’ಅಪ್ಪಾ ನಾನು ಆಗ್ಲೇ ಫೋನ್ ಮಾಡಿದ್ದೆ...ಯಾರೂ ಸಿಗಲಿಲ್ಲ. ನೀವೆಲ್ಲಾ ಬಿಜ಼ಿ ಇದ್ದಿರಂತೆ..ಏನು ಸಮಾಚಾರ? ಎಲ್ಲಾ ಚನ್ನಾಗಿದ್ದೀರಾ ಅಪ್ಪಾ..?’ ತಡೆದಿಟ್ಟುಕೊಂಡಿದ್ದ ಆತಂಕ, ಕುತೂಹಲ ಹೊರಗೆ ಹಾಕಿದೆ.
"ಓ ಫಸ್ಟ್ ಕ್ಲಾಸ್ ಆಗಿದ್ದೀವಿ! ಇವತ್ತು ಇಂಪಾರ್ಟೆಂಟ್ ಕೋರ್ಟ್ ಸೀನ್ ಇತ್ತಲ್ಲೋ..ಅದಕ್ಕೇ..."
"ಕೋರ್ಟಾ? ಯಾವ ಕೋರ್ಟಪ್ಪಾ? ಏನು ವಿಷಯ? ಯಾರು ಕೇಸ್ ಹಾಕಿದ್ದಾರಪ್ಪಾ??!" ನನಗೆ ಗೊತ್ತಿದ್ದಂತೆ ಅಪ್ಪ ಯಾರ ಮೇಲೂ ಜಗಳಕ್ಕೆ ಬೀಳುತ್ತಿದ್ದವರಲ್ಲ. ತಮ್ಮಷ್ಟಕ್ಕೆ ತಾವಿರುತ್ತಿದ್ದ ಮನುಷ್ಯ. ಒಮ್ಮೆ ಪಕ್ಕದ ಮನೆಯ ವಾಸು ಅಂಕಲ್ ಜೊತೆ ನಮ್ಮ ಮನೆಯ ಕಾಂಪೌಂಡ್ ಮೂಲೆಗೆ ಅವರು ಕಸ ಬಿಸಾಡುವ ವಿಚಾರವಾಗಿ ಸ್ವಲ್ಪ ಜೋರಾಗಿ ಮಾತಾಡಿದ್ದರು ಅಷ್ಟೇ. ನಾನು ಇಲ್ಲಿಗೆ ಬಂದ ಮೇಲೆ ಅದೇನಾದ್ರೂ ಯಡವಟ್ಟಾಗಿ ಕೋಟ್ ಕೇಸೇನಾದರೂ ಆಗಿರಬಹುದಾ?
"ಮುಕ್ತದಲ್ಲಿ ಭಾಳಾ ಒಳ್ಳೆ ಕೋರ್ಟ್ ಸೀನಿದೆ ಪುಟ್ಟಾ...ಸೀತಾರಾಮೇ ಲಾಯರ್ರು. ಭಾಳಾ ಒಳ್ಳೆ ಪ್ರಶ್ನೆ ಕೇಳಿ ಎಷ್ಟು ಚನ್ನಾಗಿ ಸೆನ್ಸಿಬಲ್ ಆಗಿ ಕೇಸ್ ನಡೆಸುತ್ತಿದ್ದಾರೆ ಗೊತ್ತಾ? ತುಂಬಾ ಇಂಟರೆಸ್ಟಿಂಗ್ ಆಗಿರುತ್ತೆ...ಇವತ್ತು ಕೇಸು ಒಳ್ಳೆ ತಿರುವು ತಗೋತು. ಅದನ್ನೇ ನೋಡ್ತಾ ಇದ್ವಿ ಕಣೋ..." ನನಗೆ ಮುಕ್ತ ಅನ್ನುವ ಯಾವ ಕಸಿನ್ನೂ, ಗೆಳತಿ, ಚಿಕ್ಕಮ್ಮ, ಅತ್ತೆಯರು, ಆಂಟಿಯರೂ ಇರಲಿಲ್ಲ! ಅಪ್ಪ ಯಾವ ಮುಕ್ತಳ ಬಗ್ಗೆ ಮಾತಾಡುತ್ತಿದ್ದಾರೆಂದು ಅರ್ಥವಾಗದೆ ’ಸರಿಯಾಗಿ ಹೇಳ್ರಪ್ಪಾ..’ ಅಂದೆ.
"ಏ...ಮುಕ್ತ ಮುಕ್ತ ಅಂತ ಟಿ ಎನ್ ಸೀತಾರಾಮ್ ದು ಇನ್ನೊಂದು ಸೀರಿಯಲ್ ಬರ್ತಿದೆ ಕಣೋ. ಒಂಬತ್ತು ಗಂಟೆಗೆ ಶುರು ಆಗುತ್ತೆ. ಈಗ ನಡಿತಿರೋ ಪಾಲಿಟಿಕ್ಸ್ ಅನ್ನೇ ಇಟ್ಟುಕೊಂಡು ಭಾಳ ಚನ್ನಾಗಿ ಕಥೆ ಮಾಡ್ತಿದ್ದಾರೆ. ಅದನ್ನು ನಾವೆಲ್ಲಾ ಫಾಲೋ ಮಾಡ್ತಿದ್ದೀವಿ...ಇವತ್ತು ತುಂಬಾ ಒಳ್ಳೆ ಎಪಿಸೋಡ್ ಇತ್ತು...ಅದಕ್ಕೆ ಎಲ್ಲಾ ಕೂತು ನೋಡ್ತಾ ಇದ್ವಿ....ಇನ್ನು ನೀನು ನಮ್ಮ ಟೈಮ್ ಹತ್ತು ಗಂಟೆ ಆದ ಮೇಲೆ ಫೋನ್ ಮಾಡಿಬಿಡಪ್ಪಾ..ಆಗ ಎಲ್ಲರೂ ಬಿಡುವಾಗಿರ್ತೀವಿ...’ ಅಪ್ಪ ಒಳ್ಳೆ ಮೂಡಿನಲ್ಲಿ ಮಾತಾಡುತ್ತಿದ್ದರು.
ಓ....ಇದು ಕಥೆ!! ಟಿ ಎನ್ ಸೀತಾರಾಮ್ ಹೆಸರು ಕೇಳಿದಾಗ ಅವರ ಬಿಜ಼ಿ ಶೆಡ್ಯೂಲಿನ ಘನ ಕಾರಣ ಅರ್ಥವಾಯಿತು. ನಮ್ಮೂರಿನ ಲಕ್ಷ ಲಕ್ಷ ಮನೆಗಳಂತೆ, ನಮ್ಮೇರಿಯಾದ ನೂರಾರು ಮನೆಗಳಂತೆ ನಮ್ಮ ಮನೆಯೂ ಟಿ ಎನ್ ಸೀತಾರಾಮ್ ರವರಿಂದ ಪೊಸೆಸ್ಡ್ ಆಗಿತ್ತು. ಅಮ್ಮ-ಅಪ್ಪ ವಶೀಕರಣಕ್ಕೊಳಗಾದವರಂತೆ ಸರಿಯಾದ ಟೈಮ್ ಗೆ ಕಾಮನಬಿಲ್ಲು, ಮಾಯಾಮೃಗ, ಅದು ಇದು ಅಂತ ಒಂದಲ್ಲಾ ಒಂದು ಟಿವಿ ಚಾನೆಲ್ ನಲ್ಲಿ ಬರುತ್ತಿದ್ದ ಟಿ ಎನ್ ಸೀತಾರಾಮ್ ಸೀರಿಯಲ್ಲುಗಳ ಫ್ಯಾನುಗಳಾಗಿ ಹೋಗಿದ್ದರು. ನಮಗೆ ಟಿವಿ ಸೀರಿಯಲ್ ಗಳ ವಿಷಯದಲ್ಲಿ ಆಯ್ಕೆಯೂ ಇರಲಿಲ್ಲ, ನೋಡಲು ಸಮಯವೂ ಇರುತ್ತಿರಲಿಲ್ಲವಾದ್ದರಿಂದ ನಾವು ಅದರ ತಂಟೆಗೆ ಹೋಗುತ್ತಿರಲಿಲ್ಲ. ಬೇರೆ ಏನೂ ಕೆಲಸ ಮಾಡಲಾಗದೆ ಬೋರಾದಾಗ ಅಮ್ಮ ಹಚ್ಚಿಡುತ್ತಿದ್ದ ಸೀತಾರಾಮ್ ಕಥೆಯನ್ನು ನಾವೂ ಆಗಾಗ ನೋಡುತ್ತಿದ್ದೆವು. ಆ ಕಥೆಯ ಗೋಳನ್ನು-ಪಾಡನ್ನು ನೋಡುತ್ತಾ ಅಮ್ಮ ಎಮೋಷನಲ್ ಆಗಿ ಸೆರಗಿನ ಚುಂಗಿನಿಂದ ಕಣ್ಣೀರು ಒರೆಸಿಕೊಳ್ಳುತ್ತಿದ್ದುದನ್ನು ನೋಡಿ ಒಳಗೊಳಗೇ ನಗಾಡಿಕೊಳ್ಳುತ್ತಿದ್ದೆವು.
ಸೀರಿಯಲ್ ನೋಡಿ ಮುಗಿದಮೇಲೂ ಅಮ್ಮ ಕೋಪ ಅಥವಾ ಬೇಜಾರಿನ ಮೂಡಿನಲ್ಲಿದ್ದರೆ ’ಪಾಪ ಕಣೇ ಬಿಲ್ಲೀ ಆ ಹುಡುಗಿ ಪರಿಸ್ಥಿತಿ ಯಾರಿಗೂ ಬರಬಾರದು...ಏನು ಕಾಲ ಬಂತು ನೋಡು! ಕಾಲ ಕೆಟ್ ಹೋಯ್ತು! ಈಗ ಒಳ್ಳೆಯವರಿಗೆ ಕಾಲ ಇಲ್ಲ ಕಣೇ..." ಅಂತ ತಮ್ಮ ಅಮ್ಮನಿಗೆ ಕೇಳಿಸುವ ರೀತಿಯಲ್ಲಿ ಡೈಲಾಗು ಬಿಡುತ್ತಿದ್ದ. ಅಮ್ಮ ಎಂಥಾ ಕೇಡಿಗ ಬುದ್ಧಿಯ ಮಕ್ಕಳು ಇವು ಅಂತ ನಮ್ಮ ಕಡೆ ಒಂದು ಕೋಪದ ಲುಕ್ ಕೊಟ್ಟು ’ನಿಮಗೆ ಮಾಡಿ ಹಾಕೋರು ಇದಾರೆ ಅಂತ ಸಸಾರ! ಮನೆ ಹೊರ್ಗಡೆ ನೋಡಿ... ಜೀವ್ನ ಎಷ್ಟು ಕಷ್ಟ ಅಂತ! ಅಡಿಗೆ ರೆಡಿ ಇದೆ...ನೀವೆ ಬಡಿಸಿಕೊಂಡು ಊಟ ಮಾಡ್ರೋ..." ಅಂತ ಬೈದು ನಮ್ಮ ಕೈ ಬಿಟ್ಟುಬಿಡುತ್ತಿದ್ದರು.
ಅಮ್ಮನನ್ನು ರೇಗಿಸುವ ಸಮಯದಲ್ಲಿ ಆಗಾಗ ನಮ್ಮ ಪಾರ್ಟಿ ಸೇರಿಕೊಳ್ಳುತ್ತಿದ್ದ ಅಪ್ಪ ಮಹಾನ್ ಪಕ್ಷಾಂತರಿ! "ಸುಮ್ಮ ಸುಮ್ಮನೆ ನಿಮ್ಮಮ್ಮನ್ಯಾಕೆ ಗೋಳು ಹುಯ್ಕೋತೀರೋ?’ ಅಂತ ಕೆಲವೊಮ್ಮೆ ಧಿಡೀರ್ ಅಂತ ಅಮ್ಮನ ಪರ ವಹಿಸಿಬಿಡುತ್ತಿದ್ದರು. ಒಟ್ಟಿನಲ್ಲಿ ಟಿ ಎನ್ ಸೀತಾರಾಮ್ ನಮ್ಮನೆಯ ಪ್ರತಿದಿನದ ಎಮೋಷನಲ್ ವಾತಾವರಣದಲ್ಲಿ ಸದಾ ಚಟುವಟಿಕೆಯಿಂದ ಭಾಗಿಯಾಗಿರುತ್ತಿದ್ದರು. ಆ ಮನುಷ್ಯ ಹಾಗೆಯೇ ಇವತ್ತಿಗೂ ನಮ್ಮ ಮನೆಯವರ ಭಾವನೆ, ಸಮಯದ ಮೇಲೆ ತಮ್ಮ ಹಿಡಿತ ಸಾಧಿಸಿಟ್ಟುಕೊಂಡಿದ್ದಾರೆ ಅಂತ ನಾನು ಊಹಿಸಿರಲಿಲ್ಲ.
’ಅದು ಮುಗಿದಿದ್ರೆ ಅಮ್ಮನಿಗೆ ಫೋನ್ ಕೊಡೀಪ್ಪಾ’ ಅಂದೆ.
’ಅವಳು ಇನ್ನೂ ಬಿಡುವಾಗಿಲ್ಲ ಬಿಲ್ಲೀ’ ಅಂದರು.
’ಇನ್ನೂ ಸೀತಾರಾಂ ದೇ ಬರ್ತಾ ಇದೆಯಾ?’ ನಿರಾಸೆಯಿಂದ ಕೇಳಿದೆ.
’ಈಗ ಮುತ್ತಿನ ತೋರಣ ಬರ್ತಿದೆ...ನಿಮ್ಮಮ್ಮ ಅದನ್ನೂ ಸೀರಿಯಸ್ಸಾಗಿ ನೋಡ್ತಾಳೆ..ನೀನು ಇನ್ನೊಂದು ಗಂಟೆ ಬಿಟ್ಟು ಮಾಡಿಬಿಡು’ ಅಂದರು.
ನಾಳೆ ನಾಡಿದ್ದರಲ್ಲಿ ಮುತ್ತಿನ ತೋರಣವೂ ಮುಗಿದ ಮೇಲೆ ಫೋನ್ ಮಾಡಿ ಯಾರ್ಯಾರು ಯಾವ್ಯಾವ ಟಿವಿ ಸೀರಿಯಲ್ ಗಳನ್ನು ಯಾವ ದಿನ ನೋಡುತ್ತಾರೆ, ಅದು ಎಷ್ಟು ಗಂಟೆಗೆ ಶುರು ಆಗಿ ಎಷ್ಟು ಗಂಟೆಗೆ ಮುಗಿಯುತ್ತೆ, ಬ್ರೇಕೇನಾದರೂ ಇರುತ್ತಾ? ಯಾವ ಟೈಮ್ ನಲ್ಲಿ? ಎಲ್ಲವನ್ನೂ ಬರೆದುಕೊಂಡು ನನ್ನ ಫೋನ್ ಪಕ್ಕ ಅಂಟಿಸಿಕೊಂಡುಬಿಡಬೇಕು ಎಂದುಕೊಂಡೆ. ಟಿ ಎನ್ ಸೀತಾರಾಮ್ ಮೇಲೆ ಸಿಕ್ಕಾಪಟ್ಟೆ ಹೊಟ್ಟೆಉರಿ ಆಯಿತು.
(ಮುಂದುವರಿಯುವುದು)