|
ಗಾಳಿ ಅಂಗಿ ಚುಂಗು ಹಿಡಿದು
ಕಾಲಿಗಷ್ಟು ಚಕ್ರ ಕಟ್ಟಿ
ಮೆಲ್ಲ ಮೆಲ್ಲ ಸಿಲ್ಲಿ ಗಲ್ಲಿ
ಕೋಟೆ ಕೊತ್ತಲ ಊರು ಸುತ್ತಿ
ಕಣ್ಣು ಕಂಡ ಪಟಗಳನ್ನು
ಮನದ ಪದಕೆ ತಳಿಕೆ ಹಾಕಿ
ಹಿಗ್ಗು ಸುಗ್ಗಿ ಎಲ್ಲ ಸುರಿದು
ಪುಟದ ಮೇಲೆ ತಟಪಟಾ... |
|
ಅಮಿತಾಬನ ಅಭಿಮಾನಿ ಹೈಟೆಕ್ ಕಳ್ಳರು!!
ಟೋನಿ
ಕಳೆದ ಮೂರ್ನಾಲ್ಕು ದಿನದಲ್ಲಿ ಯೂರೋಪಿನಲ್ಲಿ ನಾವು ಸುತ್ತಾಡುವಾಗ ನಮಗೆ ಕಹಿ ಅನುಭವವಾಗಿರಲಿಲ್ಲ. ಬೆಲ್ಜಿಯಂ ನ ಬ್ರಸೆಲ್ಸ್ ನಲ್ಲಿ ಆದ ಅನುಭವಗಳನ್ನು ಹೇಳುವ ಮುನ್ನ ಪ್ಯಾರಿಸ್ಸಿನ ಬಗ್ಗೆ ಇನ್ನೆರಡು ಮಾತು ಹೇಳಬೇಕು. ನಾನು ಪ್ಯಾರಿಸ್ಸಿನಲ್ಲಿ ರಾತ್ರಿ ಹೊತ್ತು ಒಬ್ಬನೇ ಮಧ್ಯರಾತ್ರಿಯಲ್ಲಿ ಸುತ್ತಾಡಿದ್ದೆ. ಅಲ್ಲಿ ನೈಟ್ ಲೈಫ಼್ ಹೇಗಿರುತ್ತದೆಂಬ ಕುತೂಹಲ ನನಗಿತ್ತು. ಬೇರೆಯವರನ್ನು ಕರೆಯಲು ಹೋದಲ್ಲಿ ಅವರೂ ಬರುವುದು ಅನುಮಾನವಿತ್ತು, ಅಲ್ಲದೆ ನನ್ನನ್ನೂ ರೂಮಿಂದ ಹೊರಗಡೆ ಹೋಗದಂತೆ ತಗಾದೆ ತೆಗೆಯಬಹುದೆನಿಸಿತ್ತು. ಅದಕ್ಕೆ ಕಾರಣವೂ ಇತ್ತು. ಜ್ಯೂಜ಼ರ್ ಮೊದಲ ದಿನವೇ ಎಲ್ಲರಿಗೂ ಎಚ್ಚರಿಕೆ ನೀಡಿ ಯಾರೂ ಹೊರಗಡೆ ಅನಾವಶ್ಯಕವಾಗಿ ಸುತ್ತಾಡಲು ಹೋಗಬಾರದೆಂದೂ, ಏನಾದರೂ ಯಡವಟ್ಟಾದರೆ ಅದಕ್ಕೆ ನೀವೇ ಹೊಣೆಯೆಂದಿದ್ದ. ನಾವು ಪ್ರವಾಸದ ಎರಡನೇ ದಿನವೇ ಪ್ಯಾರಿಸ್ ತಲುಪಿದ್ದರಿಂದ ನಮ್ಮ ಸಹ ಪ್ರಯಾಣಿಕರ ಜತೆ ಇನ್ನೂ ಆತ್ಮೀಯವಾಗಿ ಬೆರೆಯಲು ಅಗಿರಲಿಲ್ಲ. ಒಂದು ವೇಳೆ ಅವರಲ್ಲಿ ಯಾರನ್ನಾದರೂ ಬನ್ನಿ ಪ್ಯಾರಿಸ್ಸಿನ ನೈಟ್ ಲೈಫ಼್ ಹೇಗಿದೆ ನೋಡಿ ಬರೋಣ ಎಂದು ಕರೆದಿದ್ದರೂ ಅವರ್ಯಾರೂ ಜ್ಯೂಜ಼ರ್ ನ ಎಚ್ಚರಿಕೆಯನ್ನು ಬದಿಗಿಟ್ಟು ನನ್ನ ಜೊತೆ ಬರುತ್ತಾರೆಂಬ ನಂಬಿಕೆ ನನಗಿರಲಿಲ್ಲ. ಇನ್ನೂ ಸಲುಗೆಯಿಂದ ಮಾತನಾಡದಿದ್ದುದರಿಂದ ನನಗೂ ಬೇರೆಯವರನ್ನು ನೈಟ್ ಲೈಫ಼್ ನೋಡಲು ಬರುವಂತೆ ಕರೆಯಲು ಮುಜುಗರವಾಗಿತ್ತು.
ಜ್ಯೂಜ಼ರ್ ಅಂದು ಬೆಳಿಗ್ಗೆಯೇ ಯಾವ ರೀತಿ ಯರ್ರಾಬಿರ್ರಿ ಹೆದರಿಸಿದ್ದನೆಂದರೆ ಪ್ಯಾರಿಸ್ಸಿನ ಗುಜರಾತಿ ಹೋಟೆಲಿನಲ್ಲಿ ಊಟ ಮಾಡಿ ನಾವು ರೂಮಿಗೆ ಹಿಂದಿರುಗಿದ ಕೂಡಲೇ ಎಲ್ಲರೂ ಬಾಗಿಲು ಭದ್ರ ಪಡಿಸಿಕೊಂಡು ಮಲಗಿಬಿಟ್ಟಿದ್ದರು. ಆಗಿನ್ನೂ ಒಂಬತ್ತೂವರೆ ಗಂಟೆ. ನನಗಿದ್ದ ಮತ್ತೊಂದು ಅನುಕೂಲವೆಂದರೆ ನನ್ನ ರೂಮ್ ಮೇಟ್. ಅವರು ಹಾಸಿಗೆಗೆ ತಲೆಕೊಟ್ಟ ಎರಡು ನಿಮಿಷದಲ್ಲಿಯೇ ಈ ಲೋಕದೊಂದಿಗೇ ಸಂಪರ್ಕ ಕಡಿದುಕೊಂಡವರಂತೆ ಭಯಂಕರವಾದ ಗೊರಕೆ ಶಬ್ದದೊಂದಿಗೆ ಪವಡಿಸಿಬಿಡುತ್ತಿದ್ದರು. ಇನ್ನು ಅವರ ಆ ಗೊರಕೆಯ ಶಬ್ದದಿಂದ ನನಗೆ ನಿದ್ರೆ ಬರುವುದಂತೂ ಸಾಧ್ಯವಿರಲಿಲ್ಲ. ನಾನು ಅವರಿಗೆ ಹೊರಗೆ ಹೋಗುವ ಬಗ್ಗೆ ಹೇಳುವ ಪ್ರಮೇಯವೇ ಇರಲಿಲ್ಲ. ರೂಮಿನ ಬಾಗಿಲು ಹಾಕಿ ಕೀ ತಗಂಡು ಹೋಟೆಲಿನ ರೆಸೆಪ್ಷನಿಸ್ಟ್ ಬಳಿ ಮಾಹಿತಿ ಪಡೆದು ರಾತ್ರಿಯಿಡೀ ಅಲೆದಾಡಿದ್ದೆ. ನನ್ನ ಅದೃಷ್ಟಕ್ಕೆ ಒಳ್ಳೆಯ ಟ್ಯಾಕ್ಸಿ ಡ್ರೈವರ್ ಸಿಕ್ಕಿದ್ದ. ಆ ಪ್ಯಾರಿಸ್ಸಿನ ಮತ್ತೊಂದು ಲೋಕವನ್ನು ನೋಡಬೇಕೆಂದರೆ ರಾತ್ರಿ ಹೊತ್ತೇ ಸರಿ. ಅದೊಂದು ವಿಚಿತ್ರ ವಿಕ್ಷಿಪ್ತ ಜಗತ್ತು. ಅದಕ್ಕಾಗಿ ಪ್ರತ್ಯೇಕ ಪ್ರದೇಶವನ್ನೇ ಸೃಷ್ಟಿಸಲಾಗಿದೆ. ಆ ಜಗತ್ತು ತೆರೆದುಕೊಳ್ಳುವುದೇ ರಾತ್ರಿ ಹನ್ನೊಂದರ ನಂತರ. ಸೂರ್ಯ ಉದಯಿಸುವವರೆಗೂ ಅಲ್ಲಿನ ರಂಗಿನ ಲೋಕದ ಚಟುವಟಿಕೆಗಳು ಎಡಬಿಡದೇ ಸಾಗುತ್ತವೆ. ಪ್ಯಾರಿಸ್ಸಿನ ನೈಟ್ ಲೈಫ಼್ ನ ಬಗ್ಗೆ ಬರೆಯಲು ಹೊರಟರೆ ಅದೊಂದು ’ಎ’ ಸರ್ಟಿಫ಼ಿಕೇಟಿನ ಸಿನಿಮಾದಂತಾಗಿಬಿಡುವುದರಿಂದ ಬರೆಯದಿರುವುದೇ ಒಳ್ಳೆಯದು. ಬೆಳಗಿನ ಜಾವ ಐದು ಗಂಟೆಯ ಹೊತ್ತಿಗೆ ರೂಮಿಗೆ ಹಿಂದಿರುಗಿದಾಗ ನನ್ನ ರೂಮ್ ಮೇಟ್ ಗೊರಕೆಯ ಶಬ್ದ ಇನ್ನೂ ಮುಂದುವರೆದಿತ್ತು. ನಡುರಾತ್ರಿಯ ಹೊತ್ತಲ್ಲಿ ಪ್ಯಾರಿಸ್ಸಿನ ಆ ವಿಚಿತ್ರ ಲೋಕದಲ್ಲಿ ನಾನೊಬ್ಬನೇ ಸುತ್ತಾಡಿದ್ದರೂ ಕಳ್ಳಕಾಕರ ಕಾಟವಿರಲಿಲ್ಲ. ಅಷ್ಟು ಹೊತ್ತು ನನ್ನ ಜತೆಗಿದ್ದ ಟಾಕ್ಸಿ ಚಾಲಕ ಅತ್ಯಂತ ವಿನಯದಿಂದ ನನ್ನ ಜತೆ ವರ್ತಿಸಿದ್ದ ಅವನಿಗೆ ಮನಸಾರೆ ಥ್ಯಾಂಕ್ಸ್ ಹೇಳಿದೆ. ಆತ ಕಪ್ಪು ಜನಾಂಗದವ. ಉಗಾಂಡದಿಂದ ಸುಮಾರು ವರ್ಷಗಳ ಹಿಂದೆಯೇ ಬಂದು ನೆಲೆಸಿರುವುದಾಗಿಯೂ ತಾನೀಗ ಫ಼್ರಾನ್ಸ್ ಪ್ರಜೆಯೆಂದೂ ಹೇಳಿದ್ದವ ನಾನು ಟಿಪ್ಸ್ ಕೊಡಲು ಹೋದಾಗ ನಯವಾಗಿ ನಿರಾಕರಿಸಿದ್ದ. ಆತ ಅಂದು ರಾತ್ರಿ ನನ್ನೊಟ್ಟಿಗೇ ಇದ್ದು ಪ್ಯಾರಿಸ್ಸಿನ ನೈಟ್ ಕ್ಲಬ್ಬುಗಳನ್ನು ತೋರಿಸಿ, ಅಲ್ಲಿ ಹುಶಾರಾಗಿರಬೇಕೆಂದೂ, ಸುಮ್ಮಸುಮ್ಮನೆ ಯಾರೇ ಮಾತಾಡಿಸಿದರೂ ಮಾತಾಡಬಾರದೆಂದೂ ಅದರಲ್ಲೂ ಹುಡುಗಿಯರು ಬಂದು ನಿಮ್ಮ ಪಕ್ಕ ಕೂತು ಡ್ರಿಂಕ್ಸ್ ಕೇಳಿದಲ್ಲಿ ಅವರಿಗೆ ಕೊಡಿಸಬಾರದೆಂದೂ, ನೀವು ಅವರೊಟ್ಟಿಗೆ ಕೂತಲ್ಲಿ ನಿಮ್ಮಲ್ಲಿರುವುದೆಲ್ಲಾ ಖಾಲಿ ಮಾಡಿಬಿಡುತ್ತಾರೆಂದು ನನ್ನನ್ನು ಹೆಜ್ಜೆಹೆಜ್ಜೆಗೂ ಎಚ್ಚರಿಸಿದ್ದ. ಆರಂಭದಲ್ಲಿ ನಾನು ಅವನನ್ನೂ ಅನುಮಾನದಿಂದಲೇ ನೋಡಿದ್ದೆನಾದರೂ ಆತ ನನ್ನ ಬಗ್ಗೆ ವಹಿಸಿದ ಕಾಳಜಿ ಕಂಡು ಅವನ ಮಾತುಗಳನ್ನು ಗೌರವಿಸಿದೆ. ಇದರಿಂದ ನಾನು ಕಪ್ಪು ಅಲೆಮಾರಿಗಳ ಬಗ್ಗೆ ಇಟ್ಟಿದ್ದ ಪ್ರೀತಿ ಹೆಚ್ಚಿತ್ತು. ರಾತ್ರಿ ಹೊತ್ತೇ ಕಳ್ಳರ ಕಾಟವಿರದಿದ್ದರಿಂದ ಇನ್ನು ಹಗಲಿನಲ್ಲಿ ಸುತ್ತಾಡುವಾಗಲೂ ಈ ಯೂರೋಪಿನಲ್ಲಿ ನನಗೆ ಕಳ್ಳರ ಕಾಟವಿರುತ್ತದೆಂದು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಜ್ಯೂಜ಼ರ್ ನಮ್ಮನ್ನು ಹೆದರಿಸಲೆಂದೇ ಕಳ್ಳರ ಬಗ್ಗೆ ಮಾತನಾಡಿರಬಹುದೆಂದುಕೊಂಡಿದ್ದೆ.
ಬೆಲ್ಜಿಯಂ ನ ರಾಜಧಾನಿ ಬ್ರಸೆಲ್ಸ್ ನಲ್ಲಿ ಗುರುಬಸವಯ್ಯನವರು ಇಲ್ಲಿ ಸಾಂಬಾ ಡಾನ್ಸ್ ಸಖತ್ತಾಗಿರುತ್ತದೆಂದು ಹೇಳಿ ಅದು ಎಲ್ಲಿದೆಯೆಂದು ವಿಚಾರಿಸಿರೆಂದರು. ನನಗೆ ಆ ಡಾನ್ಸ್ ಬ್ರೆಜಿಲ್ಲಿನಲ್ಲಿ ಪ್ರಸಿದ್ದವೆನ್ನುವುದು ಗೊತ್ತಿತ್ತು. ಅದರ ಬಗ್ಗೆ ಕೇಳಿ ನಗೆಪಾಟಲಿಗೀಡಾಗಬಹುದೆಂದು ನಾನು ನೀವೇ ಜ್ಯೂಜ಼ರ್ ನನ್ನು ಕೇಳಿರೆಂದೆ. ಅವರು ’ಜ್ಯೂಸ್’ ಎಂದು ಕೂಗಿ ಜ್ಯೂಜ಼ರ್ ನನ್ನು ಕರೆದರು. ಇವರು ಹಾಗೆ ಕರೆದಕೂಡಲೇ ಜ್ಯೂಜ಼ರ್ ಗಾಬರಿಗೊಳಗಾದವನಂತೆ ಕಂಡ. ಲಂಡನ್ನಿನಲ್ಲಿ ಗುರುಬಸವಯ್ಯನವರು ಆತನಿಗೆ ತನ್ನನ್ನು ಯೂನಿವರ್ಸಿಟಿಯೊಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿಯ ಪ್ರೊಫ಼ೆಸರರನ್ನು ಭೇಟಿ ಮಾಡಿಸೆಂದು ದುಂಬಾಲು ಬಿದ್ದಿದ್ದರು. ಆಗ ಆತ ಅಕ್ಷರಶಃ ಬೆಚ್ಚಿ ಬಿದ್ದಿದ್ದ. ಈಗ ಮತ್ತೆಲ್ಲಿಗೆ ಕರೆದುಕೊಂಡು ಹೋಗೆಂದು ಕೇಳುತ್ತರೋ ಎಂಬ ಆತಂಕದಲ್ಲಿಯೇ ಅವರ ಬಳಿ ಬಂದ. ಅವನನ್ನು ಹತ್ತಿರ ಕರೆದ ಗುರುಬಸವಯ್ಯ ಆತನ ಕಿವಿಯಲ್ಲಿ ಏನೋ ಗುಟ್ಟು ಹೇಳುವವರಂತೆ ಮೆಲುದನಿಯಲ್ಲಿ ಇಲ್ಲಿ ಸಾಂಬಾ ಡಾನ್ಸ್ ಎಲ್ಲಿ ನಡೆಯುತ್ತದೆಂದು ಪಿಸುದನಿಯಲ್ಲಿ ಕೇಳಿದರು. ಅವರು ಹಾಗೆ ಕೇಳಿದ ಕೂಡಲೇ ಗಾಬರಿಯಾದಂತಾದ ಜ್ಯೂಜ಼ರ್ ’ಇದರ್ ಕ್ಯಾ ಸಾಂಬಾ ಡಾನ್ಸ್? ಕೌನ್ ಬೊಲಾ ಆಪ್ಕೋ’, ಎಂದ. ಆತ ಹಾಗಂದ ಕೂಡಲೇ ಗುರುಬಸವಯ್ಯನವರು ನನ್ನತ್ತ ನೋಡಿದರು. ಆಗ ಪೀಕಲಾಟಕ್ಕೆ ಸಿಲುಕಿದ್ದು ನಾನು. ಜ್ಯೂಜ಼ರ್ ಸಾಂಬಾ ಡಾನ್ಸ್ ಬಗ್ಗೆ ನಾನೇ ಹೇಳಿಕೊಟ್ಟಿರಬಹುದೆಂದು ನನ್ನತ್ತ ಗುರಾಯಿಸಿದ. ನಿನ್ನೆ ಪ್ಯಾರಿಸ್ಸಿನಿಂದಲೇ ಸಾಂಬಾ ಡಾನ್ಸ್ ಬಗ್ಗೆ ಕನವರಿಸುತ್ತಿದ್ದವರು ಇದೀಗ ಅದಕ್ಕೆ ನನ್ನನ್ನು ಹೊಣೆ ಮಾಡುವವರಂತೆ ಕಾಣಿಸುತ್ತಿದೆಯಲ್ಲಾ ಅಂದುಕೊಂಡವನೇ ಜ್ಯೂಜ಼ರ್ ನಿಗೆ ’ಕಲ್ ಸುಭೇಸೆ ಗುರುಬಸವಯ್ಯಜೀನೆ ಸಾಂಬಾ ಡಾನ್ಸ್, ಸಾಂಬಾ ಡಾನ್ಸ್ ಬೋಲ್ಕೇ ಮುಜೆ ಪಕಡ್ಲಿಯಾ, ಮೈ ಬೊಲಾ ಓ ಡಾನ್ಸ್ ಇದರ್ ನಹೀಹೆ, ಅಬ್ ತುಮ್ಹೆ ಪೂಚ್ರಹೇಹೆ’ ಎಂದು ನನ್ನನ್ನು ಬಚಾವ್ ಮಾಡಿಕೊಂಡೆ. ಸಧ್ಯ ಜ್ಯೂಜ಼ರ್ ನಿಗೆ ಗುರುಬಸವಯ್ಯನವರಿಗೆ ಸಾಂಬಾ ಡಾನ್ಸ್ ಬಗ್ಗೆ ಕೇಳಲು ನಾನು ಹೇಳಿಕೊಟ್ಟಿಲ್ಲವೆಂಬುದು ಮನವರಿಕೆಯಾಗಿ ಆತ ನಗುತ್ತಾ ’ಗುರುಬಸಯ್ಯಾಜೀ (ಅವನು ಗುರುಬಸವಯ್ಯನವರನ್ನು ಕರೆಯುತ್ತಿದ್ದುದೇ ಹಾಗೆ. ಇವರೂ ಆತನನ್ನು ಜ್ಯೂಜ಼ರ್ ಎಂದು ಕರೆಯದೇ ಜ್ಯೂಸ್ ಜ್ಯೂಸ್ ಎಂದೇ ಸಂಭೋಧಿಸುತ್ತಿದ್ದರಿಂದಲೋ ಅಥವಾ ಉಚ್ಚಾರಣೆಯ ಸಮಸ್ಯೆಯಿಂದಲೋ ಆತನೂ ಇವರ ಹೆಸರನ್ನು ಶಾರ್ಟ್ ಆಗಿ ಕರೆಯುತ್ತಿರಬಹುದೆಂದು ನಾನು ಊಹಿಸಿಕೊಂಡೆ) ಓ ಸಾಂಬಾ ಡಾನ್ಸ್ ಇದರ್ ನಹೀಹೆ, ಬ್ರೆಜಿಲ್ ಮೆ ಹೆ’ ಅಂದ. ಕೂಡಲೇ ಗುರುಬಸವಯ್ಯನವರು ’ಯು ಟೋಲ್ಡ್ ಮಿ ಎಸ್ಟರ್ ಡೇ, ಟುಮಾರೋ ವಿ ಅರ್ ಗೋಯಿಂಗ್ ಟು ಬ್ರೆಜಿಲ್’ ಅಂದರು. ಈಗ ನಮಗೆ ಅವರಿಗಾಗಿದ್ದ ಹೆಸರಿನ ಕನ್ ಫ಼್ಯೂಷನ್ ಅರ್ಥವಾಗಿತ್ತು. ಅವರು ನಿನ್ನೆ ಜ್ಯೂಜ಼ರ್ ಹೇಳಿದ್ದ ಬ್ರಸೆಲ್ಸ್ ಅನ್ನು ಬ್ರೆಜಿಲ್ ಎಂದೇ ಭಾವಿಸಿಕೊಂಡು ಸಾಂಬಾ ಡಾನ್ಸ್ ಬಗ್ಗೆ ನಿನ್ನೆಯಿಂದಲೇ ಕನವರಿಸತೊಡಗಿದ್ದರು. ಅವರು ಹಾಗಂದ ಕೂಡಲೇ ನಮಗೆಲ್ಲಾ ನಗು ತಡೆಯಲಾಗದೇ ಬಿದ್ದು ಬಿದ್ದು ನಕ್ಕಿದ್ದೆವು. ನಮಗಿಂತ ಜೋರಾಗಿ ನಕ್ಕ ಜ್ಯೂಜ಼ರ್ ’ಗುರುಬಸಯ್ಯಾಜೀ, ಆಪ್ ಬ್ರಸೆಲ್ಸ್ ಕೊ ಬ್ರೆಜಿಲ್ ಸಮಜ್ಲಿಯಾ ಕ್ಯಾ? ತು ಉದರ್ ಜಾನೇಕೊ ಫ಼್ಲೈಟ್ ಪಕಡ್ನಾ ಹೆ ಕ್ಯಾ?’ ಅಂದ.
ಬ್ರಸೆಲ್ಸ್ ಅನ್ನು ಇಲ್ಲಿಂದ ದೂರದ ಬೇರೆಯದೇ ಖಂಡದಲ್ಲಿರುವ ಬ್ರೆಜಿಲ್ ಅಂದುಕೊಂಡಿದ್ದ ಗುರುಬಸಯ್ಯನವರಿಗೆ ಸಾಂಬಾ ಡಾನ್ಸ್ ನೋಡಲಾಗಲಿಲ್ಲವಲ್ಲ ಎಂದು ಬೇಸರವಾಗಿದ್ದು ಅವರ ಮುಖಚರ್ಯೆಯಿಂದ ನಮಗೆ ಗೊತ್ತಾಯಿತು. ಇನ್ನು ಅವರಿಗೆ ಸಮಾಧಾನ ಪಡಿಸಬೇಕಾದ ಸರದಿ ನನ್ನದಾಗಿತ್ತು. ನಾವು ನಕ್ಕಿದ್ದರಿಂದ ಅವರಿಗೆ ಬೇಸರವಾಗಿರಬಹುದೆಂದು ಭಾವಿಸಿದವನೇ ’ಅಯ್ಯೋ ಬಿಡ್ರೀ, ಸಾಂಬಾ ಡಾನ್ಸ್ ನೋಡದಿದ್ದರೇನಾಯಿತು ನಿನ್ನೆ ರಾತ್ರಿ ಲಿಡೋ ಶೋ ನೋಡಿದೆವಲ್ಲಾ, ಅದೇ ಅದ್ಭುತವಾಗಿತ್ತಲ್ಲಾ, ವಿವಿಧ ದೇಶಗಳ ಡಾನ್ಸ್ ನೋಡಿದ್ದೀವಿ. ಸಾಂಬಾ ಡಾನ್ಸ್ ಆದರೆ ಬರೀ ಬ್ರೆಜಿಲ್ಲಿನದು. ನಾವು ಎಲ್ಲಾ ದೇಶಗಳ ನೃತ್ಯವನ್ನು ನೋಡಿರುವುದರಿಂದ ಅದರ ಬಗ್ಗೆಯೇ ನಮ್ಮ ಊರಿಗೆ ಹೋದಾಗ ಹೇಳಿದರಾಯಿತು’ ಅಂದೆ. ಅದಕ್ಕೆ ಕೊಂಚ ಸಮಾಧಾನಪಟ್ಟುಕೊಂಡ ಅವರು ರಾತ್ರಿಯಿಡೀ ಲಿಡೋ ಶೋನಲ್ಲಿ ನಿದ್ರೆ ಮಾಡಿದ್ದನ್ನೇ ಮರೆತು ಹೌದು ಹೌದೆಂದರು.
ನಾವು ಮಾರುಕಟ್ಟೆ ಪ್ರದೇಶದಲ್ಲಿ ಸುತ್ತಾಡಿ ಹಿಂದಿರುಗುವಾಗ ನಮ್ಮನ್ನೇ ನೋಡಿ ನಗುತ್ತಾ ಐದಾರು ಜನರಿದ್ದ ಗುಂಪೊಂದು ಜತೆಯಲ್ಲೇ ನಡೆಯುತ್ತಾ ಬಂದರು. ಮೇಲು ನೋಟಕ್ಕೇ ಅವರು ಬೆಂಗಳೂರಿನ ಎಮ್.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಕೆಲಸವಿಲ್ಲದೇ ಅಂಡಲೆಯುವ, ಡ್ರಗ್ ಅಡಿಕ್ಟ್ ಗಳಂತಿದ್ದರು. ಆ ಗುಂಪಿನಲ್ಲಿ ಒಂದಿಬ್ಬರು ಕಪ್ಪು ಯುವಕರೂ ಇದ್ದರು. ಅವರು ಹಣ ಕೇಳುವ ಗಿರಾಕಿಗಳಂತೆ ಕಂಡುಬಂದದ್ದರಿಂದ ಇಂಥವರ ಬಗ್ಗೆ ಹುಶಾರಾಗಿರುವುದೊಳ್ಳೆಯದೆಂದು ನಾನು ಅವರತ್ತ ಹೆಚ್ಚು ಗಮನ ಹರಿಸಲಿಲ್ಲ. ನನ್ನನ್ನು ನೋಡುತ್ತಲೇ ಅವರಲ್ಲೊಬ್ಬ ತನ್ನ ಕಿಂಡಿಬಿದ್ದ ಹಲ್ಲು ಕಿರಿಯುತ್ತಾ ಹತ್ತಿರ ಬಂದು ತನ್ನನ್ನು ಪರಿಚಯಿಸಿಕೊಂಡವ ’ಆರ್ ಯು ಫ಼್ರಮ್ ಇಂಡಿಯಾ’ ಎಂದ ನಾನು ’ಎಸ್’ ಅಂದೆ. ಕೂಡಲೇ ಅತ್ಯಂತ ಖುಷಿಯಾದವನಂತೆ ಕಂಡ ಆತ ’ಹೋ! ಐ ಲವ್ ಇಂಡಿಯಾ, ಐ ಲವ್ ಅಮಿತಾಬ್ ಬಚ್ಚನ್’ ಅಂದ. ನನಗೆ ಮತ್ತು ನನ್ನ ಜತೆಯಿದ್ದವರಿಗೆಲ್ಲಾ ಆತ ಭಾರತವನ್ನು ಪ್ರೀತಿಸುವುದಾಗಿ, ಅಲ್ಲದೆ ಅಮಿತಾಬ್ ಬಚ್ಚನ್ ನನ್ನೂ ಪ್ರೀತಿಸುವುದಾಗಿ ಹೇಳಿದ್ದು ಕೇಳಿ ಖುಷಿಯಾಗಿತ್ತು. ತಾನು ರೊಮೇನಿಯಾದವನೆಂದು ಹೇಳಿಕೊಂಡ ಆತ ಹತ್ತಿರ ಹತ್ತರ ಬಂದವನೇ ಕೈ ಕುಲುಕಿ ತನ್ನ ಜತೆಗಾರರನ್ನೂ ನಮಗೆ ಪರಿಚಯಿಸಿದ. ನೋಡಲು ಠಪೋರಿಗಳಂತಿದ್ದ ಅವರು ಮೊದಲು ನಮ್ಮತ್ತ ನೋಡಿ ನಕ್ಕಾಗ ಅವರುಗಳ ಬಗ್ಗೆ ಅನುಮಾನದಿಂದಲೇ ವರ್ತಿಸಿದ್ದ ನಾವು ಯಾವಾಗ ಅವರು ಭಾರತದ ಬಗ್ಗೆ, ಅಮಿತಾಬ್ ಬಚ್ಚನ್ ಬಗ್ಗೆ ಮಾತಾಡಿದರೋ ’ಛೇ, ಎಂಥಾ ಒಳ್ಳೆಯ ಹುಡುಗರು! ದೂರದ ಈ ಯೂರೋಪಿನಲ್ಲಿದ್ದು, ನಮ್ಮ ಅಮಿತಾಭ್ ಬಗ್ಗೆ ಮಾತಾಡುತ್ತಾರಲ್ಲ, ಇವರ ಬಗ್ಗೆ ತಪ್ಪು ಅಭಿಪ್ರಾಯವಿಟ್ಟುಕೊಂಡಿದ್ದೆನಲ್ಲಾ’ ಅಂತನಿಸಿ ಕೂಡಲೇ ಅವರೊಂದಿಗೆ ಭಾವನಾತ್ಮಕ ಸಂಬಂಧ ಬೆಳೆದುಬಿಟ್ಟಿತು. ನಾವು ಕನ್ನಡಿಗರೇ ಹಾಗೆ ನಮ್ಮ ನಾಡಿನ ಬಗ್ಗೆ ಯಾರಾದರೂ ಕೊಂಚ ಪ್ರೀತಿಯ ಮಾತಾಡಿದಲ್ಲಿ ಅವರೂ ನಮ್ಮವರೇ ಎಂದು ಭಾವಿಸಿಬಿಡುತ್ತೇವೆ. ಅದೇ ಭಾವನೆಯಿಂದಲೇ ಆ ಹುಡುಗರೊಂದಿಗೆ ನಾವು ಅತ್ಮೀಯತೆಯಿಂದಲೇ ಮಾತನಾಡುತ್ತಾ ನಡೆಯತೊಡಗಿದ್ದೆವು. ರೊಮೇನಿಯಾದವನೆಂದು ಹೇಳಿಕೊಂಡ ಹುಡುಗ ’ಬನ್ನಿ ನಾವು ಕೊಂಚ ರೊಮೇನಿಯಾ ಡಾನ್ಸ್ ನಿಮಗೆ ಹೇಳಿಕೊಡುತ್ತೇವೆಂದು ಹೆಗಲ ಮೇಲೆ ಕೈ ಹಾಕಿದ. ಆತನ ಜತೆಗಿದ್ದವರೂ ನನ್ನ ಎಡ ಬಲದಲ್ಲಿ ನನ್ನ ಹೆಗಲ ಮೇಲೆ ಕೈಹಾಕಿದರು. ನನ್ನ ಎರಡೂ ಕೈಗಳಲ್ಲಿ ಪ್ಲಾಸ್ಟಿಕ್ ಚೀಲಗಳಿದ್ದವು ಒಂದೆರಡು ನಿಮಿಷ ಮುಂದಕ್ಕೆರಡು ಹೆಜ್ಜೆ ಹಿಂದಕ್ಕೆರಡು ಹೆಜ್ಜೆ ಕುಣಿದವರು ನಾನು ಮುಂದಕ್ಕೆ ಹೆಜ್ಜೆಯಿಟ್ಟಾಗ ನನ್ನ ಕಾಲಿಗೆ ಅವರ ಕಾಲನ್ನು ಅಡ್ಡವಿಡತೊಡಗಿದ್ದರು. ನನಗೆ ಮುಂದಕ್ಕೆ ಮುಗ್ಗರಿಸುವ ಅನುಭವವಾಯಿತು. ಒಂದೆರಡು ಭಾರಿ ಹಾಗೆ ಮಾಡಿದವರು ಕೂಡಲೇ ಡಾನ್ಸ್ ನಿಲ್ಲಿಸಿ ನನ್ನ ಕೈ ಕುಲುಕಿ ’ನಿಮ್ಮನ್ನು ಕಂಡು ತುಂಬಾ ಖುಷಿಯಾಯಿತು, ಎಂಜಾಯ್ ಯುವರ್ ಟ್ರಿಪ್’ ಎಂದರು.
ಹಾಗೆಂದವರೇ ನನ್ನೊಟ್ಟಿಗೆ ಒಂದೆರಡು ಮಾರು ನಡೆದು ಬಂದವರು ನಂತರ ಸಡನ್ನಾಗಿ ಹಿಂದಕ್ಕೆ ತಿರುಗಿ ಹೊರಟುಬಿಟ್ಟರು. ನನಗೆ ಆಶ್ಚರ್ಯವಾದುದೇ ಆಗ. ಅವರು ನಮ್ಮ ಜತೆಯೇ ಬರುತ್ತಿದ್ದವರು ಇದೀಗ ಧಿಡೀರೆಂದು ಹಿಂದಕ್ಕೆ ತಿರುಗಿ ಹೊರಟಿದ್ದರು. ಕೆಲವರು ಸಿಕ್ಸ್ತ್ ಸೆನ್ಸ್ ಕೆಲಸ ಮಾಡುತ್ತದೆಂದು ಹೇಳುತ್ತಾರಲ್ಲ, ಹಾಗೆ ಇದ್ದಕ್ಕಿದ್ದಂತೆ ನನಗೂ ಸಿಕ್ಸ್ತ್ ಸೆನ್ಸ್ ಕೆಲಸ ಮಾಡಿತ್ತು. ಈ ಯುವಕರು ನಮ್ಮ ಜತೆಯೇ ಸುಮಾರು ದೂರ ಬಂದವರು ಹಿಂದಿರುಗಿ ಹೋಗಲು ಕಾರಣವೇನಿರಬಹುದೆಂದು ಯೋಚಿಸಿದವನೇ ಏನೋ ಅನುಮಾನ ಬಂದಂತಾಗಿ ನನ್ನ ಹಿಂಬದಿಯ ಜೇಬನ್ನು ಮುಟ್ಟಿ ನೋಡಿಕೊಂಡರೆ ಅದರಲ್ಲಿದ್ದ ಪರ್ಸ್ ಕಾಣೆಯಾಗಿತ್ತು. ಕೂಡಲೇ ನನಗೆ ಆ ಯುವಕರ ಕರಾಮತ್ತು ಗೊತ್ತಾಗಿಹೋಯಿತು. ಡಾನ್ಸ್ ಮಾಡುವ ನೆಪದಲ್ಲಿ ಅವರು ನನ್ನ ಪರ್ಸ್ ಎಗರಿಸಿದ್ದರು. ಅಯ್ಯೋ ಸೂ....ಮಕ್ಕಳು, ನಮ್ಮ ದೇಶವನ್ನು, ಸಿನಿಮಾ ನಟನನ್ನು ಹೊಗಳಿ ನನ್ನನ್ನು ಬೇಸ್ತು ಬೀಳಿಸಿ ಮೋಸ ಮಾಡಿದರಲ್ಲಾ ಎಂಬ ಸಿಟ್ಟಿನಿಂದ ಕೂಡಲೇ ಹಿಂದಿರುಗಿ ನೋಡಿದೆ. ಅವರಲ್ಲಿ ಒಂದಿಬ್ಬರು ಕಾಣೆಯಾಗಿದ್ದರು. ತನ್ನನ್ನು ರೊಮೇನಿಯಾದವನೆಂದು ಪರಿಚಯಿಸಿಕೊಂದ ಹಲ್ಲು ಕಿಂಡಿ ಬಿದ್ದವ ನನಗಿಂತ ಸುಮಾರು ಮೂವತ್ತು ಅಡಿಯಷ್ಟು ದೂರದಲ್ಲಿ ಹೋಗುತ್ತಿದ್ದ, ಕೂಡಲೇ ನಾನು ಸಿಟ್ಟಿನಿಂದ ’ಹೇ ಯೂ ಬಾಸ್ಟರ್ಡ್ ಸ್ಟಾಪ್ ದೇರ್’ ಎಂದು ಜೋರಾಗಿ ಕೂಗಿದೆ.
(ಮುಂದುವರೆಯುವುದು)
|