್ತಿಗಳು ನಾಡೊಂದಕ್ಕೆ ನುಗ್ಗಿ ಅಲ್ಲಿನ ಜನರನ್ನು ತಮ್ಮ ನಾಡಿನ ಕುರಿತಾದ ಭಾವನೆಗಳ ನಂಟಿಂದ ದೂರ ಮಾಡಿ ಜನ-ಜೀವನ ಎರಡರ ಮಧ್ಯೆ ಅರ್ಥಮಾಡಿಕೊಳ್ಳಲಾಗದ ಕಂದಕವೊಂದನ್ನು ಸೃಷ್ಟಿಸಿಬಿಡುತ್ತವೆ. ಈಗ ಹೋರಾಟ ಮಾಡುವವರು ಎಂದರೆ ಗೂಂಡಾಗಳು ಎಂದೇ ವ್ಯಾಖ್ಯಾನ. ಅದಕ್ಕೆ ಅದರದ್ದೇ ಕಾರಣಗಳೂ ಇವೆ ಬಿಡಿ.)
 
ವಿರೋಧ ಪಕ್ಷಗಳೂ ಆಡಳಿತ ಪಕ್ಷದೊಂದಿಗೆ ಕೈಗೂಡಿಸಿದ್ದರಿಂದ ೧೯೯೧ ರ ಡಿಸಂಬರ್ ೧೨ ರಂದು ಒಕ್ಕೊರಲಿನಿಂದ ಕರಕೊಟ್ಟಿದ್ದ ರಾಜ್ಯ ಬಂದ್ ಗೆ ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇಡೀ ಕರ್ನಾಟಕ ಸ್ತಬ್ದಗೊಂಡಿತ್ತು. ಎಲ್ಲೆಡೆ ಸಂಪೂರ್ಣ ಬಂದ್ ಆಚರಿಸಿ ತಮ್ಮ ಪ್ರತಿಭಟನೆ ವ್ಯಕ್ತ ಪಡಿಸಲು ಜನತೆ ಮುಂದಾಗಿದ್ದರು. ಎಲ್ಲಾ ರಾಜಕೀಯ ಪಕ್ಷಗಳೂ, ಸಂಘ-ಸಂಸ್ಥೆಗಳೂ ಬೆಂಬಲ ಘೋಷಿಸಿದ್ದರಿಂದ ಭರ್ಜರಿಯಾಗಿ ಯಶಸ್ವಿಯಾಗತೊಡಗಿತ್ತು.
 
ಬೆಳಿಗ್ಗೆ ೯ ಗಂಟೆ ಹೊತ್ತಿಗೆಲ್ಲಾ ಎಲ್ಲೆಡೆಯಿಂದ ಬಂದ್ ಯಶಸ್ಸಿನ ಬಗ್ಗೆ ಮಾಹಿತಿಗಳು ಬರುತ್ತಿದ್ದರೆ ರಾಜಧಾನಿ ಬೆಂಗಳೂರು ನಗರ ಇದ್ದಕ್ಕಿದ್ದಂತೆ ಬೇರೆಯದೇ ಅವತಾರಕ್ಕೆ ತಿರುಗಿಬಿಟ್ಟಿತ್ತು. ೧೦ ಗಂಟೆಗೆಲ್ಲಾ ರಾಜಾಜಿನಗರಕ್ಕೆ ಸೇರಿದ ಮಂಜುನಾಥನಗರದ ಸುತ್ತಮುತ್ತ ಬೆಂಕಿಯ ಕಿಡಿಗಳು ಹೊತ್ತಿಕೊಂಡಿದ್ದವು. ತಮಿಳು ಚಿತ್ರವನ್ನು ಪ್ರದರ್ಶಿಸುತ್ತಿದ್ದ ಚಿತ್ರಮಂದಿರಕ್ಕೆ ಬೆಂಕಿ ಬಿದ್ದಿತ್ತು. ಅದರ ದಟ್ಟ ಹೊಗೆ ಸುತ್ತಮುತ್ತ ಪ್ರದೇಶಗಳಿಗೆಲ್ಲಾ ರಾಚಿದಂತೆ ಕಾಣಿಸುತಿತ್ತು. ರಾಜಾಜಿನಗರದ ದೊಡ್ಡದಾದ ಟೆಕ್ಸ್ ಟೈಲ್ಸ್ ಮಳಿಗೆಗೆ ಬೆಂಕಿ ಹಾಕಲಾಗಿತ್ತು. ತಮಿಳು ದಿನ ಪತ್ರಿಕೆಯೊಂದರ ಕಚೇರಿಗೂ ಬೆಂಕಿ ತಗುಲಿತ್ತು. ರಸ್ತೆಗಳಲ್ಲಿಯೂ ನೂರಾರು ಜನರು ಹಿಂಡು ನಿಂತು ಟೈರು, ಟ್ಯೂಬು, ಸೌದೆ, ಹುಲ್ಲು, ಕಸವನ್ನು ತುಂಬಿ ಬೆಂಕಿಯಿಟ್ಟು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದರು. ರಾಜಾಜಿನಗರದ ಪ್ರಖ್ಯಾತ ಸ್ಕೂಲೊಂದರ ಮೇಲೆ ಧಾಳಿ ನಡೆದಿತ್ತು. ಮಹಾಕವಿ ಕುವೆಂಪು ರಸ್ತೆಯಲ್ಲಿಯೂ ಕೆಲವಾರು ಅಂಗಡಿ ಮುಂಗಟ್ಟುಗಳಿಗೆ ಬೆಂಕಿಯಿಡಲಾಗಿತ್ತು. ಬಿಸಿಲೇರುತ್ತಿದ್ದಂತೆಯೇ ರಾಜಾಜಿನಗರದ ಸುತ್ತಮುತ್ತಲಿದ್ದ ಪ್ರಕಾಶನಗರ, ಗಾಯಿತ್ರಿನಗರ, ಸುಬ್ರಮಣ್ಯನಗರ, ಮಂಜುನಾಥನಗರ, ಮಾಗಡಿರಸ್ತೆ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಕಮಲಾನಗರ, ಪೀಣ್ಯ, ಲಗ್ಗೆರೆ, ಮಹಾಲಕ್ಷ್ಮಿಪುರಂ ಮುಂತಾದ ಪ್ರದೇಶಗಳು ಅಕ್ಷರಶಃ ಬೆಂಕಿಯುಂಡೆಯಂತಾಗಿದ್ದವು. ಬಸವೇಶ್ವರನಗರ, ರಾಜಾಜಿನಗರ ಅಂಚೆ ಕಚೇರಿಗಳಿಗೆ ಬೆಂಕಿ ತಗುಲಿಸುವ ಪ್ರಯತ್ನಗಳು ನಡೆದಿದ್ದವು.
 
 
 

ಸಹನಾ ಅಪ್ಡೇಟ್

 

ಸಹನಾ

ಇತ್ತೀಚಿಗೆ ಅಮೆರಿಕಾದಿಂದ ಹಲವು ಗೆಳೆಯರು ಬೆಂಗಳೂರಿಗೆ ಬಂದಿದ್ರು. ಸಾಕಷ್ಟು ಮಂದಿ ಅಲ್ಲಿ ಇಂಜಿನಿಯರ್ ಗಳಾಗಿ, ವೈದ್ಯರಾಗಿ, ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಮೆರಿಕದಲ್ಲಿ ಈಗಿನ ಛಳಿಯ ಪ್ರಭಾವ ದಿಂದಾಗಿ ತಿಂಗಳ ಮಟ್ಟಿಗೆ ತವರೂರಿನ ಕಡೆ ಮುಖಮಾಡಿ ಒಂದಷ್ಟು ದಿನ ಸುತ್ತಾಡಿ ಹೋಗುವುದು ಈ ಗೆಳೆಯರ ರೂಡಿ. ಸಿಕ್ಕ ಗೆಳೆಯರೊಂದಿಗೆ ಕಾಡು ಹೊಳೆ ರೆಸಾರ್ಟ್ ಸುತ್ತಾಟ, ಜೊತೆಗೆ ರಾತ್ರಿ ಪಾನ ಗೋಷ್ಠಿ ..! ಅದೆಲ್ಲ ಒಂಥರ ಸಡಗರ. ಇದು ಸಾಮಾನ್ಯವಾಗಿ ವರ್ಷಕೊಮ್ಮೆ ಆದ್ರು ನಡಿತಿರುತ್ತೆ. ಈ ರೀತಿಯ ಸಂದರ್ಭಗಳಲ್ಲಿ ಚರ್ಚೆಗೆ ಬರುವ ವಿಚಾರಗಳು ಒಂದಲ್ಲ ಹಲವಾರು. .ಒಬಾಮನಿಂದ ಹಿಡಿದು ಕಲಾಸಿಪಾಳ್ಯದ ಜಟಕಾ ಸಾಬರವರೆಗೂ ಸುದ್ದಿ ಹರಿದಾಡುತ್ತದೆ .ಆದರೆ ಈ ಬಾರಿ ಅತಿ ಹೆಚ್ಚು ಚರ್ಚೆ ಆಗಿದ್ದು ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆನೇ! ಯಾವುದೇ ವಿಚಾರ ಪ್ರಸ್ತಾಪವಾದರೂ ಕೊನೆಗೆ ಬಂದು ನಿಲ್ಲುತ್ತಿದ್ದದ್ದು ಮುಖ್ಯಮಂತ್ರಿಗಳ ಭಂಡ ಗುಂಡಿಗೆ ಬಗ್ಗೆ!!!
 
ಇವತ್ತು ನಮ್ಮ ಕರ್ನಾಟಕದಲ್ಲಿ ಭ್ರಷ್ಟಾಚಾರ, ಭೂಹಗರಣ, ಸ್ವಜನ ಪಕ್ಷಪಾತ ಒಂದು ರೆಗ್ಯುಲರ್ ವಿಷಯ ಅನ್ನೋ ರೀತಿ ಆಗಿದೆ. ನನ್ನ ಹಿಂದೆ ಇದ್ದ ಮುಖ್ಯಮಂತ್ರಿಗಳೆಲ್ಲ ಮಾಡಿರುವುದನ್ನೇ ನಾನು ಮಾಡಿದ್ದೇನೆ ಅಂತ ಮುಖ್ಯಮಂತ್ರಿ ಯಡಿಯೂರಪ್ಪ ಹೇಗೆ ಸಮರ್ಥಿಸಿಕೊಳ್ಳುತ್ತಿದ್ದಾರೋ ಅವರ ಸಚಿವ ಸಂಪುಟದ ಸದಸ್ಯರು ಅದನ್ನೇ ಪುನರುಚ್ಚರಿಸುತ್ತಾ ತಮ್ಮ ಕಳ್ಳತನ ಮುಂದುವರಿಸುತ್ತಾ ಇದ್ದಾರೆ. ಹಿರಿ ಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ ಅನ್ನೋ ಕಥೆ ಇಲ್ಲಿ. ಯಾರು ಮೊಂಡು ಹಿಡೀತಾರೋ ಅವರನ್ನ ’ಏನಪ್ಪಾ ಯಡಿಯೂರಪ್ಪನಿಂದ ಕಲಿತ್ಯಾ?!’ ಅಂತ ಜನ ಮಾತನಾಡಿಕೊಳ್ಳಲು ಶುರುಮಾಡಿದ್ದಾರೆ. ಸರ್ಕಾರ ಸುಮಾರು ದಿನದಿಂದಲೂ ತೂಗುಯ್ಯಾಲೆಯಲ್ಲೇ ಇದೆ. ಗಾತ್ರದ ಸರ್ಕಾರ ಇದ್ದರೂ ಕರ್ನಾಟಕದಲ್ಲಿ ಅಧಿಕಾರಿಗಳೇ ರಾಜ್ಯಭಾರ ನಡೆಸ್ತಿದ್ದಾರೆ, ಅಧಿಕಾರಶಾಹಿ ಮಜಬೂತಾಗಿ ಸಾಗ್ತಿದೆ. ಇವತ್ತು ಬೀಳ್ತಾರೆ ನಾಳೆ ಬೀಳ್ತಾರೆ ಸಂಜೆ ಬೀಳ್ತಾರೆ ಅಂತ ಯಡಿಯೂರಪ್ಪನವರ ಜಾರುವ ಟೈಮ್ ಗೆ ಕಾದು ಕಾದು ಕರ್ನಾಟಕದ ಜನರೂ ರೋಸಿಹೋಗಿದ್ದಾರೆ.
 
ಹೊಸವರ್ಷದ ಜಿಲ್ಲಾ-ತಾಲೂಕು ಪಂಚಾಯ್ತಿ ಚುನಾವಣೆಯ ಫಲಿತಾಂಶ ಬಿಜೆಪಿಗೆ ಈ ಹಿಂದಿನ ಎಲ್ಲಾ ಚುನಾವಣೆಗಳಿಗಿಂತಲೂ ಹೆಚ್ಚಿನ ಸ್ಥಾನಗಳಿಸಿಕೊಟ್ಟು ಪಕ್ಷಕ್ಕೆ ಒಂದು ಕಿಕ್ ನೀಡಿದೆ. ಮುಖ್ಯವಾಗಿ ಯಡಿಯೂರಪ್ಪ ಅವರಿಗೆ ಅಧಿಕಾರದಲ್ಲಿ ಮುಂದುವರೆಯಲು ಸಾಥ್ ನೀಡಿದೆ. ಈಗ ಯಡಿಯೂರಪ್ಪನವರ ತಲೆ ಕಾಯುತ್ತಿದೆ. ಆನೆ ನಡೆದದ್ದೇ ದಾರಿ ಎಂಬಂತೆ ಯಡಿಯೂರಪ್ಪ ಸಾಗಿದ್ದೆ ದಾರಿ. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿ ಪರ್ಯಾಯ ನಾಯಕತ್ವ ಹುಡುಕುವಲ್ಲಿ ಸೋತಿರುವ ಬಿಜೆಪಿ ಮುಖಂಡರು ಈಗ ಕೇಂದ್ರ ಸರ್ಕಾರವೇ ಬೇಕಾದರೆ ಕರ್ನಾಟಕ ಸರಕಾರವನ್ನ ಉರುಳಿಸಲಿ, ಆ ಸಿಂಪತಿಯಲ್ಲೇ ಚುನಾವಣೆ ಎದುರಿಸುವ ರಾಜಕೀಯ ತಂತ್ರಗಾರಿಕೆ ಮಾಡಿದ್ದಾರೆ.
 
ರಾಜ್ಯಪಾಲರು ಈಗ ಯಡಿಯೂರಪ್ಪ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿರುವುದು ರಾಷ್ಟ್ರ ವ್ಯಾಪ್ತಿ ಸುದ್ದಿಯಾಗಿದೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿಗೂ ಕೂಡ ಇದು ನುಂಗಲಾರದ ತುತ್ತು. ಆದರೆ, ಕರೆಯುವ ಹಸುವಾಗಿರುವ ಯಡಿಯೂರಪ್ಪ ಸರಕಾರವನ್ನ ಕಳೆದುಕೊಳ್ಳಲು ಬಿಜೆಪಿ ರಾಷ್ಟ್ರೀಯ ನಾಯಕರು ರೆಡಿ ಇಲ್ಲ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ನಿಲುವಿಗೆ ಬದ್ದವಾಗಿರುವ ಬಿಜೆಪಿ ನಾಯಕರು ರಾಜ್ಯಪಾಲರ ವಿರುದ್ದವೇ ತಿರುಗಿ ಬಿದ್ದಿದ್ದಾರೆ. ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಒತ್ತಡವನ್ನು ಹೇರಿ, ರಾಷ್ಟ್ರಪತಿಗಳಿಗೂ ದೂರು ನೀಡಿ ಈಗ ಪ್ರತಿಭಟನೆಗೆ ರಾಜ್ಯದಾದ್ಯಂತ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಯಡಿಯೂರಪ್ಪ ಮಾತ್ರ ತಮ್ಮ ವಿರುದ್ದ ಕ್ರಿಮಿನಲ್ ಮೊಕದ್ದಮೆಗೆ ಅನುಮತಿ ಆಗಿದ್ದರೂ ಜಗ್ಗದೆ ಕುಗ್ಗದೆ ದೇವಸ್ಥಾನಗಳಿಗೆ ತಿರುಗುತ್ತ ಕಾಲಹಾಕುತ್ತಿದ್ದರೆ...ಪಾಪ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ ತಾವು ಕೈಗೊಂಡ ಕ್ರಮಗಳು, ಬಿಟ್ಟ ಬಾಣಗಳೆಲ್ಲ ಒಂದೊಂದಾಗಿ ನೆಲಕಚ್ಚುತ್ತಿರುವುದು ಕಂಡು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ಸ್-ಜೆಡಿಎಸ್ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ಆರೋಪಕ್ಕೆ ಪ್ರತ್ಯಾರೋಪ, ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಅನ್ನೋ ರೀತಿ ಯಡಿಯೂರಪ್ಪ ಎಲ್ಲರ ಬಾಯಿ ಮುಚ್ಚಿಸುವಲ್ಲಿ ನೈಪುಣ್ಯ ಮೆರೆದಿದ್ದಾರೆ.
 
ಕಾನೂನು ಸಚಿವ ಸುರೇಶ ಕುಮಾರ್ ಅವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಅಲ್ಲಲ್ಲಿ ಕೇಳಿಬರುತ್ತಿದೆ. ಯಡಿಯೂರಪ್ಪನವರಿಗೆ ಅವರ ಬಗ್ಗೆ ಆಸಕ್ತಿ ಇದ್ದಂತಿಲ್ಲ. ಹಾಗೇನಾದ್ರೂ ಆದ್ರೆ ವಿ. ಎಸ್. ಆಚಾರ್ಯ ಅಥವಾ ಶೋಭಾ ಕರಂದ್ಲಾಜೆ ಕಡೆಗೇ ಅವರ ಒಲವು. ಹಾಗಾಗಿಯೇ ಈಗ ಆದಷ್ಟು ಬೇಗ ರಾಜ್ಯಕ್ಕೆ ಬಜೆಟ್ ನೀಡಿ ಚುನಾವಣೆಗೆ ಹೋಗಲು ತೀರ್ಮಾನಿಸಿದಂತಿದೆ. ಒಂದು ಪಕ್ಷ ಸುರೇಶ ಕುಮಾರ್ ಅವರನ್ನ ಮುಖ್ಯಮಂತ್ರಿ ಮಾಡಿದರೆ ಇರುವ ಜನರಲ್ಲಿ ಆತ ಸ್ವಲ್ಪ ಒಳ್ಳೆಯ ಇಮೇಜ್ ಇರೋ ವ್ಯಕ್ತಿ ಅನ್ನೋದರಲ್ಲಿ ಅನುಮಾನ ಇಲ್ಲ. ಆಗ ಪಕ್ಷಕ್ಕೂ ಅಲ್ಪ-ಸ್ವಲ್ಪ ಇಮೇಜ್ ಉಳಿಸಿಕೊಳ್ಳಲು ಸಾದ್ಯ ಅನ್ನೋದು ಒಂದು ಅಭಿಪ್ರಾಯ.
 
ರಾಜ್ಯದ ಕಥೆ ಇದಾದರೆ ಕೇಂದ್ರ ದಲ್ಲಿನ ಯುಪಿಏ ಸರ್ಕಾರ ೩ಜಿ ಹಗರಣ, ಬೆಲೆ ಏರಿಕೆ, ಸಿವಿಸಿ ಆಯುಕ್ತರ ವಿವಾದ, ವಿದೇಶಗಳಲ್ಲಿ ಕಪ್ಪು ಹಣ ಮುಂತಾದ ವಿಚಾರಗಳಿಂದ ಕಂಗಾಲಾಗಿದೆ. ಕೇಂದ್ರದ ತಪ್ಪುಗಳನ್ನ ರಾಜ್ಯ ಬಿಜೆಪಿ ನಾಯಕರು ಕೆದಕುತ್ತಾ ಹುಯಿಲೆಬ್ಬಿಸಿ ರಾಜ್ಯದಲ್ಲಿ ಏನೂ ನಡೆದಿಲ್ಲ ಎಂಬ ಸಬೂಬು ಹೇಳುತ್ತಾ ಜೈ ಶ್ರೀರಾಂ ಎನ್ನುತ್ತಿದ್ದಾರೆ.
  
 
 
  
 
 
 
 
 
Copyright © 2011 Neemgrove Media
All Rights Reserved