ಭೂಮಿಗೆ ಸಧ್ಯದಲ್ಲೇ ಇಬ್ಬರು ಸೂರ್ಯಂದಿರು!
ಎಂಬ ಭಾರೀ ಸುದ್ದಿಯನ್ನು ಈಗ ಎಂಟು ಹತ್ತು ದಿನಗಳ ಹಿಂದಿನಿಂದ ನೀವು ಕೇಳಿರಬಹುದು.
ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡಿನ ಭೌತ ಶಾಸ್ತ್ರಜ್ನ ಡಾಕ್ಟರ್ ಬ್ರಾಡ್ ಕಾರ್ಟರ್, ಬೆಟೆಲ್ಗಿಯಸ್ (Betelgeuse) ಎಂಬ ನಕ್ಷತ್ರ ೨೦೧೨ ರಷ್ಟರಲ್ಲಿ ಸಂಪೂರ್ಣ ಉರಿದು, ಸಿಡಿದು ಸೂಪರ್ ನೋವಾ ಆಗಿ ಭೂಮಿಗೆ ಚಿನ್ನ, ಯುರೇನಿಯಮ್ ಇತ್ಯಾದಿಗಳ ಮಳೆ ಸುರಿಸಲಿದೆ...ಆ ನಕ್ಷತ್ರ ಉರಿದು ಭಸ್ಮವಾಗುವ ಒಂದೆರಡು ವಾರಗಳು ಭೂಮಿಗೆ ಎರಡು ಸೂರ್ಯಂದಿರು ಇದ್ದಾರೆ ಎಂಬ ಭ್ರಮೆ ಬರುವಷ್ಟು ಪ್ರಖರ ಬೆಳಕು ಮತ್ತು ಶಾಖ ಇರುತ್ತದೆ, ಎಂದು ವಾರಗಳ ಹಿಂದಷ್ಟೇ ವಿಶ್ವದಾದ್ಯಂತ ಹೇಳಿಕೆ ನೀಡಿ ಭಯಂಕರ ಸುದ್ದಿ, ಊಹಾಪೋಹಗಳಿಗೆ ಕಾರಣರಾಗಿದ್ದರು. ೨೦೧೨ ರಲ್ಲಿ ಮಯ ಜನರು ರಚಿಸಿಟ್ಟಿರುವ ಶತಮಾನಗಳ ಕ್ಯಾಲೆಂಡರ್ ಮುಗಿದುಹೋಗುತ್ತಿರುವುದರಿಂದ ಆ ವರ್ಷವೇ ಇಡೀ ವಿಶ್ವ ಅಂತ್ಯವಾಗಲಿದೆ ಎಂದು ನಂಬಿಕೊಂಡು, ಜನರನ್ನೂ ನಂಬಿಸಿಕೊಂಡು ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಅಸಂಖ್ಯಾತ ಜನರಿಗೆ ಇದೂ ಒಂದು ಮಹಾನ್ ಬೋನಸ್ ಪಾಯಿಂಟ್ ಆಗಿತ್ತು. ’ನೋಡಿದ್ರಾ...ನಾವು ಹೇಳಿರಲಿಲ್ಲವಾ...ಇನ್ನೊಂದು ವರ್ಷದಲ್ಲಿ ಎಲ್ಲಾ ಢಮಾರ್ ಆಗುತ್ತದೆ, ಈಗ ಅದಕ್ಕೆ ಸರಿಯಾಗಿ ಶಕ್ತಿಯುತವಾದ ನಕ್ಷತ್ರವೊಂದು ಉರಿದು, ಸಿಡಿದು, ಭೂಮಿ ಮೇಲೆ ಬಿದ್ದು ಎಲ್ಲವನ್ನೂ ನಾಶಪಡಿಸಲಿದೆ’ ಎಂದು ಎಲ್ಲೆಂದರಲ್ಲಿ ಘಂಟಾಘೋಷವಾಗಿ ಶುರು ಮಾಡಿಕೊಂಡಿದ್ದರು. ಅವರನ್ನು ನಿರಾಸೆಗೊಳಿಸುವ ವೈಜ್ನಾನಿಕ ವಿವರಣೆಗಳು ಈಗ ಹೊರ ಬಂದಿವೆ.
ನಮ್ಮ ಸೌರ ಮಂಡಲದ ನೆರೆಯಲ್ಲಿರುವ ಓರಿಯನ್ ಮಂಡಲದಲ್ಲಿ ಅಂದರೆ ಭೂಮಿಗೆ ಸುಮಾರು ೬೪೦ ಬೆಳಕಿನ ವರ್ಷಗಳ ಅಂತರದಲ್ಲಿ ಅತ್ಯಂತ ದೊಡ್ಡದಾಗಿ, ಪ್ರಖರವಾಗಿ ಇರುವ ಬೆಟೆಲ್ಗಿಯಸ್ ಎಂಬ ನಕ್ಷತ್ರ ಕೊನೆ ಉಸಿರು ಎಳೆಯುತ್ತಿದೆ ಎನ್ನುವುದೇನೋ ನಿಜ. ಆದರೆ ಅದು ಸಿಡಿದು ಮುಂದಿನ ವರ್ಷವೇ ಭಸ್ಮವಾಗಬೇಕೆಂದೇನಿಲ್ಲ. ೨೦೧೧ ರಿಂದ ೧೦೦೨೦೧೧ (ಅಂದರೆ ಈ ವರ್ಷದಿಂದ ಮುಂದಿನ ಮಿಲಿಯನ್ ವರ್ಷಗಳಲ್ಲಿ ಯಾವತ್ತಾದರೂ ಆಗಬಹುದು) ಎಂದು ವಿಶ್ವದಾದ್ಯಂತದ ಖಗೋಳ ವಿಜ್ನಾನಿಗಳು ಅಭಿಪ್ರಾಯ ಪಡುತ್ತಿದ್ದಾರೆ. ಈ ನಕ್ಷತ್ರದ ಸಿಡಿಯುವಿಕೆಗೂ, ಭೂಮಿಯ ನಾಶಕ್ಕೂ ಯಾವುದೇ ಸಂಬಂಧವೂ ಇರುವುದಿಲ್ಲ. ಬೆಟೆಲ್ಗಿಯಸ್ ನ ಸಿಡಿತ ಭೂಮಿಯನ್ನು ಅಪಾಯಕಾರಿ ಮಟ್ಟದಲ್ಲಿ ತಾಕುವುದೂ ಇಲ್ಲ ಎಂದು ಇವರ ಅಭಿಪ್ರಾಯ. ನಕ್ಷತ್ರಗಳು ಸಿಡಿದಾಗ ನ್ಯುಟ್ರಿನೋಗಳ ಸುರಿಮಳೆಯಾಗುತ್ತದೆ. ಆಗ ರಾತ್ರಿಯ/ಬೆಳಗ್ಗೆಯ ಆಕಾಶ ಪಟಾಕಿ ಹೊಡೆದಂತೆ ಕಾಣಿಸುತ್ತದೆ. ಇಂಥ ಸಮಯದಲ್ಲಿ ನಕ್ಷತ್ರದಿಂದ ಬಿಡುಗಡೆಯಾಗುವ ೯೯% ಶಕ್ತಿಯು ಸಣ್ಣ ಸಣ್ಣ ಕಣ(particle)ಗಳಾಗಿ ನಮ್ಮನ್ನು ಹಾಯ್ದು ಹೋಗುತ್ತವೆಯೇ ಹೊರತು ಸುಡುವುದಿಲ್ಲ. ಹಾಗಾಗಿ ಈ ಸೂಪರ್ನೋವಾ ಯಾವುದೇ ರೀತಿಯಲ್ಲೂ ಭೂಮಿಗೆ ಹಾನಿ ಮಾಡುವುದಿಲ್ಲ ಎನ್ನಲಾಗಿದೆ.
ಒಂದು ಪಕ್ಷದಲ್ಲಿ ಬೆಟೆಲ್ಗಿಯಸ್ ಸಧ್ಯದಲ್ಲೇ ಉರಿದು ಸಿಡಿಯುವಂತಾದರೂ ಭೂಮಿಯಿಂದ ಅದು ಅತ್ಯಂತ ಸುಂದರವಾದ ಬೆಳಕಿನ ಚಿತ್ತಾರವಾಗಿ ಕಾಣಲಿದೆ. ಭೂ ವಾಸಿಗಳು ನೋಡಲಿರುವ ಅತ್ಯಂತ ಮನೋಹರ ದೃಶ್ಯ ಇದು. ಹಾಗೆ ಬೆಟೆಲ್ಗಿಯಸ್ ಉರಿಯುವಾಗ ಅದರ ಪ್ರಖರತೆಗೆ ನಮಗೆ ರಾತ್ರಿ ಕೂಡಾ ಹಗಲಿನ ಅನುಭವವೇ ಆಗುತ್ತದೆ, ಆಗ ಇಡೀ ವಿಶ್ವದ ಜನರು ಒಂದು ವಾರ ಪೂರ್ತಿ ಸೂಪರ್ನೋವಾ ಪಾರ್ಟಿ ಆಚರಿಸಬಹುದು ಎಂಬುದು ವಿಜ್ನಾನಿಗಳ ಇತ್ತೀಚಿನ ವಿವರಣೆ. |